ವಿಶ್ವವಾಣಿ ಕ್ಲಬ್‌ಹೌಸ್ – ೨೪೬
ಶಾಂತಿ ಒಂದೇ ನೀತಿ ಅಲ್ಲ,
ಹಿಂದು ಪುರಾಣಗಳಲ್ಲೂ ಕ್ಷಾತ್ರಧರ್ಮವಿದೆ
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅಧ್ಯಾತ್ಮಿಕ ಚಿಂತಕ ಗ.ನಾ.ಭಟ್ ಪ್ರತಿಪಾದನೆ
ಬೆಂಗಳೂರು: ಜೀವನ ದರ್ಶನದ ಕೊರತೆಯಿಂದ ಬೇರೆಯವರವ ಹುನ್ನಾರಗಳಿಗೆ ಬಲಿಯಾಗುತ್ತಿದ್ದು, ಭಗವದ್ಗೀತೆ ಮಾತ್ರವಲ್ಲ, ಜೀವನ ದರ್ಶನವಿರುವ ರಾಮಾಯಣ, ಮಹಾಭಾರತವನ್ನೂ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಅಧ್ಯಾತ್ಮಿಕ ಚಿಂತಕ ರಾದ ಗ.ನಾ.ಭಟ್ ಹೇಳಿದ್ದಾರೆ.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಪಠ್ಯದಲ್ಲಿ ‘ಭಗವದ್ಗೀತೆ’ ಯಾಕೆ ಬೇಕು? ಕಾರ್ಯ ಕ್ರಮದಲ್ಲಿ ಅರಿವಿನ ಉಪನ್ಯಾಸ ನೀಡಿದ ವರು, ನಮ್ಮ ದೇಶದಲ್ಲೇ ನಾವು ಪರಕೀಯರಾಗಿದ್ದೇವೆ. ನಮ್ಮ ಗುರುತನ್ನು ನಾವೇ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ನಮ್ಮ ಗುರುತನ್ನು ಹಾಳು ಮಾಡಿ ಅದನ್ನು ಸಂಪೂರ್ಣ ನಾಶ ಮಾಡಲು ಒಂದು ವರ್ಗ ಕಾದು ಕುಳಿತಿದೆ. ಯಾವುದೇ ಒಳ್ಳೆಯ ಕೆಲಸ ಮಾಡಲು ಹೊರಟಾಗ ಅಡ್ಡಿ ಮಾಡಲು ಪ್ರಾರಂಭಿಸಿದ್ದಾರೆ. ಇದಕ್ಕೆಲ್ಲಾ ಕಾರಣ ನಮ್ಮಲ್ಲಿನ ಜೀವನ ದರ್ಶನದ ಕೊರತೆ ಎಂದು ಪ್ರತಿಪಾದಿಸಿದರು.
ನಮ್ಮಲ್ಲಿ ಸ್ವಂತಿಕೆ, ಅವಿಭಾಜ್ಯತೆ, ಸ್ವರೂಪ, ಜನಸಂಖ್ಯಾ ಶಾಸ್ತ್ರ ಇರಬೇಕು. ಈ ನಾಲ್ಕೂ ಅಂಶಗಳನ್ನು ನಾಶ ಮಾಡಬೇಕು ಎಂಬುದು ಒಂದು ವರ್ಗದ ಹುನ್ನಾರ. ಈ ರೀತಿಯ ಮನೋಭಾವ ಏಕೆ ಹುಟ್ಟುತ್ತದೆ ಎಂದು ತಿಳಿದಿಲ್ಲ. ಹುಟ್ಟಿನಿಂದಲೇ ಈ ರೀತಿ ಮನೋ ಭಾವ ಈ ವರ್ಗದವರಿಗೆ ಬರುತ್ತದೆ ಎಂದು ಕಾಣುತ್ತದೆ. ಸತ್ಯಯುಗ. ತ್ರೇತಾಯುಗ, ಧ್ವಾಪರಯುಗ ಮತ್ತು ಇಂದಿನ ಕಲಿಯುಗ ಸೇರಿದಂತೆ ಎಲ್ಲ ಯುಗದಲ್ಲೂ ಈ ಅವ್ಯವಸ್ಥೆ ಮಾಡುವ ಪ್ರವೃತ್ತಿ ನಡೆದುಕೊಂಡು ಬಂದಿದೆ.
