Saturday, 23rd November 2024

ಪುಟ್ಟ ಹಳ್ಳಿಯಲ್ಲಿ ಒಂದು ಸಾಹಿತ್ಯಕ ಕ್ರಾಂತಿ

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಇಂದಿಗೂ ಇಲ್ಲಿಗೆ ಸಂಪರ್ಕವೆಂದರೆ ಬೆರಳೆಣಿಕೆಯ ಬಸ್‌ಗಳು ಮಾತ್ರ. ಮುಖ್ಯ ರಸ್ತೆಯಿಂದ ನಾಲ್ಕು ಕಿ.ಮೀ. ದೂರದಲ್ಲಿ, ಕಾಡು ಗುಡ್ಡ ಗಳಿಂದ ಸುತ್ತುವರಿದಿರುವ ಈ ಹಳ್ಳಿಯಲ್ಲಿ ಇಂದಿಗೂ ತಿಂಡಿ ಹೊಟೇಲ್ ಇಲ್ಲ. ಆದರೆ, ಕನ್ನಡ ಪುಸ್ತಕ ಪ್ರಕಟಣೆಯಲ್ಲಿ ಈ ಹಳ್ಳಿ ದಾಖಲೆ ಯನ್ನೇ ನಿರ್ಮಿಸಿದೆ!

ನವೆಂಬರ್ 1, 1965. ಮುಖ್ಯ ರಸ್ತೆಯಿಂದ ನಾಲ್ಕು ಕಿ.ಮೀ. ಒಳಗಿರುವ, ದೊಡ್ಡ ವಾಹನಗಳು ತಲುಪಲಾಗದ, ಕಾಂತಾವರ ಎಂಬ ಕುಗ್ರಾಮಕ್ಕೆ ಯುವ ಆಯುರ್ವೇದ ವೈದ್ಯರೊಬ್ಬರು ಬಂದರು. ಸುತ್ತಲೂ ಕಾಡು, ನಡುವೆ ಕಾಲು ಹಾದಿ, ಅಲ್ಲಲ್ಲಿ ಗದ್ದೆಬಯಲುಗಳು – ಅಲ್ಲಿದ್ದ ಪುಟ್ಟ ಆಯುರ್ವೇದ ಆಸ್ಪತ್ರೆಗೆ ಅರೆಕಾಲಿಕ ವೈದ್ಯಾಧಿಕಾರಿಯಾಗಿ ನಿಯುಕ್ತಗೊಂಡ ಆ ವೈದ್ಯರು ಅಲ್ಲಿಗೆ ಬಂದಾಗ, ಸೂಕ್ತ ವಸತಿಗಾಗಿ ಹುಡುಕಬೇಕಾ ಯಿತು. ಬಾಡಿಗೆ ರೂಮ ಮಾಡಿಕೊಂಡು, ಅಲ್ಲೇ ಇದ್ದ ಪುಟಾಣಿ ಹಳ್ಳಿ-ಹೊಟೇಲ್‌ನಿಂದ ಊಟ ತರಿಸಿ ಕೊಂಡು ಜೀವನ ನಡೆಸಲು ಆರಂಭಿಸಿದ ಈ ಕಾಸರಗೋಡಿನ ತರುಣ, ಮುಂದೆ ಕಾಂತಾವರದಲ್ಲಿ ಒಂದು ಸಾಂಸ್ಕೃತಿಕ ಕ್ರಾಂತಿಯನ್ನೇ ಮಾಡಿದರು.

