Monday, 25th November 2024

ಪಿರಮಿಡ್ಡು ಜೀವನದ ಸಾರವನ್ನು ಸಾರುವ ನಿಗೂಢ ನಿರ್ಮಿತಿ

ಈಜಿಪ್ತ್ ಡೈರಿ- ಪ್ರವಾಸದ ಒಳ-ಹೊರಗಿನ ಕಥನ – ೭

ವಿಶ್ವೇಶ್ವರ ಭಟ್

ಮೊನ್ನೆ ಓದುಗರೊಬ್ಬರು ನನಗೆ ಇಮೇಲ್ ಮಾಡಿ, ‘ಸಾರ್, ನೀವು ಬರೆಯುತ್ತಿರುವ ಈಜಿ ಡೈರಿ ಓದುತ್ತಿದ್ದೇನೆ. ಅಲ್ಲಿನ ಪಿರಮಿಡ್ಡು ಗಳನ್ನು ಬೇರೆ ಗ್ರಹಗಳಿಂದ ಬಂದವರು ಕಟ್ಟಿದ್ದಾರಂತೆ ಹೌದಾ? ನಾನು ಎಲ್ಲಾ ಓದಿದ ನೆನಪು’ ಎಂದು ಬರೆದಿದ್ದರು. ಇಂಥ ನಂಬಿಕೆಗಳು ಹೊಸತೇನೂ ಅಲ್ಲ. ಮನುಷ್ಯ ಮಾತ್ರರಿಂದ ಇಂಥ ದನ್ನು ನಿರ್ಮಿಸಲು ಸಾಧ್ಯವಿಲ್ಲದ್ದರಿಂದ, ಅತಿಮಾನುಷ ಶಕ್ತಿಯಿರುವ ಅನ್ಯ ಗ್ರಹಗಳ ಜೀವಿಗಳೇ ಇದನ್ನು ನಿರ್ಮಿಸಿರಲಿಕ್ಕೂ ಸಾಕು ಎಂಬುದು ಅನೇಕರ ನಂಬಿಕೆ ಅಥವಾ ಲೆಕ್ಕಾಚಾರ. ಪಿರಮಿಡ್ಡು ಗಳನ್ನು ಕಟ್ಟಿದವರನ್ನು ಯಾರೂ ನೋಡದಿರುವುದರಿಂದ, ಅನ್ಯಗ್ರಹಗಳ ಜನ ಕಟ್ಟಿಲ್ಲ ಎಂದು ಹೇಗೆ ಹೇಳುತ್ತೀರಿ ಎಂಬ ವಾದವೂ ಹಳೆಯದೇ.

ಅಷ್ಟು ಸಹಸ್ರ ವರ್ಷಗಳ ಹಿಂದೆ, ಗಣಿತ ಶಾಸ್ತ್ರ, ಖಗೋಳ ಶಾಸ್ತ್ರ, ವಾಸ್ತುಶಾಸ್ತ್ರಗಳ ಜತೆಗೆ ಸ್ಥಳೀಯ ನಂಬಿಕೆಗನುಗುಣವಾಗಿ ಕಟ್ಟಿರಬೇಕಾದರೆ, ಅದು ಸಾಮಾನ್ಯ ಮನುಷ್ಯರಿಂದ ಸಾಧ್ಯವಾಗಿರಲಿಕ್ಕಿಲ್ಲ ಎಂಬುದಂತೂ ಸತ್ಯ. ಪಿರಮಿಡ್ಡುಗಳ ಬಗ್ಗೆ ಇಂಥ ಅವೆಷ್ಟೋ ವಾದಗಳಿವೆ. ಆ ಬಗ್ಗೆ ಎಷ್ಟು ಬರೆದರೂ ಕಮ್ಮಿಯೇ. ಅದು ಎಂದೂ ಬತ್ತದ, ಕರಗದ ವಿಸ್ಮಯಗಳ ಗಣಿ. ಕೆಲವರು ಅದರ ಆಯುಷ್ಯವನ್ನು ನಾಲ್ಕೂವರೆ ಸಾವಿರ ವರ್ಷ ಅಂತಾರೆ, ಇನ್ನು ಕೆಲವರು ಆರು ಸಾವಿರ ವರ್ಷ ಅಂತಾರೆ, ಏಳು ಸಾವಿರ ವಿದ್ದಿರಬಹುದು ಎಂದು ಅಂದಾಜಿಸುವವರೂ ಇದ್ದಾರೆ.

