Thursday, 12th December 2024

ಬರಿಗಾಲಲ್ಲಿ ನಡೆದರೆ ಬಂಗಾರದ ಮನುಷ್ಯರಾಗುತ್ತೇವೆ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಹಾಗೆ ನೋಡಿದರೆ ಬರಿಗಾಲಲ್ಲಿ ಓಡಾಡುವುದು ಶ್ರೇಷ್ಠತೆಯ ವ್ಯಸನವೂ ಅಲ್ಲ, ಬಡತನದ ಅನಿವಾರ್ಯವೂ ಅಲ್ಲ. ಜೈನ ದಿಗಂಬರ ಮುನಿಗಳದೋ, ಅವಧೂತರದೋ ಮಾತ್ರ ಲಕ್ಷಣವೂ ಅಲ್ಲ. ಹಿಂದೆಲ್ಲ ನಮ್ಮ ಹಳ್ಳಿಗಳಲ್ಲಿ ಅದೊಂದು ಜೀವನಕ್ರಮವೇ ಆಗಿತ್ತು.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವರಿಗೆ ಪಾದರಕ್ಷೆಗಳು ಪ್ರಾಥಮಿಕ ಅನಿವಾರ್ಯ ಆಗಿರಲೇ ಇಲ್ಲ.

ಅಯೋಧ್ಯೆಯಿಂದ ವನವಾಸಕ್ಕೆ ಹೊರಟಾಗ ಶ್ರೀರಾಮ- ಸೀತೆ ಮತ್ತು ಲಕ್ಷ್ಮಣ ಮೂವರೂ ಪಾದರಕ್ಷೆಗಳನ್ನು ಧರಿಸಿದ್ದರಿರಬಹುದು. ಶ್ರೀರಾಮನಂತೂ ಖಂಡಿತ ಧರಿಸಿದ್ದನು ಎಂಬುದಕ್ಕೆ ಭರತನ ಭ್ರಾತೃಪ್ರೇಮವನ್ನು ಜಗಕೆಲ್ಲ ಸಾರುವ ‘ಪಾದುಕಾ ಪ್ರದಾನ’ ಪ್ರಸಂಗವೇ ಸಾಕ್ಷಿ. ಇಲ್ಲಿ ಒಂದು ತಾರ್ಕಿಕ ಕುತೂಹಲವೇನೆಂದರೆ, ಭರತನಿಗೆ ಪಾದುಕೆಗಳನ್ನು ಕೊಟ್ಟು ಆದ ಮೇಲೆ ವನವಾಸದ ಉಳಿದ ಅವಧಿ ಯುದ್ದಕ್ಕೂ ಶ್ರೀರಾಮ ಬರಿಗಾಲಲ್ಲೇ ನಡೆದಿರಬೇಕಲ್ಲವೇ? ಭರತ ಪಾದುಕೆಗಳನ್ನೊಯ್ದದ್ದು ವನವಾಸದ ಆರಂಭಿಕ ದಿನ ಗಳಲ್ಲೇ, ಅಂದಮೇಲೆ ಹೆಚ್ಚೂ ಕಡಿಮೆ ಹದಿನಾಲ್ಕು ವರ್ಷಗಳ ಕಾಲ ಶ್ರೀರಾಮನದು ಬರಿಗಾಲಲ್ಲಿ ನಡಿಗೆ!

ಅದೂ ಕಾಡುಮೇಡುಗಳಲ್ಲಿ, ಕಲ್ಲುಮುಳ್ಳುಗಳಿರುವ ಕಠಿನ ಹಾದಿಯಲ್ಲಿ. ಶ್ರೀರಾಮನೇ ಬರಿಗಾಲಲ್ಲಿ ನಡೆಯಬೇಕಾಯ್ತೆಂದರೆ ಸೀತೆ ಮತ್ತು ಲಕ್ಷ್ಮಣ ಪಾದರಕ್ಷೆಗಳನ್ನು ಧರಿಸ ಲಿಕ್ಕೆ ಖಂಡಿತ ಒಪ್ಪಿರಲಿಕ್ಕಿಲ್ಲ. ಹಾಗಾಗಿ ಅವರೂ ತಮ್ಮತಮ್ಮ ಪಾದರಕ್ಷೆಗಳನ್ನು ಅಲ್ಲೆಲ್ಲೋ ಚಿತ್ರಕೂಟದಲ್ಲಿ ಬಿಟ್ಟು ಶ್ರೀರಾಮನನ್ನೇ ಅನುಸರಿಸಿ ಬರಿಗಾಲಲ್ಲಿ ನಡೆದಿರು ತ್ತಾರೆ. ಹಾಗೆ ನಡೆಯುವಾಗೊಮ್ಮೆ ಸೀತೆಯ ಕಾಲಿಗೆ ಮುಳ್ಳು ಚುಚ್ಚುವ, ಶ್ರೀರಾಮ- ಲಕ್ಷ್ಮಣರು ಸೇರಿ ಆಕೆಯ ಆರೈಕೆ ಮಾಡುವ ದೃಶ್ಯ ರಮಾನಂದ ಸಾಗರರ ಟಿವಿ ರಾಮಾಯಣ ಧಾರಾವಾಹಿಯಲ್ಲಿ ನೋಡಿದ ನೆನಪು. ಅದನ್ನವರು ರಾಮಾಯಣದ ಯಾವ ಆವೃತ್ತಿಯನ್ನು ಆಧಾರವಾಗಿಟ್ಟುಕೊಂಡು ತೋರಿಸಿದರೋ ಗೊತ್ತಿಲ್ಲ. ವಾಲ್ಮೀಕಿ ಮಹರ್ಷಿಯದಿರಬಹುದು ಅಥವಾ ‘ಫಣಿರಾಯ ತಿಣುಕುವಂತೆ ಮಾಡಿದ’ ಇತರ ರಾಮಾಯಣ ಕವಿಗಳದಿರಬಹುದು. ಇರಲಿ, ನಮಗಿಲ್ಲಿ ಅದು ಅಪ್ರಸ್ತುತ. ಶ್ರೀರಾಮನು ವನವಾಸದ ಅವಧಿಯನ್ನು ಬರಿಗಾಲಲ್ಲಿ ಕಳೆದನೆಂಬುದಷ್ಟೇ ಮುಖ್ಯ.

