ತಿಳಿರು ತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
‘ಅಕ್ಕಿ ಹಿಟ್ಟು’ ಎನ್ನಲಿಕ್ಕೆ ‘ಹಕ್ಕಿ ಇಟ್ಟು’ ಅಂತ, ‘ಅಕ್ಕಿ ಗೆರಸೆಯಿಂದ ಹಾರಿತು’ ಎನ್ನಲಿಕ್ಕೆ ‘ಹಕ್ಕಿ ಗೆರಸೆಯಿಂದ ಆರಿತು’ ಅಂತ, ಯಾರಾದರೂ ಹೇಳಿದರೆ ಅವರಿಗೆ ಆ-ಹಾ ಕಾರ ಸಮಸ್ಯೆ ಇದೆಯೆಂದು ಖಂಡಿತ ಅಂದುಕೊಳ್ಳಬೇಡಿ. ಅವರ ಮಾತು ಪರ್ಫೆಕ್ಟ್ ಆಗಿಯೇ ಇದೆ.
ಅವರು ಅ-ಕಾರವನ್ನೂ ಹ-ಕಾರವನ್ನೂ ಪರ್ಫೆಕ್ಟ್ ಆಗಿಯೇ ಉಚ್ಚರಿಸಬಲ್ಲರು. ಪರಂತು ಈ ಪದಪುಂಜಗಳಿಂದ ಅವರು ಕನ್ನಡದಲ್ಲಿ ಸ್ಪೂನರಿಸಂಗೆ ಪರ್ಫೆಕ್ಟ್ ಆದ ಒಂದೆರಡು ಉದಾಹರಣೆಗಳನ್ನು ಸೇರಿಸಿದ್ದಾರೆ ಅಷ್ಟೇ. ಅದಕ್ಕಾಗಿ ಅವರನ್ನು ಅಭಿನಂದಿಸಬೇಕು. ಈ ಅಂಕಣಬರಹ ಓದಿ ಮುಗಿಸಿದ ಮೇಲೆ ಬಹುಶಃ ನೀವೂ ಹೊಸದಾಗಿ ಒಂದಿಷ್ಟು ಕನ್ನಡ ಸ್ಪೂನರಿಸಂಗಳನ್ನು ಹೆಣೆಯಬಲ್ಲಿರಿ. ಅಕ್ಷರಗಳೊಂದಿಗಿನ ಈ ಆಟವನ್ನು ಭರಪೂರ ಆನಂದಿಸ ಬಲ್ಲಿರಿ.
ಸ್ಪೂನರಿಸಂ ಎಂದರೇನು? ನಿಮ್ಮಲ್ಲಿ ಕೆಲವರಿಗೆ ಈಗಾಗಲೇ ಗೊತ್ತಿರಬಹುದು. ಇಂಗ್ಲಿಷ್ ಸ್ಪೂನರಿಸಂನಲ್ಲಿ ನೀವೊಬ್ಬ ‘ಪಂಟ’ ಕೂಡ ಇರಬಹುದು. ಗೊತ್ತಿಲ್ಲದವರಿಗೆ ಸಂಕ್ಷಿಪ್ತವಾಗಿ ತಿಳಿಸುತ್ತೇನೆ. ಒಂದು ವಾಕ್ಯದಲ್ಲಿ ಯಾವುದೇ ಎರಡು ಪದಗಳ ಮೊದಲ ಅಕ್ಷರ(ಅಥವಾ ಉಚ್ಚಾರ)ಗಳನ್ನು ಅದಲು ಬದಲು ಮಾಡಿ ಹೊಸ ದೊಂದು ಅರ್ಥಪೂರ್ಣ ಆದರೆ ತಿಳಿಹಾಸ್ಯದ ವಾಕ್ಯ ರಚಿಸುವುದೇ ಸ್ಪೂನರಿಸಂ. ಉಚ್ಚಾರ ಎಂದು ಹೇಳಿದ್ದೇ ಕೆಂದರೆ ಇಂಗ್ಲಿಷ್ ನಲ್ಲಿ ಒಂದೇ ಅಕ್ಷರಕ್ಕೆ ಬೇರೆಬೇರೆ ಉಚ್ಚಾರಗಳಿರುತ್ತವೆ.
ಹಾಗಾಗಿ ಬರೀ ಅಕ್ಷರ ಬದಲಾವಣೆ ಸಾಕಾಗಲಿಕ್ಕಿಲ್ಲ, ನಿರ್ದಿಷ್ಟ ಉಚ್ಚಾರಕ್ಕಾಗಿ ಬೇರೆ ಅಕ್ಷರ ಬೇಕಾಗಬಹುದು. ಅಲ್ಲದೇ ಸ್ಪೂನರಿಸಂ ಇರುವುದೇ ಮೌಖಿಕ (ಬಾಯಿಮಾತಿನ) ಮನೋರಂಜನೆಯಾಗಿ. ಸ್ಪೂನರಿಸಂನ ವಾಕ್ಯ ಜೋಡಿಗೆ ಪರಸ್ಪರ ಸಂಬಂಧ ಇರಬೇಕಂತೇನಿಲ್ಲ. ‘ಬೈಸಿಕಲ್‌ಗೆ ಎಣ್ಣೆ ಬಿಡುತ್ತಿದ್ದೇನೆ’ ಮತ್ತು ‘ಮುಂಜುಗಡ್ಡೆ ಯನ್ನು ಕುದಿಸುತ್ತಿದ್ದೇನೆ’ ಎಂಬ ಅರ್ಥ ಬರುವ ಎರಡು ಸ್ವತಂತ್ರ ವಾಕ್ಯಗಳನ್ನು ಇಂಗ್ಲಿಷ್‌ನಲ್ಲಿ ಬರೆದರೆ ಅನುಕ್ರಮವಾಗಿ I am oiling the bicycle ಮತ್ತು I am boiling the icicle ಎಂದು ಆಗುತ್ತದಷ್ಟೆ? ಇಲ್ಲಿ Oiling bicycle ಮತ್ತು Boiling icicle ಪದಗಳಲ್ಲಿ ಮೊದಲ ಉಚ್ಚಾರಗಳು ಅದಲುಬದಲಾಗಿವೆಯಲ್ಲ, ಅದೇ ಸ್ಪೂನರಿಸಂ.
