ಗುರುಶಿಷ್ಯರ ಸಮ್ಮಿಲನಕ್ಕೆ ಸಾಕ್ಷಿಯಾದ ಯೋಗಿ ಯತೀಂದ್ರರ ಜಯಂತ್ಯೋತ್ಸವ
ಮುನಿರಾಜ್ ಎಂ.ಅರಿಕೆರೆ ಚಿಕ್ಕಬಳ್ಳಾಪುರ
ಪರಸ್ಪರ ಶತ್ರುಗಳ ಹಾಗೆ ಬಹಿರಂಗವಾಗಿ ಕಾದಾಡಿ ಮುನಿಸಿಕೊಂಡಿದ್ದ ಸಚಿವ ಸುಧಾಕರ್ ಮತ್ತು ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥಾಪಕ ಪ್ರದೀಪ್ ಈಶ್ವರ್ ಒಂದೇ ವೇದಿಕೆಯಲ್ಲಿ ಪರಸ್ಪರ ಉಭಯಕುಶಲೋಪರಿ ನಡೆಸಿದ್ದಲ್ಲದೆ ಮುಕ್ತಮನಸ್ಸಿನಿಂದ
ಗುಣಗಾನ ಮಾಡಿದ ಅಪರೂಪದ ದೃಶ್ಯಕ್ಕೆ ಯೋಗಿ ಯಂತಿಂದ್ರರ ೨೯೬ನೇ ಜಯಂತಿಯ ವೇದಿಕೆ ಸಾಕ್ಷಿಯಾಯಿತು.
ಏನಿದು ಕಥೆ?: ಒಂದೇ ಊರಿನವರಾದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಶಿಕ್ಷಣ ತಜ್ಞ, ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥಾಪಕ ಪ್ರದೀಪ್ ಈಶ್ವರ್ ನಡುವೆ ಅನ್ಯೂನ್ಯ ಸಂಬಂಧವಿದ್ದು, ಸಚಿವರ ಮನೆಯ ಮಗನಂತೆ ಉತ್ತಮ ಒಡನಾಟ ಹೊಂದಿದ್ದರು. ಸಚಿವ ಸುಧಾಕರ್ ಅವರ ತಂದೆ ಪಿ.ಎನ್.ಕೇಶವ ರೆಡ್ಡಿ ಅವರ ಕಾಲದಿಂದಲೂ ಎರಡೂ ಕುಟುಂಬಗಳ ನಡುವೆ ನಿಕಟವಾದ ಕೌಟುಂಬಿಕ ಬಾಂಧವ್ಯವೂ ಬೆಳೆದಿತ್ತು.
ಸಚಿವ ಸುಧಾಕರ್ ಶಾಸಕರಾಗಿ ಆಯ್ಕೆಯಾಗುವವರೆಗೆ ಈ ಬಾಂಧವ್ಯ ಹಾಗಾಯೇ ಇದ್ದು, ಪ್ರದೀಪ್ ಅವರು ಮನೆಯ ಮಗನಂತೆ ಓಡಾಡಿಕೊಂಡಿದ್ದರು. ಕಾಲಾಂತರದಲ್ಲಿ ಏನಾಯಿತೋ ಏನೋ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಷ್ಟು ದ್ವೇಷಾಸೂಯೆ ಬೆಳೆದು ಒಬ್ಬರಿಗೊಬ್ಬರು ಶತ್ರುಗಳಾಗಿ ಪರಿವರ್ತನೆಯಾಗಿ, ಕೋರ್ಟು, ಕಚೇರಿ ಅಲೆದದ್ದು ಈಗ ಇತಿಹಾಸ. ದಾಗಿ ಮೂರು ವರ್ಷಗಳೇ ಕಳೆದಿವೆ. ಈ ಘಟನೆಯಿಂದ ನೊಂದುಕೊಂಡ ಪ್ರತಿಭಾ ಸಂಪನ್ನರು, ಉತ್ತಮ ವಾಗ್ಮಿಯಾದ ಪ್ರದೀಪ್ ಈಶ್ವರ್ ತನ್ನ ಹುಟ್ಟೂರು ಪೆರೇಸಂದ್ರ.
