ಲಿಂಗಾಯತ ಸಮುದಾಯದ ಎಂಬಿಪಿಗೆ ಪ್ರಚಾರ ಸಮಿತಿ ಸ್ಥಾನ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಕರ್ನಾಟಕದಲ್ಲಿ ಅಧಿಕಾರಕ್ಕೆ ಮರಳಿ ಬರಲೇಬೇಕು ಎನ್ನುವ ದೃಢ ಸಂಕಲ್ಪದಲ್ಲಿರುವ ಕಾಂಗ್ರೆಸ್ ವರಿಷ್ಠರು, ಚುನಾವಣೆಗೆ ಒಂದು ವರ್ಷವಿರುವಾಗ ಎಂ.ಬಿ.ಪಾಟೀಲ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿ, ‘ಲಿಂಗಾಯತ ಅಸ್ತ್ರ’ ಪ್ರಯೋಗಕ್ಕೆ
ಮುಂದಾಗಿದ್ದಾರೆ.
ಚುನಾವಣೆ ಗಮನದಲ್ಲಿರಿಸಿಕೊಂಡು ರಾಜ್ಯ ಕಾಂಗ್ರೆಸ್ ಸಂಘಟನೆ ದೃಷ್ಟಿಯಿಂದ ಹಲವು ಬದಲಾವಣೆ ತರಲಾಗುತ್ತಿದೆ. ಪ್ರಮುಖ ವಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಎಂ.ಬಿ.ಪಾಟೀಲರನ್ನು ನೇಮಿಸುವ ಮೂಲಕ, ಲಿಂಗಾಯತ ಮತಗಳ ಕ್ರೋಢೀ ಕರಣಕ್ಕೆ ಟ್ರಂಪ್ ಕಾರ್ಡ್ ಉರುಳಿಸಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ.ಪಾಟೀಲ್ ಸೋಮವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇನ್ನೊಂದು ವರ್ಷದಲ್ಲಿ ಎದುರಾಗಲಿರುವ ಚುನಾವಣೆಯಲ್ಲಿ ಸಮರ್ಥವಾಗಿ ಪಕ್ಷವನ್ನು ಗೆಲುವಿನ ದಡ ಸೇರಿಸಲು ಪ್ರಚಾರ ಸಮಿತಿಯ ಕಾರ್ಯ ವೈಖರಿ ಹೆಚ್ಚು ಮಹತ್ವ ಪಡೆ ಯುವುದರಿಂದ, ಲಿಂಗಾಯತ ಸಮುದಾಯಕ್ಕೆ ಈ ಸ್ಥಾನವನ್ನು ನೀಡಿ ಮತಗಳನ್ನು ಭದ್ರಗೊಳಿಸಿಕೊಳ್ಳುವ ಲೆಕ್ಕಾಚಾರ ದಲ್ಲಿ ಕಾಂಗ್ರೆಸ್ ಇದೆ ಎನ್ನಲಾಗಿದೆ.
ರಾಜ್ಯ ರಾಜಕೀಯದಲ್ಲಿ ಲಿಂಗಾಯತ, ಒಕ್ಕಲಿಗ, ಕುರುಬ ಮತಗಳೇ ಹಲವು ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗಿ ಒಕ್ಕಲಿಗ ಸಮುದಾಯ ಡಿ.ಕೆ.ಶಿವಕುಮಾರ್ ಹಾಗೂ ಕುರುಬ ಸಮುದಾಯದ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದಾರೆ. ಇದೀಗ ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ರಾಜ್ಯದ ಪ್ರಬಲ ಸಮುದಾಯಗಳನ್ನೇ ಟಾರ್ಗೆಟ್ ಮಾಡಿದೆ ಎನ್ನುವುದು ಸ್ಪಷ್ಟವಾಗಿದೆ.
