ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ನಾನು ಕೈರೋಕ್ಕೆ ಬಂದಾಗ ರಾತ್ರಿಯಾಗಿತ್ತು. ಹೋಟೆಲ್ನ ಹದಿನಾರನೇ ಮಹಡಿಯಲ್ಲಿ ನನ್ನ ಕೋಣೆ. ರೂಮಿನ ಒಂದು ಪಾರ್ಶ್ವ ಜಗತ್ಪ್ರಸಿದ್ಧ ಮತ್ತು ವಿಶ್ವದ ಅತ್ಯಂತ ಉದ್ದದ ನದಿಗಳಂದಾದ ನೈಲ್ ನದಿಯ ನೋಟಕ್ಕೆ ತೆರೆದುಕೊಂಡಿತ್ತು.
ರೂಮಿನ ಕರ್ಟನ್ ತೆರೆದರೆ ಪಕ್ಕದಲ್ಲಿ ನೈಲ್ ನದಿಯ ಜಲ ಚಾಪೆ! ನದಿಯ ಎರಡೂ ಮಗ್ಗಲುಗಳಲ್ಲಿರುವ ಗಗನಚುಂಬಿ ಕಟ್ಟಡಗಳ ಬಣ್ಣಬಣ್ಣದ ದೀಪಗಳು ನದಿ ನೀರಿನ ಮೇಲೆ ಬಿದ್ದು ಅಲ್ಲಿಯೇ ನಕ್ಷತ್ರ ಲೋಕವನ್ನು ಸೃಷ್ಟಿಸಿದ್ದವು. ನೈಲ್ ನದಿ ಕೈರೋ ನಗರದ ಜೀವ ನದಿ. ಇದರಿಂದಾಗಿಯೇ ಆ ನಗರಕ್ಕೆ ಒಂದು ಅಂದ, ಸೊಬಗು ಮತ್ತು ಕಳೆ. ಈ ನದಿಯ ದಂಡೆಯ ಮೇಲೆಯೇ ಕೈರೋ ನಗರ ತಲೆಯೆತ್ತಿ ನಿಂತಿದೆ.
ಬಾಲ್ಕನಿಯಲ್ಲಿ ಕುರ್ಚಿ ಎಳೆದುಕೊಂಡು, ಸುಮ್ಮನೆ ತಂಗಾಳಿಗೆ ಮೈಯೊಡ್ಡಿ ನೈಲ್ ನದಿ ಯನ್ನು ದಿಟ್ಟಿಸುತ್ತಿದ್ದರೆ, ಅದರ ಮೇಲೆ ಜೀಕುವ ಸಣ್ಣ ಪುಟ್ಟ ಬೋಟು, ಹಡಗುಗಳನ್ನು ನೋಡುತ್ತಿದ್ದರೆ, ಮಧ್ಯರಾತ್ರಿ ಸರಿದಿದ್ದು ಗೊತ್ತೇ ಆಗಲಿಲ್ಲ. ಆದರೂ ನೈಲ್ ನದಿ ನೀರು ಮಿನುಗುತ್ತಲೇ ಇತ್ತು. ನಗರದ ಮಧ್ಯೆ ಹೆಬ್ಬಾವು ಬಿದ್ದುಕೊಂಡಂತೆ ಭಾಸವಾಗುವ ನೈಲ್ ನದಿಗೆ ನಿದ್ದೆಯಿಲ್ಲ. ಅದು ಸದಾ ಕ್ರಿಯಾಶೀಲ. ಪ್ರಯಾಣಿಕರನ್ನು ತುಂಬಿಕೊಂಡ ಹಡಗು ಗಳಲ್ಲಿ ರಾತ್ರಿಯಿಡೀ ಹಾಡು, ಕುಣಿತ, ಸಂಗೀತದ ಅಬ್ಬರ. ಅದಕ್ಕಿಂತ ಒಳ್ಳೆಯ ರೂಮು ಸಿಗಲು ಸಾಧ್ಯವಿಲ್ಲ. ಬೆಳಗ್ಗೆ ಸೂರ್ಯನ ಕಿರಣ ನದಿ ನೀರಿನ ಮೇಲೆ ಬಿದ್ದು, ನನ್ನ ರೂಮಿನ ಕನ್ನಡಿಗೆ ಹಿಟ್ ಆಗಿತ್ತು.
ಚಾದರ ಪಕ್ಕಕ್ಕೆ ಸರಿಸಿ, ಬಾಲ್ಕನಿಗೆ ಬಂದರೆ, ರಾತ್ರಿ ನೋಡಿದ ನೈಲ್ ನದಿ ಇದೇನಾ ಎಂಬ ಪುಟ್ಟ ಅಚ್ಚರಿ. ನಗರವನ್ನು ಸೀಳಿಕೊಂಡು, ಶಾಂತವಾಗಿ, ಕುಂತು ಹರಿಯುವಂತೆ ತೋರುವ ನೈಲ್ ನದಿಯ ತೀರದಿಂದ ಮೂಡಿಬರುವ ಆ ಗಾಳಿಯನ್ನು ಹೀರುವುದೇ ಒಂದು ಅಪೂರ್ವ ಅನುಭೂತಿ. ಸೂರ್ಯ ರಶ್ಮಿ ನೀರಿನ ಮೇಲೆ ಬಿದ್ದು ಕ್ಷಣಕ್ಷಣಕ್ಕೂ ನದಿ ಚಹರೆ ಬದಲಾಗುವುದನ್ನು ನೋಡುತ್ತ ನಿಂತರೆ ಸಮಯ ಹೋಗಿದ್ದೇ ಗೊತ್ತಾಗುತ್ತಿರಲಿಲ್ಲ.
