Monday, 25th November 2024

ಅಷ್ಟಕ್ಕೂ ಮರುಭೂಮೀಲಿ ಪಿರಮಿಡ್ಡು ಕಟ್ಟಿದ್ದೇಕೆ ?

ಈಜಿಪ್ಟ್‌ ಡೈರಿ- ಪ್ರವಾಸದ ಒಳ-ಹೊರಗಿನ ಕಥನ – ೨

ಟ್ರಾಫಿಕ್‌ನಲ್ಲಿ ನಮ್ಮೂರೇ ವಾಸಿ ಮಧ್ಯಮ ವರ್ಗವೇ ಜೀವಾಳ

ಯಾವುದೇ ದೇಶವನ್ನಾಗಲಿ, ನಗರವನ್ನಾಗಲಿ, ಅದರ ವಿಮಾನ ನಿಲ್ದಾಣಗಳಿಂದ ಅಳೆಯಬಾರದು, ಅಳೆಯಲೂ ಆಗದು. ಆದರೆ ಒಂದು ದೇಶ ಹೇಗಿದೆ ಎಂಬುದಕ್ಕೆ ಅದು ಒಂದು ಆರಂಭಿಕ ಭಾವನೆಯನ್ನು ಮೂಡಿಸಬಹುದು.

ವಿಮಾನ ನಿಲ್ದಾಣವನ್ನೂ ಚೆಂದವಾಗಿ ಇಟ್ಟುಕೊಳ್ಳದ ನಗರ, ಸುಂದರವಾಗಿ ರಲು ಸಾಧ್ಯವೇ ಇಲ್ಲ. ವಿಮಾನ ನಿಲ್ದಾಣವೇ ಕಿತ್ತು ಸೊರಗುತ್ತಿದ್ದರೆ, ಶೌಚಾಲ ಯಗಳು ನಾರುತ್ತಿದ್ದರೆ, ಈ ನಗರ ಹೇಗಿರಬಹುದು ಎಂಬುದನ್ನು ಅಳೆಯ ಬಹುದು. ವಿಮಾನ ನಿಲ್ದಾಣ ಗಳನ್ನು ಆಯಾ ನಗರದ ಅಸಮರ್ಪಕ ಮತ್ತು ಭ್ರಾಮಕ ಮಾಪಕ ಎಂದು ಕರೆಯುವುದುಂಟು.

ಮನೆಗೆ ಗಣ್ಯ ವ್ಯಕ್ತಿಗಳು ಬರುತ್ತಾರೆಂದು ಕೈಮೀರಿ ಸತ್ಕಾರ ಮಾಡುತ್ತಾರಲ್ಲ, ವಿಮಾನ ನಿಲ್ದಾಣವನ್ನು ನೋಡಿದಾಗಲೂ ಆ ರೀತಿ ಅನಿಸುತ್ತದೆ. ದುಬೈ ಯಿಂದ ನಾಲ್ಕು ಗಂಟೆ ವಿಮಾನ ಪ್ರಯಾಣ ಮಾಡಿ, ಕೈರೋದಲ್ಲಿ ಬಂದಿಳಿದರೆ, ಅನವಶ್ಯಕ ವೈಭವವಾಗಲಿ, ಝಗಮಗಿಸುವ ದೃಶ್ಯಗಳಾಗಲಿ ಕಾಣದೇ, ಎಲ್ಲವೂ ಸಹಜವಾಗಿರುವಂತೆ ಕಂಡಿತು. ವಿಮಾನ ನಿಲ್ದಾಣದ ಸಿಬ್ಬಂದಿ ಸಾಮರ್ಥ್ಯ, ಲಗೇಜನ್ನು ಬೇಗ ಕೈಗೆ ಸಿಗುವಂತೆ ಮಾಡುವುದರಲ್ಲಿದೆ ಎಂದು ಹೇಳುತ್ತಾರೆ. ಈ ವಿಷಯದಲ್ಲಿ ಕೈರೋ ವಿಮಾನ ನಿಲ್ದಾಣದ ವ್ಯವಸ್ಥೆ ನಿರಾಸೆ ಮಾಡಲಿಲ್ಲ.

