ಬೆಂಗಳೂರು: ಕನ್ನಡ ಚಿತ್ರರಂಗದ ಪೋಷಕ ನಟ ‘ಕಲಾ ತಪಸ್ವಿ’ ರಾಜೇಶ್(82) ಅವರು ಶನಿವಾರ ಬೆಳಿಗ್ಗೆ ನಿಧನರಾದರು.
ಉಸಿರಾಟದ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಫೆ.9ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ರಾಜೇಶ್ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು.
ರಾಜೇಶ್ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ಅಭಿಮಾನಿಗಳು ಮತ್ತು ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ. ರಾಜೇಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಶನಿವಾರ ಸಂಜೆ ಬೆಂಗಳೂರಿನ ವಿದ್ಯಾರಣ್ಯ ಪುರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
1932ರ ಏ.15ರಂದು ಬೆಂಗಳೂರಿನಲ್ಲಿ ಜನಿಸಿದ್ದ ರಾಜೇಶ್, ಅಭಿನಯದ ಬಗ್ಗೆ ಅವರು ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು.
ರಾಜೇಶ್ ಅವರ ಮೂಲ ಹೆಸರು ಮುನಿ ಚೌಡಪ್ಪ. ಬಳಿಕ ಅವರು ನಾಟಕಗಳಲ್ಲಿ ಅಭಿನಯಿಸುವಾಗ ವಿದ್ಯಾಸಾಗರ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ‘ತಲಾತಪಸ್ವಿ’ ರಾಜೇಶ್ ಎಂದೇ ಅವರು ಖ್ಯಾತರಾದರು. 1960ರ ದಶಕದಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟು, ನಂತರ ನೂರಾರು ಸಿನಿಮಾಗಳಲ್ಲಿ ನಟಿಸಿ ತಲಾತಪಸ್ವಿ ಬಿರುದು ಪಡೆದರು.
ರಾಜೇಶ್ ಅವರ ಪುತ್ರಿ ಆಶಾರಾಣಿ ಕೂಡ ಚಿತ್ರರಂಗದಲ್ಲಿ ಯಶಸ್ಸು ಕಂಡವರು. ಆಶಾರಾಣಿ ಅವರನ್ನು ನಟ ಅರ್ಜುನ್ ಸರ್ಜಾ 1988ರಲ್ಲಿ ಮದುವೆ ಆದರು.
ಸೊಸೆ ತಂದ ಸೌಭಾಗ್ಯ, ದೇವರ ದುಡ್ಡು, ಕಲಿಯುಗ, ದೇವರ ಗುಡಿ, ವೀರ ಸಂಕಲ್ಪ, ಗಂಗೆ ಗೌರಿ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್ ನಟಿಸಿ ಸೈ ಎನಿಸಿಕೊಂಡಿದ್ದರು. ಫೆ.25ರಂದು ಬಿಡುಗಡೆ ಆಗಲಿರುವ ‘ಓಲ್ಡ್ ಮಾಂಕ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.