ಲಂಡನ್ ನಗರಕ್ಕೆ ಥೇಮ್ಸ ನದಿ ಹೇಗೋ ಕೈರೋಕ್ಕೆ ನೈಲ್ ನದಿ. ಲಂಡನ್ ನಗರದಲ್ಲಿ ಪ್ರತಿ ಒಂದೆರಡು ಕಿ.ಮೀ. ಅಂತರದಲ್ಲಿ ನದಿಗೆ ಸೇತುವೆ ಕಟ್ಟಿದಂತೆ, ನೈಲ್ ನದಿಗೂ ಸೇತುವೆ ಕಟ್ಟಿರುವುದರಿಂದ, ಅದು ನಗರದ ಸೌಂದರ್ಯವನ್ನು ಸಹ ಹೆಚ್ಚಿಸಿದೆ. ನೈಲ್ ನದಿಯ ವರದಾನವೇ ಈಜಿಪ್ಟ್ ಎಂದು ಹೇಳುತ್ತಾರೆ. ಇಂಗ್ಲಿಷ್ ಕವಿಯೊಬ್ಬ ಅದನ್ನು The Nile, forever new and old, Among the living and the dead, Its mighty, mystic stream has rolled… ಎಂದು ಣ್ಣಿಸಿದ್ದೇಕೆ ಎಂದು ಅನುಭವಕ್ಕೆ ಬಂತು.
ಮತ್ತೊಬ್ಬ ಕವಿ ಈ ನದಿ ಕುರಿತು Life’s always sweeter behind River Nile! Cross it; forget the days of the bitter Bile! Leave the torture behind and give a Smile! Keep smiling; Don’t just do it just for a While! ಎಂದು ಹೇಳಿರುವುದು ಕೂಡ ಸತ್ಯ. ನೈಲ್ ಬಗ್ಗೆ ಕವಿ ಎಮರ್ಸನ್ ಹೇಳಿದ ಮಾತನ್ನು ಕೇಳಿದರೆ ಈ ನದಿಯ ಮಹತ್ವವೇನು ಎಂಬುದು ಗೊತ್ತಾಗುತ್ತದೆ – And with Cèsar to take in his hand the army, the empire, and Cleopatra,
and say, All these will I relinquish if you will show me the fountain of the Nile.’
ನೈಲ್ ನದಿ ನೀರಿನ ಬಗ್ಗೆ ಕೈರೋದಲ್ಲಿ ಒಂದು ವಿಚಿತ್ರ ನಂಬಿಕೆಯಿದೆ. ಅದೇನೆಂದರೆ ನಾಯಿಗಳು ನೈಲ್ ನದಿ ನೀರನ್ನು ಕುಡಿದರೆ ಹುಚ್ಚಾಪಟ್ಟೆ ಓಡುವುದಂತೆ. ಕಾರಣ ಈ ನೀರನ್ನು ಕುಡಿದ ಮೊಸಳೆಗಳ ಉತ್ಕರ್ಷಕ್ಕೆ ದಾಳವಾಗಬಹುದು ಎಂಬ ಭಯದಿಂದ ಓಡುತ್ತಲೇ ಇರುತ್ತದಂತೆ. ಖ್ಯಾತ ಇಂಗ್ಲಿಷ್ ಕವಿ ವಿಲಿಯಮ್ ಶೇಕ್ಸ್ ಪಿಯರ್ ಕೂಡ ನೈಲ್ ಬಗ್ಗೆ Whose tongue Outvenoms all the worms of Nile ಎಂದು ಹೇಳಿದ್ದು ತಮಾಷೆಯಾಗಿದೆ.
ನೈಲ್ ನದಿ ಇಲ್ಲದಿದ್ದರೆ, ಈಜಿಪ್ಟ್ ಇಲ್ಲ, ಆದರೆ ಈಜಿಪ್ಟ್ ಇಲ್ಲದಿದ್ದರೂ ನೈಲ್ ನದಿ ಇರುತ್ತದೆ. ಅಷ್ಟರಮಟ್ಟಿಗೆ ನೈಲ್, ಈಜಿಪ್ಟ್ ಜನ ಜೀವನದ ಜತೆ ಹಾಸುಹೊಕ್ಕಾಗಿದೆ. ಶತಶತಮಾನಗಳಿಂದ ಈಜಿಪ್ಟ್ , ನೈಲ್ ನದಿ ಮೇಲೆ ತನ್ನಅವಲಂಬನೆಯನ್ನು ಜಾಸ್ತಿ ಮಾಡುತ್ತಲೇ ಇದೆ. ಕೈರೋ ನಗರ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇದ್ದರೂ, ಅದರ ಭಾರ ನೈಲ್ ನದಿ ಮೇಲೆ ಹೆಚ್ಚಾಗುತ್ತಿದ್ದರೂ, ಆ ನದಿ ಸ್ವಚ್ಛತೆಗೆ ಭಂಗ ಬಾರದಿರುವುದು ಗಮನಾರ್ಹ. ನಗರದೊಳಗಿನ ಬಡತನ ನೈಲ್ ನದಿಯೊಳಗೆ ಲೀನವಾಗಿಲ್ಲ. ಅಷ್ಟರಮಟ್ಟಿಗೆ ಆ ನದಿ ತನ್ನ ಪಾವಿತ್ರ್ಯವನ್ನು ಕಾಪಾಡಿಕೊಂಡಿದೆ. ನಾನು ಉಳಿದುಕೊಂಡ ಹೋಟೆಲಿನ ರೂಮ್ ಬಾಯ್, ನೈಲ್ ನದಿ ನೀರನ್ನು ನಾನು ಇಂದಿಗೂ ಕುಡಿಯುತ್ತೇನೆ’ ಎಂದು ಹೇಳಿದ್ದು ಅದರ ಸ್ವಚ್ಛತೆಗೆ ಹಿಡಿದ ಕನ್ನಡಿಯಂತಿತ್ತು.
