Friday, 18th October 2024

ಬಾಯಿ ಬಿಟ್ಟು ಕೇಳದೇ ಇದ್ರೆ, ಡ್ರೈವರ‍್ರೂ ಸ್ಟಾಪ್ ಕೊಡಲ್ಲ

ತುಂಟರಗಾಳಿ 

ಹರಿ ಪರಾಕ್

ಸಿನಿಗನ್ನಡ

ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮತ್ತೆ ಶುರುವಾಗಿದೆ. ಹಾಗೆ ನೋಡಿದ್ರೆ, ಈ ಫಿಲ್ಮ್ ಫೆಸ್ಟಿವಲ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಹ ಮನ್ನಣೆ ಏನೂ ಇಲ್ಲ ಅನ್ನೋದು ಅದನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಅಲ್ಲ, ದೂರದಿಂದ ಬಂದ ವಿದೇಶಿಗರಿಗೂ ಗೊತ್ತು. ನಮ್ಮ ಕನ್ನಡ ಚಿತ್ರರಂಗದಿಂದ ಈ ಫಿಲ್ಮ್ ಫೆಸ್ಟಿವಲ್‌ಗೆ ಒಂದಷ್ಟು ಸಿನಿಮಾಗಳನ್ನು ಸೆಲೆಕ್ಟ್ ಮಾಡ್ತಾರೆ. ಅವುಗಳ ಗುಣಮಟ್ಟ ನೋಡಿಯೇ!, ಇಲ್ಲೇ ಇಂಥ ಸಿನಿಮಾಗಳನ್ನ ಆಯ್ಕೆ ಮಾಡ್ತಾರೆ ಅಂದ್ರೆ, ಇನ್ನು ಫಾರಿನ್ ಭಾಷೆಯ ಇನ್ನೆಷ್ಟು ಒಳ್ಳೆಯ ಸಿನಿಮಾಗಳನ್ನ ತೋರಿಸ್ತಾರೆ ಇವರು ಅನ್ನೋ ಅಸಡ್ಡೆ ನಮ್ಮವರಿಗೆ ಇದ್ದೇ ಇದೆ.

ಈ ಬಾರಿ ಕೂಡ ಅಂಥ ಕೆಲಸಕ್ಕೆ ಬಾರದ ಮಾಮೂಲಿ ಕನ್ನಡ ಚಿತ್ರಗಳು ಅಂತಾರಾ ಷ್ಟ್ರೀಯ ವೇದಿಕೆಯಲ್ಲಿ ನಮ್ಮ ಯೋಗ್ಯತೆ ತೋರಿಸಲು ಸಿದ್ಧವಾಗಿವೆ ಅನ್ನೋದು ವಿಪರ್ಯಾಸ, ಇನ್ನು ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಸಿನಿಮಾಗಿಂತ ರಾಜಕೀಯನೇ ಜಾಸ್ತಿ. ಹಾಗಂತ ಪೊಲಿಟಿಕಲ್ ಸಿನಿಮಾ ಹಾಕ್ತಾರೆ ಅಂದ್ಕೊಬೇಡಿ. ನಮ್ಮ ಸಿನಿಮಾ ಮಂದಿಯ ರಾಜಕಾರಣ ಜಾಸ್ತಿ ಅಂತ ಅದರ ಅರ್ಥ. ಹಿಂದೊಮ್ಮೆ, ನಮ್ಮ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ‘ಅಯ್ಯೋ, ಈ ಫಿಲ್ಮ್ ಫೆಸ್ಟಿವಲ್ ಯಾಕ್ರೀ ಮಾಡ್ತಾರೆ, ಇವತ್ತು ಜಾಗತಿಕ ಸಿನಿಮಾಗಳೆಲ್ಲ ಆನ್ ಲೈನ್ ನಲ್ಲಿ, ಡಿವಿಡಿಯಲ್ಲಿ ಲಭ್ಯವಿದೆ. ಅಲ್ಯಾಕೆ ಹೋಗಿ ನೋಡಬೇಕು’ ಅಂತ ಕಾಲೆಳೆದಿದ್ದರು.