ಏಕೆಂದರೆಇಂದಿನ ಅಂಕಣದಲ್ಲಿ ವ್ಯಾಖ್ಯಾನಕ್ಕೆ ಎತ್ತಿಕೊಂಡಿರುವುದು ಪಾದುಕೆಗಳನ್ನಲ್ಲ, ಪಾದುಕಾರಹಿತ ಪಾದಗಳನ್ನು. ಮರ್ಯಾದಾ
ಪುರುಷೋತ್ತಮ ಶ್ರೀರಾಮನೇ ಪಾದುಕಾರಹಿತನಾಗಿ ನಡೆದಾಡಿದ್ದಾನೆಂದರೆ ನಮಗೂ ಅದು- ಯಾವಾಗಲೂ ಸಾಧ್ಯವಾಗಲಿಕ್ಕಿಲ್ಲ ವಾದರೂ ಆಗೊಮ್ಮೆ ಈಗೊಮ್ಮೆ- ಒಳ್ಳೆಯದೇ ಇರಬೇಕು ಎಂಬ ವಿಚಾರವನ್ನು.

ಪಾದುಕಾರಹಿತರಾಗಿ ಬರಿಗಾಲಲ್ಲಿ ನಡೆಯುವ ಮಹಾತ್ಮರು ನಮಗೆ ಆಗಾಗ ಕಾಣಸಿಗುತ್ತಾರೆ. ತಾಜಾ ಉದಾಹರಣೆ ಬೇಕೆಂದರೆ ಕೆಲ ದಿನಗಳ ಹಿಂದೆ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ನಮ್ಮ ಕರ್ನಾಟಕದ ಹರೇಕಳ ಹಾಜಬ್ಬ ಮತ್ತು ತುಳಸಿ ಗೌಡ ಇಬ್ಬರೂ ತಮ್ಮ ಸೀದಾಸಾದಾ ವೇಷಭೂಷಣದಲ್ಲಿ, ಬರಿಗಾಲಲ್ಲಿದ್ದ ದೃಶ್ಯ. ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿ ಎಲ್ಲರ ಮನಮುಟ್ಟಿತ್ತು. ಬರಿಗಾಲ ನಡಿಗೆಯನ್ನು ಅವರೇನೂ ಸೋಗಿಗಾಗಿ ಮಾಡಿದ್ದಲ್ಲ. ಅವರಿರುವುದೇ ಹಾಗೆ.

ಅದರಲ್ಲೂ ಹಾಜಬ್ಬರು ಪದ್ಮಪ್ರಶಸ್ತಿ ಸ್ವೀಕರಿಸುವ ಸಮಾರಂಭಕ್ಕೆಂದು ದೆಹಲಿಗೆ ಹೊರಡುವ ಮುನ್ನ ಯಾರದೋ ಸಲಹೆಗೆ ಕಿವಿಕೊಟ್ಟು ಒಂದು ಜೊತೆ ಚಪ್ಪಲಿ ಖರೀದಿಸಿದ್ದರಂತೆ. ಊರಿಂದ ಹೊರಟು ದೆಹಲಿಯಲ್ಲಿ ರಾಷ್ಟ್ರಪತಿ ಭವನವನ್ನು ತಲುಪುವವರೆಗೆ ಹೇಗೋ ಕಷ್ಟಪಟ್ಟು ಅದನ್ನು ಧರಿಸಿದ್ದರಂತೆ. ರಾಷ್ಟ್ರಪತಿ ಭವನದ ಸಭಾಂಗಣದಲ್ಲಿ ಕುರ್ಚಿಯ ಮೇಲೆ ಕುಳಿತುಕೊಂಡಾಗ ಬಹುಶಃ ಕಾಲುಗಳಿಂದ ಚಪ್ಪಲಿ ಕಳಚಿದ್ದರು. ಪ್ರಶಸ್ತಿ ಸ್ವೀಕರಿಸಲು ಅವರ ಹೆಸರನ್ನು ಕರೆದಾಗ ಗಡಿಬಿಡಿಯಲ್ಲಿ ಮರೆತು, ರತ್ನಗಂಬಳಿಯ ಮೇಲೆ ಬರಿಗಾಲಿನಲ್ಲಿ ನಡೆದು ಕೊಂಡು ಹೋಗಿ ರಾಷ್ಟ್ರಪತಿಗೆ ಕೈಮುಗಿದು ಪ್ರಶಸ್ತಿ ಸ್ವೀಕರಿಸಿ ಬಂದರು.

ಇತರ ದಿನಗಳಲ್ಲಿ ಬರಿಗಾಲಲ್ಲೇ ನಡೆದಾಡುವ ಅವರಿಗೆ ಅದೇ ಅಭ್ಯಾಸವಾಗಿ ಪ್ರಶಸ್ತಿ ಸ್ವೀಕರಿಸುವಾಗಲಾದರೂ ಚಪ್ಪಲಿ ಧರಿಸ ಬೇಕೆಂಬುದು ಮಹತ್ತ್ವದ ವಿಷಯವಾಗಲೇ ಇಲ್ಲ. ತುಳಸಿ ಗೌಡರಂತೂ ಕಾಡು ಗುಡ್ಡ ಬೆಟ್ಟ ಅಲೆಯುವಾಗಲೆಲ್ಲ ಚಪ್ಪಲಿ ಧರಿಸಿದವರೇ ಅಲ್ಲ. ಅದು ಹಾಜಬ್ಬ, ತುಳಸಿಗೌಡರಂಥ ಸಾಮಾನ್ಯರಲ್ಲಿ ಅತಿ ಸಾಮಾನ್ಯರ ಮಾತಾಯಿತು. ಇನ್ನು, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಕೆಲವು ಖ್ಯಾತನಾಮರ ನೆನಪನ್ನೂ ಇಲ್ಲಿ ಮಾಡಿಕೊಳ್ಳಬಹುದು.

