Thursday, 12th December 2024

ಗೌರವ ವನ್ಯ ಪರಿಪಾಲಕರ ಹುದ್ದೆ ನೇಮಕದಲ್ಲಿ ಅಕ್ರಮದ ವಾಸನೆ

ಮಾನದಂಡ ಉಲ್ಲಂಘಿಸಿ ವನ್ಯಜೀವಿ ಸಂರಕ್ಷಣೆ ಮಾಡಬೇಕಾದವರ ನೇಮಕ
ಹಲವು ಪ್ರಕರಣಗಳಲ್ಲಿ ಭಾಗಿಯಾದವರು, ರಾಜಕೀಯ ಹಿನ್ನೆಲೆ ಇರುವವರಿಗೆ ಆದ್ಯತೆ

ವಿಶೇಷ ವರದಿ: ಸುಷ್ಮಾ ಸಿ. ಚಿಕ್ಕಕಡಲೂರು ಬೆಂಗಳೂರು

ಸದಾ ಸುದ್ದಿಯಲ್ಲಿರುವ ಅರಣ್ಯ ಇಲಾಖೆ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗೌರವ ವನ್ಯ ಪರಿಪಾಲಕರ ಹುದ್ದೆಗಳ ನೇಮಕದಲ್ಲಿ ಅಕ್ರಮದ ದೂರುಗಳು ಕೇಳಿಬರಲಾರಂಭಿಸಿವೆ.

ಗೌರವ ವನ್ಯ ಪರಿಪಾಲಕರ ಹುದ್ದೆಗಳ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅದರಲ್ಲಿ ಆರೋಪ ಹೊತ್ತಿರುವ ಹಾಗೂ ಧನದಾಹಿ ಗಳಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹುದ್ದೆಗೆ ಇರುವ ಮಾನದಂಡಗಳನ್ನು ಉಲ್ಲಂಘಿಸಿ ನೇಮಕ ನಡೆಸಿರುವುದಾಗಿ ತಿಳಿದುಬಂದಿದೆ.

ಇತ್ತೀಚೆಗೆ ಅರಣ್ಯಾಧಿಕಾರಿಗಳ ತಂಡವು ನಡೆಸಿದ ಸಭೆಯಲ್ಲಿ ಎಲ್ಲ ಜಿಲ್ಲೆಗಳಿಗೂ ಗೌರವ ವನ್ಯ ಪರಿಪಾಲಕರ ಹುದ್ದೆಗೆ ನೇಮಕ ಮಾಡಿದ್ದು, ಅದರಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಎಫ್ಐಆರ್ ದಾಖಲಾಗಿರುವವನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಕೆಲ ಧನದಾಹಿಗಳ ಹೆಸರು ಕೂಡ ಪಟ್ಟಿಯಲ್ಲಿದೆ. ಇಂಥವರನ್ನು ನೇಮಿಸಿದರೆ ಅರಣ್ಯ ಹಾಗೂ ವ್ಯಜೀವಿಗಳ ಸಂರಕ್ಷಣೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ವನ್ಯಜೀವಿ ಪ್ರೇಮಿಗಳು ಮತ್ತು ಪರಿಸರ ಸಂರಕ್ಷಕರು ಕೇಳುತ್ತಿದ್ದಾರೆ.

ಪ್ರತಿ ಎರಡು ವರ್ಷಗಳಿಗೊಮ್ಮೆ ಎಲ್ಲಾ ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರನ್ನು ಸರಕಾರ ನೇಮಿಸುತ್ತಾ ಬಂದಿದೆ. ಅದರಂತೆ ಈ ಬಾರಿ ತರಾತುರಿಯಲ್ಲಿ ೩೦ ಜಿಲ್ಲೆಗಳಿಗೆ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಬಹುತೇಕರು ರಾಜಕೀಯ ಹಿನ್ನಲೆ ಇರುವವರು ಎಂದು ಹೇಳಲಾಗುತ್ತಿದೆ. ಆದರೆ, ಇವರ ಪೂರ್ವಾಪರ ತಿಳಿದುಕೊಳ್ಳದೆ ನೇಮಕ ಮಾಡಿ ಅರಣ್ಯ ಇಲಾಖೆ ಕೈತೊಳೆದುಕೊಂಡಿದೆ.