ಆದರೆ ನಂತರ ಅದೇ ಸಿಂಗ್ ಬಾಬು ತಾವೇ ಅಕಾಡೆಮಿ ಅಧ್ಯಕ್ಷರಾಗಿ ತಮ್ಮ ಆಳ್ವಿಕೆಯಲ್ಲೂ ಇದೇ ಫಿಲ್ ಫೆಸ್ಟಿವಲ್ ಆಯೋಜಿಸಿ ಅದೇ ಕೆಲಸ ಮಾಡಿದ್ದರು. ಒಟ್ಟಿನಲ್ಲಿ ಬೆಂಗಳೂರು ಫಿಲ್ಮ್ ಫೆಸ್ಟಿವಲ್‌ನ ಗುಣಮಟ್ಟ ಹೆಚ್ಚಾಗಲಿ, ಬ್ರಿಗೇಡ್ ರೋಡಲ್ಲಿ ಓಡಾಡೋ ಫಾರಿನರ್ಸ್‌ನ ತೋರಿಸಿ, ಇವರೆಲ್ಲ ನಮ್ಮ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಬಂದೋರು ಅಂತ ಸುಳ್ಳು ಹೇಳ್ಕೊಂಡ್ ತಿರುಗೋ ಪರಿಸ್ಥಿತಿ
ಬಾರದೇ ಇರಲಿ ಅನ್ನೋದು ಸಿನಿಪ್ರೇಮಿಗಳ ಆಶಯ.

ಲೂಸ್ ಟಾಕ್
ವ್ಲಾಡಿಮಿರ್ ಪುಟಿನ್ (ಕಾಲ್ಪನಿಕ ಸಂದರ್ಶನ)

ಅಲ್ರೀ ಸ್ವಾಮಿ, ನಿಮಗ್ ಬ್ಯಾರೆ ಕೆಲ್ಸ ಇಲ್ವ, ಉಕ್ರೇನ್ ಮೇಲೆ ಅಟ್ಯಾಕ್ ಮಾಡಿ ಸುಮ್ನೆ ಎಲ್ರಿಗೂ ತೊಂದ್ರೆ ಕೊಡ್ತಾ ಇದ್ದೀರ. ನಿಮ್ಗೆ ಯಾರೂ ಏನೂ ಹೇಳಲ್ವಾ? 
ಯುದ್ಧದ ವಿಷ್ಯ, ಬ್ಯಾಡಮ್ಮ ರಷ್ಯಾ ಅಂತ ಒಂದಿಬ್ರು ಹೇಳಿದ್ರು. ಅಯ್ಯೋ, ಸುಮ್ನಿರು ಶಿಷ್ಯ ಅಂತ ಅವರ ಬಾಯಿ ಮುಚ್ಚಿಸಿದೆ.

ಆದ್ರೂ ನೀವ್ ಮಾಡ್ತಾ ಇರೋದ್ ಸರೀನಾ. ನಮ್ಮ ದೇಶದವರನ್ನು ಈಗ ಅಲ್ಲಿಂದ ಏರ್ ಲಿಫ್ಟ್ ಮಾಡ್ತಾ ಇದ್ದೀವಿ ಗೊತ್ತಾ. ಸುಮ್ನೆ ಎಲ್ಲರಿಗೂ ತೊಂದ್ರೆ

ಏರ್ ಲಿಫ್ಟ್ ಯಾಕ್ ಮಾಡಿಸಿದ್ರಿ, ಉಕ್ರೇನ್ ಅಂತ ಹೆಸರಿಟ್ಕೊಂಡಿದ್ದಾರೆ, ಕ್ರೇನ್‌ನಲ್ಲಿ ಹತ್ತಿಸಿ ಶಿಫ್ಟ್ ಮಾಡೋಕೆ ಹೇಳಬೇಕಿತ್ತು ಅವ್ರಿಗೆ.

ಸರಿ, ಉಕ್ರೇನ್ ಅಧ್ಯಕ್ಷ, ಸೈನಿಕರ ಜತೆ ತಾವೂ ಹೋರಾಟಕ್ಕೆ ಇಳಿದಿದ್ದಾರೆ. ನೀವು ಫೀಲ್ಡಿಗೆ ಇಳಿಯಲ್ವಾ?
ಅಯ್ಯೋ, ನಾನು ತುಂಬಾ ಸಾಧು ಮನುಷ್ಯ ಕಣ್ರೀ. ಅವರ ಥರ ಗನ್ ಹಿಡ್ಕೊಂಡು ಇನ್ನೊಬ್ರನ್ನ ಸಾಯಿಸೋಕೆ ನಂಗೆ ಮನ್ಸೇ ಬರಲ್ಲ..

