ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
dascapital1205@gmail.com
ರಾಷ್ಟ್ರದ ಏಳು ಬೀಳುಗಳ ಒಟ್ಟೂ ಅಸ್ತಿತ್ವದಲ್ಲಿ ಕಾಂಗ್ರೆಸಿನ ಪಾಲು ದೊಡ್ಡದಿದೆ. ಕಾಂಗ್ರೆಸಿನ ರಾಜಕಾರಣ ಈ ದೇಶದ ಇತಿಹಾಸದಲ್ಲಿ
ಪ್ರಶ್ನಾರ್ಹವಾಗೇ ಇದೆ! ಯಾವುದೇ ಅನುಭವವಿರದ ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ?
ಎಂಥೆಂಥಾ ಮುತ್ಸದ್ದಿಗಳು ನೆಹರೂ ಕಾಲದಲ್ಲಿ ಹೇಳ ಹೆಸರಿಲ್ಲದೆ ತೆರೆಯ ಮರೆಯ ನಿರ್ನಾಮವಾದರು! ಅಧಿಕಾರಷಾಹೀ ಪ್ರಜ್ಞೆಯಿಂದ 14 ವರ್ಷಗಳ ಕಾಲ ಪ್ರಧಾನಿಯಾಗಿಯೇ ಉಳಿಯಲು ನೆಹರೂ ಮಾಡಿದ ಕಸರತ್ತುಗಳಿಂದ ರಾಷ್ಟ್ರಕ್ಕೆ ಸಿಗಬಹುದಾದ ಅಪ್ರತಿಭಾಶೀಲ ಮುತ್ಸದ್ದಿಗಳು ನೇಪಥ್ಯದ ಉಳಿದದ್ದು ಮಾತ್ರ ದುರಂತವೇ ಸರಿ. ಪಟೇಲರಿಂದ ಪ್ರಣವ್ ವರೆಗೆ ಯಾರಿಗೂ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಲೇ ಇಲ್ಲ. ನೆಹರೂ ಅನಂತರ ಪ್ರಧಾನಿಯಾದ ಶಾಸಿಜೀ ದೂರದ ತಾಷ್ಕೆಂಟಿನಲ್ಲಿ ನಿಧನರಾದ ಅನಂತರ ಇಂದಿರಾ ಪ್ರಧಾನಿಯಾದರು.
ಜಗಜೀವನರಾಂ, ಮೊರಾರ್ಜಿಯಂಥ ಮುತ್ಸದ್ದಿಗಳನ್ನು, ಕೇಸರಿಯವರನ್ನು ಮುಗಿಸ ಲಾಯಿತು. ಕೇಸರಿಯನ್ನು ಹಣಿಯಲು ಪ್ರಣವ್, ಪವಾರ್ ಅಂಥವರು ಸೋನಿಯಾ ತಂಡ ಸೇರಿಕೊಂಡರೂ ಆಮೇಲೆ ಕೇಸರಿಗಾದ ಸ್ಥಿತಿಯೇ ಇವರಿಗೂ ಆಯಿತು. ಈ ಮಧ್ಯೆ ವಿರೋಧ ಪಕ್ಷದಲ್ಲಿ ಪ್ರಮುಖರಾದ ಶ್ಯಾಮ್ಪ್ರಸಾದ್ ಮುಖರ್ಜಿಯವರ ಸ್ಥಾನ ವನ್ನು ತುಂಬಿದ ದೀನದಯಾಳ ಉಪಾಧ್ಯಾಯರ ಕೊಲೆಯಾಯಿತು. ರಾಜೇಶ್ ಪೈಲಟ್, ಸಿಂಧಿಯಾ ರಸ್ತೆ ಮತ್ತು ವಿಮಾನ ದುರಂತದಲ್ಲಿ ವಿಧಿವಶವಾದರು.
