Friday, 25th October 2024

ಅಲ್-ರಾಜಿಯ ಮೊದಲ ಆರೋಗ್ಯ ಪುಸ್ತಕ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಅಲ್-ರಾಜಿ ಅನಿಸಿಕೆಗಳನ್ನು ಮುಚ್ಚುಮರೆಯಿಲ್ಲದೆ ಹೇಳಿದ. ಹಿಪ್ಪೋಕ್ರೇಟ್ಸ್, ಅರಿಸ್ಟಾಟಲ್, ಗ್ಯಾಲನ್ ಮುಂತಾ ದವರು ಮಾಡಿದ ತಪ್ಪುಗಳನ್ನು ಎತ್ತಿ ಹೇಳಿದ, ತನ್ನ ಸಮಕಾಲೀನ ವೈದ್ಯರ ಹುಸಿವೈದ್ಯಕೀಯವನ್ನು ಬಲವಾಗಿ ಟೀಕಿ ಸಿದ. ವೈದ್ಯನಾದವನು ಸದಾ ವಿದ್ಯಾರ್ಥಿಯಾಗಿರಬೇಕೆಂದ.

ಅಬು ಬಕ್ರ್ ಮುಹಮ್ಮದ್ ಇಬ್ನ್ ಜ಼ಕಾರಿಯ ಅಲ್ -ರಾಜ಼ಿ (865-925) ಇರಾನ್ ದೇಶದ ವೈದ್ಯ, ಸಂಶೋಧಕ, ವಿದ್ವಾಂಸ ಮತ್ತು ರಸವಾದಿ. ಇರಾನಿನ ಟೆಹರಾನ್ ಬಳಿಯ ರೇ ನಗರದಲ್ಲಿ ಅಲ್-ರಾಜ಼ಿ ಜನಿಸಿದ. ರೇ ನಗರದಿಂದ ಬಾಗ್ದಾದ್ ನಗರಕ್ಕೆ ಬಂದು ವೈದ್ಯಕೀಯವನ್ನು ಕಲಿತ. ಬಾಗ್ದಾದಿನ ಬಿಮಾರಿ ಸ್ತಾನ್(ಆಸ್ಪತ್ರೆ) ನಲ್ಲಿ ವೃತ್ತಿನಿರತನಾಗಿದ್ದಾಗ, ರೇ ಪ್ರಾಂತದ ಅಧಿಕಾರಿಯಾಗಿದ್ದ ಮನ್ಸೂರ್ ಇಬ್ನ್ ಇಷಕ್ (ಮರಣ: 915) ಅಲ್-ರಾಜ಼ಿ ಯನ್ನು ರೇ ನಗರಕ್ಕೆ ಆಹ್ವಾನಿಸಿದ.

ಅಲ್ಲಿದ್ದ ಬಿಮಾರಿಸ್ತಾನ್ ಮುಖ್ಯಸ್ಥನಾಗಿ ನೇಮಕ ಮಾಡಿದ. ಅಲ್-ರಾಜ಼ಿ ತನ್ನ ಎರಡು ಪುಸ್ತಕಗಳನ್ನು ಮನ್ಸೂರ್‌ಗೆ ಅರ್ಪಿಸುವುದರ ಮೂಲಕ ಕೃತಜ್ಞತೆಯನ್ನು ತೋರಿದ. ಅಲ್-ರಾಜ಼ಿ ವೈದ್ಯನಾಗಿ ಅಪಾರ ಖ್ಯಾತಿ ಗಳಿಸಿದ. ಅಬ್ಬಾಸಿದ್ ಖಲೀಫಾ ಸಾಮ್ರಾಜ್ಯ
ದಲ್ಲಿಯೇ ದೊಡ್ಡದಾದ ಬಿಮಾರಿಸ್ತಾನವನ್ನು ಬಾಗ್ದಾದ್ ನಗರದಲ್ಲಿ ಕಟ್ಟಲು ಆಹ್ವಾನ ಬಂದಾಗ ಅಲ್-ರಾಜ಼ಿ ಒಪ್ಪಿಕೊಂಡ. ಆಸ್ಪತ್ರೆಯನ್ನು ನಗರದ ಯಾವ ಭಾಗದಲ್ಲಿ ಕಟ್ಟ ಬೇಕು ಎನ್ನುವುದನ್ನು ನಿರ್ಧರಿಸಲು, ಆಯ್ದ ಸ್ಥಳಗಳಲ್ಲಿ ಮಾಂಸವನ್ನು ತೂಗು ಹಾಕಿದ.

