ತನ್ನಿಮಿತ್ತ
ಸತ್ಯಕಾಮ ಶರ್ಮಾ ಕಾಸರಗೋಡು
‘ಹಳದಿ’ ಪತ್ರಿಕೆಯಿಂದ ಹೆಸರು ಮಾಡಿ ಆ ಹೆಸರಿಗೆ ಒಂದಿಷ್ಟು ಕೆಸರು ಮೆತ್ತಿಸಿಕೊಂಡ, ಅಕ್ಷರ ತಪಸ್ವಿ ರವಿ ಬೆಳಗೆರೆ ಅವರನ್ನು, ‘ನೀಲಿ’ ಚಿತ್ರಗಳ ಮೂಲಕ (ಕು)ಪ್ರಸಿದ್ಧಳಾದ ಸನ್ನಿ ಲಿಯೋನ್ ಅಂಥವಳಿಗೆ ಅಗ್ನಿಶ್ರೀಧರ್ ಹೋಲಿಸಿದ್ದು-ನೂರಕ್ಕೆ ನೂರು ಸರಿ. ಅಥವಾ ಅಲ್ಲ!
ಏಕೆಂದರೆ ನನಗೆ ಎಷ್ಟೋ ಬಾರಿ ಅನಿಸಿದ್ದಿದೆ-‘ಈ ಸನ್ನಿ ಲಿಯೋನ್ ಲಕ್ಷಣವಾಗಿ ಸೀರೆ ಉಟ್ಟು ಪೋಸ್ ಕೊಟ್ಟರೆ, ಆಕೆ ನೋಡಲು (ಮುಖವನ್ನು ಎಂದು ತಿದ್ದಿಕೊಂಡು ಓದುವುದು) ಎಷ್ಟು ಸುಂದರಿಯಾಗಿ ಕಾಣಿಸಬಹುದು’ ಎಂದು! ಹಲವರ ಪಾಲಿಗೆ, ಕಡು ದಿಗಂತದಲ್ಲಿ ಒಂದು ಬೆಳಕಿನ ಗೆರೆ ಆಗಿದ್ದ ರವಿಗೂ ಈ ಮಾತನ್ನು ಅನ್ವಯಿಸಬಹುದು. ಈ ಅದಮ್ಯ, ಅನನ್ಯ ಮೇರು ಪ್ರತಿಭೆ ಒಂದಿಷ್ಟು ಸಂಯಮ, ಸಾವಧಾನ ಮತ್ತು ನಿಯಂತ್ರಣಗಳನ್ನು ಮೈಗೂಡಿಸಿಕೊಂಡಿದ್ದರೆ, ವ್ಯಸನಗಳ ದಾಸನಾಗದೆ ಇದ್ದಿದ್ದರೆ, ಕನ್ನಡಕ್ಕೆ ಅದೆಂಥಾ ಸಾಹಿತಿ ದೊರಕುತ್ತಿದ್ದರು! ಆಸಿಡ್ ದಾಳಿಗೆ ತುತ್ತಾದ ಹಸೀನಾಳಂತ ದುರ್ದೈವಿಗಳ ಪಾಲಿಗೆ ಆತ ದೀನ ಬಂಧು.
ಕಾರ್ಗಿಲ್ ಹುತಾತ್ಮರ ಅವಲಂಬಿಗಳಿಗೆ ದೇಣಿಗೆ ಸಂಗ್ರಹಿಸಿದ ಹೃದಯವಂತ. ಹೇಳದೇ ಕೇಳದೆ ಬಂದ ಸಾವಿಗೆ ಶರಣಾದ ಯುವ ಗೆಳೆಯ, ಕರ್ಮಠ ಪತ್ರಕರ್ತ ಸೀತಾನದಿ ಸುರೇಂದ್ರರ ಹೆಸರಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೂಡ ಸ್ಥಾಪಿಸಿದ ಹಗ್ಗಳಿಕೆಯವ. ಆದಾಗ್ಯೂ, ಇವೆಲ್ಲವನ್ನು ಮಾಡದೆಯೂ ಅವರ ನೆಚ್ಚಿನ ಮುಖೇಶ್‌ನ ಹಾಡುಗಳಲ್ಲಿ ಕರಗಿ ಹೋಗುತ್ತ ಎಂದೋ ಕೈಕೊಟ್ಟ ಆ ಅವಳನ್ನು ಇಂದಿಗೂ ನೆನೆಯುತ್ತ ಹಾಯಾಗಿರಬಹುದಿತ್ತು ‘ರಬೆ’; ಆದರೆ ಹಾಗೆ ಮಾಡಲಿಲ್ಲ.
ಅವರಿಗೆ ಪಾದಗಳೇ ಇಲ್ಲ-ಆ ಜಾಗದಲ್ಲಿ ಇರುವುದೆರಡು ಚಕ್ರಗಳು ಅನ್ನುವ ಹಾಗೆ, ದೇಶ ಭಾಷೆಗಳ ಎಲ್ಲೆ ಮೀರಿ ಸುತ್ತಿದರು. ಅಫಘಾನಿಸ್ಥಾನ, ಪಾಕಿಸ್ಥಾನ, ಆಫ್ರಿಕಾ ಎಲ್ಲೆಡೆಯಿಂದ ತಂದ ಅನುಭವದ ಮೂಟೆಯನ್ನು ‘ಹಾಯ್ ಬೆಂಗಳೂರು’ ನ ಪುಟಗಳಲ್ಲಿ ಸುರುವಿದರು. ಅಮ್ಮನ ಬಗೆಗೆ ಬರೆದದ್ದೇ ಬರೆದದ್ದು. ಬರೆದುದನ್ನೇ ಬರೆದದ್ದು. ಆದ ರೇನು? ಪ್ರತಿ ಬಾರಿಯೂ ಎಷ್ಟೊಂದು ವೈವಿಧ್ಯಮಯವಾಗಿ ಬರೆದರು, ಮಾತ್ರವಲ್ಲ ಎಷ್ಟೊಂದು ಆಪ್ತವಾಗಿ ಬರೆದರು.
