Sunday, 15th December 2024

ಚುನಾವಣೆಯಲ್ಲಿ ಬಿಜೆಪಿ ಏಕೆ ಗೆಲ್ಲುತ್ತಿದೆ ?

ವಿಶ್ಲೇಷಣೆ

ಪ್ರೊ.ಆರ್‌.ಜಿ.ಹೆಗಡೆ

ಬಿಜೆಪಿಯ ಇತ್ತೀಚಿನ ಭಾರೀ ಗೆಲುವಿನ ಕಾರಣಗಳನ್ನು ಅಕಾಡೆಮಿಕ್ ಆಗಿ ಗ್ರಹಿಸಲು ಬಹಳ ದೂರ ಹೋಗಬೇಕೆಂದೇನೂ ಇಲ್ಲ. ಅವು ಗೋಡೆಯ ಮೇಲಿನ ಬರಹಗಳ ಹಾಗೆ; ಸ್ಪಷ್ಟವೇ. ಒಂದನೆಯದು ಶಕ್ತಿಯುತವಾದ ಸಿದ್ಧಾಂತ.

ಎರಡನೆಯದು ಸಿದ್ಧಾಂತವನ್ನು ಕಮ್ಯೂನಿಕೇಟ್ ಮಾಡಬಲ್ಲ ಮತ್ತು ಸಿದ್ಧಿಗೊಳಿಸಿ ತೋರಿಸಬಲ್ಲ ನಾಯಕತ್ವ. ಮೂರನೆಯದು ಬೂತ್ ಮಟ್ಟದ ಕೆಲಸಗಳನ್ನು ಶಿಸ್ತಿನಿಂದ ನಿರ್ವಹಿಸಬಲ್ಲ ಕಾರ್ಯಕರ್ತರು. ರಾಜಕೀಯ ಪಕ್ಷವೊಂದರ ಗೆಲುವಿಗೆ ಅತ್ಯಗತ್ಯ ವಾಗಿರುವವು ಈ ಮೂರು ವಿಷಯಗಳೇ. ಕಾಣಲು ಸರಳವಾಗಿ ಕಂಡರೂ ಗ್ರೌಂಡ್ ಲೆವೆಲ್‌ನಲ್ಲಿ ಅದನ್ನೆಲ್ಲ ಸಾಧಿಸುವುದು ಒಂದು ಪಕ್ಷಕ್ಕೆ ಸುಲಭವಲ್ಲ. ಅವು ಬಹುಶಃ ಈಗ ಬಿಜೆಪಿಯಲ್ಲಿ ತುಂಬ ವ್ಯವಸ್ಥಿತ ರೂಪದಲ್ಲಿ, ಶ್ರೇಷ್ಠ ಮಟ್ಟದಲ್ಲಿ ಇವೆ. ಹಾಗಾಗಿ ಪಕ್ಷ ಗೆಲ್ಲುತ್ತಿದೆ ಮತ್ತು ಭಾರೀ ಪ್ರಮಾಣದಲ್ಲಿ ಗೆಲ್ಲುತ್ತಿದೆ.

ಇನ್ನುಸಿದ್ಧಾಂತಕ್ಕೆ ಬಂದರೆ, ಮೂರು ಆಯಾಮಗಳಿವೆ. ೧) ಸಾಂಸ್ಕೃತಿಕ ರಾಜಕೀಯ/ಹಿಂದುತ್ವ. ೨) ಬಲವಾದ ರಾಷ್ಟ್ರೀಯತೆ ಮತ್ತು ೩)ದೇಶವನ್ನು ಸಮಾಜವಾದದ ಕಬಂಧ ಬಾಹುಗಳಿಂದ ಹೊರತಂದ ಮುಕ್ತ ಆರ್ಥಿಕತೆ. ಬಿಜೆಪಿ ಬಹುಶಃ ಜನಮನದಲ್ಲಿ ನಿಂತಿದ್ದು ತನ್ನ ಹಿಂದುತ್ವದ ರಾಜಕೀಯದಿಂದಲೇ. ಎಂಬತ್ತರ ದಶಕದ ರಾಮಮಂದಿರ ಚಳವಳಿಯಿಂದ ಆರಂಭಿಸಿ ಇಂದಿನ ಕಾಶ್ಮೀರದವರೆಗೆ ಸುಳ್ಳು ಜಾತ್ಯತೀತವಾದವನ್ನು ಪ್ರಶ್ನಿಸುತ್ತ, ಹಿಂದೂ ಸಂಸ್ಕೃತಿ ದೇಶದ ಕೇಂದ್ರ ಪ್ರಜ್ಞೆ ಎನ್ನುವ ವಾದವನ್ನು ಅಸರ್ಟಿವ್ ಆಗಿ ಹೇಳುತ್ತ ಬಂದಿದೆ ಪಕ್ಷ. ಸಂಸ್ಕ್ರೃತಿಯ ‘ಪುನರುತ್ಥಾನ’ವನ್ನು ತನ್ನ ಪ್ರಮುಖ ಗುರಿ ಎಂದೇ ಪಕ್ಷ ಭಾವಿಸಿದೆ.