ಸಾವಿರ ಮಿನಾರುಗಳ ನಗರ
ಜನರನ್ನು ಪ್ರೀತಿಸುವವರೆಲ್ಲ ಈಜಿಪ್ಟ್ ರಾಜಧಾನಿ ಕೈರೋವನ್ನು ಪ್ರೀತಿಸುತ್ತಾರೆ ಎಂಬ ಮಾತಿದೆ. ಕಾರಣ ಕೈರೊದಲ್ಲಿ ಎಲ್ಲಿ ನೋಡಿದರೂ ಜನ.. ಜನ.. ಜನ. ಸುಮಾರು ಎರಡು ಕೋಟಿಗಿಂತ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಈನಗರ, ಪ್ರಾಚೀನ ಮತ್ತು ಆಧುನಿಕ ಗಳನ್ನು ಸಮಸಮವಾಗಿಟ್ಟುಕೊಂಡು ಸಂತುಲಿತ ಬದುಕನ್ನು ನಡೆಸುತ್ತಿರುವ ವಿಶ್ವದ ಒಂದು ಅಪರೂಪ ನಗರ. ಅರಬ್ ಜಗತ್ತು ಮತ್ತು ಮಧ್ಯ ಪ್ರಾಚ್ಯ ದಲ್ಲಿಯೇ ಕೈರೋ ಅತ್ಯಂತ ದೊಡ್ಡ ನಗರವೂ ಹೌದು. ಜಗತ್ತಿನಲ್ಲಿ ಅತಿ ಹೆಚ್ಚು ಜನ ವಾಸಿಸುವ ಅತಿ ದೊಡ್ಡ ನಗರಗಳಲ್ಲಿ ಕೈರೋಗೆ ಆರನೇ ಸ್ಥಾನ. ಒಂದು ಚದರ ಕಿಲೋಮೀಟರ್ ಪ್ರದೇಶದಲ್ಲಿ ಸುಮಾರು ಇಪ್ಪತ್ತು ಸಾವಿರ ಜನ ವಾಸಿಸುವ ಕೈರೋ ಜಗತ್ತಿನ ಮೂವತ್ತೇಳನೇ ಅತಿ ಜನನಿಬಿಡ ನಗರ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿದೆ.
‘ಸಾವಿರ ಮಿನಾರು(Minarets)ಗಳ ನಗರ’ ಎಂದೇ ಖ್ಯಾತವಾದ ಕೈರೋ ದಿನದ ಇಪ್ಪತ್ನಾಲ್ಕು ಗಂಟೆಯೂ ಸದಾ ಚಟುವಟಿಕೆಯಲ್ಲಿ ರುವ, ಎಂದೂ ಕಣ್ಣು ಮುಚ್ಚದ ನಗರ. ರಾತ್ರಿಯಾಗುತ್ತಿದ್ದಂತೆ, ಈ ನಗರ ತನ್ನ ಒಡಲಲ್ಲಿ ಹರಿಯುವ ನೈಲ್ ನದಿಯ ಪಾತ್ರಗಳಲ್ಲಿ ಚಟುವಟಿಕೆಗಳನ್ನು ಕಾಣುತ್ತದೆ. ಯೂರೋಪಿನ ನಗರಗಳಲ್ಲಿ ಜನಪತ್ತು ಹೆಚ್ಚಾಗಿ ಕಾಣುವುದಿಲ್ಲ. ರಾತ್ರಿಯಾಗುತ್ತಿದ್ದಂತೆ ಇಡೀ ನಗರಕ್ಕೆ ಮಂಪರು ನಿದ್ದೆ. ಆದರೆ ಕೈರೋ ಹಾಗಲ್ಲ. ದಿನದ ಯಾವ ಹೊತ್ತಿನಲ್ಲೂ ಪಾದರಸ.
ಜನರಿದ್ದಲ್ಲಿ ಚಟುವಟಿಕೆ ಎಂಬಂತೆ, ಕೈರೋ ಇಡೀ ನಗರವೇ ಚಲನೆಯಲ್ಲಿರುವಂತೆ ಭಾಸವಾಗುತ್ತದೆ. ಅದರಲ್ಲೂ ಬೆಳಗಿನ ಸಮಯದಲ್ಲಿ ಈ ನಗರ ಕ್ಷಣಕ್ಷಣಕ್ಕೂ ಸಮುದ್ರದ ಅಲೆಗಳಂತೆ ಉಕ್ಕುತ್ತಿದೆಯೇನೋ ಎಂದೆನಿಸುತ್ತದೆ. ಕೈರೋ ನಿರಂತರವಾಗಿ ತನ್ನ ಗಡಿಗಳನ್ನು ದಾಟಿ ಬೆಳೆಯುತ್ತಿರುವ, ನಗರ ಜೀವನದ ನಿಯಮಗಳನ್ನೆಲ್ಲ ಮುರಿಯುತ್ತ ಸಾಗುವ, ವಿಸ್ತರಿಸುತ್ತ ಮುನ್ನುಗ್ಗುವ ಚಲನಶೀಲ ನಗರ. ನಗರದ ಮಧ್ಯಭಾಗದಿಂದ ಹತ್ತು ಕಿ.ಮೀ. ದಾಟಿದರೆ, ಪ್ರಾಚೀನ ನಾಗರಿಕತೆಯ ಸಂಕೇತದಂತಿರುವ ವಿಶ್ವವಿಖ್ಯಾತ ಪಿರಮಿಡ್ಡುಗಳನ್ನು ವೀಕ್ಷಿಸಬಹುದು. ತೀರಾ ಹತ್ತಿರದ ಇದೆಯೇನೋ ಎಂದೆನಿಸಿದರೂ, ಅರ್ಧ ಗಂಟೆ ಕಾರಿನಲ್ಲಿ ಸಾಗಿದರೆ, ಪಿರಮಿಡ್ಡಿನ ತಪ್ಪಲು ತಲುಪ ಬಹುದು.
