ಲಖನೌ: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಉತ್ತರ ಪ್ರದೇಶ ಕಾಂಗ್ರೆಸ್‌ನಲ್ಲಿ ಇದೀಗ ಪಕ್ಷದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜೀನಾಮೆಗೆ ಒತ್ತಡ ಬರುತ್ತಿದೆ.
ರಾಜ್ಯ ಘಟಕದಿಂದ ಉಚ್ಛಾಟಿತ ಎಐಸಿಸಿ ಸದಸ್ಯ ಜೀಶನ್ ಹೈದರ್ ಅವರು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಪ್ರಿಯಾಂಕಾ ರಾಜೀ ನಾಮೆಗೆ ಒತ್ತಾಯಿಸಿದ್ದಾರೆ.
2012ರ ವಿಧಾನಸಭೆ ಚುನಾವಣೆ ಸೋಲಿನ ನಂತರ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಮತ್ತು ರಾಜ್ಯಾಧ್ಯಕ್ಷರಾಗಿ ರೀಟಾ ಬಹುಗುಣ ಜೋಶಿ ಮತ್ತು ರಾಜ್ಯ ಉಸ್ತುವಾರಿ ಗುಲಾಂ ನಬಿ ಆಜಾದ್ ಮತ್ತು ರಾಜ್ ಬಬ್ಬರ್ ರಾಜೀನಾಮೆ ನೀಡಿದ್ದಾರೆ. ಆದರೆ ಪ್ರಿಯಾಂಕಾ ಇನ್ನೂ ಏಕೆ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸುಮಾರು 400 ಸ್ಥಾನಗಳಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಅಭ್ಯರ್ಥಿಗಳು 387 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದ್ದಾರೆ.
ಪಕ್ಷದ ಅಧ್ಯಕ್ಷರು ಐದು ರಾಜ್ಯಗಳ ರಾಜ್ಯಾಧ್ಯಕ್ಷರ ರಾಜೀನಾಮೆ ಕೇಳಬಹುದಾದಾಗ, ರಾಜ್ಯ ಉಸ್ತುವಾರಿಗಳ ವಿಷಯದಲ್ಲಿ ಅವರು ಏಕೆ ರಾಜೀನಾಮೆ ನೀಡಲಿಲ್ಲ ಎಂದು ಹೈದರ್ ಪ್ರಶ್ನಿಸಿದರು.