ಕರುನಾಡಿನ ಹೆಂಗಳೆಯರ ಎದೆಗೆ ಅವರು ಲಗ್ಗೆ ಹಾಕಿದ್ದು ಹೀಗೆ. ಮಾತ್ರವಲ್ಲ, ಅಮ್ಮನಲ್ಲಿ ದೇವರನ್ನು ಕಾಣುವ ಎಷ್ಟೋ ಗಂಡಸರಿಗೆ ರವಿ ಬೆಳಗೆರೆ ಪರಿವಾರದ ಸದಸ್ಯ, ಕರುಳು ಹಂಚಿಕೊಂಡವರಷ್ಟು ಆಪ್ತ. ಆದರೆ ಅಪ್ಪ? ಹಾಗೆಂದರೆ ಮೌನಿಯಾಗಿ ಬಿಡುತ್ತಿದ್ದ ರವಿಯ ಇನ್ನೊಂದು ಮುಖದ ಬಗ್ಗೆ ಬರೆಯದಿರುವುದೇ ಲೇಸು. ‘ಪ್ರಾಣ ವಾಯು ಹೊಕ್ಕು ಹೊರಬರದ ಜೀವ ಇಲ್ಲ’ ಅನ್ನುವ ಹಾಗೆ ರವಿ ಬರೆಯದ ವಿಷಯಗಳಿಲ್ಲ-ಕ್ರಿಕೆಟ್, ವಿಜ್ಞಾನ ಹೊರತು ಪಡಿಸಿ. (‘ಹಾಯ್’ ಪ್ರಾರಂಭವಾದ ಹೊಸತರಲ್ಲಿ ಕ್ರೀಡೆಗೆ ಒಂದು ಪುಟ ಮೀಸಲಾಗಿಟ್ಟ ನೆನಪು) ಮೊತ್ತಮೊದಲ ಬಾರಿಗೆ ಕನ್ನಡದ ಪತ್ರಕರ್ತನೊಬ್ಬ ತನ್ನ ಮುಕೇಶ್ ಹಾಡುಗಳ ಹುಚ್ಚಿನ ಕುರಿತು ಬರೆದಾಗ ಎಷ್ಟೋ ಮಂದಿ ಓದುಗರಿಗೆ ‘ಅರೇ, ಇವರು ಕೂಡ ನಮ್ಮ ಹಾಗೆ ಮನುಷ್ಯರು’ ಅನಿಸಿದ್ದು ನಿಜ.
‘ಹಿಮಾಲಯನ್ ಬ್ಲಂಡರ್’ ಅನ್ನು ಕನ್ನಡಕ್ಕೆ ತಂದು, ಖುಷ್ ವಂತ್ ಸಿಂಗ್ ಎಂಬ ದಿಗ್ಗಜನ ಜತೆಗಿನ ತಮ್ಮ ಸಲುಗೆಯನ್ನು ರಸವತ್ತಾಗಿ ಬಣ್ಣಿಸಿ ನಮ್ಮಂಥವರಲ್ಲಿ ಅಸೂಯೆ ಹುಟ್ಟಿಸಿದರು. ಪ್ರತೀ ವಾರ ನಮ್ಮ ಕೈಗೆ ’ಜೋಗಿ’ (ಜಾನಕಿ), ಜಯಂತ ಕಾಯ್ಕಿಣಿ, ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಆಲೂರು ಚಂದ್ರಶೇಖರರ ಅಂಕಣಗಳನ್ನು ಇಡುತ್ತಿದ್ದ ರವಿ, ಅಂಗಡಿಗಳಿಂದ ’ಹಾಯ್ ಬೆಂಗಳೂರ್’ ಕೊಳ್ಳುವಾಗ ನನ್ನಂಥವರು ನಾಚಿಕೆ ಪಡದಂತೆ ಮಾಡಿದರು.
ಯಂಡಮೂರಿ ವೀರೇಂದ್ರನಾಥರು ಹಾಕಿ ಕೊಟ್ಟ ‘ಸನ್ಮಾರ್ಗ’ ದಲ್ಲಿ ಬಹುದೂರ ಸಾಗಿದ್ದ ನನ್ನಂಥವರು, ‘ತನ್ನ ಎಡವಟ್ಟುಗಳ ಕುರಿತು, ಕೈಕೊಟ್ಟವಳ ಕುರಿತು, ಕ್ರೈಂ ಕುರಿತು, ಹಾಡು, ಸಿಗರೇಟ್, ಮಾತೃಪ್ರೇಮದ ಕುರಿತು ಬರೆದು ಆಗಿಬಿಟ್ಟನಲ್ಲ ಜನಪ್ರಿಯ? ಕೂಡಿಹಾಕಿದನಲ್ಲ ಸಂಪತ್ತು? ಎಲಾ ಇವನ!’ಎಂನ್ನುವಂತೆ ಮಾಡಿದರು. ಇನ್ನೇನು ಸಂಜೆಗೆ ಕೆಲವೇ ತಾಸು ಬಾಕಿ ಅನ್ನುವಷ್ಟ ರಲ್ಲಿ ತನ್ನ ಸಿಟ್ಟು, ಸೆಡವು, ಕೋಪ, ತಾಪ ಎಲ್ಲ ಕಡಿಮೆ ಮಾಡಿಕೊಂಡು ಕೆಳಗಿಳಿಯ ತೊಡಗುವ ಆ ಜಗದ್‌ಚಕ್ಷುಃ ಸೂರ್ಯನ ಹಾಗೆ ಕೊನೆ ಕೊನೆಗೆ ಸದ್ದಿಲ್ಲದ ಸರದಾರನಾಗಿ ಬಿಟ್ಟ ರವಿಯ ದುರವಸ್ಥೆಯ ಹಿನ್ನೆಲೆಯಲ್ಲಿ, ಇದು ಕ್ರೂರ ವ್ಯಂಗ್ಯ ಅನಿಸಬಹುದು-ಆದರೆ ‘ಎಡವಟ್ಟು’ ಎಂಬ ಪದ ಕಣ್ಣಿಗೆ ಬಿದ್ದಾಗಲೆಲ್ಲ ಅವರ ನೆನಪಾಗುವಷ್ಟು ಅವರು ಅದನ್ನು ಬಳಸಿದರು. ಅದರಂತೆಯೇ ಬಾಳಿದರು ಕೂಡ.
