Friday, 22nd November 2024

ಕೃಷಿ ಉತ್ಪನ್ನ ಸಾಗಿಸುವ 100 ಡ್ರೋನ್‌ಗಳಿಗೆ ಮೋದಿ ಚಾಲನೆ

ನವದೆಹಲಿ: ಕೀಟನಾಶಕಗಳನ್ನು ಸಿಂಪಡಿಸಲು ಅಥವಾ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸುವ ಉದ್ದೇಶದ 100 ಡ್ರೋನ್‌ಗಳಿಗೆ ವಿವಿಧ ನಗರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.

ಮಾನೇಸರ್‌ನಲ್ಲಿ ಆಯೋಜಿಸಲಾದ ವರ್ಚುವಲ್ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಈಗಾಗಲೇ ಡ್ರೋನ್‌ಗಳನ್ನು ಬಳಸುತ್ತಿರುವ ವಿವಿಧ ಕ್ಷೇತ್ರಗಳನ್ನು ಭಾಷಣದಲ್ಲಿ ಉಲ್ಲೇಖಿಸಿದರು.

‘ಡ್ರೋನ್‌ಗಳ ಮೂಲಕ ರಸಗೊಬ್ಬರಗಳ ಸಿಂಪಡಣೆ ಸಹ ಮಾಡಲಾಗುತ್ತಿದೆ. ‘ಕಿಸಾನ್ ಡ್ರೋನ್‌ಗಳು’ ಹೊಸ ಯುಗದ ಕ್ರಾಂತಿಯಾಗಲಿವೆ. ಶೀಘ್ರದಲ್ಲೇ, ಹೆಚ್ಚಿನ ಸಾಮರ್ಥ್ಯದ ಡ್ರೋನ್‌ಗಳು ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ನೇರವಾಗಿ ಮಾರುಕಟ್ಟೆಗೆ ತಲುಪಿಸಲು ರೈತರಿಗೆ ನೆರವಾಗ ಲಿವೆ. ಮೀನುಗಾರರು ತಾಜಾ ಮೀನುಗಳನ್ನು ಮಾರುಕಟ್ಟೆಗೆ ತಲುಪಿಸಬಹುದು’ ಎಂದು ಮೋದಿ ತಿಳಿಸಿದರು.

ಸಾಕಷ್ಟು ಅವಕಾಶಗಳು ನಮ್ಮ ಬಾಗಿಲನ್ನು ತಟ್ಟುತ್ತಿವೆ. ದೇಶದ ಇತರ ಹಲವು ಕಂಪನಿಗಳು ಈ ದಿಕ್ಕಿನಲ್ಲಿ ಸಾಗುತ್ತಿರುವುದಕ್ಕೆ ಸಂತೋಷವಾಗಿದೆ’ ಎಂದೂ ಹರ್ಷ ವ್ಯಕ್ತಪಡಿಸಿದರು. ‘ಗರುಡ್ ಏರೋಸ್ಪೇಸ್ ಮುಂದಿನ ಎರಡು ವರ್ಷಗಳಲ್ಲಿ 1 ಲಕ್ಷ ಡ್ರೋನ್‌ಗಳನ್ನು ತಯಾರಿಸಲು ನಿರ್ಧರಿಸಿದೆ. ಇದು ನೂರಾರು ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳನ್ನು ನೀಡಲಿದೆ,’ ಎಂದು ಅವರು ಹೇಳಿದರು.