ಪಿರಮಿಡ್ಡುಗಳ ಗಿಜಾ ಪ್ರಾಂತದಲ್ಲಿರುವ ಪಿರಮಿಡ್ಡು ಬಹಳ ಸುಂದರ ಮತ್ತು ಪುರಾತನ. ಹಾಗೆ ನೋಡಿದರೆ, ಎರಡು ಗಂಟೆ ಸಮಯ ದ್ದರೆ, ಪಿರಮಿಡ್ಡುಗಳನ್ನು ನೋಡಿ ವಾಪಸ್ ಬರಬಹುದು. ಈಜಿಪ್ಟ್ ನ ಪುರಾತನ ವೈಭವ ಎಂದೇ ಪರಿಗಣಿಸುವ ಪಿರಮಿಡ್ಡು ಮತ್ತು ಸಿಂಹನಾರಿ (ಸ್ಪಿನ್ಕ್ಸ್) ಗಳ ಮೂರ್ತಿಗಳನ್ನು ಬಳಸಿಕೊಂಡು ಆಧುನಿಕ ಕೈರೋ ನಗರ ತಲೆಯೆತ್ತಿರುವುದು ಮತ್ತು ಹಳೆಯ ಕೈರೋದ ವೈಶಿಷ್ಟ್ಯ ಗಳನ್ನೆಲ್ಲ ಇನ್ನೂ ತನ್ನ ಉದರದೊಳಗೆ ಕಾಪಿಟ್ಟುಕೊಂಡಿರುವುದು ಈ ನಗರಕ್ಕೆ ವಿಶೇಷ ಮೆರುಗನ್ನು ತಂದುಕೊಟ್ಟಿದೆ. ಹೀಗಾಗಿ ಕೈರೋ ಎಲ್ಲ ವಯೋಮಾನದವರಿಗೆ, ಎಲ್ಲ ಬಗೆಯ ಆಸಕ್ತರಿಗೆ, ಒಂದಿಂದು ಕಾರಣಕ್ಕೆ ಹಿತವೆನಿಸುತ್ತದೆ.
ಕೈರೋದಲ್ಲಿ ಓಡಾಡುವಾಗ, ಅತಿ ಹಳೆಯದಾದ, ಅತಿ ದೊಡ್ಡ, ಅತಿ ಪುರಾತನ, ಪ್ರಾಚೀನ, ಅತಿ ವಿಶಾಲ, ಅತಿ ಎತ್ತರದ ಮತ್ತು ಆಧುನಿಕ ಎಂಬ ವಿಶೇಷಣಗಳು ಆಗಾಗ ಕೇಳಿಸುತ್ತವೆ. ಈ ಎಲ್ಲ ಅಂಶಗಳು ಒಂದೇ ನಗರದಲ್ಲಿ ಒಟ್ಟಾಗಿ ಕಾಣುವುದು ಅಪರೂಪ. ಕೈರೋ ವಿಶೇಷ ವೆನಿಸುವುದು ಈ ಕಾರಣಕ್ಕೆ. Cairo is the only city that still has a remaining ancient wonder of the world ಎಂಬ ಘೋಷವಾಕ್ಯ ಈ ನಗರಕ್ಕೆ ಇನ್ನೂ ಅಂಟಿಕೊಂಡಿದೆ. ಮನುಷ್ಯ ತನ್ನ ಕೈಯಿಂದ ನಿರ್ಮಿಸಿರುವ ಅತಿ ಎತ್ತರದ ರಚನೆ (Structure)ಇದ್ದರೆ ಅದು ೧೪೬.೭ ಮೀಟರ್ ಎತ್ತರದ ಗಿಜಾ ಪಿರಮಿಡ್ಡುಗಳು. ಪ್ಯಾರಿಸಿನ ಐ-ಲ್ ಟವರ್ ಅನ್ನು ನಿರ್ಮಿಸುವವರೆಗೆ, ಗಿಜಾ ಪಿರಮಿಡ್ಡುಗಳೇ ಅತಿ ಎತ್ತರದ ರಚನೆ ಎಂಬ ಅಗ್ಗಳಿಕೆಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲ, ಸುಮಾರು ಮೂರು ಸಾವಿರ ವರ್ಷಗಳವರೆಗೆ ಆ ಸ್ಥಾನವನ್ನು ಕಾಪಾಡಿಕೊಂಡಿತ್ತು.