ಅದೇ ರೀತಿ ಅ blushing crow (ನಾಚಿಕೊಳ್ಳುತ್ತಿರುವ ಕಾಗೆ) ಮತ್ತು A crushing blow (ಮಾರಕ ಹೊಡೆತ) ವಾಕ್ಯಗಳನ್ನು ಗಮನಿಸಿ. ಇಲ್ಲಿಯೂ ಸ್ಪೂನರಿಸಂ ಇದೆ. Those girls are sin twisters ಎಂಬ ವಾಕ್ಯವನ್ನು Those girls are twin sisters ಎಂಬ ವಾಕ್ಯದೊಡನೆ ಓದಿ. ಟ್ವಿನ್ ಸಿಸ್ಟರ್ಸ್ ಆಗಿದ್ದವರು ಸಿನ್ ಟ್ವಿಸ್ಟರ್ಸ್ ಆಗುವ ಮೋಜನ್ನು ನೋಡಿ. Go and shake a tower ಎಂದು ಯಾರಿಗಾದರೂ ಹೇಳಿ. ಅಂತಹ ಶ್ರಮದ ಕೆಲಸವಾದ ಮೇಲೆ ಅವರಿಗೇ Go and take a shower ಎಂದು ಕೂಡ ಹೇಳಬೇಕಾಗುತ್ತದೆ. ಇಲ್ಲೆಲ್ಲ ಸ್ಪೂನರಿಸಂನ ಸೊಬಗು ತುಂಬಿದೆ.
ಸ್ಪೂನರಿಸಂಗೂ ಸ್ಪೂನ್‌ಗೂ(ಚಮಚಕ್ಕೂ) ಏನೇನೂ ಸಂಬಂಧವಿಲ್ಲ. ಈ ಭಾಷಾಚಮತ್ಕಾರ ಪ್ರಸಿದ್ಧವಾಗಿರುವುದು ರೆವರೆಂಡ್ ವಿಲಿಯಂ ಆರ್ಕಿಬಾಲ್ಡ್ ಸ್ಪೂನರ್ ಎಂಬೊಬ್ಬ ಬ್ರಿಟಿಷ್ ಪ್ರೊಫೆಸರನ ಹೆಸರಿನಿಂದ. ಆತ ಇಂಗ್ಲೇಂಡಿನ ಸುಪ್ರಸಿದ್ಧ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಡೀನ್ ಆಗಿ, ಆಮೇಲೆ ಅಲ್ಲೇ ನ್ಯೂ ಕಾಲೇಜ್‌ನಲ್ಲಿ ವಾರ್ಡನ್ ಆಗಿ ದೀರ್ಘಕಾಲ ಸೇವೆ ಸಲ್ಲಿಸಿದವನು. ಜೊತೆಯಲ್ಲೇ ಸ್ಥಳೀಯ ಚರ್ಚ್‌ನಲ್ಲಿ ಧಾರ್ಮಿಕ ಉಪನ್ಯಾಸಗಳನ್ನೂ ಕೊಡುತ್ತಿದ್ದನಂತೆ. ಉಲ್ಲೇಖನೀಯ ಸಾಹಿತ್ಯ ಕೃತಿಗಳನ್ನೇನೂ ರಚಿಸಿದವನಲ್ಲ. ಹೊಸದೊಂದು ಬಗೆಯ ವಾಕ್ಚಾತುರ್ಯದಿಂದ ಜಗತ್ಪ್ರಸಿದ್ಧನಾದ ವ್ಯಕ್ತಿ. ಕ್ರಿಸ್ತ ಶಕ 1844ರಲ್ಲಿ ಹುಟ್ಟಿದ ಸ್ಪೂನರ್ 1930ರಲ್ಲಿ ಎಂಬತ್ತಾರರ ಇಳಿವಯಸ್ಸಿನಲ್ಲಿ ನಿಧನನಾದಾಗ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅವನ ಗೌರವಾರ್ಥ ಒಂದು ಪುಟವಿಡೀ ಸ್ಪೂನರಿಸಂಗಳಿಂದ ಕೂಡಿದ್ದ ಶ್ರದ್ಧಾಂಜಲಿ ಪ್ರಕಟಿಸಿತ್ತಂತೆ.