ಒಂದಂತೂ ಸತ್ಯ, ಅಷ್ಟು ವರ್ಷಗಳಿಂದ ಪಿರಮಿಡ್ಡುಗಳು ಮನುಷ್ಯನ ಕಲ್ಪನೆಗೆ ಸವಾಲಾಗಿಯೇ ನಿಂತಿವೆ. ಈಗಲೂ ಅದರ  ಬಗೆಗಿನ ಮೋಹ, ಮಮತೆ ಕಮ್ಮಿಯಾಗಿಲ್ಲ.

ಜಗತ್ತಿನ ಪುರಾತತ್ವ ತಜ್ಞರಿಗೆ ಪಿರಮಿಡ್ಡುಗಳು ಒಂದು ಆಡೊಂಬಲ. To excavate a pyramid is the dream of every
archaeologist ಎಂಬ ಮಾತಿದೆ. ಅವರ ಪಾಲಿಗೆ ಈಜಿಪ್ಟಿನ ಪಿರಮಿಡ್ಡು ಅಂದ್ರೆ ಸರ್ವಸ್ವ! ಪುರಾತತ್ವಶಾಸ್ತ್ರ ಮತ್ತು ಇತಿಹಾಸದ ವಿದ್ಯಾರ್ಥಿಗಳಿಗೆ ಪಿರಮಿಡ್ಡುಗಳೆಂದರೆ, ಪಿಂಗಾಣಿ ಅಂಗಡಿಯಲ್ಲಿ ಗೂಳಿ ನುಗ್ಗಿದಂತೆ. ಪಿರಮಿಡ್ಡುಗಳ ಸುತ್ತಮುತ್ತ ತಲೆ ಕೂದಲು, ಒಡೆದ ಮಡಕೆ, ಎಲುಬಿನ ಚೂರು, ಚಪ್ಪಡಿ ಕಲ್ಲಿನ ಹಾಸು, ಕಬ್ಬಿಣದ ತುಂಡು… ಹೀಗೆ ಏನೇ ಸಿಗಲಿ, ಅವರಿಗೆ ಅನರ್ಘ್ಯ ರತ್ನ ಸಿಕ್ಕಿದಂತೆ.

ಹೀಗಾಗಿ ಆಗಾಗ ಮಾಧ್ಯಮಗಳಲ್ಲಿ ಪಿರಮಿಡ್ಡುಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ‘ನೀವು ಪಿರಮಿಡ್ಡುಗಳನ್ನು ಖುದ್ದಾಗಿ ನೋಡದೇ ಅದರ ಭವ್ಯತೆಯ ಕಲ್ಪನೆ ಕಣ್ಣ ಮುಂದೆ ಬರುವುದಿಲ್ಲ’ ಎಂದು ನನಗೆ ಪಿರಮಿಡ್ಡುಗಳನ್ನು ನೋಡಿದ ಅನೇಕ ಸ್ನೇಹಿತರು ಹೇಳಿದ್ದರು. ಅವರ ಮಾತು ಅಕ್ಷರಶಃ ಸತ್ಯ. ಐದು ಸಾವಿರ ವರ್ಷಗಳ ಹಿಂದೆ, ಯಾವ ದೋಷವಿಲ್ಲದೇ ಅತ್ಯಂತ
ಪರಿಪೂರ್ಣವಾಗಿ ಕಟ್ಟಿದ ಒಂದು ರಚನೆಯಿದ್ದರೆ, ಅದು ಅದು ಪಿರಮಿಡ್ಡು. ಈ ಪರಿಪೂರ್ಣತೆಯನ್ನು ಈಜಿಪ್ಟಿನ ಜನ ಹೇಗೆ ಸಾಧಿಸಿರಬಹುದು? ಈ ಬಗ್ಗೆ ನೂರಾರು ಸಂಶೋಧನೆಗಳಾಗಿವೆ.

