Monday, 25th November 2024

ಆಕಾಶಕ್ಕೆ ಎಂಜಲು ಉಗುಳಿದರೆ ಅದು ನಮ್ಮ ಮೇಲೆಯೇ ಬೀಳುತ್ತದೆ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ನಾವೇಕೆ ಈ ರೀತಿ ಸಿನಿಕರಾಗುತ್ತಿದ್ದೇವೆ? ಯಾರಾದರೂ ಒಂದು ಒಳ್ಳೆಯ ಕೆಲಸ ಮಾಡಲು ಹೊರಟರೆ, ಯಾಕೆ ಈ ಪರಿ ಮುರಕೊಂಡು ಬೀಳ್ತಾರೆ? ಒಳ್ಳೆಯ ಕೆಲಸ ಮಾಡಲು ಮುಂದಾದವರಿಗೆ ಹಣಕಾಸು ನೆರವು ಅಥವಾ ಇನ್ನಿತರ ಸಹಾಯಮಾಡುವುದು ದೂರವೇ ಉಳಿಯಿತು. ಕನಿಷ್ಠ ಒಂದು ಒಳ್ಳೆಯ ಮಾತನ್ನೂ ಹೇಳದಷ್ಟು ಕೃಪಣರಾಗುತ್ತಿದ್ದೇವಲ್ಲ? ಇಂಥ ಮನಃಸ್ಥಿತಿ ಹೊಂದಿರುವವರ ಬಗ್ಗೆ ಹೆಚ್ಚೆಂದರೆ ಮರುಕ ಅಥವಾ ಅನುಕಂಪ ವ್ಯಕ್ತಪಡಿಸಬಹುದಷ್ಟೆ.

ನಾನು ಯಾಕಾಗಿ ಹೀಗೆ ಹೇಳುತ್ತಿದ್ದೇನೆ ಎಂದು ನಿಮಗೆ ಅರ್ಥವಾಗಿರಬಹುದು. ಭಾರತ ಸರಕಾರ ಒಂದು ಒಳ್ಳೆಯ ಕೆಲಸ ಮಾಡಿದರೆ, ಅದರ ಯಶಸ್ಸನ್ನು ಪ್ರಧಾನಿ ಮೋದಿಯವರಿಗೆ ಸಲ್ಲಿಸುವುದು ಬೇಡ. ಕನಿಷ್ಠ ನಮ್ಮ ದೇಶದ ಬಗ್ಗೆಯಾದರೂ ಅಭಿಮಾನಪಡಬಹುದಲ್ಲ. ನಮ್ಮ ದೇಶ ಇಂಥ ಒಂದು ಉತ್ತಮ ಕೆಲಸ ಮಾಡಿದೆ ಎಂದು ಹೇಳಬಹುದಲ್ಲ? ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಂತ್ರಸ್ತರಾಗಿರುವ ಭಾರತೀಯರನ್ನು ತಾಯ್ನಾಡಿಗೆ ಕರೆ ತರುವ ವಿಷಯದಲ್ಲಿ ಉಳಿದೆಲ್ಲ ರಾಷ್ಟ್ರಗಳಿಗಿಂತ ಭಾರತ ಮುಂಚೂಣಿಯಲ್ಲಿದೆ. ಆದರೆ ಈ ವಿಷಯ ವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಅನೇಕ ಭಾರತೀಯರೇ ಸಿದ್ಧರಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರಿಗೂ ಅದು ಆಪ್ಯಾಯನವಾಗಿ ಅಥವಾ ಸಹ್ಯವಾಗಿ ತೋರುತ್ತಿಲ್ಲ. ಅವರ ಹೊಟ್ಟೆ ಯಲ್ಲಿ ಏನೋ ಹುಳಿ, ಏನೋ ಸಂಕಟ.

ಹೀಗಾಗಿ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಈ ಭರದಲ್ಲಿ ತಮ್ಮ ದೇಶವನ್ನೂ ಹೀಗಳೆಯುತ್ತಿದ್ದಾರೆ. ಮೋದಿಯವರನ್ನು ಹೊಗಳ ಬೇಕೆಂದು ಯಾರೂ ಅಪೇಕ್ಷಿಸುವು ದಿಲ್ಲ. ಇದು ಪ್ರಜಾಪ್ರಭುತ್ವ. ಅವರನ್ನು ತೆಗಳಲು ಎಲ್ಲರಿಗೂ ಅಧಿಕಾರವಿದೆ. ಆದರೆ ಒಳ್ಳೆ ದನ್ನು ಮಾಡಿ ದಾಗ ಹೊಗಳಲೂ ಬೇಕು. ಬರೀ ವಿರೋಧವೇ ಅಸ್ತ್ರವಾದರೆ, ಅದು ವ್ಯಸನದಂತೆ ಭಾಸವಾಗುತ್ತದೆ. ಅದು ಮಲಿನತೆಯ ಸಂಕೇತ. ಆಗ ಅವರ ಟೀಕೆ ಗಾಗಲಿ ಅಥವಾ ಪ್ರಶಂಸೆಗಾಗಲಿ ಹೆಚ್ಚಿನ ಅರ್ಥವಿರುವುದಿಲ್ಲ.