ತಮ್ಮ ಕಾರ್ಯಕ್ಷೇತ್ರ ಚಿಕ್ಕಬಳ್ಳಾಪುರ ವನ್ನು ತೊರೆದು ಬೆಂಗಳೂರು ಕೇಂದ್ರಸ್ಥಾನಕ್ಕೆ ಬಂದು ನೆಲೆಸಿದರು. ಈ ಘಟನೆ ಪ್ರದೀಪ್ ಈಶ್ವರ್ ಬದುಕಿನಲ್ಲಿ ಇದೊಂದು ಅಮೃತಘಳಿಗೆ ಎಂದರೆ ತಪ್ಪಾಗಲಾರದು. ಏಕೆಂದರೆ ಅವಮಾನ, ಹಸಿವು, ಉದ್ಯೋಗಕ್ಕಾಗಿ ಅಲೆದಾಟ, ಏನಾದರೂ ಸಾಧಸಬೇಕೆಂಬ ಛಲ.. ಇಂತಹ ಕ್ಷೋಭೆಗೊಂಡ ಮನಸ್ಥಿತಿಯಲ್ಲಿ ರಾಜಧಾನಿಗೆ ಬಂದ ಗಳಿಗೆಯೋ ಅವರೊಳಗಿದ್ದ ಸಾಧಕನೇ ದಾರಿದೀಪವಾಗಿ ಕೈಹಿಡಿದು ಮುನ್ನಡೆಸಿದ ಪರಿಣಾ ಮವೋ ಒಲಿದು ಬಂದ ಅವಕಾಶಗಳನ್ನು ಸಾಧನೆಯ ಮೆಟ್ಟಿಲುಗಳಾಗಿ ಮಾಡಿಕೊಂಡ ಕಾರಣವೋ ಏನೋ ಇಂದು ಬಹುದೊಡ್ಡ ಶಿಕ್ಷಣ ತಜ್ಞರಾಗಿ, ಕರ್ನಾಟಕದ ಮನೆ ಮಾತಾಗಿ ಪರಿಶ್ರಮ ಅಕಾಡೆಮಿಯ ಸಂಸ್ಥಾಪಕರಾಗಿ ಜನಪ್ರಿಯರಾಗಿದ್ದಾರೆ. ಅಲ್ಲದೆ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಗುರಿಯನ್ನು ಕಾಣಿಸಿದ ಅರಿವಿನ ಗುರುವಾಗಿದ್ದಾರೆ.
ತಾತಯ್ಯನವರ ಮಹಿಮೆ: ಹೌದು ಕೈವಾರ ತಾತಯ್ಯ ಅಂದರೆ ಸರ್ವಸಮತೆಯ ಭಾವ ದೀಪ್ತಿ. ಕಲ್ಲನ್ನು ಕಲ್ಲುಸಕ್ಕರೆಯಾಗಿಸಿದ ಕಾಲಜ್ಞಾನಿ. ೧೫೦ ವರ್ಷಗಳ ಹಿಂದೆಯೇ ಭವಿಷ್ಯದ ಬಗ್ಗೆ ಕರಾರುವಕ್ಕಾಗಿ ಮುನ್ನುಡಿ ಬರೆದಿದ್ದ ನಾದಬ್ರಹ್ಮ ಸದ್ಗುರು ನಾರೇಯಣ ಯತೀಂದ್ರರ ೨೯೬ನೇ ಜಯಂತಿ ಗುರು ಶಿಷ್ಯರ ಸಮ್ಮಿಲನಕ್ಕೆ, ದ್ವೇಷಾಸೂಯೆ ದೂರವಾಗಿ ಮಾತೃ-ಭಾತೃಪ್ರೇಮ ಪಸರಿಸಲು ಕಾರಣವಾಗಿದೆ. ಕಾರ್ಯಕ್ರಮಕ್ಕೆ ಬಹುಮುಂಚಿತವಾಗಿಯೇ ಬಂದು ಆಸೀನರಾಗಿದ್ದ ಪ್ರದೀಪ್ ಈಶ್ವರ್ ವೇದಿಕೆಯ ಕೆಳಗಿನ ಸಾಲಿನಲ್ಲಿ ಸಾಮಾನ್ಯರಲ್ಲಿ ಒಬ್ಬರಾಗಿ ಕುಳಿತು ಕಾರ್ಯಕ್ರಮ ನೋಡುತ್ತಿದ್ದರು.
