ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
dascapital1205@gmail.com
ಹಿಜಾಬ್‌ನಂತೆ ಇದೊಂದು ಸಣ್ಣ ಸಂಗತಿ. ಆದರೆ ಹಿಜಾಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಂಡವರು ಕಾಂಗ್ರೆಸ್ಸಿಗರು!
ವಿಧಾನಸಭೆಯ ಅಧಿವೇಶನ ಆರಂಭವಾಗಿದೆ. ಆದರೆ ಅದು ನಡೆಯುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ. ಅಷ್ಟಕ್ಕೂ ಅದು ನಡೆಯುವುದೇ
ಇತ್ತೀಚಿನ ದಿನಗಳಲ್ಲಿ ಬಲು ವಿಚಿತ್ರವಾಗಿ! ಅದರಲ್ಲೂ ಈಗೀಗಂತೂ ಅಽವೇಶನದ ಹೆಸರಿನಲ್ಲಿ ಏನು ಬೇಕಾದರೂ ನಡೆಯುತ್ತೆ ಎಂಬುದು ಜನರಿಗೆ ಮನವರಿಕೆಯಾಗಿ ಹೋಗಿದೆ. ಯಾವ ಗಾಂಭೀರ್ಯವೂ ಇಲ್ಲದ ರಾಜಕಾರಣದಲ್ಲಿ ಏನು ಹುರುಳಿರಲು ಸಾಧ್ಯ ಹೇಳಿ? ಈಗ ನಡೆಯುತ್ತಿರುವ ರಾಜಕೀಯದ ಸೀರಿಯಲ್ಲನ್ನು ಗುಮಾನಿಯಿಂದಲೂ ನೋಡಲು ಉತ್ಸುಕತೆಯಿಲ್ಲದಾಗಿದೆ.
ಸೀರಿಯಲ್ಲುಗಳನ್ನು ನೋಡಬಹುದು. ಬೇಡವಾದರೆ ಬಿಡಬಹುದು. ಆದರೆ, ಈ ರಾಜಕೀಯದ ಸೀರಿಯಲ್ಲನ್ನು ನೋಡಲೇಬೇಕಾಗಿದೆ. ಯಾವ ತಾದಾತ್ಮ್ಯವನ್ನೂ ನಿತ್ಯ ಬದುಕಿಗೆ ರಾಜಕೀಯ ಹೊಂದಿಲ್ಲವಾದರೂ ನನ್ನಂಥವರಿಗೆ ರಾಜಕೀಯದ ಸ್ಪರ್ಶವಿಲ್ಲದೆ ನಿತ್ಯದ ಬದುಕು ಸಾಗುವಂತಿಲ್ಲ. ಯಾವ ಭಾವನೆಗಳನ್ನೂ ರಾಜಕೀಯದ ಈ ಸೀರಿ ಯಲ್ಲು ಹುಟ್ಟಿಸಲಾರದು. ಯಾವ ನಿರೀಕ್ಷೆಗಳನ್ನೂ, ಭರವಸೆಗಳನ್ನೂ ಉಳಿಯಗೊಡದೆ, ನಮ್ಮೆಲ್ಲ ಆಲೋಚನೆಗಳನ್ನು ಸಾಯಿಸುತ್ತಿವೆ. ರಾಜಕೀಯದ ಎಲ್ಲ ಸನ್ನಿವೇಶಗಳು ಕೇವಲ ಭ್ರಮೆಗಳಾಗಿ ಕಾಣತೊಡಗಿವೆ.
ಪಾತ್ರಗಳು ಕೇವಲ ತಮ್ಮ ತೆವಲಿಗಾಗಿ ಆಡುವ ಈ ನಾಟಕದಲ್ಲಿ ನೋಡುವವರ ಮನಸ್ಸಿನ ಆರೋಗ್ಯ ಕೆಡುತ್ತಾ ಹೋಗುತ್ತದೆ. ರಾಗ ದ್ವೇಷಗಳಿಂದ ಕಲುಷಿತಗೊ ಳಿಸುತ್ತದೆ. ನಿತ್ಯದ ಬದುಕಿಗೆ ಆತಂಕವನ್ನೂ, ಅನಿಶ್ಚಿತತೆಯನ್ನೂ ಹುಟ್ಟಿಸುತ್ತದೆ. ಮಾತಿಗೂ, ಕೃತಿಗೂ ಆತ್ಮವಂಚನೆಯಿಂದ ಒಂದು ವ್ಯತ್ಯಾಸ ಹುಟ್ಟುತ್ತದೆ. ಇನ್ನೊಂದು ಉದ್ದೇಶಪೂರ್ವಕವಾದ ವ್ಯತ್ಯಾಸ ಹುಟ್ಟುತ್ತದೆ. ರಾಜಕೀಯ ಭಂಡತನ ಆದಾಗ ಮಾತು ಕೃತಿಗಳು ಸತ್ವವನ್ನು ಕಳೆದುಕೊಂಡು ಸಾಯುತ್ತವೆ. ತಾತ್ವಿಕವಾದ ನೆಲೆಯಲ್ಲಿ ರಾಜಕೀಯವನ್ನು ನೋಡುವವರಿಗೂ ಇಂದಿನ ರಾಜಕೀಯ ಹೇಸಿಗೆಯನ್ನು ಹುಟ್ಟಿಸಿವೆ.