ಅದು ಬಜೆಟ್ ದಿನದ ಪ್ರತಿಪಕ್ಷಗಳ ನಾಯಕರ ಮಾತಿನಂತೆ ಕೇಳಿಸುತ್ತದೆ. ಇಡೀ ಬಜೆಟ್ ನಲ್ಲಿ ಒಂದು ಒಳ್ಳೆಯ ಮಾತನ್ನು ಹೇಳುವ
ಒಂದೇ ಒಂದು ಅಂಶವೇ ಸಿಗುವುದಿಲ್ಲವಾ? ಇದು ನಮ್ಮ ಸಾರ್ವಜನಿಕ ಬದುಕು, ಮನಸ್ಸು ರಸಾತಳ ತಲುಪಿರುವುದರ ಪ್ರತೀಕ. ‘ನಮ್ಮ ಮಣ್ಣನ್ನು ಸಂರಕ್ಷಿಸಿ, ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ’ ಎಂದು ಸದ್ಗುರು ಅವರು ಜಾಗತಿಕ ಅಭಿಯಾನ ಆರಂಭಿಸಿದರೆ, ಅದರ ಭಾಗ ವಾಗಿ ಅವರು ಮೂವತ್ತು ಸಾವಿರ ಕಿ.ಮೀ. ದೂರವನ್ನು ಬೈಕಿನಲ್ಲಿ ಪಯಣ ಮಾಡಿ ಜಾಗೃತಿ ಮೂಡಿಸಲು ಹೊರಟರೆ, ಅದಕ್ಕೂ ಕೊಂಕು ನುಡಿಯುವುದಾ? ಅವರ ಆಶಯ ದಲ್ಲಿ ನಂಜು ಹುಡುಕುವುದಾ? ಅವರನ್ನು ಟೀಕಿಸುವ ಮುನ್ನ, ನಮಗೆ ಯೋಗ್ಯತೆ ಇದೆಯಾ, ಅರ್ಹತೆ ಇದೆಯಾ, ಈ ನಿಟ್ಟಿನಲ್ಲಿ ನಾವು ಏನುಮಾಡಿದ್ದೇವೆ ಎಂಬ ಪ್ರಶ್ನೆ ಮಾಡಿಕೊಂಡರೆ ಸಾಕು. ಆಕಾಶಕ್ಕೆ ಎಂಜಲು ಉಗುಳಿದರೆ ಅದು ನಮ್ಮ ಮೇಲೆಯೇ ಬೀಳುತ್ತದೆ ಎಂಬುದು ಗೊತ್ತಿರಲಿ.

ಒಂದೇ ಜನ್ಮ.. ಆದರೆ ?

ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ಎಂದಿನಂತೆ, ಬೆಳಗಿನ ಗುಡ್ ಮಾರ್ನಿಂಗ್ ಸಂದೇಶದ ಜತೆಗೆ, ಒಂದು ಮುದ್ದೆ ಮಾಡಿ ಬಿಸಾಡಿದ ಕಾಗದವನ್ನು ಬಿಡಿಸಿ, ಅದನ್ನು ಫೋಟೋ ಹೊಡೆದು ಕಳಿಸಿದ್ದರು. ಆ ಕಾಗದ ಹಾಗೆ ಕಸದ ಡಬ್ಬ ಸೇರಿದ್ದರೆ, ಇದನ್ನು ಬರೆಯುವ ಪ್ರಸಂಗವೇ ಬರುತ್ತಿರಲಿಲ್ಲ. ಇರಲಿ. ನಮಗಿರುವುದು ಒಂದೇ ಜೀವನ. ಆದರೆ ನಾವು ಒಂದೇ ಐಡೆಂಟಿಟಿ (ಗುರುತು-ಪರಿಚಯ) ಹೊತ್ತು ಸಾಯಬೇಕಿಲ್ಲ.

ನಾನು ಪತ್ರಕರ್ತನಾದರೆ, ಸಾಯೋ ತನಕವೂ ಪತ್ರಕರ್ತನಾಗಿಯೇ ಇರಬೇಕಿಲ್ಲ. ಹಾಗಿರುವುದು ನಿಮಗೆ ನೀವು ಮೋಸಮಾಡಿ ಕೊಂಡಂತೆ. ನೀವು ಒಳ್ಳೆಯ ಕೊಳಲು ವಾದಕರಾಗಬಹುದು, ಸಂಗೀತಗಾರರಾಗಬಹುದು. ಒಳ್ಳೆಯ ಗಾರ್ಡನರ್ ಆಗಬಹುವುದು. ತೋಟ ಮಾಡಬಹುದು, ಹಣ್ಣು ಬೆಳೆಯಬಹುದು. ಹಗಲು ಹೊತ್ತಿನಲ್ಲಿ ನೀವು ಹೋಟೆಲಿನಲ್ಲಿ ಮಾಣಿಯೋ, ಮ್ಯಾನೇಜರೋ ಆಗಿದ್ದರೆ, ಜೀವನವಿಡೀ ಅದೇ ಚಾಕರಿ ಮಾಡಿ ಸಾಯಬೇಕೆಂದಿಲ್ಲ. ರಾತ್ರಿ ಹೊತ್ತಿನಲ್ಲಿ ನಿಮ್ಮ ಪೇಂಟಿಂಗ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮಾರಾಟ ಮಾಡಿಹೆಸರು ಮತ್ತು ಹಣ ಗಳಿಸಬಹುದು.

ನೀವು ಉತ್ತಮ ಕ್ರಿಕೆಟ್ ಅಥವಾ ಬ್ಯಾಡ್ಮಿಂಟನ್ ಆಟಗಾರರಾಗಿದ್ದರೆ, ಮೂವತ್ತೈದು ವರ್ಷಕ್ಕೆ ನಿವೃತ್ತರಾಗಿಬಿಡುತ್ತೀರಿ. ಮುಂದೇನು? ಅಲ್ಲಿವರೆಗಿನ ನಿಮ್ಮ ಆಟ, ಸಾಧನೆಗೆ ತೃಪ್ತಿ ಪಡುವ ಬದಲು, ಒಳ್ಳೆಯ ಕೋಚ್ ಆಗಬಹುದು, ಒಳ್ಳೆಯ ಕ್ರೀಡಾ ಶಾಲೆ ತೆರೆಯಬಹುದು, ಮ್ಯಾನೇಜಮೆಂಟ್ ಗುರುವಾಗಬಹುದು, ಅಂಪೈರ್ ಆಗಬಹುದು.

