Thursday, 19th September 2024

ಕಣಿವೆಯಲ್ಲಿ ನೇರ ದಬ್ಬಾಳಿಕೆ

ಸಂತೋಷಕುಮಾರ ಮೆಹೆಂದಳೆ

ಮಾರಣ ಹೋಮ_ ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ (ಭಾಗ- ೭)

ಹೀಗೆ ನೇರವಾಗಿ ಜನಾಂಗವೊಂದರ ಬುಡಕ್ಕೆ ಕೈಯಿಡುವ ಧೈರ್ಯ ಬಿಟ್ಟಾ ಮತ್ತು ಯಾಸಿನ್‌ನಂಥವರಿಗೆ ಬಂದಿದ್ದಾರೂ ಹೇಗೆ..? ಅವನಿಗೂ ಈಪರಿಯ ಸೊಕ್ಕಿನ ಹುಂಬತನ ಬರಲು ಕಾರಣ 1989 ರ ನವಂಬರ್ ಅಂದರೆ ಕೇವಲ ಎರಡು ತಿಂಗಳ ಹಿಂದೆ ಗೃಹ ಮಂತ್ರಿಯಾದ ಮುಫ್ತಿ ಮಹಮ್ಮದ ಸಯಿದ್ ಪುತ್ರಿಯನ್ನೇ ಅಪಹರಿಸಿ, ಮತಾಂಧ ಪಾತಕರನ್ನು ಬಿಡಲು ಕೇಂದ್ರ ಸರಕಾರದ ಮಂಡಿಯೂರಿಸಿದ್ದರು. ಅದರ ಪರಿಣಾಮ ಇನ್ನು ಏನೂ ಮಾಡಬಹುದು, ಕೇಂದ್ರದ ಅಽಕಾರ ಕಾಶ್ಮೀರ ಕಣಿವೆ ಯಲ್ಲಿ ಮುಗಿದಿದೆ ಎಂದೇ ನಂಬಿಕೊಂಡಿದ್ದರು. ಆವತ್ತು ರುಬಿನಾ ಸೈಯಿದ್ ಬಿಡುಗಡೆಗೆ ಡಝನ್‌ ಗಟ್ಟಲೇ ಉಗ್ರರ ಬೇಡಿಕೆ ಲಿಸ್ಟ್ ಇಟ್ಟಿದ್ದರು.

ಇಲ್ಲಿಯವರೆಗೂ ಅಷ್ಟಾಗಿ ಕಾಣಿಸಿಕೊಳ್ಳದಿದ್ದ ಹೆಸರೊಂದು ಈ ಕೇಸಿನಲ್ಲಿ ಆವತ್ತು ಚಾಲ್ತಿಗೆ ಬಂದಿತ್ತು. ಅವನೇ ಯಾಸಿನ್ ಮಲಿಕ್. ಜೆ.ಕೆ.ಎಲ್.ಎಫ್.ನ  ಮಂಚೂಣಿ ನಾಯಕರಲ್ಲಿ ಗುರುತಿಸಿಕೊಂಡ ಮಲಿಕ್, ಕಶ್ಮೀರ ರಾಜ್ಯ ಪಾಕ್‌ಗೂ ಇಲ್ಲ ಭಾರತಕ್ಕೂ ಇಲ್ಲ ಅದು ಸಂಪೂರ್ಣ ಪ್ರತ್ಯೇಕವಾಗಲಿ ಎಂದು ನಿಂತಿದ್ದವನು. ರುಬಿನಾ ಅಪಹರಣಕ್ಕೂ ಮೊದಲೇ, ಬೀದಿ ಕಾಳಗದಲ್ಲೂ ಗುರುತಿಸಿಕೊಂಡಿದ್ದ ಪಾತಕಿ, 1983 ರಲ್ಲಿ ಶೇರ್ ಇ ಕಾಶ್ಮೀರ್ ಕ್ರಿಡಾಂಗಣಕ್ಕೆ ಧಮಕಿ ಹಾಕಿ ಭಾರತ ವೆಸ್ಟ್ ಇಂಡೀಸ್ ಕ್ರಿಕೆಟ್ ನ್ನು ತಪ್ಪಿಸಲೆತ್ನಿಸಿದ್ದ. ಮಕ್ಬೂಲ್ ಭಟ್ ಮರಣದಂಡನೆ ವಿರುದ್ಧ ಕಣಿವೆಯಲ್ಲಿ ಅತಿ ದೊಡ್ಡ ರ‍್ಯಾಲಿ ಆಯೋಜಿಸಿದ್ದವನು. ಕಿರಾತಕರಾದ ಅಶ್ರ- ವಾನಿ, ಜಾವೇದ್ ಮೀರ್, ಅಬ್ದುಲ್ ಶೇಖ್‌ಗಳ ಗುರುತಿಸಿಕೊಂಡಿದ್ದ.

