Friday, 22nd November 2024

ಬಾವಿಗೆ ಇಳಿದವನೇ ಭಾವಿ ಮುಖ್ಯಮಂತ್ರಿ

Puneeth Death Anniversary

ಸಿನಿಗನ್ನಡ

ತುಂಟರಗಾಳಿ

ಹರಿ ಪರಾಕ್

ನಟ ಪುನೀತ್ ರಾಜ್‌ಕುಮಾರ್ ಅವರ ನೆನಪಿನಲ್ಲಿ ಅವರ ಹೆಸರನ್ನು ಬೆಂಗಳೂರಿನ ನಾಯಂಡಹಳ್ಳಿ ವರ್ತುಲ ರಸ್ತೆಗೆ ಇಡಲು ಸರಕಾರ ತೀರ್ಮಾನ ಮಾಡಿದೆ. ಇದು ಪುನೀತ್ ಅವರು ನಮ್ಮ ಸಮಾಜ ದಲ್ಲಿ ಸಂಪಾದಿಸಿದ ಪ್ರೀತಿ, ವಿಶ್ವಾಸ ಮತ್ತು ಗೌರವ. ಆದರೆ ವಿಪರ್ಯಾಸ
ಅಂದ್ರೆ ಸಾಮಾಜಿಕ ಜಾಲತಾಣ ಗಳಲ್ಲಿ ಇದನ್ನು ಕೇವಲ ತಮ್ಮ ಸಮಾಜಕ್ಕೆ ಸಂದ ಗೌರವ ಅಂತ ‘ಎಲ್ಲಿಗ್ ಹೋದ್ರೂ ಸುತ್ತು ಹಾಕ್ಕೊಂಡು ಅಲ್ಲಿಗೇ ಬರೋ’ ಕೆಲವು ಜಾತಿವಾದಿಗಳು ಪ್ರಚಾರ ಪಡೆದುಕೊಳ್ತಾ ಇರೋದು.

ಯಾರೋ ಮಹಾನುಭಾವ, ‘ಇದು ನಮ್ಮ ಈಡಿಗ ಸಮುದಾಯಕ್ಕೆ ಸಂದ ಜಯ, ಪುನೀತ್ ಅವರ ಹೆಸರು ಇಡಲು ಕಾರಣರಾದ ನಮ್ಮ ಜಾತಿಯ ನಾಯಕರುಗಳಾದ…’ ಅಂತ ಒಂದಷ್ಟು ಹೆಸರುಗಳನ್ನು ಹಾಕಿ ಅವರೆಲ್ಲರಿಗೂ ಪುನೀತ್ ಅಭಿಮಾನಿಗಳ ಪರವಾಗಿ ಧನ್ಯವಾದ ಗಳು ಅಂತ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರೋದನ್ನ ನೋಡಿದ್ರೆ, ಇದಕ್ಕೆ ಅಳಬೇಕೋ, ನಗಬೇಕೋ ಎಂಬ ಅನುಮಾನ ಬರೋದಷ್ಟೇ ಅಲ್ಲ, ಎಂಥ ಸಾತ್ವಿಕ ಪುನೀತ್ ಅಭಿಮಾನಿಗಳಿಗಾದ್ರೂ ಸಿಟ್ಟು ನೆತ್ತಿಗೇರೋದು ಸಹಜ.

ಡಾ. ರಾಜ್‌ಕುಮಾರ್ ಅವರಾಗಲಿ ಅವರ ಕುಟುಂಬದವರಾಗಲೀ ಯಾವತ್ತೂ ತಮ್ಮ ಜಾತಿಯನ್ನು ಹೇಳಿಕೊಂಡು ಅದರಿಂದ ಲಾಭ ಪಡೆದವರೂ ಅಲ್ಲ ಅಥವಾ ಕೇವಲ ತಮ್ಮ ಜಾತಿಯವರ ಕಲ್ಯಾಣಕ್ಕೆ ಶ್ರಮಿಸಿದವರೂ ಅಲ್ಲ. ಅವರದ್ದು ಕಲಾವಿದರ ಜಾತಿ ಅಷ್ಟೇ. ಇದು ಇಡೀ ಕರ್ನಾಟಕಕ್ಕೇ ಗೊತ್ತಿರುವ ವಿಷಯ. ಆದರೆ, ಅಂತಹ ದೊಡ್ಡವರ ಹೆಸರನ್ನೂ ಕೇವಲ ತಮ್ಮ ಜಾತಿಯ ಮಟ್ಟಕ್ಕೆ ಸೀಮಿತಗೊಳಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುವ ಜನ ಇನ್ನೂ ನಮ್ಮ ಸಮಾಜದಲ್ಲಿ ಇzರೆ ಅನ್ನೋದೇ ದೊಡ್ಡ ದುರಂತ.