ಒಂದು ವೇಳೆ ನೀವು ಶಾಲಾ ಶಿಕ್ಷಕರಾಗಿದ್ದರೆ, ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರೆ, ಬಿಡುವಿನ ವೇಳೆಯಲ್ಲಿ ಬರಹಗಾರರಾಗಬಹುದು. ಪತ್ರಿಕೆಗಳಿಗೆ ಬರೆಯಬಹುದು. ಕತೆ, ಕಾದಂಬರಿ ಬರೆದು, ಶಿಕ್ಷಕ ವೃತ್ತಿಗಿಂತ ಹೆಚ್ಚಿನ ಹೆಸರು ಮಾಡಬಹುದು. ಯಾರು ಸಹ ನಿಮ್ಮನ್ನು ಒಂದೇ ಉದ್ಯೋಗ ಮಾಡಿ, ಒಂದೇ ಕೆಲಸಕ್ಕೆ ಅಂಟಿಕೊಳ್ಳಿ ಎಂದು ಆದೇಶ ಕೊಟ್ಟು ಕಳಿಸಿರುವುದಿಲ್ಲ. ಆದರೆ ನಾವು ಮಾತ್ರ ನಮಗೆ ಚೌಕಟ್ಟು ತೊಡಿಸಿಕೊಂಡು ಬದುಕುತ್ತೇವೆ. ನಾವು ಮಾಡುವ ಕೆಲಸದ ಬಗ್ಗೆ ಪೂರ್ಣ ಸಮಾಧಾನ, ಸಂತೃಪ್ತಿ ಹೊಂದದೇ, ನಮ್ಮ ಹಣೆಬರಹವನ್ನು ಶಪಿಸುತ್ತ ಜೀವಿಸುತ್ತೇವೆ. ನಿಮಗೆ ಬ್ಯಾಂಕಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುವುದು ಇಷ್ಟವಿಲ್ಲದಿದ್ದರೆ, ಆ ಕೆಲಸವನ್ನು ಬಿಡುವುದೂ ಸಾಧ್ಯವಿಲ್ಲದಿದ್ದರೆ, ಆ ಕೆಲಸವನ್ನು ಮನಸ್ಸಿಲ್ಲದ ಮನಸ್ಸಿನಿಂದ ಮಾಡುತ್ತಲೇ, ನಿಮಗಿಷ್ಟವಾದ ಕೆಲಸವನ್ನೂ ಮಾಡಬಹು ದಲ್ಲ? ನೀವು ಉತ್ತಮ ನೃತ್ಯಗಾರ್ತಿಯಾಗಿದ್ದರೆ, ಒಳ್ಳೆಯ ಫ್ಯಾಷನ್ ಡಿಸೈನರ್ ಆಗುವುದು ಬೇಡ ಎಂದು ಯಾರು ಹೇಳಿದ್ದಾರೆ? ನೀವು ಉತ್ತಮ ಅಡುಗೆ ಮಾಡುವವರಾಗಿದ್ದರೆ, ಕೇಟರಿಂಗ್ ಕಾಂಟ್ರಾಕ್ಟ್ ತೆಗೆದುಕೊಳ್ಳೋದು ಬೇಡ ಅಂತ ಯಾರಾದರೂ ಹೇಳಿದ್ದಾರಾ?
ನೀವು ಒಳ್ಳೆಯ ಪೇಂಟರ್ ಆಗಿದ್ದರೆ, ಮದುಮಗಳಿಗೆ ಮೆಹಂದಿ ಹಾಕುವ ಕೆಲಸವನ್ನೂಮಾಡಬಹುದಲ್ಲ.

ಹಚ್ಚೆ ಹಾಕುವ (Tattoo) ಉದ್ಯೋಗವನ್ನೂ ಮಾಡಬಹುದಲ್ಲ. ಒಳ್ಳೆಯ ತರಕಾರಿ ವ್ಯಾಪಾರಿಯಾಗಿಯೂ, ಉತ್ತಮ ಫೋಟೋ ಗ್ರಾಫರ್ ಆಗಬಹುದಲ್ಲ? ಮುಖೇಶ್ ಅಂಬಾನಿಗೆ ತಾನು ಗಣ್ಯ ಉದ್ಯಮಿ ಅಥವಾ ಅತಿ ಶ್ರೀಮಂತ ಎಂದು ಕರೆಯಿಸಿಕೊಳ್ಳುವುದರ ಹೊರತಾಗಿ ಉತ್ತಮ ತಬಲವಾದಕ, ಹಾರ್ಮೋನಿಯಂ ವಾದಕ ಅಥವಾ ಉತ್ತಮ ಶಾಮಿಯಾನ ಕಟ್ಟುವವ ಎಂದು ಕರೆಯಿಸಿಕೊಳ್ಳುವ ಹಂಬಲ ಇಲ್ಲದಿರಬಹುದು. ಅವರಿಗೆ ಅದೊಂದೇ ಐಡೆಂಟಿಟಿ ಸಾಕು.

ಹಾಗಿದ್ದರೂ ನನ್ನ ದೃಷ್ಟಿಯಲ್ಲಿ ಅಂಬಾನಿ ಬಡವರೇ. ಯಾಕೆ ಗೊತ್ತಾ? ಎಷ್ಟೇ ಆದರೂ ಅವರಿಗೆ ಒಂದೇ ಐಡೆಂಟಿಟಿ. ಶ್ರೀಮಂತ ಎಂಬುದರ ಹೊರತಾಗಿ ಅವರನ್ನು ಬೇರೆ ಏನೆಂದು ಸಂಬೋಧಿಸುವುದು? ಅಷ್ಟರ ಮಟ್ಟಿಗೆ ಅವರು ತಮ್ಮ ಬದುಕನ್ನು ಕಿರಿದುಗೊಳಿಸಿಕೊಂಡಿದ್ದಾರೆ ಎಂದೇ ನನ್ನ ಭಾವನೆ. ಹೌದು, ನಮಗಿರುವುದು ಒಂದೇ ಜೀವನ. ಆದರೆ ನಾವು ಒಂದೇ ಐಡೆಂಟಿಟಿ ಹೊತ್ತು ಸಾಯಬೇಕಿಲ್ಲ.