೧೯೮೭ ರ ಚುನಾವಣೆಯಲ್ಲಿ ನೇರ ಭಾಗಿ ಅಗಲೊಪ್ಪದೆ ಜಮಾತ್‌ನ್ನು ಬೆಂಬಲಿಸಿದ್ದ. ಪ್ರಸ್ತುತ ಸಂವಿಧಾನವನ್ನೇ ಒಪ್ಪದಿರುವಾಗ ಇಲೆಕ್ಷನ್ ಹೇಗೆ ಕಂಟೆಸ್ಟ್ ಮಾಡಲಿ ಎಂದಿದ್ದ. ಗೆರಿಲ್ಲ ಫೈಟರ್ ಎಂದು ಕರೆಸಿಕೊಳ್ಳುತ್ತಿದ್ದ ಯಾಸಿನ್ ಮಲಿಕ್, ಮುಂದೊಮ್ಮೆ ಭಯಾನಕ ದಾಳಿಗಳ ಹೊಣೆಗಾರನಾದ. ಇಂಥಾ ಯಾಸಿನ್ ಮಲಿಕ್ ಜೊತೆ ಭಾರತೀಯ ಹೆಸರಾಂತ ಪತ್ರಕರ್ತೆ ಮತ್ತು ಲೇಖಕಿ ಅರುಂಧತಿ ರಾಯ್ (ಮಾರ್ಚ್ 17, 2005)ಹಲ್ಲು ಕಿರಿಯುತ್ತಾ ದೇಹಲಿ ಬೀದಿಗಳಲ್ಲಿ ಅಡ್ಡಾಡುತ್ತಿದ್ದರೆ ಭಾರತೀಯ ಹಿಂದುಗಳ ದುರಂತಕ್ಕೆ ಏನೆನ್ನಬೇಕೋ..? ಜಗತ್ತೇ ಕಂಡ ಅತ್ಯಂತ ಹೆಚ್ಚು ಓದಿಕೊಂಡ ಮತ್ತು ಪದವಿಧರ ಎಂದೇ ಪರಿಚಿತ ನಿಸ್ಪೃಹ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವನನ್ನು ದಿಲ್ಲಿಯ ರಾಜಕೀಯ ಪಡಸಾಲೆಯಲ್ಲಿ (17 ಪೆಬ್ರುವರಿ 2006) ಎದುರುಗೊಳ್ಳಬೇಕಾಯಿತು.

ತುಷ್ಟೀಕರಣ ರಾಜಕೀಯದ ರಾಜಕಾರಣದ, ಅನಾಹುತಕಾರಿ ಪರಿಣಾಮ ಇದು. ಇಂಥಾ ರಾಜಕೀಯವೇ ಕಶ್ಮೀರಿ ಹಿಂದೂಗಳ ಶವಪೆಟ್ಟಿಗೆಗೆ ಇನ್ನಷ್ಟು ಬಿಗಿಯಾದ ಮೊಳೆ ಹೊಡೆಯಲು ಕಾರಣವಾದವು. ಲೆಕ್ಕ ತಪ್ಪಿ ರಾಜಕೀಯ ಆತಿಥ್ಯ ಅನುಭವಿಸಿದ ಯಾಸಿನ್ ಮಲಿಕ್ ನಂತರದಲ್ಲಿ ಮೋದಿ ಸರಕಾರ ಒಂದು ಕಡೆಯಿಂದ ಇಂಥಾ ಎಲಿಮೆಂಟುಗಳನ್ನು ಗುಡಿಸತೊಡಗಿದ ಪರಿಣಾಮ ಕಂಬಿ ಹಿಂದೆ ಮುದ್ದೆ ಮುರಿಯುವಂತಾಯಿತು.