ಯಾವ ಪ್ರದೇಶದಲ್ಲಿ ಮಾಂಸವು ಅತ್ಯಂತ ನಿಧಾನವಾಗಿ ಕೊಳೆಯಿತೋ, ಆ ಪ್ರದೇಶದಲ್ಲಿ ಆಸ್ಪತ್ರೆ ಕಟ್ಟಲು ನಿರ್ಧರಿಸಿದ್ದ. ಅಲ್-ರಾಜ಼ಿಯು ತನ್ನ ಪ್ರಾಥಮಿಕ ವೈದ್ಯಕೀಯ ತಿಳಿವನ್ನು ಹಿಪ್ಪೋಕ್ರೇಟ್ಸ್ ಮತ್ತು ಗ್ಯಾಲನ್ ಅವರ ಬರಹಗಳಿಂದ ಪಡೆದ. ಆದರೆ ಗ್ಯಾಲನ್ ಬರೆದ ಬರಹಗಳನ್ನು ನೇರವಾಗಿ ಒಪ್ಪಲಿಲ್ಲ. ಪ್ರತಿಯೊಂದು ಅಂಶವನ್ನು ತನ್ನ ಅಧ್ಯಯನದ ನಿಕೃಷ್ಟಕ್ಕೆ ಒಡ್ಡಿದ. ಗ್ಯಾಲನ್ ಮಾಡಿದ ತಪ್ಪುಗಳನ್ನು ಗುರುತಿಸಿದ. ‘ಗ್ಯಾಲನ್’ ಬಗ್ಗೆ ಅನುಮಾನಗಳು (ಶುಕುಕ್ ಅಲ ಅಲಿನುಸರ್) ಎನ್ನುವ ಪುಸ್ತಕ ವನ್ನೇ ಬರೆದ.

ಅಲ್-ರಾಜ಼ಿ ತನ್ನ ಜೀವಮಾನದಲ್ಲಿ ವೈದ್ಯಕೀಯ, ರಸವಿಜ್ಞಾನ, ದರ್ಶನ ವಿಜ್ಞಾನ ಮತ್ತು ಧರ್ಮವನ್ನು ಕುರಿತು ಸುಮಾರು 200 ಪುಸ್ತಕಗಳನ್ನು ಬರೆದ. ಅವುಗಳಲ್ಲಿ 9 ಸಂಪುಟಗಳ ಸಮಗ್ರ ವೈದ್ಯಕೀಯ ಗ್ರಂಥವು (ಕಿತಾಬ್ ಅಲ್ -ಹವಿ ಫಿ ಅಲ್-ತಿಬ್) ಮುಖ್ಯ ವಾದದ್ದು. ವಾಸ್ತವದಲ್ಲಿ ಅಲ್-ರಾಜ಼ಿಯ ಮರಣೋತ್ತರವಾಗಿ, ಆತನ ಶಿಷ್ಯರು ಸೇರಿ ಈ ಒಂಬತ್ತು ಸಂಪುಟಗಳನ್ನು ಸಂಪಾದಿಸಿ ದರು. ಅಲ್ -ರಾಜ಼ಿ ಬರೆದಿದ್ದ ಟಿಪ್ಪಣಿಗಳನ್ನೆಲ್ಲ ಕ್ರಮಬದ್ಧವಾಗಿ ಜೋಡಿಸಿ ಸಂಪಾದಿಸಿದ ಕಾರಣ, ಅಲ್-ರಾಜ಼ಿಯ ಸಂಪೂರ್ಣ ವೈದ್ಯಕೀಯ ತಿಳಿವು ಜಗತ್ತಿಗೆ ದೊರೆಯುವಂತಾಯಿತು. ಈ ಸಂಪುಟಗಳಲ್ಲಿ ಇರುವ ಮಾಹಿತಿಯನ್ನು ಪ್ರಧಾನವಾಗಿ ಮೂರು ಭಾಗಗಳಲ್ಲಿ ವಿಂಗಡಿಸಬಹುದು.

