Saturday, 23rd November 2024

ಬಿರುಬೇಸಗೆಯ ನೆನಪುಗಳು

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಒಮ್ಮೆ ರಾತ್ರಿ ಮಲಗಿದ್ದಾಗ, ಅವರು ಹೊದ್ದಿದ್ದ ಹೊದಿಕೆಯ ಮೇಲೆ ಏನೋ ಬಿದ್ದಂತಾಯಿತು. ದಡಬಡಾಯಿಸಿ ಎದ್ದು ನೋಡಿದರೆ, ಒಂದು ಕಟ್ಟು ಹಾವು ಅವರ ಮೇಲೆ ಬಿದ್ದಿತ್ತು! ಆ ನಂತರ, ಎಷ್ಟೇ ಸೆಕೆ ಇದ್ದರೂ ಅವರು ಹೊರಗೆ ಮಲಗುತ್ತಿರಲಿಲ್ಲ, ಸಹಿಸಿಕೊಂಡು ಒಳಗೇ ಮಲಗುತ್ತಿದ್ದರು.

ನಮ್ಮ ಊರಲ್ಲಿ ಎಪ್ರಿಲ್ – ಮೇ ಎಂದರೆ ಬಿರುಬೇಸಗೆ. ಜೂನ್ ಮೊದಲ ವಾರ ನಮ್ಮೂರಿಗೆ ತಪ್ಪದೇ ಭೇಟಿಕೊಡುತ್ತಿದ್ದ ಮಳೆಯು ಭೂಮಿಗೆ ತಂಪೆರೆಯುವ ತನಕ ಬಿಸಿಲು, ಬೆವರುಗಳದ್ದೇ ಸಾಮ್ರಾಜ್ಯ. ನಮ್ಮೂರು ಕರಾವಳಿಗೆ ಹತ್ತಿರ ಇದ್ದುದರಿಂದ, ತೇವಾಂಶ ಜಾಸ್ತಿ, ಬೆವರೂ ಜಾಸ್ತಿ, ಅದರಿಂದಾಗುವ ಬೆವರು ಸಾಲೆ, ಮೈ ಉರಿ ಎಲ್ಲವೂ ಜಾಸ್ತಿ.

ಬಾಲ್ಯಕಾಲದಲ್ಲಿ ಇದೇ ಸಮಯದಲ್ಲಿ ನಮಗೆ ಪರೀಕ್ಷೆಗಳೂ ಇರುತ್ತಿದ್ದವು. ಇತ್ತ, ಕೃಷಿ ಪ್ರಧಾನವಾಗಿದ್ದುದರಿಂದ, ಈ ಬೇಸಗೆಯ ನಡುವೆಯೂ ಅಗೇಡಿಯಲ್ಲಿ ಬತ್ತ ಬಿತ್ತುವ ಸಂಪ್ರದಾಯ ನಮ್ಮೂರಿನಲ್ಲಿ ಇದೆ. ಇಂದಿಗೂ ಸ್ಥಳೀಯರಿಗೆ ಇದರಲ್ಲಿ ಅಚ್ಚರಿ ಕಾಣದು. ಆದರೆ ನಡು ಬೇಸಗೆಯಲ್ಲಿ ಬತ್ತ ಬಿತ್ತಿ, ಅದರಿಂದ ಅಗೆ (ಸಸಿ) ಮಾಡಿ, ಜೂನ್‌ನಲ್ಲಿ ಮಳೆ ಬಂದ ತಕ್ಷಣ ನಾಟಿ ಮಾಡುವ ಆ ಒಂದು ಪ್ರಕ್ರಿಯೆಯ ಹಿಂದೆ ಪುರಾತನ ಜಾನಪದೀಯ ಜ್ಞಾನವಿದೆ ಮತ್ತು ಇದನ್ನು ಕಂಡು ನನಗಂತೂ ಅಚ್ಚರಿ ಎನಿಸುತ್ತದೆ.

