೨ ವರ್ಷಗಳಿಂದ ಗುತ್ತಿಗೆದಾರರಿಗೆ ಬಿಲ್ ಸಿಕ್ಕಿಲ್ಲ
ಬಿಲ್ ಪಾವತಿಗಾಗಿ ಗುಪ್ತವಾಗಿ ತುಳಸಿಕಟ್ಟೆ ಸುತ್ತುತ್ತಿರುವ ಆಕಾಂಕ್ಷಿಗಳು
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಜನಪ್ರತಿನಿಧಿಗಳಿಲ್ಲದ ಬಿಬಿಎಂಪಿಯಲ್ಲಿ ಈಗ ಕಮ್ಮಿಷನರ್ ದರ್ಬಾರ್ ವಿಚಾರಕ್ಕಿಂತ ಕಮಿಷನ್ ದಂಧೆ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ.
ಏಕೆಂದರೆ, ಬಿಬಿಎಂಪಿಯಲ್ಲಿ ಕಾಮಗಾರಿಗಳನ್ನು ನಡೆಸಿರುವ ಗುತ್ತಿಗೆದಾರರು ಬಿಲ್ ಪಡೆಯಲು ಶೇ.೮ ರಷ್ಟು ಕಮಿಷನ್ (ಪಸೆಂಟೇಜ್ ಪದ್ಧತಿ) ವರೆಗೂ
ಪಾವತಿಸಬೇಕಾದ ದಂದೆ ಮತ್ತೆ ವಕ್ಕರಿಸಿದೆ. ಅಂದರೆ ಗುತ್ತಿಗೆದಾರರು ಬಿಲ್ ಪಡೆಯಲು ಹಣಕಾಸು ನಿರ್ವಹಣೆ ಹೊಣೆ ಹೊತ್ತ ತಳಮಟ್ಟದಿಂದ ಮೇಲಿನ ವರೆಗೂ ಶೇ. ೧-೨-೨-೩ರ ಪ್ರಕಾರ ಪಸೆಂಟೇಜ್ ನೀಡಬೇಕಾಗುತ್ತದೆ. ಇದಕ್ಕೆ ಒಪ್ಪದಿದ್ದರೆ ಕಾಮಗಾರಿ ಮುಗಿಸಿ ಮೂರು ವರ್ಷಗಳೇ ಕಳೆದಿದ್ದರೂ ಬಿಲ್ ಪಾವತಿಯಾಗುವುದಿಲ್ಲ.
ಇಂಥ ವಿಷವರ್ತುಲದಲ್ಲಿ ಗುತ್ತಿಗೆದಾರರು ಸಿಲುಕಿದ್ದು, ಈ ದಂಧೆ ಇತ್ತೀಚಿಗೆ ಸರಕಾರ ಬಿಬಿಎಂಪಿಗೆ ೫೦೦ ಕೋಟಿ ರು. ಅನುದಾನ ನೀಡಿದ ನಂತರ ತೀವ್ರಗೊಂಡಿದೆ. ಹೀಗಾಗಿ ಬಿಬಿಎಂಪಿಯಲ್ಲಿ ಸರಕಾರ ನೀಡಿರುವ ಅನುದಾನ ಸೇರಿದಂತೆ ಸುಮಾರು ೧೨೦೦ ಕೋಟಿ ರು. ಹಣವಿದ್ದರೂ ಗುತ್ತಿಗೆದಾರರಿಗೆ ಬಿಡಿಗಾಸೂ ಬಿಡುಗಡೆಯಾಗಿಲ್ಲ. ಇದರಿಂದ ಗುತ್ತಿಗೆದಾರರು ಬಿಲ್ ಪಾವತಿಯಾಗದೆ ಗೋಳಾಡುತ್ತಿದ್ದರೆ, ಮುಂದೆ ಬಿಬಿಎಂಪಿಗೆ ಅನುದಾನವೇ ಸಿಗದೆ ಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಅಂದರೆ ಬಿಬಿಎಂಪಿ ತನ್ನ ಅನುದಾನ ಬಳಸಿಕೊಂಡು ಅದರ ಪ್ರಮಾಣ ಪತ್ರ ಸಲ್ಲಿಸಿದರೆ ಮಾತ್ರ ಸರಕಾರ ಮುಂದೆ ಹೆಚ್ಚಿನ ಅನುದಾನ ನೀಡುತ್ತದೆ. ಆದರೆ ಅಧಿಕಾರಿಗಳು ಹಣವನ್ನೇ ವೆಚ್ಚ ಮಾಡದೆ ಜೋಪಾನ ಮಾಡುತ್ತಿದ್ದು, ಇದರಿಂದ ಬಜೆಟ್ ಗೂ ಮುನ್ನ ಬಿಬಿಎಂಪಿ ಯಾವುದೇ ಹಣ ಕೇಳಲಾಗದು. ಬಜೆಟ್ ನಂತರ ಸಿಗುವುದೂ ಕಷ್ಟವಾಗಬಹುದು ಎಂದು ಅಧಿಕಾರಿಗಳೇ ಹೇಳಿದ್ದಾರೆ.