ಅದನ್ನು ಸರಿಪಡಿಸುವ ಕೆಲಸ ಮಾಡಬೇಕಾಗಿದೆ. ಇಲ್ಲದಿದ್ದರೆ ಮುಂದೆ ಅನಾಹುತ ಆಗಬಹುದು. ಋಷಿ ಸಾಹಿತ್ಯಗಳಾದ ವೇದ, ಉಪನಿಷತ್, ರಾಮಾಯಣ, ಮಹಾಭರತ… ಹೀಗೆ ಯಾವುದನ್ನೇ ತೆಗೆದುಕೊಂಡರೂ ಅದನ್ನು ಪಠ್ಯ ಪುಸ್ತಕಕ್ಕೆ ಸೇರಿಸುವ ಅಂಶಗಳಿವೆ. ಪ್ರಸ್ತುತ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವ ವಿಚಾರ ಕೇಳಿದ ತಕ್ಷಣ ಒಂದು ವರ್ಗದವರಿಗೆ ಹೊಟ್ಟೆ ಉರಿ ಯಲು ಆರಂಭವಾಗಿದೆ. ಭಗವದ್ಗೀತೆಯನ್ನು ಕುರಾನ್ ಮತ್ತು ಬೈಬಲ್ ಕೃತಿಗಳೊಡನೆ ಸಮೀಕರಿಸಿ ಮಾತನಾಡುವ ಪ್ರವೃತ್ತಿ ಶಾಲೆಗಳಲ್ಲಿಯೂ ಪ್ರಾರಾಂಭವಾಗಿದೆ. ರಾಮಾಯಣ- ಮಹಾಭಾರತಕ್ಕೂ, ಕುರಾನ್-ಬೈಬಲ್ಲಿಗೂ ಎಲ್ಲಿಂದೆಲ್ಲಿಯ ಸಂಬಂಧ? ಅವುಗಳ ಚಿಂತನೆಯೇ ಬೇರೆ ಬೇರೆ.
ಶಾಂತಿಯೊಂದೇ ನೀತಿಯಲ್ಲ: ಧರ್ಮ ಎಂದ ಕೂಡಲೇ ಶಾಂತಿ ಎಂಬ ತಪ್ಪು ಕಲ್ಪನೆ ನಮ್ಮಲಿದೆ. ಎಲ್ಲ ಹಿಂದು ಪುರಾಣ ಗಳಲ್ಲೂ ಕ್ಷಾತ್ರಧರ್ಮ ಎದ್ದು ಕಾಣುತ್ತದೆ. ಕೃಷ್ಣ ಕೂಡ ಮಹಾಭಾರತದಲ್ಲಿ ಶುಕ್ರ ನೀತಿ ಪಾಲಿಸಿದ. ಸಣ್ಣ ಪುಟ್ಟ ಅಧರ್ಮ ಮಾಡಿ ಕೊನೆಯಲ್ಲಿ ದೊಡ್ಡ ಧರ್ಮ ಮಾರ್ಗವನ್ನು ಸ್ಥಾಪಿಸಿದ. ಕರ್ಣ ಮತ್ತುದುರ್ಯೋಧನ ಇಬ್ಬರನ್ನೂ ಅವರ ನೀತಿಯಲ್ಲೇ ಕೊಲ್ಲಿಸಿದ್ದಾನೆ. ಭಾರತ ಶಾಂತಿ ಪರವಾದ ದೇಶ. ಹಿಂಸೆ, ಯುದ್ಧ ಮಾಡಬಾರದು ಎಂಬ ಅಪವ್ಯಾಖ್ಯಾನ ಸುತ್ತಲೂ ಹರಡಿಕೊಂಡಿದೆ.