ತನ್ನ ಇತಿಹಾಸ, ಧರ್ಮವನ್ನು ಪುನಃ ಕಂಡುಕೊಳ್ಳಬೇಕು ಹಾಗೂ ಸ್ಥಾಪಿಸಬೇಕು ಎನ್ನುವುದು ಆರ್ಥಿಕವಾಗಿ ಬಲಗೊಳ್ಳುವ ಎಲ್ಲ ಸಮಾಜ ಗಳಲ್ಲಿಯೂ ಹುಟ್ಟಿಕೊಳ್ಳುವ ಸಾಮಾನ್ಯ ಬಯಕೆಯೇ. ಎದ್ದು ನಿಲ್ಲುತ್ತಿರುವ ನಮ್ಮ ದೇಶದ ಇಂತಹ ಬಯಕೆಯನ್ನು ಪ್ರತಿನಿಧಿಸಿದ್ದು ರಾಮಮಂದಿರ, ಕಾಶಿಯ ಮರುನಿರ್ಮಾಣ ದಂಥ ಹಿಂದುತ್ವಕ್ಕೆ ಒತ್ತು ನೀಡುವ ವಿಷಯಗಳು. ಇವನ್ನು ಮೆಚ್ಚಿಕೊಂಡಂತಿರುವ ಭಾರತೀಯ ಸಮಾಜ ಬಿಜೆಪಿಯನ್ನು ಬೆಂಬಲಿಸಿದೆ. ಮತ್ತು ಇಂತಹ ರಾಜಕೀಯಕ್ಕೆ ತನ್ನ ಬೆಂಬಲವಿದೆ ಎನ್ನುವುದನ್ನು ಚುನಾವಣೆಗಳ ಮೂಲಕವೇ ಹೇಳಿಬಿಟ್ಟಿದೆ.

ಜನರ ಗ್ರಹಿಕೆಯಲ್ಲಿ ಇಲ್ಲಿ ‘ಹಿಂದು’ ಮತೀಯ ಶಬ್ದವಲ್ಲ. ಖಟ್ಟರ್ ಧಾರ್ಮಿಕ ಶಬ್ದವೂ ಅಲ್ಲ. ಅದು ಒಂದು ಜನಾಂಗದ ಸಾಂಸ್ಕೃತಿಕ ಏಕತೆಯನ್ನು ರಾಜಕೀಯ ಏಕತೆಯನ್ನಾಗಿ ಪರಿವರ್ತನೆಗೊಳಿಸಿದ ಶಬ್ದ. ಅದು ಹಿಂದು ಧರ್ಮದ ಮೂಲ ಲಿಬರಲಿಸಂ ಅನ್ನು ಹತೋಟಿ ಪಡಿಸುವ ಅಥವಾ ಬಹುತ್ವವನ್ನೇ ನಾಶಪಡಿಸುವ ಪರಿಕಲ್ಪನೆಯಲ್ಲ. ಹಾಗಿದ್ದರೆ ಅದಕ್ಕೆ ಎಲ್ಲ ಹಿಂದೂಗಳ ಬೆಂಬಲ ಸಿಗುತ್ತಿರಲಿಲ್ಲ. ಏಕೆಂದರೆ ಹಿಂದೂ ಧರ್ಮದಲ್ಲಿ ನೂರಾರು ರೀತಿಯ ನಂಬಿಕೆಗಳಿವೆ. ಧಾರ್ಮಿಕವಾಗಿ ಒಂದಾಗಲು ಹಿಂದೂ ಬಹುತ್ವಕ್ಕೆ ಸಮ್ಮತಿಯಿಲ್ಲ. ಹಾಗಾಗಿ ಹಿಂದುತ್ವ, ಎಲ್ಲ ಬಹುತ್ವಗಳನ್ನು ಒಂದು ಕೊಡೆಯ ಅಡಿಗೆ ತಂದು ರಾಜಕೀಯವಾಗಿ ಅಸರ್ಟ್ ಮಾಡಿಕೊಳ್ಳುವ ವೇದಿಕೆ
ಅಷ್ಟೆ. ಬಹುಮುಖಿ ಹಿಂದೂ ಧರ್ಮದ ರಾಜಕೀಯ -ಡರೇಶನ್. ಹಿಂದೂ ಧರ್ಮ ಭಾರತದಲ್ಲಿಯೇ ಅವಹೇಳನಕ್ಕೀಡಾಗಿದೆ ಮತ್ತು ಹಾಗಾಗಬಾರದು ಎಂಬ ಒಂದೇ ರಾಜಕೀಯ ಅಂಶವನ್ನು ಹೊಂದಿದ ವೇದಿಕೆ.