ಗಣಪತಿ ವೆಂಕಟರಮಣ ಅಯ್ಯರ್ ಎಂದರೆ ಯಾರು ಅಂತ ನಿಮಗೆ ತತ್‌ಕ್ಷಣಕ್ಕೆ ಗೊತ್ತಾಗಲಿಕ್ಕಿಲ್ಲ. ಜಿ.ವಿ.ಅಯ್ಯರ್ ಅಂತಂದ್ರೆ ಗೊತ್ತಾಗು ತ್ತದೆ. ‘ಕನ್ನಡ ಚಲನಚಿತ್ರರಂಗದಲ್ಲಿ ವಿಶಿಷ್ಟ ಹೆಸರು. ಅವರನ್ನು ಕನ್ನಡ ಚಿತ್ರರಂಗದ ಭೀಷ್ಮ ಎಂದು ಬಣ್ಣಿಸುವುದೂ ಉಂಟು. ಅವರ ಆತ್ಮೀಯರು ತುಸು ಚೇಷ್ಟೆಯಿಂದ ಆದರೆ ಅಭಿಮಾನದಿಂದ ‘ಬರಿಗಾಲು ನಿರ್ದೇಶಕ’ ಎಂದು ಕರೆಯುತ್ತಿದ್ದುದೂ ಉಂಟು. ಬದುಕಿನ ಯಾವುದೇ ಒಂದು ಹಂತದಲ್ಲಿ ತಾನು ಚಪ್ಪಲಿ ಮೆಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಕೊನೆಯ ತನಕ ಬರಿಗಾಲಿನಲ್ಲಿ (ಕೊರೆಯುವ ಚಳಿ ಇರಲಿ, ಸುಡುವ ನೆಲ ಇರಲಿ) ನಡೆಯುತ್ತಿದ್ದುದರಿಂದ ಅವರಿಗೆ ಆ ಹೆಸರು ಅಂಟಿಕೊಂಡಿತ್ತು’ ಎನ್ನುತ್ತದೆ ಮೈಸೂರು ವಿಶ್ವವಿದ್ಯಾಲಯದ
ವಿಶ್ವಕೋಶ, ಜಿ.ವಿ.ಅಯ್ಯರ್ ಬಗೆಗಿನ ಮಾಹಿತಿ ಪುಟದಲ್ಲಿ.

ಪ್ರಸಿದ್ಧ ಮತ್ತು ಅಷ್ಟೇ ವಿವಾದಾತ್ಮಕ ಚಿತ್ರಕಲಾವಿದ ಮಕ್ಬೂಲ್ ಫಿದಾ ಹುಸೇನ್ ಸಹ ಪಾದರಕ್ಷೆಗಳನ್ನು ಧರಿಸದೇ ಬರಿಗಾಲಲ್ಲಿ ಓಡಾಡಿ ಕೊಂಡಿದ್ದವರು. ಅವರಿಗೆ ‘ಬೇರ್‌ಫೂಟ್ ಪಿಕಾಸೊ’ ಎಂಬ ಪ್ರಖ್ಯಾತಿಯೂ ಇತ್ತು. ಪ್ರತಿಷ್ಠಿತ ಹೋಟೆಲುಗಳಲ್ಲಿ, ಕ್ಲಬ್ಬುಗಳಲ್ಲಿ ಅವರಿಗೆ ಪಾದುಕಾರಹಿತರು ಎಂಬ ಕಾರಣದಿಂದ ಪ್ರವೇಶ ನಿರಾಕರಣೆ ಆದ ಪ್ರಸಂಗಗಳೂ ಇವೆ. ಸರಿಸುಮಾರು ೯೬ ವರ್ಷಗಳವರೆಗೆ ಬಾಳಿದ್ದ ಹುಸೇನ್ ಅವರನ್ನು ಟಿವಿ ಸಂದರ್ಶಕರೊಬ್ಬರು ‘ನಿಮ್ಮ ದೀರ್ಘಾಯುಷ್ಯದ ಗುಟ್ಟೇನು?’ ಎಂದು ಕೇಳಿದ್ದಕ್ಕೆ ‘ಆದಷ್ಟು ಕಡಿಮೆ ತಿನ್ನುವುದು ಮತ್ತು ಬರಿಗಾಲಲ್ಲಿ ನಡೆಯುವುದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಹಾಗೆ ನೋಡಿದರೆ ಬರಿಗಾಲಲ್ಲಿ ಓಡಾಡುವುದು ಶ್ರೇಷ್ಠತೆಯ ವ್ಯಸನವೂ ಅಲ್ಲ, ಬಡತನದ ಅನಿವಾರ್ಯವೂ ಅಲ್ಲ. ಜೈನ ದಿಗಂಬರ ಮುನಿಗಳದೋ, ಅವಧೂತರದೋ ಮಾತ್ರ ಲಕ್ಷಣವೂ ಅಲ್ಲ. ಹಿಂದೆಲ್ಲ ನಮ್ಮ ಹಳ್ಳಿಗಳಲ್ಲಿ ಅದೊಂದು ಜೀವನಕ್ರಮವೇ ಆಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ನನ್ನಂಥವರಿಗೆ, ಬಹುಶಃ ನನಗಿಂತಲೂ ನನ್ನ ಅಣ್ಣಂದಿರಿಗೆ-ಅಕ್ಕಂದಿರಿಗೆ, ಪ್ರಾಥಮಿಕ ಶಾಲೆಗೆ ಹೋಗುವಾಗ ಪಾದರಕ್ಷೆಗಳನ್ನು ಧರಿಸುವ ಕ್ರಮವಿರಲಿಲ್ಲ. ಅಷ್ಟೂ ಬಡತನ ಇತ್ತು ಅಂತ ಅಲ್ಲ. ಪಾದರಕ್ಷೆಗಳು ಪ್ರಾಥಮಿಕ ಅನಿವಾರ್ಯ ಆಗಿರಲೇ ಇಲ್ಲ. ನಮ್ಮ ಹಳ್ಳಿ ಶಾಲೆಗೆ ಎಷ್ಟೋ ವಿದ್ಯಾರ್ಥಿಗಳು ಬರಿಗಾಲಲ್ಲೇ ಬರುವವರು. ಪಾದರಕ್ಷೆಗಳನ್ನು ಧರಿಸಿ ಬರುವ ಕೊಂಚ ಮಟ್ಟಿನ ‘ಉಳ್ಳವರು’, ಮಾತ್ರವಲ್ಲ ಅಧ್ಯಾಪಕರು ಸಹಿತ ಶಾಲೆಯಲ್ಲಿ ತರಗತಿಯ ಕೋಣೆಯೊಳಗೆ ಹೋಗುವಾಗ ಪಾದರಕ್ಷೆಗಳನ್ನು ಹೊರಗೇ ಬಿಡಬೇಕಿತ್ತು. ಶಾಲೆಯ ಪಾವಿತ್ರ್ಯ ಎಷ್ಟಿತ್ತು ನೋಡಿ!