ಅವರೇ ಡಾ. ನಾ. ಮೊಗಸಾಲೆ. ಇಂದಿಗೂ ಸಣ್ಣ ಹಳ್ಳಿಯಾಗಿರುವ, ದಿನಕ್ಕೆ ಬೆರಳೆಣಿಕೆ ಯಷ್ಟು ಮಾತ್ರ ಬಸ್‌ಗಳು ಬರುತ್ತಿರುವ, ಕಾಫಿ- ತಿಂಡಿ ನೀಡುವ ಹೊಟೇಲ್ ಸೌಲಭ್ಯವೂ ಈಗ ಇಲ್ಲದಿರುವ ಕಾಂತಾವರದಲ್ಲಿನ ಕನ್ನಡ ಸಂಘದ ಚಟುವಟಿಕೆಗಳ ಕುರಿತು ಹೇಳುವಾಗ, ಡಾ. ನಾ. ಮೊಗಸಾಲೆಯವರ ಸಾಧನೆ, ಛಲ, ಸಂಘಟನಾ ಶಕ್ತಿ, ನಿಷ್ಠೆ, ನಿಯತ್ತು, ಸಾಹಿತ್ಯಪ್ರೇಮಗಳ ಕುರಿತು ಹೇಳಲೇಬೇಕು. ಗದ್ದೆ, ಮರ, ಗಿಡ, ಗುಡ್ಡ, ಕಾಡುಪ್ರದೇಶದ ನಡುವೆ ಇರುವ ಈ ಪುಟ್ಟ ಹಳ್ಳಿಯು ಇಂದು ಕರ್ನಾಟಕದ ಸಾಹಿತ್ಯಕ ಭೂಪಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆಯೆಂದರೆ, ಅದಕ್ಕೆ ಅಲ್ಲಿರುವ ಕನ್ನಡ ಸಂಘವೇ ಕಾರಣ ಮತ್ತು ಅದನ್ನು ಕಟ್ಟಿ, ಬೆಳೆಸಿದ ಡಾ. ನಾ. ಮೊಗಸಾಲೆಯವರೇ ಕಾರಣ.

ಮಲೆನಾಡಿನ ಇನ್ನೊಂದು ಭಾಗದಲ್ಲಿರುವ ಹೆಗ್ಗೋಡನ್ನು ಹೊರತುಪಡಿಸಿದರೆ, ಕರ್ನಾಟಕದಲ್ಲಿ ಗ್ರಾಮ ಮಟ್ಟದಲ್ಲಿ ಈ ಪರಿ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಿದ ಬೇರೊಂದು ಹಳ್ಳಿಯಿಲ್ಲ. 1965ರ ರಾಜ್ಯೋತ್ಸವ ದಿನದಂದು, ಉದ್ಯೋಗ ನಿಮಿತ್ತ ಕಾಂತಾವರಕ್ಕೆ ಕಾಲಿಟ್ಟ ನಾ. ಮೊಗಸಾಲೆ ಯವರು, 1966ರಲ್ಲಿ ಅಲ್ಲೊಂದು ‘ರೈತ ಯುವಕ ವೃಂದ’ ಕಟ್ಟಿದರು. ಅದರ ಮುಖ್ಯ ಉದೇಶ ಸಾಹಿತ್ಯಕ- ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದೇ ಆಗಿತ್ತು. ಆದರೆ ಕೆಲವು ವರ್ಷಗಳಲ್ಲಿ ಆ ಯುವಕವೃಂದವು ಕಾರಣಾಂತರಗಳಿಂದಾಗಿ ಸಪ್ಪಗಾಯಿತು. ನಾ. ಮೊಗಸಾಲೆಯುವರು ತಮ್ಮ ಪಾಡಿಗೆ ತಾವು ಕಾದಂಬರಿಗಳನ್ನು, ಸಣ್ಣ ಕಥೆಗಳನ್ನು, ಕವನಗಳನ್ನು ಬರೆಯುತ್ತಾ, ಹಳ್ಳಿಯ ಜನರಿಗೆ ಚಿಕಿತ್ಸೆ ನೀಡುತ್ತಾ ಇದ್ದರು.