ಮೊದಲನೆಯದು ಹಿಪ್ಪೋಕ್ರೇಟ್ಸ್, ಅರಿಸ್ಟಾಟಲ್ ಹಾಗೂ ಗ್ಯಾಲನ್ ಅವರ ವೈದ್ಯಕೀಯ ತಿಳಿವನ್ನು ಸಂಗ್ರಹಿಸಿ, ಅವುಗಳ ಸಾಧಕ-
ಬಾಧಕಗಳನ್ನು ಪುರಾವೆ ಸಮೇತ ವಿವರಿಸಿರುವುದು. ಎರಡನೆಯದು ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದ ಸಮಕಾಲೀನ
ಗ್ರೀಕ್, ಅರೇಬಿಯನ್ ಹಾಗೂ ಭಾರತೀಯ ಜ್ಞಾನವನ್ನೆಲ್ಲ ಸಂಗ್ರಹಿಸಿ, ಅವುಗಳ ತಪ್ಪು ಒಪ್ಪುಗಳ ಬಗ್ಗೆ ವಿವರಿಸಿದ್ದು.

ಮೂರನೆಯದು ಮನುಷ್ಯನ ಶರೀರ ರಚನೆ, ಕಾರ್ಯ, ರೋಗಗಳು ಮತ್ತು ಚಿಕಿತ್ಸೆಯ ಬಗ್ಗೆ ತನ್ನದೇ ಆದ ಹೊಸ ಹೊಸ ಒಳ ನೋಟಗಳನ್ನು ನೀಡಿರುವುದು. ಈ ಗ್ರಂಥವು ಮುಂದಿನ ಇಸ್ಲಾಮ್ ವೈದ್ಯಕೀಯದ ಮೇಲೆ ಅಪಾರ ಪರಿಣಾಮವನ್ನು ಬೀರಿತು. ಅವಿಸೆನ್ನನಂತಹ ವೈದ್ಯನೂ ಸಹ ಈ ಗ್ರಂಥದಿಂದ ಪ್ರಭಾವಿತನಾದ. ಯಹೂದಿ ವೈದ್ಯ ಫರಜ಼್ ಬೆನ್ ಸಲೀಮ್, ಕಿತಾಬ್ ಅಲ್-ಹವಿಯನ್ನು 1279ರಲ್ಲಿ ಲ್ಯಾಟಿನ್ ಭಾಷೆಗೆ ಅನುವಾದಿಸಿದ. ಕೂಡಲೇ ಈ ಗ್ರಂಥವು ಯೂರೋಪ್ ಖಂಡದಲ್ಲಿ ಜನಪ್ರಿಯ ವಾಯಿತು. ಅಲ್ -ರಾಜ಼ಿಯ ಈ ತಿಳಿವಿನ ಸ್ವತಂತ್ರ ಕೊಡುಗೆಯ ಕಾರಣ, ಆತನಿಗೆ ಮಧ್ಯಯುಗದ ಮಹಾನ್ ವೈದ್ಯ ಎಂಬ ಅಭಿದಾನವು ದೊರೆಯಿತು.

ಅಲ್-ರಾಜ಼ಿ ಬರೆದ ಮತ್ತೊಂದು ಮುಖ್ಯ ಗ್ರಂಥವೆಂದರೆ ವೈದ್ಯರು ಇಲ್ಲದವರಿಗೆ (ಮನ್ ಲ ಯಹದುರುಹು ಅಲ್ -ತಬೀಬ್) ಎಂಬ ಜನಸಾಮಾನ್ಯರಿಗಾಗಿ ಬರೆದ ವೈದ್ಯಕೀಯ ಕೃತಿ. ಅಂದು ತಜ್ಞ ವೈದ್ಯರ ಹಾಗೂ ವೈದ್ಯಕೀಯ ಸೇವೆಗಳು ಎಲ್ಲೆಡೆ ದೊರೆಯುತ್ತಿರ ಲಿಲ್ಲ. ಹಾಗಾಗಿ ವೈದ್ಯರು ಇಲ್ಲದ ಕಡೆಯಲ್ಲಿ ಪ್ರಾಥಮಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಗುರಿಯಿಂದ ಶ್ರೀಸಾಮಾನ್ಯ ರಿಗಾಗಿ 36 ಅಧ್ಯಾಯಗಳನ್ನು ಒಳಗೊಂಡ ಜನಪ್ರಿಯ ವೈದ್ಯಕೀಯ ಕೃತಿಯನ್ನು ರಚಿಸಿದ. ಈ ಕೈಪಿಡಿಯು, ವೈದ್ಯಕೀಯ ಶುಲ್ಕ ವನ್ನು ತೆರಲಾಗದ ಬಡವರಿಗೆ ಉಪಯುಕ್ತವಾಯಿತು.