ಬಿರು ಬೇಸಗೆಯಲ್ಲಿ ಬಿತ್ತನೆ ಮಾಡಿದರೆ ಬೀಜಗಳು ಬಿಸಿಲಿಗೆ ಸುಟ್ಟುಹೋಗುವುದಿಲ್ಲವೆ? ನಮ್ಮೂರಲ್ಲಿ ನವೆಂಬರ್ – ಡಿಸೆಂಬರ್‌ಗೆ ಮರೆ ಯಾದ ಮಳೆಯು, ನಂತರ ಬರುವುದು ಸಾಮಾನ್ಯವಾಗಿ ಮೇ ಕೊನೆಯ ವಾರದಲ್ಲಿ. ಇದರ ನಡುವೆ ಬಿಸಿಲಿನದೇ ಸಾಮ್ರಾಜ್ಯ.
ಹಾಗಿದ್ದಾಗ, ಇಂತಹ ಬೇಸಗೆಯಲ್ಲಿ ಬಿತ್ತಿದ ಬೀಜಗಳು ಮೊಳಕೆಯೊಡೆಯುವುದಾದರೂ ಹೇಗೆ? ಇದರ ಬಗ್ಗೆ ಕುತೂಹಲಗೊಂಡು ಕೇಳಿ ದಾಗ, ನಮ್ಮ ಅಮ್ಮಮ್ಮ (ಅವರೀಗ ಇಲ್ಲ) ನೀಡಿದ ವಿವರಣೆಯ ಸಾರಾಂಶ ಇಷ್ಟು – ಯುಗಾದಿ ಕಳೆದ ನಂತರ, ‘ಹತ್ತರಾವಧಿ’ ಎಂಬ ದಿನಗಳಲ್ಲಿ ಅಗೇಡಿಯಲ್ಲಿ ತಂಪು ಕೂಡಿ ಬರುತ್ತದೆ (ಅಂದರೆ ಭೂಮಿಯ ಆಳ ಪ್ರದೇಶದಿಂದ ನೀರಿನಂಶ ಮೇಲ್ಮೈಗೆ ಬರುತ್ತದೆ), ಆಗ ಬಿತ್ತನೆ ಮಾಡಿದರೆ, ಅಗೆ ಚೆನ್ನಾಗಿ ಹುಟ್ಟುತ್ತದೆ.

ಅದಾಗಿ ಒಂದರಿಂದ ಒಂದೂವರೆ ತಿಂಗಳ ನಂತರ ಮಳೆ ಬಂದಾಗ, ಅಂದರೆ ಜೂನ್ ಎರಡನೆಯ ವಾರದ ಹೊತ್ತಿಗೆ ಇದೇ ಅಗೆಯನ್ನು ಕಿತ್ತು ನಾಟಿ ಮಾಡಬಹುದು. ಮತ್ತು ಇದರಿಂದ ಲಾಭವೆಂದರೆ, ಬೇಗನೆ ಕುಯ್ಲು ಮಾಡಬಹುದು. ನಮ್ಮ ಅಮ್ಮಮ್ಮ ಹೇಳಿದ ‘ತಂಪು ಕೂಡಿ ಬರುವುದು’ ಪರಿಕಲ್ಪನೆಯು ಒಂದು ಅಚ್ಚರಿಯ ವಿಚಾರ ಮತ್ತು ಈ ಪ್ರಕೃತಿಯ ಅದ್ಭುತ. ಎಪ್ರಿಲ್ ಎರಡನೆಯ ವಾರ ಕಳೆದ ನಂತರ
(ಯುಗಾದಿಯ ನಂತರ) ಬಿರು ಬೇಸಗೆ ಇದ್ದರೂ ನೆಲದಾಳದಿಂದ ನೀರಿನ ಅಂಶ ಮೇಲಕ್ಕೆ ಬರುವುದರಿಂದಾಗಿ, ಆಗ ಬಿತ್ತನೆ ಮಾಡಬ ಹುದು ಎಂದು ಅವರು ತಮ್ಮ ಹಿಂದಿನವರಿಂದ ಕೇಳಿ ತಿಳಿದಿದ್ದರು.

ಆಗ ಬಿಸಿಲಿದ್ದರೂ, ಬತ್ತದ ಸಸಿಗಳು ಸೊಂಪಾಗಿ ಬೆಳೆಯುವುದು ನಿಜ; ಅವನ್ನೇ ಕಿತ್ತು ಜೂನ್‌ನಲ್ಲಿ ನಾಟಿ ಮಾಡುವುದು ಪದ್ಧತಿ. ಬಿರು ಬೇಸಗೆ ಎಂದಾಕ್ಷಣ ಈ ‘ಹತ್ತರಾವಧಿ’ಯ ನೆನಪಾಯಿತು. ಕೃಷಿ ಕುಟುಂಬದಿಂದ ನನ್ನಂತಹ ಎಲ್ಲರಿಗೂ ಇಂತಹದೇ ವಿಭಿನ್ನ ಅನುಭವ ಗಳಾಗಿರಲೇಬೇಕು. ಬೇಸಗೆ, ಬಿಸಿಲು, ಕೃಷಿ ಚಟುವಟಿಕೆಗಳು, ಅದರಲ್ಲಿ ನಾವು ಮಕ್ಕಳು ಸಹಾಯ ಮಾಡುವುದು, ಅದೇ ವೇಳೆಯಲ್ಲಿ ಬೇಸಗೆಯಲ್ಲಿ ಬರುವ ಪರೀಕ್ಷೆಗಳು! ಮಾರ್ಚ್ ಎಪ್ರಿಲ್ ಬಂತೆಂದರೆ, ನಮಗೆ ವಿದ್ಯಾರ್ಥಿಗಳಿಗೆ ರಜಾ ದಿನಗಳು – ಪರೀಕ್ಷೆಗಳು ಮುಗಿದು, ಫಲಿತಾಂಶ ನಿರೀಕ್ಷಿಸುತ್ತಾ ಕಾಲಕಳೆಯುವ ದಿನಗಳು.