ಇದೇ ಸಮಯದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿಯನ್ನು ನಮ್ಮ ದೇಶದ ಮೇಲೆ ಹೇರಲಾಯಿತು. ದೂರದ ದೆಹಲಿಯಲ್ಲಿ ಜಾರಿಗೊಂಡ ಆ ಕರಾಳ ಶಾಸನವು, ಕಾಂತಾವರದಂತಹ ಕುಗ್ರಾಮದಲ್ಲೂ ತನ್ನ ಕರಿನೆರಳನ್ನು ಚಾಚಿತು. ಜನರು ಮಾತನಾಡಲು ಹೆದರಿದರು, ಮನಸ್ಸಿನ ಭಾವನಗಳನ್ನು ಅಭಿವ್ಯಕ್ತಿಸಲು ಹಿಂಜರಿದರು. ಇಂತಹ ಸಂದರ್ಭದಲ್ಲಿ, ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲೋ ಎಂಬಂತೆ, ಒಂದು ಸಂಘಟನೆಯನ್ನು ರೂಪಿಸುವುದು ಸೂಕ್ತ ಎಂಬ ಭಾವನಾ.

ಮೊಗಸಾಲೆಯವರ ಮನಸ್ಸಿನಲ್ಲಿ ಮೂಡಿತು. ಕಾಂತಾವರ ವ್ಯಾಪ್ತಿಯ ಬೇಲಾಡಿ ಮತ್ತು ಇತರ ನಾಲ್ಕು ಶಾಲೆಗಳ ಅಧ್ಯಾಪಕರನ್ನು ಒಗ್ಗೂ ಡಿಸಿ, ಸಂಘವನ್ನು ಕಟ್ಟುವ ವಿಚಾರ ಚರ್ಚಿಸಿದಾಗ ‘ಸರಕಾರಿ ನೌಕರರು ಪ್ರಭುತ್ವದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪಾಗಬ ಹುದು, ಆದ್ದರಿಂದ ಸಾಹಿತ್ಯ ಚಟುವಟಿಕೆ ನಡೆಸುವ ಸಂಘವನ್ನು ಕಟ್ಟಿದರೆ ಸೂಕ್ತ’ ಎಂದ ಅಭಿಪ್ರಾಯ ಮೂಡಿಬಂದಿತು. ತುರ್ತು ಪರಿಸ್ಥಿತಿ ನಿರ್ಮಿಸಿದ್ದ ಉಸಿರುಗಟ್ಟುವ ವಾತಾವರಣದಿಂದ ಹೊರಬರುವ ನೆಪ, ಸಾಹಿತ್ಯ ಪ್ರೀತಿಯನ್ನು ವ್ಯಕ್ತಪಡಿಸುವ ವಾಂಛೆ, ಒಟ್ಟಾರೆ ಸಾಂಸ್ಕೃತಿಕ ವಾತಾವರಣವನ್ನು ಕಟ್ಟು ಛಲದಿಂದ ‘ಕಾಂತಾವರ ಕನ್ನಡ ಸಂಘವು’ 26.5.1976ರಂದು ಜನಿಸಿತು. ಉದ್ಘಾಟನೆಗೆ ಆಗಮಿಸಿದವರು ಹಿರಿಯ ಕವಿ ಎಸ್.ವಿ.ಪರಮೇಶ್ವರ ಭಟ್.

ನಂತರದ ವರ್ಷಗಳಲ್ಲಿ ಕನ್ನಡದ ಎಲ್ಲಾ ಪ್ರಮುಖ ಸಾಹಿತಿಗಳನ್ನು ಆಹ್ವಾನಿಸಿ, ಆ ಹಳ್ಳಿಯಲ್ಲಿ ನಡೆದ ಸಮಾರಂಭಗಳಲ್ಲಿ ಭಾಗವಹಿಸು ವಂತೆ ಮಾಡಿದ ಹಿರಿಮೆ ಈ ಸಂಘಕ್ಕೆ ಇದೆ. ಮೊದಲಿಗೆ ಕನ್ನಡ ಸಂಘಕ್ಕೆ ಸ್ವಂತ ಕಟ್ಟಡವಿರಲಿಲ್ಲ. ಸನಿಹದ ಬೇಲಾಡಿಯ ಶಾಲೆಯಲ್ಲಿ ಸಂಘದ ಚಟುವಟಿಕೆಗಳು ಆರಂಭಗೊಂಡವು. ಅಲ್ಲಿ ಅಧ್ಯಾಪಕರಾಗಿದ್ದ, ಮುಂದೆ ರಾಷ್ಟ್ರಪ್ರಶಸ್ತಿ ವಿಜೇತರೂ ಆದ ವಿಠಲ ಬೇಲಾಡಿ ಯವರೂ ಆರಂಭಿಕ ಸದಸ್ಯರಲ್ಲಿ ಒಬ್ಬರು. ಇಂದಿಗೂ ಅವರು ಕನ್ನಡ ಸಂಘಕ್ಕೆ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಪ್ರತಿ ತಿಂಗಳು ಉಪನ್ಯಾಸ, ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ ಮಾತನಾಡಿಸುವುದು, ಇತರ ಸಾಂಸ್ಕೃತಿಕ ಚಟುವಟಿಕೆಗಳು ಆರಂಭಗೊಂಡವು.