ಕೈರೋ ವಿಮಾನ ನಿಲ್ದಾಣದ ಬಗ್ಗೆ ನನ್ನಲ್ಲಿ ನೆನಪಿರುವಂಥ ಯಾವ ಕಹಿ ಘಟನೆಯೂ ಇಲ್ಲ. ಆದರೂ ಒಂದು ಘಟನೆಯನ್ನು ಉಖಿಸಬಹುದು. ಇನ್ನೂ ಜಾಗತಿಕ ಭಯೋತ್ಪಾದನೆ ಕಂಡು ಕೇಳರಿಯದ ದಿನಗಳಲ್ಲಿ, ಅಂದರೆ ಸುಮಾರು ಐವತ್ತು ವರ್ಷಗಳ ಹಿಂದೆಯೇ, ಆಮ್ ಸ್ಟರ್‌ಡಮ್‌ನಿಂದ ನ್ಯೂಯಾರ್ಕಿಗೆ ಹಾರುತ್ತಿದ್ದ ಪ್ಯಾನ್ ಆಮ್ ವಿಮಾನವನ್ನು ಹೈಜಾಕ್ ಮಾಡಿ, ಕೈರೋ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು.

ಕೈರೋ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕರು ಇಂಧನ ತುಂಬಿಸಿಕೊಂಡು ಬೈರೂತ್ ವಿಮಾನ ನಿಲ್ದಾಣಕ್ಕೆ ಹೋಗಿ ಮತ್ತೊಬ್ಬ ಅಪಹರಣಕಾರನನ್ನು ಹತ್ತಿಸಿ ಕೊಂಡು, ಕೈರೋಗೆ ಬರಲಾಗಿತ್ತು. ಅಲ್ಲಿ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿದ ಬಳಿಕ ಬೋಯಿಂಗ್ 747-100 ವಿಮಾನವನ್ನು ಬಾಂಬ್ ಹಾಕಿ ಸಿಡಿಸ ಲಾಗಿತ್ತು. ನಂತರ ಅಪಹರಣಕಾರರನ್ನು ಸೆರೆ ಹಿಡಿದಿದ್ದು ಬೇರೆ ಕತೆ. 1965 ರಲ್ಲಿ ಪಿಐಎ ವಿಮಾನ ಕೈರೋ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೆ ತುತ್ತಾಗಿ ಬೋಯಿಂಗ್ 720- 040 ವಿಮಾನದಲ್ಲಿದ್ದ ಎಲ್ಲ 121 ಪ್ರಯಾಣಿಕರು ಅಸು ನೀಗಿದ್ದನ್ನು ಮರೆಯು ವಂತಿಲ್ಲ.

ಆದರೂ ವಿಮಾನ ನಿಲ್ದಾಣ ಇನ್ನಷ್ಟು ಆಧುನಿಕ ಸೌಲಭ್ಯಗಳನ್ನು ಅಪೇಕ್ಷಿಸುತ್ತಿರುವಂತೆ ಯಾರಿಗಾದರೂ ಅನಿಸದಿರದು. ವಿಮಾನ ನಿಲ್ದಾಣ ನಗರದ ಹೊರವಲಯದನೂ ಇಲ್ಲ. ಆದರೆ ಟ್ರಾಫಿಕ್ ಅದೆಷ್ಟು ದಟ್ಟಣೆಯಿಂದ ಕೂಡಿದೆಯೆಂದರೆ, ವಿಮಾನವೇ ನೆಲದ ಮೇಲೆ ಇನ್ನಷ್ಟು ವೇಗವಾಗಿ ಕ್ರಮಿಸುತ್ತದೆ. ಆದರೆ ಕಾರುಗಳು ಅಕ್ಷರಶಃ ತೆವಳುತ್ತವೆ. ವಿಮಾನ ನಿಲ್ದಾಣದಿಂದ ಸಿಟಿ ಸೆಂಟರ್ ತಲುಪಲು ಏನಿಲ್ಲವೆಂದರೂ ಒಂದೂವರೆ ಗಂಟೆ ಬೇಕು. ಅದರಲ್ಲೂ ಪೀಕ್ ಅವರ್‌ನಲ್ಲಿ ಇರುವೆಯಾದರೂ ಹೋಗಬೇಕಾದ ತಾಣ ತಲುಪಬಹುದು, ಆದರೆ ವಾಹನವನ್ನು ಕೇಳಲೇಬೇಡಿ.