ದೇವಸ್ಥಾನದಲ್ಲಂತೂ ಹೊರಗಿನ ಪ್ರಾಕಾರದೊಳಕ್ಕೆ ಸಹ ಬರಿಗಾಲಲ್ಲಿ ಮಾತ್ರ ಪ್ರವೇಶ. ದೇವಸ್ಥಾನದ ದಾರಿಯಾಗಿ ನಡೆದುಕೊಂಡು ಹೋಗುವಾಗ ದೇವರ ದರ್ಶನ ಮಾಡಿಕೊಂಡು ಹೋಗುವಷ್ಟು ಪುರುಸೊತ್ತಿಲ್ಲದವರಾಗಿ, ದಾರಿಯಲ್ಲೇ ಒಂದು ಕ್ಷಣ ನಿಂತು ಪಾದರಕ್ಷೆ ಗಳನ್ನು ಕಳಚಿ ಕಣ್ಮುಚ್ಚಿ ದೇವರಿಗೆ ನಮಿಸಿ ಆಮೇಲೆ ಮುನ್ನಡೆಯುವುದು ಕೂಡ ಸಾಮಾನ್ಯ ದೃಶ್ಯ. ಪಾದುಕಾರಹಿತರಾದರೆ ಮಾತ್ರ ದೇವರು ತನ್ನನ್ನು ಅನುಗ್ರಹಿಸಬಹುದು ಎಂಬ ಪೂಜ್ಯಭಾವದ ಅಭಿವ್ಯಕ್ತಿ ಅದು.

ಮತ್ತೊಂದು ನೆನಪು ನಮ್ಮ ತಂದೆಯವರ ಪರಿಪಾಟದ್ದು. ಶ್ರಮಜೀವಿಯಾಗಿದ್ದ ಅವರು ಮನೆ ಸುತ್ತಲ ಕೆಲಸಗಳನ್ನು ಮಾಡುವಾಗ, ಅಡಕೆ ತೋಟಕ್ಕೆ ಹೋಗುವಾಗ ಬರಿಗಾಲಲ್ಲೇ ನಡೆಯುತ್ತಿದ್ದರು. ನಮ್ಮೂರಿಂದ ಕಾರ್ಕಳ ಪೇಟೆಗೋ ಅಥವಾ ಇನ್ನಾವುದೋ ದೂರದ ಊರಿಗೆ- ಮೊದಲೆಲ್ಲ ನಡೆದುಕೊಂಡೇ, ಆಮೇಲೆ ಬಸ್ ಸೌಕರ್ಯ ಶುರುವಾದ ಮೇಲೆ ಬಸ್‌ನಲ್ಲಿ- ಹೋಗುವಾಗ ಮಾತ್ರ ಪಾದರಕ್ಷೆ ಧರಿಸುತ್ತಿದ್ದರು. ಅಷ್ಟಾದರೂ ಪೇಟೆಯಲ್ಲಿ ಅವರ ನೆಚ್ಚಿನ ಅಂಗಡಿಮುಂಗಟ್ಟುಗಳೊಳಗೆ ಪ್ರವೇಶಿಸುವಾಗ ಪಾದರಕ್ಷೆಗಳನ್ನು ಕಳಚಿಟ್ಟು ಒಳಗೆ ಕಾಲಿಡುತ್ತಿದ್ದರು. ಕಾರ್ಕಳದಲ್ಲಿ ಪ್ರಖ್ಯಾತ ಟಿ.ವಾಸುದೇವ ನಾಯಕರ ಜವುಳಿ ಅಂಗಡಿಗೆ ನಮ್ಮ ತಂದೆಯವರು ಬಟ್ಟೆ ಖರೀದಿ ಇಲ್ಲದಿದ್ದರೂ ವಾಸುದೇವ ನಾಯಕರನ್ನು ಮಾತನಾಡಿಸಿ ಬರಲಿಕ್ಕಾದರೂ ಹೋಗುತ್ತಿದ್ದದ್ದುಂಟು. ಆಗಲೂ ಅಷ್ಟೇ.