ಡಾ. ನಾ ಮೊಗಸಾಲೆ ಯವರು ಕನ್ನಡ ಸಂಘದ ಚಟುವಟಿಕೆಗಳನ್ನು ರೂಪಿಸುವಲ್ಲಿ, ಅದಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು
ಸಂಗ್ರಹಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇದರ ನಡುವೆಯೂ ಅವರ ಸಾಹಿತ್ಯ ರಚನೆಯು ನಿರಂತರವಾಗಿ ಮುಂದು ವರಿದದ್ದು, ಇಂದಿಗೂ ಮುಂದುವರಿಯುತ್ತಿರುವುದು ವಿಶೇಷ. ಕನ್ನಡ ಸಂಘವು ಮುಖ್ಯವಾಗಿ ಸಾಹಿತ್ಯಕ್ಕೆ, ಜತೆಯಲ್ಲೇ ಕಲೆ ಮತ್ತು ಸಂಸ್ಕೃತಿಗೆ ತನ್ನನ್ನು ಮೀಸಲಿಟ್ಟಿಕೊಂಡಿತು. 1979ರಲ್ಲಿ ಕನ್ನಡ ಸಂಘ ಆರಂಭಿಸಿದ ‘ಮುದ್ದಣ ಸಾಹಿತ್ಯ ಪ್ರಶಸ್ತಿ’ಯು ಇಂದಿಗೂ ತನ್ನ
ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದೆ.

ಕವನಗಳ ಹಸ್ತಪ್ರತಿಗಳನ್ನು ಆಹ್ವಾನಿಸಿ, ಉತ್ತಮ ಕವನಸಂಕಲನಗಳಿಗೆ ಪ್ರಶಸ್ತಿ ನೀಡುವ ಆ ಪ್ರಕ್ರಿಯೆ ವಿಶಿಷ್ಟ. ನಾಡಿನ ಮೂಲೆ ಮೂಲೆಯ ಹೊಸ ಮತ್ತು ಹಳೆಯ ಕವಿಗಳು ತಮ್ಮ ಹಸ್ತ ಪ್ರತಿ ಸಲ್ಲಿಸಿ, ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ಪಡೆದ ಹಲವರು
ಮುಂದೆ ಕನ್ನಡದ ಖ್ಯಾತ ಕವಿಗಳಾಗಿ, ಸಾಹಿತಿಗಳಾಗಿ ರೂಪುಗೊಂಡದ್ದು ಈ ಪ್ರಶಸ್ತಿಯ ಹಿರಿಮೆಯನ್ನು ಸೂಚಿಸುತ್ತದೆ. ಈ ಕಾವ್ಯ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ, ಅದರಲ್ಲಿ ಕಾಣುವ ನಿಸ್ಪಕ್ಷಪಾತ ನಿಲುವು, ಗುಣಮಟ್ಟ ಎಲ್ಲವನ್ನೂ ಕಂಡ ಹಾ.ಮಾ.ನಾಯಕರು, ‘ಮುದ್ದಣ ಕಾವ್ಯ ಪ್ರಶಸ್ತಿಯು ಕನ್ನಡ ಕಾವ್ಯ ಜಗತ್ತಿಗೆ ಒಂದು ರಹದಾರಿ’ ಎಂಬರ್ಥದ ಮಾತುಗಳನ್ನು ಹೇಳಿರುವುದು ಅರ್ಥಪೂರ್ಣ.