ವೃತ್ತಿಯಲ್ಲಿ ಸೇವಾ ಮನೋಭಾವ
ಮೊನ್ನೆ ಅಂಕಣಕಾರ ರಘುರಾಮನ್ ಬರೆದಿದ್ದರು. ದೆಹಲಿಗೆ ಹೋಗುವಾಗಿನ ತಮ್ಮ ವಿಮಾನ ಪ್ರಯಾಣದ ಅನುಭವವನ್ನು ಬರೆದಿದ್ದರು. ಅದರಲ್ಲೂ ವಿಶೇಷವಾಗಿ, ಆ ವಿಮಾನದಲ್ಲಿದ್ದ ಗಗನಸಖಿಯ ಬಗ್ಗೆ ಬರೆದಿದ್ದರು – ನಾನು ಪ್ರಯಾಣಿಸುತ್ತಿರುವ ವಿಮಾನ ತುರ್ತು ಭೂಸ್ಪರ್ಶ ಕ್ಕಾಗಿ ಕಾಯುತ್ತಿದೆ ಎಂದಿಟ್ಟುಕೊಳ್ಳಿ. ನಾನು ಕಿಟಿಕಿಯಿಂದ ಹೊರಗಿನ ದೃಶ್ಯಗಳನ್ನು ನೋಡಬಹುದೇ ಹೊರತು ಇನ್ನೇನೂ ನನ್ನಿಂದ ಸಾಧ್ಯವಿಲ್ಲ, ಅಲ್ಲವೇ? ಬಾಗಿಲಲ್ಲಿ ಬೆಂಕಿಯ ಕೆನ್ನಾಲಿಗೆ ಇಲ್ಲವೆಂದಾದಲ್ಲಿ, ಯಾವುದೇ ಅಪಾಯದ ಲಕ್ಷಣ ಇಲ್ಲವೆಂದಾದಲ್ಲಿ ನೀವು ಸಲೀಸಾಗಿ ಹೊರಹೋಗಬಲ್ಲಿರಿ.

ಅದಾವುದೂ ಇಲ್ಲವೆಂದಾದಲ್ಲಿ ನೀವು ಅಚಾನಕ್ಕಾಗಿ ಹಾರಿ ಬದುಕುಳಿಯುವ ಯತ್ನ ಮಾಡಬೇಕು. ನಿಮ್ಮ ಸಹಯಾತ್ರಿಗಳು ಕೂಡ ನಿಮ್ಮ ಸಹಕಾರವನ್ನು ಆ ಸಂದರ್ಭದಲ್ಲಿ ಕೇಳಿಯೇ ಕೇಳುತ್ತಾರೆ. ಬಾಗಿಲ ಬಳಿ ನಿಂತು ಇವೆಲ್ಲವನ್ನೂ ನೋಡುತ್ತಿದ್ದರೆ ಏನೆನ್ನಿಸಬಹುದು? ಏರ್ ಇಂಡಿಯಾದ ಡ್ರೀಮ್ ಲೈನರ್ ಏರ್ ಕ್ರಾಫ್ಟ್ 787-800 ರಲ್ಲಿ ನೀಲಿಮಾ ರಿಪೋತೆ ಎಂಬ ಹೆಸರಿನ ಸೀನಿಯರ್ ಏರ್ ಹೋಸ್ಟೆಸ್ (ಗಗನಸಖಿ) ಒಬ್ಬರಿzರೆ. ನನಗೆ ಅವರೆಂದರೆ ಅದೇನೋ ವಿಶೇಷ ಮಮಕಾರ.

ಕಿಟಿಕಿ ಬಳಿ ಕುಳಿತಿರುವ ಪ್ರಯಾಣಿಕರಿಗೆ ಅವರು ವಿಶೇಷವಾಗಿ ಏನೇನೋ ತಾಲೀಮುಗಳನ್ನು ಹೇಳಿಕೊಡುತ್ತಾರೆ. ವಿಮಾನದ ಎಲ್ಲ ತರಗತಿಗಳ ಪ್ರಯಾಣಿಕರಿಗೆ ಅವರು ವಿಶೇಷವಾದ ತಾಲೀಮುಗಳನ್ನು ಕೊಡುತ್ತಾರೆ. ನಾನು ಯಾವಾಗಲೂ ಹನ್ನೊಂದನೇ ಸಾಲಿನ ’ಸಿ’ ಸೀಟಿನಲ್ಲಿ ಕುಳಿತುಕೊಳ್ಳಲು ಬಯಸುತ್ತೇನೆ. ಅಲ್ಲಿ ಕುಳಿತರೆ ವಿಮಾನದೊಳಕ್ಕೆ ಪ್ರವೇಶಿಸುವ ಎಲ್ಲರನ್ನೂ ನಾನು ಸುಲಭವಾಗಿ ನೋ ಡಬಹುದು. ಅಕಸ್ಮಾತ್ ಯಾರಾದರೂ ಸೆಲೆಬ್ರಿಟಿ ಬಂದರೆ ಹತ್ತೇ ನಿಮಿಷದಲ್ಲಿ ನಾನು ಅವರೊಂದಿಗೆ ಮಾತು ಬೆಳೆಸುತ್ತೇನೆ, ಸ್ನೇಹ
ಸಂಪಾದಿಸುತ್ತೇನೆ.

ಮೊನ್ನೆ ದೆಹಲಿಗೆ ಪ್ರಯಾಣಿಸುವಾಗ, ನೀಲಿಮಾ ಅವರ ಮೇಲೆ ನನ್ನ ಗಮನ ಹೋಗುವುದಕ್ಕೆ ಮುಖ್ಯವಾಗಿ ಕಾರಣವೆಂದರೆ, ಅವರು ಎಲ್ಲವನ್ನೂ ಬಹಳ ಕರಾರುವಾಕ್ಕಾಗಿ ಮಾಡುತ್ತಿದ್ದರು. ಅವರಂದು ಶಿಸ್ತು ಇತ್ತು. ಅವರ ದೃಷ್ಟಿ ಒಂದು ವಾಟರ್ ಹೀಟರ್ ಮತ್ತು ಮೈಕ್ರೋ ವೇವ್ ಮೇಲೆ ನೆಟ್ಟಿತ್ತು. ಕೈಯ್ಯಲ್ಲಿ ನೀರಿನ ಬಾಟಲಿ ಹಿಡಿದಿದ್ದರು. ಅವರು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದರು ಮತ್ತು ಪ್ರಯಾಣಿಕ ರಿಗೆ ತಮ್ಮ ತಮ್ಮ ಸೀಟಿಗೆ ಹೋಗಿ ಕುಳಿತುಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದರು.

