ವಿದೇಶ ವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
ಪಶ್ಚಿಮದ ಮಾಧ್ಯಮಗಳು ಭಾರತವನ್ನು, ಭಾರತದ ಪ್ರಧಾನಿಯನ್ನು ಅವಹೇಳನ ಮಾಡುತ್ತಿರುವುದು ಮೋದಿ ಪ್ರಧಾನಿಯಾದ ನಂತರ
ಎಂದು ತಿಳಿದರೆ, ಅದು ದೊಡ್ಡ ತಪ್ಪು. ಮೋದಿ ಪ್ರಧಾನಿಯಾದ ನಂತರ ಅದು ಹೆಚ್ಚಾಗಿರಬಹುದು. ಅದಕ್ಕೆ ಕಾರಣಗಳೂ ಅನೇಕ ಇರಬಹುದು.
Yogi Adityanath: The Hindu hardliner in India who scripted election history. ಇದು ಶಿರೋನಾಮ. ಭಾರತೀಯ ಜನತಾ ಪಕ್ಷ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಗೆಲುವಿನ ಹೊಸ್ತಿಲಲ್ಲಿ ನಿಂತಿದೆ. ಈ ರಾಜ್ಯದಲ್ಲಿ ಕಳೆದ ಕಾಲು ಶತಮಾನದ ಅವಽಯಲ್ಲಿ ಯಾವುದೇ ರಾಜಕೀಯ ಪಕ್ಷ ಸತತ ಎರಡನೆಯ ಬಾರಿ ಗೆದ್ದು ಅಧಿಕಾರದ ಗದ್ದುಗೆ
ಏರಲಿಲ್ಲ ಎಂಬ ಮಾತು ಇಂದು ಅಂತ್ಯಗೊಂಡಿದೆ.
ಪಕ್ಷದ ಪ್ರಚಾರದ ಮುಂದಾಳತ್ವ ವಹಿಸಿಕೊಂಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಲೆ ಬೋಳಿಸಿಕೊಂಡ, ಕೇಸರಿ ವಸಧಾರಿ ಹಿಂದೂ ಸನ್ಯಾಸಿ ಯಾಗಿದ್ದು, ನಂತರ ರಾಜಕಾರಣಿಯಾಗಿ ಬದಲಾಗಿರುವ ವ್ಯಕ್ತಿ. ಈ ವಿವಾದಾತ್ಮಕ ವ್ಯಕ್ತಿಯನ್ನು ಎಷ್ಟು ಜನ ಪ್ರೀತಿಸು ತ್ತಾರೋ ಅಷ್ಟೇ ಜನ ದ್ವೇಷಿಸುತ್ತಾರೆ. ಅನುಯಾಯಿಗಳು ಅವರನ್ನು ಅವತಾರವೆತ್ತಿ ಬಂದ ದೇವರು ಎಂದರೆ, ವಿಮರ್ಶಕರು ಅವರನ್ನು ದೇಶ, ರಾಜ್ಯವನ್ನು ಒಡೆಯುವ ವಿಭಜಕ, ನಿಂದನೆಗೆ ಯೋಗ್ಯವಾದ ವ್ಯಕ್ತಿ ಎಂದು ವಿವರಿಸುತ್ತಾರೆ.
ರಾಜಕೀಯ ಪ್ರಾಮುಖ್ಯತೆಯ ಹೊರತಾಗಿಯೂ ಉತ್ತರ ಪ್ರದೇಶ, ದೇಶದ ಅತ್ಯಂತ ಬಡ ರಾಜ್ಯಗಳಲ್ಲಿ ಒಂದಾಗಿದ್ದು, ರಾಜ್ಯದ ಆರ್ಥಿಕತೆ ಕುಸಿದಿದೆ, ನಿರುದ್ಯೋಗ ಸಮಸ್ಯೆ ಹೆಚ್ಚಿದೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅಪರಾಧಗಳು ಸದಾ ಸುದ್ದಿಯಲ್ಲಿರುತ್ತವೆ. ಕಳೆದ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಜನ ಚಿಕಿತ್ಸೆ ಇಲ್ಲದೇ ಸತ್ತರು. ಆ ಸಂದರ್ಭದಲ್ಲಿ ರಾಜ್ಯದ ಎಡೆ ಹಗಲು ರಾತ್ರಿಯೆನ್ನದೆ ಚಿತೆಗಳು ಉರಿಯುತ್ತಿದ್ದವು.