ಅದೇ ಸಮಯದಲ್ಲಿ ಭಯಂಕರ ಎನಿಸುವ ಬಿಸಿಲು. ನಮ್ಮ ಮನೆಯ ಮುಂದಿದ್ದ ಒಂದು ಕಿ.ಮೀ. ಉದ್ದದ ಗದ್ದೆ ಬಯಲು ಸಂಪೂರ್ಣ
ಬೋಳು ಬೋಳು! ಆಗ ನಮ್ಮೂರಿನಲ್ಲಿ ಮಲೆನಾಡು ಗಿಡ್ಡ ತಳಿಯ ಹಸು, ಕರು, ಗುಡ್ಡಗಳು ಸಾಕಷ್ಟು ಸಂಖ್ಯೆಯಲ್ಲಿದ್ದವು. ಸಂಜೆ ಹೊತ್ತಿನಲ್ಲಿ ಅವುಗಳನ್ನು ಆ ಬೋಳುಗದ್ದೆಗಳಲ್ಲಿ ಮೇಯಿಸುವುದು ನಮ್ಮ, ಅಂದರೆ ಮಕ್ಕಳ ಕೆಲಸ. ಗದ್ದೆಯಂಚಿನಲ್ಲಿ, ತೋಡಿ ನಂಚಿನಲ್ಲಿ ಅಲ್ಲಲ್ಲಿದ್ದ ಹುಲ್ಲನ್ನು, ಎಳೆ ಸೊಪ್ಪನ್ನು ಅವು ಹುಡುಕಿ ಹುಡುಕಿ ತಿನ್ನುತ್ತಿದ್ದವು. ನಾವು ಗೋವೆ ಬೀಜವನ್ನು ಹುಡುಕಿ ಕಿತ್ತು, ಗದ್ದೆಯಲ್ಲೇ ಸಣ್ಣ ಬೆಂಕಿ
ಉರಿಸಿ, ಅವನ್ನು ಸುಟ್ಟು ತಿನ್ನುತ್ತಿದ್ದುದೂ ಉಂಟು. ತೋಡಿನಂಚಿನ ಕಾಟು ಮಾವಿನ ಮರಗಳ ಅಡಿ ಬಿದ್ದ ಹಣ್ಣುಗಳನ್ನು, ಪಕ್ಕದಲ್ಲೇ ಇದ್ದ ಹಕ್ಕಲಿನಲ್ಲಿ ಚೀಂಪಿ ಹಣ್ಣನ್ನು ಕಿತ್ತು ತಿನ್ನುವುದು ನಮ್ಮ ಇನ್ನೊಂದು ಹವ್ಯಾಸ.

ಅಂದಿನ ಶಾಲಾ ಮಕ್ಕಳಿಗೆ ಪರೀಕ್ಷೆಗಳು ನಡೆಯುವುದೇ ಬಿರು ಬಿಸಿಲಿನಲ್ಲಿ. ಈಗಿನ ಮಕ್ಕಳಿಗೆ, ಕಳೆದ ಎರಡು ವರ್ಷಗಳಿಂದ ಕಾಲ ಕಾಲಕ್ಕೆ ತರಗತಿಗಳೇ ನಡೆಯದೇ, ಕೆಲವು ಪಾಠಗಳು ಆನ್‌ಲೈನ್‌ನಲ್ಲಿ ನಡೆದು, ಪರೀಕ್ಷೆಗಳನ್ನು ಯಾವ ದಿನ ನಡೆಸುವುದು ಎಂಬ ಗೊಂದಲ ದಿಂದಾಗಿ, ಪರೀಕ್ಷಾ ವೇಳಾಪಟ್ಟಿಯೇ ಮರೆತುಹೋಗಿದೆ ಎನ್ನಬಹುದು! ಇಂದಿನ ಆನ್‌ಲೈನ್ ಕ್ಲಾಸ್ ಮತ್ತು ಪರೀಕ್ಷೆಗಳನ್ನು ನೋಡಿದಾಗ, ಹಳ್ಳಿ ಶಾಲೆಯಲ್ಲಿ ಓದಿದ ನಾವು ತರಗತಿಗಳಿಗಾಗಿ, ವಾರ್ಷಿಕ ಪರೀಕ್ಷೆ ಬರೆಯಲಿಕ್ಕಾಗಿ ಪಡುತ್ತಿದ್ದ ಪಡಿಪಾಟಲನ್ನು ನೆನೆದು ವಿಸ್ಮಯ ಎನಿಸುತ್ತದೆ.