ಪ್ರತ್ಯಕ್ಷವಾಗಿ ರಾಜಕೀಯದಲ್ಲಿ ಇಲ್ಲದಿದ್ದರೂ ರಾಜಕೀಯವನ್ನು ನೈತಿಕವಾಗಿ, ತಾತ್ವಿಕವಾಗಿ ನೋಡುವುದಕ್ಕೆ ಯಾವ ನೆಲೆಯಲ್ಲೂ ಸಾಧ್ಯವಿಲ್ಲವೇನೋ ಅನಿಸಿ ನಾವೆಲ್ಲ ಮೂರ್ಖರಾಗುತ್ತಿದ್ದೇವೆ. ಕಾಂಗ್ರೆಸ್ ತಪ್ಪಿ ನಡೆದರೆ ಉಳಿದೆಲ್ಲ ಪಕ್ಷಗಳೂ ಒಂದಾಗುತ್ತವೆ. ಬಿಜೆಪಿ ತಪ್ಪಿ ನಡೆದರೆ ಕಾಂಗ್ರೆಸ್ ಮತ್ತಿತರರು ಒಂದಾಗುತ್ತಾರೆ. ಈ ಒಂದಾಗುವಿಕೆ ಕೇವಲ ಓಟ್ ಬ್ಯಾಂಕ್ ರಾಜಕಾರಣದ ಸಾಧನೆಯೇ ಹೊರತು ಬೇರೆ ಯಾವ ಸಾಧನೆಯೂ ಇರುವುದಿಲ್ಲ.
ಒಂದು ಪಕ್ಷ ಅರಾಜಕೀಯವನ್ನು ಸೃಷ್ಟಿಸಿದರೆ ಸಹಜವಾಗೇ ನಮ್ಮ ಮನಸ್ಸು ಇನ್ನೊಂದು ಪಕ್ಷವನ್ನು ಬೆಂಬಲಿಸುತ್ತದೆ. ಹೀಗೆ ಯಾವ ಪೂರ್ವಾಪರ ಆಲೋಚೆನೆಯೂ ಇಲ್ಲದೆ ನಾವು ಕ್ರಮಿಸುವ ರೀತಿಯನ್ನು ರಾಜಕೀಯ ಪಕ್ಷಗಳು ಎನ್ ಕ್ಯಾಶ್ ಮಾಡಿಕೊಳ್ಳುವುದನ್ನು ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯದಲ್ಲಿ ನಡೆಯುತ್ತ ಬಂದಿದೆ. ಯಾರು ಏನೇ ಹೇಳಿದರೂ ದೇಶವೇ ಎಲ್ಲರಿಗೂ ಮುಖ್ಯ ಎಂಬುದು ಸಾರ್ವಕಾಲಿಕ ಸತ್ಯವಾಗಬೇಕಿದೆ ಎಂತ ಅನಿಸಲೇಬೇಕು ಎಂಬ ಮಾತಿಗೆ ಪೂರ್ಣಪ್ರಮಾಣದ ಜೀವ ಇನ್ನೂ ಬಂದಂತಿಲ್ಲ.