ಸಾವಿರಕ್ಕೂ ಅಧಿಕ ಪುಸ್ತಕಗಳು ಪ್ರಕಟವಾಗಿವೆ. ಪಿರಮಿಡ್ಡಿನ ಬುಡ ಅದೆಷ್ಟು ವಿಶಾಲವಾಗಿದೆಯೆಂದರೆ, ಹದಿನಾರು ಪುಟ್ ಬಾಲ್ ಮೈದಾನದಷ್ಟು. ಇಷ್ಟೊಂದು ವಿಶಾಲ ತಳಹದಿಯಲ್ಲಿ ಅಂದಿನ ವಾಸ್ತುತಜ್ಞರು ಯಾವ ಲೆಕ್ಕಾಚಾರದಲ್ಲಿ ಕರಾರುವಾಕ್ಕಾಗಿ ಗಿಜಾ ದಲ್ಲಿ ಪಿರಮಿಡ್ಡುಗಳನ್ನು ನಿರ್ಮಿಸಿರಬಹುದು? ಇದು ಕೇವಲ ಕಲ್ಪನೆ ಅಥವಾ ಊಹೆಗೆ ಬಿಟ್ಟ ವಿಚಾರ.

ಇಂದು ಪಿರಮಿಡ್ಡುಗಳಿಗಿಂತ ಎತ್ತರವಾದ ಐಫೆಲ್ ಟವರ್, ಅಮೆರಿಕದ ಲಿಬರ್ಟಿ ಗೋಪುರಗಳು, ಬುರ್ಜ್ ಖಲೀ- ತಲೆಯೆತ್ತಿವೆ. ಆದರೆ ಅವುಗಳನ್ನು ನಿರ್ಮಿಸಿದ ಎಂಜಿನಿಯರುಗಳಿಗೂ ಪಿರಮಿಡ್ ರಚನೆ ನಿಗೂಢವೇ. ಇಂದು ದುಬೈ ಬುರ್ಜ್ ಖಲೀಫಾವನ್ನು ಮೀರಿಸುವ ಗಗನಚುಂಬಿ ಕಟ್ಟಡಗಳು ತಲೆಯೆತ್ತಬಹುದು. ಆದರೆ ಪಿರಮಿಡ್ಡುಗಳನ್ನು ನಿರ್ಮಿಸಿದಾಗ, ಕಾಗದ, ಪೆನ್ಸಿಲ್,
ಪೆನ್ನು, ಜಾಮಿಟ್ರಿಬಾPನಂಥ ಮೂಲ ಹತ್ಯಾರಗಳೇ ಇರಲಿಲ್ಲ.

ಬರೀ ಕಣ್ಣಳತೆಯ ಅದನ್ನು ನಿರ್ಮಿಸಿದ್ದು ಹಾಗೂ ವಿeನ ಮತ್ತು ತಂತ್ರeನ ಅಂದ್ರೆ ಏನು ಎಂಬುದು ಗೊತ್ತಿಲ್ಲದ ದಿನಗಳಲ್ಲಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಮ್ಮ ದೊರೆಯ ಶವವನ್ನು ಕೆಡದಂತೆ ಸಂರಕ್ಷಿಸುವ ಉದ್ದೇಶಕ್ಕಾಗಿ ಇಂಥ ಅದ್ಭುತ ಮತ್ತು ಮೈನವಿರೇಳಿಸುವ ಪಿರಮಿಡ್ಡು ನಿರ್ಮಾಣಕ್ಕೆ ಮುಂದಾದರಾ ಎಂದು ಆಶ್ಚರ್ಯವಾಗುತ್ತದೆ.

