Sunday, 15th December 2024

ಭಿನ್ನ ಸಂಸ್ಕೃತಿಯ ಮನಸುಗಳು ಒಂದಾಗುವ ಕೊಸರು-ನವಿರು !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಭಿನ್ನ ಸಂಸ್ಕೃತಿಯ ಎರಡು ಮನಸ್ಸುಗಳು ಒಂದಾಗುವಾಗ ಇವೆಲ್ಲ ಸಹಜ. ಬದಲಾದ ಸನ್ನಿವೇಶ ಮತ್ತು ವಾಸ್ತವವನ್ನು ಅರ್ಥ ಮಾಡಿಕೊಂಡರೆ, ಎಂಥ ಹೊಸ ವ್ಯವಸ್ಥೆಯದರೂ ಕೆಲಸ ಮಾಡಬಹುದು. ಇದಕ್ಕಾಗಿ ನಮ್ಮ ಕೆಲವು ಹುಟ್ಟುಗುಣ, ಜಿಗುಟುತನಗಳನ್ನು ಬಿಡಬೇಕು. ಹಾಗೆ ನಮಗಿಷ್ಟವಿಲ್ಲದಿದ್ದರೂ ಭಿನ್ನ ಸಂಪ್ರ ದಾಯ, ಸಂಸ್ಕೃತಿಗಳನ್ನು ಒಪ್ಪಿಕೊಳ್ಳಬೇಕು, ಅಪ್ಪಿಕೊಳ್ಳಬೇಕು.

ಮೂರು ವರ್ಷಗಳ ಹಿಂದೆ, ನಾನು ಬೆಂಗಳೂರಿನಿಂದ ದುಬೈಗೆ ಹೋಗುವಾಗ, ಬಿಸಿನೆಸ್ ಲೌಂಜ್‌ನಲ್ಲಿ ನನಗೆ ಒಬ್ಬರ ಪರಿಚಯವಾಯಿತು. ಅವರು ಒಂದು ಪುಸ್ತಕ
ಓದುತ್ತಿದ್ದರು. ಕಾಕತಾಳೀಯ ಎಂಬಂತೆ, ಅದೇ ಪುಸ್ತಕವನ್ನು ನಾನೂ ಓದುತ್ತಿದ್ದೆ. ಅವರು ಟಾಟಾ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಬಿಜಿನೆಸ್ ಪತ್ರಿಕೆ ಗಳಲ್ಲಿ ನಾನು ಅವರ ಲೇಖನಗಳನ್ನು ಓದಿದ್ದೆ ಮತ್ತು ಅವರು ಬರೆದ ಪುಸ್ತಕವನ್ನು ಓದಿದ್ದರಿಂದ, ನನ್ನ ಒಂದೆರಡು ಲೇಖನಗಳಲ್ಲಿ ಅವರನ್ನು quote ಮಾಡಿದ್ದರಿಂದ, ನಮ್ಮಿಬ್ಬರ ಮಧ್ಯೆ ಮೈತ್ರಿ ಬಹುಬೇಗ ಕುದುರಿತು.

ಹೀಗಾಗಿ ಮುಂದೆ ಅವರ ಜತೆ ಪ್ರಯಾಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಾತಿಗಿಳಿದು ಚರ್ಚಿಸಲು ಅನುವಾಯಿತು. ಟಾಟಾ ಸಂಸ್ಥೆ ದೊಡ್ಡ ದೊಡ್ಡ ಕಂಪನಿಗಳನ್ನು ಖರೀದಿಸಿದಾಗ, ಇವರು ಮಾತುಕತೆ ಘಟ್ಟ ದಿಂದ, ಎರಡೂ ಕಂಪನಿಗಳು ಸಂಪೂರ್ಣ ವಿಲೀನ ಆಗುವವರೆಗೆ, ಸಂಸ್ಥೆಯ ಎಲ್ಲ ಹಂತಗಳಲ್ಲಿ synergy ಏರ್ಪಡು ವವರೆಗೆ ಕೆಲಸ ಮಾಡಿದವರು. ಇವರನ್ನು ಮಾತಾಡಿಸಿದರೆ, ಅನೇಕ ಹೊಸ ಹೊಸ ಸಂಗತಿಗಳು ಹೊರ ಬೀಳುತ್ತವೆ ಎಂದು ಅನಿಸಿತು. ನಿಮಗೆ ಗೊತ್ತಿರಬಹುದು, ಇಪ್ಪತ್ತೊಂದನೇ ಶತಮಾನದ ಮೊದಲ ದಶಕದಲ್ಲಿ ಟಾಟಾ ಸಂಸ್ಥೆ ಮೂರು ವಿದೇಶಿ ದೈತ್ಯ ಕಂಪನಿಗಳನ್ನು ಖರೀದಿಸಿತು. ಇದು ಕಾರ್ಪೊರೇಟ್ ಜಗತ್ತಿನ ಅತ್ಯಂತ ಮಹತ್ವದ ಘಟನೆ. ಬ್ರಿಟನ್ ನ ಟೆಟ್ಲೆ ಟೀ, ಜಗ್ವರ್ ಲ್ಯಾಂಡ್ ರೋವರ್ ಕಾರ್ ಕಂಪನಿ ಮತ್ತು ಬ್ರಿಟಿಶ್ ಸ್ಟೀಲ್ ಎಂದು ಕರೆಯಿಸಿಕೊಂಡಿದ್ದ ಕೋರಸ್ ಸ್ಟೀಲ್ ಕಂಪನಿಗಳನ್ನು ಟಾಟಾ ಸಂಸ್ಥೆ ಖರೀದಿಸಿತು.

