ಬಿಎಸ್ವೈ ಅವರನ್ನು ವಿಶ್ವಾಸಕ್ಕೆ ಪಡೆದೇ ತೀರ್ಮಾನ
ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂಬ ಸಂದೇಶ ರವಾನೆ
ಚುನಾವಣೆ ವೇಳೆ ಸಚಿವರಿಗೆ ಎರಡು ಜಿಲ್ಲೆಗಳ ಜವಾಬ್ದಾರಿ
ವಿಶೇಷ ವರದಿ: ಪ್ರದೀಪ್ ಕುಮಾರ್ ಎಂ. ಬೆಂಗಳೂರು
ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ವೇಳೆ ತವರು ಜಿಲ್ಲೆಗೆ ಅವಕಾಶ ನೀಡದ ವಿಚಾರದಲ್ಲಿ ಹಲವು ಸಚಿವರು ಅಸಮಾಧಾನಗೊಂಡಿದ್ದರೂ ಈ ವಿಚಾರದಲ್ಲಿ ಬಿಜೆಪಿ ವರಿಷ್ಠರು ಅನುಸರಿಸಿದ ನೀತಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಂತೂ ನಿಜ.
ಉಸ್ತುವಾರಿ ನೇಮಕ ಮುಖ್ಯಮಂತ್ರಿಯವರ ಪರಮಾಧಿಕಾರವಾದರೂ ಅವರು ಹೈಕಮಾಂಡ್ ನಿರ್ದೇಶನ ವನ್ನಷ್ಟೇ ಪಾಲಿಸಿದ್ದಾರೆ. ಹೀಗಾಗಿ ಸಚಿವರಿಗೆ ತವರು ಜಿಲ್ಲೆಯ ಉಸ್ತುವಾರಿ ನಿರಾಕರಿಸಲು ವರಿಷ್ಠರು ನೀಡಿರುವ ಕಾರಣಗಳು ಮತ್ತು ಎಚ್ಚರಿಕೆ ಸಂದೇಶ ಎಲ್ಲರೂ ಬಾಯಿ ಮುಚ್ಚುವಂತೆ ಮಾಡಿದೆ. ಆ ಮೂಲಕ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂಬ ಸಂದೇಶವನ್ನು ಅಸಮಾಧಾನಿತರಿಗೆ ವರಿಷ್ಠರು ನೀಡಿದ್ದು, ‘ಪಕ್ಷದ ನಿರ್ಧಾರದಂತೆ ಮುಂದುವರಿಯುವುದಾದರೆ ಇರಿ. ಇಲ್ಲವಾ ದಲ್ಲಿ ನಿಮ್ಮ ದಾರಿ ನೀವು ನೋಡಿಳ್ಳುಹುದು’ ಎಂಬ ಎಚ್ಚರಿಕೆಯನ್ನೂ ರವಾನಿಸಿದಂತಿದೆ.
ಜೆಡಿಎಸ್, ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದವರಲ್ಲಿ ಬಹುತೇಕರು ಸಚಿವರಾಗಿದ್ದರೂ ಕೆಲವರು ಇನ್ನೂ ಕಾಂಗ್ರೆಸ್ ಜತೆಗೆ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸಿಗೆ ಮರಳಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಇಂತಹ ಸಚಿವರು ಒಂದೊಮ್ಮೆ ಬೇಸರ ಗೊಂಡಿದ್ದರೆ ಈಗಲೇ ತಮ್ಮ ನಿರ್ಧಾರ ಕೈಗೊಳ್ಳಬಹುದು ಎಂಬ ಉದ್ದೇಶವೂ ಈ ನಿರ್ಧಾರದ ಹಿಂದೆ ಇದೆ ಎಂದು ಹೇಳಲಾಗಿದೆ.
ಬಿಎಸ್ವೈ ವಿಶ್ವಾಸಕ್ಕೆ: ಮಹತ್ವದ ಸಂಗತಿ ಎಂದರೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಸಿದ್ಧಪಡಿಸುವ ಮೊದಲು ಪಕ್ಷದ ವರಿಷ್ಠರು ಮಾಜಿ ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ಅವರೊಂದಿಗೆ ಈ ವಿಚಾರದ ಬಗ್ಗೆ ಚರ್ಚಿಸಿ ತಮ್ಮ ಉದ್ದೇಶ ತಿಳಿಸಿದ್ದರು. ಯಡಿಯೂರಪ್ಪ ಸಹಮತಿಯ ಬಳಿಕವೇ ಪಟ್ಟಿ ಅಂತಿಮಗೊಳಿಸಲಾಗಿದೆ
ಎಂದು ಮೂಲಗಳು ತಿಳಿಸಿವೆ. ಬಹುತೇಕ ಎಲ್ಲ ವಲಸಿಗ ಸಚಿವರು ಯಡಿಯೂರಪ್ಪ ಮಾತು ಕೇಳುತ್ತಾರೆ ಮತ್ತು ಕೇಳಲೇ ಬೇಕಾದ ಅನಿವಾರ್ಯವೂ ಅವರಿಗಿದೆ. ಹೀಗಾಗಿ ಯಡಿಯೂರಪ್ಪ ಒಪ್ಪಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬುದು ವರಿಷ್ಠರ ಯೋಚನೆಯಾಗಿತ್ತು.