ನನ್ನ ಏಳನೆಯ ತರಗತಿಯ ಪರೀಕ್ಷೆಗಳು ಮಾರ್ಚ್ 20 ರಿಂದ ಆರಂಭವಾಗಿದ್ದವು ಎಂದು ನೆನಪು. ಆಗ ಅದು ಪಬ್ಲಿಕ್ ಪರೀಕ್ಷೆ – ಆದ್ದರಿಂದ ನಮ್ಮ ಶಾಲೆಯಲ್ಲೇ ಪರೀಕ್ಷೆ ಬರೆಯುವ ಅವಕಾಶ ಇರಲಿಲ್ಲ. ನಮ್ಮ ಮನೆಯಿಂದ 6 ಕಿ.ಮೀ. ದೂರದಲ್ಲಿರುವ ಶಂಕರ ನಾರಾಯಣ ಹೈಸ್ಕೂಲು ನಮ್ಮ ಪರೀಕ್ಷಾ ಕೇಂದ್ರ. ಅಪರಿಚಿತ ಶಿಕ್ಷಕರೇ ಪರೀಕ್ಷಾ ಮೇಲ್ವಿಚಾರಕರು. ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೊರಟು, ಅನಿ ವಾರ್ಯ ಎನಿಸಿದ್ದ ಮೊದಲ 3 ಕಿ.ಮೀ. ನಡೆದು, ಹಾಲಾಡಿ ಬಸ್‌ಸ್ಟಾಪ್ ಬಳಿ ಬಂದು, ನಂತರದ 3 ಕಿ.ಮೀ. ಯನ್ನು ಬಸ್‌ನಲ್ಲಿ ಪಯಣಿಸಿ, ಪರೀಕ್ಷಾಕೇಂದ್ರ ತಲುಪಬೇಕಿತ್ತು.

ಸಂಜೆ ಪುನಃ ಅದೇ ರೀತಿ, ಮೊದಲ ಮೂರು ಕಿ.ಮೀ.ಯನ್ನು ಬಸ್, ನಂತರದ ಮೂರು ಕಿ.ಮೀ. ನಡಿಗೆ. ಫಲಿತಾಂಶ ನೋಡಲು, ಬಿಸಿಲಿ ನಲ್ಲಿ ನಡೆದುಕೊಂಡೇ ಹೆಡ್ ಮಾಸ್ಟರ್ ಮನೆಗೆ ಹೋಗಬೇಕಿತ್ತು. ಅವರ ಬಳ ಇದ್ದ ಪಟ್ಟಿಯನ್ನು ನೋಡಿ, ‘ಪಾಸಾಗಿದ್ದೀಯಾ’ ಎಂದು ಹೇಳಿ ‘ನೀನು ಇನ್ನಷ್ಟು ಮಾರ್ಕ್ ತೆಗೆಯುತ್ತೀಯಾ ಎಂಬ ನಿರೀಕ್ಷೆ ಇತ್ತು’ ಎಂದು, ನಾನು ಪಡೆದ ಅಂಕಗಳ ಕುರಿತು ಅತೃಪ್ತಿ ವ್ಯಕ್ತಪಡಿ ಸಿದ್ದರು! ಹಳ್ಳಿಯ ಮೂಲೆಯಲ್ಲಿದ್ದ ನಮಗೆಲ್ಲಾ, ಪರೀಕ್ಷೆ ಪಾಸಾದಾಗ ಆಗ ಯಾರೂ ‘ಕಂಗ್ರಾಚುಲೇಷನ್ಸ್’ ಎಂದು ಹೇಳುತ್ತಿರಲಿಲ್ಲ, ಆ ಪದ್ಧತಿಯೇ ನಮ್ಮ ಹಳ್ಳಿಯಲ್ಲಿ ಆಗ ಇರಲಿಲ್ಲ! ನಾನು ಫಸ್ಟ್‌ಕ್ಲಾಸ್ ಅಂಕ ತೆಗೆದದ್ದೇ ಅಂದು ಒಂದು ಸಾಧನೆ.