ಅಷ್ಟಾಗಿ, ಸ್ವಾರಸ್ಯದ ಸಂಗತಿಯೇನೆಂದರೆ ಈಗ ಇಂಗ್ಲಿಷ್‌ನಲ್ಲಿ ಜನಜನಿತವಾಗಿರುವ ಸ್ಪೂನರಿಸಂಗಳು ವಿಲಿಯಂ ಆರ್ಕಿಬಾಲ್ಡ್ ಸ್ಪೂನರ್ ಹೇಳಿದಂಥವು ಅಲ್ಲವೇ ಅಲ್ಲ! ಅವೆಲ್ಲ ಅವನ ಹೆಸರಿನಲ್ಲಿ ಬೇರೆಯವರ ಕೊಡುಗೆಗಳು. ಸ್ಪೂನರ್‌ನದೇ ಎಂದು ಅಧಿಕೃತವಾಗಿ ಗೊತ್ತಿರುವ ಸ್ಪೂನರಿಸಂಗಳು ಕೈಬೆರಳೆ ಣಿಕೆಯಷ್ಟು ಇರಬಹುದೇನೋ. ಸ್ಪೂನರ್‌ನ ಶಿಷ್ಯನಾಗಿದ್ದ ರಾಬರ್ಟ್ ಸೆಟನ್ ಎಂಬಾತನ ಪ್ರಕಾರವಂತೂ ಸ್ಪೂನರ್ ಬಾಯಿಯಿಂದ ಬಂದ
ಸ್ಪೂನರಿಸಂ ಒಂದೇ ಒಂದು: Conquering Kings their Titles Take ಎಂಬ ವಾಕ್ಯವನ್ನು ಧರ್ಮಗ್ರಂಥವೊಂದರಿಂದ ಓದಬೇಕಾದರೆ ಸ್ಪೂನರ್ ಹೇಳಿದ್ದು Kinkering Kongs their Titles Take ಎಂದು.
ಅಂದರೆ, ‘ಕೊನ್‌ಕ್ವೇರಿಂಗ್ ಕಿಂಗ್ಸ್’ ಪದಗಳ ಆರಂಭಿಕ ಉಚ್ಚಾರಗಳನ್ನು ಅದಲುಬದಲು ಮಾಡಿ ‘ಕಿಂಕರಿಂಗ್ ಕೊಂಗ್ಸ್’ ಎಂದದ್ದು. ಅದನ್ನೂ ಸ್ಪೂನರ್
ಉದ್ದೇಶಪೂರ್ವಕವಾಗಿ ಹಾಗೆ ಹೇಳಿದ್ದಲ್ಲ. ಬಾಯಿತಪ್ಪಿನಿಂದ ಆದದ್ದು. ವ್ಯಕ್ತಿಗತವಾಗಿ ಸ್ಪೂನರ್ ಸ್ವಲ್ಪ ವಿಚಿತ್ರ ಅಥವಾ ವಿಕ್ಷಿಪ್ತ ಗುಣಸ್ವಭಾವದ, ನಿರುಪದ್ರವಿ ಸರಳ ವ್ಯಕ್ತಿಯಾಗಿದ್ದನಂತೆ. ಹಾಗೆಯೇ ನೋಡಲಿಕ್ಕೂ ಸ್ವಲ್ಪ ವಿಚಿತ್ರ. ಆಲ್ಬಿನಿಸಂ ಕಾಯಿಲೆಯಿಂದಾಗಿ ಬಿಳಿಚಿಕೊಂಡ ಚರ್ಮ, ಗೂನು ಬೆನ್ನು, ಸಣಕಲು ಶರೀರ, ಮಂದ ದೃಷ್ಟಿ. ವಿದ್ಯಾರ್ಥಿಗಳಿಗೆ ಆತನ ಮೇಲೆ ಪ್ರೀತಿಗೌರವಗಳಿದ್ದವು. ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರಿಗೆ ಅವರ ಹೆಸರಿನ ಇನಿಷಿಯಲ್‌ಗಳದೋ ಅಥವಾ ಬೇರೇನಾದರೂ ನಿಕ್‌ನೇಮ್ ಇರುವಂತೆ ಸ್ಪೂನರ್‌ನನ್ನು ವಿದ್ಯಾರ್ಥಿಗಳು ‘ಸ್ಪೂ’ ಎಂದು ಸಂಬೋಧಿಸುತ್ತಿದ್ದರಂತೆ.
ಒಬ್ಬ ಲೆಕ್ಚರರ್ ಆಗಿ, ವಾಗ್ಮಿಯಾಗಿ, ಕಾಲೇಜಿನ ಆಡಳಿತಗಾರನಾಗಿ ಸ್ಪೂನರ್ ಸಾಕಷ್ಟು ಒಳ್ಳೆಯ ಹೆಸರನ್ನೇ ಗಳಿಸಿದ್ದನು. ಆದರೆ ಲೋಕಖ್ಯಾತಿ ಬಂದದ್ದು ಪದಚಮತ್ಕಾರ ಶಕ್ತಿಯಿಂದ. ಅದೂ ಬಹುಮಟ್ಟಿಗೆ ವಿದ್ಯಾರ್ಥಿಗಳೇ ರಚಿಸಿ ಅವನ ಹೆಸರಿಗೆ ತಗುಲಿಹಾಕಿದ್ದರಿಂದ. ಹಾಗೆ ಪ್ರಸಿದ್ಧವಾದ ಇಂಗ್ಲಿಷ್
ಸ್ಪೂನರಿಸಂಗಳದೊಂದು ಸ್ಯಾಂಪಲ್ ಇಲ್ಲಿದೆ ನೋಡಿ. ಬೇಕಂತಲೇ ಇವುಗಳನ್ನು ಕನ್ನಡ ಲಿಪಿಯಲ್ಲಿ ಕೊಡುತ್ತಿದ್ದೇನೆ, ಸ್ಪೂನರಿಸಂ ಆಗುವುದು
ಅಕ್ಷರಪಲ್ಲಟದಿಂದಲ್ಲ ಉಚ್ಚಾರಪಲ್ಲಟದಿಂದ ಎಂದು ಗೊತ್ತಾಗುವುದಕ್ಕೆ. ಸೂಕ್ಷ್ಮವಾಗಿ ಗಮನಿಸಿ.