ಆಗ ಜಗತ್ತಿನ ಬಹುರಾಷ್ಟ್ರೀಯ ಕಂಪನಿಗಳು ಮೊದಲ ಸಲ ಟಾಟಾ ಸಂಸ್ಥೆಯ ಬಗ್ಗೆ ಹಠಾತ್ ಉತ್ಸಾಹ ತಾಳಿ, ಆ ಸಂಸ್ಥೆಯ ಪೂರ್ವಾಪರಗಳನ್ನು ಕೆದಕಲಾ ರಂಭಿಸಿದ್ದವು. ಕಾರ್ಪೊರೇಟ್ ಜಗತ್ತಿನಲ್ಲಿ, ದೊಡ್ಡ ಮೀನು ಸಣ್ಣ ಮೀನುಗಳನ್ನು ಸ್ವಾಹಾ ಮಾಡುವುದು ಹೊಸತಲ್ಲ. ಆದರೆ ಸಮುದ್ರವನ್ನೇ ಆಪೋಷಣ ತೆಗೆದುಕೊಳ್ಳುವುದು ಕಂಡು ಕೇಳರಿಯದ ಸಂಗತಿ. ಟಾಟಾ ಸಂಸ್ಥೆಯ ಆ ಕ್ರಮ, ಸಮುದ್ರವನ್ನೇ ಆಪೋಷಣ ತೆಗೆದುಕೊಂಡಿದ್ದಕ್ಕೆ ಸಮವಾಗಿತ್ತು. ಬ್ರಿಟಿಷರು ಭಾರತದಿಂದ ಹತ್ತಿ, ಕಬ್ಬಿಣದ ಅದಿರು, ಚಹ ಮುಂತಾದ ಕಚ್ಚಾ ಮಾಲುಗಳನ್ನು ತರಿಸಿಕೊಂಡು, ಅವನ್ನೆಲ್ಲ ತಮ್ಮಲ್ಲಿ ಸಂಸ್ಕರಿಸಿ, ಅದರ ಹತ್ತು ಪಟ್ಟು ಬೆಲೆಗೆ ಜಗತ್ತಿಗೆ ಮಾರಾಟ ಮಾಡುತ್ತಿದ್ದವು. ಇದರಿಂದ ಬ್ರಿಟಿಷ್ ಪ್ರಜೆಗಳಿಗೆ ಒಳ್ಳೆಯ ನೌಕರಿ, ಸಂಬಳ ಸಿಕ್ಕಿತಲ್ಲದೇ ಹೇರಳ ಲಾಭ ಮಾಡಲು ಸಾಧ್ಯವಾಯಿತು.