ಬಿರು ಬೇಸಗೆಯಲ್ಲೇ ಬರುತ್ತಿದ್ದ ಇನ್ನೊಂದು ಪ್ರಮುಖ ಪರೀಕ್ಷೆ ಎಂದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ. ಅದನ್ನು ಬರೆಯಲು ನಾವು ತಾಲೂಕು
ಕೇಂದ್ರವಾಗಿದ್ದ ಕುಂದಾಪುರಕ್ಕೆ ಹೋಗಬೇಕಿತ್ತು! ನಮ್ಮ ಹಳ್ಳಿಯಿಂದ ಪರೀಕ್ಷಾ ಸಮಯಕ್ಕೆ ಬಸ್‌ನಲ್ಲಿ ಹೋಗಿ ಬರೆಯುವುದು ಸಾಧ್ಯವಿರ ಲಿಲ್ಲ ಎಂದು ನಾವು ಏಳೆಂಟು ಮಂದಿ ಮುಂಚಿನ ದಿನವೇ ಅಲ್ಲಿಗೆ ಹೋಗಿ, ಲಾಜ್ ಒಂದರಲ್ಲಿ ರೂಂ ಮಾಡಿದ್ದೆವು. ಸಮುದ್ರಕ್ಕೆ ಹತ್ತಿರದ ಜಾಗವಾಗಿದ್ದರಿಂದ, ಅಲ್ಲಿ ನಮ್ಮೂರಿಗಿಂತಲೂ ಸೆಕೆ, ಬಿಸಿಲು ಜಾಸ್ತಿ. ಬೆಳಗ್ಗೆ ಐದಕ್ಕೇ ಎದ್ದು, ತಣ್ಣೀರು ಸ್ನಾನ ಮಾಡಿ, ಒಂದಷ್ಟು ಪಾಠ ಓದಿ ಪರೀಕ್ಷೆ ಬರೆಯುತ್ತಿದ್ದೆವು. ಒಂದು ವಾರ ಅಲ್ಲೇ ಲಾಜ್‌ನಲ್ಲಿದ್ದು, ಎಲ್ಲಾ ಪರೀಕ್ಷೆಗಳು ಮುಗಿದ ನಂತರ, ರಾತ್ರಿ ಎರಡು ಸಿನಿಮಾ ನೋಡಿ, ಮರುದಿನ ಊರಿಗೆ ವಾಪಸಾದೆವು!

ಆ ಪರೀಕ್ಷೆಯ ಫಲಿತಾಂಶ ಬಂದಾಗಲೂ ಬೇಸಗೆ. ನಂತರದ ಪಿಯುಸಿ ಪರೀಕ್ಷೆಗಳು ಸಹ ಬೇಸಗೆಯಲ್ಲಿ ಬಂದಿದ್ದರೂ, ಆಗ ದೂರದ
ಬೆಂಗಳೂರಿನಲ್ಲಿ ‘ಪೇಪರ್ ಔಟ್’ ಆಗಿ, ಎರಡೆರಡು ಬಾರಿ ಪರೀಕ್ಷೆ ಬರೆಯಬೇಕಾಯ್ತು. ಡಿಗ್ರಿಗೆ ಬರುವಷ್ಟರಲ್ಲಿ ಹೆಚ್ಚಿನ ಪರೀಕ್ಷೆಗಳು ಬೇಸಗೆಯಲ್ಲೇ ನಡೆದರೂ, ಅವುಗಳ ದಿನಾಂಕಗಳು ಹಿಂದು ಮುಂದಾಗಿ, ಬಿರು ಬಿಸಿಲಿಗೂ ಪರೀಕ್ಷೆಗಳಿಗೂ ಇದ್ದ ಅವಿನಾಭಾವ ಸಂಬಂಧ ತುಸು ಏರುಪೇರಾಗಿದ್ದಂತೂ ನಿಜ. ಪರೀಕ್ಷೆಗಳು ಮುಗಿದು ಸುಮಾರು ಎರಡು ತಿಂಗಳುಗಳ ಕಾಲ ನಾವೆಲ್ಲಾ ಮಕ್ಕಳು ಮನೆಯಲ್ಲೇ
ಇರಬೇಕಾಗಿದ್ದರಿಂದ, ಆ ಎರಡು ತಿಂಗಳುಗಳಲ್ಲಿ ಸುರಿವ ಬಿಸಿಲಿನ ಝಳವನ್ನು ಚೆನ್ನಾಗಿ ಅನುಭವಿಸಬೇಕಾಗಿತ್ತು!