ಮೂಲ ರೂಪಗಳು ಆವರಣದಲ್ಲಿವೆ. ‘ತ್ರೀ ಚೀಯರ್ಸ್ ಫಾರ್ ಅವರ್ ಕ್ವೀರ್ ಓಲ್ಡ್ ಡೀನ್’ (ತ್ರೀ ಚೀಯರ್ಸ್ ಫಾರ್ ಅವರ್ ಡಿಯರ್ ಓಲ್ಡ್ ಕ್ವೀನ್); ‘ಈಸ್ ಇಟ್ ಕಿಸ್ಟಮರಿ ಟು ಕಸ್ ದ ಬ್ರೈಡ್?’ (ಈಸ್ ಇಟ್ ಕಸ್ಟಮರಿ ಟು ಕಿಸ್ ದ ಬ್ರೈಡ್); ‘ದ ಲಾರ್ಡ್ ಈಸ್ ಎ ಶವಿಂಗ್ ಲೆಪರ್ಡ್’ (ದ ಲಾರ್ಡ್ ಈಸ್ ಎ
ಲವಿಂಗ್ ಶೆಫರ್ಡ್); ‘ಈಸ್ ದ ಬೀನ್ ಡಿಜಿ?’ (ಈಸ್ ದ ಡೀನ್ ಬಿಜಿ?); ‘ಎ ನೋಸಿ ಲಿಟ್ಲ್ ಕುಕ್’ (ಎ ಕೋಸಿ ಲಿಟ್ಲ್ ನುಕ್); ‘ಸಮ್‌ವನ್ ಈಸ್ ಆಕ್ಯುಪ್ಯೂ ಯಿಂಗ್ ಮೈ ಪೈ, ಪ್ಲೀಸ್ ಸ್ಯೂ ಮೀ ಟು ಎನದರ್ ಶೀಟ್’ (ಸಮ್‌ವನ್ ಈಸ್ ಆಕ್ಯುಪೈಯಿಂಗ್ ಮೈ ಪ್ಯೂ, ಶೋ ಮೀ ಟು ಎನದರ್ ಸೀಟ್). ಇದಕ್ಕಿಂತಲೂ ಭಲೇ ತಮಾಷೆಯದು ಇದು: ‘ಯು ಹ್ಯಾವ್ ಹಿಸ್ಸ್‌ಡ್ ಆಲ್ ಮೈ ಮಿಸ್ಟರಿ ಲೆಕ್ಚರ್ಸ್. ಯು ಹ್ಯಾವ್ ಟೇಸ್ಟೆಡ್ ಎ ಹೋಲ್ ವರ್ಮ್.
ಪ್ಲೀಸ್ ಲೀವ್ ಆಕ್ಸ್‌ಫರ್ಡ್ ಒನ್ ದ ನೆಕ್ಸ್ಟ್ ಟೌನ್ ಡ್ರೈನ್’ (‘ಯು ಹ್ಯಾವ್ ಮಿಸ್ಸ್‌ಡ್ ಆಲ್ ಮೈ ಹಿಸ್ಟರಿ ಲೆಕ್ಚರ್ಸ್. ಯು ಹ್ಯಾವ್ ವೇಸ್ಟೆಡ್ ಎ ಹೋಲ್ ಟರ್ಮ್. ಪ್ಲೀಸ್ ಲೀವ್ ಆಕ್ಸ್‌ಫರ್ಡ್ ಒನ್ ದ ನೆಕ್ಸ್ಟ್ ಡೌನ್ ಟ್ರೈನ್’) ಪ್ರೊಫೆಸರನೊಬ್ಬ ವಿದ್ಯಾರ್ಥಿಯನ್ನು ಬೈದ ರೀತಿ! 1901ರಿಂದ 1909ರ ಅವಧಿಯಲ್ಲಿ ಅಮೆರಿಕದ ಅಧ್ಯಕ್ಷನಾಗಿದ್ದ ಥಿಯೊಡರ್ ರೂಸ್‌ವೆಲ್ಟ್ ಒಮ್ಮೆ ಬ್ರಿಟನ್‌ಗೆ ಭೇಟಿಯಿತ್ತಾಗ ಸ್ಪೂನರ್ ಸೇರಿದಂತೆ ಆಕ್ಸ್‌ಫರ್ಡ್ ಕಾಲೇಜುಗಳ ಮುಖ್ಯಸ್ಥರು ನಾಲ್ಕು ಜನರು ರೂಸ್‌ವೆಲ್ಟ್‌ನ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದರಂತೆ. ಅದರ ಬಗೆಗಿನ ವರದಿಯಲ್ಲಿ ಅಮೆರಿಕದ ಪತ್ರಿಕೆಯೊಂದು ಕೆಲವು ಸ್ಪೂನರಿಸಂಗಳನ್ನು ಸ್ಪೂನರ್‌ನೇ ಹೇಳಿದನೇನೋ ಎಂಬಂತೆ ಪ್ರಕಟಿಸಿತ್ತು.