ಬ್ರಿಟನ್ ನ ಈ ತಂತ್ರವನ್ನೇ ಇಡೀ ಯುರೋಪ್ ಅನುಸರಿಸಿತು. ಆದರೆ ಟಾಟಾ ಸಂಸ್ಥೆ ಅಂಥ ದೈತ್ಯ ಕಂಪನಿಗಳನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡುಬಿಟ್ಟಿತು.
1837 ರಲ್ಲಿ ಸ್ಥಾಪನೆಯಾದ ಟೆಟ್ಲೆ ಟೀ ಕಂಪನಿ, ಬ್ರಿಟನ್ ಮತ್ತು ಕೆನಡಾದ ಮಾರುಕಟ್ಟೆಯಲ್ಲಿ ನಂಬರ್ ಒಂದು ಮತ್ತು ಅಮೆರಿಕದಲ್ಲಿ ನಂಬರ್ ಎರಡನೇ ಸ್ಥಾನ ದಲ್ಲಿರುವ ಸಂಸ್ಥೆಯಾಗಿತ್ತು. ಜಗತ್ತಿನ ಸುಮಾರು ಐವತ್ತು ದೇಶಗಳಲ್ಲಿ, ಅರವತ್ತು ಬೇರೆ ಬೇರೆ ವಿಧಗಳ ಟೀ ಬ್ಯಾಗ್ ಅನ್ನು ಟೆಟ್ಲೆ ಸರಬರಾಜು ಮಾಡುತ್ತಿತ್ತು. ಇಷ್ಟಾದರೂ ಟೆಟ್ಲೆ ಕಂಪನಿಗೆ ತನ್ನ ಸ್ವಂತ ಚಹ ತೋಟ ಇರಲಿಲ್ಲ. ವಿಶ್ವದ ಹತ್ತು ಸಾವಿರಕ್ಕೂ ಹೆಚ್ಚು ಟೀ- ಎಸ್ಟೇಟ್‌ಗಳಲ್ಲಿ ಬೆಳೆದ ಚಹದ ಎಲೆಗಳನ್ನು ಆಕ್ಷನ್ ಮೂಲಕ ಖರೀದಿಸಿ, ಅವನ್ನೆಲ್ಲ ಬ್ರಿಟನ್‌ಗೆ ತರಿಸಿಕೊಂಡು, ಅಲ್ಲಿ ಸಂಸ್ಕರಿಸಿ, ಅವನ್ನು ಇಡೀ ಜಗತ್ತಿಗೆ ಮಾರಾಟ ಮಾಡುತ್ತಿತ್ತು.

1990 ರಲ್ಲಿ ಇಪ್ಪತ್ತು ಶತಕೋಟಿ ಟೀ ಬ್ಯಾಗ್‌ಗಳನ್ನೂ ಉತ್ಪಾದಿಸುತ್ತಿದ್ದ ಕಂಪನಿ, ಹತ್ತು ವರ್ಷಗಳಲ್ಲಿ ನಲವತ್ತೈದು ಶತಕೋಟಿ ಟೀ ಬ್ಯಾಗ್‌ಗೆ ತನ್ನ ಉತ್ಪಾದನೆ ಹೆಚ್ಚಿಸಿಕೊಂಡು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿತು. ಇಂಥ ಕಂಪನಿಯ ಮೇಲೆ ಟಾಟಾ ಸಂಸ್ಥೆ ಕಣ್ಣು ಹಾಕಿತು. ಭಾರತ ಮತ್ತು ಶ್ರೀಲಂಕಾದಲ್ಲಿ ಲಕ್ಷಾಂತರ ಎಕರೆ ಸ್ವಂತ ಚಹ ತೋಟವನ್ನು ಹೊಂದಿದ್ದರೂ, ಒಂದು ಎಕರೆ ಸಹ ಚಹ ತೋಟ ಹೊಂದಿಲ್ಲದ ಟೆಟ್ಲೆ ಟೀ ಜತೆಗೆ ಪೈಪೋಟಿಯೊಡ್ಡಿ ಟಕ್ಕರ್ ಕೊಡುವುದು ಸುಲಭದ ಮಾತಾಗಿರಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಟಾಟಾ ಟೀ, ಟೆಟ್ಲೆಗೆ ಸರಿಸಾಟಿಯಿರಲಿಲ್ಲ. ಈ ಪೈಪೋಟಿಯಲ್ಲಿ ಎದುರಾಳಿಯನ್ನು ಮಣಿಸ ಬೇಕೆಂದರೆ, ಬೇರೆ ದಾರಿಯೇ ಇರಲಿಲ್ಲ. ಕಾರ್ಪೊರೇಟ್ ಜಗತ್ತಿನಲ್ಲಿ ಒಂದು ಕ್ರೂರ ಸೂತ್ರವಿದೆ – Fight with enemy, if not, finish him!