ಕಾಲಗತಿಯಲ್ಲಿ ಇಂದಿರಾಗಾಂಧಿ ಹತ್ಯೆಯೂ ನಡೆದೇ ಹೋಯಿತು. ಜೀವಕ್ಕೆ ಅಪಾಯವಿ ದೆಯೆಂದು ರಾಷ್ಟ್ರೀಯ ಭದ್ರತಾ ಮಂಡಳಿಯು ನೀಡಿದ ಎಚ್ಚರದಲ್ಲೂ ರಾಜೀವ್ ಗಾಂಧಿಯ ಬರ್ಬರ ಹತ್ಯೆ ನಡೆಯಿತು! ಕೃಪಲಾನಿಯಿಂದ ಹಿಡಿದು ಸೋನಿಯಾವರೆ ಗಿನ ಕಾಂಗ್ರೆಸಿಗೆ ರಾಹುಲನೂ ಅಧ್ಯಕ್ಷನಾದ! ನೆಹರು ವಂಶದ ಆರು ಸದಸ್ಯರು ಸುಮಾರು 38 ವರ್ಷ ರಾಷ್ಟ್ರೀಯ ಅಧ್ಯಕ್ಷರಾದರು. 38 ವರ್ಷಗಳವರೆಗೆ ರಾಷ್ಟ್ರವನ್ನಾಳಿದರು. ಕಾಂಗ್ರೆಸಿನ ಅಧ್ಯಕ್ಷ ಪಟ್ಟ ನೆಹರೂ ವಂಶದ ಕಪಿ ಮುಷ್ಠಿಯ ಸಾಗಿಬಂತು.
ಸ್ವಾತಂತ್ರ್ಯಾ ನಂತರದ ರಾಷ್ಟ್ರ ರಾಜಕಾರಣಕ್ಕೂ, ಕಾಂಗ್ರೆಸಿನ ಚರಿತ್ರೆಗೂ ಹಾಗೂ ನೆಹರೂ ಮನೆತನಕ್ಕೂ ಬಿಡಿಸಲಾಗದ ಬಂಧವಿದೆ. ಈ ಬಂಧವನ್ನು ಗಟ್ಟಿಗೊಳಿಸುತ್ತಲೇ ಬರಲಾಗಿದೆ. ಸ್ವಾತಂತ್ರ್ಯಾ ನಂತರದ ರಾಷ್ಟ್ರ ರಾಜಕಾರಣ ನೆಹರೂ ಮನೆತನದಿಂದ ಹೊರತಾಗಿಲ್ಲ. ರಾಷ್ಟ್ರದ ಏಳು ಬೀಳುಗಳ ಒಟ್ಟೂ ಅಸ್ತಿತ್ವದಲ್ಲಿ ಇವರದೇ ದೊಡ್ದಪಾಲು.
ಸ್ವಾತಂತ್ರ್ಯಾ ನಂತರದ ರಾಜಕೀಯ ತಪ್ಪು ಹೆಜ್ಜೆಗಳು, ಕಟ್ಟಿ ಬೆಳೆಸಿದ ದುಷ್ಟವ್ಯೂಹ, ತುಷ್ಟೀಕರಣ, ಸರ್ವಾಽಕಾರಿ ಧೋರಣೆ, ಓಟು ಬ್ಯಾಂಕ್ ರಾಜಕೀಯ, ಭ್ರಷ್ಟಾಚಾರ, ಅವಿವೇಕ, ಅಹಂಕಾರ, ದುಡುಕಿನ ವರ್ತನೆ, ತೀರ್ಮಾನ, ಕೆಟ್ಟ ಹೈಕಮಾಂಡ್ ಸಂಸ್ಕೃತಿಗೆ ಅಡಿಪಾಯ, ಹೈಕಮಾಂಡ್ ಓಲೈಕೆ, ಕುಟುಂಬ ರಾಜಕೀಯ, ಸೋಗಲಾಡಿ ಜಾತ್ಯತೀತತೆ, ಬೆದರಿಕೆ, ಬ್ಲಾಕ್ ಮೇಲ್ ತಂತ್ರ, ಪರಿವಾರದವರಿಗೆ ಮಂತ್ರಿಗಿರಿ, ತುಘಲಕ್ ದರ್ಬಾರ್, ಎಡಪಂಥೀಯ ಒಲವು, ಮೋಜು, ಮಸ್ತಿ, ವಿಲಾಸಿ ಜೀವನ, ಪಾರ್ಟಿಗೆ ಫಂಡ್ ನೀಡುವ ನೀಚರ ರಕ್ಷಣೆ, ಪ್ರಾಂತೀಯತೆ, ಚೀನಾದೆದುರು ಶರಣಾಗುವಿಕೆ, ಹೇಡಿತನದ ಪಂಚಶೀಲ ತತ್ವಗಳು, ಕರಾಳ ತುರ್ತುಪರಿಸ್ಥಿತಿ, ಸಾಲುಸಾಲು ಹಗರಣಗಳು- ಇವೆಲ್ಲ ಯಾರ ಬಳುವಳಿ? ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಅದಕ್ಷತೆಯನ್ನು ತೋರಿದ ನೆಹರೂ ಕುಟುಂಬದ ನಾಕನೇ ತಲೆಮಾರಿನ ಮಗನಿಗೆ ಸೊಸೆಯಾಗಿ ಬಂದ ಸೋನಿಯಾರನ್ನು 2004ರ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ನೀನೇ ಪ್ರಧಾನಿಯಾಗು ಎಂದು ಕಾಂಗ್ರೆಸ್ ನೇತಾರರು ಗೋಗರೆದದ್ದು ಯಾವ ಪ್ರಮಾಣದ ಅಜ್ಞಾನ? ಅವಿವೇಕ? ಕಾಂಗ್ರೆಸಿನ ನಿಜ ಒಳತಾಕತ್ತು ಇದೇನಾ? ಕಾಂಗ್ರೆಸ್ ಹುಟ್ಟಿನ ಹಿನ್ನೆಲೆಯ ಮೂಲ ಸ್ವರೂಪ, ಧ್ಯೇಯ, ರಾಷ್ಟ್ರಹಿತಾಸಕ್ತಿ, ಪ್ರಬಲ ರಾಷ್ಟ್ರನಿರ್ಮಾಣ, ಸಾಮಾಜಿಕ ನ್ಯಾಯ, ಸಾರ್ವಭೌಮತ್ವ, ಏಕತೆ, ಸಾಮರಸ್ಯ, ಶತ್ರುನಿಗ್ರಹ, ಶಾಂತಿ ಸ್ಥಾಪನೆ- ಈ ಬಗೆಯ ರಾಷ್ಟ್ರ ಉತ್ಕರ್ಷಣದ ಉದ್ದಿಶ್ಶಗಳನ್ನು ತ್ಯಾಗ, ಅಂತಃ ಶೋಧ, ಬಲಿದಾನಗಳಿಂದ ಇದರ ಅಸ್ತಿತ್ವವನ್ನು ಊರ್ಧ್ವಮುಖೀಯಾಗಿಸುತ್ತಾ ಹೊತ್ತು ಬಂದ ಸಾರ್ವ ಕಾಲಿಕ ಮೌಲ್ಯಗಳು ಬರಬರುತ್ತಾ ಕ್ಷೀಣಿಸಿದ್ದು ಹೇಗೆ? ಕಾರಣ ಯಾರು? ಯಾರಿಗೆ ಗೊತ್ತಿಲ್ಲ ಹೇಳಿ? ತುಷ್ಟೀಕರಣ ರಾಜಕೀಯಕ್ಕೆ ಬುನಾದಿಯನ್ನು ಹಾಕಿದ ನೆಹರೂ ಪ್ರಣೀತ ಪ್ರಭೃತಿಗಳ ಮುಂದೂವರೆದ ಭಾಗವಾಗಿ ರಾಹುಲ್ ಕಾಂಗ್ರೆಸ್ ಅಧ್ಯಕ್ಷನಾದನೇ? ಅನುಭವ ವಿಲ್ಲದ ಈತನನ್ನು ಅಧ್ಯಕ್ಷನಾಗಿಸಿದ ಪಕ್ಷದ ನೇತಾರರ ಬೌದ್ಧಿಕ ದಾರಿದ್ರ್ಯ ಅದೆಂಥದ್ದು!