ಒಕ್ಕಲಿಗರ ಬಲವರ್ಧನೆ: ಒಕ್ಕಲಿಗರು ಹೆಚ್ಚಾಗಿರುವ ಹಳೇ ಮೈಸೂರು ಭಾಗದಲ್ಲಿ ಆ ಸಮುದಾಯದ ಸಚಿವರನ್ನೇ ನೇಮಿಸುವ ಮೂಲಕ ಪಕ್ಷ ತನ್ನ ಶಕ್ತಿ ಹೆಚ್ಚಿಸಿ ಕೊಳ್ಳಲು ಮುಂದಾಗಿದೆ. ಒಕ್ಕಲಿಗರು ಹೆಚ್ಚಾಗಿರುವ ಹಾಸನ ಮತ್ತು ಮಂಡ್ಯಕ್ಕೆ ಕೆ.ಗೋಪಾಲಯ್ಯ, ರಾಮನಗರಕ್ಕೆ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮೈಸೂರಿಗೆ
ಎಸ್.ಟಿ.ಸೋಮಶೇಖರ್, ಬೆಂಗಳೂರು ಗ್ರಾಮಾಂತರಕ್ಕೆ ಡಾ.ಕೆ.ಸುಧಾಕರ್ ಅವರನ್ನು ನೇಮಿಸಲಾಗಿದೆ. ಎಲ್ಲರೂ ಅದೇ ಸಮುದಾಯದವರೇ. ಚಿಕ್ಕಬಳ್ಳಾಪುರಕ್ಕೆ ಸುಧಾಕರ್ ಆಪ್ತ ಎಂ.ಟಿ.ಬಿ. ನಾಗರಾಜ್ ಅವರನ್ನು ನೇಮಿಸುವ ಮೂಲಕ ಸುಧಾಕರ್ ತಮ್ಮ ತವರು ಜಿಲ್ಲೆಯ ಬಗ್ಗೆಯೂ ಗಮನಹರಿಸಲು ಅವಕಾಶ ಕಲ್ಪಿಸಲಾಗಿದೆ.
ರಾಮುಲುಗೆ ಬಳ್ಳಾರಿ ಏಕೆ?: ಇನ್ನು ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ನೀಡಲು ವಾಲ್ಮೀಕಿ ಸಮುದಾಯ ಕಾರಣ. ೨೦೧೮ರ ಚುನಾವಣೆಯಲ್ಲಿ ಪಕ್ಷದ ಸಲಹೆ
ಮೇಲೆ ಶ್ರೀರಾಮುಲು ಚಿತ್ರದುರ್ಗದಿಂದ ಸ್ಪರ್ಧಿಸಿದ್ದರು. ಇದರಿಂದ ಆ ಭಾಗದಲ್ಲಿ ಪಕ್ಷ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಯಿತು. ಸರಕಾರ ಬಂದ ಮೇಲೆ
ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನ ಬಯಸಿದ್ದರು. ಜತೆಗೆ ಬಳ್ಳಾರಿ ಉಸ್ತುವಾರಿಯನ್ನೂ ಕೇಳಿದ್ದರು.
ಆದರೆ, ನಿರೀಕ್ಷೆ ಈಡೇರದೇ ರಾಮುಲು ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದರು. ಅದರಲ್ಲೂ ಆನಂದ್ ಸಿಂಗ್ಗೆ ಬಳ್ಳಾರಿ ಉಸ್ತುವಾರಿ ವಹಿಸಿದ ಮೇಲಂತೂ
ಶ್ರೀರಾಮುಲು ಒಳಗೊಳಗೇ ಕುದಿಯುತ್ತಿದ್ದರು. ಇದೀಗ ಆನಂದ್ ಸಿಂಗ್ಗೆ ಕೊಪ್ಪಳ ಹೊಣೆ ನೀಡಿ, ರಾಮುಲುಗೆ ಬಳ್ಳಾರಿ ನೀಡುವ ಮೂಲಕ ಸಮಾಧಾನ
ಪಡಿಸಿದೆ. ಈ ಮೂಲಕ ವಾಲ್ಮೀಕಿ ಸಮುದಾಯ (ಪರಿಷ್ಟ ಪಂಗಡ)ವನ್ನು ಬಿಜೆಪಿ ಜತೆಗೇ ಉಳಿಸಿಕೊಳ್ಳುವ ವಿಶ್ವಾಸ ನಾಯಕರದ್ದು.