ಟಾಟಾ ಸಂಸ್ಥೆ ಎರಡನೆಯ ಕ್ರಮಕ್ಕೆ ಮುಂದಾಯಿತು. ಶತ್ರುವನ್ನೇ ಖರೀದಿಸಿಬಿಟ್ಟಿತು. ಸುಮಾರು 271 ದಶಲಕ್ಷ ಪೌಂಡ್ ಬಿಸಾಕಿ, ಟೆಟ್ಲೆಯನ್ನು ತನ್ನ ಕಬ್ಜಕ್ಕೆ ತೆಗೆದುಕೊಂಡು ಬಿಟ್ಟಿತು. ಆನಂತರ, ಟಾಟಾ ಟೀ ಬ್ಯಾಗ್‌ಗಳನ್ನು ಟೆಟ್ಲೆ ಹೆಸರಿನಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾರಂಭಿಸಿತು. ಇದು ಹಿನ್ನೆಲೆ. ಈ ದಿನಗಳಲ್ಲಿ ಒಂದು ಸಂಸ್ಥೆ ಮತ್ತೊಂದನ್ನು ಖರೀದಿಸುವುದು, ನಂತರ ಅದರೊಳಗೆ ವಿಲೀನಗೊಳಿಸುವುದು ಸಾಮಾನ್ಯ. ಈ aquisition-merger ಕಾಗದದ ಮೇಲೆ, ಬ್ಯಾಲನ್ಸ್ ಶೀಟುಗಳಲ್ಲಿ ಚೆಂದವಾಗಿ ಕಾಣುತ್ತದೆ. ಆದರೆ ಒಂದು ಸಂಸ್ಥೆಯಲ್ಲಿ ಇನ್ನೊಂದನ್ನು ವಿಲೀನಗೊಳಿಸುವುದು, ಖರೀದಿಸಿದ ಸಂಸ್ಥೆಯನ್ನು ಮೂಲ ಸಂಸ್ಥೆಯಲ್ಲಿ ಸೇರಿಸುವುದು ಸಣ್ಣ ಕೆಲಸವಲ್ಲ. ನನಗೆ ಪರಿಚಿತರಾದ ಟಾಟಾ ಸಂಸ್ಥೆಯ ಅಧಿಕಾರಿ ಕೆಲಸವೇ ಅದಾಗಿತ್ತು. ಎರಡು ಬೃಹತ್ ದೊಡ್ಡ ಸಂಸ್ಥೆಗಳ ಕಾರ್ಯವಿಧಾನ, ಧ್ಯೇಯೋದ್ದೇಶ, ಆಶಯ, ಕಾರ್ಯ ಸಿದ್ಧಾಂತ, ಸಿಬ್ಬಂದಿ ಸಮೀಕರಣ, work-culture.. ಮುಂತಾದವುಗಳನ್ನು ಏಕತ್ರಗೊಳಿಸುವುದು ಸಣ್ಣ ಮಾತಲ್ಲ.

ಸೊಸೆಯನ್ನು ಮನೆಯೊಳಗೇ ತುಂಬಿಸಿಕೊಂಡು ಅವಳಿಗೆ ಗಂಡನ ಮನೆಯ ರೀತಿ-ರಿವಾಜುಗಳನ್ನು ಕಲಿಸುವುದು, unlearning ಮತ್ತು learning ಪ್ರಕ್ರಿಯೆ ಗಳಿಗೆ ಅಣಿಗೊಳಿಸುವುದು ಸುಲಭವಲ್ಲ. ಸೊಸೆಗೆ ಗಂಡನ ಮನೆಯಲ್ಲಿ ಎಲ್ಲವೂ ಹೊಸತು. ಗಂಡನ ಮನೆಯವರಾರೂ ಅವಳೊಬ್ಬಳಿಗಾಗಿ ಬದಲಾಗುವುದಿಲ್ಲ. ಬದಲಿಸಲು ಹೊರಟರೆ ಸಂಘರ್ಷ.

ಹಾಗಂತ ಗಂಡನ ಮನೆಯಲ್ಲಿರುವ ಆಚರಣೆ ಸರಿಯಿಲ್ಲ ಎಂಬುದು ಸೊಸೆಗೆ ಗೊತ್ತಿರುತ್ತದೆ. ಹೀಗಾಗಿ ಹೆಜ್ಜೆ ಹೆಜ್ಜೆಗೆ ತಿಕ್ಕಾಟ, ಭಿನ್ನಾಭಿಪ್ರಾಯ ಸಾಮಾನ್ಯ. ಇದು ಒಂದು ಮನೆಯ ಚಿತ್ರಣವಾದರೆ, ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ಇದರ ತೀವ್ರತೆ ಸಾವಿರ ಪಟ್ಟು ದೊಡ್ಡದು. ಕಾರಣ ಪ್ರತಿ ಸಂಸ್ಥೆಯ ಕಾರ್ಯವೈಖರಿ, ಆಫೀಸು ಸಂಸ್ಕೃತಿ ವಿಭಿನ್ನ. ಒಂದು ಸಂಸ್ಥೆಯಲ್ಲಿ ಮತ್ತೊಂದು ಸರಿಯಾಗಿ ವಿಲೀನವಾಗದಿದ್ದರೆ, ಅದೇ ಸಂಸ್ಥೆಗೆ ಮಾರಕವಾಗಬಹುದು. ಎರಡೂ ಸಂಸ್ಥೆಗಳ
ಸಿಬ್ಬಂದಿ ಮನಸ್ಸುಗಳನ್ನು ಒಂದು ಉದ್ದೇಶಕ್ಕಾಗಿ ಒಟ್ಟಿಗೆ ಸೇರಿಸುವುದು ಯಾರಿಗಾದರೂ ಸವಾಲು.