ಅದ್ಯಾವ ಸೀಮೆಯ ಹೈಕಮಾಂಡ್ ಸಂಸ್ಕೃತಿಯಿದು? ಕಾಂಗ್ರೆಸಿನ ಪಾಷಾಂಕುಶ ತಮ್ಮ ಕೈಯ ಇರಬೇಕೆಂದು ಇಚ್ಛಿಸಿ ಪೋಷಿಸಿಕೊಂಡ ಕುಟುಂಬ ರಾಜಕಾರಣದ ಪರಮಗೀಳಲ್ಲವೆ ಇದು? ಚಿದಂಬರಂ, ಸಿಬಲ, ಜ್ಯೋತಿ ರಾದಿತ್ಯ, ಗುಲಾಂನಬಿ, ಅಂಬಿಕಾಸೋನಿ, ಅಂಟೋನಿ, ಜಯಂತೀ ನಟರಾಜನ್, ಜೈರಾಂ ರಮೇಶ್, ನಮ್ಮವರಾದ ಖರ್ಗೆ, ಮೊಯಿಲಿ, ಆಳ್ವ, ಆಸ್ಕರ್- ಮುಂತಾದ ಹಿರಿಯ ಅನುಭವಿ ನೇತಾರರಿದ್ದೂ ಈತನಿಗೆ ಪಟ್ಟ ಕಟ್ಟಿದ ಕಾಂಗ್ರೆಸಿನ ಅದೇ ಹಳೆಯ ಜಾಯಮಾನಕ್ಕೆ ಬಿಡುಗಡೆಯೇ ಇಲ್ಲವೇ? ನೆಹರೂ ಮನೆತನದ ಕಪಿಮುಷ್ಠಿಯಿಂದ ಕಾಂಗ್ರೆಸಿಗೆ ಮುಕ್ತಿಯಿಲ್ಲವೇ? ಸೋನಿಯಾರಿಂದ ಮುಕ್ತಿ ಸಿಕ್ಕಿತೆನ್ನುವಾಗಲೇ ರಾಹುಲ್ ಬಂದ. ವಿಚಿತ್ರವೆಂದರೆ, ಸರ್ವಾನುಮತದಿಂದಲೇ ಈ ಪುಣ್ಯಾತ್ಮ ಆಯ್ಕೆಯಾದದ್ದು!
20 ವರ್ಷ ಅಧ್ಯಕ್ಷರಾಗಿದ್ದ ಸೋನಿಯಾ ರದ್ದೇ ರಾಹುಲಗೆ ಮಾರ್ಗದರ್ಶನ. ಹಿರಿಯ ನಾಯಕರ ಮಧ್ಯೆ ಈತನಿಗೆ ಸಿಂಹಾಸನ! ಮರ್ಮ ವೇನು? ಬಾಯಿಮಾತಲ್ಲಿ ಒಯೆಂದು ಹೇಳಿದರೂ ಪ್ರಧಾನಿಯ ಕನಸು ರಾಹುಲನಿಗೆ ಮೊನ್ನೆಯವರೆಗೂ ಇತ್ತು. ನೆಹರೂ, ಇಂದಿರಾ ಕಾಲದದರೆ ಆಸೆ ಈಡೇರಬಹುದಿತ್ತೇ ನೋ! ಆದರೆ ಭಾರತ ಮೊದಲಿನಂತಿಲ್ಲ. ಚರಿತ್ರೆ ಬೇಡ, ತ್ಯಾಗಬೇಡ, ಬೆವರು ಸುರಿಸೋದು ಬೇಡ, ರಾಷ್ಟ್ರಾದರ್ಶದ ತಿಳವಳಿಕೆ – ಪಾಲನೆ -ಪೋಷಣೆ- ಸಮಸ್ಯೆಯಾಳದರಿವು, ಪರಿಹಾರ, ಸಾಮರ್ಥ್ಯ, ಪ್ರತಿಭೆ ಬೇಡ. ಕೇವಲ ನಿನ್ನ ನಾಮದ ಬಲವೊಂದಿದ್ದರೆ ಸಾಕು ಎಂದರಾದೀತೆ? ವಂಶಹಿನ್ನೆಲೆ ನಾಯಕತ್ವಕ್ಕೆ ನಿರ್ಣಾಯಕವಾಗಲಾರದು.