ಎಂಥವರಿಗೆ ತಕ್ಷಣ ಹಣ ಸಿಗುತ್ತದೆ?: ಬಿಬಿಎಂಪಿಯಲ್ಲಿ ಇತ್ತೀಚಿಗೆ ಸರಕಾರ ನವ ನಗರೋತ್ಥಾನ ಯೋಜನೆಯಡಿ ನೀಡಿರುವ ೫೦೦ಕೋಟಿ ರು.,
೧೪ನೇ ಹಣಕಾಸು ಅನುದಾನ ಸುಮಾರು ೫೦೦ ಕೋಟಿ ರು. ಹಾಗೂ ಇತ್ತೀಚಿಗೆ ತೆರಿಗೆ ಸಂಗ್ರಹದಿಂದ ೨೫೦ ಕೋಟಿ ರು. ಸೇರಿದಂತೆ ೧೨,೦೦೦ ಕೋಟಿಗೂ
ಹೆಚ್ಚಿನ ಹಣವನ್ನು ತನ್ನ ಬಳಿ ಇರಿಸಿಕೊಂಡಿದೆ. ಆದರೆ ಕಳೆದ ಎರಡೂವರೆ ವರ್ಷಗಳಿಂದ ಗುತ್ತಿಗೆದಾರರಿಗೆ ಮಾತ್ರ ಬಿಲ್ ಪಾವತಿ ಮಾಡಿಲ್ಲ. ಈ ಹಿಂದೆ
ಕಾಮಗಾರಿ ಮುಗಿಸಿದ ತಿಂಗಳ ನಂತರ ಬಿಲ್ ಪಾವತಿಯಾಗುತ್ತಿತ್ತು. ಹಿರಿಯತನ ತತ್ವದ ಆಧಾರದ ಮೇಲಾದರೂ ಹಣ ಪಾವತಿಯಾಗಬೇಕಿತ್ತು. ಆದರೆ
ಈಗ ಸ್ಪೆಷಲ್ ಎಲ್ ಒಸಿ ಪಡೆದವರಿಗೆ ಮಾತ್ರ ಹಣ ಸಿಗುತ್ತಿದೆ.
ಅಂದರೆ ಕಮಿಷನ್ ಕೊಡಲು ಒಪ್ಪಿದ ಗುತ್ತಿಗೆದಾರರಿಗೆ ಮಾತ್ರ ಬಿಲ್ ಸಿಗುತ್ತದೆ. ಇಂಥ ಗುತ್ತಿಗೆದಾರರಿಗೆ ರಸ್ತೆ ಹಾಗೂ ಚರಂಡಿಗಳಿಗೆ ಸಂಬಂಧಿಸಿದ ಮುಖ್ಯ ಎಂಜಿನೀಯರ್ ಗಳು ಈ ಬಿಲ್ ಪಾವತಿಸದಿದ್ದರೆ ಕಾಮಗಾರಿಗಳು ಸ್ಥಗಿತವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ವಿಶೇಷ ಆದ್ಯತೆ ಮೇರೆಗೆ ಬಿಲ್ ಪಾವತಿಸಿ ಎಂದು ಶಿಫಾರಸು ಮಾಡುತ್ತಾರೆ. ಇದನ್ನು ಆಯುಕ್ತರು ಅನುಮೋದಿಸಲೇಬೇಕಾಗುತ್ತದೆ. ಹೀಗೆ ಶಿಫಾರಸು ಪಡೆದ ಅನೇಕ ಗುತ್ತಿಗೆದಾರರನ್ನು ಪಟ್ಟಿ ಮಾಡಲಾಗಿದೆ. ಇವರಿಗೆ ಸದ್ಯದಲ್ಲೇ ಹಣಪಾವತಿಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಗುತ್ತಿಗೆದಾರರಿಗೆ ಹೀಗೊಂದು ಬೆದರಿಕೆ!
