Thursday, 12th December 2024

ಕದನ ರಷ್ಯಾ ವಿರುದ್ದ, ಅಸ್ತ್ರ ಭಾರತದತ್ತ !

ಪ್ರಸ್ತುತ

ಕಿಶೋರ್‌ ನಾರಾಯಣ

ವಿಶ್ವ ಸಂಸ್ಥೆಯ ಹುಟ್ಟಿನ ಹಿಂದೆ ಇರುವ ಅತ್ಯಂತ ಪ್ರಮುಖ ಧ್ಯೇಯ ಸ್ವತಂತ್ರ ರಾಷ್ಟ್ರಗಳ ಅಖಂಡತೆ ಹಾಗೂ ಸಾರ್ವಭೌಮತೆ ಪರಿಪೂರ್ಣ ಎನ್ನುವುದು. ಅಂದರೆ, ಉದಾಹರಣೆಗೆ ಭಾರತದ ಅಖಂಡತೆ ಹಾಗು ಸಾರ್ವಭೌಮತೆಯ ವಿಚಾರದಲ್ಲಿ ಬೇರೆ ಯಾವ ದೇಶಗಳೂ ಮಧ್ಯ ಪ್ರವೇಶಿಸುವಂತಿಲ್ಲ.

ಯೂರೋಪ್‌ನಲ್ಲಿ ಮತ್ತೊಮ್ಮೆ ಯುದ್ಧದ ಕರಿಛಾಯೆ ಆವರಿಸಿದೆ. ಉಕ್ರೇನ್ ದೇಶವನ್ನು ನಾ ಕೊಡೆ, ನೀ ಬಿಡೆ ಎನ್ನುವ ಮಟ್ಟದಲ್ಲಿ ಎಳೆದಾಡುತ್ತಿವೆ ಬಲಿಷ್ಠ ರಾಷ್ಟ್ರಗಳು. ಅಮೆರಿಕ ಮುಂಚೂಣಿಯಲ್ಲಿರುವ ನ್ಯಾಟೋ (ಉತ್ತರ ಅಟ್ಲಾಂಟಿಕ್ ಒಪ್ಪಂದದ ಒಕ್ಕೂಟ) ಒಂದೆಡೆಯಾದರೆ, ಅಷ್ಟೇ ಬಲಿಷ್ಠ ವಾಗಿರುವ ಹಾಗೂ ಪಕ್ಕದ ಇರುವ ರಷ್ಯಾ ಮತ್ತೊಂದು ಕಡೆ. ಇವರಿಬ್ಬರ ನಡುವೆ ಉಕ್ರೇನ್ ಇನ್ನೇನು ಬ್ರಹ್ಮಾಸ್ತ್ರ ತನ್ನ ಮೇಲೆ ಬೀಳುತ್ತಿರುವ ಗುಬ್ಬಿಯ ಹಾಗಾಗಿದೆ. ಆದರೆ ಈ ಕದನದಲ್ಲಿ ನಮ್ಮ ನಿಲುವೇನು? ಭಾರತ ಯಾರ ಪರ? ಎಲ್ಲಾ ಯೂರೋಪ್‌ ನಲ್ಲಿ ಯುದ್ಧ ನಡೆದರೆ ನಮಗೇನು ಎನ್ನುವುದೇ ಈ ಲೇಖನದ ಮುಖ್ಯ ಚರ್ಚಾ ವಿಷಯ.