ವಿಷಯ ಇಷ್ಟೆ: ವಿಧಾನಸಭೆಯಲ್ಲಿ ಅಹೋರಾತ್ರೆ ಧರಣಿಗೆ ಕಾಂಗ್ರೆಸ್ ಪ್ರವೃತ್ತರಾಗಿ ನಾಕು ದಿನಗಳು ಕಳೆದವು. ರಾಜ್ಯದ ಯಾವುದೋ ನಿರ್ದಿಷ್ಟ ಅಥವಾ ಸಮಷ್ಟಿಯ ಹಿತದ ಹಿನ್ನೆಲೆಯಲ್ಲಿ ತೊಡಗಿಸಿಕೊಂಡ ಗಂಭೀರವಾದ ಹಠಸಾಧನೆಯಂತೂ ಈ ಧರಣಿಯ ಹಿಂದೆಯಿಲ್ಲ ಎಂಬುದು ಪಬ್ಲಿಕ್ ಸೀಕ್ರೆಟ್. ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಈಶ್ವರಪ್ಪನವರ ಮಾತನ್ನು ಬಲವಾಗಿಟ್ಟುಕೊಂಡೇ
ಖಂಡಿಸುವ ಭರದಲ್ಲಿ ಉದ್ದೇಶಪೂರ್ವಕವಾಗಿ ಅವರನ್ನು ಕಾಂಗ್ರೆಸ್, ಅದರಲ್ಲೂ ಪಕ್ಷಾಧ್ಯಕ್ಷರಾದ ಡಿಕೆಶಿ, ರಾಷ್ಟ್ರದ್ರೋಹಿ ಎಂದು ಈಶ್ವರಪ್ಪನವರನ್ನು ಕರೆದದ್ದು ಎಲ್ಲರಿಗೂ ತಿಳಿದಿದೆ.
ಇದಕ್ಕೆ ಪ್ರತಿಯಾಗಿ ಈಶ್ವರಪ್ಪನವರು, ನಾನು ರಾಷ್ಟ್ರದ್ರೋಹಿಯಲ್ಲ, ನೀನು ರಾಷ್ಟ್ರದ್ರೋಹಿ, ನಿನ್ನಪ್ಪ ರಾಷ್ಟ್ರದ್ರೋಹಿ ಎಂದು ಮಾತಿನ ಓಘದಲ್ಲಿ ಬಾಯ್ತಪ್ಪಿಯೋ, ಅಭ್ಯಾಸ ಬಲವೋ, ರೂಢಿಯೋ ಎಂಬಂತೆ ಒಂದೇ ಧಾಟಿಯಲ್ಲಿ ಪಿತ್ತ ನೆತ್ತಿಗೇರಿಸಿಕೊಂಡು ಅತೀ ಸಿಟ್ಟು ಗೊಂಡು ಆಡಿಬಿಟ್ಟಿದ್ದಾರೆ. ಡಿಕೆಶಿಯವರ ಅಪ್ಪನ ವಿಚಾರ ಎತ್ತಿ ಆಡಿದ್ದು ತಪ್ಪೇ ತಪ್ಪು ಎಂಬುದರಲ್ಲಿ ಯಾವ ಎರಡನೆಯ ಮಾತೂ ಇಲ್ಲ.
ಆಕಸ್ಮಾತ್ತೋ, ಅಚಾನಕ್ಕೋ ಆದರೂ ಇದಕ್ಕೆ ಕ್ಷಮೆಯಿಲ್ಲ.
ಅವರ ಮಾತನ್ನು ಖಂಡಿಸುವ ಕಾಂಗ್ರೆಸ್ಸಿನ ರೀತಿಯೂ ಮಾರ್ಗವೂ ಯೋಗ್ಯವಾಗಿರಬೇಕಿತ್ತು. ಅಂದರೆ, ಸದನದಲ್ಲೇ ತನ್ನ ಮಾತನ್ನು ಹಿಂತೆಗದುಕೊಳ್ಳುವ ಮತ್ತು ಕ್ಷಮೆಯಾಚನೆಯನ್ನು ಈಶ್ವರಪ್ಪನವರಲ್ಲಿ ಆಗ್ರಹಿಸಬೇಕಿತ್ತು. ಅದನ್ನು ಮಾಡದೆ ಅಧಿವೇಶನವೇ ನಡೆಯ ದಂತೆ ಸದನದ ಬಾವಿಗಿಳಿದು ಪ್ರತಿಭಟಿಸುವ, ಅಹೋರಾತ್ರೆ ಧರಣಿ ಕೂರುವಂಥ ಕ್ರಮಕ್ಕೆ ಕಾಂಗ್ರೆಸ್ ಮುಂದಾದದ್ದು, ವಿಚಿತ್ರವಷ್ಟೇ ಅಲ್ಲ, ಖಂಡಿತವಾಗಿಯೂ ತಪ್ಪೇ ತಪ್ಪು. ಇದರಲ್ಲಿ ೨ನೇ ಮಾತೂ ಇಲ್ಲ. ಕ್ಷಮೆಯೂ ಇಲ್ಲ. ಯಾಕೆಂದರೆ, ಕಾಂಗ್ರೆಸ್ ವೈಯಕ್ತಿಕವಾದ ನೆಲೆಯಲ್ಲಿ ಈ ಧರಣಿಯನ್ನು ಮಾಡುತ್ತಿರುವುದು.