ಖದರು, ಮಟಾಷ್, ಖಾಸ್ ಬಾತ್..ಇತ್ಯಾದಿ ಅವರು ಕನ್ನಡಕ್ಕೆ ತಂದ ಉರ್ದು, ತೆಲುಗು, ಹಿಂದಿ ಶಬ್ದ ಭಂಡಾರ ಹೇಗಿದೆಯೆಂದರೆ,
ಅವುಗಳ ಮೂಲ ಯಾವುದು ಎಂದು ತಿಳಿಯಲಾರದಷ್ಟು ಅವುಗಳು ಇಂದು ಕನ್ನಡದೊಳಗೆ ಹಾಸು ಹೊಕ್ಕಾಗಿವೆ. ಬಳ್ಳಾರಿಯ
ತೆಲುಗಿನ ಸೊಗಡನ್ನೂ ಕನ್ನಡದತ್ತ ಹರಿಸಿದರು ‘ರವಿಗಾರು’. ಆದರೂ ಎಲ್ಲೋ ಒಂದು ಕಡೆ ವಿವೇಕಿಗಳಿಗೆ, ಪ್ರಜ್ಞಾವಂತರಿಗೆ,
ಚಿಂತಕರಿಗೆ ಅವರ ಈ ನಾಗಾಲೋಟ, ಅದಮ್ಯ ಉತ್ಸಾಹದ ಹಿಂದೆ ಒಂದು ಚಡಪಡಿಸುವ ಅತೃಪ್ತ ವ್ಯಕ್ತಿತ್ವದ ವಾಸನೆ ಹೊಡೆ ದಂತಾಗುತ್ತಿತ್ತು.
ಅವರ ‘ಲಿಬಿಡೋ’ ಅನ್ನುವುದು ಅವರನ್ನು ಕಾಡುತ್ತ ಬಂತೆ? ಈಯಪ್ಪ ಮಾಡದ ಚಾಕರಿ ಇಲ್ಲ, ಹೂಡದ ದಂಧೆ ಇಲ್ಲ! (ಕಂಡರಾಗದವರು ಹೇಳುವಂತೆ ‘ಮಾಡದ ಅನಾಚಾರವಿಲ್ಲ’) ಗೇಟ್ ಕೀಪರ್ ಆಗಿದ್ದವರು, ಸಿನಿಮಾದಲ್ಲೂ ಮಿಂಚಿದರು. ಮೆಡಿಕಲ್ ರೆಪ್ ಅವತಾರ ಎತ್ತಿದವರು, ಮುಂದೆ ‘ಓ ಮನಸೇ…’ ಯಲ್ಲಿ ನೊಂದ, ಜರ್ಝರಿತ ಮನಗಳಿಗೆ ಅಕ್ಷರಗಳಲ್ಲೇ ಸಮಾ ಧಾನದ ಮುಲಾಮು ಹಚ್ಚಿದರು! ಗ್ರೇವ್ ಡಿಗ್ಗಿಂಗ್ (ಸಮಾಧಿ ಅಗೆದು ಶವದ ಮೇಲಿನ ಆಭರಣಗಳನ್ನು ಲಪಟಾಯಿಸುವ ಹೀನ ಕೃತ್ಯ) ಮಾಡಿದವರು ಹಲವು ಜೀವಗಳಿಗೆ ಆಸರೆಯಾದರು. ಉದ್ಯೋಗ ಅರಸಿ ಪತ್ರಿಕೆಗಳಿಗೆ ಎಡತಾಕಿದವರು, ಪತ್ರಿಕೆ, ಪುಸ್ತಕ ಪ್ರಕಾಶನ ಹುಟ್ಟು ಹಾಕಿ ನೂರಾರು ಮಂದಿಗೆ ಉದ್ಯೋಗ ಒದಗಿಸಿದರು.
