Friday, 20th September 2024

ಕಾರ್ಯಾಚರಣೆಯಲ್ಲಿ ಅಡಗುತಾಣ ಪತ್ತೆ: ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿಯ ಹಳ್ಳಿಯೊಂದರಲ್ಲಿ ಭದ್ರತಾ ಪಡೆಗಳು ಉಗ್ರರ ಅಡಗುತಾಣವನ್ನು ಭೇದಿಸಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ  ಎಂದು ವರದಿಯಾಗಿದೆ.

ಸೇನೆ ಮತ್ತು ಪೊಲೀಸರು ನೂರಕೋಟೆ ಗ್ರಾಮದಲ್ಲಿ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಅಡಗುತಾಣ ಪತ್ತೆಯಾಗಿದೆ .

ಎರಡು ಎಕೆ-47 ರೈಫಲ್ಸ್ ಗಳು, 63 ಗುಂಡು ಸುತ್ತುಗಳು, ಹ್ಯಾಂಡ್ ಗ್ರೀಪ್ ನೊಂದಿಗೆ ಒಂದು 223 ಬೋರ್ ಎಕೆ ಮಾದರಿಯ ಗನ್, ಅದರು ಎರಡು ಮ್ಯಾಗಜಿನ್ ಗಳು ಮತ್ತು 20 ಗುಂಡು ಸುತ್ತುಗಳು ಮತ್ತು ಮ್ಯಾಗಜಿನ್ ನೊಂದಿಗೆ ಚೀನಾದ ಪಿಸ್ತೂಲ್ ವೊಂದನ್ನು ಅಡಗುತಾಣದಿಂದ ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ಭಾನುವಾರ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.