ನ್ನೂ ವಿ.ಸೋಮಣ್ಣಗೆ ಚಾಮರಾಜನಗರ ಉಸ್ತುವಾರಿ ವಹಿಸುವ ವಿಚಾರದಲ್ಲೂ ವರಿಷ್ಠರು ಎಚ್ಚರಿಕೆಯ ನಿರ್ಧಾರ ಕೈಗೊಂಡಿದ್ದಾರೆ. ಆ ಭಾಗದಲ್ಲಿ ಸೋಮಣ್ಣ
ಶಕ್ತಿ ಹೆಚ್ಚಾಗಿದೆ. ಅಲ್ಲದೆ ಹಳೇ ಮೈಸೂರು ಭಾಗದ ಲಿಂಗಾಯತರಲ್ಲಿ ಸೋಮಣ್ಣ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಸೋಮಣ್ಣ ನೇಮಕದಿಂದ ಹಳೇ ಮೈಸೂರು ಭಾಗದಲ್ಲಿ ಲಾಭವಾಗಬಹುದು ಎಂಬ ಯೋಚನೆ.
ಅಶೋಕ್ಗೆ ಉಸ್ತುವಾರಿ ಏಕಿಲ್ಲ?
ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಚುನಾವಣೆಗೆ ಸಂಬಂಧಿಸಿದ ಎಲ್ಲ ತಂತ್ರಗಾರಿಕೆ ಹೊಣೆಯನ್ನು ಆರ್. ಅಶೋಕ್ಗೆ ವಹಿಸಲು ವರಿಷ್ಠರು ತೀರ್ಮಾನಿಸಿದ್ದಾರೆ. ಹೀಗಿರುವಾಗ ಅವರಿಗೆ ಬೇರೆ ಜಿಲ್ಲೆಯ ಉಸ್ತುವಾರಿ ವಹಿಸಿದರೆ ಕಷ್ಟವಾಗಬಹುದು. ಮೇಲಾಗಿ ಸ್ವತಃ ಮುಖ್ಯ ಮಂತ್ರಿ ಅವರೇ ಬೆಂಗಳೂರು ನಗರ ಜಿಲ್ಲೆ ಸ್ತುವಾರಿ ಯಾಗಿರುವುದರಿಂದ ಶ್ಯಾಡೋ ಉಸ್ತುವಾರಿಯಾಗಿ ಅಶೋಕ್ ಕೆಲಸ ನಿರ್ವಹಿಸಿದಲ್ಲಿ ಆಗ ಬಿಬಿಎಂಪಿ ಚುನಾವಣೆಯಲ್ಲಿ ಲಾಭವಾಗಬಹುದು ಎಂಬುದು ಲೆಕ್ಕಾಚಾರ.
ತಂತ್ರಗಾರಿಕೆ ಹಿಂದೆ ಬಿ.ಎಲ್.ಸಂತೋಷ್ ಈ ಎಲ್ಲ ತಂತ್ರಗಾರಿಕೆಯ ಹಿಂದೆ ಪ್ರಮುಖ ಪಾತ್ರ ವಹಿಸಿದ ವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಯಾಗಿರುವ ಬಿ.ಎಲ್.ಸಂತೋಷ್ ಎಂದು ಹೇಳಲಾಗಿದೆ. ಮುಂದೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ತಮ್ಮ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ತವರು ಜಿಲ್ಲೆ ಉಸ್ತುವಾರಿ ತಪ್ಪಿಸಿದ್ದೇಕೆ?
? ಸಚಿವರಿಗೆ ತವರು ಜಿಲ್ಲೆಯ ಉಸ್ತುವಾರಿ ವಹಿಸಿದರೆ ಅವರು ಜಿಲ್ಲೆಗಿಂತ ತಮ್ಮ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಾರೆ. ಸರಕಾರದ ಅನುದಾನದಲ್ಲಿ ಹೆಚ್ಚಿನ ಪಾಲನ್ನು ತಮ್ಮ ಜಿಲ್ಲೆಗೆ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಜಿಲ್ಲೆಯ ಇತರೆ ಕ್ಷೇತ್ರಗಳಲ್ಲಿ ಸರಕಾರದ ಬಗ್ಗೆ ಅಸಮಾಧಾನ ಉಂಟಾಗಬಹುದು.