ಅಮೆರಿಕಕ್ಕೆ ಭಾರತದ ಕ್ಷಿಪಣಿ ಮೇಲೆ ಕಣ್ಣು: ಅಮೆರಿಕ ಈಗಾಗಲೇ ಒಡ್ಡಿರುವ ಬೆದರಿಕೆಯಂತೆ ರಷ್ಯಾ ಮೇಲೆ ಹಿಂದೆಂದೂ ಕಾಣದಂತಹ ಆರ್ಥಿಕ ನಿರ್ಬಂಧಗಳನ್ನು ಹೇರಲು ಸಜ್ಜಾಗಿದೆ. ಇದರ ಮುಂದಿನ ಹೆಜ್ಜೆಯಂತೆ, ರಷ್ಯಾವನ್ನು ಜಾಗತಿಕ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆಯಿಂದ ಹೊರಗುಳಿಸಲು ಕೂಡ ರೂಪುರೇಷೆಗಳನ್ನು ಸಿದ್ಧಮಾಡಿದೆ. ಪರಿಣಾಮ ಪ್ರಪಂಚದ ಯಾವುದೇ ದೇಶ ರಷ್ಯಾದ ಜತೆ ಆರ್ಥಿಕ ವಿಲೇವಾರಿಗಳಲ್ಲಿ ತೊಡಗಿಸಿ ಕೊಂಡರೆ ಆ ದೇಶಗಳ ಮೇಲೂ ಆರ್ಥಿಕ ಹೊರೆ ವಿಧಿಸುವುದು ಒಳಗೊಂಡಿರುತ್ತದೆ.

ಇದರ ಪರಿಣಾಮ ನೇರವಾಗಿ ಭಾರತದ ಮೇಲೆ ಬೀಳಲಿದೆ. ನಮ್ಮ ದೇಶ ರಷ್ಯಾದಿಂದ ಎಸ್ – ೪೦೦ ಕ್ಷಿಪಣಿ ಗಳನ್ನು ಖರೀದಿಸುತ್ತಿದೆ. ಅಮೆರಿಕಕ್ಕೆ ಇದು ಮೊದಲಿನಿಂದಲೂ ಇಷ್ಟವಿರಲಿಲ್ಲ. ನಾವೇ ನಿಮಗೆ ಪೆಟ್ರಿಯೊಟ್ ಕ್ಷಿಪಣಿಗಳನ್ನು ಮಾರುತ್ತೇವೆಂದು ದುಂಬಾಲು ಬಿದ್ದಿದ್ದರು. ಆದರೆ, ಭಾರತ ಮಾತ್ರ ಅವರ ಮಾತನ್ನು ಲೆಕ್ಕಿಸದೇ, ತಾಂತ್ರಿಕವಾಗಿ ಉತ್ತಮವಾದಂತಹ ಎಸ್ – ೪೦೦ ಕ್ಷಿಪಣಿಗಳನ್ನು ಕೊಳ್ಳಲು ಮುಂದಾಯಿತು. ಈಗಿನ ಸನ್ನಿವೇಶದಲ್ಲಿ, ಅಮೆರಿಕ, ಭಾರತದ ಮೇಲೆ ಒತ್ತಡ ಹೇರಿ ಎಸ್ – ೪೦೦ ಖರೀದಿ ರದ್ದುಗೊಳಿಸಿ ಎಂದು ಹೇಳಬಹುದು.

ಇದರಿಂದ ಭಾರತದ ಗಡಿ ಭದ್ರತೆ ಹಾಗೂ ಆಂತರಿಕ ಸುರಕ್ಷತೆಗೆ ಹೊಡೆತ ಬೀಳುವ ಪರಿಸ್ಥಿತಿಯೂ ಉಂಟಾಗಬಹುದು. ಭದ್ರತಾ ಮಂಡಳಿಯ ಬೆನ್ನೆಲುಬು: ಪಾಕಿಸ್ತಾನ ಪದೇ ಪದೇ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ವಿರುದ್ಧ ದೂರು ಸಲ್ಲಿಸುತ್ತಿರುತ್ತದೆ. ಇಂತಹ ದೂರುಗಳಲ್ಲಿ ತಿರುಳಿದ್ದರೆ ಭಾರತಕ್ಕೆ ಛೀಮಾರಿ ಹಾಕುವುದಲ್ಲದೆ ಸಾಕಷ್ಟು ಮಟ್ಟಿಗೆ ನಿರ್ಬಂಧಗಳನ್ನೂ ಹೇರಬಹುದು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಷ್ಯಾ
ಈ ದೂರುಗಳ ಪ್ರಸ್ತಾವದ ಮೇಲೆ ತನ್ನ ವೀಟೋ ಅಧಿಕಾರವನ್ನು ಚಲಾಯಿಸಿ ಭಾರತಕ್ಕೆ ಬೆನ್ನೆಲುಬಾಗಿ ನಿಂತಿದೆ. ಈಗ ರಷ್ಯಾಕ್ಕೆ ಜಾಗತಿಕ ಮಟ್ಟದಲ್ಲಿ
ಸ್ನೇಹಿತರ ಅವಶ್ಯಕತೆ ಇದೆ. ಹಾಗೆಂದ ಮಾತ್ರಕ್ಕೆ ಭಾರತ ರಷ್ಯಾದ ಸಹಾಯಕ್ಕೆ ಧಾವಿಸುವುದು ಅಷ್ಟು ಸುಲಭದ ಮಾತಲ್ಲ.