ಅಕ್ಷರ ಮಮತೆ, ಕನ್ನಡಿಗರ ಪ್ರೀತಿ
ಕನ್ನಡಿಗರು ಯಾವ ದೇಶದ ಇದ್ದರೂ, ಅವರು ಕನ್ನಡಿಗರೇ. ಪ್ರೀತಿ, ವಿಶ್ವಾಸ, ಆದರಾತಿಥ್ಯದಲ್ಲಿ ಅವರದು ಎತ್ತಿದ ಕೈ. ಕನ್ನಡಿಗರು ಎಂಬ ಒಂದು ನೆಪ ಸಿಕ್ಕರೆ ಅವರಿಗೆ ಹೊರದೇಶದಲ್ಲಿ ಸಿಕ್ಕ ಮತ್ತೊಬ್ಬ ಕನ್ನಡಿಗ ಕೂಡ ಅಪರಿಚಿತನಾ ದರೂ ನೆಂಟನೇ. ನಾನು ಕೈರೋದಲ್ಲಿರುವ ವಿಷಯವನ್ನು ಫೇಸ್ ಬುಕ್ ಮತ್ತು ಟ್ವಿಟರ್ನಲ್ಲಿ ಹಂಚಿಕೊಳ್ಳುತ್ತಿದ್ದಂತೆ, ಹತ್ತಕ್ಕೂ ಹೆಚ್ಚು ಕೈರೋ ಕನ್ನಡಿಗರು ನನ್ನನ್ನು ಸಂಪರ್ಕಿಸಿದ್ದು, ಈ ಮರುಭೂಮಿಯಲ್ಲಿ ಗಂಗಾಜಲ ಸಿಕ್ಕಷ್ಟು ಖುಷಿ ಕೊಟ್ಟಿತು. ಆ ಪೈಕಿ ಪ್ರತಿಯೊಬ್ಬರೂ ನನ್ನನ್ನು ಭೇಟಿ ಮಾಡಲು ಉತ್ಸುಕರಾಗಿದ್ದು ಸಹಜ ಸಂತಸವ ನ್ನುಂಟು ಮಾಡಿತು. ಬೆಂಗಳೂರಿನ ವಿನಯ್ ಎಂಬುವವರು ತಮ್ಮ ಪರಿಚಿತರಿಂದ ನನ್ನ ನಂಬರ್ ಪಡೆದು, ಫೋನ್ ಮಾಡಿ, ‘ಏನೇ ಬೇಕಾದರೂ -ನ್ಮಾಡಿ ಸಾರ್, ನಾವೆಲ್ಲ ನಿಮ್ಮ ಬರಹಗಳನ್ನು ಓದಿಕೊಂಡು ಬೆಳೆದವರು, ನಿಮ್ಮ ಸೇವೆ ಮಾಡುವ ಅವಕಾಶವನ್ನು ಮಾಡಿ ಕೊಡಿ’ ಎಂಬ ಅಂತಃಕರಣ ತುಂಬುವ ಮಾತುಗಳನ್ನು ಹೇಳಿದರು.
‘ಬೆಳಗ್ಗೆ ಕಣ್ಣು ಬಿಟ್ಟರೆ ಹೋಟೆಲ್ ರೂಮಿನಿಂದ ಕಾಣಿಸಿದ್ದು..’ ಎಂದು ಬರೆದು ನನ್ನ ರೂಮಿನಿಂದ ಕಾಣುವ ನೈಲ್ ನದಿ -ಟೋವನ್ನು -ಸ್ ಬುಕ್ನಲ್ಲಿ ಪೋಸ್ಟ್ ಮಾಡಿದ್ದನ್ನು ನೋಡಿದ ಮಧು ಎಂಬುವವರು, ಹೊಟೇಲ್ನ್ನು ಪತ್ತೆ ಹಚ್ಚಿ ಅಲ್ಲಿಗೆ ಬಂದಿದ್ದು ಅವರ ಪ್ರೀತಿ, ಕಾಳಜಿಯ ಪ್ರತೀಕ. ‘ಸಾರ್, ನಾನು ನಿತ್ಯ ವಿಶ್ವವಾಣಿ ಕ್ಲಬ್ ಹೌಸ್ ಕೇಳುಗ. ಈ ಅರಬ್ ದೇಶದಲ್ಲಿ ಕನ್ನಡ ಭಾಷೆ ಕೇಳುವುದೇ ಒಂದು ದಿವ್ಯ ಅನುಭವ. ನೀವು ನಮ್ಮ ಮನೆಗೆ ಬರಬೇಕು. ನಮ್ಮ ಸ್ನೇಹಿತರನ್ನುದ್ದೇಶಿಸಿ ಮಾತಾಡಬೇಕು’ ಎಂದು ಹೇಳಿದರು.
ತುಮಕೂರಿನ ಶೇಷಮೂರ್ತಿ ಅವರು ‘ಹೋಟೆಲ್ ತಿಂಡಿ ಇಷ್ಟವಾಗದಿದ್ದರೆ, ನಮ್ಮ ಮನೆಯಿಂದ ನಿಮಗೆ ಇಷ್ಟದ ಉಪ್ಪಿಟ್ಟನ್ನು ಮಾಡಿ ತರುತ್ತೇನೆ. ನೀವು ಒಮ್ಮೆ ಕ್ಲಬ್ ಹೌಸಿನಲ್ಲಿ ನಿಮಗೆ ಉಪ್ಪಿಟ್ಟು ಇಷ್ಟ ಎಂದು ಹೇಳಿದ್ದನ್ನು ಕೇಳಿದ್ದೇನೆ, ಸಂಕೋಚ ಮಾಡಿಕೊಳ್ಳಬೇಡಿ’ ಎಂದು ಹೇಳಿದಾಗ ನನ್ನ ಮನಸ್ಸು ಗದ್ಗದಿತವಾಗಿದ್ದು ಸುಳ್ಳಲ್ಲ. ನಮ್ಮ ಕ್ಲಬ್ ಹೌಸ್ ಕಾರ್ಯಕ್ರಮವನ್ನು ದಿನವೂ ತಪ್ಪದೇ ಕೇಳುವ ಒಂದಷ್ಟು ಆಸಕ್ತ ಮನಸ್ಸುಗಳಿರುವುದು ಸಂತಸದ ಸಂಗತಿಯೇ.