ಗುಲಾಬಿ ಬಣ್ಣದ ಜೆಲ್ಲಿಯಿಂದ ಮಾಡಿದ ಸಿಹಿಪದಾರ್ಥವನ್ನು ರೂಸ್‌ವೆಲ್ಟ್‌ಗೆ ಬಡಿಸುತ್ತ ‘ಹ್ಯಾವ್ ಸಮ್ ಆಫ್ ದಿಸ್ ಸ್ಟಿಂಕ್ ಪಫ್’ (ಹ್ಯಾವ್ ಸಮ್ ಆಫ್ ದಿಸ್ ಪಿಂಕ್ ಸ್ಟಫ್) ಎಂದಿದ್ದನಂತೆ ಸ್ಪೂನರ್. ಆಮೇಲೆ ಚರ್ಚ್‌ನಲ್ಲಿ ‘ಫ್ರಂ ಗ್ರೀನ್‌ಲ್ಯಾಂಡ್ಸ್ ಐಸಿ ಮೌಂಟೇನ್ಸ್’ ಎಂದು ಶುರುವಾಗುವ ಪವಿತ್ರವಾಕ್ಯ ವನ್ನು ‘ಫ್ರಂ ಐಸ್‌ಲ್ಯಾಂಡ್ಸ್ ಗ್ರೀಸಿ ಮೌಂಟೇನ್ಸ್’ ಎಂದು ಓದಿದ್ದನಂತೆ. ಸೈತಾನನ ಮಾತುಗಳನ್ನು ‘ಆಸ್ ಸ್ಪಿಯರ್ಸ್ ಏಂಡ್ ಆರೋಸ್’ ಎನ್ನುವ ಬದಲು ‘ಆಸ್ ಇಯರ್ಸ್ ಏಂಡ್ ಸ್ಪಾರೋಸ್’ ಎಂದಿದ್ದನಂತೆ.
ನಿಜವಾಗಿಯೂ ಸ್ಪೂನರ್ ಹಾಗೆ ಹೇಳಿದನೋ ಅಥವಾ ತಮಾಷೆಗಾಗಿ ಪತ್ರಿಕೆಯೇ ಆ ಸ್ಪೂನರಿಸಂಗಳನ್ನು ಸೃಷ್ಟಿಸಿತೋ ಗೊತ್ತಿಲ್ಲ. ಸ್ಪೂನರ್‌ನ ನಿಧನಾನಂತರವೂ ಸ್ಪೂನರಿಸಂಗಳ ಬೆಳೆ ಹುಲುಸಾಗಿ ಬೆಳೆದಿದೆ, ಬೆಳೆಯುತ್ತಲೇ ಇದೆ. ಅದರಲ್ಲೂ ಅಮೆರಿಕದಲ್ಲಿ ಹೆಚ್ಚು. ರಾಜಧಾನಿ ವಾಷಿಂಗ್ಟನ್ ಡಿಸಿ.ಯಲ್ಲಿರುವ ಕ್ಯಾಪಿಟೊಲ್ ಸ್ಟೆಪ್ಸ್ ಎಂಬ ಕಾಮಿಡಿ ತಂಡವೊಂದು ತಮ್ಮ ಪ್ರತಿ ಪ್ರದರ್ಶನದಲ್ಲೂ ಕೊನೆಗೆ ‘ಲರ್ಟಿ ಡೈಸ್’ (ಡರ್ಟಿ ಲೈಸ್) ಎಂಬ
ಪ್ರಸ್ತುತಿಯನ್ನಿಟ್ಟುಕೊಳ್ಳುತ್ತದೆ. ಹತ್ತು-ಹದಿನೈದು ನಿಮಿಷ ರಾಪಿಡ್‌ಫೈರ್‌ನಂತೆ ಸಮಕಾಲೀನ ರಾಜಕೀಯ/ ಸಾಮಾಜಿಕ ವಿಷಯಗಳ ಬಗೆಗಿನ ಸ್ಪೂನರಿಸಂಗಳು. ಅದರಲ್ಲಿ ಪ್ರೆಸಿಡೆಂಟ್ ರೇಗನ್ ‘ರೆಸಿಡೆಂಟ್ ಪೇಗನ್’ ಆಗುತ್ತಾನೆ.
ಇತರ ರಾಜಕಾರಣಿಗಳು ‘ಪಿಕಿಂಗ್ ದೆಯರ್ ಲೀಡರ್ಸ್’ ಬದಲಿಗೆ ‘ಲಿಕಿಂಗ್ ದೆಯರ್ ಪೀಡರ್ಸ್’ ಆಗುತ್ತಾರೆ. ರಷ್ಯದ ಅಧ್ಯಕ್ಷನ ಬಗೆಗಿನ ಬೇಹುಗಾರಿಕೆ ‘ಸ್ನೂಪಿಂಗ್ ಆನ್ ಪೂಟಿನ್’ ಇದ್ದದ್ದು ‘ಪೂಪಿಂಗ್ ಆನ್ ಸ್ನೂಟಿನ್’ ಆಗುತ್ತದೆ. ಚುನಾವಣಾಪ್ರಚಾರದ ವೇಳೆ ಬಗ್ಗಿಂಗ್ ಎವೆರಿಬಡಿಸ್ ಫೋನ್ಸ್ ಇದ್ದದ್ದು ಫಗ್ಗಿಂಗ್ ಎವೆರಿಬಡಿಸ್ ಬೋನ್ಸ್ ಆಗುತ್ತದೆ. ಇನ್ನೊಬ್ಬ ಕಾಮೆಡಿಯನ್ ಚೇಸ್ ಟೇಲರ್ ಎಂಬಾತ 1945ರಲ್ಲಿ ‘ಮೈ ಟೇಲ್ ಈಸ್ ಟ್ವಿಸ್ಟೆಡ್’ ಎಂಬ ಪುಸ್ತಕ ದಲ್ಲಿ ಜನಪ್ರಿಯ ಮಕ್ಕಳಕಥೆಗಳನ್ನು ಸ್ಪೂನರಿಸಂ ಆವೃತ್ತಿಯಲ್ಲಿ ಪ್ರಕಟಿಸಿದ್ದಾನೆ.