ಒಂದು ವೇಳೆ ಭಾರತ ರಷ್ಯಾದ ಪರ ನಿಂತರೆ ಅಮೆರಿಕದ ಎಲ್ಲ ಗುಂಪುಗಳಲ್ಲೂ ಭಾರತಕ್ಕೆ ಅವಮಾನ ಕಟ್ಟಿಟ್ಟ ಬುತ್ತಿ. ಹಾಗಾಗಿ, ಈ ಸಮಸ್ಯೆ ಭಾರತಕ್ಕೆ
ಉಗಿಯಲೂ ಆಗದ ನುಂಗಲೂ ಆಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಚೀನಾ ರಷ್ಯಾದ ಪರ: ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಶೀತಲ ಒಲಿಂಪಿಕ್ಸ್ ಕ್ರೀಡಾಕೂಟ ಈಗಷ್ಟೇ ನಡೆಯಿತು. ಸಾಮಾನ್ಯವಾಗಿ, ಒಲಿಂಪಿಕ್ಸ್ ನಡೆದಾಗ, ಜಾಗತಿಕ ಮಟ್ಟದ ನಾಯಕರು ಅದರ ಉದ್ಘಾಟನೆಗೆ ಹೋಗುವುದು ವಾಡಿಕೆ. ಆದರೆ ಚೀನಾ ಎಲ್ಲರಿಗೂ ಬೇಕಾದ ಗೆಳೆಯ ದೇಶ ಅಲ್ಲ. ಹಾಗಾಗಿ ಅನೇಕ ದೊಡ್ಡ ನಾಯಕರು ಚೀನಾಕ್ಕೆ ಹೋಗದೆ ಉಳಿದರು. ಆದರೆ, ಹೋದವರಲ್ಲಿ
ಪ್ರಮುಖರು ರಷ್ಯಾದ ಅಧ್ಯಕ್ಷ ವ್ಲಾದಮೀರ್ ಪುಟಿನ್. ಒಲಿಂಪಿಕ್ಸ್‌ನ ಉದ್ಘಾಟನೆಗೆ ಕ್ರೀಡಾಂಗಣಕ್ಕೆ ಹೋಗದಿದ್ದರೂ, ಅದೇ ಸಮಯಕ್ಕೆ ಬೀಜಿಂಗ್ ಪ್ರವಾಸ ಮಾಡಿ, ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಜತೆ ಮಾತುಕತೆ ನಡೆಸಿದ್ದರು. ಈ ಸಮಯವನ್ನು ಬಳಸಿಕೊಂಡ ಜಿಂಪಿಂಗ್, ಉಕ್ರೇನ್ ವಿಚಾರದಲ್ಲಿ ಪುಟಿನ್‌ರ ನಿಲುವನ್ನು ಸಮರ್ಥಿಸಿದರಲ್ಲದೆ ಅಮೆರಿಕಾದಿ ಪಶ್ಚಿಮ ರಾಷ್ಟ್ರಗಳ ಅನೇಕ ದ್ವಂದ್ವ ನೀತಿಗಳನ್ನು ಖಂಡಿಸಿದರು.