ಅದು ಅನಿವಾರ್ಯವಾಗಿದ್ದರೂ, ಆ ಬೇಸಗೆಯಲ್ಲೂ ಸಾಕಷ್ಟು ಮಜಾ ಇದೆ, ವಿಭಿನ್ನ, ವಿಶಿಷ್ಟ ಅನುಭವಗಳಿವೆ. ನಮ್ಮ ಹಳ್ಳಿಯ ಮನೆಯ
ಸುತ್ತಲೂ ಹಾಡಿ, ಹಕ್ಕಲು, ಕುರುಚಲು ಗಿಡಗಳಿದ್ದ ಗುಡ್ಡಗಳೇ ಇದ್ದುದರಿಂದ, ಬೇಸಗೆಯಲ್ಲಿ ಆ ಪರಿಸರದಲ್ಲಿ ನಡೆಯುವ ಪ್ರಕೃತಿಯ ವ್ಯಾಪಾರಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುತ್ತಿದ್ದುದು ಒಂದು ಅದೃಷ್ಟ. ಬಿರು ಬೇಸಗೆಯ ದಿನಗಳಲ್ಲಿ, ನಮಗಿಂತಾ ಸೆಕೆಯ ತಾಪವನ್ನು ಅನುಭವಿಸುವವು ಕೆಲವು ಜೀವಿಗಳು. ಹಾವುಗಳಿಗಂತೂ ಬೇಸಗೆ ಎಂದರೆ ಬಹಳ ಹಿಂಸೆ ಇರಬೇಕು. ಬಿಸಿಲಿನ ತಾಪ ತಾಳ ಲಾರದೆ, ಅವು ಬಿಲದಿಂದ ಹೊರಕ್ಕೆ ಬರುತ್ತವೆ ಎಂಬುದು ನಮ್ಮ ಅಮ್ಮಮ್ಮನ ಟಿಪ್ಪಣಿ.

ಬೇಸಗೆಯಲ್ಲಿ ನಮ್ಮ ಮನೆಯ ಮಾಡುಗಳಲ್ಲಿ ನಾಗರ ಹಾವು, ಕೇರೆ ಹಾವುಗಳು ಓಡಾಡುವುದು ಸಾಮಾನ್ಯ. ಗದ್ದೆ ಬಯಲಿನ ನಡುವೆ ಇದ್ದ ನಮ್ಮ ಹಂಚಿನ ಮನೆಯ ಮಾಡಿನಲ್ಲಿ ಅದೆಷ್ಟೋ ಇಲಿಗಳು ಮನೆಮಾಡಿಕೊಂಡಿದ್ದವು. ಅವುಗಳನ್ನು ಹುಡುಕಿಕೊಂಡು ಹಾವುಗಳು ಬರುತ್ತಿದ್ದವು! ನಾಗರ ಹಾವು ಬಂದರೆ ನಮ್ಮ ಊರಿನಲ್ಲಿ ಸಾಯಿಸುತ್ತಿರಲಿಲ್ಲ. ಕೇರೆಹಾವು ಬಂದರೂ ಸಾಯಿಸುತ್ತಿರಲಿಲ್ಲ, ಓಡಿಸುತ್ತಿದ್ದರು. ಇತರ ವಿಷದ ಹಾವುಗಳು ಬಂದರೆ ಮಾತ್ರ, ಬಡಿದು ಹಾಕುತ್ತಿದ್ದರು.