ಪಕ್ಷ ಚುನಾವಣೆಯಲ್ಲಿ ಗೆದ್ದು ಬರಲು ಆರು ನೂರ ಐವತ್ತು ಕೋಟಿ ರೂಪಾಯಿಯನ್ನು ಜಾಹೀರಾತಿಗೆ, ಪ್ರಚಾರಕ್ಕೆ ಖರ್ಚುಮಾಡಿದೆ. ಪ್ರಚಾರ ಮಾಡುವಾಗ, ಸಾಧನೆಯ ವಿಷಯದಲ್ಲಿ ಅರ್ಧಕ್ಕರ್ಧ ಸುಳ್ಳು ಹೇಳಿದೆ. ಟೊಯ್ಯಾ… ಪುರ್ರಾ… ಕೊಯ್ಯಾ… ಪುಯ್ಯಾ…ಇದು ನಾನು ಹೇಳುತ್ತಿರುವುದಲ್ಲ, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಂದಾಗ ಪಾಶ್ಚಿಮಾತ್ಯ ಮಾಧ್ಯಮಗಳ ನವಾಬ ಎಂದು ಕರೆಸಿಕೊಳ್ಳುವ ಬಿಬಿಸಿ ನ್ಯೂಸ್‌ನಲ್ಲಿ ಬಂದ ವರದಿ. ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಇಂತಹ ವರದಿಗಳು ಮೊದಲೂ ಅಲ್ಲ, ಕೊನೆಯೂ ಅಲ್ಲ. ಅವರಿಗೆ, ಅವರ ಮೂಗಿನ ನೇರಕ್ಕೆ ಕಾಣುವುದು ಮಾತ್ರ ಸತ್ಯ.
ಅಲ್ಲ, ತಾವು ಬಯಸಿದ್ದು, ತಾವು ಹೇಳಿದ್ದು ಸತ್ಯ. ತಾವು ಕಂಡ ಮೊಲಕ್ಕೆ ಮೂರು ಕಾಲು ಎಂದರೆ ಉಳಿದವರು ನಂಬಬೇಕು. ತನ್ನ ರಾಜ್ಯದ ಆಗು ಹೋಗುಗಳು ಮತದಾರನಿಗೆ ಗೊತ್ತಿಲ್ಲ ವೇ? ಚುನಾವಣೆಯಲ್ಲಿ ಮತ ಹಾಕಿದ ಮತದಾರ ಮೂರ್ಖನೇ? ಮುಂದಿನ
ಐದು ವರ್ಷಕ್ಕಾಗಿ ತಾನು ಮತ ಹಾಕುತ್ತಿದ್ದೇನೆ ಎಂಬ ಪ್ರಜ್ಞೆ ಅವನಿಗಿಲ್ಲವೇ? ಇದು ಪ್ರಜಾಪ್ರಭುತ್ವ ಅಲ್ಲವಾದರೆ ಇನ್ನೇನು? ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡದ್ದನ್ನು ಅಧಿಕಾರಕ್ಕೆ ಬಂದಾಗ ಕಾರ್ಯರೂಪಕ್ಕೆ ತರುವುದರಲ್ಲಿ ತಪ್ಪೇನಿದೆ? ಪ್ರತಿಯೊಂದು ವಿಷಯದಲ್ಲೂ ಇವರು ತಮ್ಮದೇ ಸರಿ, ತಮ್ಮ ತಾಳಕ್ಕೇ ಹೆಜ್ಜೆ ಹಾಕಬೇಕು ಎನ್ನುವುದು ಎಷ್ಟು ಸರಿ? ಅಷ್ಟಕ್ಕೂ ನಮ್ಮ ದೇಶದ ವಿಷಯ ದಲ್ಲಿ ಮೂಗು ತೂರಿಸುವ ನೈತಿಕತೆ ಇವರಿಗೆ ಇದೆಯೇ? ಪಶ್ಚಿಮದ ಮಾಧ್ಯಮಗಳು ಭಾರತವನ್ನು ಹೀಗಳೆಯುವುದು ಹೊಸತೇನೂ ಅಲ್ಲ.