ಅವರ ಧ್ವನಿ ಮತ್ತು ಸ್ವಾಗತಿಸುವ ಪರಿಯಲ್ಲಿ ಒಂದು ವಿಶೇಷವಿತ್ತು. ಅದು ವಿಮಾನಯಾನ ಉದ್ಯಮಕ್ಕೆ ಬಹಳವಾಗಿ ಬೇಕಾದಂತಹ
ಗುಣ. ಜತೆಗೆ ಅವರ ಮಾತಿನಲ್ಲೂ ದೃಢತೆ ಇತ್ತು. ಎಲ್ಲ ಯಾತ್ರಿಗಳೂ ಅವರ ಮಾತನ್ನು ಶಿರಸಾ ಪಾಲಿಸುತ್ತಿದ್ದರು. ಗಮನಿಸಿ, ಆಲಿಸುವ ದನಿಯಲ್ಲಿ ದೃಢತೆ ಇದ್ದರೆ ಎಲ್ಲರೂ ಅದರಂತೆ ವರ್ತಿಸುತ್ತಾರೆ. ನೀಲಿಮಾ ‘ಸರ್, ಮೇಡಂ, ನಿಮ್ಮ ಸೀಟ್ ನಂಬರ್ ಯಾವುದು?’ ಎಂದು ಹೇಳುವಾಗಲೇ ಒಂದು ಚುಂಬಕದಂಥ ಧ್ವನಿ ನಿಮ್ಮನ್ನು ಆಕರ್ಷಿಸುತ್ತದೆ. ಇದು ಅವರ ದನಿಯಲ್ಲಿದ್ವ ಮೋಹಕತೆ ಮತ್ತು ವೈಶಿಷ್ಟ್ಯ. ವಿಮಾನ ಟೇಕಾಫ್ ಆಗುತ್ತಿದ್ದಂತೆ ಅವರು ತಮ್ಮ ಏಪ್ರನ್‌ನ ಜೇಬಿಗೆ ನೀರಿನ ಬಾಟಲಿಗಳನ್ನು ತುಂಬಿಕೊಂಡರು.

ಕೆಲ ಯಾತ್ರಿಕರಿಗೆ ಇದೇನೋ ಅಸಹಜ ಅನಿಸಿರಬಹುದು. ಆದರೆ ಅವರು ಪಾತ್ ವೇ ನಲ್ಲಿ ನಡೆದು ಬರುತ್ತಿದ್ದಂತೆ ಪ್ರಯಾಣಿಕರು ನೀರಿನ ಬಾಟಲಿ ಕೇಳಿದಾಗೆಲ್ಲ ತಕ್ಷಣ ಕೊಡುತ್ತಿದ್ದರು. ಆ ಒಬ್ಬ ಮಹಿಳೆಯನ್ನು ನೋಡುತ್ತಲೇ ನನ್ನ ಪ್ರಯಾಣ ಸುಖಕರವೆನಿಸಿದ್ದು ಸುಳ್ಳಲ್ಲ.
ಈಗ ಎಲ್ಲರೂ ಬೆಳಗ್ಗೆ ಒಂಬತ್ತರಿಂದ ಸಾಯಂಕಾಲ ಐದರ ತನಕದ ನೌಕರಿಯನ್ನು ಹೆಚ್ಚಾಗಿ ಬಯಸುತ್ತಾರೆ. ಆದರೆ ಈ ತರಹದ ಸೇವಾ ಮನೋಭಾವದ ಉದ್ಯೋಗವಿದೆಯಲ್ಲ. ಅದರ ಖದರ್ರೇ ಬೇರೆ. ಅದು ನಿಮ್ಮನ್ನು ಎತ್ತರಕ್ಕೆ ಒಯ್ಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಏರ್ ಪೋರ್ಟ್ ಬಿಜಿನೆಸ್ ಲೌಂಜ್

ವಿಮಾನದಲ್ಲಿ ಬಿಜಿನೆಸ್ ಕ್ಲಾಸಿನಲ್ಲಿ ಪ್ರಯಾಣಿಸುವವರು, ವಿಮಾನ ಹಾರುವುದಕ್ಕಿಂತ ಕನಿಷ್ಠ ಒಂದೂವರೆ ಗಂಟೆ ಮುನ್ನ ಬಂದು, ಆ ಕ್ಲಾಸಿನಲ್ಲಿ ಪ್ರಯಾಣಿಸುವವರಿಗೆಂದೇ ಮೀಸಲಾದ ಲೌಂಜ್ ಸೌಲಭ್ಯವನ್ನು ಅನುಭವಿಸುತ್ತಾರೆ. ಅದರಲ್ಲೂ ವಿದೇಶ ಗಳಿಗೆ ಹೋಗುವ ಪ್ರಯಾಣಿಕರು, ಅಂತಾರಾಷ್ಟ್ರೀಯ ಬಿಜಿನೆಸ್ ಲೌಂಜ್ ಸೌಲಭ್ಯವನ್ನು ಸಾಮಾನ್ಯವಾಗಿ ತಪ್ಪಿಸಿಕೊಳ್ಳುವುದಿಲ್ಲ. ಇದು ನಿಜಕ್ಕೂ ದಣಿ ವಾರಿಸಿಕೊಳ್ಳಲು ಪ್ರಶಸ್ತವಾದ, ಒಂದಷ್ಟು ಗುಣಮಟ್ಟದ ಸಮಯವನ್ನುಕಳೆಯಲು ಯೋಗ್ಯವಾದ ತಾಣ.