ನಿರಂತರವಾಗಿ ಪ್ರಯಾಣದಲ್ಲಿ ತೊಡಗುವ ವ್ಯಾಪಾರಿಗಳಿಗೆ ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಮಾರ್ಗದರ್ಶಕವಾಯಿತು. ಈ ಕೈಪಿಡಿಯಲ್ಲಿ ಸಾಮಾನ್ಯ ರೋಗಗಳಾದ ತಲೆ ನೋವು, ನೆಗಡಿ, ಕೆಮ್ಮು, ವಾಂತಿ, ಬೇದಿ, ಕಣ್ಣು ನೋವು, ಕಿವಿ ನೋವು, ಹೊಟ್ಟೆ ನೋವು ಮುಂತಾದ ರೋಗಗಳನ್ನು ಪ್ರಸ್ತಾಪಿಸಿದ. ಅವುಗಳ ರೊಗಲಕ್ಷಣಗಳನ್ನು ವಿವರಿಸಿದ. ಅವುಗಳನ್ನು ಗುಣಪಡಿಸಲು ಅಗತ್ಯ ಔಷಧಗಳನ್ನು ಹಾಗೂ ಪಾಲಿಸಬೇಕಾದ ಪಥ್ಯದ ವಿವರವನ್ನು ಪ್ರಸ್ತಾಪಿಸದ.

ಔಷಧಗಳನ್ನು ಸಿದ್ಧಪಡಿಸಲು ಅಗತ್ಯವಾದ ವಸ್ತುಗಳು ಎಲ್ಲ ಸಾಮಾನ್ಯ ಮಾರುಕಟ್ಟೆಯಲ್ಲಿ ಅಥವ ಅಡುಗೆ ಮನೆಯಲ್ಲಿ
ದೊರೆಯುವಂತೆ ಗಮನ ವಹಿಸಿದ. ಇವನ್ನು ಬಳಸಿಕೊಂಡು ಹೇಗೆ ಔಷಧವನ್ನು ಸಿದ್ಧಪಡಿಸಬೇಕು ಎನ್ನುವುದನ್ನು ವಿವರವಾಗಿ ಬರೆದ. ವೈದ್ಯಕೀಯ ಪಾರಿಭಾಷಿಕ ಪದಗಳ ಗೊಂದಲವಿಲ್ಲದೆ, ಜನಸಾಮಾನ್ಯರ ಆಡು ಭಾಷೆಯಲ್ಲಿ ಬರೆದ ಈ ಗ್ರಂಥವು ಅಪಾರ ಜನಪ್ರಿಯತೆಯನ್ನು ಗಳಿಸಿತು. ಜತೆಗೆ ಇಸ್ಲಾಮಿ ಔಷಧ ತಯಾರಿಕಾ ವಿಜ್ಞಾನಕ್ಕೆ (ಫಾರ್ಮಸಿ) ನಾಂದಿಯನ್ನು ಹಾಡಿತು. ಬಡವರ ವೈದ್ಯಕೀಯ (ತಿಬ್ ಅಲ್ -ಖುರ) ಎಂದೂ ಹೆಸರಾದ ಈ ಇಂತಹ ಪುಸ್ತಕವು, ಮೊದಲ ಬಾರಿಗೆ ಇಸ್ಲಾಮ್ ಜಗತ್ತಿನಲ್ಲಿ ಕಂಡು ಬಂದಿತು.

ಅಲ್-ರಾಜ಼ಿಯ ಈ ಕೈಪಿಡಿಯ ಜನಪ್ರಿಯತೆಯನ್ನು ನೋಡಿ, ಮುಂದೇ ಅನೇಕರು ಜನಸಾಮಾನ್ಯರಿಗಾಗಿ ಹಲವು ಪುಸ್ತಕಗಳನ್ನು
ಬರೆದರು. ಹೀಗೆ ಜನಸಾಮಾನ್ಯರಿಗಾಗಿ ವೈದ್ಯಕೀಯ ಸಾಹಿತ್ಯ ರಚನೆಯ ಪರಂಪರೆಯು ಆರಂಭವಾಯಿತು. ಅಲ್-ರಾಜ಼ಿ ಶಿಶು ವೈದ್ಯಕೀಯಕ್ಕೆ ಅಪಾರ ಕಾಣಿಕೆಯನ್ನು ನೀಡಿದ. ಸಿಡುಬು ಮತ್ತು ದಡಾರ ಮಕ್ಕಳ ಪ್ರಮುಖ ರೋಗಗಳಾಗಿದ್ದವು. ಇವೆರಡೂ ಒಂದೇ ಎಂದು ಭಾವಿಸಿದ್ದರು. ಅಲ್-ರಾಜ಼ಿ ಇವೆರಡು ಭಿನ್ನವಾದವು ಎನ್ನುವುದನ್ನು ಗುರುತಿಸಿದ. ಅವುಗಳ ರೋಗ ಲಕ್ಷಣಗಳನ್ನು ಹಾಗೂ ರೋಗಪ್ರಗತಿಯನ್ನು ಪ್ರತ್ಯೇಕವಾಗಿ ವಿವರಿಸಿದ.