ಹೀಗಾಗಿಯೇ ನಾವು ಚೀನಾದಿಂದ ಏಟು ತಿಂದೆವು. ಧರ್ಮ ಎಂದಾಕ್ಷಣ ಶಾಂತಿ ಒಂದೇ ನೀತಿ ಅಲ್ಲ . ಅನೇಕ ನೀತಿಗಳಿವೆ ಅದನ್ನು
ನಾವೆಲ್ಲರೂ ಅರಿಯ ಬೇಕಾಗಿದೆ. ಭಗವದ್ಗೀತೆಯ ವಿಶಾಧ ಯೋಗದಲ್ಲಿ ಮೂರು ಜನರಿಗೆ ಭ್ರಮೆ ಹಿಡಿದಿತ್ತು ಎಂದು ಹೇಳುತ್ತದೆ. ಆ
ಭ್ರಮೆಯನ್ನು ನಿವಾರಣೆ ಮಾಡಿದ ಕೃಷ್ಣ ಮನೋವೈದ್ಯನಾಗಿದ್ದ. ಇಷ್ಟಲ್ಲದೆ, ಭಗವದ್ಗೀತೆಯಲ್ಲಿ ದೈವೀಗುಣ, ಅಸುರಗುಣ, ಮನಸನ್ನು ಶುದ್ಧೀಕರಿಸುವುದು, ಸತ್ಯ ಹೇಳಲು ಭಯಪಡದಿರುವುದು, ಜ್ಞಾನಯೋಗ, ದಾನ, ಇಂದ್ರಿಯಗಳನ್ನು ಹತೋಟಿ ಯಲ್ಲಿಡುವುದು, ಮನೋವಿಜ್ಞಾನ, ಜೀವನ ದರ್ಶನ ಈ ಎಲ್ಲದರ ಬಗ್ಗೆ ತಿಳಿಸಲಾಗಿದೆ.
ಇಡೀ ಗೀತೆಯಲ್ಲಿ ಸಾಂಕೇತಿಕತೆ ಇದೆ. ಹೀಗಾಗಿ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವುದರಲ್ಲಿ ಯಾವ ತಪ್ಪೂ ಇಲ್ಲ.
ಭಗವದ್ಗೀತೆಯನ್ನು ಕೇವಲ ಜಯಂತಿ ಸಂದರ್ಭದಲ್ಲಿ ಮಾತ್ರ ಹೇಳಲಾಗುತ್ತದೆ. ಅದರ ಬದಲು ಮಕ್ಕಳಿಗೆ ಕಂಠ ಪಾಠ ಮಾಡಿಸಬೇಕು. ಅದರಿಂದ ನಾಲಿಗೆ ಶುದ್ಧವಾಗುತ್ತದೆ. ಮಕ್ಕಳಲ್ಲಿ ಮೇಧಾ ಶಕ್ತಿಯನ್ನು ಗೀತೆ ಹೆಚ್ಚಿಸುತ್ತದೆ. ಗೀತೆಯಲ್ಲಿ ಕೇವಲ ನೈತಿಕತೆ ಮಾತ್ರವಲ್ಲದೆ, ತತ್ವಶಾಸವನ್ನೂ ಮಕ್ಕಳು ತಿಳಿಯಬೇಕು. ಹೀಗಾಗಿ ಎಡಬಿಡಂಗಿಗಳ ಮಾತಿಗೆ ಸೊಪ್ಪು ಹಕದೆ ಸರಕಾರ ಸರಿಯಾದ ನಿಯೋಗ ಸ್ಥಾಪಿಸಿ ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಲು ದಿಟ್ಟ ಹೆಜ್ಜೆ ಇಡಬೇಕು. ಕೇವಲ ಗೀತೆ ಒಂದನ್ನೇ ಅಲ್ಲದೇ ಜೀವನ ದರ್ಶನವಿರುವ ರಾಮಾಯಣ, ಮಹಾಭಾರತವನ್ನೂ ಅಳವಡಿಸಿದರೆ ಯಾವುದೇ ತೊಂದರೆ ಇಲ್ಲ ಎಂದು ಅಭಿಪ್ರಾಯಪಟ್ಟರು.
