Wednesday, 11th December 2024

ಸ್ವತಃ ಭಗವಂತನೇ ಅವತರಿಸಿದ ದೇಶ ನಮ್ಮ ಭಾರತ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – ೨೨೨

‘ಭಾರತ ದರ್ಶನ’ ಕಾರ್ಯಕ್ರಮದಲ್ಲಿ ಅರಿವಿನ ಉಪನ್ಯಾಸ 

ದೇಶದ ಧಾರ್ಮಿಕತೆ ಕುರಿತು ಮಾಹಿತಿ ನೀಡಿದ ಪ್ರಕಾಶ್ ಮಲ್ಪೆ

ಬೆಂಗಳೂರು: ವಿಶ್ವದ ಅನ್ಯ ರಾಷ್ಟ್ರಗಳಿಗೆ ಭಗವಂತ ತನ್ನ ದೂತರನ್ನು ಕಳುಹಿಸಿ, ಭಾರತದಲ್ಲಿ ಸ್ವತಃ ತಾನೇ ಅವತರಿಸಿದ್ದಾನೆ. ಹೀಗಾಗಿಯೇ ಇದು ಭಗವಾದ್‌ಭಕ್ತಿಯ ಆಗರ. ಹೆಜ್ಜೆಹೆಜ್ಜೆಗೂ ತೀರ್ಥ ಕ್ಷೇತ್ರಗಳು ಕಾಣಸಿಗುವ ಪುಣ್ಯ ಭೂಮಿ. ನಾನಾ ದರ್ಶನಗಳು, ವೇದ ಕಾವ್ಯಗಳು ಉಗಮಗೊಂಡ ಪವಿತ್ರ ದೇಶ. ಅನೇಕ ಮಹಾತ್ಮರು, ಪುಣ್ಯಪುರುಷರು, ದಾರ್ಶನಿಕರು, ಕವಿಗಳು ಜನ್ಮ ತಾಳಿ ಈ ಭೂಮಿಯನ್ನು ಹರಸಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಭಾರತ ದರ್ಶನ’ ಕಾರ್ಯಕ್ರಮದಲ್ಲಿ ಅರಿವಿನ ಉಪನ್ಯಾಸದಲ್ಲಿ ಪ್ರಕಾಶ್ ಮಲ್ಪೆ ಅವರು ದೇಶದ ಧಾರ್ಮಿಕತೆ ಕುರಿತು ಮಾಹಿತಿ ನೀಡಿದರು.

ಅವರು ಹೇಳಿದ್ದಿಷ್ಟು: ರಾಮನ ಪಾದ ಸ್ಪರ್ಶವಾದ, ನರ-ನಾರಾಯಣರು ಸಂದರ್ಶಿಸಿದ, ಸೀತೆ-ಸಾವಿತ್ರಿಯರು ಓಡಾಡಿದ ಭೂಮಿ ನಮ್ಮದು. ತಾಯಿ ಭಾರತಿ ದಕ್ಷಿಣ ತುದಿಯಲ್ಲಿ ಕನ್ಯಾಕುಮಾರಿಯಾಗಿ, ಕಾವೇರಿ, ಗೋದಾವರಿ ಯಲ್ಲಿ ಮಿಂದು, ವಿಂದ್ಯ ಪರ್ವತ ಹತ್ತಿಳಿದು, ಗಂಗೆ-ಯಮುನೆಯರನ್ನು ಕೊರಳಲ್ಲಿ ಧರಿಸಿ, ಶಂಕರನನ್ನು ಸೇರಿ ನಮ್ಮನ್ನು ಸಲಹುತ್ತಿದ್ದಾಳೆ.

ಜಗತ್ತಿನ ಯಾವುದೇ ದೇಶದಲ್ಲಿ ಇರದ ಸಂಸ್ಕೃತಿ, ಸಭ್ಯತೆ ನಮ್ಮ ದೇಶದಲ್ಲಿದೆ. ಇತರೆ ದೇಶಗಳಲ್ಲಿ ಕಲ್ಲು, ಮಣ್ಣನ್ನು ಕೇವಲ ಜಡವಸ್ತುವಾಗಿ ಪರಿಗಣಿಸು ತ್ತಾರೆ. ಆದರೆ, ನಮಗೆ ಹಾಗಲ್ಲ. ನಮಗೆ ಅದು ಮಾತೃಭೂಮಿ. ಈ ಸಂಸ್ಕೃತಿ ಕಲಿಸುವ ವಿಶ್ವವಿದ್ಯಾಲಯ ಹೊರಗೆಲ್ಲೂ ಇರಲಿಲ್ಲ, ಅದು ಮನೆಯಲ್ಲೇ ಇತ್ತು. ಆ ವಿಶ್ವವಿದ್ಯಾ ಲಯವೇ ನಮ್ಮ ತಾಯಿ. ಭೂಮಿಯ ಮೇಲೆ ಕಾಲಿಡುವಾಗ, ಆಕೆಯ ಕ್ಷಮೆ ಕೇಳಬೇಕು ಎಂಬ ವಿಷಯದೊಂದಿಗೆ ಆಕೆ ನಮಗೆ ತಿಳಿಹೇಳುತ್ತಾಳೆ.