ಕ್ಲೀಷೆ ಅನಿಸಿದರೂ ಹೀಗನ್ನಲೇ ಬೇಕು-ಪ್ರಾರ್ಥನಾ ಶಾಲೆ ಅವರ ಬಾಳಲ್ಲಿ ಒಂದು ಭಾರೀ ಮೈಲುಗಲ್ಲು, ಒಂದು ದೊಡ್ಡ ತಿರುವು! ಅವರ ಟೀಕಾಕಾರನ್ನು ಹಣಿಯಲು ಅವರ ಭಕ್ತರ ಕೈಗೆ ಸಿಕ್ಕ ಖಂಡಾಂತರ ಕ್ಷಿಪಣಿ! ಬರೆಯುತ್ತಿರಬೇಕಾದರೆ ಅವರು ಎನ್ನಲೋ ಅವನು ಎನ್ನಲೋ ಎಂಬ ಸಂದಿಗ್ಧತೆ ಕಾಡಿದ್ದು ಅವರ/ನ ಎಡಬಿಡಂಗಿತನಕ್ಕೆ ಹಿಡಿವ ಕನ್ನಡಿ. ಒಂದು ಬ್ಯಾಲೆನ್ಸ್ ಶೀಟ್ ಮಾದರಿ ಯಲ್ಲಿ ಒಂದು ಬದಿಯಲ್ಲಿ ಎಡವಟ್ಟು, ಕಿತಾಪತಿ, ಲಂಪಟತನ, ಬಾಯಿಬಡುಕತನ, ಅಪಸವ್ಯಗಳನ್ನು ಹಾಗು ಇನ್ನೊಂದು ಬದಿಯಲ್ಲಿ ಬಹುಮುಖ ಪ್ರತಿಭೆ, ಸತ್ಕಾರ್ಯ, ಹಾಡುಗಳ ಹುಚ್ಚು, ನಿರೂಪಣಾ ಶೈಲಿ, ಬರವಣಿಗೆಯ ‘ಖದರು’, ಎದೆಗಾರಿಕೆ, ದಿಟ್ಟತನ ಇವುಗಳನ್ನು ಪಟ್ಟಿ ಮಾಡಿದರೆ ಯಾವ ಬದಿ ಜಗ್ಗುತ್ತದೋ -‘ಹೂ ನೋಸ್’? ಬಟ್, ಲಂಕೇಶರ ಅನಂತರ ಯಾವ ಪತ್ರಕರ್ತನೂ ಈ ಪರಿಯಲ್ಲಿ ಐಕಾನಿಕ್ ಸ್ಟೇಟಸ್‌ಗೆ ಏರಿದ್ದು ಇಲ್ಲ.
ಇನ್ನು ಮುಂದಾದರೂ ಯಾರಾದರೂ ಏರುವುದು ಅಸಾಧ್ಯ! ಪತ್ರಿಕೆ, ಪುಸ್ತಕ ಓದದವರ ಬಾಯಲ್ಲೂ ನಲಿದಾದಾಡಿತ್ತು ಈ ಅಪರೂಪದ ಸಾಹಿತಿ, ಸಾಹಸಿ ಪತ್ರಕರ್ತ! ಓದುವ ಆಭ್ಯಾಸಲ್ಲದವರಿಗೆ ಟಿವಿಯಲ್ಲಿ, ಸಿನಿಮಾ, ಸಿಡಿಗಳ ಮೂಲಕ ಆಪ್ತವಾದರು.
ಯಾವುದೇ ಸಾವಿನ ನಂತರ ಸತ್ತ ವ್ಯಕ್ತಿಯ ಕುರಿತು ಒಂದಿಷ್ಟು ಮೌಲ್ಯಮಾಪನ, ಮಂಥನ ನಡೆದೇ ನಡೆಯುತ್ತದೆ. ಮತ್ತದು
ಪ್ರಜ್ಞಾಪೂರ್ವಕವಾಗಿರುವುದಿಲ್ಲ. ಹೀಗಿರುವಾಗ ಬದುಕಿದ್ದಾಗಲೇ ದಂತ ಕಥೆಯಾದವರನ್ನು ಮನಸ್ಸು ಬಾಕಿ ಮಾಡುತ್ತದೆಯೇ?
ಕುವೆಂಪು, ಕಾರಂತ, ಡಿವಿಜಿ, ಮಾಸ್ತಿ, ಬೇಂದ್ರೆ… ಕನ್ನಡದಲ್ಲೇ ಬರೆದ ವಿಶ್ವದರ್ಜೆಯ ಈ ಸಾಹಿತಿಗಳು, ಚಿಂತಕರು, ಕವಿಗಳು
ನಮಗೆ ಬಿಟ್ಟು ಹೋಗಿರುವ ಮೌಲ್ಯಗಳಿಗೆ ಬೆಲೆ ಕಟ್ಟಲಾಗದು.
ಹೀಗೆ ನೋಡಿದಾಗ, ಒಂದು ಸಮಷ್ಟಿಗೆ ರವಿ ಬಳುವಳಿ ಏನು? ಹೀಗೆ ಕೇಳಿಕೊಂಡಾಗ ಮೊದಲು ಹೊಳೆಯುವ ಉತ್ತರ-ಕ್ರೈಂ
ಅನ್ನು ವೈಭವೀಕರಿಸಿದ್ದು! ಕೃತಿಗಳಲ್ಲಿ ವಿಜೃಂಭಿಸಿದ್ದು! ಇವನ್ನೆಲ್ಲ ಒಂದು ಜೀವನ ಮಾರ್ಗ ಎಂಬಂತೆ ಬಿಂಬಿಸಿದ್ದು ರವಿ ಬೆಳಗೆರೆ ಗೈದ ಅಕ್ಷಮ್ಯ ಅಪರಾಧ! ಕ್ರೈಂ! ಇನ್ನು ಆತ ಪುಸ್ತಕಗಳಿಗೆ ಆಯ್ದುಕೊಳ್ಳುವ ವಸ್ತು ವಿಷಯಗಳು ಕೂಡ ಹಾಗೇನೇ! ಅಲ್ಲಿ ಅತೀ ಅನಿಸುವ ಕೃತಿಗೇ ಮೊದಲ ಮಣೆ! ಹಾಗೇ ನೋಡಿದರೆ ಅವರ ಅವಲಕ್ಷಣಗಳಲ್ಲಿ ಅತಿ ಅನ್ನುವುದು ಮೇಲುಗೈ ಸಾಧಿಸಿದ್ದೇ ಅವರ ದುರಂತ. ಅದು ಸಾಲದು ಅನ್ನುವಂತೆ, ತಾನು ಏನೇ ಸಾಧನೆ, ಸಾಹಸ ಮಾಡಿದರೂ ಅನ್ಯರ ಹೊಗಳುವಿಕೆಗೂ ಕಾಯದೆ ಅದನ್ನು ಕೊಚ್ಚಿಕೊಳ್ಳುವ, ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಅಭ್ಯಾಸ ಬೇರೆ!