ಅಷ್ಟೇ ಅಲ್ಲ, ಸಮಾಜದ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಲು ಸೂಕ್ತ ಸ್ಥಳವೂ ಹೌದು. ಸಾಮಾಜ್ಯವಾಗಿ ಅಂಥವರು ಬಿಜಿನೆಸ್ ಕ್ಲಾಸಿನಲ್ಲಿ ಪ್ರಯಾಣಿಸುವುದರಿಂದ, ಈ ಲೌಂಜ್‌ನಲ್ಲಿ ತಪ್ಪದೇ ಸಿಗುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಬಿಜಿನೆಸ್ ಲೌಂಜ್ ಒಂಥರಾ ಪಂಚತಾರಾ ಹೋಟೆಲ್ ಇದ್ದಂತೆ. ಅಲ್ಲಿ ಎಲ್ಲ ರೀತಿಯ ಆಹಾರ, ಪಾನೀಯ, ಹಣ್ಣು-ಹಂಪಲು, ಖಾದ್ಯಗಳು ಸಿಗುತ್ತವೆ. ನಿಮ್ಮದೇ ಕೈ, ನಿಮ್ಮದೇ ಬಾಯಿ, ನಿಮ್ಮದೇ ಹೊಟ್ಟೆ. ಓದಲು ಪತ್ರಿಕೆಗಳು, ಪುಸ್ತಕಗಳು, ನಿಯತಕಾಲಿಕಗಳು. ಹೈ ಸ್ಪೀಡ್ ಉಚಿತ ವೈಫೈ. ಸ್ನಾನ, ಶೌಚಕ್ಕೆ ವ್ಯವಸ್ಥೆಯಿರುತ್ತದೆ. ಸಮಯವಿದ್ದರೆ, ಇಡೀ ದೇಹ ಅಥವಾ ಕಾಲಿನ ಮಸಾಜು ಸೇವೆಯನ್ನೂ ತೆಗೆದುಕೊಳ್ಳಬಹುದು.

ವಿಮಾನ ನಿಲ್ದಾಣದ ಮಹತ್ವವನ್ನು ಆಧರಿಸಿ, ಬಿಜಿನೆಸ್ ಲೌಂಜ್‌ನ ಮಟ್ಟ ಬೇರೆ ಬೇರೆ ರೀತಿಯzಗಿರುತ್ತದೆ. ದುಬೈ, ಖತಾರ್, ಸಿಂಗಾ ಪುರ, ಹಾಂಗ್‌ಕಾಂಗ್, ಕೌಲಲಂಪುರ್, ಫ್ರಾಂಕ್ ಫರ್ಟ್, ಹೀಥ್ರೂ, ಪ್ಯಾರಿಸ್ , ಜ್ಯೂರಿಕ್, ಮನಿಲಾ, ಜಿನೀವಾ, ಇಸ್ತಾನಬುಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಿಜಿನೆಸ್ ಲೌಂಜ್ ಯಾವ ಐಷಾರಾಮಿ ಫೈವ್‌ಸ್ಟಾರ್ ಅಥವಾ ಸೆವೆನ್ ಸ್ಟಾರ್ ಹೊಟೇಲ್‌ಗೆ ಕಮ್ಮಿಯಿಲ್ಲ. ವರ್ಜಿನ್ ಏರ್‌ಲೈನ್ಸ್ ಸಂಸ್ಥೆ ತನ್ನ ಪ್ರಯಾಣಿಕರಿಗೆ ಇನ್ನೂಉತ್ತಮ ಸೌಲಭ್ಯ ಮತ್ತು ಐಷಾರಾಮಿ ವ್ಯವಸ್ಥೆಗಳಿರುವ ಕ್ಲಬ್ ಹೌಸ್ ಸುವಿಧಾಗಳನ್ನು ನೀಡುತ್ತಿರುವುದು ಉಖಾರ್ಹ.

ಅದರಲ್ಲೂ ಸಿಂಗಾಪುರ್ ವಿಮಾನ ನಿಲ್ದಾಣದ ಲೌಂಜ್ ಮಾಯಾಲೋಕ. ಅಲ್ಲಿ ಐವತ್ತಕ್ಕಿಂತ ಬೇರೆ ಬೇರೆ ವಿಧಗಳಲ್ಲಿ ಸಮಯ ಕಳೆಯಲು ಸೌಲಭ್ಯ ಕಲ್ಪಿಸಲಾಗಿದೆ. ಅದರಲ್ಲೂ ಲಂಡನ್ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಅತಿ ಗಣ್ಯವ್ಯಕ್ತಿಗಳಿಗಾಗಿ ರಾಯಲ್ ಸ್ವೀಟ್ ಮತ್ತು ವಿಂಡ್ಸರ್ ಸ್ವೀಟ್ ವ್ಯವಸ್ಥೆಯಿದೆ. ಅಂಗ ರಕ್ಷಕರ ಸೇವೆಯನ್ನೂ ನೀಡಲಾಗುತ್ತದೆ. ಅಲ್ಲದೇ ಐಷಾರಾಮಿ ವಸ್ತುಗಳನ್ನು ಖರೀದಿಸಲು (ಶಾಪ್ಪಿಂಗ್) ಉತ್ಕೃಷ್ಟ ಬ್ರಾಂಡ್‌ಗಳ ಮಳಿಗೆಗಳನ್ನು ಅಲ್ಲಿತೆರೆಯಲಾಗಿದೆ. ಎಮಿರೇಟ್ಸ್ ಏರ್ ಲೈನ್ಸ್ ನೀಡುವ ಮರಹಬಾ ಸೇವೆಯಂತೂ ಪ್ರಯಾಣಿಕರ ಸಂತೃಪ್ತಿಯ ಪರಾಕಾಷ್ಠೆ ಎಂದರೆ ಅತಿಶಯೋಕ್ತಿಯಲ್ಲ.

