Saturday, 23rd November 2024

12 ಶಾಸಕರ ಅಮಾನತು: ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯಿಂದ ಒಂದು ವರ್ಷ ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಬಿಜೆಪಿಯ 12 ಶಾಸಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂಕೋರ್ಟ್‌ ಬುಧ ವಾರ ಕಾಯ್ದಿರಿಸಿತು.

ನ್ಯಾಯಮೂರ್ತಿ ಎ.ಎಂ.ಖಾನ್ವೀಲ್ಕರ್ ನೇತೃತ್ವದ ಮೂವರು ಸದಸ್ಯರನ್ನು ಒಳಗೊಂಡ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು. ವಾರದ ಒಳಗಾಗಿ ಕಕ್ಷಿದಾರರು ಪ್ರತಿಕ್ರಿಯೆ ಸಲ್ಲಿಸು ವಂತೆಯೂ ನ್ಯಾಯಪೀಠ ಆದೇಶಿಸಿತು.

ಅಮಾನತುಗೊಂಡ ಶಾಸಕರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ, ‘ವಿಧಾನಸಭೆಯಿಂದ ಸುದೀರ್ಘ ಅವಧಿಗೆ ಅಮಾನತು ಮಾಡುವುದು, ಉಚ್ಚಾಟನೆಗಿಂತಲೂ ಕೆಟ್ಟದ್ದು’ ಎಂದು ವಾದಿಸಿದರು. ಇತರ ಶಾಸಕರ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ‘ಶಾಸಕರನ್ನು ಒಂದು ವರ್ಷ ಕಾಲ ಅಮಾನತು ಮಾಡಿರುವುದು ತರ್ಕಹೀನ ನಿರ್ಧಾರ’ ಎಂದು ಹೇಳಿದರು.

ಸಭಾಧ್ಯಕ್ಷರ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ, ಕಳೆದ ವರ್ಷ ಜುಲೈ 5ರಂದು ಶಾಸಕರನ್ನು ಅಮಾನತು ಮಾಡಲಾಗಿತ್ತು.