ಏಕಕಾಲಕ್ಕೆ ಬಹಳ ಆಧುನಿಕವಾದ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ನೆನಪನ್ನು ಜೀವಂತವಾಗಿಸುವ ಕಲ್ಪನೆ. ಗಮನಿಸಬೇಕು; ಬಿಜೆಪಿಯ ಬಲವಾದ ಬೆಂಬಲಿಗರು ಬಹುಶಃ ಜೀವನ ವಿಧಾನದಲ್ಲಿ ಆಧುನಿಕರಾದ ಹಿಂದುಗಳು. ‘ಹಿಂದುತ್ವ’ದ ರಾಜಕೀಯವನ್ನು, ಹಿಂದೂ ಐಡೆಂಟಿಟಿಯನ್ನು, ಘನತೆಯನ್ನು ಎತ್ತಿ ಹಿಡಿದಿರುವುದಕ್ಕಾಗಿಯೇ ಜನ ಭಾರತೀಯ ಜನತಾ ಪಕ್ಷವನ್ನು ತಮ್ಮದನ್ನಾಗಿಸಿ ಕೊಂಡಿರುವುದು. ನೆನಪಿಡಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಕೂಡ ಹಿಂದೂ ಸ್ವರೂಪವಿತ್ತು. ಈಗ ಪಕ್ಷ ಮುಂದಿಡುತ್ತಿರುವುದೂ ಹಿಂದೂ ಧರ್ಮವನ್ನೇ. ಗಾಂಧಿಯ ಹಿಂದೂ ಧರ್ಮ ಮತ್ತು ಮೋದಿಯ ಹಿಂದೂ ಧರ್ಮಗಳ ನಡುವಿನ ವ್ಯತ್ಯಾಸಗಳನ್ನು ಅರ್ಥ ಮಾಡಿ ಕೊಳ್ಳುತ್ತ ಕುಳಿತುಕೊಳ್ಳಲು ಇತ್ಯಾದಿ ಜನರಿಗೆ ಆಸಕ್ತಿಯಿಲ್ಲ. ಅವರ ಅಭಿಪ್ರಾಯದಲ್ಲಿ ಹಿಂದೂ ಧರ್ಮವೆಂದರೆ ಹಿಂದೂ ಧರ್ಮ.

ಹಾಗಾಗಿಯೇ ಪಕ್ಷ ಭಾರಿ ಗೆಲುವು ಪಡೆದಿದ್ದು ಮತ್ತು ಪಡೆಯುತ್ತಿರುವುದು. ಹಾಗಾಗಿಯೇ ಇಂತಹ ರಾಜಕೀಯವನ್ನು ‘ಕೋಮುವಾದಿ
ರಾಜಕೀಯ’ ಎನ್ನುವ ಪಕ್ಷಗಳೆಲ್ಲವೂ ಜನರ ಆಕ್ರೋಶಕ್ಕೆ ಬಲಿಯಾಗಿ ಹೋಗಿವೆ. ಸಿದ್ಧಾಂತದ ಎರಡನೆಯ ಭಾಗ ಬಲವಾದ ರಾಷ್ಟ್ರೀಯತೆ. ದೇಶ ರಾಜಕೀಯವಾಗಿ, ಮಿಲಿಟರಿ ಶಕ್ತಿಯಲ್ಲಿ ಬಲವಾಗಿರಬೇಕು. ಸೂಪರ್ ಪವರ್ ದೇಶಗಳ ಸಾಲಿನಲ್ಲಿ ನಿಂತುಕೊಳ್ಳ ಬೇಕು ಎನ್ನುವ ಬಯಕೆಯನ್ನು ಪ್ರತಿ ಬಿಂಬಿಸುವ ಅಂಶ ಇದು.