ಇದರ ಅರ್ಥ, ಒಂದು ವೇಳೆ ರಷ್ಯಾ ಉಕ್ರೇನ್‌ನ ಮೇಲೆ ದಾಳಿ ನಡೆಸಿ ಅದರ ಭೂಪ್ರದೇಶವನ್ನು ಕಬಳಿಸಿದರೆ, ಅದಕ್ಕೆ ಚೀನಾದ ಬೆಂಬಲ ಇರುತ್ತದೆ ಯೆಂದು. ಒಂದು ವೇಳೆ ಚೀನಾ ಹೀಗೆ ರಷ್ಯಾಗೆ ಸಮರ್ಥನೆ ನೀಡಿದರೆ, ನಾಳೆ ಒಂದು ದಿನ ಚೀನಾ ನಮ್ಮ ಮೇಲೆ ದಾಳಿ ಮಾಡಿ ನಮ್ಮ ಪ್ರದೇಶವನ್ನು ಕಬಳಿಸಿದರೆ, ಪುಟಿನ್‌ರ ನಿಲುವು ಆಗೇನಿರುತ್ತದೆ?

ಉಕ್ರೇನ್ ಸಹ ಮಿತ್ರನೇ: ಉಕ್ರೇನ್ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ್ದು ೧೯೯೧ರಲ್ಲಿ ಸೊವಿಯಟ್ ಒಕ್ಕೂಟ ಛಿದ್ರಗೊಂಡಾಗ. ಅದಕ್ಕೆ ಮೊದಲು ಬರೋಬ್ಬರಿ ೫೦೦ ವರ್ಷಗಳ ಇತಿಹಾಸ ನೋಡಿದರೂ ಉಕ್ರೇನ್ ಎಂದೂ ಒಂದು ಸ್ವತಂತ್ರ ದೇಶವಾಗಿರಲೇ ಇಲ್ಲ. ಸ್ವಾರಸ್ಯವೆಂದರೆ, ಸೊವಿಯಟ್ ಒಕ್ಕೂಟ ತನ್ನ ಅಣು ಸ್ಥಾವರಗಳನ್ನು, ಬಾಂಬ್‌ಗಳ ತುಕಡಿಗಳನ್ನು ನಿಲ್ಲಿಸಿದ್ದಿದ್ದು ಉಕ್ರೇನ್ ನಲ್ಲೇ. ಸ್ವಾತಂತ್ರ್ಯ ಸಿಕ್ಕಾಗ ಉಕ್ರೇನ್‌ಗೆ ಈ ಅಣು  ಬಾಂಬ್‌ ಗಳು ಬೇಡವೆಂದೂ ಇದರಿಂದ ತೊಂದರೆಗಳೇ ಹೆಚ್ಚು ಎಂದೂ ತಿಳಿದು, ಅವುಗಳನ್ನು ನಿಷ್ಕ್ರಿಯಗೊಳಿಸಿ, ಪಾಶ್ಚಿಮಾತ್ಯ ದೇಶಗಳಿಗೆ ಹತ್ತಿರವಾಗುವ ಪ್ರಯತ್ನ ಪಟ್ಟಿತು. ಆದರೆ, ಎಂದಿಗೂ ರಷ್ಯಾದ ಅಂಗ ದೇಶವಾಗೇ ಇದ್ದ ಉಕ್ರೇನ್‌ಗೆ ತನ್ನದೇ ಆದ ಒಂದು ಸ್ವತಂತ್ರವಾದ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

ಆದರೂ, ಭಾರತದಂತಹ ರಾಷ್ಟ್ರಗಳು ಉಕ್ರೇನ್ ನೊಂದಿಗೆ ಹೊಸದಾಗಿ ಸಂಬಂಧಗಳನ್ನು ಬೆಳೆಸಿವೆ. ಉಕ್ರೇನ್‌ನ ದೃಷ್ಟಿಯಿಂದ ನೋಡುವುದಾದರೆ,
ಭಾರತದಂತಹ ರಾಷ್ಟ್ರಗಳ ಅನೇಕ ವಿದ್ಯಾರ್ಥಿಗಳು ಅಲ್ಲಿ ಉನ್ನತ ವ್ಯಾಸಂಗ ಮಾಡುತ್ತಿzರೆ. ಹೀಗಾಗಿ ಭಾರತಕ್ಕೆ ಉಕ್ರೇನ್ ಅನ್ನು ಸಾರಾಸಗಟಾಗಿ
ತಳ್ಳಿಹಾಕುವುದು ಕಷ್ಟದ ಮಾತು.