ಇದು ತಾಯಿ ಮಾಡುವಂತಹ ಉತ್ಕೃಷ್ಟ ಕೆಲಸ. ಗೋ ಪೂಜೆ ಮಾಡುವಾಗ ಗೋ ಮಾತೆಯ ಮಹತ್ವ ಮತ್ತು ಅದರ ಮಹಿಮೆಯನ್ನು ತನ್ನ ಮಗುವಿಗೆ ತಿಳಿಸುತ್ತಾಳೆ. ಸ್ನಾನ ಮಾಡಿಸುವಾಗ ನೀರು ಕೂಡ ತಾಯಿ ಸ್ವರೂಪಿ ಎಂದು ಹೇಳುತ್ತಾಳೆ.

ಪುರುಷರಿಗಿಂತ ಸ್ತ್ರೀ ಮೇಲು: ಭಾರತದಲ್ಲಿ ಸ್ತ್ರೀ ಮತ್ತು ಪುರುಷ ಸಮಾನರಾಗಲು ಸಾಧ್ಯವೇ ಇಲ್ಲ.  ಏಕೆಂದರೆ, ಅನಾದಿ ಕಾಲದಿಂದಲೂ ಆಕೆ ಪುರುಷ ನಿಗಿಂತ ಎತ್ತರದ ಸ್ಥಾನದಲ್ಲಿದ್ದಾಳೆ. ಎಲ್ಲ ಶ್ರದ್ಧಾಬಿಂದುಗಳನ್ನು ತಾಯಿ ರೂಪದಲ್ಲೇ ನೋಡಿದ್ದೇವೆ. ಪೂಜೆ ನಡೆಯುವಾಗ ಪತ್ನಿಯನ್ನು ಬಲಭಾಗದಲ್ಲಿ ಕೂರಿಸುವ ಉದ್ದೇಶ, ಪುರುಷನಿಗಿಂತ ಸ್ತ್ರೀ ಶ್ರೇಷ್ಠ ಎಂಬ ಕಾರಣಕ್ಕೆ. ಮಹಾಪುರುಷರು ಆ ಉನ್ನತ ಸ್ಥಾನಕ್ಕೇರಲು ತಾಯಿಯೇ ಕಾರಣ. ಅದಿಲ್‌ಶಾಹಿ ಸಾಮ್ರಾಜ್ಯದ ಮಗುವಿನ ತಾಯಂದಿರು, ತಮ್ಮ ಮಕ್ಕಳು ಸಾಮ್ರಾಟನ ಆಸ್ಥಾನದ ಸರದಾರನಾಗಬೇಕು ಎಂಬ ಬಯಕೆ ವ್ಯಕ್ತಪಡಿಸುತ್ತಿದ್ದರೆ, ಜೀಜಾಬಾಯಿ ಮಾತ್ರ ನನ್ನ ಮಗನೇ ಸಾಮ್ರಾಟನಾಗಬೇಕು ಎಂದಿದ್ದಳಂತೆ. ಹಾಗೆಯೇ ಶಿವಾಜಿಯನ್ನು ಬೆಳೆಸಿದಳು. ಇದು ಮಹಾಪುರುಷನಾಗಲು ತಾಯಿ ಕಾರಣೀ ಭೂತಳು ಎಂಬುದಕ್ಕೆ ಉದಾಹರಣೆ.