ಜಾಗತಿಕ ವ್ಯವಸ್ಥೆ ತೀವ್ರ ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ದೇಶ ಗಟ್ಟಿಯಾಗಿರಬೇಕು ಎನ್ನುವುದು ಜನರ ಭಾವನೆ. ಗಟ್ಟಿ ನಿರ್ಣಯ ಗಳನ್ನು ತೆಗೆದುಕೊಳ್ಳಬಲ್ಲ ನಾಯಕರು ಬೇಕು. ಕೇಂದ್ರ ಸರಕಾರ ಕಾಶ್ಮೀರದ ವಿಷಯದಲ್ಲಿ ತೆಗೆದುಕೊಂಡು ನಿರ್ಣಯ, ಚೀನಾಕ್ಕೆ ಸಡ್ಡು ಹೊಡದಿರು ವುದು, ಮಿಲಿಟರಿ ಶಕ್ತಿಯಾಗಿ ಇತ್ತೀಚಿನ ವರ್ಷಗಳಲ್ಲಿ ಬೆಳೆದಿರುವುದು ಜನರ ಮನಸ್ಸಿನಲ್ಲಿದೆ. ಇಂಥ ಗಟ್ಟಿ ರಾಷ್ಟ್ರೀಯತೆಯನ್ನು ಮೋದಿ ಜನರ ಮುಂದೆ ಡೆಮೋನ್‌ಸ್ಟ್ರೇಟ್ ಮಾಡಿ ತೋರಿಸಿದೆ ಕೂಡ. ಪಂಚರಾಜ್ಯ ಚುನಾವಣೆಯಲ್ಲೂ ಜನ ಮತ ನೀಡಿದ್ದು ರಾಷ್ಟ್ರೀಯ ವಿಷಯಗಳ ಆಧಾರದ ಮೇಲೆಯೇ.

ಹಾಗಾಗಿಯೇ ಮಣಿಪುರ ಮತ್ತು ಗೋವಾದಲ್ಲಿ ಕೂಡ ಬಿಜೆಪಿ ಗೆದ್ದಿರುವುದು. ಸಿದ್ಧಾಂತದ ಮೂರನೇ ಭಾಗ ಆರ್ಥಿಕ ನೀತಿ. ದೇಶವನ್ನು ದೀರ್ಘಕಾಲ ಬಡತನದಲ್ಲಿ ಇಟ್ಟಿದ್ದು ಕಾಂಗ್ರೆಸ್ ಮತ್ತು ಅಂತಹ ಮಾದರಿಯ ಸಮಾಜವಾದಿ ರಾಜಕೀಯ. ಹಾಗೆಯೇ ಬಿಜೆಪಿ ಸತತವಾಗಿ ಎತ್ತಿಹಿಡಿದ ಆರ್ಥಿಕ ಉದಾರೀಕರಣದಿಂದಾಗಿ ದೇಶದಲ್ಲಿ ಲಕ್ಷ ಲಕ್ಷ ಉದ್ಯೊಗಗಳು ಹುಟ್ಟಿಕೊಂಡವು, ಕೋಟಿಗಟ್ಟಲೆ ಜನ ನವ ಶ್ರೀಮಂತ ರಾದರು ಎಂಬ ಭಾವನೆ ಬೇರೂರಿದೆ. ಮುಖ್ಯವಾಗಿ ಯುವಜನತೆಯನ್ನು ಆಕರ್ಷಿಸಿದೆ ಬಿಜೆಪಿಯ ಆರ್ಥಿಕ ನೀತಿ. ಬಿಜೆಪಿ ಗೆಲುವಿನ ಎರಡನೆಯ ಕಾರಣ ನಾಯಕತ್ವ. ಗಮನಿಸಬೇಕು. ಬಿಜೆಪಿ ಪಕ್ಷದ ಸಂಘಟನೆ ಶಿಸ್ತಿನದು. ಕೇಂದ್ರ ಮಟ್ಟದಲ್ಲಿ ಕಚ್ಚಾಟಗಳಿಲ್ಲ. ಮತ್ತು ರಾಜ್ಯದ ಕಚ್ಚಾಟಗಳನ್ನು ಹತೋಟಿ ಮಾಡುವ ಶಕ್ತಿ ಕೇಂದ್ರಕ್ಕಿದೆ.

ಸಚಿವರು, ನಾಯಕರು ತಮಗೆ ನೀಡಿದ ಜವಾಬ್ದಾರಿಯನ್ನು ಬಿಟ್ಟು ಬೇರೆ ಮಾತನಾಡುವುದಿಲ್ಲ. ಪಕ್ಷದ ಕುರಿತು ಮಾತನಾಡುವವರು ಕೇವಲ ಜೆ.ಪಿ.ನಡ್ಡಾ ಅಥವಾ ಅಮಿತ್ ಶಾ. ಸಚಿವರು ಖಾತೆಗಳ ಕುರಿತು ಮಾತನಾಡುತ್ತಾರೆ. ಬೇರೆ ಮಾತನಾಡುವುದಿಲ್ಲ. ಪ್ರಧಾನಿ ಮೋದಿ ಸುಪ್ರೀಂ ನಾಯಕರು ಮತ್ತು ಒಂದು ರೀತಿಯಲ್ಲಿ ದೇಶದ ಧಾರ್ಮಿಕ ಅನುಮತಿ ಕೂಡ ಹೊಂದಿರುವವರು. ಅವರ ವ್ಯಕ್ತಿತ್ವದಲ್ಲಿ ಧಾರ್ಮಿಕ ಮತ್ತು ರಾಜಕೀಯ ನಾಯಕತ್ವ ಸಮ್ಮಿಳಿತಗೊಂಡಿವೆ. ಹಾಗಾಗಿ ಮೋದಿ ಹಿಂದಿನ ಎಲ್ಲ ಪ್ರಧಾನಿಗಳಿಗಿಂತಲೂ ಹೆಚ್ಚಿನ ಶಕ್ತಿ ಮತ್ತು ಜನಪ್ರಿಯತೆ ಹೊಂದಿರುವ ಕರಿಷ್ಮಾಟಿಕ್ ನಾಯಕ.

