Saturday, 23rd November 2024

ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಯೋಗಿ ಆದಿತ್ಯನಾಥ್‌

ಲಖನೌ: ಬಿಜೆಪಿಯ ಯೋಗಿ ಆದಿತ್ಯನಾಥ್‌ ಅವರು ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ಈ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. 37 ವರ್ಷಗಳ ಬಳಿಕ, ಎರಡನೇ ಅವಧಿಗೆ ಆಯ್ಕೆಯಾಗು ತ್ತಿರುವ ಮೊದಲ ಮುಖ್ಯಮಂತ್ರಿ ಇವರು.

ಯೋಗಿ ಅವರ ಸರ್ಕಾರದಲ್ಲಿ ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಲಾಗಿದೆ. ಕೇಶವ ಪ್ರಸಾದ್‌ ಮೌರ್ಯ ಮತ್ತು ಬ್ರಜೇಶ್‌ ಪಾಟಕ್‌ ಅವರು ಡಿಸಿಎಂಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಲಖನೌನ ಅಟಲ್‌ ಬಿಹಾರಿ ಇಕಾನಾ ಸ್ಟೇಡಿಯಂನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ಸರ್ಕಾರಗಳ ಮುಖ್ಯಮಂತ್ರಿಗಳು, ಪಕ್ಷದ ಹಿರಿಯ ನಾಯಕರು ಭಾಗವಹಿಸಿದ್ದರು.

ರಾಜ್ಯಪಾಲೆ ಆನಂದಿ ಬೆನ್‌ ಪಟೇಲ್‌ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಒಟ್ಟು 52 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.