ಎರಡೂ ರೋಗಗಳಲ್ಲಿ ಗುಳ್ಳೆಗಳು ಚರ್ಮದ ಮೇಲೆ ಕಂಡು ಬರುತ್ತವೆಯಾದರೂ, ಅವುಗಳ ಸ್ವರೂಪ ಹೇಗೆ ಭಿನ್ನವಾಗಿರುತ್ತದೆ ಎನ್ನುವುದನ್ನು ಪುರಾವೆಸಹಿತ ವಿವರಿಸಿದ. ಸಿಡುಬು ಮತ್ತು ದಡಾರ ರೋಗಗಳ ಚಿಕಿತ್ಸೆ (ಅಲ್-ಜುದಾರಿ ವಾ ಅಲ್-ಹಸ್ಬ) ಎಂಬ
ಪುಸ್ತಕವನ್ನು ಬರೆದ. ಈ ಪುಸ್ತಕದಲ್ಲಿ ಸಿಡುಬು ಮತ್ತು ದಡಾರದ ಬಗ್ಗೆ ಹಿಪ್ರೋಕ್ರೇಟ್ಸ್ ಮತ್ತು ಗ್ಯಾಲನ್ ಅವರ ಅನಿಸಿಕೆಗಳನ್ನು ಸ್ಮರಿಸಿರುವುದು ಅಲ್-ರಾಜ಼ಿಯ ಹೆಗ್ಗಳಿಕೆಯಾಗಿದೆ. ಈ ಪುಸ್ತಕವು ಲ್ಯಾಟಿನ್, ಬೈeಂಟೈನ್ ಗ್ರೀಕ್ ಹಾಗೂ ಇತರ ಯೂರೋಪಿ ಯನ್ ಭಾಷೆಗಳಿಗೆ ಅನುವಾದವಾಯಿತು.

ಅಲ್-ರಾಜ಼ಿ ಮಕ್ಕಳ ರೋಗಗಳು ಅಥವ ಶೈಶವ ರೋಗಗಳ ಚಿಕಿತ್ಸೆ (ರಿಸಾಲ ಫಿ ಅಮ್ರಾಜ್ ಅಲ್ ಅತಲ್ ವ ಐ ಐನಾಯ ಬಿಹಿಮ್) ಎಂಬ ಪುಸ್ತಕವನ್ನೂ ಬರೆದ. ಇದು ಜಗತ್ತಿನ ಮೊದಲ ಶಿಶುವೈದ್ಯಕೀಯ ಗ್ರಂಥ ಎಂದು ಪ್ರಸಿದ್ಧವಾಗಿದೆ. ಇದರಲ್ಲಿ ಒಟ್ಟು 24 ಅಧ್ಯಾಯಗಳಿವೆ. ಸೋಂಕು ರೋಗಗಳು ಬರುವ ಬಗ್ಗೆ ಅಲ್-ರಾಜ಼ಿ ಬರಹವನ್ನು ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನ ಮೊದಲ ವೈಜ್ಞಾನಿಕ ಬರಹ ಎಂದು ಗೌರವಿಸಿದೆ. ಹಾಗಾಗಿ ಕೆಲವರು ಅಲ್-ರಾಜ಼ಿಯನ್ನು ಶಿಶುವೈದ್ಯಕೀಯ ಪಿತಾಮಹ ಎಂದೂ ಕರೆದಿ ದ್ದಾರೆ.