ಪಕ್ಷದ, ಸರಕಾರದ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವುದು ಪ್ರಧಾನಿ ನಾಯಕತ್ವದ ಕೋರ್ ಕಮಿಟಿ. ಜನರ ಜತೆ ಸಂವಹನ, ಡೆಲಿಗೇಶನ್ ಮಾಡುವುದು, ಜವಾಬ್ದಾರಿಗಳನ್ನು ಗುರುತಿಸಿ ನಿರ್ವಹಣೆ ಹಂಚುವುದು, ಸರಕಾರದ ಗುಣಮಟ್ಟ ರಕ್ಷಣೆ ಪ್ರಧಾನಿ ಮೋದಿ ಯವರ ಕೆಲಸ. ಅವರ ದೇಶಕ್ತಿಯ ಕುರಿತು, ಬಿಗು ಆಡಳಿತದ ಕುರಿತು, ಮೇಲಿನ ಮಟ್ಟದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿರುವ ಕುರಿತು ಯಾರಿಗೂ ಅನುಮಾನಗಳಿಲ್ಲ. ಮೇಲಿಂದ ಮೇಲೆ ಬರುತ್ತಿರುವ ವಿದೇಶಿ ನೀತಿಗೆ ಸಂಬಂಧಪಟ್ಟ ಸಂಕಷ್ಟಗಳ ಸಮಯದಲ್ಲಿ ಅವರು ತೋರುತ್ತಿರುವ ಮಾನಸಿಕ ಸ್ಥಿರತೆ ಮತ್ತು ದಕ್ಷತೆಗಳ ಕುರಿತೂ ಅನುಮಾನವಿಲ್ಲ.

ಹೀಗಾಗಿ ನೆಹರು, ಇಂದಿರಾ, ವಾಜಪೇಯಿ ಅವರಿಗಿಂತಲೂ ತೂಕದಲ್ಲಿ ಮೋದಿ ಒಂದು ಗುಂಜಿ ಜಾಸ್ತಿಯೇ ಇರುವ ಮಹಾನಾಯಕ. ಇನ್ನು ಮೂರನೆಯ ಹಾಗೂ ಎಲ್ಲ ಪಕ್ಷಗಳು ಬಿಜೆಪಿಯಿಂದ ಕಲಿಯಬೇಕಾಗಿರುವ ವಿಷಯ; ಅದು ಕಾರ್ಯಕರ್ತರನ್ನು ಗುರುತಿಸುವ ಮತ್ತು ಬೆಳೆಸುವ ರೀತಿ. ಪಕ್ಷದಲ್ಲಿ ಕುಟುಂಬ ರಾಜಕೀಯವಿಲ್ಲ. ಪಕ್ಷ ಒಂದಲ್ಲ ಒಂದು ದಿನ ತಮಗೆಲ್ಲರಿಗೂ ಗೌರವ ನೀಡುತ್ತದೆ ಎನ್ನುವುದು
ಕಾರ್ಯಕರ್ತರಿಗೆ ಗೊತ್ತಿದೆ. ಸಾಧಾರಣ ಕಾರ್ಯಕರ್ತರನ್ನು ಪಕ್ಷ ರಾಜ್ಯಸಭೆಯ, ವಿಧಾನ ಪರಿಷತ್‌ನ ಸದಸ್ಯರನ್ನಾಗಿ ನೇಮಿಸಿದೆ. ದಕ್ಷರನ್ನು ಸಮರ್ಥರನ್ನು ಗುರುತಿಸಿ ಬಳಸಿಕೊಳ್ಳುತ್ತದೆ.

