ಸಿಲಿಂಡರ್ ೧ಕ್ಕೆ ೨೩೦೦, ಹೊಟೇಲ್ ಮಾಲೀಕರಿಗೆ ಭಾರಿ ಹೊಡೆತ
ತಿನಿಸು ದರದಲ್ಲಿ ಏರಿಕೆ ಸಾಧ್ಯತೆ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ರಷ್ಯಾ-ಉಕ್ರೇನ್ ಯುದ್ಧದ ನೇರ ಪರಿಣಾಮ ಭಾರತದ ತೈಲೋತ್ಪನ್ನಗಳ ಮೇಲೆ ಬೀರುತ್ತಿದ್ದು, ಇದರೊಂದಿಗೆ ದಿನದಿಂದ ದಿನಕ್ಕೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ ಏರುಗತಿಯಲ್ಲಿ ಆಗುತ್ತಿದೆ. ಅದರಲ್ಲಿಯೂ ವಾಣಿಜ್ಯ ಉದ್ದೇಶಿತ ಸಿಲಿಂಡರ್ ದರ ಕಳೆದೊಂದು ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ ಶೇ.೧೧೦ರಷ್ಟು ಏರಿಕೆ ಕಂಡಿರುವುದು ಉದ್ಯಮಿಗಳಿಗೆ ನುಂಗಲಾರದ ತುತ್ತಾಗಿದೆ.
ಹೌದು, ಪ್ರಸ್ತುತ ವಾಣಿಜ್ಯ ಸಿಲಿಂಡರ್ ದರ ೨,೩೬೦ ರು. ಆಗಿದೆ. ಗೃಹೋಪಯೋಗಿ ಸಿಲಿಂಡರ್ ದರ ೯೮೬ ರು. ಇದೆ. ವಾಣಿಜ್ಯ ಸಿಲಿಂಡರ್ ಮೇಲೆಯೇ ಹೊಟೇಲ್ ಉದ್ಯಮಿ ಗಳು, ವಿವಿಧ ಕೈಗಾರಿಕೋದ್ಯಮಿಗಳು ಅವಲಂಭಿಸಿರುವುದರಿಂದ, ಉದ್ಯಮಿಗಳು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತ್ತ ಗ್ಯಾಸ್ ಬೆಲೆ ಏರಿಕೆಯಾಗಿದೆ ಎಂದು ಹೊಟೇಲ್ ತಿಂಡಿ-ತಿನಿಸಿನ ದರವನ್ನು ಏರಿಸಲು ಆಗದೇ, ಬಿಡಲು ಆಗದಿರುವ ಸ್ಥಿತಿಯಲ್ಲಿ ಉದ್ಯಮಿಗಳಿ ದ್ದಾರೆ.
ವಾಣಿಜ್ಯ ಬಳಕೆಯ ೧೯ ಕೆ.ಜಿ. ಸಿಲಿಂಡರ್ ಬೆಲೆ ೨,೩೬೦ ಆಗಿದ್ದು, ಕಳೆದೊಂದು ವಾರ ದಲ್ಲಿಯೇ ೨೫೦ ರು. ಗೂ ಹೆಚ್ಚು ಬೆಲೆ ಏರಿಕೆಯಾಗಿದೆ. ಕಳೆದೊಂದು ವರ್ಷದಲ್ಲಿ ಒಂದು ಸಾವಿರ ರು. ಏರಿಕೆ ಕಂಡಿದೆ. ಈ ರೀತಿಯ ಏರುಗತಿ ಹೀಗೆ ಮುಂದುವರಿದರೆ, ಮುಂದಿನ ದಿನದಲ್ಲಿ ಹೊಟೇಲ್ಗಳನ್ನು ನಡೆಸುವುದೇ ಕಷ್ಟ ಎನ್ನುವ ಮಾತುಗಳನ್ನು ಅನೇಕರು ಹೇಳಿದ್ದಾರೆ.
ಜನಸಾಮಾನ್ಯರ ಮೇಲೆ ನೇರ ಹೊರೆ: ನಿರಂತರವಾಗಿ ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗುತ್ತಿರುವುದರಿಂದ, ಹೊಟೇಲ್ ಮಾಲಿಕರು ದರಪಟ್ಟಿ ಏರಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಏಪ್ರಿಲ್ ೨ನೇ ವಾರದಲ್ಲಿಯೇ ಎಲ್ಲ ಆಹಾರ ತಿನಿಸಿನ ಮೇಲೆ ಶೇ.೧೦ರಷ್ಟು ದರ ಏರಿಸಲು ಚಿಂತನೆ ನಡೆದಿದೆ.