ರಾಜಕಾರಣದಲ್ಲಿ ಇದೆಲ್ಲ ಸಹಜ. ಆದರೆ ಡಾ.ರಾಜ್‌ಕುಮಾರ್ ಅವರ ಕುಟುಂಬವನ್ನು ತಮ್ಮ ಜಾತಿಗೆ ಸೇರಿಸಿ, ರಾಜ್ ಹೆಸರಲ್ಲಿ ರಾಜಕಾರಣ ಮಾಡೋ ಸಣ್ಣ ಬುದ್ಧಿ ಮಾತ್ರ ಅಸಹ್ಯ.

ಲೂಸ್ ಟಾಕ್
ಬಸವರಾಜ್ ಬೊಮ್ಮಾಯಿ (ಕಾಲ್ಪನಿಕ ಸಂದರ್ಶನ)
ವಿಧಾನ ಸೌಧದಲ್ಲಿ ಧರಣಿ ಮಾಡ್ತಾ ಇರೋರ್ ಬಗ್ಗೆ ನಿಮ್ಮ ಅಭಿಪ್ರಾಯ?
-ಏನ್ ಮಾಡೋದು…ರಾಜ್ಯದಲ್ಲಿ ಹಾಸಿ ಹೊದ್ಕೊಳ್ಳೋವಷ್ಟು ಸಮಸ್ಯೆಗಳಿವೆ, ಇವ್ರು ಅವನ್ನೆಲ್ಲ ಬಿಟ್ಟು ಯಾವುದೋ ವಿಷ್ಯ ಇಟ್ಕೊಂಡು ವಿಧಾನಸಭೆಯ ಹಾಸಿ ಹೊದ್ಕೊಂಡ್ ಮಲಕ್ಕೊಂಡಿದ್ದಾರೆ.

ಸದನದ ಈ ಪರಿಸ್ಥಿತಿಯನ್ನ ನೋಡಿ ಮುಖ್ಯಮಂತ್ರಿ ಆಗಿ ಏನ್ ಹೇಳ್ತೀರಾ?
-ಏನೂ ಹೇಳೋಕಾಗಲ್ಲ, ಸದಾನಂದ ಗೌಡರ ಥರ ಸುಮ್ನೆ ಸದನದ ಕಡೆ ನೋಡಿ ನಗ್ತಾ ಇರಬೇಕಷ್ಟೇ.

ಆದ್ರೂ, ವಿಧಾನ ಸೌಧದಲ್ಲಿ ಹಿಂಗೆ ಮಲಗೋರನ್ನ ನೋಡಿದ್ರೆ ಜನ ಏನಂದ್ಕೊಳ್ಳೊಲ್ಲ?
-ಅಯ್ಯೋ, ಇವ್ರ್ ಆಡೋದ್ ನೋಡಿ, ಮೊನ್ನೆ ಯಾರೋ,‘ ಇಲ್ಲಿ ಹತ್ರ ಎದ್ರೂ ಒಳ್ಳೆ ಲಾಡ್ಜ್ ಇದೆಯಾ?’ ಅಂತ ಕೇಳಿದ್ದಕ್ಕೆ ಇ ಮುಂದೆ ಹೋಗಿ ಲೆಫ್ಟ್ ತಗೊಂಡ್ರೆ ವಿಧಾನಸೌಧ ಬರುತ್ತೆ ಅಂತ ಅಡ್ರೆಸ್ ಹೇಳಿದ್ರಂತೆ.