ಪಕ್ಷದೊಳಗೆ ಬಲವಾದ ಸಂವಹನ ಚಾನೆಲ್‌ಗಳಿವೆ. ಮೊದಲು ಕಾಡರ್ ಬೇಸ್ಡ ಪಕ್ಷವಾಗಿದ್ದ ಬಿಜೆಪಿ ಈಗ ಮಾಸ್ ಬೇಸ್ಡ ಪಕ್ಷವಾಗಿದ್ದರೂ ಶಿಸ್ತು ಹೋಗಿಲ್ಲ. ಬಿಜೆಪಿಯ ಸೋದರ, ಸಹಸಂಘಟನೆಗಳು ಕೂಡ ಪಕ್ಷಕ್ಕೆ ಕಾಡರ್ ಶಿಸ್ತನ್ನು ನೀಡುತ್ತವೆ. ಕಾರ್ಯಕರ್ತರಿಗೆ ಪಕ್ಷದ ಸಿದ್ಧಾಂತ ಸ್ಪಷ್ಟವಾಗಿ ಗೊತ್ತಿದೆ. ಬೇರೆ ಪಕ್ಷದ ಕಾರ್ಯಕರ್ತರುಗಳಿಗೆ ತಮ್ಮ ಪಕ್ಷದ ಸಿದ್ಧಾಂತದ ಅರಿವಿನ ಕೊರತೆ ಇದೆ. ಹಾಗಾಗಿ ಅವರಿಗೆ ಜನರಿಗೆ ಏನು ಹೇಳುವುದು ಎನ್ನುವ ಕುರಿತು ಗೊಂದಲವಿದೆ.

ಮತ್ತು ಬಿಜೆಪಿ ಕಾರ್ಯಕರ್ತರೊಳಗೆ ಇರುವ, ಹುಮ್ಮಸು ತುಂಬಬಲ್ಲಂತಹ ಕಾರಣಗಳು; ಉದಾಹರಣೆಗೆ ದೇಶಭಕ್ತಿ, ಧರ್ಮ ಇಂತಹ ವಿಚಾರಗಳು ಬೇರೆ ಪಕ್ಷಗಳಿಗೆ ಇದ್ದಂತಿಲ್ಲ. ಹಾಗಾಗಿ ಅಲ್ಲಿ ಕಾರ್ಯಕರ್ತರಿಗೆ ಗುರಿಗಳು ಸ್ಪಷ್ಟವಿಲ್ಲ. ಕಾರ್ಯಕರ್ತರಲ್ಲಿ ಶಕ್ತಿ ತುಂಬುವುದು ಮಹತ್ತಾದ ಗುರಿ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿಯೂ ಒಂದು ದೊಡ್ಡ ಗುರಿ ಮನಸ್ಸನ್ನು ಮುತ್ತಿಕೊಂಡಿತ್ತು. ಘನ ಆದರ್ಶ ತುಂಬಿಕೊಂಡಿತ್ತು. ಅಂತಹ ಆದರ್ಶಗಳೇ ಜನರಿಗೆ ಲಾಠಿಗೆ ತಲೆಯೊಡ್ಡುವ ಶಕ್ತಿ ನೀಡಿದ್ದು. ಆದರೆ ಹೋರಾಡುವುದು ಯಾಕೆ ಎನ್ನುವುದು ಸ್ಪಷ್ಟವಿಲ್ಲದಾಗ ಕಾರ್ಯಕರ್ತರು ಹೋರಾಡುವುದಾದರೂ ಹೇಗೆ? ಇದು ಬೇರೆ ಪಕ್ಷಗಳ ಸಮಸ್ಯೆ.

ಇಂದು ಬಿಜೆಪಿಗೆ ಸವಾಲುಗಳೇ ಇಲ್ಲ ಎಂದೇನೂ ಅಲ್ಲ. ಹೊಸ ಸವಾಲುಗಳೂ ಹುಟ್ಟಿಕೊಂಡಿವೆ. ಪಶ್ಚಿಮ ಬಂಗಾಳದ ಹಾಗೂ ಪಂಜಾಬ್‌ನ ಚುನಾವಣೆಗಳ ಫಲಿತಾಂಶ ಬಿಜೆಪಿ ಎದುರಿಸುತ್ತಿರುವ ಸವಾಲನ್ನು ಹೇಳಿದೆ. ಅದೇನೆಂದರೆ ಉಪಸಂಸ್ಕೃತಿಗಳು,
ಪ್ರಾದೇಶಿಕ ಸಂಸ್ಕೃತಿಗಳು ಬಲವಾಗಿ ಇರುವ ರಾಜ್ಯಗಳಲ್ಲಿ ಬಿಜೆಪಿಗೆ ಸಮಸ್ಯೆಯಿದೆ. ಅಲ್ಲಿ ಕಾಂಗ್ರೆಸ್‌ನ ಪ್ರಶ್ನೆ ಇಲ್ಲ. ಸವಾಲನ್ನೊಡ್ಡು ತ್ತಿರುವುವು ಪ್ರಾದೇಶಿಕ ಪಕ್ಷಗಳು. ಅಂದರೆ ಪ್ರಾದೇಶಿಕ ಭಾವನೆಗಳ, ಸಂಸ್ಕೃತಿಯ ಮೇಲೆ ನಿಂತ ಪಕ್ಷಗಳು ಮತ್ತು ಅಂತಹ ಭಾವನೆ ಗಳನ್ನು ಕೆರಳಿಸಿ, ಬಳಸಿಕೊಳ್ಳಲ್ಲ ನಾಯಕರು. ಅಂತಲ್ಲಿ ನೇರ ಸ್ಪರ್ಧೆ ಇರುವುದು ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷದ ನಡುವೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬಿಜೆಪಿಯನ್ನು ಸುಲಭವಾಗಿ ಹೊರಗಿನವರು ಎಂದು ಕರೆದುಬಿಟ್ಟರು. ಮತ್ತು ಒಂದು ರೀತಿ
ಯಲ್ಲಿ ಬಂಗಾಲದವರಿಗೂ ಹಾಗೆ ಅನಿಸಿತು.