ಅದೇ ರೀತಿ ಬಾಲಕ ನರೇಂದ್ರ, ಕುದುರೆ ಓಡಿಸುವವನಾಗಬೇಕು ಎಂದಾಗ ಅವರ ತಾಯಿ, ಮಹಾಭಾರತದಲ್ಲಿ ಕೃಷ್ಣನ ಹಾಗೆ ನೀನು ಕುದುರೆ ಓಡಿಸು ಎಂದು ಹೇಳಿದ್ದರಂತೆ. ಮುಂದೆ ಆತ ಸ್ವಾಮಿ ವಿವೇಕಾನಂದರಾಗಿ ಬದಲಾಗಲು ತಾಯಿಯ ಈ ಮಾತೇ ಪ್ರೇರೇಪಣೆ ನೀಡಿತು. ಭಾರತ ಗಣಿತದಿಂದ ವೇದಾಂತವರೆಗೆ, ಭೂಗೋಳದಿಂದ ಖಗೋಳದವರೆಗೆ, ವಿಜ್ಞಾನದಿಂದ ತತ್ವಜ್ಞಾನದವರೆಗೆ ಎಲ್ಲಾ ರೀತಿಯಲ್ಲೂ ಜಗತ್ತಿಗೆ ಮಾರ್ಗದರ್ಶನ ಮಾಡಿದ ನಾಡು. ಜಗತ್ತಿನೆಲ್ಲೆಡೆ ಕತ್ತಲು ಆವರಿಸಿದಾಗ ಹಿರಿಯರು ಭಗವಂತನ ಪ್ರಾರ್ಥನೆ ಮಾಡಿದ್ದರು. ಆಗ ಭಗವಂತ ಜ್ಞಾನದ ದೀಪ ನೀಡಿದ. ಜಗತ್ತಿನ ಜನ ಬಟ್ಟೆ ಹಾಕಲು ಬಾರದೆ ಬದುಕುತ್ತಿದ್ದ ಸಮಯದಲ್ಲಿ, ಬದುಕು, ಸಂಸ್ಕಾರ, ಸಂಸ್ಕೃತಿ ಕಲಿಯುವ ಕರೆ ನೀಡಿದವರು ಭಾರತೀಯರು ಎಂದು ಅವರು ವಿವರಿಸಿದರು.

ಆವಿಷ್ಕಾರಗಳಿಗೆ ಓಂಕಾರ ಬರೆದ ನೆಲ ಗಣಿತ: ಇದು ನಮಗೆ ಪರಿಚಯವಾಗಿದ್ದು ೩೦೦೦ ವರ್ಷದ ಹಿಂದೆ. ಭೋದಾಯನ ಆಪಸ್ತಂಭ ಮತ್ತು ಕಾತ್ಯಾ ಯನ ವೇದಕಾಲದ ಗಣಿತಜ್ಞರು. ಆರ್ಯಭಟ, ಭಾಸ್ಕರಾಚಾರ್ಯ, ವರಾಹಮಿಹಿರ, ಮಹಾವೀರಾಚಾರ್ಯ, ನೀಲಕಂಠ ಸೋಮಯಾಜಿ ಮುಂತಾದವರು ನಂತರದ ಗಣಿತ ತಜ್ಞರು. ಅಂದಿನ ಕಾಲದಲ್ಲಿ ಗ್ರೀಕರಿಗೆ ತಿಳಿದಿದ್ದ ಅತಿ ದೊಡ್ಡ ಸಂಖ್ಯೆ ಹತ್ತು ಸಾವಿರ. ರೋಮನ್ನರಿಗೆ ಸಾವಿರ ಮಾತ್ರ. ಆದರೆ, ಭಾರತ ದಲ್ಲಿ ತಲ್ಲಕ್ಷಣಬಳಸುತ್ತಿದ್ದರು. ಅಂದರೆ ಹತ್ತರ ಮುಂದೆ ೫೩ ಸೊನ್ನೆ ಹಾಕಿದ ಸಂಖ್ಯೆ. ದಶಮಾನ ಪದ್ಧತಿ ಭಾರತದ್ದು. ಅಕ್ಷೋಹಿಣಿ ಮಹಾಭಾರತದಲ್ಲಿ ಬಂದಿತ್ತು.

ಸಾಹಿತ್ಯ: ಭಾರತದ ಮೊಟ್ಟಮೊದಲ ಗ್ರಂಥ ಋಗ್ವೇದ. ಇದು ರಚನೆಯಾಗಿ ೧೦ ಸಾವಿರ ವರ್ಷಕಳೆದಿವೆ. ಮೊಟ್ಟಮೊದಲ ಮಹಾಕಾವ್ಯ ರಾಮಾಯಣ. ರಾಮಾಯಣ, ಮಹಾಭಾರತ ಇವತ್ತಿಗೂ ಆದರ್ಶ. ಆರ್ಯಭಟ ಭೂಮಿಯ ವಿಸ್ತಾರವನ್ನು ಕರಾರುವಕ್ಕಾಗಿ ಹೇಳಿದ ಉದಾಹರಣೆ ಇದೆ. ಸಂಸ್ಕೃತ ಮತ್ತು ಕನ್ನಡ: ಕನ್ನಡ ನಮಗೆ ಬೇಕು, ಸಂಸ್ಕೃತ ಬೇಡ ಎಂದು ಭಿನ್ನಾಬಿಪ್ರಾಯ ಮಾಡುವುದರ ಬದಲು ಸಂಸ್ಕೃತದಿಂದಲೇ ಕನ್ನಡ ಹುಟ್ಟಿದೆ ಎಂಬುದನ್ನು ನಾವು ಮರೆಯಬಾರದು. ಕನ್ನಡ ಭಾಷೆ ಸಂಪದ್ಭರಿತವಾಗಿದೆ ಎಂದರೆ ಅದಕ್ಕೆ ಕಾರಣ, ಸಂಸ್ಕೃತ ಎಂಬುದನ್ನು ನಾವು ತಿಳಿಯಬೇಕು. ಹಾಗಿದ್ದರೆ ಸಂಸ್ಕೃತ ಇನ್ನೆಷ್ಟು ಸಂಪದ್ಭರಿತವಗಿತ್ತು ಎಂಬುದು ತಿಳಿಯುತ್ತದೆ. ಸಂಸ್ಕೃತದ ಹಯಗ್ರೀವ ಎಂಬ ಪದಕ್ಕೆ ೪ಲಕ್ಷ ಅರ್ಥಗಳನ್ನ ತಿಳಿಸಲಾಗಿದೆ.

