Friday, 22nd November 2024

‘ಆರ್ಸೆನಿಕಮ್ ಆಲ್ಬಮ್’ ನಿಂದ ನಿವಾರಣೆ ಕರೋನಾ: ಸುಳ್ಳು ಸುದ್ದಿ ಎಂದ ಆಯುಷ್ ಇಲಾಖೆ

ಬೆಂಗಳೂರು:
ಕರೋನಾ ಸೋಂಕನ್ನು ಹೋಮಿಯೋಪಥಿ ಔಷಧಿ ‘ಆರ್ಸೆನಿಕಮ್ ಆಲ್ಬಮ್’ ನಿಂದ ನಿವಾರಣೆ ಮಾಡಬಹುದು ಎಂಬುದು ಸುಳ್ಳು ಸುದ್ದಿ ಎಂದು ಆಯುಷ್ ಇಲಾಖೆ ಸ್ಪಷ್ಟಪಡಿಸಿದೆ.
ಖಾಲಿ ಹೊಟ್ಟೆಯಲ್ಲಿ ಆರ್ಸೆನಿಕಮ್ ಆಲ್ಬಮ್ ಔಷಧಿಯನ್ನು ಮೂರು ದಿನ ಸೇವಿಸಿದರೆ ಸೋಂಕು ನಿವಾರಣೆಯಾಗುತ್ತದೆ ಎಂಬ ಸುಳ್ಳು ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹಿರಿದಾಡಿತ್ತು. ನೆಗಡಿ, ಶೀತ, ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಗೆ ಈ ಔಷಧಿಯನ್ನು ಬಳೆಕೆ ಮಾಡಲಾಗುತ್ತದೆ. ಆದರೆ, ಕರೊನಾ ಸೋಂಕಿಗೆ ಬಳಸುವುದಿಲ್ಲ. ಈ ಬಗ್ಗೆ ಯಾವುದೇ  ಸಂಶೋಧನೆ ನಡೆದಿಲ್ಲ ಎಂದು ಇಲಾಖೆ ತಿಳಿಸಿದೆ.
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಲಿದ್ದು, ಅವರಿಗೆ ಸೋಂಕು ತಗಲುವ ಸಾಧ್ಯತೆಗಳಿವೆ. ಆದ್ದರಿಂದ ಅವರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಲು ಮತ್ತು ತುಪ್ಪವನ್ನು ನಿರಂತರವಾಗಿ ನೀಡಬೇಕು. ಅದೇ ರೀತಿ, ಅಮೃತಬಳ್ಳಿ, ನೆಲ್ಲಿಕಾಯಿ ಸೇರಿದಂತೆ ವಿವಿಧ ಗಿಡಮೂಲಿಕೆಗಳ ಸೇವನೆಯಿಂದಲೂ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಆಯುರ್ವೇದದಲ್ಲಿ ಈ ರೋಗಕ್ಕೆ ನಿರ್ದಿಷ್ಟ ಔಷಧಿಯಿಲ್ಲ. ತುಳಸಿ ಎಲೆಗಳು, ಪುಡಿಮಾಡಿದ ಶುಂಠಿ ಮತ್ತು ಅರಿಶಿಣ ಪುಡಿಯನ್ನು ಕುದಿಸಿದ ನೀರಿಗೆ ಹಾಕಿ, ಕುಡಿಯುವ ಮೂಲಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಮಾಹಿತಿ ನೀಡಲಾಗಿದೆ.
ಕೆಮ್ಮು ಕಾಣಿಸಿಕೊಂಡಾಗ ಒಂದು ಚಿಟಕಿ ಮೆಣಸಿನೊಂದಿಗೆ ಜೇನುತುಪ್ಪವನ್ನು ಸೇವಿಸಬೇಕು. ಸಾಮಾಜಿಕ ಅಂತರದಿಂದ ಸೋಂಕು ಹರಡುವಿಕೆಯನ್ನು ತಡೆಯಲು ಸಾಧ್ಯ ಎಂದು ಸಲಹೆ ನೀಡಲಾಗಿದೆ.