ವಿಪರೀತ ಬೇಸಗೆ ಇದ್ದಾಗ, ನಮ್ಮ ಅಮ್ಮಮ್ಮ ಮಲಗುತ್ತಿದ್ದುದು ಮನೆ ಎದುರಿನ ಅಂಗಳದಲ್ಲಿ. ಅಡಿಕೆ ಚಪ್ಪರದ ಅಡಿ ಒಂದು ಮರದ ಮಂಚ ಹಾಕಿಕೊಂಡು ಮಲಗುವ ಪರಿಪಾಠ. ಒಮ್ಮೆ ರಾತ್ರಿ ಮಲಗಿದ್ದಾಗ, ಅವರು ಹೊದ್ದಿದ್ದ ಹೊದಿಕೆಯ ಮೇಲೆ ಏನೋ ಬಿದ್ದಂತಾಯಿತು. ದಡಬಡಾಯಿಸಿ ಎದ್ದು ನೋಡಿದರೆ, ಒಂದು ಕಟ್ಟುಹಾವು ಅವರ ಮೇಲೆ ಬಿದ್ದಿತ್ತು! ಆ ನಂತರ, ಎಷ್ಟೇ ಸೆಕೆ ಇದ್ದರೂ ಅವರು ಹೊರಗೆ ಮಲಗುತ್ತಿರಲಿಲ್ಲ, ಸಹಿಸಿಕೊಂಡು ಒಳಗೇ ಮಲಗುತ್ತಿದ್ದರು. ಆಗಿನ್ನೂ ನಮ್ಮ ಹಳ್ಳೀ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೇ ಇದ್ದುದರಿಂದ, ಫೋನ್‌ಗಳಿರಲಿಲ್ಲ.

ಬೇಸಗೆಯ ದಿನಗಳಲ್ಲಿ ಫೋನ್ ಗಳಿಲ್ಲದೇ ರಾತ್ರಿ ಕಳೆಯಬಹುದು ಎಂಬುದಕ್ಕೆ ನಮ್ಮ ಅಂದಿನ ಹಳ್ಳಿಗಳೇ ಉದಾಹರಣೆ. ಬೇಸಗೆಯ ದಿನಗಳಲ್ಲಿ ನಮ್ಮೂರಿನ ಅಚ್ಚರಿ ಎಂದರೆ, ಎಲ್ಲೆಡೆ ದೊರೆಯುತ್ತಿದ್ದ ನಾನಾ ರೀತಿಯ ಹಣ್ಣುಗಳು. ‘ಬೇಸಗೆಯ ಸೆಕೆಯನ್ನು ತಣಿಸಲೆಂದೇ,
ನಮಗೆ ಪ್ರಕೃತಿ ಈ ಹಣ್ಣುಗಳನ್ನು ಇದೇ ತಿಂಗಳುಗಳಲ್ಲಿ ನೀಡುತ್ತಿದೆ’ ಎನ್ನುತ್ತಿದ್ದರು ನಮ್ಮಪ್ಪ. ಎರಡು ತಿಂಗಳುಗಳ ಶಾಲಾ ರಜೆಯಲ್ಲಿ ನಮ್ಮ ಹಳ್ಳಿಯಲ್ಲಿ ಮತ್ತು ನಾಲ್ಕಾರು ದಿನ ನಾವು ‘ಬಿದ್’ಹೋಗುತ್ತಿದ್ದ ನಮ್ಮ ಬಂಧುಗಳ ಮನೆಗಳಲ್ಲಿ ಸಿಗುತ್ತಿದ್ದ ಹಣ್ಣುಗಳ ವೈವಿಧ್ಯ ವಾದರೂ ಅದೆಷ್ಟು!

ಮನೆ ಸುತ್ತಮುತ್ತ ಸಿಗುವ ಹಣ್ಣುಗಳೆಂದರೆ ಕಸಿ ಮಾವು, ಕಾಟು ಮಾವು, ಭಟ್ಕಳ ಮಾವು, ನಾಯಿಭಟ್ಕಳ, ಮುಂಡಪ್ಪ, ಕಾಟು ಮಾವು. ಗದ್ದೆಯಂಚಿನಲ್ಲಿ ಮತ್ತು ಹಾಡಿ ಹಕ್ಕಲುಗಳಲ್ಲಿ ಸಹ ಸಿಗುತ್ತಿದ್ದ ಹಲಸಿನ ಹಣ್ಣುಗಳಲ್ಲೂ ಇಂಬ, ಬಕ್ಕೆ ಎಂಬ ಎರಡು ತಳಿ; ಅವುಗಳಲ್ಲೂ ಒಂದೊಂದು ಮರದ ರುಚಿ ವಿಭಿನ್ನ. ಮನೆ ಹಿಂದಿನ ದರೆಯನ್ನು ಏರಿ ಹೋದರೆ, ಹಲಸಿನ ಚಿಕಣಿ ರೂಪದ ಹೆಬ್ಬಲಸು ಹಣ್ಣುಗಳು. ಒಂದೊಂದು ಮರದಲ್ಲಿ ಸಾವಿರಗಟ್ಟಲೆ ಬಿಡುತ್ತಿದ್ದ ಹೆಬ್ಬಲಿಸಿನ ಹಣ್ಣನ್ನು ತಿನ್ನುವುದೇ ಒಂದು ವಿಶಿಷ್ಟ ಅನುಭವ.