ಇದರಿಂದ ಅವರನ್ನು ಹೊಗಳಲು ಹೊರಟವರ ಬಾಯಿ ಕಟ್ಟಿದಂತಾಗುತ್ತದೆ ಎಂಬ ಸಣ್ಣ ಸತ್ಯ ಕೂಡ ಹೊಳೆಯದಾಯಿತಲ್ಲ ಈ ಸಕಲಕಲಾವಲ್ಲಭನಿಗೆ! ವ್ಯವಸ್ಥೆಯನ್ನು ಸುಧಾರಿಸುವ, ಬದಲಿಸುವ ಯಾವುದೇ ರಚನಾತ್ಮಕ ಪ್ರಯತ್ನಗಳನ್ನೂ ಮಾಡದೆ, ಕೇವಲ ವ್ಯಕ್ತಿಗಳ ತೇಜೋವಧೆಗೇ ಸೀಮಿತವಾಯಿತು ಅವರ ‘ಹೆಚ್ಚು ಕಪ್ಪು ಕಡಿಮೆ ಬಿಳುಪಿನಿಂದ’ ತುಂಬಿದ ಪತ್ರಿಕೆ. (ಅವರು ಅಕ್ಕರೆಯಿಂದ ‘ಕೃಷ್ಣ ಸುಂದರಿ’ ಎಂದು ಕರೆಯುತ್ತಿದ್ದ) ಅವರ ಸೃಷ್ಟಿ ‘ಹಾಯ್! ಬೆಂಗಳೂರು’ ಪೀತ ಪತ್ರಿಕೆ ಎಂಬ ಹಣೆಪಟ್ಟಿಗೆ ತಕ್ಕಂತೆ ಬಾಳಿ, ರನ್‌ವೇನಲ್ಲೇ ಸಾಗಿತು. ಎಂದೂ ಎತ್ತರಕ್ಕೆ ಟೇಕ್ ಆ- ಆಗಲೇ ಇಲ್ಲ! ಅಷ್ಟೊಂದು ಆರ್ಥಿಕ ಯಶಸ್ಸು ದಕ್ಕಿದ ಮೇಲಾದಾರೂ ತಾನೂ ಮೆಲೇರಿ, ಓದುಗರನ್ನು ಕೂಡ ಏರಿಸುವ ಪ್ರಯತ್ನ ಮಾಡಬಹುದಿತ್ತೇನೋ!
ನನ್ನಂಥವರ ಈ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ‘ಅಚ್ಚರಿ’ ಎಂಬ ಪಾಕ್ಷಿಕ ಹೊರತಂದರು. ಕೆಲವು ಸಂಚಿಕೆಗಳ ಬಳಿಕ ಅದನ್ನು ತಾವೇ ತೆಗಳಿ, ನಿಲ್ಲಿಸಿ ಬಿಟ್ಟರು! ಅದರ ಸುಧಾರಿತ ಆವೃತ್ತಿಯಾಗಿ ಬಂದದ್ದೇ ‘ಓ ಮನಸೇ…’ ಅದು ‘ಕನ್ನಡ ಪತ್ರಿಕೆಗಳ ಇತಿಹಾಸ ದಲ್ಲಿ ಎಲ್ಲ ದಾಖಲೆಗಳನ್ನು ಮುರಿದಿದೆ’ ಎಂದು ಅವರೇ ಕರತಾಡನ, ಶಿಳ್ಳೆಗಳೊಂದಿಗೆ ಡಂಗುರ ಸಾರಿದರು. ಹಾಗಿದ್ದಲ್ಲಿ ಅದು ಮುಗ್ಗರಿಸುತ್ತ ಸಾಗಿದ್ದೇಕೆ? ಕೆಲವೊಮ್ಮೆ ‘ನಿಂತೇ ಹೋಯಿತು’ ಅನಿಸಿಕೊಂಡ ಪತ್ರಿಕೆ ಹೊಸಬರ ಸಂಪಾದಕತ್ವದಲ್ಲಿ ಕಣ್ಣು ಮುಚ್ಚಾಲೆ ಆಡಿದ್ದೇಕೆ? ಕೆಲವು ಸಣ್ಣ ಪುಟ್ಟ ಎಡವಟ್ಟುಗಳ ಸ್ಯಾಂಪಲ್: ‘ಯಂಡಮೂರಿ ವೀರೇಂದ್ರನಾಥರನ್ನು ಕನ್ನಡ ಓದುಗರಿಗೆ ಪರಿಚಯಿಸಿ ತಪ್ಪು ಮಾಡಿದೆ’ ಎಂದು ಕೈ ಹಿಸುಕಿಕೊಂಡ ರವಿ, ‘ಹಾಯ್! ಬೆಂಗಳೂರಿನಲ್ಲಿ’ ವಾರ ವಾರ ಅವರೊಂದಿಗೆ ಜುಗಲ್‌ಬಂದಿ ಮಾಡುತ್ತೇನೆ ಎಂದು ಘೋಷಿಸಿದರು. ಈ ಜುಗಲ್‌ಬಂದಿ ಕೇವಲ ಎರಡು ವಾರ ನಡೆಯಿತು. ಅದು ‘ಜಗಳ ಬಂಽ’ ಯಾಗಿ ಕೊನೆಯಾಯಿತೇ? ಇದಕ್ಕೆ ಸ್ಪಷ್ಟನೆ ಆಗಲಿ, ಸಮಜಾಯಿಷಿ ಆಗಲಿ ಇರಲಿಲ್ಲ!