ಈ ನಡುವೆ ಕರ್ನಾಟಕದ ಮೊದಲ ಖಾಸಗಿ ಸಾಹಿತ್ಯಕ ಪ್ರಶಸ್ತಿ ಎನಿಸಿರುವ ‘ವರ್ಧಮಾನ ಪ್ರಶಸ್ತಿ’ ಮತ್ತು ‘ವರ್ಧಮಾನ ಉದಯೋನ್ಮುಖ ಪ್ರಶಸ್ತಿ’ಯು 1978ರಲ್ಲಿ ಕಾಂತಾವರಕ್ಕೆ ಹತ್ತಿರದ ಮೂಡಬಿದರೆಯಲ್ಲಿ ಆರಂಭಗೊಂಡಿತು ಮತ್ತು ಅದನ್ನು ಸ್ಥಾಪಿಸುವಲ್ಲಿ ಡಾ. ನಾ. ಮೊಗಸಾಲೆಯವರ ಕೊಡುಗೆ ಹಿರಿದು. ಇಂದಿಗೂ ಅವರು ಆ ಪ್ರತಿಷ್ಠಾನದ ನಿರ್ದೇಶಕರಾಗಿ ಮುಂದುವರಿದಿದ್ದಾರೆ.

ಇತ್ತ ಕನ್ನಡ ಸಂಘದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು. ಸಾಹಿತ್ಯ ಕಾರ್ಯಕ್ರಮದ ಜತೆಯಲ್ಲೇ, ಜನಪದ ಕಲೆ, ನಾಟಕ, ತಾಳಮದ್ದಲೆ ಮತ್ತು ಯಕ್ಷಗಾನದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಇನ್ನೊಂದು ವಿಶೇಷ. ಪ್ರತಿ ತಿಂಗಳೂ ಕಾರ್ಯಕ್ರಮ ಮತ್ತು ಪ್ರತಿ ವರ್ಷ ರಾಜ್ಯೋತ್ಸವದ ದಿನದಂದು ‘ಕಾಂತಾವರ ಉತ್ಸವ’ಗಳು ಆಯೋಜನೆಗೊಂಡು,
ನಾಡಿನ ಹಿರಿಯ ಸಾಹಿತಿಗಳು, ಗಣ್ಯರು ಪಾಲ್ಗೊಂಡರು. ಇವೆಲ್ಲಾ ಕಾರ್ಯಕ್ರಮಗಳಿಗೆ ಕಾಂತಾವರ, ಮೂಡಬಿದರೆ, ಕಾರ್ಕಳ ಮತ್ತು ಇತರ ಸ್ಥಳಗಳ ಸಹೃದಯರು ಸಹಕಾರ ನೀಡಿರುವುದು ಸಹ ವಿಶೇಷ.

ಜತೆಗೆ ಸರಕಾರದ ಕೆಲವು ಇಲಾಖೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರ್ಕಳ ಮತ್ತು ಮೂಡಬಿದರೆಯ ಸ್ಥಳೀಯ ಘಟಕಗಳು ಕಾಲದಿಂದ ಕಾಲಕ್ಕೆ, ಸಂದರ್ಭಾನುಸಾರ ಕೊಡುಗೆಯನ್ನು ನೀಡಿವೆ. 2001- ಕನ್ನಡ ಸಂಘಕ್ಕೆ ೨೫ರ ಸಂಭ್ರಮ. ಸಂಘಕ್ಕೆ ಒಂದು ಕಟ್ಟಡ ಬೇಕು ಎಂಬ ಅಭಿಪ್ರಾಯ ಮೂಡಿ, ಆ ನಿಟ್ಟಿನಲ್ಲಿ ಡಾ. ನಾ. ಮೊಗಸಾಲೆಯವರು ಕಾರ್ಯಪ್ರವೃತ್ತರಾದರು. ಕಾಂತಾವರದವರೇ
ಆದ, ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಪಾಲ್ಗೊಂಡಿದ್ದ ಜಿನರಾಜ ಹೆಗ್ಡೆಯವರ ಜನ್ಮಶತಮಾನೋತ್ಸವದ ವರ್ಷದಲ್ಲಿ, ಅವರ ನೆನಪನ್ನು ಹೊತ್ತು ಕಾಂತಾವರದ ಮುಖ್ಯ ರಸ್ತೆಯಲ್ಲಿ ‘ಕನ್ನಡ ಭವನ’ ತಲೆ ಎತ್ತಿತು. ಕರ್ನಾಟಕ ಸರಕಾರವು ೧೨ ಲಕ್ಷ ರೂ ಕೊಡುಗೆ ನೀಡಿದರೆ, ಸುಮಾರು ೧೩ ಲಕ್ಷ ಕೊಡುಗೆಯನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಲಾಯಿತು.

