ಕ್ಲಬ್ ಹೌಸ್ ಸಂವಾದ – 209
ಉಪನಿಷತ್ತುಗಳಲ್ಲಿ ಜೀವನಮೌಲ್ಯ ವಿಚಾರದ ಕುರಿತು ಬೆಳಕು ಚೆಲ್ಲಿದ ಸಿದ್ದಾಪುರ ಕ್ಷೇತ್ರದ ಬ್ರಹ್ಮಾನಂದ ಸ್ವಾಮೀಜಿ
ಬೆಂಗಳೂರು: ಉಪನಿಷತ್ತುಗಳ ಪ್ರಧಾನ ವಿಚಾರ ಆಧ್ಯಾತ್ಮ. ತನ್ನ ಸ್ವರೂಪವನ್ನು ಅರಿತುಕೊಂಡು ತನಗೆ ಕಾಣುವಂತಹ ವಿಶ್ವವೆಲ್ಲವೂ ಕೂಡ ಆ
ಸ್ವರೂಪದ ವಿಶ್ವವೇ ಆಗಿದೆ ಎಂಬುದು ಉಪನಿಷತ್ತಿನ ಅಂತಿಮ ಸಂದೇಶವಾಗಿದೆ. ಈ ಲೋಕದಲ್ಲಿ ಭಗವಂತನಲ್ಲದೆ ಬೇರೇನೂ ಇಲ್ಲ ‘ಈಶಾಮಾಸ್ಯ ವಿದಂ ಸರ್ವಂ’ ಎಂದು ಉಪನಿಷತ್ತಿನಲ್ಲಿ ಏಕ ಕಂಠದಿಂದ ಘೋಷಿಸಲಾಗಿದೆ. ಉಪನಿಷತ್ತುಗಳಲ್ಲಿ ಜೀವನ ಮೌಲ್ಯ ಎಂಬ ವಿಚಾರದ ಕುರಿತು ಕ್ಲಬ್ ಹೌಸ್ನಲ್ಲಿ ಸಿದ್ಧಾಪುರ ಚೈತನ್ಯ ರಾಜಾರಾಮ ಕ್ಷೇತ್ರದ ಸ್ವಾಮಿ ಬ್ರಹ್ಮಾ ನಂದ ಬೆಳಕು ಚೆಲ್ಲಿದರು.
ಪ್ರತಿ ಒಂದು ವಸ್ತುವೂ ಭಗವಂತನ ಅಭಿವ್ಯಕ್ತಿಯೇ ಎಂಬುದು ಉಪನಿಷತ್ತಿನ ಸಂದೇಶ. ಭಗವದ್ಗೀತೆಯೂ ಅದನ್ನೇ ಸಾರುತ್ತದೆ. ವಿವಿಧ ಆಭರಣಗಳು ಸೇರಿ ಚಿನ್ನವಾಗಿದೆಯೋ ಅಥವ ಚಿನ್ನವೇ ಆಭರಣವಾಗಿದೆಯೋ.. ಗೊತ್ತಿಲ್ಲ. ಹಾಗೆಯೇ ಮೂಲವಸ್ತು ಯಾವುದೆಂದರೆ ಆತ್ಮ ಅದನ್ನು ಬ್ರಹ್ಮ ಎಂದು ಕರೆಯುತ್ತಾರೆ. ಅದೇ ಜೀವ ಜಗತ್ತಾಗಿ ತೋರುತ್ತಿದೆ ಎಂದು ಅರ್ಥ. ಇದನ್ನು ಅರ್ಥ ಮಾಡಿಕೊಂಡವರಿಗೆ ಭೇದ ಬುದ್ಧಿ ಹೋಗಿ ಸ್ವಾರ್ಥ ಭಾವ ಬರುತ್ತದೆ. ಸರ್ವಾತ್ಮ ಭಾವ ಎಂದರೆ ಭಗವಾಂತ ಹೇಳಿದಹಾಗೆ ಇರುವುದು ಒಂದೇ ವಸ್ತು ಅದೇ ನಾನು ಎಂದರ್ಥ ಎಂದರು.