‘ಸುಭಾಷ್ ಚಂದ್ರಭೋಸರ ಆತ್ಮಕತೆ’ಗೂ ಇದೇ ದುರ್ಗತಿ! ಸ್ಪಷ್ಟನೆ ಮಾತ್ರ ಇಲ್ಲ. ಗುರು ಲಂಕೇಶರ ಹಾಗೆ ಅವರು ಕೂಡ ಜಾಹೀರಾತು ಇಲ್ಲದೇನೇ ಪತ್ರಿಕೆ ನಡೆಸಿದರು. ಆದರೆ, ಲಂಕೇಶರನ್ನು ‘ನೀವು ಅದೆಷ್ಟು ಬಾರಿ ಆ ಸಿಟಿಜ಼ನ್ ಕೇನ್ ಚಿತ್ರದ ಕುರಿತು ಬರೆಯುತ್ತೀರಿ?’ ಎಂದು ಲೇವಡಿ ಮಾಡಿದ ರವಿ, ತಾವೇ ಸ್ವತಃ ಹೇಳಿದ್ದನ್ನೇ ಹೇಳುವ ತೆವಲಿಗೆ ಬಲಿಯಾದರು! ತಮ್ಮ ಪತ್ರಿಕೆಗಳಿಗೆ ಜಾಹೀರಾತಿನ ಆದಾಯವೇ ಅಗತ್ಯವಿಲ್ಲ ಎಂದು ಬೀಗಿದ ಇಬ್ಬರು ದಿಗ್ಗಜರು ಮಾಡಿದ್ದೇನೆಂದರೆ- ತಮ್ಮ ವೈರಿಗಳ ತೇಜೋವಧೆ (ಹಣ ನೀಡದವರ?) ಜತೆಯಲ್ಲಿ ತಮ್ಮ ತೆವಲು, ಲಂಪಟತನ, ದುಶ್ಚಟ, ಅಹಕೆ, ಎಡವಟ್ಟುಗಳನ್ನು ಜಗಜ್ಜಾಹೀರು ಮಾಡಲು ಪತ್ರಿಕೆಯೆಂಬ ಪರಮ ಪವಿತ್ರ ಮಾಧ್ಯಮವನ್ನು ಬಳಸಿಕೊಂಡದ್ದು.
ತಮ್ಮನ್ನು ತಾವೇ ಬ್ರಾಂಡ್ ಮಾಡಿಕೊಂಡದ್ದು. ಪತ್ರಿಕೆಯನ್ನು ‘ಆತ್ಮರತಿಯ ಪಾಂ-ಟ್’ ಮಟ್ಟಕ್ಕೆ ಇಳಿಸಿದ್ದು. ಇದು ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ವಿಪರ್ಯಾಸದ ಪರಮಾವಧಿಗಳಲ್ಲಿ ಒಂದು. ಒಂದು ತಲೆಮಾರಿನ ಯುವಕ-ಯುವತಿಯರ ಪಾಲಿಗೆ ರವಿ ಕೆಚ್ಚೆದೆಯ ವೀರ. ಅವರು ಬರೆದದ್ದೆಲ್ಲ ಅಪ್ಯಾಯಮಾನ, ಅಷ್ಟು ಸೊಗಸು! ಪ್ರೀತಿ ಪ್ರೇಮದಲ್ಲಿ ಮುಳುಗಿದವರ ಪಾಲಿಗೆ ಅವರು ಗುರು ವರೇಣ್ಯ! ಮಾರ್ಗದರ್ಶಕ. ಆವರ ಪ್ರೇಮ ಪತ್ರದ ಮಾದರಿಯ, ರವಿಯ ಮೊರೆತ, ಪ್ರಲಾಪ ಮಾದರಿಯ ಅಂಕಣ
(ಶೀರ್ಷಿಕೆ ನೆನಪಾಗುತ್ತಿಲ್ಲ, ಕ್ಷಮಿಸಿ)ವಂತೂ ಒಂದು ಟ್ರೆಂಡ್ ಹುಟ್ಟಿಸಿತ್ತು. (ಮತ್ತದು ಕಣ್ಮರೆಯಾಯಿತು!) ಆ ಬರಹಗಳನ್ನು
ಅನುಕರಿಸಿದವರೆಷ್ಟೋ, ಅನುಕರಣೆಯಲ್ಲಿ ವಿಫಲರಾದವರೆಷ್ಟೋ!
ಅವರ ಬರಹಗಳಿಗೆ ಫಿದಾ ಆದ ಒಂದು ತಲೆಮಾರು ತನಗರಿಲ್ಲದೇ ನಿಧಾನವಾಗಿ ಬದುಕಿನ ವಾಸ್ತವಗಳಿಗೆ ತೆರೆದುಕೊಂಡಿತು.
ಅಷ್ಟಕ್ಕೂ ನಶೆ ಯಾವ ರೂಪದಲ್ಲೇ ಇರಲಿ, ಅದು ಏರಿದ ಗತಿಯಲ್ಲೇ ಇಳಿದು ಬಿಡುತ್ತದೆ! ಮದುವೆಯಾಗಿ ಪ್ರೀತಿಸಿದವಳ/ನ, ಪ್ರೀತಿಸದವಳ/ನ ಕೈಹಿಡಿದವರಿಗೆ ಮಕ್ಕಳ ಲಾಲನೆ ಪಾಲನೆ, ಶಿಕ್ಷಣ, ಅಕ್ಕ-ತಂಗಿಯರ ಮದುವೆ, ತಂದೆತಾಯಿಯರ ಜವಾಬ್ದಾರಿ ಎಲ್ಲವೂ ಹೆಗಲ ಮೇಲೇರಿದಾಗ, ಅಂಥವರ ಪಾಲಿಗೆ ಅಪ್ರಸ್ತುತವಾಗುತ್ತ ಹೋದರು.