ದೇವಸ್ಥಾನವನ್ನು ಪ್ರವೇಶಿಸಿದಂತೆ ಪಾದರಕ್ಷೆಗಳನ್ನು ಹೊರಗಿಟ್ಟೇ ಒಳನಡೆಯುತ್ತಿದ್ದರು. ಅಂಗಡಿಯ ಒಡೆಯನಿಗೆ ಅವನ ಅಂಗಡಿ ಯೆಂದರೆ ಅನ್ನವೊದಗಿಸುವ ದೇಗುಲ, ಅದನ್ನು ತಾನು ಗೌರವಿಸಬೇಕು, ಅದರ ಪಾವಿತ್ರ್ಯಕ್ಕೆ ತನ್ನಿಂದ ಕುಂದಾಗಬಾರದು ಎಂಬ ಸುಪ್ತಪ್ರeಯೊಂದು ಅವರಿಂದ ಹಾಗೆ ಮಾಡಿಸುತ್ತಿತ್ತೋ ಏನೋ. ಪಾದುಕಾರಹಿತ ಸ್ಥಿತಿಯ ಮಹತ್ತ್ವಕ್ಕೆ ಸಂಬಂಧಿಸಿದಂತೆಯೇ ನನಗೆ ಇನ್ನೂ ಒಂದು ನೆನಪಾಗುವುದೇನೆಂದರೆ ಎಂಜನಿಯರಿಂಗ್ ಕಾಲೇಜಿನಲ್ಲಿ ನನ್ನ ಸಹಪಾಠಿ ಕೇಶವಮೂರ್ತಿ ಎಂಬ ಸ್ನೇಹಿತನದು.
ಮೈಸೂರಿನಲ್ಲಿ ಹುಟ್ಟಿಬೆಳೆದು ಅಲ್ಲಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ ಮುಗಿಸಿ ಎಂಜಿನಿಯರಿಂಗ್ಗೆ ದಾವಣ ಗೆರೆಗೆ ಬಂದಿದ್ದ ಕೇಶವಮೂರ್ತಿ, ಹಾಸ್ಟೆಲ್‌ನಲ್ಲಿ ನನ್ನ ರೂಮ್‌ಮೇಟ್.

ಹಾಸ್ಟೆಲ್‌ನ ಮೆಸ್‌ನೊಳಕ್ಕೆ ಎಲ್ಲರೂ ಚಪ್ಪಲಿ ಹಾಕಿಕೊಂಡೇ ಹೋಗಿ ಹಾಗೆಯೇ ಊಟ ಮಾಡುತ್ತಿದ್ದದ್ದು ಕೇಶವಮೂರ್ತಿಗೆ ಮೊದಮೊದಲು ತೀರ ಇರುಸುಮುರುಸು ಆಗುತ್ತಿತ್ತು. ಅದನ್ನವನು ನಮ್ಮೆಲ್ಲರೊಂದಿಗೆ ವ್ಯಕ್ತಪಡಿಸುತ್ತಿದ್ದದ್ದೂ ಉಂಟು. ಕ್ರಮೇಣ ಅವನಿಗೂ ಚಪ್ಪಲಿ ಹಾಕಿಕೊಂಡಿರುವಾಗಲೇ ಊಟ ಮಾಡುವುದು ರೂಢಿಯಾಯಿತೆನ್ನಿ. ಆದರೆ ಒಟ್ಟಾರೆಯಾಗಿ ಮೆಸ್‌ಗಳಲ್ಲಿ ರೆಸ್ಟೊರೆಂಟ್‌ಗಳಲ್ಲೆಲ್ಲ ಊಟ ಮಾಡುವಾಗ ಚಪ್ಪಲಿಗಳನ್ನು ಕಾಲಿಂದ ಕಳಚಿಟ್ಟು ಊಟ ಮಾಡುವುದು ಈಗಲೂ ಎಷ್ಟೋ ಜನರ ಪರಿಪಾಟ. ರೆಸ್ಟೊರೆಂಟ್ ಅಷ್ಟೇ ಅಲ್ಲ, ಸಿನೆಮಾ ಥಿಯೇಟರ್‌ನಲ್ಲೂ!

ಕಳೆದ ತಿಂಗಳು ‘ಜಗನ್ನಾಥದಾಸರು’ ಕನ್ನಡ ಚಲನಚಿತ್ರ ಬಿಡುಗಡೆಯಾಗಿದ್ದಾಗ ಬೆಂಗಳೂರಿನ ಥಿಯೇಟರ್ ನಲ್ಲಿ ಅದನ್ನು ವೀಕ್ಷಿಸಿ ಬಂದ ಸ್ನೇಹಿತರೊಬ್ಬರು, ‘ಚಿತ್ರ ನೋಡ ಭಕ್ತಿಯಿಂದ ಎಷ್ಟು ಪರವಶನಾದೆನೆಂದರೆ ನನಗರಿವಿಲ್ಲದಂತೆಯೇ ಚಪ್ಪಲಿಗಳನ್ನು ಕಳಚಿಟ್ಟಿದ್ದೆ!’ ಎಂದು ಫೇಸ್‌ಬುಕ್‌ನಲ್ಲಿ  ಬರೆದುಕೊಂಡಿದ್ದರು.

ಎಷ್ಟೋ ಕಡೆ ಸಮಾರಂಭಗಳಲ್ಲಿ ವೇದಿಕೆಗೆ ಅಥವಾ ಮದುವೆ ಛತ್ರದಲ್ಲಿ ವೇದಿಕೆಯ ಮೇಲಿರುವ ಮಂಟಪದ ಹತ್ತಿರಕ್ಕೆ ಹೋಗುವಾಗ ಪಾದುಕಾರಹಿತರಾಗಿರಬೇಕೋ ಬೇಡವೋ ಎಂಬ ಇಬ್ಬಂದಿತನ ನಮ್ಮನ್ನು ಕಾಡುವುದಿದೆ. ಪಾದರಕ್ಷೆಗಳನ್ನು ಹಾಕಿಕೊಂಡೇ ಹೋದರೆ ದೊಡ್ಡಸ್ತಿಕೆ ತೋರಿದಂತಾಗುತ್ತದೆಯೋ ಏನೋ, ವೇದಿಕೆಯ ಪಾವಿತ್ರ್ಯವನ್ನು ಮಲಿನಗೊಳಿಸಿದಂತಾಗುತ್ತದೆಯೋ ಏನೋ ಎಂಬ ಅನುಮಾನ ಒಂದೆಡೆ. ಪಾದರಕ್ಷೆಗಳನ್ನು ಕಳಚಿಟ್ಟು ಹೋದರೆ ವಾಪಸ್ ಬಂದಾಗ ಆ ಜನಜಂಗುಳಿಯಲ್ಲಿ ಅವು ಎಲ್ಲಿ ಮಾಯವಾಗಿ ಬಿಡುತ್ತವೆಯೋ ಎಂಬ ಹೆದರಿಕೆ ಇನ್ನೊಂದೆಡೆ.