ಅದರಲ್ಲಿ ‘ವಾರ್ಟ್ ಪನ್: ಏಸೋಪ್ಸ್ ಫೀಬಲ್ಸ್’ (ಪಾರ್ಟ್ ವನ್: ಈಸೋಪ್ಸ್ ಫೇಬಲ್ಸ್), ‘ಟಾರ್ಟ್ ಪೂ: ಟೇರಿ ಏಂಡ್ ಅದರ್ ಫೇಲ್ಸ್’ (ಪಾರ್ಟ್ ಟೂ: ಫೇರಿ ಏಂಡ್ ಅದರ್ ಟೇಲ್ಸ್) ಎಂಬ ಎರಡು ವಿಭಾಗಗಳು. ಬೀಪಿಂಗ್ ಸ್ಲ್ಯೂಟಿ (ಸ್ಲೀಪಿಂಗ್ ಬ್ಯೂಟಿ) ಮುಂತಾದ ಕಥೆಗಳು. ಜಾರ್ಜ್ ಡಬ್ಲ್ಯು ಬುಷ್
ರಾಷ್ಟ್ರಾಧ್ಯಕ್ಷನಾಗಿದ್ದ ಅವಧಿಯಲ್ಲಿ ಆತನನ್ನು ದ್ವೇಷಿಸುತ್ತಿದ್ದವರು ‘ಬಕ್ ಫುಷ್’ ಎಂಬ ಸ್ಪೂನರಿಸಂ ಬರೆದ ಕಾರ್ ಬಂಪರ್ ಸ್ಟಿಕ್ಕರ್ ಅಂಟಿಸಿ ಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಬರುವ ‘ಸ್ಟೈಲ್ ಇನ್ವಿಟೇಷನಲ್’ ತಮಾಷೆ ಅಂಕಣದಲ್ಲಂತೂ ಆಗಾಗ ಓದುಗರಿಂದ ಸ್ಪೂನರಿಸಂಗಳನ್ನು ಆಹ್ವಾನಿಸಿ ಪ್ರಕಟಿಸುತ್ತಾರೆ.
ಇಂಗ್ಲಿಷ್‌ನಲ್ಲಿ ಇಷ್ಟು ಪ್ರಸಿದ್ಧವಾಗಿರುವ ಸ್ಪೂನರಿಸಂಅನ್ನು ನಮ್ಮ ಕಸ್ತೂರಿಕನ್ನಡ ಭಾಷೆಯಲ್ಲೂ ಏಕೆ ಪ್ರಯೋಗಿಸಬಾರದು ಎಂದು ನನ್ನ ಆಲೋಚನೆ. ಕನ್ನಡದ ಮೊತ್ತಮೊದಲ ಗ್ರಂಥವಾದ ಕವಿರಾಜಮಾರ್ಗದಿಂದ ಹಿಡಿದು ಯಾವುದೇ ಗ್ರಂಥದಲ್ಲಾಗಲೀ ಹಲ್ಮಿಡಿ ಶಾಸನದಲ್ಲಾಗಲೀ ಯಾವ
ಸ್ಪೂನರಿಸಂನ ಉಲ್ಲೇಖವೂ ಇದ್ದಂತಿಲ್ಲ. ಅಷ್ಟೇ ಅಲ್ಲದೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಸ್ಪೂನರ್ ಎಂಬ ವ್ಯಕ್ತಿಯೇ ಇಲ್ಲ. ಹಾಗಾಗಿ ಮೊದಲು ಸ್ಪೂನರಿಸಂಗೆ ಒಂದು ಕನ್ನಡ ಪದ ಹುಡುಕಬೇಕು. ಸ್ಪೂನರಿಸಂನಲ್ಲಿ ಸ್ಪೂನ್ ಇಲ್ಲವೆಂದು ಗೊತ್ತಿದ್ದರೂ ಕನ್ನಡದಲ್ಲಿ ಬೇಕಿದ್ದರೆ ನಾವು ಚಮಚವನ್ನೇ ಬಳಸಿ, ಇದೊಂಥರದ ಅಕ್ಷರ ಚಮತ್ಕಾರ ಆದ್ದರಿಂದ ‘ಚಮಚತ್ಕಾರ’ ಎಂಬ ಪದವನ್ನು ಉಪಯೋಗಿಸೋಣ.