ಅಯ್ಯಯ್ಯೋ, ಭೂತದ ಬಾಯಲ್ಲಿ ಭಗವದ್ಗೀತೆ. ಸರಿ, ನಿಜ ಹೇಳಿ, ನಿಮಗೆ ಈ ಯುದ್ಧದ ಯೋಚನೆ ಬಂದಿದ್ ಯಾಕೆ ಅಂತ?

ಅಯ್ಯೋ, ನಿಮ್ ಒಳ್ಳೇದಕ್ಕೆನೇ ರೀ ಮಾಡ್ತಾ ಇರೋದು. ನೀವು ಹಿಜಾಬು, ಹಿಂದೂ ಮುಸ್ಲಿಂ ಹೊಡೆದಾಟ, ಭೀಮ್ ಆರ್ಮಿ ಪ್ರತಿಭಟನೆ ಅಂತ ಗಲಾಟೆ ಮಾಡ್ಕೊತಾ ಇದ್ರಲ್ಲ. ಅದಕ್ಕೆ ಮೀಡಿಯಾಗಳನ್ನ ಡೈವರ್ಟ್ ಮಾಡೋಕೆ ಅಂತನೇ ನಾನು ಉಕ್ರೇನ್ ಮೇಲೆ ಅಟ್ಯಾಕ್ ಮಾಡಿದ್ದು.

ಸರಿ, ನಮ್ ಪ್ರಧಾನಿ ನರೇಂದ್ರ ಮೋದಿ ಏನ್ ಹೇಳಿದ್ರು ನಿಮ್ಗೆ? ಅವ್ರ್ ಮಾತಾದ್ರೂ ಕೇಳ್ತೀರಾ?
ಯಾರನ್ನಾದ್ರೂ ಶೂಟ್ ಮಾಡೋದಿದ್ರೆ ‘ಕ್ಯಾಮೆರಾ’ದಿಂದ ಮಾಡು, ಬಂದೂಕಲ್ಲಿ ಅಲ್ಲ ಅಂತ ಹೇಳಿದ್ದಾರೆ, ನೋಡೋಣ.

ನೆಟ್ ಪಿಕ್ಸ್
ಖೇಮುಗೆ ಯಾವಾಗ್ಲೂ ಇನ್ನೊಬ್ಬರ ಹೀಯಾಳಿಸಿ ಮಾತಾಡೋದು ಅಭ್ಯಾಸ ಆಗಿತ್ತು. ಮನೆಯಲ್ಲಿ ಹೆಂಡತಿ ಏನೇ ಹೇಳಿದ್ರೂ ಅವಳ ಮಾತಿಗೆ ಮರ್ಯಾದೆ ಕೊಡದೆ ‘ಮೈ ಫುಟ್’ ಅಂತಿದ್ದ. ಆಫೀಸಿನಲ್ಲೂ, ಯಾರು ಏನ್ ಒಳ್ಳೆ ಕೆಲಸ ಮಾಡಿದ್ರೂ ಅದನ್ನು ಇನ್ನೊಬ್ಬರು ಯಾರಾದ್ರೂ ಹೊಗಳಿದ್ರೆ ಸಾಕು, ಅಯ್ಯೋ, ಅದೇನ್ ಮಹಾ, ‘ಮೈ ಫುಟ್’ ಅಂತಲೇ ಮಾತು ಶುರು ಮಾಡ್ತಾ ಇದ್ದ. ಹಾಗಾಗಿ ಖೇಮು ಕಂಡ್ರೆ ಆಫೀಸಿನಲ್ಲಿ ಯಾರಿಗೂ ಇಷ್ಟ ಇರಲಿಲ್ಲ. ಆದರೆ ಅವನ ಬಾಯಿ ಮುಚ್ಚಿಸೋಕಾಗದೆ ಒಳಗೊಳಗೇ ಬಯ್ಕೊಂಡು ಸುಮ್ನೆ ಇರ್ತಿದ್ರು. ಒಂದು ದಿನ ಆಫೀಸಿನಲ್ಲಿ ಖೇಮು ಸಹೋದ್ಯೋಗಿಯಾಗಿದ್ದ ಸೋಮು ಬೆಳಗ್ಗೆನೇ ಬಂದವನು ಎಲ್ಲರಿಗೂ ಇಲ್ಲಿ ನೋಡಿ ಅಂತ ಒಂದು ಗಿಳಿ ತೋರಿಸುತ್ತಿದ್ದ.