ತನ್ನ ಉಸ್ತುವಾರಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಇಲ್ಲದ ಸತತ ಪ್ರಯ ತ್ನದಲ್ಲಿ ದೇಶದ ಮಾನವನ್ನು ವಿಶ್ವದ ಮುಂದೆ ಹರಾಜಿಡುತ್ತಾ ಸಿಕ್ಕಸಿಕ್ಕ ವೇದಿಕೆಗಳಲ್ಲಿ ಮೋದಿಯನ್ನು ನಿಂದಿಸಿದ. ಸಂಸತ್ತಿನಲ್ಲಿ ಆಭಾಸವಾಗಿ ಮಾತಾಡಿ ಮೌಲ್ಯ ಕಳೆದುಕೊಂಡ ಮೇಲೂ, ಪ್ರಧಾನಿ ಯನ್ನು ತಬ್ಬಿ ನಗೆಪಾಟಲಿಗೀಡಾದ. ರೆ-ಲ್ ಆರೋಪದಲ್ಲಿ ಕಾಂಗ್ರೆಸಿಗೆ ಭಾರೀ ಮುಜುಗರವಿಟ್ಟ. ರಾಜತಾಂತ್ರಿಕ ವಿಚಾರಗಳಲ್ಲಿ ಸ್ವಲ್ಪವೂ ಸಾಮಾನ್ಯ ಜ್ಞಾನವಿಲ್ಲದೆ ಸರಿಯಾಗಿ ಮಾತಾಡಲು ಬಾರದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಳನ್ನು ಹೇಳಿ ಭಾರತದ ಮಾನವನ್ನು ತೆಗೆಯುತ್ತ ಬಂದ 49ರ ಇವನನ್ನು 79ರ ಹಿರಿಯರು ತಿದ್ದುವುದಾದರೂ ಹೇಗೆ!? ಕೆಸಿಆರ್, ಅಚ್ಯುತಾ ನಂದರು ಇವನನ್ನು ಜೋಕರ್, ಪಪ್ಪು ಎಂದದ್ದು ನೆನಪಿದೆಯೇ? ಮೋದಿ ಸರಕಾರವನ್ನು ಕೆಡಿಸುವುದಕ್ಕೆ ಯಾವ್ಯಾವ ವಾಮಮಾರ್ಗದ ದಾರಿಗಳಿವೆಯೋ ಅವೆಲ್ಲವನ್ನೂ ಇವ ಮೆಟ್ಟಿದ.
ದೇಶದ ಹಳಿ ತಪ್ಪಿಸಲು ಸತತ ಯತ್ನಿಸಿದ! ಗುರುತರವಾದ ದ್ರೋಹವನ್ನು ಮಾಡಿದವ ತಾನು ಮಾಡಿದ ದ್ರೋಹದ ಕೂಪದೊಳಗೇ ಬೀಳುತ್ತಾನೆ ನ್ನುತ್ತದೆ ಚರಿತ್ರೆ. ಅಧಿಕಾರದಲ್ಲಿದ್ದಾಗಲೂ ಇಲ್ಲದಾಗಲೂ ಕಾಂಗ್ರೆಸಿನ ರಾಜಕಾರಣ ಈ ದೇಶದ ಇತಿಹಾಸದಲ್ಲಿ ಪ್ರಶ್ನಾರ್ಹ ವಾಗೇ ಇದೆ! ಬಹುಮತದ ಪಡೆದ ಪಕ್ಷವೊಂದು ನಡೆಸುವ ಸರಕಾರಕ್ಕೆ ಸರಿಯಾಗಿ ಆಡಳಿತ ಮಾಡಲು ಬಿಡದೆ ಅಡ್ಡಿ ಮಾಡುತ್ತಲೇ ಬಂದ ಈ ಪಕ್ಷ ಈಗ ಸೋತು ಸೋತು ಸುಣ್ಣವಾಗಿದೆ.
ತಾನೂ ತನ್ನ ಪಕ್ಷವನ್ನೂ ಸೋಲಿನ ದವಡೆಗೆ ನೂಕಿದ ರಾಹುಲಗೆ ಈಗ ಅಧ್ಯಕ್ಷ ಪದವಿ ಬೇಡವೆನಿಸಿದರೆ, ತಾನೇ ಹೀರೋ ಅಲ್ಲವೆಂದು ಅಂದುಕೊಂಡ ನಾಯಕನ ಪ್ರಬುದ್ಧ ನಡೆಯೆನಿಸುತ್ತದೆ. ಪಕ್ಷದ ಹಿರಿಯರಲ್ಲಿ ಯಾರಾದರೂ ಅಧ್ಯಕ್ಷರಾಗಲು ಸೂಕ್ತ ಸಮಯವಿದು. ಕಾಂಗ್ರೆಸಿನ ಅಸ್ಮಿತೆಗೆ ಹೊಸರೂಪ, ಹೊಸಹೊಳಪು ನೀಡಲು ಪಕ್ಷದ ಹಿರಿಯರು, ಹಿತೈಷಿಗಳು ಗಂಭೀರವಾಗಿ ಚಿಂತಿಸಬೇಕಾದ ಹೊತ್ತಿದು.