ಈಗ ತೆಲಂಗಾಣದ ಕೆ.ಸಿ.ಆರ್. ಅಂತಹ ರಾಗ ಹಾಡಿದ್ದಾರೆ. ಇಂತಲ್ಲಿ ಪ್ಯಾನ್ ಇಂಡಿಯನ್ ಸಂಸ್ಕೃತಿಗಿಂತಲೂ ಪ್ರಾದೇಶಿಕ ಸಂಸ್ಕೃತಿ ಗಳು ಬಲವಾಗಿವೆ. ಮತ್ತು ಇಂತಲ್ಲಿ ಉಪಸಂಸ್ಕ್ರೃತಿಗಳು ಬಿಜೆಪಿಯ ಸಾಂಸ್ಕೃತಿಕ ರಾಜಕೀಯ ಹಾಗೂ ರಾಷ್ಟ್ರೀಯತೆಯ ರಾಜಕೀಯದ ಪರಿಧಿಯ ಹೊರಗಡೆಯೇ ಉಳಿದು ಹೋಗಿವೆ. ಅಂತಹ ಉಪಸಂಸ್ಕೃತಿಗಳಿಗೆ ರಾಷ್ಟ್ರೀಯ ಸಂಸ್ಕೃತಿ ತಮ್ಮನ್ನು ನುಂಗಿ ಹಾಕಿ ಬಿಡಬಹುದು ಎಂಬ ಭಯ ಇದೆ. ಹೀಗೆ ಇಂತಹ ಪ್ರದೇಶಗಳಲ್ಲಿ ರಾಷ್ಟ್ರೀಯ ಸಂಸ್ಕೃತಿಯ ಕುರಿತಾಗಿ ಇರುವ ಭಯವನ್ನು ಎನ್‌ಕ್ಯಾಶ್ ಮಾಡಿಕೊಂಡೇ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡಿರುವುದು. ಮತ್ತು ಈ ಹಿನ್ನೆಲೆಯಲ್ಲಿಯೇ ಅವು ಬಿಜೆಪಿಯನ್ನು ವಿರೋಧಿಸುವುದು.

ಅವುಗಳಿಗೂ ಬಿಜೆಪಿಯ ಆರ್ಥಿಕ ನೀತಿಯ ಕುರಿತು ತಕರಾರಿಲ್ಲ. ಹಾಗಾಗಿಯೇ ಬಿಜೆಪಿ ಅಲ್ಲಿ ಎರಡನೆಯ ಪಕ್ಷವಾಗಿ ಹೊರಹೊಮ್ಮು ತ್ತಿರುವುದು. ಇಂತಹ ಸಮಸ್ಯೆ ಬಿಜೆಪಿಗೆ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಮತ್ತು ಮಹಾರಾಷ್ಟ್ರಗಳಲ್ಲಿ ಎದುರಾಗುವ ಸಂಭವವಿದೆ. ಡಿಎಂಕೆ, ಶಿವಸೇನೆ, ಎನ್‌ಸಿಪಿಯಂತಹ ಪಕ್ಷಗಳು ಬಿಜೆಪಿಗೆ ಪ್ರಾದೇಶಿಕವಾಗಿ ಟಕ್ಕರ್ ಕೊಡುತ್ತಿರುವ ಕಾರಣ ಇದು. ಇವೆಲ್ಲವೂ ಸೇರಿ ಒಂದು ಕಾಮನ್ ಒಕ್ಕೂಟವನ್ನು ಬಿಜೆಪಿಯ ವಿರುದ್ಧ ಹುಟ್ಟುಹಾಕಿಕೊಂಡರೆ ಅವು ಪಾರ್ಲಿಮೆಂಟರಿ ಚುನಾವಣೆಗಳಲ್ಲಿ ಸುಮಾರು ಎರಡು ನೂರು ಸ್ಥಾನಗಳಲ್ಲಿ ಬಲವಾದ ಪೈಪೋಟಿ ನೀಡುವ ಸಾಧ್ಯತೆಯಿದೆ.