ಎಲ್ಲರೂ ಏನು ಈ ಗಿಳಿ ವಿಶೇಷ? ಅಂತ ಕೇಳಿದ್ರು.ಅದಕ್ಕೆ ಸೋಮು ಇದು ಡೆಡ್ಲಿ ಗಿಣಿ, ಇದರ ಕರಾಮತ್ತು, ನೀವೇ ನೋಡಿ ಅಂತ ಗಿಣಿಯನ್ನ ಟೇಬಲ್ ಮೇಲಿಟ್ಟು ಅದರ ಕಡೆ ನೋಡಿ, ‘ಡೆಡ್ಲಿ ಗಿಣಿ, ಟೇಬಲ’ ಅಂದ. ಏನಾಶ್ಚರ್ಯ, ಗಿಣಿ ತನ್ನ ಕೊಕ್ಕಿನಿಂದ ಆ ಇಡೀ ಟೇಬಲ್
ಅನ್ನು ಕುಕ್ಕಿ ಕುಕ್ಕಿ ಎರಡೇ ಕ್ಷಣದಲ್ಲಿ ಪುಡಿ ಮಾಡಿಬಿಡ್ತು. ಎಲ್ಲರೂ ದಂಗು ಬಡಿದು ಹೋದರು. ಆಫೀಸಿನ ಜವಾನ ‘ಡೆಡ್ಲಿ ಗಿಣಿ, ವಿಂಡೋ’ ಅಂದ. ಗಿಣಿ ಒಂದೇ ಕ್ಷಣದಲ್ಲಿ ಇಡೀ ಕಿಟಕಿಯನ್ನು ಕುಕ್ಕಿ ಕುಕ್ಕಿ ಪುಡಿ ಮಾಡಿಬಿಡ್ತು. ಅಷ್ಟರಲ್ಲಿ ಖೇಮು ಆಫೀಸಿಗೆ ಬಂದ. ಎಲ್ಲರೂ ಸುತ್ತು ವರೆದು ನಿಂತಿರೋದು ನೋಡಿ, ಏನ್ ನಡೀತಾ ಇದೆ ಇಲ್ಲಿ? ಅಂತ ಕೇಳಿದ. ಅದಕ್ಕೆ ಒಬ್ಬ ಎಂಪ್ಲಾಯಿ, ‘ಸಾರ್ ಇದು ಡೆಡ್ಲಿ ಗಿಣಿ’ ಅಂದ. ಅದನ್ನು ಕೇಳಿದವನೇ ಖೇಮು ಎಂದಿನಂತೆ ಹೇಳಿದ ‘ಡೆಡ್ಲಿ ಗಿಣಿ? ಮೈ ಪುಟ್’.

ಲೈನ್ ಮ್ಯಾನ್
ಬಸ್ಸಲ್ಲಿ ಕಣ್ ಮುಚ್ಕೊಂಡು ಕೂತಿದ್ದವನೊಬ್ಬನನ್ನು ನೋಡಿ ಪಕ್ಕದಲ್ಲಿದ್ದವನು ಕೇಳಿದ
-ಯಾಕ್ ಸಾರ್ ಹುಷಾರಿಲ್ವಾ ?
-ಹಂಗೇನಿಲ್ಲ, ಬಸ್ಸಲ್ಲಿ ಈ ವಯಸ್ಸಾದವರು ನಿಂತ್ಕೊಂಡ್ ಪ್ರಯಾಣ ಮಾಡೋದನ್ನ ನನ್ ಕೈಲಿ ನೋಡಕಾಗಲ್ಲ ಅದಕ್ಕೆ..

