Sunday, 15th December 2024

ಕರಿಬೇವಿನ ತಂಬುಳಿ

ಕರಿಬೇವಿಲ್ಲದೇ ಅಡುಗೆ ಬಹುಶಃ ಯಾರ ಮನೆಯಲ್ಲೂ ಪರಿಪೂರ್ಣವೆನಿಸುವುದೇ ಇಲ್ಲ. ಎಂಥಾ ಅಡುಗೆ ಯಿದ್ದರೂ ಸರಿ, ಮೇಲೊಂದು ಕರಿಬೇವಿನ ಒಗ್ಗರಣೆ ಬಿದ್ದು ಬಿಟ್ಟರೆ ಅದರ ರುಚಿಯ ಪರಮಾರ್ಥವೇ ಬೇರೆ.

ಕರಿಬೇವಿಲ್ಲದ ಅಡುಗೆಯೆಂದರೆ ಸರ್ವಾಭರಣಭೂಷಿತೆ ತಿಲಕವಿಡದೇ ನಿಂತಂತೆಯೇ ಸರಿ. ಇಷ್ಟಿದ್ದರೂ ಉಣ್ಣುವವರು ಮಾತ್ರವೇ ಕರಿಬೇವನ್ನು ಜೋಡಿಸಿ ತಿನ್ನುವುದು ಕಡಿಮೆಯೇ, ಬಯುತೇಕರು ಎಲೆಯ ತುದಿಗೆ ಅದನ್ನು ಎತ್ತಿ ಇಟ್ಟೇ ಚೆಲ್ಲುತ್ತಾರೆ. ನಿಜಕ್ಕೂ ಕರಿಬೇವಿನಲ್ಲಿರುವ ಪೌಷ್ಟಿಕಾಂಶ ಅಗಾಧ. ಪಾಸ್ಪರಸ್, ಕ್ಯಾಲ್ಷಿಯಂ, ಪೊಟಾಷಿಯಂ, ಕ್ಲೋರೈಡ್, ಬಿಟಾಕೆರೋಟಿನ್, ನಿಯಾಸಿನ್, ಫೋಲಿಕ್ ಆಸಿಡ್, ವಿಟಮಿನ್ ಸಿ ಹೀಗೆ ಆರೋಗ್ಯಕರ, ರೋಗನಿರೋಧಕ ಶಕ್ತಿಯನ್ನೊಳಗೊಂಡ ದೇಹಕ್ಕೆ ಏನೇನು ಬೇಕೋ ಅದೆಲ್ಲ ಕರಿಬೇವಿನಲ್ಲಿದೆ.

ಇಂಥ ಕರಿಬೇವಿಂದ ರುಚಿಕರ ತಂಬುಳಿ ಮಾಡಿ ಉಂಡರೆ? ಎಳೆಯ ಒಂದು ಮುಷ್ಟಿ ಕರಿಬೇವಿನ ಎಸಳುಗಳನ್ನು ಸ್ವಚ್ಛಗೊಳಿಸಿ, ತುಸು ತುಪ್ಪದಲ್ಲಿ ಬಾಡಿಸಿ, ಅದಕ್ಕೆ ಅರ್ಧ ಸೂನ್ ಜೀರಿಗೆ, ಎಂಟುಹತ್ತು ಕರಿ ಮೆಣಿಸಿಕಾಳು, ತೆಂಗಿನ ತುರಿ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಆ ಮಿಶ್ರಣಕ್ಕೆ ಕಡೆದ ಮಜ್ಜಿಗೆ ಒಂದು ಕಪ್ ಸೇರಿಸಿ, ಮೇಲಿಂದ ತುಪ್ಪ-ಜೀರಿಗೆಯ ಒಗ್ಗರಣೆಕೊಟ್ಟು ನೋಡಿ, ಘಮಘಮಿಸುವ ತಂಬುಳಿ ಸಿದ್ಧ.
ಅನ್ನದೊಂದಿಗೆ ಕಲೆಸಿ ಉಣ್ಣಲು, ಹಾಗೆಯೇ ಕುಡಿಯಲು ಸಹ ಯೋಗ್ಯ. ಉತ್ತಮ ಜೀರ್ಣಕಾರಿ ಸಹ.

ಅಡುಗೆ ಭಡ್ತಿ