ಕನ್ನಡದಲ್ಲೂ ಈ ಒಂದು ಹಾಸ್ಯಪ್ರಕಾರ ಬೆಳೆಯುವುದಕ್ಕೆ ಪ್ರಯತ್ನಿಸೋಣ. ಐರಾವತಿ ಭದ್ರನ್ ಕಾರ್ಖಾನೆಯಲ್ಲಿ (ಅದೇ, ಭದ್ರಾವತಿ ಐರನ್ ಕಾರ್ಖಾನೆ ಯಲ್ಲಿ) ಉತ್ಪಾದಿಸಿದ ಉಕ್ಕಿನಿಂದ ಗಟ್ಟಿಗೊಳಿಸೋಣ. ಇಂದಿನ ತಲೆಬರಹದಲ್ಲಿ ‘ಕಾಯಿ ಹೋಳಿಗೆ – ಹಾಯಿ ಕೋಳಿಗೆ’ ಚಮಚತ್ಕಾರವನ್ನು ಆಗಲೇ ನೋಡಿದ್ದೀರಿ. ನನ್ನ ತಲೆಗೆ ಹೊಳೆದಂಥವು ಇನ್ನೊಂದಿಷ್ಟು ಇಲ್ಲಿವೆ ನೋಡಿ. ಬರೀ ಪದ/ವಾಕ್ಯ ಜೋಡಿಗಳಷ್ಟೇ ಅಲ್ಲ, ಅಷ್ಟಿಷ್ಟು ಮಸಾಲೆ ಬೆರೆಸಿದ ವಿವರಣೆಯೂ ಇದೆ.
ಕರಿದ ಹಪ್ಪಳ ಮುರಿಯುವಾಗ, ಮುರಿದು ತಿನ್ನುವಾಗ ಶಬ್ದವಾಗುತ್ತದಲ್ಲ, ಎಷ್ಟೆಂದರೂ ಅದು ‘ಸದ್ದು ಮಾಡುವ ಹಪ್ಪಳ’. ಅದೇ ರೀತಿ ಹದ್ದು ರೆಕ್ಕೆ ಬಡಿಯುವಾಗಲೂ ಶಬ್ದವಾಗುತ್ತದೆ, ಅದು ‘ಹದ್ದು ಮಾಡುವ ಸಪ್ಪಳ’! ಅಮೆರಿಕವು ತೈಲದಾಹದಿಂದ ಕೊಲ್ಲಿ ರಾಷ್ಟ್ರಗಳಮೇಲೆ ಯುದ್ಧ ಹೂಡು ತ್ತಿರುತ್ತದೆಯಷ್ಟೆ? ಹಾಗೆ ಮುಗಿಬೀಳುವ ಸೈನಿಕರು ಮತ್ತು ಯುದ್ಧದ ಸೆರೆಯಾಳುಗಳು ಅನುಕ್ರಮವಾಗಿ ‘ಇಂಧನಕ್ಕಾಗಿ ಬಿದ್ದವರು’ ಮತ್ತು ‘ಬಂಧನಕ್ಕಾಗಿ ಇದ್ದವರು’. ಕೇಂದ್ರ/ರಾಜ್ಯ ಆಯವ್ಯಯ ಮಂಡನೆಯಲ್ಲಿ ತೆರಿಗೆ ಹೆಚ್ಚಿಸಿದಾಗೆಲ್ಲ, ಕರಭಾರದಿಂದ ಮಧ್ಯಮವರ್ಗದ ಜನರ ಜೀವ ಹಿಂಡಿದಾಗೆಲ್ಲ ಏನೆನ್ನಬೇಕು? ಹರ ಕೊಲ್ಲಲ್ ಪರ ಕಾಯ್ವನೇ? ಕರ ಕೊಲ್ಲಲ್ ಪರ ಹಾಯ್ವನೇ? ಇನ್ನೊಂದು, ಭಾಗವತ ಕಥೆಯಲ್ಲಿ ಬರುವ ದೃಶ್ಯವನ್ನು ಊಹಿಸಿ: ನಂದಗೋಕುಲದಲ್ಲಿ ಯಶೋದೆ ಮೊಸರು ಕಡೆಯುತ್ತಿದ್ದಾಳೆ.
ಗಡಿಗೆಯಿಂದ ಸ್ವಲ್ಪ ಬೆಣ್ಣೆ ಹೊರಚೆಲ್ಲಿ ನೆಲಕ್ಕೆ ಹರಡಿದೆ. ಅಲ್ಲೇ ಓಡಾಡುತ್ತಿದ್ದ ಮುದ್ದು ಕೃಷ್ಣ ಕಾಲು ಜಾರಿ ಬಿದ್ದಿದ್ದಾನೆ. ಇದು ‘ಕಡೆಯುವವಳಿಗೆ ಆದ ನಷ್ಟ; ನಡೆಯುವವನಿಗೆ ಆದ ಕಷ್ಟ’! ಬಯಲುಸೀಮೆಯಲ್ಲಿ, ಪರ್ಟಿಕ್ಯುಲರ್ಲಿ ಹಾವೇರಿಯಲ್ಲಿ, ಅಪರೂಪಕ್ಕೆ ಒಂದಿಷ್ಟು ಜಾಗದಲ್ಲಿ ಕಾಡು ಬೆಳೆದಿದೆ ಯೆಂದುಕೊಳ್ಳಿ. ಅದು ‘ಹಾವೇರಿ ಸಮೀಪದ ಕಾಡು’ ಆಗುತ್ತದೆ. ಶರಪಂಜರ ಚಿತ್ರದ ‘ಕಾವೇರಿ ಕೊಡಗಿನ ಕಾವೇರಿ ನೀ ಬೆಡಗಿನ ವೈಯಾರಿ…’ ಅಥವಾ ಜೀವನದಿ ಚಿತ್ರದ ‘ಕನ್ನಡ ನಾಡಿನ ಜೀವನದಿ ಕಾವೇರಿ…’ – ಇವು ‘ಕಾವೇರಿ ಸಮೀಪದ ಹಾಡು’ ಆಗುತ್ತವೆ! ಕೊಡಗಿನ ಕಾವೇರಿ ಎಂದಮೇಲೆ ಮಡಿಕೇರಿ ಯೂ ನೆನಪಾಗಲೇಬೇಕು.