ಅಕ್ಷರ ಹುಟ್ಟಿಸುವ ಮಮತೆ, ಅಭಿಮಾನ ಅಂಥದ್ದು. ಆದರೆ ನನಗೆ ಇವರ ಆತಿಥ್ಯವನ್ನು ಸ್ವೀಕರಿಸುವ ಮತ್ತು ಈ ಸ್ನೇಹಿತರ ಜತೆ
ಸವುಡು ಮಾಡಿಕೊಂಡು ಕೆಲ ಕಾಲ ಕಳೆಯುವ ಅವಕಾಶ ಸಿಗಲಿಲ್ಲವಲ್ಲ ಎಂದು ಬೇಸರವಾಯಿತು. ಕಾರಣ ನನ್ನ ಕಾರ್ಯಕ್ರಮ ಪೂರ್ವ ನಿರ್ಧರಿತವಾಗಿತ್ತು. ಬೆಳಗಿನಿಂದ ರಾತ್ರಿ ತನಕ ಬಿಡುವಿಲ್ಲದ ಓಡಾಟ, ಸಂಚಾರ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವಾಗ, ಮಾರ್ಗ ಮಧ್ಯದಲ್ಲಿ ಬರವಣಿಗೆ, ಆಫೀಸಿನ ಕೆಲಸ, ಜೂಮ್ ಮೀಟಿಂಗ್. ಮೊದಲೇ ಪ್ಲಾನ್ ಮಾಡಿದ್ದರೆ, ಈ ಸ್ನೇಹಿತರ ಜತೆ ಒಂದಷ್ಟು ಕಾಲ ಕಳೆಯಬಹುದಿತ್ತು. ಅವರ ಬಾಯಿಯಿಂದ ಈಜಿಪ್ಟ್ ಅನುಭವವನ್ನು ಕೇಳಬಹುದಿತ್ತು. ನನ್ನ ಅನುಭವವನ್ನು ಅವರು ಇನ್ನಷ್ಟು ವಿಸ್ತರಿಸುತ್ತಿದ್ದರು. ಅಷ್ಟರ ಮಟ್ಟಿಗೆ ಅವರ ಜತೆ ಕಳೆಯದಿದ್ದುದು ನನ್ನ ಪಾಲಿಗೆ ದೊಡ್ಡ ಕೊರತೆಯೇ.
ಇರುವುದು ಆಫ್ರಿಕಾದರೂ
ಅರಬ್ ದೇಶಗಳ ಈಜಿಪ್ಟ್ ಪ್ರಮುಖವಾದುದು. ಮಧ್ಯ ಪ್ರಾಚ್ಯ ದೇಶಗಳ ಪೈಕಿ, ಈಜಿಪ್ಟ್ ರಾಜಧಾನಿ ಕೈರೋಕ್ಕೆ ರಾಜಕೀಯ ಮತ್ತು ಆರ್ಥಿಕವಾಗಿ ಮಹತ್ವ. ಆಫ್ರಿಕಾ ಖಂಡದ ಈಶಾನ್ಯಕ್ಕಿರುವ ಈಜಿಪ್ಟ್, ಆಫ್ರಿಕಾದ ಯಾವ ಗುಣಲಕ್ಷಣ ಗಳನ್ನೂ ಹೊಂದಿರದ ದೇಶ. ಪಶ್ಚಿಮದಲ್ಲಿ ಲಿಬಿಯಾ, ದಕ್ಷಿಣದಲ್ಲಿ ಸುಡಾನ್ ಮತ್ತು ಪೂರ್ವದಲ್ಲಿ ಇಸ್ರೇಲ್ ದೇಶಗಳ ಗಡಿಯನ್ನು ಹಂಚಿ ಕೊಂಡಿರುವ ಈಜಿಪ್ಟ್ನ ಉತ್ತರಕ್ಕೆ ಮೆಡಿಟರೇನಿಯನ್ ಸಮುದ್ರವಿದೆ.
ಲಿಬಿಯಾ ಮತ್ತು ಸುಡಾನ್ ದೇಶಗಳ ಗಡಿ ಭಾಗ ಸರಳ ರೇಖೆಯಂತೆ, ಸರಿಯಾಗಿ ಕೇಕ್ ಕುಯ್ದಂತೆ ಕಾಣುತ್ತದೆ. ಇಸ್ರೇಲ್ ಗಡಿಗುಂಟ ಹೊಂದಿರುವ ಭೂಭಾಗ ಮತ್ತು ಮೇನ್ ಲ್ಯಾಂಡ್ ಈಜಿಪ್ಟ್ ನಡುವೆ ಸೂಯೆಜ್ ಕಾಲುವೆ ಹರಿದಿರುವುದು ಒಂದು ವೈಶಿಷ್ಟ್ಯ. ಈಜಿಪ್ಟ್ ನ ಪೂರ್ವಭಾಗ ಕೆಂಪು ಸಮುದ್ರಕ್ಕೆ ಅಂಟಿಕೊಂಡಿದೆ. ಈಜಿಪ್ಟ್ನ ಉತ್ತರ ಮತ್ತು ಪೂರ್ವ ಭಾಗ ಕ್ರಮವಾಗಿ ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಕ್ಕೆ ತಾಕಿಕೊಂಡಿರುವುದರಿಂದ, ಈಶಾನ್ಯದಲ್ಲಿ ಸೂಯೆಜ್ ಕಾಲುವೆಯೂ ಇರುವುದರಿಂದ, ಈ ದೇಶ ನೌಕಾ ಮಾರ್ಗದ ದೃಷ್ಟಿಯಿಂದ ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿದೆ.
ಸುಮಾರು ಹತ್ತು ಕೋಟಿ ಜನಸಂಖ್ಯೆ ಹೊಂದಿರುವ ಈಜಿಪ್ಟ್ ವಿಶಾಲ ದೇಶವಾದರೂ, ಜನವಸತಿ ಮಾತ್ರ ನೈಲ್ ನದಿ ಅಕ್ಕಪಕ್ಕದಲ್ಲಿಯೇ ಹೆಚ್ಚು ಸಾಂದ್ರವಾಗಿದೆ. ಅಚ್ಚರಿಯೆಂದರೆ, ಈಜಿಪ್ಟ್ನ ಸುಮಾರು ಶೇ.೩೫ರಷ್ಟು ಪ್ರದೇಶಗಳಲ್ಲಿ ಜನವಸತಿಯೇ ಇಲ್ಲ. ಅಲ್ಲಿ ನಾಗರಿಕತೆಯ ಯಾವ ಕುರುಹುಗಳೂ ಇಲ್ಲ. ನೈಲ್ ನದಿ ಈಜಿಪ್ಟ್ನಲ್ಲಿ ಎಲ್ಲಿ ಹರಿದಿದೆಯೋ, ಅಲ್ಲ ನಗರಗಳು ತಲೆಯೆತ್ತಿವೆ. ಇಡೀ ದೇಶದ ಚಟುವಟಿಕೆ ಈ ನದಿಯ ಇಕ್ಕೆಲಗಳಲ್ಲಿ ವ್ಯಾಪಿಸಿದೆ.