ಅನೇಕ ಮಾಧ್ಯಮಗಳು ಅನಾದಿ ಕಾಲದಿಂದಲೂ ಭಾರತದ ಕುರಿತು ಇಂತಹ ಕತೆಗಳನ್ನೇ ಬರೆದು, ಮಾರಿ ತಮ್ಮ ಜೋಳಿಗೆ ತುಂಬಿಸಿಕೊಳ್ಳುತ್ತಿವೆ. ಅವರೆಲ್ಲ ಇನ್ನೂ ಭಾರತ ಎಂದರೆ ಹಾವಾಡಿ ಗರ ದೇಶ, ಮಕ್ಕಳು ಕೊಳಚೆ ಪ್ರದೇಶದಲ್ಲಿಯೇ ಹುಟ್ಟಿ, ಅ ಬೆಳೆದು
ಅಲ್ಲಿಯೇ ಸಾಯುತ್ತಾರೆ ಎಂಬ ಕಥೆಯ ಬಾವಿಯಿಂದ ಹೊರಗೆ ಬರಲೂ ಇಲ್ಲ, ಆ ಪ್ರಯತ್ನವನ್ನು ಮಾಡಲೂ ಇಲ್ಲ, ಅವರಿಗೆ ಅದರ ಅವಶ್ಯಕತೆಯೂ ಇಲ್ಲ.
ಭಾರದಲ್ಲಿ ಎಷ್ಟೇ ಸುಧಾರಣೆಗಳಾಗಲಿ, ಯಾವುದೇ ಪಕ್ಷ ಅಥವಾ ವ್ಯಕ್ತಿ ಅಧಿಕಾರಕ್ಕೆ ಬರಲಿ, ಈ ಕಪ್ಪೆಗಳು ಮಾತ್ರ ತಮ್ಮ ಸ್ಥಾನ ಬಿಟ್ಟು ಹೊರಗೆ ಬಂದು ಪ್ರಪಂಚ ನೋಡುವುದಿಲ್ಲ. ಅವರು ತಮ್ಮ ಗುಟುರಿನಲ್ಲಿಯೇ ಫುಲ್ ಖುಷ್! ಪಶ್ಚಿಮದ ಮಾಧ್ಯಮಗಳು ಭಾರತವನ್ನು,
ಭಾರತದ ಪ್ರಧಾನಿಯನ್ನು ಅವಹೇಳನ ಮಾಡುತ್ತಿರುವುದು ಮೋದಿ ಪ್ರಧಾನಿಯಾದ ನಂತರ ಎಂದು ತಿಳಿದರೆ, ಅದು ದೊಡ್ಡ ತಪ್ಪು. ಮೋದಿ ಪ್ರಧಾನಿಯಾದ ನಂತರ ಅದು ಹೆಚ್ಚಾಗಿರಬಹುದು. ಅದಕ್ಕೆ ಕಾರಣಗಳೂ ಅನೇಕ ಇರಬಹುದು. ಅದಕ್ಕೆ ವೈಯಕ್ತಿಕ ದ್ವೇಷವಾಗಲೀ, ರಾಜಕೀಯ ದ್ವೇಷವಾಗಲೀ ಕಾರಣವಲ್ಲ.