ಚೀನಾ ವಿರುದ್ಧ ಅಮೆರಿಕ ಅವಶ್ಯ: ಚೀನಾ ಕಳೆದ ೨ ದಶಕಗಳಲ್ಲಿ ಇಡೀ ಪ್ರಪಂಚಕ್ಕೆ ದೊಡ್ಡ ತಲೆನೋವಾಗಿ ಹೊರಹೊಮ್ಮಿದೆ. ಭಾರತ ಮೊದ ಲ್ಗೊಂಡು ಅಮೆರಿಕ ಮುಂತಾದ ದೇಶಗಳು ಚೀನಾವನ್ನು ಕಟ್ಟಿಹಾಕಲು ಅನೇಕ ತಂತ್ರಗಳನ್ನು ರೂಪಿಸಿದರೂ, ಚೀನಾ ಮಾತ್ರ ಇನ್ನಷ್ಟು ಬಲಿಷ್ಠ ವಾಗುತ್ತಿದೆ. ಇತ್ತೀಚಿಗೆ ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾ ಕ್ವಾಡ್ ಎನ್ನುವ ೪ ದೇಶಗಳ ಗುಂಪನ್ನು ರಚಿಸಿಕೊಂಡಿತು. ಇದರ ಮುಖ್ಯ ಉದ್ದೇಶ ಗಡಿ ಕ್ಯಾತೆಗಳನ್ನು ತೆಗೆಯುವ ಚೀನಾವನ್ನು ಸರಿಯಾದ ರೀತಿಯಲ್ಲಿ ಬಗ್ಗು ಬಡಿಯುವುದು. ಆದರೆ, ಭಾರತಕ್ಕೆ ಮಾತ್ರ ಚೀನಾದ ಜತೆ ನಿಜವಾದ ಅರ್ಥದಲ್ಲಿ ಗಡಿ ಇರುವುದು. ಅಲ್ಲದೆ, ಹಿಮಾಲಯದ ಎತ್ತರಗಳಲ್ಲಿ ಯುದ್ಧ ಮಾಡುವ ಪರಿಣಿತಿ ಇರುವುದು ಭಾರತದ ಸೇನೆಗೆ ಮಾತ್ರ. ಒಂದು ವೇಳೆ ಮುಂದಿನ ದಿನಗಳಲ್ಲಿ ಭಾರತ-ಚೀನಾ ನಡುವೆ ಹಿಮಾಲಯದಲ್ಲಿ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾದರೆ, ಆಗ ಕ್ವಾಡ ದೇಶಗಳ ಸೇನೆಗಳು
ಹಿಮಾಲಯಕ್ಕೆ ಬಂದು ನಮಗೆ ಸಹಾಯ ಮಾಡಲಾರರು. ಆ ಸೇನೆಗಳು ಭಾರತದೊಳಗೆ ಬರುವುದನ್ನು ನಮ್ಮ ಸರಕಾರವು ಒಪ್ಪುವುದೂ ಇಲ್ಲ.

ಹಾಗೇಂದ್ರ ಮಾತ್ರಕ್ಕೆ ಕ್ವಾಡ್‌ನಿಂದ ನಮಗೇನೂ ಪ್ರಯೋಜನವಿಲ್ಲವೆಂದೇನಲ್ಲ. ಚೀನಾಕ್ಕೆ ಆಗ್ನೇಯ ಏಷ್ಯಾದ ಸಮುದ್ರ ಪಥಗಳು ಅತ್ಯಂತ ಮಹತ್ವದ್ದು. ಕಚ್ಚಾ ತೈಲದ ಆಮದಿಗಾಗಲಿ ತಯಾರಿಸಿದ ಉತ್ಪನ್ನಗಳ ರಫ್ತಿಗಾಗಲಿ ಈ ಸಮುದ್ರ ಪಥಗಳು ಉಪಯೋಗಿಸಲ್ಪಡುತ್ತವೆ. ಹಾಗಾಗಿ ಕ್ವಾಡ್ ದೇಶಗಳ ನೌಕಾಪಡೆಗಳು ಈ ಪಥಗಳ ಮೇಲೆ ದಿಗ್ಬಂಧನ ಹಾಕಿ, ಭಾರತಕ್ಕೆ ಅನ್ಯ ರೀತಿಯಲ್ಲಿ ಸಹಾಯ ಮಾಡಬಹುದು.