‘ಮಡಿಕೇರಿಯಲ್ಲಿ ಈ ವರ್ಷ ಚಳಿ ಕಡಿಮೇ ರಿ!’ ಎಂದು ಹೇಳಿದರೆ ಅದೇ ಒಂದು ಚಮಚತ್ಕಾರ ಆಗುತ್ತದೆ. ಚಳಿಯಿಂದ ಕಡುಬೇಸಗೆಯತ್ತ ನಡೆದರೆ ‘ವೈಶಾಖ ಮಾಸ’ದ ಬಿಸಿಲ ಧಗೆಗೆ ಜೀವಿಗಳೆಲ್ಲದಕ್ಕೂ ‘ಮೈ ಶಾಖ ವಾಸ’ ಅನಿವಾರ್ಯ. ಇತ್ತ ಬೆಂಗಳೂರಿನಲ್ಲಿ ಯಥಾಪ್ರಕಾರ ಮೋಡ ಕವಿದ ವಾತಾ ವರಣ. ಭಾಷೆಯ ವಿಷಯಕ್ಕೆ ಬಂದರೆ ಕನ್ನಡಕ್ಕೆ ಎಡೆಯಿಲ್ಲದ ಬೆಂಗಳೂರಿನಲ್ಲಿ ‘ಎನ್ನಡ?’ಕ್ಕೆ ಕಡೆಯಿಲ್ಲ. ಮುಸ್ಸಂಜೆ ಹೊತ್ತಲ್ಲಿ ಮನಸ್ಸು ಗಾಂಽ ಬಜಾರ್‌ನತ್ತ ಹೊರಳಿದರೆ ನೆಟ್ಟ ಕಲ್ಲಪ್ಪ ಸರ್ಕಲ್ ಕೆಟ್ಟ ನಲ್ಲಪ್ಪ ಸರ್ಕಲ್ ಆಗಿದೆಯೇನೋ ಎನ್ನುವಷ್ಟು ಟ್ರಾಫಿಕ್ ಗಿಜಿಗಿಜಿ. ಹಳ್ಳಿಗಳಲ್ಲಿ ಬೇಲಿಯ ಮೇಲೆ ಸರಿಯುವ ಹಾವು ಪೊರೆ ಕಳಚುತ್ತದೆ. ಹಾವಿನ ಪೊರೆ ಬೇಲಿಗೆ ಪಾವಿನಷ್ಟು ಹೆಚ್ಚಿನ ಹೊರೆ ಆಗುತ್ತದೆ.
ಯಾವುದೋ ನೈಸರ್ಗಿಕ ವಿಕೋಪದಲ್ಲಿ ಮನೆಮಠ ಕಳೆದುಕೊಂಡು ‘ಬಾನು ತಲೆಯ ಮೇಲಿದೆಯೆಂದು ಹೇಳಿದವಳು’ ಆತ್ಮಹತ್ಯೆ ಮಾಡಿ ಕೊಳ್ಳುತ್ತೇ ನೆಂದು ಹೊರಟು ಮನಸ್ಸು ಬದಲಾಯಿಸುತ್ತಾಳೆ. ತಲೆಯಲ್ಲಿರುವ ಹೇನು ಸಾಯಬಾರದೆಂದು ಆತ್ಮಹತ್ಯೆಯ ಐಡಿಯಾ ಕ್ಯಾನ್ಸಲ್ ಮಾಡುತ್ತಾಳೆ. ಅವಳೀಗ ‘ಹೇನು ತಲೆಯ ಮೇಲಿದೆಯೆಂದು ಬಾಳಿದವಳು’ ಆಗುತ್ತಾಳೆ! ಸ್ಕೂಲ್‌ಗೆ ಹೋಗಲು ತಡವಾಗುತ್ತದೆಂದು ತಾಯಿ, ಬಟ್ಟೆ ಹಾಕು ಎಂದು ಹೇಳಿದರೆ ಹಸಿದ ಮಗುವಿನ ಬಾಯಿ ತಟ್ಟೆ ಹಾಕು ಎನ್ನುತ್ತದೆ.
ಕಾರಿನಲ್ಲಿ ಡ್ರಾಪ್ ಕೊಡುತ್ತೇನೆಂದು ಮಗುವಿನ ತಂದೆ ಬಾ ಎಂದು ಕರೆದರೆ ಮಗು ‘ಬಂದೆ, ತಾ!’ ಎಂದು ತನ್ನ ಸಾಕ್ಸೂ ಶೂಸೂ ತರುವಂತೆ ತಂದೆಗೇ ಆಜ್ಞಾಪಿಸುತ್ತದೆ! ಅಲ್ಲಿಗೆ ಮುಗಿಯಿತು. ಹರಟೆಯ ಸೋಗಿನಲ್ಲಿ ಸ್ಪೂನರಿಸಂ ಚಮಚತ್ಕಾರ ಅಂತೆಲ್ಲ ಪರಿಮಳವಿಲ್ಲದ ಯಾವುದೋ ಕಾಡು ವೊಂದನ್ನು ಮೆರೆಸುತ್ತ ತೋರಣ ಕಟ್ಟಿದ್ದಕ್ಕಾಗಿ ನನ್ನ ಮೇಲೆಮುನಿಸಿಕೊಂಡು… ಮಲ್ಲಿಗೆ ಉಗಿಯಿತು.