ರಾಜ್ಯದ ಹಿತ ಇದರಲ್ಲಿಲ್ಲ. ಇರುವುದು ವೈಯಕ್ತಿಕವಾದ ಒಣ ಪ್ರತಿಷ್ಠೆಯಷ್ಟೆ! ಇದು ಜನರಿಂದ ಆಯ್ಕೆಯಾಗಿ ಹೋದವರು ಮಾಡುವಂಥ ಕಾರ್ಯವಲ್ಲ. ನಿರ್ದಿಷ್ಟ ಗುರಿಸಾಧನೆಯಂತೂ ಇದರಲ್ಲಿ ಇಲ್ಲವೇ ಇಲ್ಲ. ಹಾಗಂತ, ಬಿಜೆಪಿಯ ವರ್ತನೆಯೂ ಸಮರ್ಥನೀಯವಲ್ಲ. ಆದರೆ, ಈಶ್ವರಪ್ಪನವರೇ ತನ್ನ ಮಾತಿಗೆ ಪಶ್ಚಾತ್ತಾಪ ಪಟ್ಟಿದ್ದಾರೆ. ಇದು ಆಡುಮಾತಲ್ಲಿ ಆಡಿಹೋದದ್ದು ಎಂದು ಹೇಳಿಕೊಂಡಿದ್ದಾರೆ. ಅಲ್ಲಿಗೆ ತನ್ನ ತಪ್ಪು ಏನೆಂಬುದು ಅವರಿಗೆ ಮನವರಿಕೆಯಾಗಿದೆ. ನೀನು ಕಳ್ಳ, ನಿನ್ನಪ್ಪ ಕಳ್ಳ ಎಂದು ಹಾದಿಬೀದಿಯ ಜಗಳದಲ್ಲಿ ಬೈದಾಡಿಕೊಳ್ಳುವ
ಮಾತೊಂದಿದೆ. ಆ ಭರದಲ್ಲಿ ಹಾಗೆಯೇ ನಾನು ಮಾತಾಡಿದ್ದೇನೆ. ಡಿಕೆಶಿಯವರ ತಂದೆಯವರ ಬಗ್ಗೆ ನನಗೆ ಗೌರವವಿದೆ ಎಂದೂ ಹೇಳಿ ಕೊಂಡಿದ್ದಾರೆ. ಅಂದರೆ ಅಭ್ಯಾಸ ಬಲ, ಲೋಕರೂಢಿಯ ಬಲ!
ಯಾಕೋ ಏನೋ ಕಾಂಗ್ರೆಸ್ಸಿನ ಈ ನಡೆಯಲ್ಲಿ ಬೇರೆಯದೇ ಆದ ಹುನ್ನಾರ ಕಾಣಿಸುತ್ತದೆ. ಹಿಜಾಬ್‌ನಂತೆ ಇದೊಂದು ಸಣ್ಣ ಸಂಗತಿ. ಆದರೆ ಹಿಜಾಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಂಡವರು ಕಾಂಗ್ರೆಸ್ಸಿಗರು! ಆಗಬಾರದ್ದು ಆಗಿಯೇ ಬಿಟ್ಟಿದೆ ಎನ್ನುವುದಕ್ಕೆ ಇದು ಖಲಿಸ್ತಾನ ಉಗ್ರರು ಕೆಂಪುಕೋಟೆಯ ಮೇಲೇರಿ ರಾಷ್ಟ್ರಧ್ವಜವನ್ನು ಇಳಿಸಿ ಖಲಿಸ್ತಾನ ಧ್ವಜವನ್ನು ಹಾರಿಸಿದ ದುರಂತವೇನೂ ಅಲ್ಲ!