ಯಾವುದೇ ತಜ್ಞರ ಸಮಿತಿ ನೇಮಕ ಮಾಡದೆ, ಯಾವುದೇ ಪ್ರಕಟಣೆ ಹೊರಡಿಸದೆ ಇಂತಹ ಪ್ರಮುಖ ಸಾಮಾಜಿ ಸೇವೆಯ ಹುದ್ದೆಗೆ ಕೆಲವರಿಗೆ ಮಾತ್ರ ನೀಡಿರುವ ಬಗ್ಗೆ ಸಾಕಷ್ಟು ಆಕ್ಷೇಪ ಕೇಳಿಬಂದಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨ ರ ಸೆಕ್ಷನ್ ೪(೧) (ಬಿಬಿ) ಅಡಿ ಮುಖ್ಯ ವನ್ಯಜೀವಿ ಪರಿಪಾಲಕರ ಶಿಫಾರಸ್ಸಿನ ಮೇರೆಗೆ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಗೌರವ ವನ್ಯಜೀವಿ ಪರಿಪಾಲಕರನ್ನು ನೇಮಕ ಮಾಡಲು ಸರಕಾರಕ್ಕೆ ಅಧಿಕಾರವಿದೆ. ಆದರೆ, ರಾಜಕೀಯ ಪ್ರಭಾವ ಬಳಸಿ ಕೆಲವರು ಹುದ್ದೆಗಳನ್ನು ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಳ್ಳರ ಕೈಗೆ ಬೀಗ ಕೊಟ್ಟ ಇಲಾಖೆ
ಗೌರವ ವನ್ಯಜೀವಿ ಪರಿಪಾಲಕರು ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕಳ್ಳಬೇಟೆ ತಡೆ, ವನ್ಯಜೀವಿ ಆವಾಸ
ಸ್ಥಾನಗಳಿಗೆ ಹಾನಿಯಾಗುವುದನ್ನು ತಪ್ಪಿ ಸುವುದು, ಸೂಕ್ತ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶ ಗಳನ್ನು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳನ್ನಾಗಿ ಘೋಷಿಸುವುದು ಹಾಗೂ ಮಾನವ- ವನ್ಯಜೀವಿ ಸಂಘರ್ಷ ಪ್ರಕರಣಗಳಲ್ಲಿ ಪರಿಹಾರ ವಿತರಣೆ ಮತ್ತಿತರ
ವಿಷಯಗಳಲ್ಲಿ ರಾಜ್ಯ ಸರಕಾರಕ್ಕೆ ಸಹಕಾರ ನೀಡುವುದು ಗೌರವ ವನ್ಯಜೀವಿ ಪರಿಪಾಲಕರ ಆದ್ಯ ಕರ್ತವ್ಯ. ಆದರೆ, ಈಗ ನೇಮಕ
ಮಾಡಿರುವ ಪಟ್ಟಿಯಲ್ಲಿ ಆರೋಪ ಹೊತ್ತಿರುವ, ಧನದಾಹಿಗಳು ಇರುವುದು ಕಳ್ಳರ ಕೈಗೆ ಬೀಗ ಕೊಟ್ಟಂತಾಗಿದೆ ಎಂದು ವನ್ಯಜೀವಿ
ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

***

ಹುದ್ದೆಗೆ ನೇಮಕವಾಗಲು ಮಾನದಂಡಗಳು

ವನ್ಯಜೀವಿ ಸಂರಕ್ಷಣೆ ಬಗ್ಗೆ ಕಾಳಜಿ ಇರಬೇಕು

ಪ್ರಕೃತಿ ಹಾಗೂ ವನ್ಯಜೀವಿ ಸಂರಕ್ಷಣೆ ಹಿತಾಸಕ್ತಿಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿರಬಾರದು.

ಅಧಿಕಾರಿ ವರ್ಗಕ್ಕೆ ಸಹಾಯ ಮಾಡುವಂತಹ ಸಾಮರ್ಥ್ಯ ಹೊಂದಿರಬೇಕು.

ಸ್ಥಳೀಯ ಮಟ್ಟದಲ್ಲಿ ಸಂರಕ್ಷಣೆ ಸಂದೇಶವನ್ನು ತಿಳಿಸುವಂತಹ ಸಾಮರ್ಥ್ಯ ಇರಬೇಕು.