Saturday, 23rd November 2024

73ನೇ ಗಣರಾಜ್ಯೋತ್ಸವಕ್ಕೆ ಗೂಗಲ್’ನಿಂದ ಡೂಡಲ್ ಗೌರವ

ನವದೆಹಲಿ: ಗೂಗಲ್ ಸರ್ಚ್‌ ಎಂಜಿನ್‌ನ ಕಲಾತ್ಮಕ ಅಭಿವ್ಯಕ್ತಿಯಾದ ಡೂಡಲ್ ಬುಧವಾರ ಭಾರತ 73ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪರೇಡ್‌ನ ಪ್ರಮುಖ ಅಂಶಗಳನ್ನು ಬಿಂಬಿಸುವ ಮೂಲಕ ಗೌರವ ಸಲ್ಲಿಸಿದೆ.

ಒಂದು ಆನೆ, ಕುದುರೆ, ಶ್ವಾನ, ಒಂಟೆ ಮತ್ತು ಕೆಂಪು ತಬಲಾ ಹಾಗೂ ಪರೇಡ್ ಪಥವನ್ನು ಬಿಂಬಿಸಿದೆ. ಒಂಟೆಯಿಂದ ಕೂಡಿದ ಬ್ಯಾಂಡ್‌ನಲ್ಲಿ ಸ್ಯಾಕ್ಸೋಫೋನ್ ಚಿತ್ರಿಸಲಾಗಿದೆ. ಜತೆಗೆ ಪಾರಿವಾಳಗಳು ಹಾಗೂ ಭಾರತದ ರಾಷ್ಟ್ರಧ್ವಜವಾದ ತಿರಂಗ ಡೂಡಲ್ ಗೌರವ ಪಡೆದಿವೆ.

ಭಾರತದ ಸ್ವತಂತ್ರವಾದ ಬಳಿಕ ಸಂವಿಧಾನ ಅಸ್ತಿತ್ವಕ್ಕೆ ಬಂದು 72 ವರ್ಷಗಳು ಪೂರ್ಣಗೊಂಡ ದಿನವನ್ನು 73ನೇ ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ. ಭಾರತದ ಸಂವಿಧಾನವನ್ನು 1949ರ ನವೆಂಬರ್ 26ರಂದು ಆಂಗೀಕರಿಸಿದರೂ, ಅಧಿಕೃತವಾಗಿ 1950ರ ಜನವರಿ 26ರಂದು ಅಸ್ತಿತ್ವಕ್ಕೆ ಬಂದಿತ್ತು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ದಿವಸವನ್ನು ಘೋಷಿಸಿದ ನೆನಪಿಗಾಗಿ ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಇದೀಗ ಗಣರಾಜ್ಯೋತ್ಸವವನ್ನು ನಾಲ್ಕು ದಿನಗಳ ಅವಧಿಯ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದ್ದು, ಸ್ವಾತಂತ್ರ್ಯ ಯೋಧ ಸುಭಾಸ್‌ ಚಂದ್ರ ಬೋಸ್ ಅವರ ಜನ್ಮ ದಿನವಾದ ಜ.23ರಿಂದ ಆರಂಭಿಸಲಾಗುತ್ತದೆ. ಪ್ರತಿ ರಾಜ್ಯಗಳ ಸ್ತಬ್ಧಚಿತ್ರಗಳು, ಹಲವಾರು ಬ್ಯಾಂಡ್‌ಗಳು, ಜಾನಪದ ನೃತ್ಯ ತಂಡಗಳು ಮತ್ತು ಸರ್ಕಾರದ ಉನ್ನತ ಅಧಿಕಾರಿಗಳು ಇದರ ಭಾಗವಾಗಿರುತ್ತಾರೆ.

ಕೆಂಪುಕೋಟೆಯಲ್ಲಿ ರಾಷ್ಟ್ರಪತಿಯವರು ತ್ರಿವರ್ಣ ಧ್ವಜಾರೋಹಣ ನೆರವೇರಿಸುತ್ತಾರೆ. ಬಳಿಕ ರಾಷ್ಟ್ರಗೀತೆ ಹಾಗೂ 21 ಸುತ್ತು ಬಂದೂಕು ನಮನ ಸಲ್ಲಿಸಲಾಗುತ್ತದೆ. ಬಳಿಕ ರಾಷ್ಟ್ರಪತಿಗಳು ಭದ್ರತಾ ಪಡೆಗಳ ಯೋಧರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.