ಹಾಗಂತ ಈಶ್ವರಪ್ಪನವರು ಅಥವಾ ಅವರಂಥವರು ಹೇಳಿದರು ಎಂದ ಮಾತ್ರಕ್ಕೆ ಯಾರಿಗೂ ರಾಷ್ಟ್ರಧ್ವಜ ಅಂತಲ್ಲ, ಯಾವುದೇ ವಿಷಯ ದಲ್ಲೂ ಕೂಡ ದೇಶವಿರೋಧಿಯಾಗಿ ಅಭಿವ್ಯಕ್ತಿಸುವುದಕ್ಕೆ ಹಕ್ಕಿಲ್ಲ. ಈ ದೇಶ ಬಿಜೆಪಿಯದ್ದೂ ಅಲ್ಲ, ಕಾಂಗ್ರೆಸ್ಸಿನದ್ದೂ ಅಲ್ಲ, ಇತರ
ಯಾವುದೇ ರಾಜಕೀಯ ಪಕ್ಷಗಳದ್ದೂ ಅಲ್ಲ. ಯಾವ ನಿರ್ದಿಷ್ಟ ಜಾತಿಮತಧರ್ಮಗಳದ್ದೂ ಅಲ್ಲ. ನಿಜವಾಗಿ ಇಂಥ ಪ್ರತಿಭಟನೆಯನ್ನು ಬಹುದೊಡ್ಡ ಮಟ್ಟದಲ್ಲಿ ಅಂದರೆ ರಾಷ್ಟ್ರವ್ಯಾಪಿ ಕಾಂಗ್ರೆಸ್ ಮಾಡಬೇಕಾಗಿದ್ದುದು ಕೆಂಪುಕೋಟೆಯಲ್ಲಿ ಆದ ದುರಂತದ ಸಂದರ್ಭದಲ್ಲಿ! ಆವಾಗ ಡಿಕೆಶಿಗೆ ಕಣ್ಣೀರು ಬರಬೇಕಿತ್ತು. ಬರಬೇಕಾದ ಸಂದರ್ಭದಲ್ಲಿ ಬರದ ಕಣ್ಣೀರು ಇಂಥ ವಿಚಾರಗಳಲ್ಲಿ ಬಂತು ಎಂದರೆ ಏನರ್ಥ? ಏನು ಪ್ರಯೋಜನ? ಸ್ಪೀಕರ್ ಹೇಳಿದ ಹಾಗೆ ಸದನದ ಹೊರಗೆ ಇಂಥ ವೈಯುಕ್ತಿಕ ವಿಚಾರಗಳನ್ನು ಬಗೆಹರಿಸಿಕೊಳ್ಳಬೇಕು. ಇಂಥ
ಪುಂಡಾಟಕ್ಕೆ ಸರಕಾರದ ಹಣವನ್ನು ವ್ಯಯ ಮಾಡುವುದು ಜನತೆಗೆ ಮಾಡಿದ ವಂಚನೆ! ಮೋಸ! ಅವಮಾನ!
ಈ ಹಠದಿಂದ ಯಾವ ಪುರುಷಾರ್ಥಸಾಧನೆಯಾದೀತು? ರಾಜ್ಯದ ಬೊಕ್ಕಸವನ್ನು ಅಽವೇಶನದ ನೆಪದಲ್ಲಿ ಖರ್ಚು ಮಾಡುವುದು ಮಹಾಪಾಪವೇ ಸರಿ! ಈ ಧರಣಿಗೆ ಸಂಬಂಧಿಸಿದ ಖರ್ಚುವೆಚ್ಚಗಳನ್ನು ಸರಕಾರದ ಖಜಾನೆಯಿಂದಲೇ ಭರಿಸುವುದು ತಾನೆ? ಹಾಸಿಗೆ, ಊಟ, ಇತರ ಖರ್ಚುಗಳಿಗೆ ಆಗುವ ಖರ್ಚೇನು ಕಡಿಮೆಯೇ? ಮಜಾ ಏನೆಂದರೆ, ರಾತ್ರೆಯೆಲ್ಲ ಮಲಗಿಕೊಂಡ ಜಾಗದಲ್ಲಿ ಬೆಳಗ್ಗೆ ಅಧಿವೇಶನ ನಡೆಸುವುದು.