ಸಂಘದ ಪದಾಽಕಾರಿಗಳು, ಸದಸ್ಯರು ಕೈಜೋಡಿಸಿದರು. ನೇತೃತ್ವ ಡಾ.ಮೊಗಸಾಲೆಯವರದು. ೨ ಚಾವಡಿ, ಸಭಾಂಗಣ, ಕಛೇರಿಗೆ
ಅಗತ್ಯವಿರುವ ಕೊಠಡಿಗಳು, ಮೂರು ಅತಿಥಿ ಕೋಣೆಗಳು ಮೊದಲಾದ ಸೌಲಭ್ಯಗಳನ್ನು ಹೊಂದಿರುವ ಈ ಹಂಚಿನ ಮಾಡಿನ ಕಟ್ಟಡವು, ಸಂಘದ ಚಟುವಟಿಕೆಗಳಿಗೆ ಶಾಶ್ವತ ನೆಲೆಯಾಯಿತು. ಪ್ರತಿ ತಿಂಗಳ ಉಪನ್ಯಾಸಗಳು ಇಲ್ಲೇ ನಡೆಯತೊಡಗಿದವು. ೨೦೦೧ರಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನವು ಅಭೂತಪೂರ್ವ ಎನಿಸಿತು.

ಪುಸ್ತಕ ಪ್ರಕಟಣೆಗಳ ವಿಚಾರಕ್ಕೆ ಬಂದರೆ, ಕನ್ನಡ ಸಂಘದ ಮೊದಲ ಪ್ರಕಟಣೆ ‘ದಕ್ಷಿಣ ಕನ್ನಡ ಕಾವ್ಯ ೧೯೦೧-೧೯೭೬’ ಒಂದು ಪ್ರಮುಖ ಕೊಡುಗೆ. ‘ದಕ ಶತಮಾನದ ಕಾವ್ಯ’ ಮತ್ತು ‘ಶತಮಾನದ ಕಥೆಗಳು’ ಸಂಘದ ಅನೇಕ ಪ್ರಕಟಣೆಗಳ ಪೈಕಿ ಪ್ರಮುಖ ಎನಿಸಿವೆ. ಪ್ರತಿ ತಿಂಗಳು ನಡೆದ ಉಪನ್ಯಾಸಗಳನ್ನು ‘ನುಡಿ ಹಾರ’ ಎಂಬ ಹೆಸರಿನಲ್ಲಿ ಸಂಕಲನಗೊಳಿಸಲಾಗುತ್ತಿದೆ.