ಈ ಸಂಬಂಧ ಹೋಟೆಲ್ ಮಾಲಿಕರ ಸಂಘ ಸೋಮವಾರ(ಏ.೪) ಸಭೆ ಕರೆದಿದೆ. ವಾಣಿಜ್ಯ ಸಿಲಿಂಡರ್ ಬೆಲೆ ೨೫೦ರು.ಗೆ ಏರಿಕೆ ಯಾಗಿದ್ದು, ಕಳೆದ ತಿಂಗಳು ೧೦೦ರು. ಏರಿಕೆಯಾಗಿತ್ತು. ಗ್ರಾಹಕರಿಗೆ ಆರ್ಥಿಕ ಹೊರೆಯಾದರೂ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಏ.೪ರ ಸಂಜೆ ಹೋಟೆಲ್ ಮಾಲೀಕರ ಸಂಘದವರೊಂದಿಗೆ ಸಭೆ ನಡೆಸಿ, ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕಾಫಿ ಬೀಜ ದರವೂ ಏರಿಕೆ
ಸಿಲಿಂಡರ್ ಬೆಲೆ ಮಾತ್ರವಲ್ಲದೇ, ಕಾಫಿ ಬೀಜ ದರದಲ್ಲೂ ಭಾರೀ ಏರಿಕೆ ಕಾಣಿಸಿಕೊಂಡಿರುವುದು ಹೊಟೇಲ್ ಉದ್ಯಮಿಗಳಿಗೆ ಹೊಡೆತ ಬಿದ್ದಿದೆ. ಈ ಬೆಲೆ ಏರಿಕೆ ಸಣ್ಣ ಹೊಟೇಲ್ಗಿಂತ ದೊಡ್ಡ ಹೊಟೇಲ್ ಗಳಿಗೆ ಸಮಸ್ಯೆ ತಂದಿದೆ. ಈ ಹಿಂದೆ ಎರಡು ಸಾವಿರ
ರು. ಇದ್ದ ದರ ನಾಲ್ಕು ಸಾವಿರಕ್ಕೆ ಏರಿಕೆಯಾಗಿದೆ. ಹಾಗೆಂದು ಹೊಟೇಲ್ನಲ್ಲಿ ಕಾಫಿ ದರ ಏರಿಸಲು ಸಾಧ್ಯವಿಲ್ಲ. ಗ್ಯಾಸ್ ಬೆಲೆ ಏರಿಕೆ, ಕಾಫಿ ಬೆಲೆ ಏರಿಕೆ, ದಿನಸಿ ದರ ಏರಿಕೆಯಾದರೆ ಹೊಟೇಲ್ಗಳನ್ನು ನಡೆಸುವುದು ಕಷ್ಟ ಎನ್ನುವ ಅಳಲನ್ನು ಹೊಟೇಲ್ ಮಾಲೀಕರು ತೋಡಿಕೊಂಡಿದ್ದಾರೆ.
***
ವಾಣಿಜ್ಯ ಸಿಲಿಂಡರ್ ದರದಲ್ಲಿ ಶೇ.೧೧೦ ರಷ್ಟು ದರ ಏರಿಕೆಯಾಗಿದೆ. ಇದರೊಂದಿಗೆ ಕಾಫಿ ಬೀಜ ದರದಲ್ಲಿ ಭಾರೀ ಏರಿಕೆ ಯಾಗುತ್ತಿದೆ. ಮುಂದಿನ ದಿನದಲ್ಲಿ ದಿನಸಿ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದೆ. ಈ ರೀತಿಯಾದರೆ, ಮಧ್ಯಮ ಹಾಗೂ ಸಣ್ಣ ಹೊಟೇಲ್ಗಳ ನಿರ್ವಹಣೆಗೆ ಭಾರಿ ಸಮಸ್ಯೆಯಾಗುತ್ತದೆ.
– ಸದಾನಂದ ಮಯ್ಯ ಸಂಸ್ಥಾಪಕರು, ಮಯ್ಯಾಸ್ ಸಂಸ್ಥೆ