ಏಕೆಂದರೆ ಇದಕ್ಕೆ ದೇಶದ ಮೊದಲ ಪ್ರಧಾನಿ ಯಾದ ಜವಾಹರಲಾಲ್ ನೆಹರು ಅವರಿಂದ ಹಿಡಿದು, ಮೋದಿಯವರವರೆಗೆ ಎಲ್ಲರೂ ಗ್ರಾಸವಾದವರೇ. ಅದರಲ್ಲೂ ನೆಹರೂ ಮತ್ತು ಅವರ ರಾಯಭಾರಿಗಳು ವ್ಯಂಗ್ಯಚಿತ್ರಕಾರರಿಗೆ ಅತ್ಯಂತ ಪ್ರಿಯವಾಗಿದ್ದರು. ರಷ್ಯಾದ ಜತೆಯಲ್ಲಿರುವ ಹಾವು ಎಂದು ಅವರನ್ನು ಬಿಂಬಿಸಲಾಗುತ್ತಿತ್ತು. ಪಾಕಿಸ್ತಾನದೊಡನೆ ಯುದ್ಧ ಮುಗಿದು, ವಿಭಜನೆಯಾಗಿ ಬಾಂಗ್ಲಾದೇಶ ಉದಯವಾದ ಸಂದರ್ಭದಲ್ಲಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಮಾಡಿದ ಮಾನವೀಯ ಕಾರ್ಯಗಳು ಕೂಡ ಕಾಣದಷ್ಟು ಇವರ ಕಣ್ಣು ಕುರುಡಾಗಿತ್ತು.
ಬದಲಾಗಿ, ಇಂದಿರಾ ಗಾಂಧಿಯನ್ನು ಟೀಕಿಸುವ ಯಾವ ಅವಕಾಶಗಳನ್ನೂ ಅಲ್ಲಿಯ ಮಾಧ್ಯಮ ಕಳೆದುಕೊಳ್ಳಲಿಲ್ಲ. ಬಹುಶಃ ಮನ ಮೋಹನ್ ಸಿಂಗ್ ಪ್ರಧಾನಿಯಾದಾಗ, ಅವರನ್ನು, ಭಾರತವನ್ನು ಈ ಮಾಧ್ಯಮಗಳು ಟೀಕಿಸಿದಷ್ಟು ಎಂದೂ ಟೀಕಿಸಲಿಲ್ಲ.
ಒಂದು ಮಾತು ನೆನಪಿರಲಿ, ಮುಂದೊಂದು ದಿನ ರಾಹುಲ್ ಗಾಂಧಿಯೋ ಅಥವಾ ಇನ್ಯಾರೋ ಪ್ರಧಾನಿಯಾದರೂ ಇವರ ಧೋರಣೆ
ಬದಲಾಗುವುದಿಲ್ಲ.
ಮಾಧ್ಯಮ ಮತ್ತು ಸಂಹವನದ, ದೇಶದ ಉನ್ನತ ಸಂಸ್ಥೆಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಮಾಸ್ ಕಮ್ಯುನಿಕೇಷನ್ ಇತ್ತೀಚೆಗೆ ಪ್ರಕಟಿಸಿದ ಒಂದು ವರದಿಯಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳ ಪಕ್ಷಪಾತವನ್ನು ಚೆನ್ನಾಗಿ ವಿವರಿಸಿದ್ದಾರೆ. ವರದಿಯ ಪ್ರಕಾರ, ಪಾಶ್ಚಿಮಾತ್ಯ ಮಾಧ್ಯಮಗಳು ಇಂದಿಗೂ ತಮ್ಮ ಪೂರ್ವಾಗ್ರಹ ಪೀಡಿತ ವರದಿಯನ್ನೇ ಇನ್ನಷ್ಟು ಸಿಂಗರಿಸಿ ಜನರ ಮುಂದೆ ಇಡುತ್ತಿವೆ. ಬಿಬಿಸಿ, ನ್ಯೂಯಾರ್ಕ್ ಟೈಮ್ಸ್, ವಾಶಿಂಗ್ಟನ್ ಪೋಸ್ಟ್, ವಾಲ್‌ಸ್ಟ್ರೀಟ್ ಜರ್ನಲ್, ದಿ ಗಾರ್ಡಿಯನ್, ಟೈಮ್ಸ್ ಮ್ಯಾಗಜೀನ್ ಮುಂತಾದ ಮಾಧ್ಯಮಗಳ ಕಳೆದ ಕೆಲವು ತಿಂಗಳಿನ ಮೂರು ಸಾವಿರಕ್ಕೂ ಹೆಚ್ಚು ವರದಿ ಮತ್ತು ವಿಶ್ಲೇಷಣೆಗಳಲ್ಲಿ, ಉತ್ಪ್ರೇಕ್ಷೆ ಮತ್ತು ಪೂರ್ವಾಗ್ರಹ ಗಳೇ ಪ್ರಮುಖವಾಗಿ ಕಾಣುತ್ತವೆ.