ಮೋಕ್ಷ ಮನುಷ್ಯನ ಜೀವನದ ಪರಮೋಚ್ಚ ಗುರಿ ಎಂದು ಉಪನಿಷತ್ತು ತಿಳಿಸುತ್ತದೆ. ಬದುಕಿದ್ದಾಗಲೇ ಎಲ್ಲ ಬಂಧನಗಳಿಂದ ವಿಮುಕ್ತಿಗೊಂದು ನಿರ್ಮುಕ್ತನಾಗಿ, ನಿತ್ಯ ಮುಕ್ತನಾಗಿ, ಆತ್ಮದಲ್ಲಿ ನೆಲೆ ನಿಲ್ಲುವುದೇ ಮನುಷ್ಯ ಜನ್ಮದ ಗುರಿ, ಅದನ್ನು ಸಾಧಿಸುವುದಕ್ಕೆ ಉಪನಿಷತ್ತುಗಳು, ಜ್ಞಾನ ಮಾರ್ಗ ವನ್ನು ಹಾಗೂ ಸಾಕ್ಷಾತ್ಕಾರದ ಮಾರ್ಗವನ್ನು ತಿಳಿಸುತ್ತದೆ ಎಂದರು.
ಜೀವನ ಮೌಲ್ಯಗಳ ಬಗ್ಗೆಯೂ ಉಪನಿಷತ್ತಿನಲ್ಲಿ ತಿಳಿಸಲಾಗಿದೆ. ಅಧ್ಯಾತ್ಮವನ್ನು ಕಂಡುಕೊಳ್ಳಬೇಕಾದರೆ ಜೀವನ ಮೌಲ್ಯಗಳಿಲ್ಲದೆ ಸಾಧ್ಯವಿಲ್ಲ. ಯಾರ
ಚಾರಿತ್ರ್ಯ ಸರಿಯಿಲ್ಲವೋ, ಯಾರ ಬುದ್ಧಿ ಹಿಡಿತದಲ್ಲಿಲ್ಲವೋ, ಯಾರ ಮನಸ್ಸು ಪ್ರಶಾಂತವಾಗಿಲ್ಲವೋ ಅಂತಹವರು ಕೇವಲ ಬುದ್ಧಿ ಶಕ್ತಿಯಿಂದ, ಪ್ರವಚನದಿಂದ ಆಧ್ಯಾತ್ಮವನ್ನು ಕಾಣಲಿಕ್ಕೆ ಸಾಧ್ಯವಿಲ್ಲ ಎಂದು ತಿಳಿಸುತ್ತದೆ ಎಂದರು.
ಇದಕ್ಕೆ ಜೀವನ ಮೌಲ್ಯ ಪ್ರಮುಖ ಸಾಧನೆಯಾಗುತ್ತದೆ. ಜೀವನ ಮೌಲ್ಯಕ್ಕೆ ಆತ್ಮ ಗುಣಗಳು ಎಂದು ಕರೆಯಲಾಗಿದೆ. ಜೀವನ ಮೌಲ್ಯಗಳಿಲ್ಲದವನಿಗೆ ಸ್ವರೂಪದಲ್ಲಿ ನೆಲೆ ನಿಲ್ಲಲು ಸಾಧ್ಯವಾಗುವುದಿಲ್ಲ ಮತ್ತು ಆತ್ಮಜ್ಞಾನ ಪಡಿಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ಉಪನಿಷತ್ತುಗಳು ಜೀವನ ಮೌಲ್ಯಗಳಿಗೆ ಹೆಚ್ಚು ಮಹತ್ವ ನೀಡಿದೆ. ಯಾರ ಅಂತಃಕರಣದಲ್ಲಿ ಜೀವನ ಮೌಲ್ಯಗಳಿಲ್ಲವೋ, ಬರೀ ಬುದ್ಧಿವಂತಿಕೆಯಿಂದ ಜೀವನವೂ ಸಓಲವಾಗುವುದಿಲ್ಲ. ಬುದ್ಧಿ ಎಂಬುದು ಹರಿತವಾದ ಆಯುಧವಿದ್ದ ಹಾಗೆ ಅದರಿಂದ ಉಪಯೋಗ ಹಾಗೂ ಅಪಾಯ ಎರಡೂ ಸಾಧ್ಯ ಎಂದು ಹೇಳಿದರು.