ಭೌಗೋಳಿಕವಾಗಿ ಆಫ್ರಿಕಾದಲ್ಲಿದ್ದರೂ, ಈಜಿಪ್ಟ್ನ ಭಾವ ನಾತ್ಮಕ ಒಡನಾಟವೆಲ್ಲ ಅರಬ್ ದೇಶಗಳ ಜತೆಗೇ ಹೆಚ್ಚು. ಆಫ್ರಿಕಾದ ಇತರ ದೇಶಗಳೂ ಈಜಿಪ್ಟ್ ಅನ್ನು ಪಕ್ಕಕ್ಕೆ ಇಟ್ಟೇ ನೋಡುವುದು ಜಾಸ್ತಿ. ಇದಕ್ಕೆ ಈಜಿಪ್ಟ್ ಇರುವ ತಾಣ ಮತ್ತು ಜನ ಕಾರಣ. ಅರಬ್ ರಾಷ್ಟ್ರಗಳ ಈಜಿಪ್ಟ್ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ ಮತ್ತು ಆಫ್ರಿಕಾ ಖಂಡದಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ.
ಜನಾಂಗೀಯ ಸಾಮ್ಯ
ಈಜಿಪ್ಟ್ನ ಒಂದು ಗಮನಾರ್ಹ ಸಂಗತಿಯೆಂದರೆ, ಅದರ ಜನಾಂಗೀಯ ಸಾಮ್ಯ. ಈ ದೇಶದ ಶೇ.೯೦ರಷ್ಟು ಮಂದಿ ಮುಸ್ಲಿಮರು. ಅವರಲ್ಲಿ ಹೆಚ್ಚಿನವರು ಸುನ್ನಿ ಮುಸಲ್ಮಾನರು. ಉಳಿದ ಶೇ.೭ರಷ್ಟು ಮಂದಿ ಕ್ರಿಶ್ಚಿಯನ್ನರು. ಇನ್ನುಳಿದವರು ಸಣ್ಣ ಪ್ರಮಾಣದಲ್ಲಿರುವ ಅನ್ಯ ದೇಶೀಯರು. ಕಳೆದ ಒಂದು ಸಾವಿರ ವರ್ಷದಿಂದ ಈಜಿಪ್ಟ್ನ ರಾಜಧಾನಿ ಮತ್ತು ಸರ್ವ ಚಟುವಟಿಕೆಗಳ ಕೇಂದ್ರ ಕೈರೋ. ಆದರೆ ಕಳೆದ ಕಾಲು ಶತಮಾನದಿಂದ ಕೈರೋ ಜನವಸತಿ ದಟ್ಟಣೆಯನ್ನು ಪರಿಗಣಿಸಿ, ಈಗಿನ ರಾಜಧಾನಿಯಿಂದ ಸುಮಾರು ಐವತ್ತು ಕಿ.ಮೀ. ದೂರದಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಲಾಗುತ್ತಿದೆ.
ಸರಕಾರಿ ಕಚೇರಿ, ರಾಯಭಾರಿ ಕಚೇರಿ ಮತ್ತು ಸಚಿವರ ವಸತಿ ಸಮುಚ್ಚಯಗಳನ್ನು ಒಳಗೊಂಡ ಈ ಹೊಸ ರಾಜಧಾನಿಗೆ ಇನ್ನೂ
ಹೆಸರನ್ನಿಟ್ಟಿಲ್ಲ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೊ, ಕೈರೋದಲ್ಲಿ ದೊಡ್ಡ ಪ್ರಮಾಣದ ಕಾರ್ಯಚಟುವಟಿಕೆ ಹೊಂದಿದೆ. ಅದು
ಈಜಿಪ್ಟ್ ಸರಕಾರದ ಜತೆ ಸೇರಿ ಪಾರಂಪರಿಕ ಸ್ಥಳಗಳನ್ನು ಸಂರಕ್ಷಿಸುವ ಮಹತ್ವದ ಕಾರ್ಯದಲ್ಲಿ ನಿರತವಾಗಿದೆ.
ಸಮಸ್ಯೆ ಊಟದ್ದಲ್ಲ, ಭಾಷೆಯದು
ಕೈರೋದಲ್ಲಿ ನಗರದಲ್ಲಿ ಊಟ-ತಿಂಡಿಯ ಸಮಸ್ಯೆಯಿಲ್ಲ. ಭಾರತೀಯ ಆಹಾರಗಳನ್ನು ತಯಾರಿಸುವ ಅನೇಕ ರೆಸ್ಟೋರೆಂಟುಗಳಿವೆ. ದಕ್ಷಿಣ ಭಾರತದ ಊಟವೂ ಲಭ್ಯ. ಹತ್ತಾರು ಬಗೆಯ ಇಂಡಿಯನ್ ರೆಸ್ಟೋರೆಂಟುಗಳಿವೆ. ಪಂಜಾಬಿ, ಗುಜರಾತಿ, ಚೆಟ್ಟಿನಾಡು ಶೈಲಿಯ ಆಹಾರಗಳು ಸಹ ಲಭ್ಯ. ಆದರೆ ಸಮಸ್ಯೆಯೆಂದರೆ ಭಾಷೆಯದು. ಸ್ಥಳೀಯರಾರಿಗೂ ಇಂಗ್ಲಿಷ್ ಬರುವುದಿಲ್ಲ. ಕಳೆದ ಐದು ದಿನಗಳಿಂದ ನಾನು ಪ್ರವಾಸ ಮಾಡುತ್ತಿರುವ ಕಾರಿನ ಚಾಲಕನಿಗೆ ಅರೇಬಿಕ್ ಭಾಷೆಯ ಹೊರತಾಗಿ ಬೇರೆ ಯಾವ ಭಾಷೆಯೂ ಬರುವುದಿಲ್ಲ. ಹೀಗಾಗಿ
ನಮ್ಮಿಬ್ಬರ ಮಧ್ಯೆ ಎರಡು ದಿನ ಯಾವ ಮಾತುಕತೆಯೇ ಇರಲಿಲ್ಲ. ಒಮ್ಮೊಮ್ಮೆ ಆತ ಎಲ್ಲಾ ವಾಹನವನ್ನುಪಾರ್ಕ್ ಮಾಡುತ್ತಿದ್ದ. ಅವನನ್ನು ಮೊಬೈಲ್ನಲ್ಲಿ ಸಂಪರ್ಕಿಸಿದರೂ, ಮಾತಾಡಲು ಆಗದ ಅಸಹಾಯಕತೆ. ಅಕ್ಷರಶಃ ನಾವಿಬ್ಬರೂ ಮೂಕರಂತೆ ಇzವು.