ಆ ರೀತಿಯ ಟ್ರಾಫಿಕ್ ದಟ್ಟಣೆ. ನಮ್ಮೂರೇ ಎಷ್ಟೋ ವಾಸಿ ಎಂದು ಹೆಜ್ಜೆ ಹೆಜ್ಜೆಗೂ ಅನಿಸಿದ್ದುಂಟು. ಕೈರೋ ಟ್ರಾಫಿಕ್ ನೋಡಿದರೆ, ಮೊದಲ ಬಾರಿಗೆ ಎಂಥವರಿಗಾದರೂ ದಿಗಿಲು ಮೂಡುವದು ಸಹಜ. ಟ್ರಾಫಿಕ್ ದಟ್ಟಣೆಯಷ್ಟೇ ಹಾರನ್ ಗಳ ಭರಾಟೆ ಇನ್ನೂ ಜೋರು. ವಾಹನ ಚಾಲಕರು ಬ್ರೇಕ್ ಮತ್ತು ಹಾರನ್ ಪೈಕಿ ಯಾವುದನ್ನು ಹೆಚ್ಚು ಅಮುಕುತ್ತಾರೋ ಗೊತ್ತಾಗುವುದಿಲ್ಲ. ಯಾವ ವಾಹನದ ಹಿಂಭಾಗವೂ ಜಜ್ಜಿಸಿಕೊಳ್ಳದೇ, ಉಜ್ಜಿಸಿಕೊಳ್ಳದೇ, ನೆಕ್ಕಿಸಿಕೊಳ್ಳದೇ ಉಳಿದಿಲ್ಲ.

ಎಲ್ಲ ವಾಹನಗಳಿಗೂ ತರಚಿದ ಗಾಯ. ಬ್ರೇಕ್ ಒತ್ತಲು ಕಾಲು ಮತ್ತು ಹಾರನ್ ಒತ್ತಲು ಕೈ ಗಟ್ಟಿಯಾಗಿದ್ದವನು ಮಾತ್ರ ಡ್ರೈವ್ ಮಾಡಬಲ್ಲ! ಟ್ರಾಫಿಕ್ ನಿಯಮಗಳನ್ನು ಪಾಲಿಸಿದವರಾರೂ, ಹೋಗಬೇಕಾದ ತಾಣ ತಲುಪುವುದಿಲ್ಲ ಎಂಬುದು ಅಲ್ಲಿನ ಭಯಾ ನಕ ಟ್ರಾಫಿಕ್ ವ್ಯವಸ್ಥೆ ನೋಡಿ ಮನದಟ್ಟಾಯಿತು.

ಇಂಗ್ಲಿಷಿನಲ್ಲಿ ಒಂದು ತಮಾಷೆಯ ಉಕ್ತಿಯಿದೆ – Procrastination is the art of keeping up with yesterday. ಈ ಮಾತು ಎಷ್ಟು ನಿಜ ಎಂಬುದು ಕೈರೋ ಬೀದಿಗಳಲ್ಲಿ ಸಂಚರಿಸುವಾಗ ಅನುಭವಕ್ಕೆ ಬರದೇ ಹೋಗುವು ದಿಲ್ಲ. ಇಷ್ಟು ಹೇಳಿದರೆ ಕೈರೋ ಟ್ರಾಫಿಕ್ ಬಗ್ಗೆ ಏನೂ ಹೇಳಿದಂತಾಗಲಿಲ್ಲ. ನಗರ ದರ್ಶಕ ಮಾನದಂಡದಂತೆ, ಯಾವ ನಗರದಲ್ಲಿ ಸಣ್ಣ ಕಾರುಗಳಿವೆಯೋ, ಯಾವ ನಗರದಲ್ಲಿ ಒಂದು-ಎರಡು ಬೆಡ್ ರೂಮ್‌ಗಳಿರುವ ಮನೆಗಳಿವೆಯೋ, ಆ ನಗರದಲ್ಲಿ ಮಧ್ಯಮ ವರ್ಗದವರು ಕ್ರಿಯಾಶೀಲ ರಾಗಿದ್ದಾರೆ ಎಂದರ್ಥ. ಇದನ್ನು ಯಾರು ಬೇಕಾದರೂ ಹೇಳಬಹುದು. ಅರ್ಥಶಾಸ್ತ್ರಜ್ಞರೇ ಹೇಳಬೇಕೆಂದೇನೂ ಇಲ್ಲ.