ಬಿಜಿನೆಸ್ ಕ್ಲಾಸಿನಲ್ಲಿ ಪ್ರಯಾಣಿಸುವವರಿಗೆ ಏರ್‌ಲೈನ್‌ಗಳು ಮೂರರಿಂದ-ನಾಲ್ಕು ಪಟ್ಟು ಹೆಚ್ಚಿನ ಹಣವನ್ನುಪೀಕಿಸುತ್ತವೆ. ಆ ಪೈಕಿ ಈ ಲೌಂಜ್ ಸೌಲಭ್ಯವೂ ಒಂದು. ಅಷ್ಟೇ ಅಲ್ಲ, ಬಿಜಿನೆಸ್ ಕ್ಲಾಸ್ ಪ್ರಯಾಣಿಕರಿಗೆ ವಿಮಾನದಲ್ಲಿ ವಿಶಾಲ ಆಸನದ ಜತೆಗೆ ಉತ್ತಮ ಉಪಾ ಹಾರ-ಭೋಜನ ವ್ಯವಸ್ಥೆಯನ್ನು ನೀಡಲಾಗುತ್ತದೆ. ಯಾವತ್ತೂ ವಿಮಾನದೊಳಗೆ ನೀಡುವ ಸೇವೆ ವೆಚ್ಚದಾಯಕ. ಈ ಉದ್ದೇಶ ಕ್ಕಾಗಿ ಯಾವನೋ ಬುದ್ಧಿವಂತನಿಗೆ ಹೊಳೆದಿದ್ದು ಈಬಿಜಿನೆಸ್ ಲೌಂಜ. ಈ ಬಿಜಿನೆಸ್ ಲೌಂಜ್ ಅನ್ನು ಬೇರೆ ಬೇರೆ ವಿಮಾನ ಸಂಸ್ಥೆಗಳು ಒಟ್ಟಾಗಿ ಅದರ ನಿರ್ವಹಣೆಯನ್ನು ಒಂದು ಖಾಸಗಿ ಸಂಸ್ಥೆಗೆ ನೀಡಿರುತ್ತವೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ಎಂಟು ವರ್ಷಗಳಿಂದ ಬಿಜಿನೆಸ್ ಲೌಂಜ್‌ನಲ್ಲಿರುವ ನನ್ನ ಸ್ನೇಹಿತರು ಒಮ್ಮೆ ಅದರ ಲಾಜಿಕ್ ವಿವರಿಸಿದ್ದರು. ಅಲ್ಲಿ ತರೇಹವಾರಿ ಆಹಾರ, ಮದ್ಯ, ಪಾನೀಯಗಳನ್ನು ಏಕೆ ಇಟ್ಟಿರುತ್ತಾರೆಂದರೆ, ಆ ಕ್ಲಾಸಿನಲ್ಲಿ ಪ್ರಯಾಣಿಸು ವವರು ಅಲ್ಲಿಯೇ ಹೊಟ್ಟೆ ಭರ್ತಿ ಮಾಡಿಕೊಳ್ಳಲಿ, ವಿಮಾನ ಹತ್ತಿದ ಬಳಿಕ ವಿಶ್ರಾಂತಿ ಪಡೆಯಲಿ ಎಂಬುದು ಮುಖ್ಯ ಉದ್ದೇಶ. ಆಗ ವಿಮಾನದಲ್ಲಿ ಅಷ್ಟರ ಮಟ್ಟಿಗಿನ ಕೆಲಸ ಕಮ್ಮಿಯಾಗುತ್ತದೆ. ಸಾಮಾನ್ಯವಾಗಿ ಲೌಂಜ್‌ನಲ್ಲಿ ಊಟ ಮಾಡಿದವರು, ವಿಮಾನವೇರಿ ಮತ್ತೆ ಆಹಾರ ಸೇವನೆ ಬಯಸುವುದಿಲ್ಲ. ಹಾಗಂತ ಅಲ್ಲೂ-ಇಲ್ಲೂ ಬಾಯಿಚಪಲ ತೀರಿಸಿಕೊಳ್ಳುವವರು ಇಲ್ಲ ಎಂದಲ್ಲ. ಅಂಥವರ ಸಂಖ್ಯೆ ಕಮ್ಮಿಯಿರಬಹುದು.

ಆದರೆ ಅಂತಾರಾಷ್ಟ್ರೀಯ ಲೌಂಜ್ ಮ್ಯಾನೇಜಮೆಂಟ್ ಸಂಸ್ಥೆಯ ಸಮೀಕ್ಷೆ ಪ್ರಕಾರ, ಉತ್ತಮ ಲೌಂಜ್ ಸೌಲಭ್ಯ ಒದಗಿಸಿದರೆ, ವಿಮಾನ ದಲ್ಲಿ ಗಗನಸಖಿಯರಿಗೆ ಓಡಾಟ, ಒತ್ತಡ ಕಮ್ಮಿ ಆಗುತ್ತದೆ. ಆ ಮೂಲಕ ವಿಮಾನದೊಳಗೆ ಆಹಾರ ಸಾಗಿಸುವ ತಲೆ ಬಿಸಿ ಕೂಡ ಕಮ್ಮಿ ಯಾಗುತ್ತದೆ. ಅದರಲ್ಲೂ ಲೌಂಜ್‌ನಲ್ಲಿ ಉತ್ತಮ ವೈಫೈ ಸೌಲಭ್ಯ ನೀಡಿದರೆ, ಊಟ-ತಿಂಡಿ ಮೇಲಿನ ಒತ್ತಡವೂ ಕಮ್ಮಿಯಾಗುವುದಂತೆ.

ಇವೆಲ್ಲವುಗಳಿಂದ ಪ್ರಯಾಣಿಕರೂ ಖುಷ್ , ಏರ್‌ಲೈನ್ ಸಂಸ್ಥೆಗಳೂ ಖುಷ್. ಹೀರೋನಾ? ಜೀರೋನಾ ? ನೀವು ಹೀರೋ ನಾ, ಜೀರೋ ನಾ, ನೀವು ಜೀವನದಲ್ಲಿ ಸಕ್ಸೆಸ್ಸಾ, ಫೇಲ್ಯೂರಾ ಎಂಬುದನ್ನು ಜನ ಆಗಾಗ ನಿರ್ಧರಿಸುತ್ತಾರೆ. ನೀವು ನಿಮ್ಮ ಪಾಲಿಗೆ ಹೀರೋ ಎಂದು ಕೊಳ್ಳಬಹುದು. ಆದರೆ ಜನರ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ಅವರು ಕಾಲಕಾಲಕ್ಕೆ ನಿಮ್ಮನ್ನು ಅಳೆಯುತ್ತಿರುತ್ತಾರೆ, ನಿಮ್ಮ ಸ್ಥಾನ ವೇನು ಎಂಬುದರ ಬಗ್ಗೆ ತೀರ್ಪು ಕೊಡುತ್ತಿರುತ್ತಾರೆ. ಇದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬಾರದು. ರಾಜಕಾರಣಿಗಳು ಹೇಳುವಂತೆ, ಜನತೆಯ ತೀರ್ಪಿಗೆ ತಲೆಬಾಗಬೇಕು.