ಇದನ್ನು ಗಮನಿಸಿದ ಸಚಿವರು ವೇದಿಕೆಯ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯ ಮೇಲೆ ಆಸೀನರಾಗಲು ಆಹ್ವಾನಿಸಿದರು. ಇದನ್ನು ಒಪ್ಪಿ ಬಂದ ಅವರು ಪರಸ್ಪರ ಹಸ್ತಲಾಘವ ಮಾಡಿಕೊಂಡರಲ್ಲದೆ, ಒಂದೇ ವೇದಿಕೆಯಲ್ಲಿ ಆಸೀನರಾದರು.
ಸಚಿವ ಸುಧಾಕರ್ ತಮ್ಮ ಭಾಷಣದ ನಡುವೆ ಚಿಕ್ಕಬಳ್ಳಾಪುರ ತಾಲೂಕಿನ ಹಿರಿಮೆಯನ್ನು ಹೇಳುವಾಗ ಪ್ರದೀಪ್ ಈಶ್ವರ್ ಹೆಸರು ಉಲ್ಲೇಖಿಸಿ ಅವರ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿ ದರು. ನಮ್ಮ ಊರಿನವರೇ ಆದ ಸಹೋದರ ಸಮಾನರಾದ ಪ್ರದೀಪ್ ಈಶ್ವರ್ ಅತ್ಯಂತ ಬುದ್ಧಿವಂತ ಹುಡುಗ. ಹಳ್ಳಿಯಿಂದ ಬಂದು ರಾಜಧಾನಿಯಲ್ಲಿ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸು ವುದು ಸಾಮಾನ್ಯದ ವಿಚಾರವಲ್ಲ. ಪ್ರದೀಪ್ ಈ ವಿಚಾರದಲ್ಲಿ ಯುವಕರಿಗೆ ಸೂರ್ತಿಯಾಗಿ ನಿಲ್ಲುತ್ತಾರೆ. ಯಾರ ನೆರವೂ ಇಲ್ಲದೆ ಸ್ವಸಾಮರ್ಥ್ಯ ಹಾಗೂ ಪರಿಶ್ರಮದಿಂದ ನೀಟ್ ಅಕಾಡೆಮಿ ಸ್ಥಾಪಿಸಿ ರಾಜ್ಯಕ್ಕೇ ಮಾದರಿಯಾದ ರೀತಿಯಲ್ಲಿ ಫಲಿತಾಂಶ ನೀಡಿ ದ್ದಾರೆ. ಇಂತಹ ಜ್ಞಾನಿಗಳ ತವರು ಚಿಕ್ಕಬಳ್ಳಾಪುರ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ಮುಕ್ತ ಮನಸ್ಸಿನಿಂದ ಕೊಂಡಾಡಿದರು.
ಬಾಂಧವ್ಯ ಬಾಡದಿರಲಿ
ಮಾನುಷ್ಯರ ಬದುಕೇ ಹೀಗೆ ಹಲವು ಏಳುಬೀಳುಗಳ ಸರಮಾಲೆಯಾಗಿದೆ. ಒಂದು ಕಾಲಕ್ಕೆ ಸ್ನೇಹಿತರಾದವರು ಕೆಲ ಕಾಲದ ಬಳಿಕ
ಶತ್ರುಗಳಾಗಿ ಪರಿವರ್ತನೆಯಾಗಿ ಬಿಡುತ್ತಾರೆ. ಯುಗಧರ್ಮದಾಟದಲ್ಲಿ ಯಾವುದೂ ಅಂತಿಮ ಎಂದು ಹೇಳಲು ಬರುವುದೇ ಇಲ್ಲ. ಕೈವಾರ ತಾತಯ್ಯ ಅವರ ಅನುಗ್ರಹದಿಂದ ದೀರ್ಘಕಾಲದ ಮುನಿಸು ಕೊನೆಯಾಗಿ ಮಮತೆ ಮೈದುಂಬಿದ ಈ ಹೊತ್ತು ಸದಾ ಹೀಗೆಯೇ ಇರಲಿ. ಸಚಿವ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವಿನ ಅನುಗಾಲದ ಬಾಂಧವ್ಯ ಬಾಡದಿರಲಿ ಎನ್ನುವುದು
ಚಿಕ್ಕಬಳ್ಳಾಪುರ ಜನತೆಯ ಆಸೆಯಾಗಿದೆ.