ಒಂದು ಮಾತಂತೂ ನಿಜ. ಚಪ್ಪಲಿ ಹಾಕೋದು ಬಿಡೋದು ಅವರವರ ಇಷ್ಟವಾದರೂ ಈ ಎಲ್ಲ ಸನ್ನಿವೇಶಗಳಲ್ಲಿ ನಮ್ಮೊಳಗಿನ ಸಂಸ್ಕಾರ-ಸಂಸ್ಕೃತಿಯ ಸೂಕ್ಷ್ಮಗಳು ಎಷ್ಟು ನವುರಾಗಿ ಪ್ರಸ್ತುತಗೊಳ್ಳುತ್ತವೆ ಎಂದು ಅನಿಸುವುದಿಲ್ಲವೇ? ವೈಯಕ್ತಿಕವಾಗಿ ನನಗೆ ‘ಮನೆಯೊಳಗೆ ಹಾಕಲಿಕ್ಕೆ ಮಾತ್ರ ಇರುವಂತಹ ಚಪ್ಪಲಿ’ ಅಥವಾ ‘ಔಷಧಿಯ ಗುಣ ಇರುವಂತಹ ಚಪ್ಪಲಿ’ ಅಂತೆಲ್ಲ ಏನೇ ಇದ್ದರೂ ಅವ್ಯಾವುವೂ ಅಷ್ಟು ಸಹ್ಯವಲ್ಲ. ಚಪ್ಪಲಿ ಹಾಕಿಕೊಂಡು ಮನೆಯೊಳಗೆ ಓಡಾಡುವುದೆಂದರೆ ಏನೋ ಮುಜುಗರ. ಹಾಗಾಗಿ ತೀವ್ರ ಚಳಿಗಾಲದಲ್ಲಿ ಒಂದೊಮ್ಮೆ ವಿಪರೀತ ಥಂಡಿ ಆವರಿಸಿದ್ದರೂ ಮನೆಯೊಳಗೆ ನನ್ನದು ಯಾವತ್ತಿಗೂ ಬರಿಗಾಲೇ.

ಪಾವಿತ್ರ್ಯದ ದೃಷ್ಟಿಯಿಂದಲ್ಲ, ಡ್ಯಾಷ್‌ಬೋರ್ಡ್ ಮೇಲೆ ಗಣೇಶ ಇದ್ದಾನೆ ಎಂಬ ಕಾರಣದಿಂದಲ್ಲ, ಆದರೆ ವರ್ಷಗಳ ಹಿಂದೆ ಕಾರ್ ಡ್ರೈವಿಂಗ್ ಕಲಿಯುವಾಗಿನಿಂದಲೂ ಆದ ಅಭ್ಯಾಸ ದಿಂದಾಗಿ, ಕಾರ್ ಡ್ರೈವ್ ಮಾಡುವಾಗ ಈಗಲೂ ನನ್ನದು ಬರಿಗಾಲೇ. ಎಕ್ಸಿಲರೇಟರ್ ಮತ್ತು ಬ್ರೇಕ್ ಎಷ್ಟು ಪ್ರಮಾಣದಲ್ಲಿ ಒತ್ತುತ್ತಿದ್ದೇನೆ ಎಂದು ನಿಖರವಾಗಿ ಅನುಭವಕ್ಕೆ ಬರುವುದು ಪಾದುಕಾರಹಿತ ಸ್ಥಿತಿಯಲ್ಲಿ ಕಾರು ಚಾಲನೆ ಮಾಡಿದರೆ ಮಾತ್ರ ಎಂದು ನನ್ನ ಅಂಬೋಣ. ನನ್ನ ಈ ವಿಚಿತ್ರ ಅಭ್ಯಾಸವನ್ನು ನೋಡಿದ ಕೇಳಿದ ಎಷ್ಟೋ ಜನ ಈ ಬಗ್ಗೆ ಆಶ್ಚರ್ಯಚಿಹ್ನೆ ಗಳಾದದ್ದೂ ಇದೆ.

ಅವರಿಗೆಲ್ಲ ಪಾದುಕಾರಹಿತ ಸ್ಥಿತಿಯ ಅಧ್ಯಾತ್ಮ ತತ್ತ್ವಗಳನ್ನು ನಾನು ಬೋಽಸುವುದಿಲ್ಲವಾದರೂ (ಏಕೆಂದರೆ ಕಾರಿನಿಂದ ಇಳಿದು
ನಡೆದಾಡುವಾಗ ನಾನೂ ಪಾದರಕ್ಷೆಗಳನ್ನು ಧರಿಸುವವನೇ) ಒಂದು ರೀತಿಯ ಸಂತೋಷ, ಹೆಮ್ಮೆ ನನಗಾಗುತ್ತದೆ. ಮನೆಯೊಳಗೆ ಪ್ರವೇಶಿಸುವಾಗ, ಗುರುಹಿರಿಯರೆದುರು ನಿಲ್ಲುವಾಗ, ಪಾದರಕ್ಷೆಗಳನ್ನು ತೆಗೆದಿಡಬೇಕು ಎಂಬ ಪದ್ಧತಿ ದ್ವಾಪರ ಯುಗದಲ್ಲಿಯೂ ಇತ್ತೆಂದು ಹೇಳುತ್ತದೆ ಹರಿಕಥೆಯೊಂದರಲ್ಲಿ ಕೇಳಿದ ಉಪಕಥೆ. ಮಹಾಭಾರತ ಯುದ್ಧದಲ್ಲಿ ಪಾಂಡವರಿಗೇ ಜಯ ಸಿಗಬೇಕೆಂದು ಬಯಸಿದ್ದ ಕೃಷ್ಣ, ಒಮ್ಮೆ ಧರ್ಮರಾಯನನ್ನು ಭೀಷ್ಮರಲ್ಲಿಗೆ ಕಳುಹಿಸಲು ಯೋಚಿಸುತ್ತಾನೆ.

