ವ್ಯಾಪಕವಾಗುತ್ತಿರುವ ನೋವೆಲ್ ಕರೋನಾ ವೈರಸ್‌ಗೆ ಚೀನಾ ಒಂದರಲ್ಲೇ 305 ಮಂದಿ ಅಸುನೀಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿರುವ ಭಾರತ, ಚೀನೀ ಪ್ರವಾಸಿಗರಿಗೆ ನೀಡುತ್ತಿದ್ದ ಇ-ವೀಸಾ ಸೌಲಭ್ಯಗಳನ್ನು ರದ್ದು ಮಾಡಿದೆ.
“ಪ್ರಸಕ್ತ ಬೆಳವಣಿಗೆಗಳ ಕಾರಣ ಇ-ವೀಸಾಗಳ ಮೇಲೆ ಭಾರತಕ್ಕೆ ಪ್ರಯಾಣ ಮಾಡುವ ಸಾಧ್ಯತೆಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಇದು ಚೀನೀ ಪಾಸ್‌ಪೋರ್ಟ್‌ದಾರರು ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿ ವಾಸಿಸುತ್ತಿರುವ ಇತರೆ ದೇಶಗಳ ಪ್ರಜೆಗಳಿಗೆ ಅನ್ವಯಿಸಲಿದೆ. ಅದಾಗಲೇ ಇ-ವೀಸಾ ಪಡೆದುಕೊಂಡವರಿಗೂ ಸಹ ಈ ರದ್ದತಿಯು ಈ ಕ್ಷಣದಿಂದಲೇ ಅನ್ವಯವಾಗಲಿದೆ,” ಎಂದು ಬೀಜಿಂಗ್‌ನಲ್ಲಿರುವ ಭಾರತಿಯ ರಾಯಭಾರ ಕಚೇರಿ ಪ್ರಕಟಣೆ ಬಿಡುಗಡೆ ಮಾಡಿದೆ.
ಚೀನಾ ಹಾಗೂ ಹಾಂಗ್‌ಕಾಂಗ್‌ನಿಂದ ಆಗಮಿಸುತ್ತಿರುವ ಪ್ರವಾಸಿಗರ ಆರೋಗ್ಯ ತಪಾಸಣೆಯನ್ನು ಭಾರತ ಅದಾಗಲೇ ಆರಂಭಿಸಿದ್ದು, ಈ ಶೋಧವನ್ನು ಸಿಂಗಪುರ ಹಾಗೂ ಥಾಯ್ಲೆಂಡ್ ಪ್ರವಾಸಿಗರಿಗೂ ವಿಸ್ತರಿಸಲಾಗಿದೆ. ಕರೋನಾ ವೈರಸ್ ರೋಗಾಣು ಅದಾಗಲೇ 15,000 ಮಂದಿ ಮೇಲೆ ಆಕ್ರಮಣ ಮಾಡಿದ್ದು, ಚೀನಾ ಅಲ್ಲದೇ ಫಿಲಿಪ್ಪೀನ್ಸ್‌ನಲ್ಲೂ ಈ ಸಂಬಂಧ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಭಾರತದಲ್ಲಿ, ಕೇರಳದ ಇಬ್ಬರು ವ್ಯಕ್ತಿಗಳು ನೋವೆಲ್ ಕರೋನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿ ಕಂಡುಬಂದಿದ್ದಾರೆ.
ರೋಗಪೀಡಿತ ಚೀನಾದ ವುಹಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲೆಂದು ಕಾರ್ಯಾಚರಣೆಗೆ ಇಳಿದಿರುವ ದೆಹಲಿ, ಅದಾಗಲೇ 654 ಮಂದಿಯನ್ನು ಏರ್ ಇಂಡಿಯಾದ 747 ಜಂಬೋ ಜೆಟ್‌ಗಳ ಮೂಲಕ ಸ್ವದೇಶಕ್ಕೆ ಕರೆತಂದಿದೆ. ಮರಳಿ ಬಂದ ಈ ಜನರನ್ನು ತೀವ್ರ ತಪಾಸಣಾ ಘಟಕಗಳಲ್ಲಿ (ಕ್ವಾರಂಟೈನ್) ಎರಡು ವಾರಗಳ ಮಟ್ಟಿಗೆ ಇಡಲಾಗುತ್ತಿದೆ.
ಇದೇ ವೇಳೆ, ಚೀನಾಗೆ ತೆರಳುವ ಎಲ್ಲ ವಿಮಾನಗಳನ್ನು ಅಮೆರಿಕ ಕ್ಯಾನ್ಸಲ್ ಮಾಡಿದೆ.