ಗಿಜಾದಲ್ಲಿ ಪಿರಮಿಡ್ಡುಗಳನ್ನು ನಿರ್ಮಿಸುವ ಆ ಇಪ್ಪತ್ತು-ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಅದರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಲಕ್ಷಾಂತರ ಕೂಲಿಕಾರ್ಮಿಕರು ಆ ಮರುಭೂಮಿಯ ಸುಡುಬಿಸಿಲಿನಲ್ಲಿ ಹೇಗೆ ತಮ್ಮನ್ನು ರಕ್ಷಿಸಿಕೊಂಡರು? ಅವರು ತಮ್ಮ ಹೆಂಡತಿ-ಮಕ್ಕಳನ್ನು, ಮನೆ-ಮಠಗಳನ್ನು ಹೇಗೆ ನಿಭಾಯಿಸಿದರು, ಸಂಭಾಳಿಸಿದರು? ಈ ಕೂಲಿಕಾರ್ಮಿಕರೆಲ್ಲ ಎಲ್ಲಿಂದ ಬಂದರು? ಇವರನ್ನು ಬೇರೆ ದೇಶಗಳಿಂದ ಕರೆತರಲಾಯಿತಾ? ಹಾಗೆ ಕರೆತಂದವರಾರು? ಇವೆ ಇನ್ನೂ ನಿಗೂಢ ಸಂಗತಿಗಳೇ. ಗಿಜಾದ ದಿಣ್ಣೆಯ ಮೇಲಿರುವ ಮೂರು ಪಿರಮಿಡ್ಡುಗಳನ್ನು ತಂದೆ, ಮಗ ಮತ್ತು ಮೊಮ್ಮಗನ ಸ್ಮರಣಾರ್ಥ ಕಟ್ಟಿದಂಥವು. ಈಜಿಪ್ಟಿನ ಪ್ರಾಚೀನ ದೊರೆಗಳನ್ನು ಫೆರೋ ಎಂದು ಕರೆಯುತ್ತಿದ್ದರು.

ಈ ಪೈಕಿ ದೊಡ್ಡ ಪಿರಮಿಡ್ಡು ತಂದೆಯಾದ ಖುಫ್ರು ದೊರೆಗೆ ಸೇರಿದ್ದು. ಉಳಿದೆರಡು ಪಿರಮಿಡ್ಡುಗಳು ಮಗನಾದ ಖೂಫ್ರೂ ಮತ್ತು ಮೊಮ್ಮಗ ಕಿಯೋಪ್ಸ್‌ಗೆ ಸೇರಿದ್ದು. ಪಿರಾಮಿಡುಗಳು ಕೇವಲ ಶವ ಕೆಡದಂತೆ ರಕ್ಷಿಸಿಡುವ ಶವಾಗಾರವಷ್ಟೇ ಆಗಿದ್ದಿದ್ದರೆ, ಅದು
ಇಡೀ ವಿಶ್ವದ ಜನ ಕುತೂಹಲ ಕೇಂದ್ರವಾಗುತ್ತಿರಲಿಲ್ಲ. ಅದು ಮನುಷ್ಯನ ಬದುಕಿಗೆ ಬೇಕಾದ ಅಗತ್ಯ ಪಾಠಗಳನ್ನು ಸಹ ಹೇಳಿ ಕೊಡುತ್ತದೆ. ಜೀವನದಲ್ಲಿ ಒಂದೊಂದು ಮೆಟ್ಟಿಲನ್ನು ಏರುತ್ತಾ ಹೋಗುವ ಮೊದಲು, ತಳಹದಿ ಗಟ್ಟಿಯಾಗಿರಬೇಕು ಮತ್ತು
ವಿಶಾಲವಾಗಿರಬೇಕು. ಭದ್ರ ಬುನಾದಿ ಇರುವ ಯಾವ ನಿರ್ಮಾಣವನ್ನೂ ಕದಲಿಸಲು ಆಗುವುದಿಲ್ಲ ಎಂಬ ಅಮರ ಸಂದೇಶವನ್ನು ಪಿರಮಿಡ್ಡುಗಳು ಸಾರುತ್ತಲೇ ಬಂದಿವೆ.