ಅಧಿವೇಶನ ಮುಗಿಯುತ್ತಿದ್ದಂತೆಯೇ ಮತ್ತಲ್ಲಿಯೇ ಹಾಸಿಗೆ ಹಾಸಿಕೊಂಡು ಮಲಗುವುದು. ಇದೊಂಥರಾ ಮಕ್ಕಳಾಟ! ಮಕ್ಕಳಾಟ ಅಂದರೆ ಸಿಟ್ಟು ಬಂದೀತು! ಆದರೆ, ಸಿಟ್ಟು ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಮಕ್ಕಳ ಆಟ ಚೆನ್ನಾಗಿರುತ್ತದೆ. ಮೋಸ ವಂಚನೆಗಳಿರುವು ದಿಲ್ಲ. ಒಳಗೆ ಅನಿಸಿದ ಸತ್ಯವನ್ನು ಹೇಳುವುದಕ್ಕೆ ಯಾವ ಭಾಷೆಯೂ ಸಾಧ್ಯವಾಗದಂತೆ ಭಾಷೆಯನ್ನು ಬೆಳೆಸಿದ ಕೀರ್ತಿ ರಾಜಕೀಯಕ್ಕೆ
ಸಲ್ಲುತ್ತದೆ. ಯಾಕೆಂದರೆ, ಸದನದೊಳಗೆ ಆಡುವ ಮಾತುಗಳಿಗೂ, ರಾಜಕಾರಣದ ತತ್ವಗಳಿಗೂ ಯಾವುದೇ ಅರ್ಥವಿರುವುದಿಲ್ಲ. ತತ್ವದ ಮಾತುಗಳು ಕೇವಲ ಗುಡ್ ಮ್ಯಾನರ್ಸ್; ಕ್ಷಿಣ್ಯಕ್ಕಾಗಿ ವಿಽಯಿಲ್ಲದೆ ಆಡಬೇಕಾದ ಮಾತುಗಳನ್ನು ರಾಜಕಾರಣಿಗಳು ಪ್ರಾಕ್ಟೀಸ್ ಮಾಡಿಕೊಳ್ಳಬೇಕಾಗಿದೆ; ವೇದಿಕೆಯ ಮೇಲೆ ನಿಂತು ಮಾತಾಡುವುದಕ್ಕಾದರೂ!
ಹಿಜಾಬ್ ನಿಷೇಧದ ವಿಚಾರ ಹಾಗೂ ಅದಕ್ಕೆ ಸಂಬಂಽಸಿದಂತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಾಧ್ಯಮದ ಮುಂದೆ ತೋರ್ಪಡಿಸಿದ ಭಾವುಕತನ ಮತ್ತು ಆಡಿದ ಮಾತುಗಳು ಕಾಂಗ್ರೆಸ್ಸಿನಂಥ ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷ ಗಾದಿಗೆ ಸೂಕ್ತ ವೆನಿಸಲಿಲ್ಲ. ಯಾಕೆಂದರೆ, ಅದು ಒಂದು ಕೋಮನ್ನು ಪೂಸಿ ಹೊಡೆಯುವ ಬುದ್ಧಿವಂತಿಕೆಯನ್ನು ಅಭಿವ್ಯಕ್ತಿಸುತ್ತಿತ್ತೇ ಹೊರತು ನಿಜ ರಾಷ್ಟ್ರ ಪ್ರೇಮವಲ್ಲ. ಈ ಮಾತು ಬಿಜೆಪಿ ಮತ್ತಿತರ ಎಲ್ಲ ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ.
ಕಾಂಗ್ರೆಸ್ಸಿನ ತುಷ್ಟೀಕರಣದ ರಾಜಕೀಯವನ್ನು ಈ ದೇಶ ಬಹುಕಾಲ ನೋಡಿದೆ. ರಾಷ್ಟ್ರೀಯತೆಯಲ್ಲಿ, ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ರಾಜಕಾರಣಿಗಳು ಮೊದಲು ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಆಮೇಲೆ ಅವರಿಗೆ ಅದರ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಹುಟ್ಟುತ್ತದೆ. ಅಂಥ ಗಟ್ಟಿ ನೈತಿಕತೆಯನ್ನು ಇಂದಿನ ರಾಜಕೀಯದಲ್ಲಿ ಕಾಣಲು ಸಾಧ್ಯವಿಲ್ಲ. ಯಾಕೆಂದರೆ, ಸಂಸ್ಕೃತಿಹೀನರು, ಮೂರು ಕಾಸಿನ ಮರ್ಯಾದೆಯುಳ್ಳವರು, ಗೂಂಡಾಗಳು ರಾಜಕೀಯವನ್ನು ಪ್ರವೇಶಮಾಡಿ ರಾಜಕಾರಣವನ್ನೂ, ಪ್ರಜಾಪ್ರಭುತ್ವದ ಮೌಲ್ಯ ಗಳನ್ನು ಅಧಃಪತನಕ್ಕೆ ಇಳಿಸಿದ್ದಾರೆ. ನಾನ್ ಸೆನ್ಸ್ !