***
ಧರ್ಮದ ಕೈಕಾಲುಗಳಿಗೆ ಶಕ್ತಿ ತುಂಬಬೇಕಿದೆ.
ದೇಶ ಕಟ್ಟಲು ಧರ್ಮದ ಅಗತ್ಯವಿದೆ.
ಒಳ್ಳೆಯತನದ ಜತೆ ವಿವೇಕವೂ ಇರಬೇಕು ನಮ್ಮಲ್ಲಿ ದಯೆ ಇದ್ದರೆ ಮತ್ರ ಸಾಲದು, ಜತೆಗೆ ದಿಟ್ಟತನವೂ ಇರಬೇಕು.
ಧರ್ಮ ಎಂದರೆ ಕೇವಲ ಗಳಗಳ ಅಳುವ ಧ್ವನಿಯಲ್ಲ, ಸಿಂಹದ ಘರ್ಜನೆಯೂ ಕೂಡ.
***
ಉಪನಿಷತ್ ನಮ್ಮ ದೇಶದಲ್ಲಿ ಸಾರ್ವಭೌಮ ಎಂದು ಹೇಳಬೇಕು. ನಮ್ಮ ಐಡೆಂಟಿಟಿ ಇರುವುದು ಅಧ್ಯಾತ್ಮ ಗ್ರಂಥಗಳ ಮೂಲಕ. ಮಿಕ್ಕ ಇತರೇ ಗ್ರಂಥಗಳೆಲ್ಲಾ ನಮ್ಮ ಕೆಳಗೆ ಬರುತ್ತದೆ. ಉಪನಿಷತ್ ಸದಾ ಅಗ್ರಸ್ಥಾನದಲ್ಲಿರಬೇಕು.
ಅಧ್ಯಾತ್ಮದಲ್ಲೇ ಭಾರತದ ಸ್ವಂತಿಕೆ ಇರುವುದು. ಅದನ್ನು ಕಂಡರೆ ಆಗದ ಒಂದು ವರ್ಗವಿದೆ.
ಸಂಕುಚಿತ ಕೃತಿಗಳಾದ ಕುರಾನ್, ಬೈಬಲ್‌ಗಳನ್ನು ಭಗವದ್ಗೀತೆಯೊಂದಿಗೆ ಹೋಲಿಸುವ ಕೆಟ್ಟ ರೋಗ ಪ್ರಾರಂಭವಾಗಿದೆ.
ಅನೇಕ ವರ್ಷಗಳಿಂದ ಭಗವದ್ಗೀತೆಯನ್ನು ಅಪಾರ್ಥ ಮಾಡಿಕೋಂಡೇ ಕಾಲ ಕಳೆಯಲಾಗಿದೆ.
ಅಹಿಂಸೆಗಾಗಿ ಹಿಂಸೆ ಮಾಡುವವರು ನಾವು, ಹಿಂಸೆಗಾಗಿ ಹಿಂಸೆ ಮಾಡುವುದಿಲ್ಲ.
ಮಹಾತ್ಮಾ ಗಾಂಧಿ ಅಹಿಂಸಾ ಪರಮೋಧರ್ಮವನ್ನು ಎತ್ತಿ ಹಿಡಿದರು. ಆದರೆ ಅದು ಒಂದು ಕಾಲದಲ್ಲಿ ಯಶಸ್ವಿಯಾಯಿತು. ಎಲ್ಲಾ ಕಾಲಘಟ್ಟದಲ್ಲೂ ಯಶಸ್ವಿಯಾಗಲು ಸಾಧ್ಯವಿಲ್ಲ.