ಇಂತಹ ವರದಿಗಳೆಲ್ಲ ಭಾರತವನ್ನು ಅಪಹಾಸ್ಯ ಮಾಡಲು, ಹೆಚ್ಚು ಹೆಚ್ಚು ನಕಾರಾತ್ಮಕ ಮತ್ತು ವಿಭಜಿಸುವ ಪದಗಳನ್ನು ಬಳಸುತ್ತಿವೆ. ಉದಾಹರಣೆಗೆ, ಭಾರತದ ವಿಷಯಗಳು, ಮುಖ್ಯಾಂಶಗಳನ್ನು ತಿಳಿಸುವಾಗ, ಭಯ, ದ್ವೇಷ, ಗಲಭೆ, ಹಿಂಸೆ, ಪ್ರತಿಭಟನೆ, ಧರ್ಮ, ಹಿಂದು, ಮುಸ್ಲಿಂ, ಕಾಶ್ಮೀರ, ದೊಂಬಿ, ಬಲಾತ್ಕಾರ, ಸಾವು, ಹತ್ಯೆ ಇತ್ಯಾದಿ ಪದಗಳನ್ನು ಹೆಚ್ಚು ಬಳಸುತ್ತವೆ. ಜತೆಗೆ, ಸಂದರ್ಭಕ್ಕೆ ತಕ್ಕಂತೆ, ತಮ್ಮ ಅನುಕೂಲಕ್ಕೆ ಪದಗಳನ್ನು ಬಳಸಿಕೊಂಡು ವಾಕ್ಯ ರಚಿಸುತ್ತವೆ. ನ್ಯೂಯಾರ್ಕ್ ಟೈಮ್ಸ ಪತ್ರಿಕೆ ಪುಲ್ವಾಮಾ ಘಟನೆಯಲ್ಲಿ ನಲವತ್ತು ಯೋಧರ ಹತ್ಯಾಕಾಂಡವನ್ನು ವರದಿ ಮಾಡುವಾಗ, (ಜೈಶ್ -ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತು ಕೊಂಡ ನಂತರವೂ) ಸ್ಪೋಟ ಎಂದು ವರದಿ ಮಾಡುತ್ತದೆ.
ಆದರೆ, 2017 ರಲ್ಲಿ ಮ್ಯಾನ್‌ಹಟನ್‌ನಲ್ಲಿ ಟ್ರಕ್ ಡ್ರೈವರ್ ಜನರ ಮೇಲೆ ವಾಹನ ಹರಿಸಿ, ಎಂಟು ಜನ ಸತ್ತಾಗ ಅದು ’ಮಾರಣಾಂತಿಕ ಭಯೋತ್ಪಾದಕ ದಾಳಿ’ ಎಂದು ವರದಿ ಮಾಡುತ್ತದೆ. ಭಾರತದ ಕಾಶ್ಮೀರದಲ್ಲಿ ಹತ್ಯಾಕಾಂಡ ನಡೆಸುವವರನ್ನು ಆತಂಕವಾದಿಗಳು, ಭಯೋತ್ಪಾದಕರು ಎನ್ನುವ ಬದಲು ಉಗ್ರಗಾಮಿಗಳು, ತೀವ್ರಗಾಮಿಗಳು ಎಂದು ಮರು ನಾಮಕರಣ ಮಾಡಿದವರು ಇವರೇ.