ಟೆಟ್ಲೆ ಬ್ರಿಟಿಷ್ ಸಂಸ್ಥೆ. ಅದನ್ನು ಖರೀದಿಸಿದ ಟಾಟಾ, ಅಪ್ಪಟ ಭಾರತೀಯ ಸಂಸ್ಥೆ. ಈ ಎರಡೂ ಭಿನ್ನ ನೆಲೆ, ಸಂಸ್ಕೃತಿ, ಆಚರಣೆ, ಸಂಪ್ರದಾಯಗಳ ಕಂಪನಿಗಳನ್ನು ಒಂದಾಗಿ ಬೆಸೆಯುವುದು ಬಹಳ ಕಷ್ಟ. ಎರಡು ವಿಭಿನ್ನ ಹಿನ್ನೆಲೆಯ ಮನಸ್ಸುಗಳು ಒಂದಾಗದೇ, ಗುರಿ ತಲುಪುವುದು ಸಾಧ್ಯವೇ ಇಲ್ಲ. ಅದರಲ್ಲೂ ಬ್ರಿಟಿಷ್ ಮನಸ್ಸು ಗಳನ್ನು ಭಾರತೀಯರೊಂದಿಗೆ ಬೆಸೆಯುವುದು ಸಾಧ್ಯವಿಲ್ಲ ಅಥವಾ ಕಷ್ಟ ಸಾಧ್ಯ. ಆದರೂ ಟಾಟಾ ಸಂಸ್ಥೆ ಆ ದುಸ್ಸಾಹಾಸಕ್ಕೆ ಕೈಹಾಕಿತ್ತು. ಜಗತ್ತಿನ ಉತ್ತಮ ಚಹ ಖರೀದಿಸುವುದು, ಅವುಗಳನ್ನು ಸಂಸ್ಕರಿಸುವುದು, ಗ್ರಾಹಕರ ಅಭಿರುಚಿಯೇನು ಎಂದು ಅರಿತುಕೊಳ್ಳುವುದು ಮತ್ತು ವಿಶ್ವದೆಡೆ ಯಾರಿಗೆ ವಿತರಿಸಬೇಕು… ಈ ಎಲ್ಲ ಅಮೂಲ್ಯ ಮಾಹಿತಿ, ಜ್ಞಾನ, ಪರಿಣತಿ ಮತ್ತು ಅನುಭವ ಟೆಟ್ಲೆ ಸಿಬ್ಬಂದಿಗೆ ಗೊತ್ತಿತ್ತು.

ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ವ್ಯವಹಾರ ಮಾಡುವಂತಿರಲಿಲ್ಲ. ಹೊಸ ಒಡೆತನ ಬಂದರೆ ತಮ್ಮ ಕೆಲಸ ಕಾರ್ಯಗಳಲ್ಲಿ ಯಾವ ಬದಲಾವಣೆ ಆಗುವುದಿಲ್ಲ, ತಮ್ಮ ಭವಿಷ್ಯ ಮತ್ತು ಭದ್ರತೆಗೆ ಏನೂ ಅಪಾಯವಾಗುವುದಿಲ್ಲ ಎಂಬ ಭರವಸೆಯನ್ನು ತುಂಬದೇ ಅವರನ್ನು ಮುನ್ನಡೆಸಿಕೊಂಡು ಹೋಗುವುದು
ಸಾಧ್ಯವೇ ಇಲ್ಲ. ಮೂಲ ಸಿಬ್ಬಂದಿ ಮತ್ತು ಹೊಸ ಒಡೆತನದ ಮಧ್ಯೆ ಪರಸ್ಪರರ ನಂಬಿಕೆ ಮತ್ತು ವಿಶ್ವಾಸಕ್ಕೆ ಸ್ವಲ್ಪ  ಧಕ್ಕೆಯಾದರೂ ಇಡೀ ಉದ್ದೇಶವೇ ವಿಫಲ ವಾಗುತ್ತದೆ. ಇಬ್ಬರಲ್ಲೂ ಒಳಗೊಳಗೇ ಅನುಮಾನ ಸದಾ ಹಬೆಯಾಡುತ್ತಲೇ ಇರುತ್ತದೆ.