? ಬೇರೆ ಜಿಲ್ಲೆಯ ಉಸ್ತುವಾರಿ ವಹಿಸಿದರೆ ಆಗ ಸಚಿವರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುವುದಿಲ್ಲ. ಜತೆಗೆ ತಮ್ಮ ಉಸ್ತುವಾರಿ ಜಿಲ್ಲೆ ಜತೆಗೆ ತವರು ಕ್ಷೇತ್ರಕ್ಕೂ ಒತ್ತು ನೀಡುತ್ತಾರೆ. ಸಹಜವಾಗಿಯೇ ಎರಡು ಜಿಲ್ಲೆಗಳಲ್ಲಿ ಪಕ್ಷಕ್ಕೆ ಇದರಿಂದ ಲಾಭವಾಗುತ್ತದೆ.
? ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದೆ. ಆ ವೇಳೆ ಸಚಿವಾಕಾಂಕ್ಷಿಗಳಲ್ಲಿ ಅಸಮಾಧಾನ ಉಂಟಾಗುತ್ತದೆ. ಇಂತಹ ಅಸಮಾಧಾನವನ್ನು ನಾವು ಲೆಕ್ಕಿಸುವುದಿಲ್ಲ ಎಂಬ ಸಂದೇಶವನ್ನು ಸಚಿವಾಕಾಂಕ್ಷಿಗಳಿಗೆ ರವಾನಿಸುವುದು.
? ಇನ್ನು ಒಂದು ವರ್ಷದಲ್ಲಿ ಚುನಾವಣೆ ನಡೆಯಲಿರುವುದರಿಂದ ಜಾತೀವಾರು, ಸಮುದಾಯವಾರು ನಾಯಕರು, ಜನರನ್ನು ಪಕ್ಷದತ್ತ ಸೆಳೆಯಲು ಅನುಕೂಲ ವಾಗುವಂತೆ ಸಚಿವರಿಗೆ ಉಸ್ತುವಾರಿ ಜಿಲ್ಲೆಗಳನ್ನು ಹಂಚಲಾಗಿದೆ.
***
ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಎಲ್ಲ ಸಚಿವ ರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲರೂ ಒಗ್ಗಟ್ಟಾಗಿದ್ದು, ಅಸಮಧಾನವಿಲ್ಲ.
ಅತ್ಯಂತ ಸೂಕ್ತ ರೀತಿಯಲ್ಲಿ ಜನಪರ ಕೆಲಸ ಮಾಡಲು ಬದ್ಧರಾಗಿದ್ದೇವೆ.
– ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ನಮ್ಮ ಸರಕಾರ ಹೊಸ ಪದ್ಧತಿ ಜಾರಿಗೆ ತಂದಿದೆ. ಗುಂಪುಗಾರಿಕೆ ತಡೆಯಲು ತಟಸ್ಥ ವ್ಯಕ್ತಿಯನ್ನು
ಜಿಲ್ಲೆಗಳಿಗೆ ಉಸ್ತುವಾರಿಗಳಾಗಿ ನೇಮಿಸಿದರೆ ಅನುಕೂಲ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.
– ಡಾ.ಸಿ.ಎನ್.ಅಶ್ವತ್ಥನಾರಾಯಣ ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ
ಮೂಟೆ ಹೊರುವವರಿಗೆ ಯಾವುದಾದರೂ ಒಂದೇನೆ. ಭಾರ ಹೊರುವವರಿಗೆ ಏನೂ ಆಗುವುದಿಲ್ಲ. ಯಾವ ಜಿಲ್ಲೆಯ ಉಸ್ತುವಾರಿ ಸಿಕ್ಕಿದರೂ ಕೆಲಸ
ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಸಚಿವ ಆರ್.ಅಶೋಕ್ ಏಕಾಂಗಿಯಲ್ಲ, ಅವರನ್ನು ಸುಮ್ಮನೆ ಕೂರಲು ನಾವು ಬಿಡುವುದಿಲ್ಲ.
– ವಿ.ಸೋಮಣ್ಣ ವಸತಿ ಸಚಿವ
ಉಸ್ತುವಾರಿ ಬದಲಾವಣೆ ನಿರೀಕ್ಷೆ ಇರಲಿಲ್ಲ. ಮುಖ್ಯಮಂತ್ರಿ ಜತೆ ಮಾತನಾಡಿದ್ದು, ವರಿಷ್ಠರ ತೀರ್ಮಾನ ಎಂದು ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರವೇ
ಸಿಕ್ಕಿದ್ದರೆ ಚೆನ್ನಾಗಿತ್ತು.
– ಎಂ.ಟಿ.ಬಿ.ನಾಗರಾಜ್ ಪೌರಾಡಳಿತ ಸಚಿವ