ಪ್ರಾದೇಶಿಕ ಪಕ್ಷಗಳ ಕನ್ ಪೆಡರೇಶನ್ ಬಿಜೆಪಿಯ ಮುಂದಿರುವ ಸವಾಲು. ವಿಷಯ ಪ್ರಾದೇಶಿಕ ಪಕ್ಷಗಳಿಗೆ ಗೊತ್ತಿದೆ ಕೂಡ. ಹಾಗಾಗಿ ಅವು ಅಂತಹುದೊಂದು ಫೆಡರೇಶನ್ ಅನ್ನು ಸ್ಥಾಪಿಸಿಕೊಳ್ಳುವ ಮಾತನಾಡುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಬಿಜೆಪಿ ಮಾಡ
ಬೇಕಿರುವುದೆಂದರೆ ಇಂತಹ ರಾಜ್ಯಗಳಲ್ಲಿ ಬಿಜೆಪಿ ಯನ್ನೇ ಧಿಕ್ಕರಿಸುವಂತೆ ಕಾಣುವ ಉಪಸಂಸ್ಕೃತಿಯ ಪರವಾಗಿರುವ, ಹೈಕಮಾಂಡ್‌ಗೆ ಬಗ್ಗದಂತೆ ಕಾಣುವ ನಾಯಕರುಗಳನ್ನು ಹುಟ್ಟು ಹಾಕುವುದು. ಉದಾಹರಣೆಗೆ ಕರ್ನಾಟಕದ ಯಡಿಯೂರಪ್ಪನವರಂತಹ ಬಲವಾದ ನಾಯಕರುಗಳನ್ನು ಅಂತಹ ರಾಜ್ಯಗಳಲ್ಲಿ ಸೃಷ್ಟಿಸುವುದು. ಮತ್ತು ಅವರಿಂದ ತಮ್ಮ ಉಪಸಂಸ್ಕೃತಿಯ ಸ್ವಾಯತ್ತತೆಯ ಭಾಷೆಯನ್ನು ಮಾತನಾಡಿಸುವುದು. ಅಂದರೆ ತಮ್ಮ ಮೇಲೆ ಬಿಜೆಪಿ ರಾಷ್ಟ್ರೀಯ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಭಾವನೆ ಅಲ್ಲಿನ ಜನರಿಗೆ ಬರದ ರೀತಿಯಲ್ಲಿ ವ್ವವಹರಿಸಬೇಕು.

ಲೋಕಲ್ ಪ್ರತಿರೋಧವನ್ನು ಕ್ಯಾರಿ ಮಾಡುವ ಭಿನ್ನಮತೀಯ ನಾಯಕರುಗಳನ್ನು ತಮ್ಮ ಪಕ್ಷದೊಳಗೇ ಸೃಷ್ಟಿಸುವುದು. ಹಾಗಾದಲ್ಲಿ ಬಿಜೆಪಿ ಇಂತಹ ರಾಜ್ಯಗಳನ್ನು ಕೂಡ ಗೆಲ್ಲಲು ಸಾಧ್ಯವಾಗಬಹುದು. ಇದೇ ಕಾರಣಕ್ಕಾಗಿಯೇ ಕೆಲವೊಮ್ಮೆ ಸಬ್ ನ್ಯಾಶನಲಿಸ್ಟ್ ನಾಯಕತ್ವಗಳು, ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸುವ ಪಕ್ಷಗಳು ಬಲವಾಗಿಲ್ಲದಿದ್ದಲ್ಲಿ ಬೇರೆ ದಾರಿ ಇಲ್ಲದೆ ಜನ ಆಪ್ ಅನ್ನು ಗೆಲ್ಲಿಸುತ್ತಿ
ರುವುದು. ಬಿಜೆಪಿಯನ್ನು ವಿರೋಧಿಸುವುದು ಅನಿವಾರ್ಯದ ಜನ ಆಪ್ ಅನ್ನು ಬೆಂಲಿಸುತ್ತಾರೆ. ಅಂದರೆ ಬಿಜೆಪಿಯದೇ ಸ್ವರೂಪ ಹೊಂದಿ ರುವ, ಆದರೆ ಬಿಜೆಪಿಯ ವಿರುದ್ಧ ಮಾತನಾಡುವ ಪಕ್ಷವೊಂದು ಗೆಲ್ಲುವುದು. ಉಪಸಂಸ್ಕೃತಿಗಳನ್ನು ಮ್ಯಾನೇಜ್ ಮಾಡುವುದು ಈಗ ಬಿಜೆಪಿ ಮುಂದಿರುವ ಸವಾಲು.