ಶಿಖಂಡಿಯನ್ನು ಭೀಷ್ಮನೆದುರು ಸೆಣಸಾಟಕ್ಕಿಳಿಸುವ ಉಪಾಯದ ಮೊದಲ ಹೆಜ್ಜೆ ಅದು. ಆದರೆ ಕೊನೆ ಕ್ಷಣದಲ್ಲಿ ಧರ್ಮರಾಯನಿಗಿಂತ ದ್ರೌಪದಿಯೇ ಭೀಷ್ಮನ ಬಳಿ ಹೋಗಿ ಆಶೀರ್ವಾದ ಪಡೆದರೆ ಒಳ್ಳೆಯದೆಂದು ಯೋಚಿಸಿದ ಕೃಷ್ಣ, ದ್ರೌಪದಿಯನ್ನು ಭೀಷ್ಮನ ಶಿಬಿರಕ್ಕೆ ರಹಸ್ಯವಾಗಿ ಒಯ್ದು ಒಳಗೆ ಕಳುಹಿಸುತ್ತಾನೆ. ಆಕೆ ಪಾದರಕ್ಷೆಗಳನ್ನು ಹೊರಗೆ ಕಳಚಿಟ್ಟು ಒಳನಡೆಯುತ್ತಾಳೆ. ಅವೇನಾದರೂ ಕೌರವ ಗೂಢಚಾರರ ಕಣ್ಣಿಗೆ ಬಿದ್ದರೆ? ದೊಡ್ಡ ಗಂಡಾಂತರವಾದೀತು! ಹಾಗಾಗದಿರಲೆಂದು ಕೃಷ್ಣ ಅವುಗಳನ್ನು ಕಂಕುಳಲ್ಲಿ ಬಚ್ಚಿಟ್ಟು ಕೊಂಡು ಮರೆಯಲ್ಲಿ ನಿಲ್ಲುತ್ತಾನೆ. ಭೀಷ್ಮನಿಗೆ ಅದು ಹೇಗೋ ಗೊತ್ತಾಗಿ ಹೊರಬಂದು ಕೃಷ್ಣನನ್ನು ಅಪ್ಪಿಕೊಳ್ಳುತ್ತಾನೆ.

ಪಾದರಕ್ಷೆಗಳು ಕೆಳಗೆ ಬೀಳುತ್ತವೆ. ‘ನಿನ್ನ ಪಾದರಕ್ಷೆಗಳನ್ನು ಶ್ರೀಕೃಷ್ಣನೇ ಕಂಕುಳಲ್ಲಿ ಮುಚ್ಚಿಟ್ಟುಕೊಳ್ಳಲಿಕ್ಕಿದ್ದಾನೆಂದ ಮೇಲೆ ಯುದ್ಧದಲ್ಲಿ ನಿನಗಲ್ಲದೆ ಮತ್ತ್ಯಾರಿಗೆ ಜಯ? ನಿಶ್ಚಿಂತಳಾಗಿ ಹೋಗು’ ಎಂದು ಭೀಷ್ಮ ದ್ರೌಪದಿಯನ್ನು ಬೀಳ್ಕೊಡುತ್ತಾನೆ. ದ್ರೌಪದಿಯ ಪಾದುಕಾರಹಿತ ಸ್ಥಿತಿಗೆ, ತನ್ಮೂಲಕ ಭೀಷ್ಮರಿಗೆ ಆಕೆ ಸಲ್ಲಿಸಿದ ಗೌರವಕ್ಕೆ ಪ್ರತಿಯಾಗಿ ಸಿಕ್ಕ ಜಯ! ಅದು ದ್ವಾಪರ ಯುಗದ ಕಥೆ. ಕಲಿಯುಗದಲ್ಲಿ ನಾಗರಿಕತೆ ಬೆಳೆದಂತೆಲ್ಲ ಪಾದರಕ್ಷೆಗಳು ಮನೆಯೊಳಗೂ ಬಂದವು ಎನ್ನುವುದು ಗೊತ್ತಿರುವ ಸತ್ಯವೇ. ಆದರೆ ಮನೆಯ ಒಳಗಷ್ಟೇ ಅಲ್ಲ ಹೊರಗೆ ಕೂಡ, ಸಾಧ್ಯವಾದರೆ ಮಣ್ಣಿನ ಮೇಲೆ ಅಥವಾ ಹುಲ್ಲಿನ ಮೇಲೆ, ಹೊತ್ತಾದರೂ ಬರಿಗಾಲಲ್ಲಿ ನಡೆದಾಡುವ ಅಭ್ಯಾಸ
ಆರೋಗ್ಯಕ್ಕೆ ಒಳ್ಳೆಯದು.