ವಿಮಾನ: ಭಾರಧ್ವಾಜ ಮುನಿ ಶಾಸವನ್ನು ಬರೆದಿದ್ದರು. ರೈಟ್ ಸಹೋದರರು ವಿಮಾನ ಕಂಡು ಹಿಡಿವ ಮೊದಲೇ ಭಾರತದಲ್ಲಿ ವಿಮಾನವಿತ್ತು.
ಪುಷ್ಪಕ ವಿಮಾನದ ಬಗ್ಗೆ ನಾವು ಕೇಳಿದ್ದೇವೆ. ಆದರೆ, ೧೮೯೫ರಲ್ಲಿ ಶಿವಶಂಕರ ತಲ್ಪಡೆ ಎಂಬುವವರು ಮಾನವ ರಹಿತವಾದ ಮುಂಬೈನಲ್ಲಿ ಮರುತ್ಸಕ
ಎಂಬ ವಿಮಾನವನ್ನು ೨೦೦೦ ಮೀಟರ್ ಎತ್ತರದಲ್ಲಿ ಹಾರಿಸಿದ್ದರೆ. ಆದರೆ, ರೈಟ್ ಸಹೋದರರು ೧೯೦೩ರಲ್ಲಿ ವಿಮಾನ ಹಾರಾಟ ನಡೆಸಿದರು.

ಮುಖ್ಯಾಂಶಗಳು
? ಇಂಗ್ಲಿಷ್ ಭಾಷೆಯಲ್ಲಿ ಸುಮಾರು ೨ಲಕ್ಷ ಪದಗಳಿವೆ. ಆದರೆ ಸಂಸ್ಕೃತದಲ್ಲಿ ೫೦೦೦ಕೋಟಿ ಪದಗಳಿವೆ.

? ಭಾಷೆ ಪ್ರಾಣಿಯ ಮೇಲೆ ಪರಿಣಾಮ ಬೀರುವುದಾದರೆ ಮಕ್ಕಳಿಗೆ ಬೀರುವುದಿಲ್ಲವೇ?

? ಕಂಪ್ಯೂಟರ್‌ಗೆ ಹತ್ತಿರವಾದ ಭಾಷೆ ಎಂದರೆ ಸಂಸ್ಕೃತ ಎಂದು ಹೇಳಲಾಗಿದೆ.

? ಸಾವಿರಾರು ವರ್ಷದ ಹಿಂದೆ ರಚಿಸಿದ್ದ ದೇವಾಲಯದಲ್ಲಿ ಇಂದಿಗೂ ನೀರು ಸೋರುವುದಿಲ್ಲ ಎಂಬುದು ನಮ್ಮವರ ಕಲೆ, ಕಲಾತ್ಮಕತೆಯನ್ನು ಹೇಳುತ್ತದೆ.

***

ಭಾರತದ ದರ್ಶನ ಎಂದರೆ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಇಡೀ ದೇಶವನ್ನು, ಇಡೀ ಭರತ ಖಂಡವನ್ನ ನಮಗೆ ಕಟ್ಟಿಕೊಟ್ಟವರು ವಿದ್ಯಾನಂದ ಶೆಣೈ. ಅವರ ಶಿಷ್ಯಂದಿರಲ್ಲಿ ಒಬ್ಬರಾದ ಪ್ರಕಾಶ್ ಮಲ್ಪೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಬಗ್ಗೆ ಆಸಕ್ತಿ ಹೊಂದಿದ್ದಾರೆ. ಭರತ ಭೂಮಿಯ ಬಗ್ಗೆ ಸಾಕಷ್ಟು ತಿಳಿದು ಕೊಂಡು ತಮ್ಮ ಗುರುಗಳಂತೆ ಇತರರಿಗೂ ತಿಳಿಸುವ ಕೆಲಸ ಮಾಡುತ್ತಿದ್ದಾರೆ.

– ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