ವೈರಿಯ ವೈರಿ ನನ್ನ ಸ್ನೇಹಿತ ಎನ್ನುವಂತೆ ರಷ್ಯಾ ಮತ್ತು ಚೀನಾ ಈಗ ನಿಕಟ ಸ್ನೇಹ ಬೆಳೆಸಿವೆ. ಇಬ್ಬರಿಗೂ ಅಮೆರಿಕ ಎದುರಾಳಿ. ಹಾಗಾಗಿ,  ಚೀನಾದ ಜತೆ ರಷ್ಯಾ ಮತ್ತಷ್ಟು ಆಯಾಮಗಳಲ್ಲಿ ಸಂಬಂಧಗಳನ್ನು ವೃದ್ಧಿಸಿಕೊಳ್ಳುತ್ತಿದೆ. ಭಾರತದ ದೃಷ್ಟಿಕೋನದಲ್ಲಿ ಇದು ಅಪಾಯದ ಸಂಕೇತ. ನಮಗಾಗಿ ಎಲ್ಲರನ್ನೂ ಎದುರು ಹಾಕಿಕೊಂಡ ರಷ್ಯಾ ಈಗ ನಮ್ಮ ಎದುರಾಳಿಯೂ ವೈರಿಯೂ ಆದ ಚೀನಾದ ಜತೆ ಸೇರುತ್ತಿರುವುದು ಭಾರತದ ಮಟ್ಟಕ್ಕೆ ಅಪಾಯದ ಮುನ್ಸೂಚನೆಯೇ ಸರಿ. ವಿಶ್ವ ಸಂಸ್ಥೆಯ ಹುಟ್ಟಿನ ಹಿಂದೆ ಇರುವ ಅತ್ಯಂತ ಪ್ರಮುಖ ಧ್ಯೇಯ್ಯ ಸ್ವತಂತ್ರ ರಾಷ್ಟ್ರಗಳ ಅಖಂಡತೆ ಹಾಗು ಸಾರ್ವಭೌಮತೆ ಪರಿಪೂರ್ಣ ಎನ್ನುವುದು. ಅಂದರೆ, ಉದಾಹರಣೆಗೆ ಭಾರತದ ಅಖಂಡತೆ ಹಾಗು ಸಾರ್ವಭೌಮತೆಯ ವಿಚಾರದಲ್ಲಿ ಬೇರೆ ಯಾವ ದೇಶಗಳೂ ಮಧ್ಯ ಪ್ರವೇಶಿಸುವಂತಿಲ್ಲ.

ಭಾರತವೂ ಬೇರೆ ದೇಶಗಳ ವಿಚಾರಗಳಲ್ಲಿ ಇದನ್ನು ಬಲವಾಗಿ ನಂಬುತ್ತದೆ. ಅಂತೆಯೇ ಬೇರೆ ಯಾವ ದೇಶವೂ ಭಾರತವನ್ನು ಒಡೆಯುವುದಕ್ಕೆ
ಮುಂದಾ ಗಬಾರದು. ಅದಕ್ಕಾಗಿಯೇ, ಸಿರಿಯಾ, ಮ್ಯಾನ್ಮಾರ್, ಲಿಬಿಯಾ ಮುಂತಾದ ದೇಶಗಳ ವಿಚಾರ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ
ಪ್ರಸ್ತಾವನೆಯಾದಾಗ, ಭಾರತ ಮಾತ್ರ ತಟಸ್ಥ ನಿಲುವನ್ನೇ ಹೊಂದಿರುತ್ತದೆ. ಕಾರಣ, ಮ್ಯಾನ್ಮಾರ್ ನ ಆಂತರಿಕ ಸಮಸ್ಯೆಗಳಿಗೆ ಅವರೇ ಪರಿಹಾರ
ಕಂಡು ಕೊಳ್ಳಬೇಕು, ನಾವು ಹೊರಗಿನಿಂದ ಸಹಾಯ ಮಾಡಬೇಕಷ್ಟೆ ಎನ್ನುವುದು. ಇದು ಯಾವಾಗಲೂ ಒಪ್ಪುವಂತಹ ನಿಲುವಲ್ಲ. ಉದಾಹರಣೆಗೆ
ಮ್ಯಾನ್ಮಾರ್‌ನಿಂದ ಅಷ್ಟು ಜನ ರೋಹಿಂಗ್ಯಾ ಜನಾಂಗದವರು ಭಾರತಕ್ಕೆ ವಲಸೆ ಬಂದಾಗಲೂ ಭಾರತ, ಮ್ಯಾನ್ಮಾರ್ ವಿರುದ್ಧದ ಪ್ರಸ್ತಾವನೆಯಲ್ಲಿ
ತಟಸ್ಥ ನಿಲುವನ್ನೇ ತೋರಿತ್ತು.