ಟಾಟಾ ಸಂಸ್ಥೆಯವರು ಬ್ರಿಟನ್ ಮೂಲದ ಬಹುರಾಷ್ಟೀಯ ಕಂಪನಿಗಳಂದಾದ ಟೆಟ್ಲೆಯನ್ನು ಖರೀದಿಸಿದ್ದು ಇಡೀ ಭಾರತೀಯರಿಗೆ ಅಭಿಮಾನದ ಸಂಗತಿ. ಟೆಟ್ಲೆ ಈಗ ಅಪ್ಪಟ ಭಾರತೀಯ ಕಂಪನಿ. ಟೆಟ್ಲೆಯನ್ನು ಖರೀದಿಸಿದಾಗ, ಬ್ರಿಟಿಷ್ ಮಾಧ್ಯಮಗಳು ಟಾಟಾ ಸಂಸ್ಥೆಯ ಬಗ್ಗೆ ಪುಟಗಟ್ಟಲೆ ಬರೆದಿದ್ದವು. ನನಗೆ ಪರಿಚಿತರಾದ ಟಾಟಾ ಸಂಸ್ಥೆಯ ಅಧಿಕಾರಿ ಒಂದು ಪ್ರಸಂಗವನ್ನು ಹೇಳಿದರು. ಟೆಟ್ಲೆ ಕಂಪನಿ ಖರೀದಿ ಪ್ರಕ್ರಿಯೆ ಮುಗಿದ ನಂತರ, ಸಿಬ್ಬಂದಿ ಸಂಖ್ಯೆ, ಸಂಬಳ ಮುಂತಾದ ಮಹತ್ವದ ವಿಷಯದ ಬಗ್ಗೆ ಟೆಟ್ಲೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನು ಭೇಟಿ ಮಾಡಿ ಮಾತಾಡಲು, ಮುಂಬಯಿಯಲ್ಲಿದ್ದ ಟಾಟಾ ಫೈನಾನ್ಸ್
ವಿಭಾಗದ ತಂಡದವರು ಲಂಡನ್ ಗೆ ಹೋದಾಗ, ರಿಸೆಪ್ಶನ್‌ನಲ್ಲಿ ‘ನೀವು ಸ್ವಲ್ಪ ಹೊತ್ತು ಕಾಯಬೇಕಾಗಬಹುದು, ಬಾಸ್ ಮೀಟಿಂಗ್‌ನಲ್ಲಿದ್ದಾರೆ.’ ಎಂದು ಸ್ವಾಗತ ಕಾರಿಣಿ ತಿಳಿಸಿದಳು.

ಆಗ ಫೈನಾನ್ಸ್ ತಂಡದಲ್ಲಿದ್ದವರೊಬ್ಬರು ಆಕೆಗೆ ಕೇಳುವ ಹಾಗೆ, ‘ಪ್ರಾಯಶಃ ಆಕೆಗೆ ಗೊತ್ತಿಲ್ಲ ಅನಿಸುತ್ತದೆ, ಈಗ ಬಾಸ್ ಯಾರು ಅನ್ನೋದು’ ಎಂದು ಹೇಳಿದರು. ಈ ರೀತಿಯಲ್ಲಿ ಎರಡೂ ಸಂಸ್ಥೆಗಳ ಸಿಬ್ಬಂದಿ ನಡುವೆ ಅನೇಕ ತಿಕ್ಕಾಟ, ಮಾತಿಗೆ-ಮಾತು, ದುಸಮುಸ, ಚುಚ್ಚುಮಾತಿನ ತಿವಿತಗಳೆಲ್ಲ ಸಂಭವಿಸಿದವು. ಆರಂಭದಲ್ಲಿ ಟೆಟ್ಲೆ ಕಂಪನಿಯ ಎಲ್ಲ ಹಂತಗಳಲ್ಲಿರುವವರು ತಮ್ಮ ಪಾರಮ್ಯವನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಆದರೆ ಇಂಥ ವಿಷಯಗಳನ್ನು ನಿಭಾಯಿಸು ವುದರಲ್ಲಿ ಟಾಟಾ ಸಂಸ್ಥೆ ಎತ್ತಿದ ಕೈ. ಅಲ್ಲಿ ಪ್ರತಿ ಸಮಸ್ಯೆಗೂ ಉತ್ತರ ಕಂಡು ಹಿಡಿಯುವ ಅನುಭವಿಗಳಿದ್ದಾರೆ.