9 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿರುವ, ಪ್ರಾಥಮಿಕ ಶಿಕ್ಷಣ, ರೆವಿನ್ಯೂ, ಸಹಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಗೃಹ, ಜಲಸಂಪನ್ಮೂಲ, ಸಾರಿಗೆ- ಹಾಗೂ ಕೇಂದ್ರದಲ್ಲಿ ಕಾರ್ಮಿಕ ಮತ್ತು ರೈಲ್ವೆ, ಕೇಂದ್ರ ಮತ್ತು ರಾಜ್ಯದಲ್ಲೂ ವಿಪಕ್ಷಗಳ ನಾಯಕತ್ವ,- ಹೀಗೆ ತಮ್ಮ ರಾಜಕೀಯ, ಸಾರ್ವಜನಿಕ, ವೈಯಕ್ತಿಕ ಜೀವನದಲ್ಲಿ ಹಲವು ಹತ್ತು ಆಯಾಮಗಳಲ್ಲಿ ದುಡಿದ ಅನುಭವ ಇರುವ ಹಿರಿಯರಾದ ಖರ್ಗೆ ಯವರು ಸಹಜವಾಗಿಯೇ ಅರ್ಹರು. ಕೊಟ್ಟ ಕೆಲಸಗಳನ್ನು ನಿಯತ್ತು, ಪ್ರಾಮಾಣಿಕತೆಯಿಂದ ಮಾಡುವ ಖರ್ಗೆಯವರು ಕಾಂಗ್ರೆಸಿನಲ್ಲಿ ನಿಸ್ಪೃ ಹರು.
ನನ್ನ ಜಾತಿಯನ್ನು ಆಧರಿಸಿ ಸಿಎಂ ಸ್ಥಾನವನ್ನು ಕೊಡೋದಾದರೆ ಅದನ್ನು ನಾನು ಸ್ವೀಕರಿಸುವುದಿಲ್ಲವೆಂದು ಒಮ್ಮೆ ಆಡಿದವರು. ಸಾಮರ್ಥ್ಯ ಮತ್ತು ಅರ್ಹತೆಯೆಂಬುದು ಜಾತಿಯನ್ನು ಆಧರಿಸಿರಬಾರದು ಎಂಬ ಇರಾದೆಯ ಖರ್ಗೆಯವರು ಎಂದೋ ಕರ್ನಾಟಕದ ಸಿಎಂ ಆಗಬೇಕಿತ್ತು! ವಂಶ ರಾಜಕಾರಣ, ಗುಂಪುಗಾರಿಕೆ, ಸ್ವಜನ ಪಕ್ಷಪಾತ, ಸಮಯ ಸಾಧಕತನ, ಮೂರ್ಖತನವೇ ತುಂಬಿರುವ ಕಾಂಗ್ರೆಸ್ ಹೊಸ ಮನ್ವಂತರಕ್ಕೆ ತೆರೆದುಕೊಳ್ಳಬೇಕಿದೆ.
ನೆಹರೂ ಕುಟುಂಬದಿಂದ ಕಾಂಗ್ರೆಸ್ ಮುಕ್ತಿ ಪಡೆಯಬೇಕಿದೆ.. ಮುಖ್ಯವಾಗಿ, ಸೋನಿಯಾ ಮತ್ತು ರಾಹುಲರು ರಾಜಕೀಯ ಜೀವನ ದಿಂದಲೇ ಮುಕ್ತರಾಗಿ ಸಾರ್ವಜನಿಕ ಜೀವನದ ಬೇರೆ ಬೇರೆ ಆಯಾ ಮಗಳಲ್ಲಿ ತಮ್ಮನ್ನು ತೊಗಿಸಿಕೊಳ್ಳುವುದುತ್ತಮ. ಗೊರ್ಬಚೆವ್, ಮಂಡೇಲಾರು ಒಕ್ಕೂಟದ ಅಧ್ಯಕ್ಷರಾಗಿ ಅವಧಿ ಮುಗಿದಾಕ್ಷಣ ಹಳ್ಳಿಗೆ ಹೋಗಿ ನೆಲೆಸಿದರು. ಅಷ್ಟೇ ಯಾಕೆ, 2 ಬಾರಿಗೆ ಅಮೆರಿಕಾದ ಅಧ್ಯಕ್ಷರಾದ ಒಬಾಮಾ ಕೂಡ. ಕಾಂಗ್ರೆಸ್ ತನ್ನ ಒಟ್ಟೂ ಅಸ್ಮಿತೆಯ ಸಮಗ್ರವಾಗಿ ಬದಲಾಗಲು ತಾಯಿ ಮತ್ತು ಮಗನ ರಾಜಕೀಯ ನಿರ್ಲಿಪ್ತತೆ ತುಂಬಾ ಅಗತ್ಯವಾಗಿದೆ.