ಸರಿ ಇವರ ಪ್ರತಿಭಟನೆ ಹಿಂದಿರೋ ಉದ್ದೇಶ ಏನು ಅಂತ ನಿಮ್ಮ ಅನಿಸಿಕೆ ?
-ಬಾವಿಗೆ ಇಳಿದು ಪ್ರತಿಭಟನೆ ಮಾಡಿಬಿಟ್ಟರೆ ಭಾವಿ ಮುಖ್ಯಮಂತ್ರಿ ಅನ್ನಿಸ್ಕೊತೀವಿ ಅಂದ್ಕೊಂಡಿರೋ ಕೆಲವರ ಪ್ಲ್ಯಾನ್ ಇದು.

ಹೋಗ್ಲಿ, ಮುಖ್ಯಮಂತ್ರಿ ಆಗಿ ನೀವು ಮಾಡ್ತಾ ಇರೋ ಕೆಲಸದ ಬಗ್ಗೆ ನಿಮಗೆ ತೃಪ್ತಿ ಇದೆಯಾ ?
-ಇವರೆಲ್ಲ ಕೆಲಸ ಮಾಡೋಕೆ ಬಿಟ್ರೆ ತಾನೇ? ಹಿಂಗೇ ಆದ್ರೆ ನಾನು ಮುಖ್ಯಮಂತ್ರಿ ಆಗಿದ್ದ ಅವಽಯನ್ನ ಇತಿಹಾಸ ‘ಶೂನ್ಯ ವೇಳೆ’ ಅಂತ
ನೆನಪಿಟ್ಟುಕೊಳ್ಳುತ್ತೆ ಅಷ್ಟೇ.

ನೆಟ್ ಪಿಕ್ಸ್
ಖೇಮುಗೆ ಮೂರು ದಿನದಿಂದ ಮೋಷನ್ ಆಗ್ತಾ ಇರಲಿಲ್ಲ. ಹೊಟ್ಟೆಯಲ್ಲಿ ಏನೋ ಸಮಸ್ಯೆ ಇದೆ ಅಂತ ಗೊತ್ತಾಗಿ ಖೇಮು ತಲೆ ಕೆಡಿಸಿ ಕೊಂಡಿದ್ದ. ಮರುದಿನ ಪಕ್ಕದ ಇದ್ದ ಆಸ್ಪತ್ರೆಗೆ ಹೋದ. ಅಲ್ಲಿ ಡಾಕ್ಟರ್ ಅನ್ನು ಭೇಟಿ ಮಾಡಿ, ‘ಡಾಕ್ಟ್ರೇ ಮೂರು ದಿನದಿಂದ ಮೋಷನ್ ಆಗ್ತಾ ಇಲ್ಲ’ ಅಂತ ಸಮಸ್ಯೆ ಹೇಳಿಕೊಂಡ. ಸರಿ, ಡಾಕ್ಟರ್ ಒಂದಷ್ಟು ಮಾತ್ರೆ ಕೊಟ್ರು. ಮೂರು ದಿನ ಮಾತ್ರೆ ತೆಗೆದುಕೊಂಡ ಖೇಮು, ಏನೂ ಉಪಯೋಗ ಆಗ್ಲಿಲ್ಲ. ಮತ್ತೆ ಡಾಕ್ಟರ್ ಬಳಿ ಹೋದ.

‘ಸರಿ ಹೋಯ್ತಾ ಸಮಸ್ಯೆ?’ ಅಂತ ಕೇಳಿದ್ರು ಡಾಕ್ಟರ್. ‘ಇ ಡಾಕ್ಟ್ರೇ, 6 ದಿನ ಆಯ್ತು ಮೋಷನ್ ಆಗಿಲ್ಲ’ಅಂದ. ಸರಿ ಈ ಸಲ ಸಿರಪ್ ಬರ್ಕೊಟ್ರು ಡಾಕ್ಟರ್. ಅದನ್ನೂ ಮೂರು ದಿನ ತಗೊಂಡ ಖೇಮು, ಮತ್ತೆ ಡಾಕ್ಟರ್ ಬಳಿ ಹೋದ. ‘ಸರಿ ಹೋಯ್ತಾ ಸಮಸ್ಯೆ?’ ಅಂದ್ರು
ಡಾಕ್ಟರ್. ‘ಇ ಡಾಕ್ಟ್ರೇ, 9 ದಿನ ಆಯ್ತು ಮೋಷನ್ ಆಗಿಲ್ಲ’ ಅಂದ ಖೇಮು.