ಬಿಜೆಪಿಯಿಂದ ಸೆಳೆಯಲು ಪ್ರಯತ್ನ: ಬಿ.ಎಸ್. ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿರುವ ತನಕ, ಲಿಂಗಾಯತ ಮತ ಗಳು ಬಿಜೆಪಿಯೊಂದಿಗೆ ಇರುವುದು ಸ್ಪಷ್ಟ. ಆದರೆ ಮುಂದಿನ ಬಾರಿಯ ಚುನಾವಣೆಯ ಬಳಿಕ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಹೀಗಾಗಿ ಮುಂದಿನ ಲಿಂಗಾಯತ ನಾಯಕ ಯಾರು ಎನ್ನುವ ಗೊಂದಲ ವಿದೆ. ಈ ಸಮಯದಲ್ಲಿ ಎಂ.ಬಿ.ಪಾಟೀಲ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಆ ಮತಗಳನ್ನು ಕಾಂಗ್ರೆಸ್ ನತ್ತ ವಾಲುವಂತೆ ಮಾಡುವ ಯೋಜನೆಯನ್ನು ರೂಪಿಸಿದೆ.
ಒಂದು ವೇಳೆ ಲಿಂಗಾಯತ ಮತಗಳ ಪೈಕಿ ಶೇ.೨೦ರಿಂದ ೨೫ರಷ್ಟು ಮತಗಳು ಕಾಂಗ್ರೆಸ್ಗೆ ಹೆಚ್ಚುವರಿಯಾಗಿ ಬಂದರೂ ಅದು ಪಕ್ಷಕ್ಕೆ ಬಹುದೊಡ್ಡ ಲಾಭ ತಂದುಕೊಡಲಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದಲ್ಲಿ ಈ ರೀತಿಯಾ ದರೆ, ಹಲವು ಕ್ಷೇತ್ರ ಗಳಲ್ಲಿ ಫಲಿತಾಂಶವೇ ಬುಡಮೇಲಾಗಲಿದೆ ಎನ್ನುವ ಲೆಕ್ಕಾ ಚಾರದಲ್ಲಿ ಕಾಂಗ್ರೆಸ್ಯಿದೆ.
ಆಯಕಟ್ಟಿನ ಸ್ಥಾನಕ್ಕೆ ಎಂಬಿಪಿ
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಚುನಾವಣೆ ಸಮಯದಲ್ಲಿ ಆಯಕಟ್ಟಿನ ಸ್ಥಾನವಾಗಿದೆ. ಚುನಾವಣೆ ಪ್ರಚಾರ, ಸಂಘಟನೆ, ಅಭ್ಯರ್ಥಿಗಳ ವಿಷಯದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಮಾತಿಗೆ ಹೆಚ್ಚಿನ ಮಹತ್ವವಿರಲಿದೆ. ಹೀಗಾಗಿ ಇದೀಗ ಎಂ.ಬಿ.ಪಾಟೀಲ್ ಅವರಿಗೆ ಈ ಸ್ಥಾನ ಸಿಗುವ ಮೂಲಕ, ಕೆಪಿಸಿಸಿಯಲ್ಲಿ ೩ನೇ ಶಕ್ತಿ ಕೇಂದ್ರದ ನಿರ್ಮಾಣವಾಗಲಿದೆ ಎನ್ನುವ ಅನುಮಾನವೂ ಶುರು ವಾಗಿದೆ. ಇದರಿಂದ ಪಕ್ಷ ಸಂಘಟನೆಗೆ ಹೆಚ್ಚಾಗುತ್ತದೆ ಎನ್ನುವುದು ನಾಯಕರ ವಾದವಾಗಿದೆ. ಆದರೆ ಮೂರನೇ ಶಕ್ತಿ ಕೇಂದ್ರ ಉದಯಿಸುವ ಮೂಲಕ, ಮತ್ತೊಮ್ಮೆ ಸಮನ್ವಯತೆಯ ಸಮಸ್ಯೆಯಾದರೆ ಎನ್ನುವ ಆತಂಕವೂ ಪಕ್ಷದಲ್ಲಿದೆ.