ಮನುಷ್ಯನಾದವನು ತನ್ನ ಜೀವನದಲ್ಲಿ ಸಾಧನೆ ಮಾಡುತ್ತಾ, ಎತ್ತರದ ಮಜಲುಗಳನ್ನು ಏರುತ್ತಾ ಹೋಗಬೇಕು. ಹಾಗೆ ಅದೇ ಸಂದರ್ಭದಲ್ಲಿ ಬೇರೆಯವರೂ ಉಳಿದ ದಿಕ್ಕುಗಳಿಂದ ಮೇಲೇರುತ್ತಾ ಪೈಪೋಟಿ ಒಡ್ಡುತ್ತಾರೆ. ಕೊನೆಯಲ್ಲಿ ಅರ್ಹನಾದವನು, ಸಮರ್ಥನಾದವನು ತುತ್ತ ತುದಿಯಲ್ಲಿರುತ್ತಾನೆ, ಹಾಗೆ ಯಾವತ್ತೂ ಆ ಸ್ಥಾನದಲ್ಲಿರುವುದು ಕಷ್ಟ. ಸ್ವಲ್ಪ ಎಡವಿದರೂ ಅಲ್ಲಿಂದ ಜಾರಿ ಕೆಳಕ್ಕೆ ಬೀಳಬೇಕಾಗುತ್ತದೆ. ಪಿರಮಿಡ್ಡು ಮನುಷ್ಯನ ಪರಿಪೂರ್ಣ ಬದುಕು, ಸಾಧನೆ ಮತ್ತು ಸಾರ್ಥಕ್ಯದ ಗಟ್ಟಿ ಸಂದೇಶ ಸಾರುವ ಪ್ರತೀಕ ಎಂಬ ಕಲ್ಪನೆ ಕೂಡ ಈಜಿಪ್ಟಿನ ಜನರಲ್ಲಿದೆ.

Some men are like pyramids, which are very broad where they touch the ground, but grow narrow as they reach the sky ಎಂಬ ಮಾತಿದೆ. ಅಂದ್ರೆ ಕೆಲವು ಗಂಡಸರು ಪಿರಮಿಡ್ ಇದ್ದಂತೆ, ಬುಡದಲ್ಲಿ ಗಟ್ಟಿಯಾಗಿಯೂ, ವಿಸ್ತಾರವಾಗಿಯೂ ಇರುತ್ತಾರೆ. ಮೇಲೇರುತ್ತಾ ಹೋದಂತೆ ಸಂಕುಚಿತರಾಗುತ್ತಾರೆ ಎಂಬುದು ಈ ಮಾತಿನ ತಾತ್ಪರ್ಯ. ಬದುಕು ಅಂದ್ರೆ ಪಿರಮಿಡ್ ಇದ್ದಂತೆ.

ಎಲ್ಲ ದಿಕ್ಕುಗಳಿಂದ ಸುಲಭವಾಗಿ ಮೇಲೇರುತ್ತಾ ಔನ್ನತ್ಯ ಸಾಧಿಸಬಹುದು. ಆದರೆ ಎಚ್ಚರ ತಪ್ಪಿದರೆ ಎಲ್ಲಿಂದ ಶುರು  ಮಾಡಿ ದ್ದೇವೋ ಅಲ್ಲಿಗೆ ತಲುಪುತ್ತೇವೆ ಎಂಬ ಮಾರ್ಮಿಕ ಸಂದೇಶವೂ ಪಿರಮಿಡ್ಡಿನ ರಚನೆಯಲ್ಲಿ ಅಡಕವಾಗಿದೆ. ಹೀಗಾಗಿ ಪಿರಮಿಡ್ಡು ಮನುಷ್ಯ ಜೀವನದ ಸಾರವನ್ನು ಸಾಂಕೇತಿಕವಾಗಿ ಸಾರುವ ಅದ್ಭುತ, ರಹಸ್ಯಮಯ, ನಿಗೂಢ ನಿರ್ಮಿತಿ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.