ಡಾಕ್ಟರ್ ಈ ಸಲ ಸ್ಟ್ರಾಂಗ್ ಮಾತ್ರೆ, ಇಂಜೆಕ್ಷನ್ ಕೊಟ್ಟು ‘ಈ ಸಲ ಸರಿ ಹೋಗುತ್ತೆ’ ಅಂತ ಹೇಳಿ ಕಳಿಸಿದ್ರು. ಖೇಮು ಮತ್ತೆ ಮೂರು ದಿನ ಆದಮೇಲೆ ಡಾಕ್ಟರ್ ಹತ್ರ ಹೋದ. ‘ಈಗ ಸಮಸ್ಯೆ ಸರಿ ಹೋಗಿರಬೇಕಲ್ವಾ?’ ಅಂದ್ರು ಡಾಕ್ಟರ್. ಖೇಮು ‘ಇ ಡಾಕ್ಟರ್ 12 ದಿನ ಆಯ್ತು, ಮೋಷನ್ ಆಗಿಲ್ಲ’ ಅಂದ. ಡಾಕ್ಟರ್‌ಗೆ ಗಾಬರಿ ಆಯ್ತು. ಇನೋ ಗಂಭೀರ ಸಮಸ್ಯೆ ಇದೆ ಅಂತ ಅನ್ನಿಸಿ, ‘ನೀವು ಏನ್ ಕೆಲ್ಸ ಮಾಡ್ತಿದ್ದೀರಾ?’ ಅಂತ ಕೇಳಿದ್ರು. ಅದಕ್ಕೆ ಖೇಮು ‘ನಾನು ಒಂದ್ ಕಾಲೇಜಲ್ಲಿ ಅತಿಥಿ ಉಪನ್ಯಾಸಕ’ ಅಂದ.

ಅದಕ್ಕೆ ಡಾಕ್ಟ್ರು ‘ಮೊದಲೇ ಹೇಳೋದಲ್ವಾ?’ ಅಂತ ಜೇಬಿಂದ 200 ರುಪಾಯಿ ತೆಗೆದುಕೊಡ್ತಾ ಹೇಳಿದ್ರು-‘ತಗೋ ಮೊದ್ಲು ಹೊಟ್ಟೆಗೆ ಏನಾದ್ರೂ ತಿನ್ನು, ಆಮೇಲೆ ಮೋಷನ್ ತಾನಾಗೇ ಆಗುತ್ತೆ’.

ಲೈನ್ ಮ್ಯಾನ್

ಇಶಾನ್ ಕಿಶನ್ ಯಾಕೆ ಇತ್ತೀಚೆಗೆ ಸರಿಯಾಗಿ ಆಡ್ತಾ ಇಲ್ಲ?

15 ಕೋಟಿಗೆ ಸೇಲ್ ಆದ್ಮೇಲೆ ಎಲ್ರೂ ಜೈ ಇಶಾನ್, ಜೈ ಕಿಶಾನ್’ ಅಂತ ಅಟ್ಟಕ್ಕೇರಿಸಿದ್ದಾರೆ ಅದಕ್ಕೆ.

ಆರ್‌ಸಿಬಿಗೆ ದಿನೇಶ್ ಕಾರ್ತಿಕ್ ಆಯ್ಕೆ
-ಚೆನ್ನೈನವರು ಅಂಪೈರ್‌ಗಳನ್ನ ಕೊಂಡ್ಕೊಂಡ್ರೆ, ನಮ್ಮೋರು ನಾವೇನ್ ಕಮ್ಮಿ ಅಂತ ಕಾಮೆಂಟ್ರೇಟರ್ ನೇ ಕೊಂಡ್ಕೊಂಡ್ರು

ಮ್ಯಾಕ್ಸ್ ವೆಲ್ ತಮಿಳು ಹುಡುಗಿನಾ ಮದ್ವೆ ಆಗ್ತಾ ಇದ್ದಾನಂತೆ!

ವಡಿವೇಲು ಥರ ಮ್ಯಾಕ್ಸ್ ವೇಲು ಅಂತ ಹೆಸರು ಬದಲಾಯಿಸಿಕೊಳ್ತಾನಾ?