ಕನ್ನಡ ಸಂಘವು ಕೈಗೊಂಡ ಅಭೂತಪೂರ್ವ ಕೆಲಸ ಎಂದರೆ ‘ನಾಡಿಗೆ ನಮಸ್ಕಾರ’ ಮಾಲಿಕೆ. ಕನ್ನಡದಲ್ಲಿ ಯಾವ ವಿಶ್ವವಿದ್ಯಾಲಯವೂ ಇದುವರೆಗೆ ಮಾಡದೇ ಇರುವ, ಯಾವುದೇ ಸಂಸ್ಥೆಯೂ ಮಾಡದೇ ಇರುವಂತಹ ಕೆಲಸವನ್ನು ಈ ಮಾಲಿಕೆಯ ಮೂಲಕ ಕನ್ನಡಸಂಘ ಮಾಡಿದೆ. ೨೦೦೬ರಲ್ಲಿ ‘ನಾಡಿಗೆ ನಮಸ್ಕಾರ’ ಮಾಲಿಕೆ ಆರಂಭ. ಮೊದಲಿಗೆ ೩೦ ಜನ ಸಾಧಕರ ಪರಿಚಯವನ್ನು ಸುಮಾರು ೫೦ ಪುಟಗಳ ಪುಸ್ತಕದಲ್ಲಿ ಕಟ್ಟಿಕೊಡಲೆಂದು ಆರಂಭಗೊಂಡ ಈ ಮಾಲಿಕೆಯು, ೨೦೨೨ರ ತನಕವೂ ಮುಂದುವರಿದಿದೆ. ಇದುವರೆಗೆ ಸುಮಾರು ೩೨೦ ಜನ ಸಾಧಕರ ಕುರಿತು ಪುಸ್ತಕಗಳನ್ನು ಕಾಂತಾವರ ಕನ್ನಡ ಸಂಘ ಪ್ರಕಟಿಸಿದೆ!

ಸಾಧಕರ ಕುರಿತು ೧೫ ವರ್ಷಗಳಲ್ಲಿ ಹೊರಬಂದ ಈ ೩೨೦ ಪುಸ್ತಕಗಳು ಒಂದು ಸಾಹಿತ್ಯಕ ದಾಖಲೆ ಎನಿಸಿದೆ. ಮಾಲಿಕೆಯ ಪ್ರಧಾನ ಸಂಪಾದಕರು ನಾ.ಮೊಗಸಾಲೆ, ಮಾಲಿಕೆ ಸಂಪಾದಕರು ಮೊದಲಿಗೆ ವಿ.ಗ.ನಾಯಕ, ನಂತರ ಮತ್ತು ಈಗ ಡಾ. ಬಿ. ಜನಾರ್ಧನ ಭಟ್. ಈ ಮಾಲಿಕೆಯಲ್ಲಿ ಪರಿಚಯಗೊಂಡವರಲ್ಲಿ ಸಾಹಿತಿಗಳಿದ್ದಾರೆ, ಸಾಂಸ್ಕೃತಿಕ ಕೊಡುಗೆ ನೀಡಿದವರಿದ್ದಾರೆ, ನಾಡು ನುಡಿಯ ಬೆಳವಣಿಗೆಗೆ ಶ್ರಮಿಸಿದವರಿದ್ದಾರೆ.

ಕಾಂತಾವರ ಕನ್ನಡ ಸಂಘದಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಮುನ್ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಕಂಡಾಗ, ನಿಜಕ್ಕೂ ಒಂದು ಸಂಸ್ಥೆ ಇಂತಹ ಕೆಲಸವನ್ನು ಮಾಡಲು ಸಾಧ್ಯವೆ ಎಂದು ಅಚ್ಚರಿ ಮೂಡುತ್ತದೆ. ಈ ಮಾಲಿಕೆಯು, ಕರಾವಳಿ ಕರ್ನಾಟಕದ ಸಾಧಕರನ್ನು ಪರಿಚಯಿಸಿದೆ. ಇದೇ ರೀತಿ, ನಮ್ಮ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ತಮ್ಮ ತಮ್ಮ ಜಿಲ್ಲೆಯ ಸಾಧಕರ ಪರಿಚಯವನ್ನು ಮಾಡಿಕೊಡಬಹುದು, ಆ ಮೂಲಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕೊಡುಗೆಯನ್ನು ನೀಡಬಹುದು, ಕಾಂತಾವರ ಕನ್ನಡ ಸಂಘದ ಈ ಸಾಹಸವನ್ನು ಅನುಕರಿಸಬಹುದು.