ನೀವು ಗೂಗಲ್, ಇನೋಸಿಸ್ ಕಂಪನಿಯ, ಅಮೆಜಾನ್ ಸಂಸ್ಥೆಯ, ಕೆಲಸ ಗಿಟ್ಟಿಸಿಕೊಂಡರೆ ನೀವು ಸಕ್ಸಸ್ ಆದಿರಿ ಎಂದು ಜನ ಅಂದು ಕೊಳ್ಳುತ್ತಾರೆ. ಒಂದು ವರ್ಷದ ಬಳಿಕ, ಅದೇ ಸಂಸ್ಥೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕಿದರೆ, ನೀವು ಫೈಲ್ಯೂರ್! ನೀವು ಹುಂಡೈ ಕ್ರೇಟಾ ಕಾರು ಖರೀದಿಸಿದರೆ, ನೀವು ಯಶಸ್ವಿ ವ್ಯಕ್ತಿ. ಅದೇ ನಿಮ್ಮ ಪಕ್ಕದ ಮನೆಯವ ಬೆಂಜ್ ಕಾರನ್ನು ಖರೀದಿಸಿದರೆ ನೀವು ಫೇಲ್. ನೀವು ಒಂದು ಫ್ಯ್ಲಾಟ್ ಖರೀದಿಸಿದರೆ, ಅದು ನಿಮ್ಮ ಯಶಸ್ಸು. ಅದೇ ನಿಮ್ಮ ಸಹೋದ್ಯೋಗಿ ಒಂದು ವಿಲ್ಲಾ ಖರೀದಿಸಿದರೆ, ನಿಮ್ಮ ಸಾಧನೆ ಮಂಕು.

ನೀವು ಜೀವನದಲ್ಲಿ ಬಹಳ ಕಷ್ಟಪಟ್ಟು ದುಡಿದು, ಸಾಕಷ್ಟು ಸಾಧಿಸಿ, ಎರಡು ಜನ್ಮಕ್ಕಾಗುವಷ್ಟು ಸಂಪಾದಿಸಿ, ನಂತರ ನಿಧಾನದ
ಜೀವನಶೈಲಿಯನ್ನು ರೂಢಿಸಿಕೊಳ್ಳಲು ಬಯಸಿದರೆ, ಜನರ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ‘ಇಷ್ಟು ವರ್ಷ ಆತ ಬಹಳ ಹಾರಾಡಿದ. ಪಾಪ.. ಈಗ ಕೈಸೋತು ಸುಮ್ಮನಾಗಿzನೆ’ ಎಂದು ಆಡಿಕೊಳ್ಳುತ್ತಾರೆ. ನೀವು ನಿಮ್ಮ ಪಾಡಿಗೆ ನೆಮ್ಮದಿಯಿಂದ ಇದ್ದರೂ, ಜನರ ದೃಷ್ಟಿ ಯಲ್ಲಿ ನಿಮ್ಮದು ದೈನೇಸಿ ಸ್ಥಿತಿ!

ಅಂದರೆ, ನೀವು ಯಶಸ್ವಿಯೋ, ಸೋಲಿನ ಸರದಾರರೋ ಎಂಬುದನ್ನು ನೀವಲ್ಲ, ಸುತ್ತಲಿನ ಸಮಾಜ ನಿರ್ಧರಿಸುತ್ತದೆ. ಇಲ್ಲಿ ನೀವು ಮಾಡಬೇಕಿರುವುದೇನೆಂದರೆ, ನಿಮ್ಮ ಬದುಕಿನ ಫೈಲ್ ಮೇಲೆ ಸೋಲು ಅಥವಾ ಗೆಲುವು ಎಂದು ಷರಾ ಬರೆಯುವ ಹಕ್ಕನ್ನು ಬೇರೆಯ ವರಿಗೆ ಕೊಡಬಾರದು. ಒಂದು ವೇಳೆ ನೀವು ಕೊಡದಿದ್ದರೂ, ಅವರೇ ನಿಮ್ಮ ಫೈಲ್‌ ಮೇಲೆ ಅಲ್ಲದಿದ್ದರೂ, ಗೋಡೆಯ ಮೇಲೆ ಬರೆದರೆ, ಅದು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರದೇ ಹೋಗುವುದಿಲ್ಲ.

ನಿಮ್ಮ ಯಶಸ್ಸು ಮತ್ತು ಸೋಲನ್ನು ತೀರ್ಮಾನಿಸುವ ವಿವೇಚನೆಯನ್ನು ಬೇರೆಯವರಿಗೆ ನೀಡಿದರೆ, ಅವರು ಸೋಲು ಎಂದು ನಿರ್ಧರಿ ಸಿದ್ದು, ನಿಮ್ಮ ದೃಷ್ಟಿಯಲ್ಲಿ ಸೋಲಲ್ಲ. ಹೀಗಾಗಿ ಅವರ ಅಭಿಪ್ರಾಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅಷ್ಟಕ್ಕೂ ಯಶಸ್ಸು ಎಂಬುದು ಜೀವನವಿಡೀ ನಿಮ್ಮ ಜತೆಗೇ ಬಿದ್ದುಕೊಂಡಿರುವ, ನೀವು ಹಾಕಿದ ಕೂಳನ್ನು ತಿಂದುಕೊಂಡಿರುವ ನಿಮ್ಮ ಮನೆ ನಾಯಿ ಅಲ್ಲ. ಆದರೆ ನೆಮ್ಮದಿ, ಸಂತೃಪ್ತಿಯನ್ನು ಸಹ ಯಶಸ್ಸಿನ ಭಾಗವನ್ನಾಗಿ ಮಾಡಿಕೊಂಡರೆ, ನಿಮ್ಮ ಸಾಧನೆ ಬಗ್ಗೆ ಬೇರೆಯವರು ಏನೇ ಷರಾ ಬರೆದರೂ ಹೆಚ್ಚು ಫರಕ್ಕು ಬೀಳುವುದಿಲ್ಲ.