ಯಾವುದೋ ಕಾರ್ಯಕ್ರಮದಲ್ಲಿ ಮೋದಿ ಅವರು ಭಜನೆ ಮಾಡ್ತಾ ಇದ್ದಿದ್ದನ್ನು ನೋಡಿದವರು ಹೇಳಿದ್ದು.

-ಇಷ್ಟ್ ದಿನ ಎಲ್ರೂ ಮೋದಿ ಭಜನೆ ಮಾಡ್ತಾ ಇದ್ರು, ಈಗ ಮೋದಿನೇ ಭಜನೆ ಮಾಡ್ತಾ ಇದ್ದಾರೆ.
ಅದೇ ವಿಡಿಯೋ ನೋಡಿ ವಿರೋಧ ಪಕ್ಷಗಳು ಹೇಳಿದ್ದು

-ಇವ್ರಿಗೆ ಬರೋದು ಎರಡೇ. ದೇವರ ಹೆಸರಲ್ಲಿ ಭಜನೆ, ಧರ್ಮದ ಹೆಸರಲ್ಲಿ ವಿಭಜನೆ

ಶಿವಣ್ಣ ಸಿನಿಮಾ ಇಂಡಸ್ಟ್ರಿಗೆ ಬಂದು 36 ವರ್ಷ ಆಯ್ತು
-ಅಭಿಮಾನಿಗಳು- ಶಿವಣ್ಣಂಗೆ ಆಗ್ಲೇ 36 ವರ್ಷ ವಯಸ್ಸಾಗೋಯ್ತಾ? ನೋಡಿದ್ರೆ ಹಂಗನ್ನಿಸೋದೇ ಇಲ್ಲ.

ಶಾಲಾ ರಾಜಕಾರಣ
ಮೊನ್ನೆ, ಸ್ಕೂಲಿಗೆ ಹಿಜಾಬ್ ಹಾಕ್ಕೊಂಡ್ ಬರಂಗಿಲ್ಲ.
ನಿನ್ನೆ, ಕುಂಕುಮ ಇಟ್ಕೊಂಡ್ ಬಂದಿದ್ದಕ್ಕೂ ವಿರೋಧ.
-ಸರಿ, ಎಕ್ಸಾಮ್ ಆನ್ಸರ್ ಪೇಪರ್‌ನಲ್ಲಿ ಓಂ, ಶ್ರೀ ಅಂತ ಬರೆದು ಶುರು
ಮಾಡ್ತಾರಲ್ಲ, ಅದಕ್ಕಾದ್ರೂ ಪರ್ಮಿಷನ್ ಇದೆಯಾ?

ಹಿಜಾಬ್ ಹಾಕ್ಕೊಂಡ್ ಬರಂಗಿಲ್ಲ ಅಂದಿದ್ದಕ್ಕೆ ಬುರ್ಖಾ ಹಾಕ್ಕೊಂಡ್ ಬರಬಹುದಾ ಅಂತ ಕೇಳುವವನು?
-ಆಸೆ ‘ಬುರ್ಕ’

ಸಿನಿಮಾ ಸತ್ಯ
ಸಿಂಗಲ್ ಥಿಯೇಟರ್ ಮುಂದೆ ಮೂರ್ನಾಲ್ಕು ಫ್ಲೆಕ್ಸ್ ಹಾಕಿಸಿದ ತಕ್ಷಣ ಅದು ಮಲ್ಟಿಪ್ಲೆಕ್ಸ್ ಆಗಲ್ಲ
– ಫೇಸ್‌ಬುಕ್‌ನಲ್ಲಿ ಲೋಕೇಶ್ ಶಂಕರ್ ನಾರಾಯಣ್ ಅವರು ತಮ್ಮ ವಾಲ್‌ನಲ್ಲಿ ಬರೆದುಕೊಂಡಿದ್ದು

ಅಂದಿನ ಹಾಡು: ಧರಣಿ ಮಂಡಲ ಮಧ್ಯದೊಳಗೆ, ಮೆರೆಯುತಿಹ ಕರ್ಣಾಟ ದೇಶದೊಳ್ ಇಂದಿನ ಹಾಡು: ಮೆರೆಯುತಿಹ ಕರ್ನಾಟಕ ರಾಜ್ಯದೊಳ್, ವಿಧಾನಮಂಡಲದ ಮಧ್ಯದೊಳಗೆ ಧರಣಿ