ನಮ್ಮ ಮನೆಯ ಸುತ್ತಲೂ ಗುಡ್ಡ, ಹಾಡಿ, ಹಕ್ಕಲುಗಳು ಎಂದೆನಲ್ಲ, ಅಲ್ಲಿ ಬೇಸಗೆಯಲ್ಲಿ ಸಿಗುತ್ತಿದ್ದ ಸಣ್ಣ ಪುಟ್ಟ ಹಣ್ಣುಗಳ ಹೆಸರುಗಳೇ ವಿಭಿನ್ನ, ರುಚಿಯೂ ಅನನ್ಯ. ಕಿಸ್ಕಾರ, ಬುಕ್ಕಿ, ಗರ್ಚನ, ನೇರಳೆ, ಸೊಳ್ಳೆ, ಚಾರ್ ಹಣ್, ಜುಳ್ಕ, ಮುರಿನ ಹಣ್, ಬೆಳಮಾರು, ಕಾರಿ ಹಣ್ಣು, ಗೋಯ್ ಹಣ್ಣು, ದಾರ್ ಹುಳಿ, ಪನ್ನೇರಳೆ, ಬನ್ನೇರಳೆ, ಚೀಂಪಿ ಹಣ್ಣು.. ಹೀಗೆ ಪಟ್ಟಿ ಬೆಳೆಯುತ್ತದೆ. ಇವುಗಳ ಪೈಕಿ ಗರ್ಚನ ಹಣ್ಣಂತೂ ಥೇಟ್ ಕಪ್ಪು ದ್ರಾಕ್ಷಿಯ ರುಚಿ. ಮುಳ್ಳು ಗಿಡವಾಗಿದ್ದ ಚೀಂಪಿ ಮರದಲ್ಲಿ ಸಿಗುತ್ತಿದ್ದ ಹಣ್ಣು ಗಳನ್ನು ಕೆಂಪುದ್ರಾಕ್ಷಿಗೆ ಹೋಲಿಸಬಹುದು, ರುಚಿಗೂ, ನೋಟಕ್ಕೂ.

ಒಂದೊಂದು ದಿನ ಒಂದೊಂದು ದಿಕ್ಕಿನ ಹಾಡಿ, ಹಕ್ಕಲಿಗೆ ಹೋಗುತ್ತಿದ್ದ ನಾವು ಮಕ್ಕಳು ವೈವಿಧ್ಯಮಯ ಹಣ್ಣುಗಳನ್ನು ಬೇಸಗೆಯುದ್ದಕ್ಕೂ
ತಿನ್ನುತ್ತಿದ್ದೆವು! ಇಂತಹ ವೈವಿಧ್ಯಮಯ ರುಚಿಕರ ಹಣ್ಣುಗಳಿಂದಾಗಿ, ಅವೆಷ್ಟೋ ಖನಿಜಾಂಶಗಳು, ವಿಟಮಿನ್‌ಗಳು ನಮ್ಮ ದೇಹವನ್ನು ಸೇರಿದ್ದವೆ? ಅದರಿಂದಾಗಿ ನಮ್ಮ ಆರೋಗ್ಯ ಉತ್ತಮಗೊಂಡಿತ್ತೆ? ಆದ್ದರಿಂದಲೇ, ಬೇಸಗೆ ಮುಗಿದ ತಕ್ಷಣ, ಜೂನ್ ಮೊದಲ ವಾರದಿಂದ ಸೆಪ್ಟೆಂಬರ್ ತನಕ ಸುರಿವ ಮಳೆಯಲ್ಲೂ ನಮಗೆ ಜ್ವರ ಮೊದಲಾದ ಜಡ್ಡುಗಳು ಕಾಡಿಲ್ಲವೆ? ಇಂತಹ ಪ್ರಶ್ನೆಗಳು ಕ್ಷುಲ್ಲಕ ಎಂದು ಈಗ ಅನಿಸಿದರೂ, ಹಾಡಿ, ಹಕ್ಕಲು, ಗುಡ್ಡಗಳ ನಡುವಿನ ಹಳ್ಳಿಗಳಲ್ಲಿ ಕಳೆಯುವ ಬೇಸಗೆಯ ದಿನಗಳು ನಿಜಕ್ಕೂ ಅನನ್ಯ ಎನಿಸುತ್ತದೆ, ಅಲ್ಲವೆ!