ಕೆಲವು ಗುತ್ತಿಗೆದಾರರು ಪಸೆಂಟೇಜ್ ಪಾವತಿಸಲು ಒಪ್ಪದಿದ್ದರೆ ಅವರಿಗೆ ಕಳಪೆ ಕಾಮಗಾರಿಯ ಹಣೆಪಟ್ಟಿ ಖಚಿತ. ಅಂದರೆ ಈಗ ಬಿಲ್ ಪಾವತಿಯಾಗು ತ್ತಿರುವುದು ಈ ಹಿಂದೆ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದ ಕಾಮಗಾರಿಗಳು. ಈ ಕೆಲಸಗಳನ್ನು ಗುತ್ತಿಗೆದಾರರು ಮುಗಿಸಿ ೨ ವರ್ಷಗಳೇ ಆಗಿರುತ್ತದೆ. ಇದನ್ನು ಪಾಲಿಕೆ ಸದಸ್ಯರು, ಎಂಜಿನಿಯರ್ ಗಳೂ ನೋಡಿ ಸಾಕ್ಷೀಕರಿಸಿರುತ್ತಾರೆ. ಆದರೆ ಹಣಕಾಸು ಅಧಿಕಾರಿಗಳು ಈಗ ಕಾಮಗಾರಿ ಸ್ಥಳ ತಪಾಸಣೆ ಮಾಡಬೇಕೆಂದು ಬೆದರಿಸುತ್ತಾರೆ. ಏಕೆಂದರೆ ಎರಡು ವರ್ಷಗಳ ಹಿಂದಿನ ಕಾಮಗಾರಿಗಳು ಸಹಜವಾಗಿಯೇ ಮಳೆ ಮತ್ತು ಸಂಚಾರ ದಟ್ಟಣೆಯಿಂದ ಹೊಸತನ ಕಳೆದುಕೊಂಡಿರುತ್ತದೆ. ಜತೆಗೆ ಬೆಸ್ಕಾಂ, ಜಲಮಂಡಳಿ ಸೇರಿದಂತೆ ಅನೇಕ ಖಾಸಗಿ ಸಂಸ್ಥೆಗಳು ರಸ್ತೆ ಅಗೆದಿರುತ್ತಾರೆ. ಇಂಥ ಸಂದರ್ಭದಲ್ಲಿ ಗುತ್ತಿಗೆದಾರರು ಕಳಪೆ ಹಣಪಟ್ಟಿ ತಪ್ಪಿಸಿಕೊಳ್ಳಲು ಅಧಿಕಾರಿಗಳ ಪಸೆಂಟೇಜ್ಗೆ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಗುತ್ತಿಗೆದಾರರು ಅಳಲು ತೋಡಿಕೊಳ್ಳುತ್ತಾರೆ.
***
ಬಿಬಿಎಂಪಿಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಧಿಕಾರಿಗಳು ಬಿಲ್ ಪಾವತಿಸಿದೆ ಭ್ರಷ್ಟಚಾರದಿಂದ ಸತಾಯಿಸುತ್ತಿದ್ದಾರೆ. ಲಂಚ ಕೊಟ್ಟವರಿಗೆ ಮಾತ್ರ ವಿಶೇಷ ಎಲ್ ಒಸಿ ನೀಡಿ ಬಿಲ್ ಪಾವತಿಸುವ ಭ್ರಷ್ಟ ವ್ಯವಸ್ಥೆ ಹೆಚ್ಚಾಗುತ್ತಿದೆ. ಇದನ್ನು ಬೆಂಗಳೂರು ಉಸ್ತುವಾರಿ ಹೊತ್ತ ಮುಖ್ಯಮಂತ್ರಿ ಅವರು ತಪ್ಪಿಸಬೇಕು. ಇಲ್ಲವಾದರೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ.
-ಕೆ.ಟಿ.ಮಂಜುನಾಥ್ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು