ಅಧಿವೇಶನದಲ್ಲಿ ರಾಜಕೀಯ ಲಾಭದಾಯಕ ವಿಷಯಗಳು ಚರ್ಚೆ
ಹಿಜಾಬ, ಕೇಸರಿ ಶಾಲು, ರಾಷ್ಟ್ರಧ್ವಜ, ಶಿವಮೊಗ್ಗ ಗಲಭೆಗಳಿಗೇ ಆದ್ಯತೆ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜಕೀಯ ಮೇಲಾಟದಿಂದ ಮೊಟಕುಗೊಂಡ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ರಾಜ್ಯದ
ಜನತೆಯನ್ನು ದಿಕ್ಕು ತಪ್ಪಿಸಿದ ಸಂಭ್ರಮದಲ್ಲಿ ಬೀಗುತ್ತಿವೆ. ಹತ್ತು ದಿನಗಳ ಕಾಲ ನಡೆಯಬೇಕಿದ್ದ ವಿಧಾನ ಮಂಡಲ ಜಂಟಿ ಅಧಿವೇಶನ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ರಾಜಕೀಯ ಲಾಭದ ಹೋರಾಟಕ್ಕಾಗಿ ಕೇವಲ ಏಳು ದಿನಕ್ಕೆ ಮೊಟಕುಗೊಂಡಿತು.
ಅಧಿವೇಶನ ನಡೆದಿರುವ ೭ ದಿನಗಳಲ್ಲಿ ಕೆಪಿಎಸ್ಸಿ ೨೦೧೧ನೇ ಸಾಲಿನ ಅಭ್ಯರ್ಥಿಗಳ ರಕ್ಷಣೆಗೆ ತಂದಿದ್ದ ವಿಧೇಯಕ ಪಾಸ್ ಮಾಡಿಕೊಂಡಿದ್ದನ್ನು ಬಿಟ್ಟರೆ ಯಾವುದೇ ಮಹತ್ವದ ನಿರ್ಧಾರ ಆಗಲಿಲ್ಲ. ಆದರೆ ಅನಿರೀಕ್ಷಿತ ರೀತಿಯಲ್ಲಿ ಪ್ರಸ್ತಾಪಕ್ಕೆ ಬಂದ ಶಾಸಕರು ಮತ್ತು ಸಚಿವರು ವೇತನ ಪರಿಷ್ಕರಣೆ ವಿಧೇಯಕ ಮಾತ್ರ ಸರ್ವಾನುಮ ತದಿಂದ ಅನುಮೋದನೆ ಆಗಿದೆ. ಹೀಗಾಗಿ ಇಡೀ ಅಧಿವೇಶನದಲ್ಲಿ ಬಿಜೆಪಿಯವರು, ಶಾಲೆಗೆ ಕೇಸರಿ ಶಾಲು ಹಾಕಿಕೊಂಡು ಹೋಗಲು ಅವಕಾಶ ಸಿಗಬೇಕೆನ್ನುವುದನ್ನು ಪ್ರತಿಪಾದಿಸಿ ಹಿಜಾಬ್ ವಿರೋಧಿ ಹೋರಾಟ ಆರಂಭಿಸಿತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಿಜಾಬ್ಗೆ ಪರೋಕ್ಷ ಬೆಂಬಲ ನೀಡುತ್ತ, ಕೇಸರಿ ವಿರೋಧಿ ಹೋರಾಟಕ್ಕೆ ಕೈ ಹಾಕಿತ್ತು. ಒಂದು ಹಂತದಲ್ಲಿ ಹಿಜಾಬ್ ವಿಚಾರ ಲಾಭದಾಯಕವಲ್ಲ ಎನ್ನುವುದು ಮನವರಿಕೆ ಯಾಗಿ ಕಾಂಗ್ರೆಸ್ ರಾಷ್ಟ್ರಧ್ವಜ ವಿವಾದ ಕೈಗೆತ್ತಿಕೊಂಡಿತು. ಬೆನ್ನ ಬಿಜೆಪಿ ಶಿವಮೊಗ್ಗ ಹಿಂಸಾಚಾರ ಪ್ರಕರಣವನ್ನು ಅಸ ಬಳಕೆ ಮಾಡಿಕೊಂಡಿತ್ತು.
ಇದರೊಂದಿಗೆ ಸದನದಲ್ಲಿ ಶಾಸಕರು ಮಂಡಿಸಬೇಕಿದ್ದ ತಮ್ಮ ಕ್ಷೇತ್ರಗಳ ನೋವು, ಸಂಕಷ್ಟಗಳ ಚರ್ಚೆ ಮೂಲೆಗುಂಪಾಯಿತು. ಮುಂಬರುವ ಚುನಾವಣೆಯ ಲಾಭದಾಯಕ ವಿಷಯಗಳಾದ ಹಿಜಾಬ್ ರಾಷ್ಟ್ರಧ್ವಜ ಹಾಗೂ ಶಿವಮೊಗ್ಗ ಹಿಂಸಾಚಾರ ವಿಷಯಗಳ ಕಡೆ ಜನತೆಯನ್ನು ಸೆಳೆಯುವಲ್ಲಿ ಎರಡೂ ಪಕ್ಷಗಳು ಯಶಸ್ವಿಯಾದವು. ಹೀಗಾಗಿ ಅಧಿವೇಶನದಿಂದ ರಾಜ್ಯದ ಜನತೆಗಿಂತ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಲಾಭವಾಗಿದೆ ಎನ್ನುವುದು ಎರಡು ಪಕ್ಷಗಳ ನಾಯಕರ ಅನಿಸಿಕೆ.
ಇದರ ಮಧ್ಯೆ ಬೇಸರದ ಸಂಗತಿ ಎಂದರೆ ವಿಧಾನ ಪರಿಷತ್ತಿಗೆ ಇತ್ತೀಚೆಗಷ್ಟೇ ಆರಿಸಿ ಬಂದಿದ್ದ ೧೯ ನೂತನ ಸದಸ್ಯರ ಪರಿಚಯ ಮಾಡುವುದಕ್ಕೂ ಸದನದಲ್ಲಿ ಅವಕಾಶ ಸಿಗಲಿಲ್ಲ. ಇದು ನೂತನ ಸದಸ್ಯರಿಗೆ ಆರಂಭದಲ್ಲಿ ಕನಸು ಭಗ್ನ ಮಾಡಿದಂತಾಗಿದೆ ಎನ್ನುವುದು ಸದಸ್ಯರ ನೋವು.
***
ಸದನ ಮುಂದುವರಿಯುವಂತೆ ಮಾಡಲು ನಾಲ್ಕೈದು ಬಾರಿ ಪಕ್ಷಗಳ ನಾಯಕರನ್ನು ಕರೆದು ಮಾತನಾಡಿದ್ದೆ. ಆದರೂ ಆಡಳಿತ ಮತ್ತು ಪ್ರತಿಪಕ್ಷಗಳು
ಹಠ ಬಿಡದೆ ಅಧಿವೇಶನ ಅಂತ್ಯಗೊಳ್ಳುವಂತೆ ಮಾಡಿದರು. ಇದು ಕೆಟ್ಟ ಸಂಪ್ರದಾಯ. ಇದನ್ನು ಇತ್ತೀಚಿನ ದಿನಗಳಲ್ಲಿ ನೋಡಿರಲಿಲ್ಲ. ಬಜೆಟ್ ಅಧಿವೇಶನದಲ್ಲಿ ಹೀಗಾಗಬಾರದು ಎಂದು ಎಚ್ಚರಿಕೆ ನೀಡಿದ್ದೇನೆ.
-ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸಭಾಪತಿ
ಶಾಸಕರಿಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ ಎನ್ನುವುದು ನಿಜ. ಆದರೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ವಿಚಾರವನ್ನಾದರೂ ರಚಿಸಬೇಕಿತ್ತು.
ಆದರೂ ಈ ವಿಚಾರವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗಿ ಬಿಜೆಪಿ ವಿಷಾದ ವ್ಯಕ್ತಪಡಿಸುವಂತೆ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
-ರಮೇಶ್ ಬಾಬು ಕಾಂಗ್ರೆಸ್ ವಕ್ತಾರ