ಹೊಸ ತಲೆಮಾರಿನೊಂದಿಗೆ ಕನೆಕ್ಟ್ ಆಗುವಲ್ಲಿ ವಯಸ್ಸಾಗುತ್ತ ಬಂದ ಇಳಿ ಸೂರ್ಯ ವಿಫಲರಾದರು. ಈವನ್ ದ ‘ಸನ್’ ವಾಸ್
ಬರ್ನಿಂಗ್ ಔಟ್! ಸೂರ್ಯಾಸ್ತಮಾನ ಕಾಣಲು ಸುಂದರವೆಂದು ಮೈಮರೆತು ಅಷ್ಟಿಷ್ಟು ಬೆಳಕಿನಲ್ಲಿ ದೀಪ ಹಚ್ಚದೆ ಕುಳಿತರೆ, ಕತ್ತಲಲ್ಲಿ ಎಡವುವುದು ಸುನಿಶ್ಚಿತವೆಂದು ಬಲ್ಲ ತಲೆಮಾರಿನ ಎದುರಿಗೆ ನಾರಾಯಣ ಮೂರ್ತಿ, ಸುಧಾ ಮೂರ್ತಿ, ಚಕ್ರವರ್ತಿ ಸೂಲಿಬೆಲೆ, ವಿಶ್ವೇಶ್ವರ ಭಟ್… ಮೊದಲಾದ ಆದರ್ಶಗಳು ತಲೆಯೆತ್ತಿ ನಿಂತವು!
ರವಿಯ ಪ್ರಖರತೆ ಒಂದಿಷ್ಟು ಕುಂದಿತು. ಅಷ್ಟರಲ್ಲಿ ರವಿಯವರ ಆರೋಗ್ಯವೂ ಕೈಕೊಟ್ಟಿತು. ಅವರ ಬರಹಗಳ ಖದರು, ಮೊನಚು, ವರಸೆಗಳಿಗೆ ಯಾವ ಧಕ್ಕೆಯಾಗದಿದ್ದರೂ, ಅವರ ವಿಡಿಯೋಗಳು ನಿಜ ಪರಿಸ್ಥಿತಿಯನ್ನು ಬಯಲು ಮಾಡಿದವು. ಸಾಲದ್ದಕ್ಕೆ ಅವರ ತೀರಾ ಖಾಸಗಿ ಬದುಕಿನ ಕೆಲವು ವಿವರಗಳು ಬಟಾಬಯಲಾದದ್ದು, ಅದುವರೆಗೆ ‘ಗುಸುಗುಸುಪ್’ (ಗಾಸಿಪ್ ಎಂಬ ಪದವನ್ನು ಕನ್ನಡೀಕರಿಸಿದ್ದೇನೆ!) ಸ್ತರದಲ್ಲಿದ್ದ, ಪತ್ರಕರ್ತರ ನಡುವೆ ಹರಟೆಗೆ ಕಾರಣವಾಗುತ್ತಿದ್ದ ಅವರ ಬಗೆಗಿನ ರೋಚಕ ಮಾತಿ ‘ನಿಜ ಅಂತೆ ಕಣೋ’ ಎಂದು ಅನಿಸಿಕೊಂಡಾಗ, ಹಲವರಿಗೆ ಅದನ್ನು ಅರಗಿಸಿಕೊಳ್ಳಲು ಕಷ್ಟವೆನಿಸಿತು. ಪ್ರಶ್ನೆ ಅವರ
ವಿವಾಹೇತರ ಸಂಬಂಧ, ಸಂಸಾರ ಕುರಿತದ್ದಲ್ಲ. ಬದಲಾಗಿ ಅದನ್ನು ಅವರು ಗುಪ್ತವಾಗಿರಿಸಿದ ಬಗೆಯದ್ದು! ವರನಟರ, ರಾಜಕೀಯ ಪ್ರಮುಖರ ಚಾರಿತ್ರ್ಯ ವಧೆ ಮಾಡಿದವರ ಚಾರಿತ್ರ್ಯವೇ ಪ್ರಶ್ನಾರ್ಹವೆನಿಸಿದ್ದು ತೀವ್ರ ಅಲ್ಲೋಲಕಲ್ಲೋಲಗಳಿಗೆ ಕಾರಣವಾಯಿತು.
ಮಾಜಿ ಮುಖ್ಯಮಂತ್ರಿಗಳೊಬ್ಬರ ಕೃತಕ ಕೇಶದ ವಿಷಯವನ್ನು ಕೆದಕಿ, ಕುಹಕ ಮಾಡುತ್ತಿದ್ದ ಅವರು ಪರೋಕ್ಷವಾಗಿ ‘ಈ ಮಟ್ಟ
ದಿಂದ ನಾನು ಎಂದಿಗೂ ಮೇಲೇರಲಾರೆ’ ಎಂದು ಹೇಳಿದಂತಿತ್ತು. ‘ಒಬ್ಬ ಪತ್ರಕರ್ತನ ಹತ್ಯೆಗೆ ಅವರು ಸುಪಾರಿ ನೀಡಿದ್ದರು’
ಎಂಬುದು ಸುದ್ದಿಯಾದ ದಿನಂವತೂ ‘ಹಿ ವಾಸ್ ಫಿನಿಶ್’! ‘ಪಾಪಿಗಳ ಲೋಕದಲ್ಲಿ’ ಬರೆದವನ ಅಸಲಿಯತ್ತು ಏನಿರಬಹುದು?