ಇತ್ತೀಚಿನ ಕೋವಿಡ್ ಎರಡನೆಯ ಅಲೆಯನ್ನೇ ತೆಗೆದುಕೊಳ್ಳಿ.
ಸಾಂಕ್ರಾಮಿಕದಿಂದ ಭಾರತದಲ್ಲಿ ಸಾವುಗಳು ಸಂಭವಿಸಿದಾಗ ಇವರು ಆಸ್ಪತ್ರೆಯಿಂದ, ಸ್ಮಶಾನದಿಂದ ಮಾಡಿದ ವರದಿಗಳು, ಅಲ್ಲಲ್ಲಿ ಉರಿಯುತ್ತಿರುವ ಚಿತೆಯ ವಿಡಿಯೋ ತುಣುಕು, ಭಾವಚಿತ್ರ, ಅಬ್ಬಾ… ಕೆಲವರಿಗಂತೂ ಸ್ಮಶಾನವೇ ಕಚೇರಿ ಮನೆ ಎಲ್ಲವೂ ಆಗಿತ್ತು. ಅಲ್ಲಿಯೇ ಕ್ಯಾಮರಾ ಫಿಕ್ಸ್ ಮಾಡಿಟ್ಟುಕೊಂಡವರೆಷ್ಟು, ಲ್ಯಾಪ್‌ಟಾಪ್ ಇಟ್ಟುಕೊಂಡು ವರದಿ ಮಾಡಿದವರೆಷ್ಟು. ಅಲ್ಲಿಯೇ ಅಡುಗೆ ಮಾಡಿ ಊಟ ಒಂದು ಮಾಡಲಿಲ್ಲ.
ಇನ್ನೊಂದಿಷ್ಟು ದಿನ ಮುಂದುವರಿ ದಿದ್ದರೆ ಅದನ್ನೂ ಮಾಡುತ್ತಿದ್ದರೋ ಏನೋ? ಹೇಗಾದರೂ ಶವಸಂಸ್ಕಾರಕ್ಕೆಂದು ಹೊತ್ತಿಸಿದ್ದ ಬೆಂಕಿ ಇತ್ತಲ್ಲ! ಇರಲಿ, ವಿಷಯ ಏನೆಂದರೆ, ಅದೇ ಮಾಧ್ಯಮದವರು ಮೊದಲ ಅಲೆಯಲ್ಲಿ ತಮ್ಮ ದೇಶದಲ್ಲಿ ಅದಕ್ಕೂ ಹೆಚ್ಚು ಸಾವುಗಳಾದಾಗ ಯಾವ ಗುಹೆಯಲ್ಲಿ ಕುಳಿತು ಧ್ಯಾನಸ್ಥರಾಗಿದ್ದರು? ಅವರ ದೇಶದಲ್ಲಿ ಸತ್ತವರು ಮನುಷ್ಯರಲ್ಲವೇ ಅಥವಾ ಅದು ಸುದ್ದಿ ಅಲ್ಲವೇ? ಅಷ್ಟಕ್ಕೂ ಬಹುತೇಕ ಜಾಗತಿಕ ಮಾಧ್ಯಮ ಸಂಸ್ಥೆಗಳು ಭಾರತದ ವ್ಯವಹಾರ ನೋಡಿಕೊಳ್ಳಲು, ವರದಿ ಮಾಡಲು ನೇಮಿಸಿದ ಸಿಬ್ಬಂದಿಗಳ ಸಂಖ್ಯೆ
ಎಷ್ಟು ಎಂದರೆ ಬೆರಳೆಣಿಕೆಯಷ್ಟು.