ಇದು ವೈಜ್ಞಾನಿಕವಾಗಿಯೂ ಸಾಬೀತಾಗಿರುವ ವಿಚಾರ. ನಮ್ಮ ಶರೀರವು ವಿದ್ಯುತ್ ವಾಹಕವೇ ಆದ್ದರಿಂದ, ಭೂಮಿಯ ಮೇಲ್ಮೈಯು ಹೊರಸೂಸುವ ಎಲೆಕ್ಟ್ರಾನ್‌ಗಳ ನೇರ ಸಂಪರ್ಕಕ್ಕೆ ಬಂದಾಗ, ಶರೀರದಲ್ಲಿ ಪ್ರವಹಿಸುವ ವಿದ್ಯುದಂಶ ಬಹಳ ಪ್ರಯೋಜನಕಾರಿ. ನಿದ್ರಾ ಹೀನತೆ, ಊತ, ಮೈ ಉರಿ ಮುಂತಾದುವುಗಳ ನಿವಾರಣೆಗೆ, ಹೃದಯವನ್ನು ಸುಸ್ಥಿತಿ ಯಲ್ಲಿಡುವುದಕ್ಕೆ, ಕಣ್ಣಿನ ದೃಷ್ಟಿ ಉತ್ತಮ ವಾಗಿರುವುದಕ್ಕೆ ಬರಿಗಾಲ ನಡಿಗೆ ತುಂಬ ಒಳ್ಳೆಯದೆಂದು ವೈದ್ಯಕೀಯ ಅಧ್ಯಯನಗಳು ಕಂಡುಕೊಂಡಿವೆ.

‘ನೇರವಾಗಿ ಭೂಸ್ಪರ್ಶವಾದ ಪಾದಗಳ ಚರ್ಮ, ಗ್ರಂಥಿಗಳು, ಅಸ್ಥಿಮಜ್ಜೆ, ಮತ್ತು ನರಗಳು ಮಿದುಳಿಗೂ ಬೆನ್ನುಮೂಳೆಗೂ ಪಾದದ ಬಗೆಗಿನ ಮಾಹಿತಿಯನ್ನು ಹೆಚ್ಚು ನಿಖರವಾಗಿ ತಲುಪಿಸಬಲ್ಲವು. ಓಡುವಾಗ ಅಥವಾ ನಡೆಯುವಾಗ ಪಾದಗಳ ಮೇಲೆ ಎಷ್ಟು ಒತ್ತಡ ಬೀಳುತ್ತಿದೆ, ಪಾದಗಳು ಯಾವ ಕೋನದಲ್ಲಿ ಬಾಗಿವೆ/ಬಗ್ಗಬೇಕಿದೆ ಮುಂತಾದ ವಿವರಗಳು ನಿಖರವಾಗಿದ್ದಷ್ಟೂ ದೇಹದ ಸ್ನಾಯುಗಳು ಮತ್ತು ಸಂದಿಗಳು ಹೇಗೆ ಕಾರ್ಯವೆಸಗಬೇಕು ಎಂಬುದರ ನಿಖರತೆಯೂ ಹೆಚ್ಚುತ್ತದೆ. ಎಡವುವುದು, ಉಳುಕುವುದು ಮುಂತಾದ ಅಪಾಯ ಗಳು ಕಡಿಮೆಯಾಗುತ್ತವೆ.

ಒಟ್ಟಾರೆಯಾಗಿ ದೇಹ ಸುಸ್ಥಿತಿಯಲ್ಲಿರುತ್ತದೆ’ ಎನ್ನುವುದು ಈ ಅಧ್ಯಯನಗಳ ತಿರುಳು. ಅಂದರೆ ಶೂ ಕಂಪನಿಗಳ ಜಾಹೀರಾತುಗಳೆಲ್ಲ ಬೊಗಳೆ ಅಂತಾಯ್ತು! ಸರಿ, ಪಾದುಕಾರಹಿತ ಸ್ಥಿತಿಯನ್ನು ಇಷ್ಟೆಲ್ಲ ವ್ಯಾಖ್ಯಾನಿಸಿದ ಮೇಲೆ ‘ಬಂಗಾರದ ಮನುಷ್ಯ’ ಚಿತ್ರದ ಕೊನೆಯ ದೃಶ್ಯವೇ ಇದಕ್ಕೆ ತಕ್ಕುದಾದ ಉಪಸಂಹಾರ. ಆ ಚಿತ್ರವನ್ನು ನೋಡಿರುವ ಪ್ರತಿಯೊಬ್ಬರ ಮನಸ್ಸಿನಲ್ಲೂ ಆಚ್ಚಳಿಯದೇ ನಿಲ್ಲುವ ದೃಶ್ಯ ವದು.

ಊಟ ಮಾಡುತ್ತಿರುವಾಗಲೂ ಚುಚ್ಚುವ ಕೆಟ್ಟ ಮಾತುಗಳು ಕೇಳಿಬಂದಾಗ, ಕೈಗೆತ್ತಿಕೊಂಡ ತುತ್ತನ್ನೂ ಅಲ್ಲೇ ಬಿಟ್ಟು ಮನೆಯಿಂದ ಹೊರ ನಡೆಯುವ ರಾಜೀವ(ಡಾ. ರಾಜಕುಮಾರ್) ಪಾದರಕ್ಷೆಗಳನ್ನು ಒಮ್ಮೆ ಹಾಕಿಕೊಂಡರೂ ಆಮೇಲೆ ಅವುಗಳನ್ನೂ ಅಲ್ಲಿಯೇ
ಬಿಟ್ಟು ಪಾದುಕಾರಹಿತನಾಗಿಯೇ ನಡೆಯುತ್ತ ದೂರ ದೂರ ದೂರ… ಸಾಗಿ ಅಂತರ್ಧಾನನಾಗುವ ಹೃದಯಸ್ಪರ್ಶಿ ದೃಶ್ಯ. ಎಷ್ಟೆಂದರೂ ಆತ ಬರಿಗಾಲಲ್ಲಿ ನಡೆಯುತ್ತ ದಿಗಂತದತ್ತ ಸಾಗುವ ಬಂಗಾರದ ಮನುಷ್ಯ!