ಆ ನಿಟ್ಟಿನಲ್ಲಿ ಕೈರೋ ನಿಜಕ್ಕೂ ಮಾಧ್ಯಮ ವರ್ಗದವರೇ ಜೀವಂತಿಕೆಯಿಂದ ಇಟ್ಟಿರುವ ನಗರ. ಈ ನಗರದ ಆರ್ಥಿಕತೆ ನಿಂತಿರು ವುದೇ ಮಾಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರ ಮೇಲೆ. ಹೀಗಾಗಿ ಇಡೀ ನಗರದಲ್ಲಿ ಓಡಾಡುವಾಗ, ಮಧ್ಯಮ ವರ್ಗದ ಸಾಮರ್ಥ್ಯ, ತಾಕತ್ತು, ಅದು ದೇಶದ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆ ಏನು ಎಂಬುದು ಗೊತ್ತಾಗುತ್ತದೆ. ಒಂದು ನಗರ ಬಹಳ ವರ್ಷಗಳ ಕಾಲ ಜೀವಂತಿಕೆ ಇಟ್ಟುಕೊಳ್ಳಲು ಈ ವರ್ಗದ ಬೃಹತ್ ಸಮೂಹವೇ ಸಾಕ್ಷಿ.

ಕೈರೋದ ಮೇಲೆ ವಿಮಾನ ಹಾರುವಾಗ, ಪುಟ್ಟ ಪುಟ್ಟ ಬೆಂಕಿ ಪೊಟ್ಟಣದಂತೆ ಕಾಣುವ ಮನೆಗಳು ಕಣ್ಣೆವೆ ಹಾಯುವ ತನಕವೂ ಕಾಣುವುದು, ಆ ನಗರ ಜೀವನದ ನಕ್ಷೆಯನ್ನು ಬದಲಿಸುತ್ತಿರುವುದರ ದ್ಯೋತಕ. ಈ ಮಾತನ್ನು ನಮ್ಮ ಗೈಡ್ ಮನ್ಸೂರ್ ಕೂಡ ಹಲವು ಬಾರಿ ಪ್ರಸ್ತಾಪಿಸಿದ. ಆಫ್ರಿಕಾಖಂಡದಲ್ಲಿ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಈಜಿಪ್ಟ್, ದುರಾಡಳಿತ, ಭ್ರಷ್ಟ ವ್ಯವಸ್ಥೆಯಿಂದ ನಲುಗಿತೇ ಹೊರತು, ಅದರ ಅಂತಃಸತ್ವದಿಂದಲ್ಲ.

ಅಷ್ಟಕ್ಕೂ ಕೈರೋ ಅಂತಃಸತ್ವವಿರುವುದು ಅದರ ಶ್ರೀಮಂತ ಇತಿಹಾಸ ಮತ್ತು ಪರಂಪರೆಯಲ್ಲಿ. ಅದೇ ಇಂದಿಗೂ ಭದ್ರ ಬುನಾದಿಯಾಗಿ ನಿಂತಿದೆ. ಆರು ಸಾವಿರ ವರ್ಷಗಳ ಅಪೂರ್ವ ನಾಗರಿಕತೆ ಹೊಂದಿರುವ ಈ ದೇಶವನ್ನು ರೋಮನ್ನರು, ರಷಿದುನ್, ಅಬ್ಬಾಸಿದ್ ಖಲೀಫರು, ಈಕ್ಷಿದಿದ್ ರಾಜರು, ಅಯ್ಯುಬಿದರು, ಒಟ್ಟೋಮನ್‌ರು, ಫ್ರೆಂಚರು, ಬ್ರಿಟಿಷರ ಆಳಿದರು. ಹೀಗಾಗಿ ಕೈರೋದಲ್ಲಿ ಓಡಾಡುವಾಗ, ಬೇರೆ ಬೇರೆ ಆಡಳಿತದ ಕಾಲದಲ್ಲಿದ್ದ ವಸ್ತು ರಚನೆಗಳು, ಕಟ್ಟಡಗಳು ಕಾಣಸಿಗುತ್ತವೆ.

ಕೈರೋದಲ್ಲಿ ಕಣ್ಣಿಗೆ ಕಾಣುವುದಕ್ಕಿಂತ, ಪಾಳು ಅವಶೇಷಗಳೇ ಹೆಚ್ಚು ಶ್ರೀಮಂತವಾಗಿವೆ. ಉಳಿದುದೆಲ್ಲವುಗಳಿಗೆ ಬೆಲೆ ಕಟ್ಟ ಬಹುದು. ಆದರೆ ಈ ಪಾಳು ಅವಶೇಷಗಳು, ಇತಿಹಾಸದ ತುಣುಕಗಳು priceless, ಅಂದರೆ ಅಷ್ಟೊಂದು ಅಮೂಲ್ಯ ಮತ್ತು ಬೆಲೆ ಕಟ್ಟಲು ಆಗದಂಥವು. ಇಷ್ಟೆಲ್ಲ ಅರಸರ, ಆಡಳಿತಗಾರರ, ಸಾಮ್ರಾಜ್ಯಶಾಹಿಗಳ ಆಡಳಿತಕ್ಕೆ ಸಿಲುಕಿದರೂ ಕೈರೋ ಇಂದಿಗೂ ಮೂಲ ಸೆಲೆ ಮತ್ತು ಅಂತಃ ಸತ್ವವನ್ನುಉಳಿಸಿಕೊಂಡಿದೆ. ಕೈರೋ ಅಂದರೆ ಅರೇಬಿಕ್ ಭಾಷೆಯಲ್ಲಿ (ಅಲ್ -ಕ್‌ಅಹಿರಹ್) ‘ವಿಜಯಿ ನಗರ’ ಎಂಬುದು ಅನ್ವರ್ಥ.