ಭಾರತದಂತಹ, ಉಪಖಂಡದ ಆಯಾಮ ಹೊಂದಿದ ದೇಶದ ಸೂಕ್ಷ್ಮ ಅರ್ಥೈಸಿ ಕೊಳ್ಳಲು, ಅಗಾಧತೆ ಅರಿಯಲು, ವಿಶಾಲ ವ್ಯಾಪ್ತಿಯನ್ನು ಆವರಿಸಲು, ವಿಷಯವನ್ನು ಅಥವಾ ಸಮಸ್ಯೆಯನ್ನೇ ತಿಳಿಯಲು ಈ ಕೆಲವೇ ಜನರಿಂದ ಸಾಧ್ಯವೇ? ವಿದೇಶಿ ವರದಿಗಾರರಿಗೆ ಭಾರತೀಯ
ಸಮಾಜದ ಸಂಕೀರ್ಣತೆ, ಸಂಸ್ಕೃತಿ, ಭಾವನೆ, ರಾಜಕೀಯ, ಆಡಳಿತ ತಂತ್ರಗಳನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಎಂದರೆ ಸುಲಭದ ತುತ್ತಲ್ಲ. ಎಷ್ಟೋ ಜನರಿಗೆ ಹಿಂದೂಸ್ತಾನದ ವೈವಿಧ್ಯತೆ, ವ್ಯತ್ಯಾಸ, ಸಾಮ್ಯತೆ ಇತ್ಯಾದಿಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೇ ಇರುವುದಿಲ್ಲ. ಅದರಲ್ಲೂ ಅವರು ದೆಹಲಿ, ಮುಂಬೈನಂತಹ ಮಹಾನಗರದಲ್ಲಿ ನೆಲೆಸಿ, ಊರು ಸುತ್ತದೇ, ತಮ್ಮ ಮನೆಯ ಶಯನಾ ಗಾರದಿಂದಲೇ ಸುದ್ದಿ ಕಳಿಸುವವರಾದರೆ ಮುಗಿಯಿತು.
ಇನ್ನು ಎಷ್ಟೋ ಮಾಧ್ಯಮ ಗಳು ಭಾರತದ ಕುರಿತು ವಿರೋಧಾಭಾಸ ಹೊಂದಿರುವ, ಸುದ್ದಿಮನೆಯಲ್ಲಿ ಕೆಲಸ ಮಾಡಿ ನಿವೃತ್ತರಾದ, ತಮ್ಮ ಮಾತಿಗೆ ತಲೆ ದೂಗುವವ ರನ್ನು ನೇಮಿಸಿಕೊಳ್ಳುತ್ತವೆ. ಅಂಥವರಿಂದ ಏನನ್ನು ಅಪೇಕ್ಷಿಸಲು ಸಾಧ್ಯ? ಹಾಗಾದರೆ ಮಾಧ್ಯಮಗಳು ಯಾರನ್ನೂ ಟೀಕಿಸಬಾರದೇ? ಖಂಡಿತ ಟೀಕಿಸಬಹುದು. ಮ್ಮಾಧ್ಯಮಗಳ ಕೆಲಸವೇ ಅದು. ಸಮಾಜದಲ್ಲಿ ಆಗುತ್ತಿರುವ ತಪ್ಪನ್ನು ಗುರುತಿಸಿ, ಅದನ್ನು ತಿದ್ದಲು ಪ್ರಯತ್ನಿಸುವುದು. ಆದರೆ, ನಾನು ಬೇರೆಯವರನ್ನು ಟೀಕಿಸುತ್ತೇನೆ, ನನ್ನನ್ನು ಮಾತ್ರ ಯಾರೂ ಟೀಕಿಸಬಾರದು ಎಂದರೆ ಹೇಗೆ? ತನಗೆ ಮಾತ್ರ ಪತ್ರಿಕಾ ಸ್ವಾತಂತ್ರ, ಬೇರೆಯವರಿಗೆ ಇಲ್ಲವೆಂದರೆ? ತಮ್ಮ ಕೊಳಕು ವ್ಯವಹಾರ ಬಹಿರಂಗವಾಗುತ್ತದೆ ಎಂದಾದರೆ, ಯಾವುದಾದೋ ನೆಪದಲ್ಲಿ ಅಂಥವರ ಕೈ ಕಾಲು ಕಟ್ಟಿಹಾಕುವುದರಲ್ಲಿ ಇವರದ್ದು ಎತ್ತಿದ ಕೈ.