ಸಾರಿಗೆ ಗಾದೆ
-ಬಾಯಿ ಬಿಟ್ಟು ಕೇಳದೇ ಇದ್ರೆ, ಬಿಎಂಟಿಸಿ ಡ್ರೈವರ್ರೂ ಸ್ಟಾಪ್ ಕೊಡಲ್ಲ
ಜಯಂತ್ ಕಾಯ್ಕಿಣಿ ಅವ್ರು ಸಣ್ಣ ಏಜಲ್ಲಿ ಸಿನಿಮಾಗೆ ಬಂದು ಹೀರೋ ಆಗಿದ್ದಿದ್ರೆ ಏನಾಗ್ತಿತ್ತು?

-‘ಓದು ಬರಹ’ ಬರೋ ಹೀರೋಗಳ ಸಂಖ್ಯೆ ಜಾಸ್ತಿ ಆಗ್ತಿತ್ತು.
ಜಯಂತ್ ಕಾಯ್ಕಿಣಿ ತಮ್ಮ ಹಾಡುಗಳಲ್ಲಿ ‘ಜಾತ್ರೆ, ಸಂತೆ’ ಅನ್ನೋ ಪದಗಳನ್ನ ಜಾಸ್ತಿ ಬಳಸ್ತಾರೆ ಯಾಕೆ?
ಜನ ಕೇಳ್ತಾ ಇದ್ರೆ ‘ಹಂಗೆ ಕಳ್ದೋಗ್ಬಿಡ್ಬೇಕು’ ಅಂತ

ಅನಿಸುತಿದೆ ಯಾಕೋ ಇಂದು ಹಾಡು ಹಿಟ್ ಆದಾಗ ಮೀಡಿಯಾದವ್ರು, ಅವ್ರತ್ರ ಹೋಗಿ ಮೈಕ್ ಹಿಡಿದು ಏನಂತ ಕೇಳಿದ್ರು?
-‘ಇವಾಗ್ ನಿಮಗೆ ಏನನ್ನಿಸ್ತಾ ಇದೆ?’
ಗಾಂಧಿನಗರದೋರು ಸಾಹಿತಿಗಳಿಗೆ ಜಾಸ್ತಿ ಮರ್ಯಾದೆ ಕೊಡಲ್ಲ. ಆದ್ರೂ ಜಯಂತ್ ಕಾಯ್ಕಿಣಿ ಅವರಿಗೆ ಮಾತ್ರ ಮರ್ಯಾದೆ ಸಿಕ್ತು. ಯಾಕೆ?
-ಹೀರೋಯಿನ್ ಆಗ್ಲಿ, ಐಟಂ ಗರ್ಲ್ ಆಗ್ಲಿ, ಬಾಂಬೆಯಿಂದ ಕರೆಸಿದವರ ಬಗ್ಗೆ ನಮ್ಮವರಿಗೆ ಪ್ರೀತಿ ಜಾಸ್ತಿ. ಕಾಯ್ಕಿಣಿನೂ ಬಾಂಬೆಯಿಂದ ಬಂದೋರಲ್ವಾ ಅದಕ್ಕೆ ಇರ್ಬೇಕು.

ಫ್ರೀ ಟೈಮ್ ಮಾತು
ರಣಭೂಮಿಯಲ್ಲಿ ಯುದ್ದ ನಿಲ್ಲಿಸಿದ್ರೆ- ಕದನ ವಿರಾಮ

ವಿಧಾನಸೌಧದಲ್ಲಿ ಜಗಳ ನಿಲ್ಲಿಸಿದ್ರೆ -ಸದನ ವಿರಾಮ
ಬೆಳೆಗೆ ಸರಿಯಾದ ಬೆಲೆ ಸಿಗದ ರೈತನ ಸಂಕಟ -‘ಮಂಡಿ’ ನೋವು
ಮತಾಂತರ ವಿಷಯದ ಬಗ್ಗೆ ಹಿಂದೂ ಕ್ರಿಶ್ಚಿಯನ್ ಜಗಳ ಆದ್ರೆ ಹಿಂದೂ- ಅವರು ಬಹಿರಂಗವಾಗಿ ಚರ್ಚೆಗೆ ಬರಲಿ
ಕ್ರಿಶ್ಚಿಯನ್- ಅವರು ಬಹಿರಂಗವಾಗಿ ಚರ್ಚಿಗೆ ಬರಲಿ