ನವದೆಹಲಿ: ಮಹಾರಾಷ್ಟ್ರದ ಥಾಣೆ ಮತ್ತು ದಿವಾವನ್ನು ಸಂಪರ್ಕಿಸುವ ಎರಡು ಹೆಚ್ಚುವರಿ ರೈಲು ಮಾರ್ಗಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ನಡೆಯಲಿದೆ. ಅಲ್ಲದೆ, ಮುಂಬೈ ಉಪನಗರ ರೈಲ್ವೆ ವಿಭಾಗದಲ್ಲಿ ಎರಡು ಉಪನಗರ ರೈಲುಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಉದ್ಘಾಟನೆ ನಂತರ ಪ್ರಧಾನಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದೆ. ಅಂದಾಜು ₹620 ಕೋಟಿ ವೆಚ್ಚದಲ್ಲಿ ನಿರ್ಮಿಸ ಲಾಗಿರುವ ಥಾಣೆ ಮತ್ತು ದಿವಾ ನಡುವಿನ ರೈಲು ಮಾರ್ಗಗಳು ಮುಂಬೈ ನಗರ ಸಾರಿಗೆ ಯೋಜನೆಯ ಭಾಗವಾಗಿದೆ.
ರೈಲ್ವೆ ಮಾರ್ಗಗಳು 1.4 ಕಿಮೀ ರೈಲು ಮೇಲ್ಸೇತುವೆ, ಮೂರು ಪ್ರಮುಖ ಸೇತುವೆಗಳು, 21 ಸಣ್ಣ ಸೇತುವೆ ಗಳನ್ನು ಒಳ ಗೊಂಡಿವೆ. ಈ ಎರಡು ಮಾರ್ಗಗಳು ಮುಂಬೈನಲ್ಲಿ ಉಪನಗರ ರೈಲುಗಳ ಸಂಚಾರ ದೊಂದಿಗೆ ದೀರ್ಘ-ಪ್ರಯಾಣ ರೈಲುಗಳ ಸಂಚಾರದ ಅಡಚಣೆಯನ್ನು ನಿವಾರಿಸಬಹುದು ಎಂಬ ನಿರೀಕ್ಷೆ ಯಿದೆ.
ಕಲ್ಯಾಣ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ಇರುವ ನಾಲ್ಕು ಟ್ರ್ಯಾಕ್‌ಗಳಲ್ಲಿ, ಎರಡು ಟ್ರ್ಯಾಕ್‌ಗಳನ್ನು ನಿಧಾನವಾದ ಲೋಕಲ್ ಟ್ರೈನ್ಗಳಿಗೆ ಮತ್ತು ಎರಡು ಟ್ರ್ಯಾಕ್‌ಗಳನ್ನು ವೇಗದ ಲೋಕಲ್, ಮೇಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳಿಗೆ ಬಳಸಲಾಗಿದೆ.