Sunday, 24th November 2024

ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ನೇಮಕ

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಂ.ಬಿ ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷರು ಎಂ.ಬಿ ಪಾಟೀಲ್ ಅವರನ್ನು ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ರನ್ನಾಗಿ ನೇಮಕ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಮಂಗಳವಾರ ಮಾಧ್ಯಮ ಪ್ರಕಟಣೆ ಹೊರಡಿಸ ಲಾಗಿದೆ.

ಎಂ.ಬಿ ಪಾಟೀಲ್ ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದರು. ಹೆಚ್.ಡಿ ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಸತತ ಮೂರು ಬಾರಿ ವಿಜಯಪುರದ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿರುವ ಪಾಟೀಲ್​ಗೆ ಲೋಕಸಭೆ, ವಿಧಾನಸಭೆ ಹಾಗೂ ಸಚಿವ ಸ್ಥಾನದ ಜವಾಬ್ದಾರಿ ವಹಿಸಿರುವ ಅನುಭವವೂ ಇದೆ. ಉದ್ಯಮಿಯೂ ಆಗಿರುವ ಇವರು ವಿಜಯಪುರ ಭಾಗದಲ್ಲಿ ಪ್ರಭಾವಿ ಧುರೀಣರಾಗಿ ಗುರುತಿಸಿ ಕೊಂಡಿದ್ದಾರೆ.

ಎಂ.ಬಿ ಪಾಟೀಲ್ ರಾಜಕೀಯದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯದವರು. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗಿ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಇದ್ದಾರೆ. ಕೆಪಿಸಿಸಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ಆರ್. ಧ್ರುವನಾರಾಯಣ ಇದ್ದಾರೆ.

ವೋಟ್ ಬ್ಯಾಂಕ್, ಜಾತಿ ಲೆಕ್ಕಾಚಾರದಂತೆ ಗಮನಿಸಿದರೂ ಕಾಂಗ್ರೆಸ್ ಪಕ್ಷ, ಲಿಂಗಾಯತ ಸಮುದಾಯದ ಎಂ.ಬಿ ಪಾಟೀಲ್​ಗೆ ಪ್ರಚಾರ ಸಮಿತಿ ನೇತೃತ್ವ ನೀಡಿದೆ.