ಕಾಂತಾವರದ ಮುಖ್ಯರಸ್ತೆಯಲ್ಲಿರುವ ‘ಕನ್ನಡ ಭವನ’ ಕಟ್ಟಡ ನಿರ್ಮಾಣಗೊಂಡು ಈಗ ಇಪ್ಪತ್ತು ವರ್ಷಗಳಾಗಿವೆ. ಕಟ್ಟಡಕ್ಕೆ ಈಗ ಕೆಲವು ರಿಪೇರಿಯ ಅಗತ್ಯವಿದೆ! ಅಲ್ಲಿರುವ ಶೌಚಾಲಯಗಳಿಗೆ ಆಗಾಗ ನೀರಿನ ಸಂಪರ್ಕ ಕಡಿತಗೊಂಡು ಉಪಯೋಗಕ್ಕೆ ಬಾರದಂತಾಗಿವೆ! ರಿಪೇರಿಯ ಕಾರ್ಯಕ್ಕಾಗಿ ‘ಕನ್ನಡ ಸಂಘ’ವು ಸರಕಾರದ ನೆರವನ್ನು ಕೇಳಿದ್ದರೂ, ದೂರದ ಬೆಂಗಳೂರಿನಿಂದ ಸೂಕ್ತ ಪ್ರತಿಸ್ಪಂದನೆ ಈಗ
ದೊರಕದಂತಾಗಿದೆ ಎಂದು ಸಂಘದ ಪದಾಧಿಕಾರಿಗಳ ಅಳಲು! ಹಿಂದೆ ಸರಕಾರವು ಒದಗಿಸಿದ ನೆರವಿನ ರೀತಿಯೇ, ಈಗಲೂ ಸರಕಾರವು ಸಣ್ಣ ಮಟ್ಟದ ನೆರವನ್ನು ಒದಗಿಸಿದರೆ, ಕನ್ನಡ ಭವನದ ತುರ್ತು ರಿಪೇರಿಗಳನ್ನು ನಡೆಸಲು ಅನುಕೂಲವಾದೀತು ಎಂಬುದು ನಿಜ. ಸ್ವಂತ ಸಂಪನ್ಮೂಲಗಳನ್ನು ಬಳಸಿ, ಕನ್ನಡ ಸಂಘವು ಹೊರತಂದ ‘ನಾಡಿಗೆ ನಮಸ್ಕಾರ’ ಮಾಲಿಕೆಯ ೩೨೦ ಪುಸ್ತಕಗಳೇ ಸಾಕು, ಸರಕಾರದ ಮುಕ್ತ ನೆರವು ಹರಿದು ಬರಲು.

ಪುಟ್ಟ ಹಳ್ಳಿಯ ಮೂಲೆಯಲ್ಲಿದ್ದುಕೊಂಡು, ನಿರಂತರವಾಗಿ ಕನ್ನಡದ ಚಟುವಟಿಕೆಗಳನ್ನು ನಡೆಸುತ್ತಿರುವ, ಕನ್ನಡದ ಕೆಲಸ ಮಾಡುತ್ತಿರುವ, ಸ್ಥಳೀಯರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಅಭಿರುಚಿ ಮೂಡಿಸುತ್ತಿರುವ, ಕನ್ನಡ ಸಾಹಿತ್ಯಕ್ಕೆ ಕೊಡುಗೆ
ನೀಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಿ, ನಿರಂತರ ವಾಗಿ ಪ್ರೋತ್ಸಾಹಿಸಿತಿರುವ ಈ ಸಂಸ್ಥೆಗೆ ನೆರವು ನೀಡಿದರೆ ಯಾವ ತಪ್ಪೂ ಇಲ್ಲ, ಮಿಗಿಲಾಗಿ ಇಂತಹ ಪ್ರಮುಖ ಸಂಸ್ಥೆಗೆ ಕಾಲದಿಂದ ಕಾಲಕ್ಕೆ ನೆರವನ್ನು ನೀಡುವುದು ಸರಕಾರದ ಕರ್ತವ್ಯ ಎಂದರೂ ತಪ್ಪಾಗದು.