ನಾನು ಕೈರೊದಲ್ಲಿದ್ದಾಗ ಸ್ನೇಹಿತರೊಬ್ಬರು ಫೋನ್ ಮಾಡಿ, ‘ಕೈರೋ ಹೇಗಿದೆ? ಸುಂದರ ನಗರವಾ?’ ಎಂದು ಕೇಳಿದರು. ಇಂಥ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಕಾರಣ, ಸುಂದರ ಎಂಬುದು ವ್ಯಕ್ತಿ ನಿಷ್ಠವಾದುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಸ್ವಚ್ಛ ರಸ್ತೆ, – ಓವರ್, ಶಾಪಿಂಗ್ ಮಾಲ, ಉದ್ಯಾನಗಳೇ ಒಂದು ನಗರದ ಸೌಂದರ್ಯ ಮಾಪಕಗಳಲ್ಲ. ನನ್ನ ದೃಷ್ಟಿಯಲ್ಲಿ  ಐತಿಹಾಸಿಕ ವಾಗಿ ಮತ್ತು ಪಾರಂಪರಿಕವಾಗಿ ಕೈರೋ ನಿಜಕ್ಕೂ ಅತ್ಯಂತ ಸುಂದರ ನಗರ.

ನೂರಾರು ಪಿರಮಿಡ್ಡುಗಳನ್ನು ಇಟ್ಟುಕೊಂಡು ಇಡೀ ಜಗತ್ತನ್ನು ತನ್ನತ್ತ ಕೈಬೀಸಿ ಕರೆಯುತ್ತಲೇ ಇದೆ. ಪಿರಮಿಡ್ಡುಗಳು ಶಾಶ್ವತ ವಾಗಿ, ಗಟ್ಟಿಮುಟ್ಟಾಗಿ ಇರುವಷ್ಟು ಕಾಲ, ಕೈರೋದತ್ತ ಜನ ಬರುತ್ತಲೇ ಇರುತ್ತಾರೆ. ಈ ನಗರದ ಮೇಲಿನ ಸೋಜಿಗ ಕ್ಷೀಣಿಸುವು ದಿಲ್ಲ. ಐದು ಸಾವಿರ ವರ್ಷಗಳ ನಂತರವೂ ಪಿರಮಿಡ್ಡುಗಳ ರಚನೆ, ಒಳನೋಟ, ರಚನಾ ವಿಧಾನ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಕಾಲಕಾಲಕ್ಕೆ ವಿಷಯ ಪರಿಣತರು, ಇತಿಹಾಸಕಾರರು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಿದ್ದಾರೆ. ಆದರೆ ಯಾರೂ ಸತ್ಯದರ್ಶನ ಮಾಡಿಸಿಲ್ಲ. ಹೀಗಾಗಿ ಪಿರಮಿಡ್ಡುಗಳು ಮನುಷ್ಯನ ಅನ್ವೇಷಣೆಯ ಅನಂತ ತರ್ಕಕ್ಕೆ , ಅಗಣಿತ ವಾದಗಳಿಗೆ ಇಂಬು ನೀಡುತ್ತಲೇ ಬಂದಿವೆ.

ಎಲ್ಲ ಕತೆಗಳನ್ನು ಕೇಳಿದ ಮೇಲೂ, ಅಷ್ಟಕ್ಕೂ ಈ ಮರುಭೂಮಿಯಲ್ಲಿ ಪಿರಮಿಡ್ಡುಗಳನ್ನು ಕಟ್ಟಿದ್ದೇಕೆ ಎಂಬ ಮೂಲ ಪ್ರಶ್ನೆಯ ಮುಂದೆಯೇ ಬಂದು ನಿಲ್ಲುತ್ತೇವೆ.