ನಂತರ ನಾವಿಬ್ಬರೂ ಗೂಗಲ್ ಟ್ರಾನ್ಸಲೇಟರ್ ಮೂಲಕ ವ್ಯವಹರಿಸಲು ಶುರು ಮಾಡಿದೆವು. ನಾನು ಇಂಗ್ಲಿಷಿನಲ್ಲಿ ಟೈಪ್ ಮಾಡಿದರೆ ಅದು ಅರೇಬಿಕ್ ಭಾಷೆಯಲ್ಲಿ ಅನುವಾದಗೊಳ್ಳುತ್ತಿತ್ತು. ಆತ ಅರೇಬಿಕ್ ಭಾಷೆಯಲ್ಲಿ ಬರೆಯುತ್ತಿದ್ದ. ಅದು ನನಗೆ ಇಂಗ್ಲಿಷಿನಲ್ಲಿ ಅನುವಾದ ವಾಗುತ್ತಿತ್ತು. ಅಕ್ಕಪಕ್ಕದಲ್ಲಿ ಕುಳಿತು ನಾವಿಬ್ಬರೂ ಮೂಕರಂತೆ ಟ್ರಾನ್ಸಲೇಟರ್ ಮೂಲಕ ವ್ಯವಹರಿಸುತ್ತಿದ್ದೆವು. ಆತ ನನ್ನನ್ನು ಎಷ್ಟು ಬೈದುಕೊಂಡನೋ. ನಾನಂತೂ ನನ್ನ ಅಪ್ಪಟ ಹವ್ಯಕ ಭಾಷೆಯಲ್ಲಿ ಅವನನ್ನು ಆಗಾಗ ಒಳಬಾಯಲ್ಲಿ ಬೈಯುತ್ತಿದ್ದೆ. ಎಷ್ಟು ಬೈದರೆಷ್ಟು? ಬಿಟ್ಟರೆಷ್ಟು? ಆತನಿಗೆ ಅರ್ಥವಾದರೆ ತಾನೇ? ಹಾಗಂತ ಆತ ಒಳ್ಳೆಯವ.
ಉತ್ತಮ ಡ್ರೈವರ್. ಆದರೆ ಅವನಿಂದ ಸಿಗಬಹುದಾದ ಉತ್ತಮ ಮಾಹಿತಿಗೆಲ್ಲ ಕತ್ತರಿ ಅಥವಾ ಬ್ರೇಕ್. ಕಾರಿನ ಏಸಿ ಹಾಕು ಅಂದರೂ ಅವನಿಗೆ ಆರ್ಥವಾಗುತ್ತಿರಲಿಲ್ಲ. ಹೀಟರ್ ಹಾಕುತ್ತಿದ್ದ. ‘ನೋ ಹೀಟರ್’ ಅಂದ್ರೆ ಟೆಂಪರೇಚರ್ ಮತ್ತಷ್ಟು ಜಾಸ್ತಿ ಮಾಡುತ್ತಿದ್ದ. ಆಗ ಗೂಗಲ್ ಟ್ರಾನ್ಸಲೇಟರ್ ಹಿಡಿದು ತೋರಿಸಬೇಕಾಗುತ್ತಿತ್ತು. ಅಷ್ಟರೊಳಗೆ ಆ ಚಳಿಯಲ್ಲೂ ಬೆವರು ಕಿತ್ತು ಬರುತ್ತಿತ್ತು. ಇದು ಡ್ರೈವರ್ ಜತೆಯಲ್ಲಿ ಮಾತ್ರ ಅಲ್ಲ, ಅನೇಕ ಕಡೆಗಳಲ್ಲಿ ಇದೇ ಅನುಭವವಾಯಿತು. ಪೊಲೀಸರೊಂದಿಗೆ ಮಾತಾಡುವಾಗಲೂ ಗೂಗಲ್ ಟ್ರಾನ್ಸಲೇಟರ್ ಬಳಸಿ ವ್ಯವಹರಿಸಿದ್ದುಂಟು. ಜಗತ್ತಿನಲ್ಲ ಸುತ್ತು ಹಾಕಿ ಬಂದಿರುವ ಇಂಗ್ಲಿಷ್, ಈಜಿಪ್ಟ್ ನಲ್ಲಿ ಇನ್ನೂ ಸ್ಥಿರವಾಗಿ ತಳವೂರಿಲ್ಲ. ಅದರಲ್ಲೂ ಸ್ಥಳೀಯರ ನಾಲಗೆ ಮೇಲೆ ಬಂದು ಕುಳಿತಿಲ್ಲ.