Saturday, 23rd November 2024

ಟೆಸ್ಟ್ ಕ್ರಿಕೆಟ್‌ನಲ್ಲಿ 250 ಸಿಕ್ಸರ್‌: ನಥಾನ್ ಲಿಯಾನ್’ಗೆ ಅಪಖ್ಯಾತಿ

ರಾವಲ್ಪಿಂಡಿ: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 250 ಸಿಕ್ಸರ್‌ಗಳನ್ನು ಬಾರಿಸಿಕೊಂಡ ಮೊದಲ ಬೌಲರ್ ಎಂಬ ಅಪಖ್ಯಾತಿಗೆ ಆಸ್ಟ್ರೇಲಿಯಾದ ಸ್ಪಿನ್ನರ್ ನಥಾನ್ ಲಿಯಾನ್ ಪಾತ್ರರಾದರು.

ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಎರಡನೇ ಇನ್ನಿಂಗ್ಸ್‌ ನಲ್ಲಿ ನಥಾನ್ ಲಿಯಾನ್‌ರ 42ನೇ ಓವರ್‌ನ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.

ಶ್ರೀಲಂಕಾದ ಮಾಜಿ ಸ್ಪಿನ್ನರ್ ರಂಗನಾ ಹೆರಾತ್ 194 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನಥಾನ್ ಲಿಯಾನ್ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ 106 ಟೆಸ್ಟ್ ಪಂದ್ಯಗಳಲ್ಲಿ 416 ವಿಕೆಟ್ ಪಡೆದಿದ್ದಾರೆ. ಇನ್ನಿಂಗ್ಸ್‌ನಲ್ಲಿ 8/50 ಬೆಸ್ಟ್‌ ಬೌಲಿಂಗ್ ಆಗಿದ್ದು , ಟೆಸ್ಟ್ ಪಂದ್ಯಗಳಲ್ಲಿ 13/154 ಆಗಿದೆ.

ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯ ಗೊಂಡಿದೆ. 5 ದಿನಗಳ ಪೂರ್ಣ ಆಟ ಸಾಧ್ಯ ವಿದ್ದರೂ ಉಭಯ ತಂಡಗಳ ಬ್ಯಾಟ್ಸ್ ಮನ್ ಗಳು ಸಂಪೂರ್ಣ ಪ್ರಾಬಲ್ಯ ಮೆರೆದಿದ್ದರಿಂದ ಟೆಸ್ಟ್ ಪಂದ್ಯದ ಯಾವುದೇ ಹಂತ ದಲ್ಲೂ ಫಲಿತಾಂಶ ಕಾಣಿಸಲಿಲ್ಲ. ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್-ಉಲ್-ಹಕ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಎರಡು ಶತಕಗಳನ್ನು ಬಾರಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 476 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಾದ ಅಜರ್ ಅಲಿ (185) ಮತ್ತು ಇಮಾಮ್-ಉಲ್-ಹಕ್ (157) ಬೃಹತ್ ಶತಕ ಬಾರಿಸಿದರು. ಶಫೀಕ್ 44, ಬಾಬಿರ್ ಅಜಮ್ 36, ರಿಜ್ವಾನ್ 29 ರನ್ ಗಳಿಸಿದರು.

ಪಾಕ್ ಪರ ನೌಮನ್ ಅಲಿ 6 ವಿಕೆಟ್ ಪಡೆದರೆ, ಶಾಹಿನ್ ಅಫ್ರಿದಿ 2, ನಸೀಮ್ ಶಾ, ಸಂಜೀದ್ ಖಾನ್ ವಿಕೆಟ್ ಪಡೆದರು. ಅಂತಿಮ ದಿನದಂತ್ಯಕ್ಕೆ 17 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಪಂದ್ಯದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 252 ರನ್ ಗಳಿಸಿತು. ಪರಿಣಾಮ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.