ನಿಮಗೆ ತಿಳಿದಿರಲಿ, ಬಹುತೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತದ ರೆಪಬ್ಲಿಕ್ ಟಿವಿ, ಟೈಮ್ಸ ನೌ ನಂತಹ ನ್ಯೂಸ್ ಚಾನೆಲ್‌ಗಳು ಲಭ್ಯವಿಲ್ಲ. ಭಾರತೀಯ ಮೂಲದ ನ್ಯೂಸ್ ಚಾನೆಲ್ ಬೇಕೆಂದರೆ ಸಿಗುವುದು ಅದೇ ಎನ್ ಡಿಟಿವಿ, ಮತ್ತೊಂದೆರಡು ಅಡಪೊಟ್ರು ಚಾನೆಲ್
ಗಳು. ಅದಕ್ಕಾಗಿಯೇ ಭಾರತದ ಯಾವ ನ್ಯೂಸ್ ಚಾನೆಲ್ ಕೂಡ ಅಂತಾರಾಷ್ಟ್ರೀಯ ಮಟ್ಟಕ್ಕೆ ಬಳೆದು ನಿಲ್ಲಲು ಸಾಧ್ಯವಾಗಲಿಲ್ಲ. ಇನ್ನು ಪತ್ರಿಕೆಗ ಳನ್ನಂತೂ ಬಿಡಿ, ಭಾರತೀಯ ಮೂಲದ ಒಂದಷ್ಟು ಜನ ಓದಬೇಕೆ ವಿನಃ ಅಲ್ಲಿಯವರು ಓದುವುದು ತೀರಾ ಕಮ್ಮಿ.
ಹೀಗಿರುವಾಗ ಭಾರತದ ನಿಜವಾದ ಸ್ಥಿತಿಗತಿಗಳು ಅಲ್ಲಿಯವರಿಗೆ ಹೇಗೆ ಅರ್ಥವಾಗಬೇಕು? ಅಲ್ಲಿಯವರು ಬಡಿಸಿದ್ದು ಹಳಸಿದ್ದೇ
ಆದರೂ ಅದನ್ನು ಉಣ್ಣುವುದರಲ್ಲಿಯೇ ಅವರೂ ಫುಲ್ ಖುಷ್! ಅದಿರಲಿ, ಅಲ್ಲಿಯವರೇ ಅಲ್ಲಿಯವರ ಕೊಳಕು ಬಯಲಿಗೆಳದರೂ ಅವರಿಗೆ ರುಚಿಸದ ತುತ್ತು. ವಿಕಿಲೀಕ್ಸ್ ಸಂಸ್ಥಾಪಕ, ಸಂಪಾದಕ ಜೂಲಿಯನ್ ಅಸ್ಸಾಂಜಾ, ತಿಂಗಳಿಗೆ ಒಂದರಂತೆ ಸತತ ಎಂಟು ತಿಂಗಳುಗಳ ಕಾಲ ಅಫ್ಘಾನಿಸ್ತಾನ ಯುದ್ಧ, ಇರಾಕ್ ಯುದ್ಧ, ಕೇಬಲ್ ಗೇಟ್ ಇತ್ಯಾದಿಗಳ ದಾಖಲೆಗಳನ್ನು ಬಹಿರಂಗಗೊಳಿಸಿದ್ದಕ್ಕಾಗಿ ಇಂದು ಜೈಲಿನಲ್ಲಿದ್ದಾನೆ. ಆತನ ಕಥೆ ಬರೆದರೆ ಅದೇ ಒಂದು ಲೇಖನವಾದೀತು. ಅಲ್ಲಿಯ ಮಾಧ್ಯಮದವರ ಸ್ವಾತಂತ್ರ್ಯ ಎಂದರೆ ಆನೆಯ ದಂತದಂತೆ, ತೋರಿಸಲು ಒಂದು, ತಿನ್ನಲು ಇನ್ನೊಂದು ಎನ್ನುವುದಕ್ಕೆ ಅಸ್ಸಾಂಜ್ ಉತ್ತಮ ಉದಾಹರಣೆ.