ಬೆಳಕಿಗೆ ಬಂದದ್ದು ಇಷ್ಟಾದರೆ, ಬೆಳಕು ಕಾಣದ ಪ್ರಕರಣ, ಹಗರಣಗಳು ಎಷ್ಟಿರಬಹುದು? ಈ ವ್ಯಕ್ತಿ ತಾನು ಕೊಚ್ಚಿಕೊಂಡಷ್ಟು ಸಾಚಾನೇ? ಇತ್ಯಾದಿ ಪ್ರಶ್ನೆಗಳು ಕಾಡಿದ್ದರಿಂದ ಅವರ ಕಟ್ಟರ್ ಅಭಿಮಾನಿ ಗಳ ಅವಕೃಪೆಗೂ ಅವರು ಪಾತ್ರರಾದರು. ಈ ಹಂತ ದಲ್ಲಿ ನಾನು ನನ್ನಂಥವರು ‘ಹಾಯ್ ಬೆಂಗಳೂರು’ ಓದುವುದನ್ನೇ ಬಿಟ್ಟು ವರುಷಗಳೇ ಕಳೆದಿದ್ದವು.
ಕೊನೆಗೆ ಅವರ ಒಲವುಗಳು, ವಿಚಾರ (?)ಗಳು, ಅಭಿಪ್ರಾಯಗಳು ಏನಿತ್ತು, ಹೇಗಿತ್ತು ಎಂಬುದರ ಅರಿವು ಇಲ್ಲ. ಸೂರ್ಯ ಅದಾಗಲೇ ಇಳಿಯಲು ಸಜ್ಜಾಗಿದ್ದ! ಆಗಲೇ ಇತರಿಗಾಗಿ ಮಿಡಿದ ಅವರ ಹೃದಯ ಸ್ತಂಭನವಾಯಿತು ಎಂಬ ಸುದ್ದಿ. ಬಾಲಕ ರವಿ ಮಹಾ ತುಂಟ. ಆಡದ ಆಟವಿಲ್ಲ. ಮಾಡದ ಚೇಷ್ಟೆ ಇಲ್ಲ. ರೈಲ್ವೇ ಹಳಿಯ ಮೇಲೆ ನಾಣ್ಯಗಳನ್ನು ಇರಿಸಿ ರೈಲು ಬರುವುದನ್ನೇ ಕಾದು ಕುಳಿತು, ಅದು ಸಾಗಿ ಹೋದ ಮೇಲೆ ಜಜ್ಜಿ ಹೋಗಿರುವ ಆ ನಾಣ್ಯಗಳನ್ನು ಕಂಡು ಖುಷಿ ಪಡುವುದು ಅವರ ಬಾಲ ಲೀಲೆ ಗಳಲ್ಲಿ ಒಂದು! ಇದು ಅವರೇ ಹೇಳಿಕೊಂಡದ್ದು.
ಚೈಲ್ಡ್ ಸೈಕಾಲಜಿ ತಜ್ಞರ ಬಳಿ ಈ ಆಟದ ಮರ್ಮವೇನೆಂದು ಕೇಳಿದರೆ ಅವರು ಇಂಥಾ ಬಾಲಕನ ಭಾವೀ ವ್ಯಕ್ತಿತ್ವವನ್ನು ಹೇಗೆ
ವಿಶ್ಲೇಸುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ನನಗೆ! ನನ್ನಂಥವರು ೨-೩ ಜನ್ಮಗಳಲ್ಲಿ ಸಾಧಿಸಲಾಗದ್ದನ್ನು ಅವರು ೬೨
ವರ್ಷಗಳ ಆಯುಷ್ಯದಲ್ಲಿ ಸಾಧಿಸಿ ತೋರಿಸಿದರು. ಆದರೆ ಅವರು ಬಿಟ್ಟು ಹೋದ ಆದರ್ಶ, ಸಂದೇಶ, ತತ್ವ, ಸಿದ್ಧಾಂತಗಳೇನು?
‘ನಿಲ್’ ಅನ್ನಬೇಕಾಗುತ್ತದೆ-ವಿಷಾದದಿಂದಲೇ! ‘ಹೀಗೆಂದು ಹೇಳಲಾಗದ ಹಾಗೆ, ‘ಹೆಸರು ಮಾಡುವುದು ಹೇಗೆ?’ ಅನ್ನುವ ಪ್ರಶ್ನೆಗೆ ‘ರವಿ ಬೆಳಗೆರೆಯ ಹಾಗೆ!’ ಎಂಬ ಉತ್ತರಕ್ಕೆ ನ್ಯಾಯ ಒದಗಿಸಿ, ಯಮನ ಸಾರಥ್ಯದ ತೇರನ್ನೇರಿದರು ಕೊನೆಗೆ.
ಅಥವಾ ಸಾವನ್ನು ಕೂಡ ಒಮ್ಮೆ ತೀವ್ರವಾಗಿ ಅನುಭವಿಸಿ, ಸಾವಿನ ಮೇಲೊಂದು ಅದ್ಭುತ ಪುಸ್ತಕ ಬರೆಯುವ ಹಪಾಹಪಿಗೆ
ಬಲಿಯಾದರೆ ನಮ್ಮವ ಆರ್ ಬಿ? ಇಂಥಾ ರವಿ ಬೆಳಗೆರೆ ಹುಟ್ಟಿದ ದಿನವಾದ ಇಂದು ಆತ ನೆನಪಾದ.