ಜೀವನ ಮೌಲ್ಯಗಳು ಆತ್ಮಜ್ಞಾನ ಪಡೆಯುವ ಮಾರ್ಗವಾಗಿದೆ. ಯಾವ ಮೌಲ್ಯಗಳನ್ನು ಜೀವನ್ಮುಕ್ತ ಸಂತರು ಆಚರಿಸಿದ್ದಾರೋ, ಆ ಮೌಲ್ಯಗಳನ್ನು
ಮಾತ್ರ ನಾವು ಪಾಲಿಸಬೇಕು. ಜೀವನ್ಮುಕ್ತ ಸಂತರು ಸಹಜವಾಗಿ ಸರ್ವಾತ್ಮ ಭಾವದಲ್ಲಿ ನೆಲೆನಿಂತಾಗ ಅವರಿಂದ ಹೊರಹೊಮ್ಮಿದಂತಹ ಗುಣಗಳನ್ನು ನಾವು ಸಾಧಿಸಬೇಕು. ಜೀವನ್ಮುಕ್ತಿಯ ಸಾಧನೆಯಲ್ಲಿ ಜ್ಞಾನ ಎಂಬುದು ಓಷಧವಾದರೆ, ಜೀವನ ಮೌಲ್ಯಗಳು ಪಥ್ಯ. ಜೀವನ ಮೌಲ್ಯವನ್ನು ಅಭ್ಯಸ ಮಾಡುತ್ತ ನಾವು ಮೋಕ್ಷಸಾಧನೆ ಮಾಡಬೇಕು ಎಂದರು.
***
ವೇದಗಳ ಕೊನೆಯ ಭಾಗ ಹಾಗೂ ನಾಲ್ಕನೇ ಭಾಗ ಉಪನಿಷತ್ ಎಂದು ಕರೆಯಲಾಗುತ್ತದೆ. ವೇದಗಳ ಸಂಖ್ಯೆ ಎಷ್ಟು ಮತ್ತು ಅದರ ಕಾಲದ ಬಗ್ಗೆ ಭಿನ್ನಾಭಿ ಪ್ರಾಯಗಳಿವೆ. ಭಾರತೀಯ ದರ್ಶನ, ಸಿದ್ಧಾಂತಗಳಿಗೆ ಮೂಲವಾದಂತಹ ಒಂದು ತತ್ವರಂಗಗಳಾಗಿವೆ. ಉಪನಿಷತ್ ಈ ದೇಶದ ಜ್ಞಾನ ಭಂಡಾರ, ಭಾರತ ವಿಶ್ವಕ್ಕೆ ನೀಡಿದ ಅಪರೂಪ ಅಧ್ಯಾತ್ಮಿಕ ವಿದ್ಯೆ. ದೇಶ ವಿದೇಶದಲ್ಲಿರುವವರೆಲ್ಲರೂ ಕೂಡ ಅದರ ಸಾರಕ್ಕೆ ಮಾರುಹೋಗಿದ್ದಾರೆ.
-ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ ದಿನಪತ್ರಿಕೆ
ಉಪನಿಷತ್ ನಮ್ಮ ದೇಶದ ಅಂತಃ ಸತ್ವ. ತಮ್ಮ ಭಾವನೆ ದರ್ಶನಗಳ ಮೂಲಕ ಉಂಟಾದಂತಹ ದಿವ್ಯಾನುಭವಗಳ ಋಷಿ-ಮುನಿಗಳು ನಮಗೆ ಉಪನಿ ಷತ್ ರೂಪದಲ್ಲಿ ನೀಡಿದ್ದಾರೆ. ತ್ರಿಮತಾಚಾರ್ಯರು ಉಪನಿಷತ್ಗಳಿಗೆ ವ್ಯಾಖ್ಯಾನ ನೀಡಿದ್ದಾರೆ.
-ನಂಜನಗೂಡು ಮೋಹನ್ ಸಂಪಾದಕೀಯ ಸಲಹೆಗಾರ, ವಿಶ್ವವಾಣಿ ದಿನಪತ್ರಿಕೆ
***
ಜೀವನ ಮೌಲ್ಯವಿಲ್ಲದಿದ್ದರೆ ಜೀವನಕ್ಕೆ ಮಾರಕವಾಗುತ್ತದೆ ಹೊರತು ಕಾರಕವಾಗುವುದಿಲ್ಲ.
ಉಪನಿಷತ್ ಮಾತ್ರವಲ್ಲದೆ ಭಗವದ್ಗೀತೆಯಲ್ಲಿ ಕೂಡ ಜೀವನ ಮೌಲ್ಯದ ಬಗ್ಗೆ ತಿಳಿಸಲಾಗಿದೆ.
ಜೀವನ ಮೌಲ್ಯಗಳಿಗೆ ಶಾಸಗಳಲ್ಲಿ ಕರೆದಿರುವ ಹೆಸರು ಧರ್ಮ.