ಅಲ್-ರಾಜಿ ತನ್ನ ಸಮಕಾಲೀನ ವೈದ್ಯಕೀಯ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿದ. ತನ್ನ ಅನಿಸಿಕೆಗಳನ್ನು ಮುಚ್ಚುಮರೆ ಯಿಲ್ಲದೆ ಹೇಳಿದ. ಹಿಪ್ಪೋಕ್ರೇಟ್ಸ್, ಅರಿಸ್ಟಾಟಲ್, ಗ್ಯಾಲನ್ ಮುಂತಾದವರು ಮಾಡಿದ ತಪ್ಪುಗಳನ್ನು ಎತ್ತಿ ಹೇಳಿದ ಅಲ್-ರಾಜ಼ಿ ತನ್ನ ಸಮಕಾಲೀನ ವೈದ್ಯರ ಹುಸಿ ವೈದ್ಯಕೀಯವನ್ನು ಬಲವಾಗಿ ಟೀಕಿಸಿದ. ವೈದ್ಯನಾದವನು ಸದಾ ವಿದ್ಯಾರ್ಥಿಯಾಗಿರ ಬೇಕೆಂದ. ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಹೊಸ ಬೆಳವಣಿಗೆಗಳನ್ನು ಅರಿವನ್ನು ತಿಳಿದುಕೊಳ್ಳಬೇಕೆಂದ. ಸದಾ ತನ್ನ ವೈದ್ಯಕೀಯ ಅರಿವನ್ನು ನಿಶಿತಗೊಳಿಸಿಕೊಳ್ಳುತ್ತಿರಬೇಕು ಎಂದ.

ಇದು ಇಂದಿನ ವೈದ್ಯರು ಪರಿಪಾಲಿಸುವ ನಿರಂತರ ವೈದ್ಯಕೀಯ ಶಿಕ್ಷಣವನ್ನು (ಕಂಟಿನ್ಯೂಡ್ ಮೆಡಿಕಲ್ ಎಜುಕೇಶನ್) ಹೋಲು ತ್ತದೆ ಎನ್ನಬಹುದು. ವೈದ್ಯನು ಪೂರ್ಣ ಗುಣಪಡಿಸಬಹುದಾದ ಹಾಗೂ ಗುಣಪಡಿಸಲಾಗದ ರೋಗಗಳ ಬಗ್ಗೆ ತಿಳಿದಿರಬೇಕೆಂದ. ಕ್ಯಾನ್ಸರ್ ಮತ್ತು ಕುಷ್ಟ ಅಂದಿನ ದಿನಗಳಲ್ಲಿ ಚಿಕಿತ್ಸೆಯಿಲ್ಲದ ರೋಗಗಳಾಗಿದ್ದವು. ಇಂತಹ ರೋಗಗಳನ್ನು ಗುಣಪಡಿಸುತ್ತೇವೆ ಎಂದು ಹೇಳಿಕೊಳ್ಳುವುದು ತಪ್ಪು ಎಂದ.

‘ವೈದ್ಯರ ಬದುಕಿನ ಏಕೈಕ ಗುರಿ ಉಪಶಮನವನ್ನು ನೀಡುವುದು. ನನ್ನ ಗೆಳೆಯರಿಗೆ ಹಾಗೂ ಬಂಧುಗಳಿಗೆ ಬಿಡಿ, ನನ್ನ ಶತ್ರುಗಳು ಬಂದರೂ ಸಹ ಅವರಿಗೆ ಚಿಕಿತ್ಸೆಯನ್ನು ನೀಡಬೇಕು. ನನ್ನ ವೃತ್ತಿಯು ಯಾವುದೇ ಜೀವಹಾನಿಯನ್ನು ಬಯಸುವುದಿಲ್ಲ. ಮನುಕುಲದ ಒಳಿತಿಗೆ ಹಾಗೂ ಭವಿಷ್ಯಕ್ಕೆ ಮೀಸಲಿಟ್ಟಿದೆ. ವೈದ್ಯರು ಯಾವುದೇ ಹಾನಿಕರ ಕೆಲಸದಲ್ಲಿ ತೊಡಗಬಾರದೆಂದು ಆ ದೇವರು ವೈದ್ಯರ ಕೈಯಲ್ಲಿ ಪ್ರಮಾಣ ಮಾಡಿಸಿಕೊಂಡಿದ್ದಾನೆ ವೈದ್ಯಕೀಯದ ಬಗ್ಗೆ ಅಲ್ -ರಾಜ಼ಿಯ ಅನಿಸಿಕೆಯು ಸಾರ್ವಕಾಲಿಕ ಸತ್ಯವಾಗಿದೆ.

