ನವದೆಹಲಿ: ಇಂಧನ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ದೆಹಲಿಯ ವಿಜಯ್ ಚೌಕ್ ಮುಂದೆ ಕಾಂಗ್ರೆಸ್ ಸಂಸದರು ರಾಹುಲ್ ಗಾಂಧಿ ನೇತೃತ್ವದಲ್ಲಿ ಗುರುವಾರ ಧರಣಿ ನಡೆಸಿದರು.
ಲೋಕಸಭೆ ಮತ್ತು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಲೋಕಸಭೆಯ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾ ರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ.
ಇಂಧನ, ಅಡುಗೆ ಅನಿಲ ಸೇರಿದಂತೆ ಹಣದುಬ್ಬರ ವಿರುದ್ಧ ಕಾಂಗ್ರೆಸ್ ವಾರದವರೆಗೆ ದೇಶಾದ್ಯಂತ ಪ್ರತಿಭಟನೆ ಕೈಗೊಳ್ಳಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಪ್ರತಿ ಲೀಟರ್ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ 10 ದಿನಗಳಲ್ಲಿ ಪ್ರತಿ ಲೀಟರ್ಗೆ 6.40 ರೂಪಾಯಿಯಷ್ಟು ಹೆಚ್ಚಳವಾಗಿದೆ. ನಾಲ್ಕೂವರೆ ತಿಂಗಳ ನಂತರ ಮಾರ್ಚ್ 22ರ ನಂತರ ಸತತ 9 ಬಾರಿ ಇಂಧನ ಬೆಲೆ ಹೆಚ್ಚಳವಾಗುತ್ತಿದೆ.
ಸಂಸದ ರಾಹುಲ್ ಗಾಂಧಿ ಮಾತನಾಡಿ, ಕಾಂಗ್ರೆಸ್ ಪಕ್ಷ ದೆಹಲಿ ಸೇರಿದಂತೆ ಪ್ರತಿ ರಾಜ್ಯಗಳಲ್ಲಿ ಪ್ರತಿ ಜಿಲ್ಲೆ, ಬ್ಲಾಕ್ ಮಟ್ಟದಲ್ಲಿ ಕೂಡ ಅಡುಗೆ ಅನಿಲ, ಇಂಧನ ಬೆಲೆ ಏರಿಕೆ ಖಂಡಿಸಿ ಧರಣಿ ನಡೆಸುತ್ತಿದೆ. ಏರಿಕೆಗೆ ಕಡಿವಾಣ ಹಾಕುವವರೆಗೆ ಧರಣಿ ಮುಂದು ವರಿಯಲಿದೆ, ಈ ಬಗ್ಗೆ ಸಂಸತ್ತಿನಲ್ಲಿ ಸೋಮವಾರ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.