ರಷ್ಯಾ ಉಕ್ರೇನ್‌ನ ಕರಾವಳಿಯ ಒಂದು ಭಾಗವಾದ ಕ್ರೈಮಿಯಾವನ್ನು ೨೦೧೪ರಲ್ಲಿ ತನ್ನ ವಶಮಾಡಿಕೊಂಡುಬಿಟ್ಟಿತು. ಅಲ್ಲದೆ ಪೂರ್ವ ಉಕ್ರೇನ್
ನ ಡೋನ್ಬಾಸ್ ಎನ್ನುವ ಪ್ರದೇಶದಲ್ಲಿ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುತ್ತಿದೆಯಲ್ಲದೆ, ಆ ಎರಡು ಪ್ರದೇಶಗಳನ್ನು ಸ್ವತಂತ್ರ ದೇಶಗಳಾಗಿ
ನಾವು ಮಾನ್ಯ ಮಾಡುತ್ತೇವೆಂದೂ ಘೋಷಿಸಿ ಬಿಟ್ಟಿತು. ಹೀಗೆ ಉಕ್ರೇನ್‌ನ ಆಂತರಿಕ ವಿಷಯಗಳಲ್ಲಿ ತಲೆದೂರಿಸಿರುವ ರಷ್ಯಾದ ವಿರುದ್ಧ ಭದ್ರತಾ ಮಂಡಳಿಯಲ್ಲಿ ಪ್ರಸ್ತಾವನೆ ಬಂದಾಗ ಭಾರತ, ರಷ್ಯಾ ವಿರುದ್ಧದ ನಿಲುವನ್ನು ತೋರುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಭಾರತ ಹೆಸರಿಗೆ ಅಲಿಪ್ತ ನೀತಿಯನ್ನು ಅನುಸರಿಸುತ್ತದೆ ಎಂದು ಹೇಳಿಕೊಂಡಿತ್ತಾದರೂ, ಸ್ವಾತಂತ್ರ್ಯ ಬಂದಾಗಿನಿಂದ 2008ರ ವರೆಗೆ, ಭಾರತ ಸೊವಿಯಟ್ ಒಕ್ಕೂಟ / ರಷ್ಯಾಕ್ಕೇ ಹೆಚ್ಚು ಹತ್ತಿರವಾಗಿತ್ತು. ೨೦೦೮ರ ಅಣು ಒಪ್ಪಂದದ ನಂತರ ಭಾರತ ಅಮೆರಿಕ ಹತ್ತಿರುವಾಗುತ್ತ ಬಂದಿರುವು
ದಲ್ಲದೇ ಅನೇಕ ಮಜಲುಗಳಲ್ಲಿ ಈ ಎರಡು ದೇಶಗಳ ಬಾಂಧವ್ಯ ವೃದ್ಧಿಯಾಗುತ್ತಿದೆ. ಯೂರೋಪ್‌ನಲ್ಲಿನ ಈ ಹೊಸ ಸಮಸ್ಯೆಯಿಂದ ಭಾರತದ ಸಂಬಂಧಗಳು ತೊಂದರೆಗೀಡಾಗುವ ಆತಂಕ ಸೃಷ್ಟಿಯಾಗಿದೆ. ಭಾರತಕ್ಕೆ ಈಗ ತನಗೆ ಹೆಚ್ಚು ನಷ್ಟವಾಗದಂತೆ ತನ್ನ ಸಂಬಂಧಗಳನ್ನು ನೋಡಿಕೊಳ್ಳ ಬೇಕಾಗಿದೆ.