ಎಂಥ ಪ್ರತಿಕೂಲ ಪರಿಸ್ಥಿತಿಯನ್ನಾದರೂ ನಿಭಾಯಿಸುವ ಪರಿಣತರಿದ್ದಾರೆ. ಅವರು ಈ ಎಲ್ಲ ಅಪಸವ್ಯಗಳನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸುತ್ತಾರೆ. ಆರಂಭದ ಈ ಎಲ್ಲ ದಢಕಿಗಳನ್ನು ಸಮರ್ಥವಾಗಿ ನಿಭಾಯಿಸಿ, ಟೆಟ್ಲೆ ಸಂಸ್ಥೆಯನ್ನು ಟಾಟಾ ಸಮೂಹದೊಳಗೆ ವಿಲೀನಗೊಳಿಸಿದ್ದು ಸಣ್ಣ ಮಾತಲ್ಲ. ಮ್ಯಾನೇಜ್ ಮೆಂಟ್ ಕ್ಲಾಸುಗಳಲ್ಲಿ ಇಂದಿಗೂ ಎರಡು ಕಂಪನಿಗಳನ್ನು merge ಮಾಡುವ ನಿದರ್ಶನಗಳನ್ನು ಉದ್ಧರಿಸುವಾಗ ಟಾಟಾ-ಟೆಟ್ಲೆ ವಿಲೀನವನ್ನು ಪ್ರಸ್ತಾಪಿಸುವು ದುಂಟು. ಒಂದು ಸಂಸ್ಥೆ ಇನ್ನೊಂದರಲ್ಲಿ ಸಮ್ಮಿಳಿತವಾಗುವುದು ನಾವು ಊಹಿಸಿದಷ್ಟು, ಭಾವಿಸಿದಷ್ಟು ಸುಲಭವಂತೂ ಅಲ್ಲವೇ ಅಲ್ಲ.

ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ ಇಂಥದೇ ಅನುಭವ ನನಗೂ ಆಗಿತ್ತು. ನಾವು ನಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದಾಗ, ಒಂದು ದಿನ ಇದ್ದಕ್ಕಿದ್ದಂತೆ, ವಿಜಯ ಸಂಕೇಶ್ವರ ಅವರು ಪತ್ರಿಕೆಯನ್ನು ಮಾರಾಟ ಮಾಡಿದ್ದಾರೆಂದೂ, ಅದನ್ನು ‘ಟೈಮ್ಸ್ ಆಫ್ ಇಂಡಿಯ’ ಸಂಸ್ಥೆಯವರು ಖರೀದಿಸಿದ್ದಾರೆಂದೂ ನಮಗೆಲ್ಲ ಗೊತ್ತಾಯಿತು. ಈ ವಿಷಯವನ್ನು ಸಂಕೇಶ್ವರರ ಜತೆ ಚರ್ಚಿಸಬೇಕು ಎನ್ನುವಾಗ, ಟೈಮ್ಸ್ ಆಫ್ ಇಂಡಿಯ ಸಂಸ್ಥೆಯ ಅಧಿಕಾರಿಗಳು ನನ್ನ ಮುಂದೆ ಕುಳಿತಿದ್ದರು. ಆಗ ಸಂಕೇಶ್ವರರು, ‘ಇಂದಿನಿಂದ ಅವರು (ಟೈಮ್ಸ್) ಹೇಳಿದಂತೆ ಪತ್ರಿಕೆಯನ್ನು ನಡೆಸಿಕೊಂಡು ಹೋಗಿ’ ಎಂದುಬಿಟ್ಟರು.

ನನಗೆ ಎಲ್ಲವೂ ಅಯೋಮಯ! ಮರುದಿನವೇ ಟೈಮ್ಸ್ ಅಧಿಕಾರಿಗಳು ಬಂದು ಕುಳಿತುಬಿಟ್ಟರು. ಅವರಿಗೆ ಪತ್ರಿಕೆ ನಡೆಸಿಕೊಂಡು ಹೋಗುವುದು ಕಿರುಬೆರಳಿನಲ್ಲಿ ಬ್ಯಾಟಿಂಗ್ ಮಾಡಿದ ಹಾಗೆ. ಆದರೆ ಕನ್ನಡ ಪತ್ರಿಕೆ ನಡೆಸಿ ಗೊತ್ತಿಲ್ಲ. ಬೆಂಗಳೂರನ್ನೇ ಕರ್ನಾಟಕ ಎಂದು ಭಾವಿಸಿದವರು. ಅಸಲಿಗೆ ಯಾರೂ ಕನ್ನಡಿಗರಲ್ಲ. ಅವರಿಗೆ ಕಸುಬಿನ ಬಗ್ಗೆ ಗೊತ್ತು, ಆದರೆ ಕನ್ನಡ ಪತ್ರಿಕೆ ತಂದು ಗೊತ್ತಿಲ್ಲ. ಕನ್ನಡ ನೆಲ, ಸಂಸ್ಕೃತಿ, ಭಾಷೆ, ಸಂಪ್ರದಾಯ ಗೊತ್ತಿಲ್ಲ. ಹಾಗಂತ ಎಲ್ಲರೂ ಮ್ಯಾನೇಜ್‌ ಮೆಂಟ್ ಚತುರರೇ. ಆರಂಭದಲ್ಲಿ ಅವರನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆ ಆಯಿತು. ಅಷ್ಟು ವರ್ಷ ಇಂಗ್ಲಿಷ್ ಪತ್ರಕರ್ತರನ್ನು ನಿಭಾಯಿಸಿದ್ದ ಅವರಿಗೆ ಏಕಾಏಕಿ ಕನ್ನಡ ಪತ್ರಕರ್ತರೊಂದಿಗೆ ವ್ಯವಹರಿಸುವುದು ಸುಲಭವಾಗಿರಲಿಲ್ಲ. ಅಷ್ಟಕ್ಕೂ ಯಾರಿಗೂ ಕನ್ನಡ ಓದಲು, ಬರೆಯಲು, ಮಾತಾಡಲು ಬರುತ್ತಿರಲಿಲ್ಲ.