ಅಲ್-ರಾಜ಼ಿ ತನ್ನ ಕೊನೆಯ ದಿನಗಳನ್ನು ರೇ ನಗರದಲ್ಲಿ ಕಳೆದ. ಆತನಿಗೆ ಕಣ್ಣುಗಳಿಗೆ ಗ್ಲಾಕೋಮ ಬಂದಿತು. ನಂತರ ಕಣ್ಣು ಪೊರೆಯು ಬೆಳೆಯಿತು. ಕೊನೆಗೆ ಪೊರೆಯು ಪೂರ್ಣ ಬಲಿತಾಗ ಸಂಪೂರ್ಣ ಅಂಧತ್ವವು ತಲೆದೋರಿತು. ಒಬ್ಬ ಸಹವೈದ್ಯನು ಅಂಧತ್ವವನ್ನು ಗುಣಪಡಿಸುತ್ತೇನೆ ಎಂದು ಮುಂದೆ ಬಂದಾಗ, ಅಲ್-ರಾಜ಼ಿ ಅವನಿಗೆ ಕಣ್ಣಿನಲ್ಲಿ ಎಷ್ಟು ಪದರಗಳಿವೆ ಎಂದು ಪ್ರಶ್ನೆಯನ್ನು ಕೇಳಿದ. ಆ ವೈದ್ಯನು ಉತ್ತರಿಸದೇ ಇದ್ದಾಗ, ಅಂಗರಚನೆಯ ಮೂಲಭೂತ ಅರಿವಿಲ್ಲದ ವೈದ್ಯನಿಂದ ನಾನು ಚಿಕಿತ್ಸೆಯನ್ನು ಪಡೆಯಲಾರೆ ಎಂದು ನಿರಾಕರಿಸಿದ.

ಇಸ್ಲಾಮ್ ಜಗತ್ತಿನಲ್ಲಿ ಅಲ್-ರಾಜಿ ಎಂದು ಜನಪ್ರಿಯನಾಗಿದ್ದ ಈತನು ರಾಜ಼ೆಸ್ ಎಂಬ ಹೆಸರಿನಿಂದ ಪಾಶ್ಚಾತ್ಯ ವೈದ್ಯಕೀಯದಲ್ಲಿ ಪ್ರಸಿದ್ಧ. ಈತನ ಹೆಸರು ಇಂದಿಗೂ ಪ್ರಚಲಿತದಲ್ಲಿದೆ. ಅಲ್-ರಾಜ಼ಿಯ ಹುಟ್ಟಿದ ಆಗಸ್ಟ್ ೨೭ರಂದು ಇಂದಿನ ಇರಾನಿಯನ್ನರು ಇರಾನಿಯನ್ನರ ರಾಷ್ಟ್ರೀಯ ಔಷಧ ವಿತರಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದಾರೆ. ೧೯೯೫ರಿಂದ ರಾಜ಼ಿ ಜೈವರಸಾಯನ ಸಂಶೋಧನಾ ಉತ್ಸವವು ಜನವರಿ ತಿಂಗಳಿನಲ್ಲಿ ನಡೆಯುತ್ತಿದೆ.

ಇರಾನ್ ಸರ್ಕಾರವು ಅತ್ಯುತ್ತಮ ಜೈವರಸಾಯನ ಸಂಶೋಧಕರಿಗೆ ಅರ್-ರಾಜ಼ಿ ಪದಕವನ್ನು ಇತ್ತು ಗೌರವಿಸುತ್ತಿದೆ. ಇರಾನ್
ದೇಶವು ವಿಶ್ವಸಂಸ್ಥೆಯ ವಿಯನ್ನ ಇಂಟರ್ ನ್ಯಾಶನಲ್ ಸೆಂಟರಿನಲ್ಲಿ ಇಸ್ಲಾಂ ಜಗತ್ತಿನ ದೈತ್ಯ ಪ್ರತಿಭೆಗಳಾದ ಅಲ್ -ರಾಜ಼ಿ, ಅವಿಸೆನ್ನ, ಅಬು ರೆಹಾನ್ ಬಿರೂನಿ ಮತ್ತು ಉಮರ್‌ ಖಯಾಮ್ ಅವರ ಮೂರ್ತಿಗಳನ್ನು ಸ್ಥಾಪಿಸಿದೆ.