ನಾವು ಪತ್ರಿಕೆಯಲ್ಲಿ ಏನು ಬರೆದಿದ್ದೇವೆ ಎಂಬುದು ಆಡಳಿತ ನಿರ್ವಹಣೆಯಲ್ಲಿದ್ದ ಪ್ರಮುಖರಾರಿಗೂ ಅರ್ಥ ಆಗುತ್ತಿರಲಿಲ್ಲ. ಟಾಟಾ ಸಂಸ್ಥೆ ಟೆಟ್ಲೆ ಖರೀದಿಸಿದಂತೆ ಆಗಿತ್ತು. ನಮ್ಮ ಮತ್ತು ಅವರ ವ್ಯಾವಹಾರಿಕ ಪರಿಭಾಷೆಗಳು ಭಿನ್ನವಾಗಿದ್ದವು. ಅವರ ಕೆಲಸದ ನೀತಿ-ಧೋರಣೆಗಳನ್ನು ತಕ್ಷಣ ಮೈಗೂಡಿಸಿಕೊಳ್ಳುವುದು ಸುಲಭ ವಾಗಿರಲಿಲ್ಲ. ಮೊದಲಾಗಿದ್ದರೆ, ಒಂದು ಕಂಪ್ಯೂಟರ್ ಬೇಕಿದ್ದರೆ, ವಿಆರ್‌ಎಲ್ ಬಸ್ಸಿನಲ್ಲಿ ಮರುದಿನವೇ ಹುಬ್ಬಳ್ಳಿಯಿಂದ ಬಂದುಬಿಡುತ್ತಿತ್ತು. ಈಗ ಅದಕ್ಕಾಗಿ
ತಿಂಗಳುಗಟ್ಟಲೆ ಕಾಯುವಂತಾಯಿತು. ಸಮುದ್ರ ಕೂಡ ತನ್ನನ್ನು ಸೇರುವ ನದಿಯನ್ನು ತಕ್ಷಣ ಒಳಬಿಟ್ಟುಕೊಳ್ಳುವುದಿಲ್ಲ.

ಕೆಲಹೊತ್ತು ಒದ್ದು ನಿಲ್ಲಿಸಿರುತ್ತದೆ. ನಮಗೆ ಅವರ ಜತೆ ಬೆರೆಯುವುದು ಎಷ್ಟು ಸಮಸ್ಯೆಯೋ, ಅವರಿಗೂ ನಮ್ಮ ಜತೆ ಬೆರೆಯುವುದು ಸಮಸ್ಯೆಯೇ ಆಯಿತು. ಭಿನ್ನ ಸಂಸ್ಕೃತಿಯ ಎರಡು ಮನಸ್ಸುಗಳು ಒಂದಾಗುವಾಗ ಇವೆಲ್ಲ ಸಹಜ. ಬದಲಾದ ಸನ್ನಿವೇಶ ಮತ್ತು ವಾಸ್ತವವನ್ನು ಅರ್ಥ ಮಾಡಿಕೊಂಡರೆ, ಎಂಥ ಹೊಸ ವ್ಯವಸ್ಥೆ ಯಾದರೂ ಕೆಲಸ ಮಾಡಬಹುದು. ಇದಕ್ಕಾಗಿ ನಮ್ಮ ಕೆಲವು ಹುಟ್ಟುಗುಣ, ಜಿಗುಟುತನಗಳನ್ನು ಬಿಡಬೇಕು. ಹಾಗೆ ನಮಗಿಷ್ಟವಿಲ್ಲದಿದ್ದರೂ ಭಿನ್ನ ಸಂಪ್ರದಾಯ, ಸಂಸ್ಕೃತಿಗಳನ್ನು ಒಪ್ಪಿಕೊಳ್ಳಬೇಕು, ಅಪ್ಪಿಕೊಳ್ಳಬೇಕು. ಎರಡೂ ಸಂಸ್ಥೆಗಳು ಪೂರ್ತಿ ವಿಲೀನವಾಗಿ ಐದು ವರ್ಷಗಳಾಗುವ ತನಕ ನಾನು ಇದ್ದೆ.