ಅತ್ತ ರುಬಿನಾ ಅಪಹರಣ ಕೇಸಿನ ಮಾತುಕತೆಯಲ್ಲಿ ಕಾಂಪ್ರಮೈಸ್ ಆದಂತೆ ಮಾಡಿ, ಐದು ಜನ ಉಗ್ರರನ್ನು ಕಳಿಸಿ ಎಂದು ಉದಾರತೆ ತೋರಿದ್ದರು. ಅಸಲಿಗೆ ಅವರ ಮಿಶನ್ ಪೂರ್ತಿಯಾಗಿತ್ತು. ಬೇಕಿದ್ದ ಐದೂ ಜನ ಹೊರಗೆ ಬಂದಾಗಿತ್ತಲ್ಲ. ಬಿಟ್ಟಾ ಕರಾಟೆ ಈಗ ರಂಗಕ್ಕೆ ಧುಮುಕಿದ್ದ. ಕಾರಣ ಅವನಿಗೂ ಅಲ್ಲಿಯವರೆಗಿನ ಯಾವುದೇ ಹೋರಾಟದಲ್ಲೂ ಗುರುತಿಸುವಂತಹ ಮೈಲೇಜು, ಐಡೆಂಟಿಟಿ ದೊರಕಿರಲಿಲ್ಲ. ಅದರಲ್ಲೂ ಪಾತಕ ಲೋಕದಲ್ಲಿ ಕೈಗೆ ನೆತ್ತರು ಸೋಂಕಿದಷ್ಟೂ ಅವನ ಹಂತಗಳು ಮೇಲೆರುತ್ತವೆ. ಹಾಗಾಗಿ ಈಗ ಪಾಪದ ಹಿಂದೂಗಳ ಮೇಲೆ ತನ್ನ ಪೈಚಾಚಿಕತೆ ಮೆರೆಯಲು ಬಿಟ್ಟಾ ತೆರೆದ ಜೀಪಿನಲ್ಲಿ ಹೊರಗೆ ಬಿದ್ದಿದ್ದ. ಮೂಲತಃ ಭಾರತೀಯನೇ ಅಲ್ಲದ ಬಿಟ್ಟಾ ಅಕ್ರಮಿತ ನೆಲದವನು. ಮಾರ್ಷಲ್ ಆರ್ಟ್ ಅವನ ಫೇವರಿಟ್ ಗೇಮ್ ಅದಕ್ಕಾಗಿ ತನ್ನ ಉಪನಾಮ ಬಿಟ್ಟಾ ಜತೆಗೆ ಕರಾಟೆ ಸೇರಿಸಿಕೊಂಡಿದ್ದ. ಬಲವಾದ ಆಳು ಅದಕ್ಕಿಂತ ಬಲವಾದ ಪೈಶಾಚಿಕತೆಯಿಂದ ಮತಾಂಧ ಪಾತಕ ಪ್ರಪಂಚಕ್ಕೆ ಹೇಳಿ ಮಾಡಿಸಿದಂತಿದ್ದ. ೧೯೮೮ ರಲ್ಲಿ ಪಾಕಿಸ್ತಾನದಿಂದ ಸಂಪೂರ್ಣ ತರಬೇತಿ ಪಡೆದು ಹಿಂದಿರುಗಿದ ಬಿಟ್ಟಾ ನಿಗಿನಿಗಿ ಎನ್ನುತ್ತಿದ್ದ.

ಪಾತಕ ಎಸಗಲು ಕಾಯುತ್ತಿದ್ದ. ಅಲ್ಲಲ್ಲಿ ಆಗೀಗ ಹಿಂದೂಗಳನ್ನೂ ಪೀಡಿಸಿದನಾದರೂ ಯಾವುದೂ ಮೈಲಿಗಲ್ಲಾಗದಿದ್ದಾಗ ನೇರ ರಸ್ತೆಗಿಳಿದಿದ್ದ. ಇತರರಿಗೆ ಮಾದರಿಯಾಗಲು ಮತ್ತು ಹತ್ಯಾಕಾಂಡ ಹೇಗೆ ನಡೆಸಬೇಕೆಂದು ಹೇಳಿಕೊಡುವುದಕ್ಕಾಗೇ ಬಿಟ್ಟಾ ತನ್ನ ಅತ್ಯಂತ ಖಾಸಾ ಸ್ನೇಹಿತ, ಆದರೆ ? ಹಿಂದು
ಎನ್ನುವ ಕಾರಣಕ್ಕೆ ಸತೀಶ ಕುಮಾರ್ ಟೀಕೂವನ್ನು ಜೀಪಿನ ಹಿಂಭಾಗದಲ್ಲಿ ಇತರ ಸ್ನೇಹಿತರ ಕಾಲಡಿಗೆ ಹಾಕಿಕೊಂಡು ತಂದು ಲಾಲ್‌ಚೌಕ್‌ವರೆಗೂ ಮೆರವಣಿಗೆ ಮಾಡಿಸಿದ್ದ. ನಂಬಿಕೆಯ ಸ್ನೇಹಿತನಾಗಿದ್ದ ಸತೀಶ್ ಕುಮಾರ್‌ನನ್ನು ಎಲ್ಲರೂ ನೋಡು ತ್ತಿದ್ದಂತೆ ಅವನ ಮೇಲೆ ನಿರಂತರ ಹಲ್ಲೆ ಮಾಡಿ, ಅವನ ಮನೆಯ ಎದುರೇ ನಿಲ್ಲಿಸಿ ನೇರವಾಗಿ ಗುಂಡಿಟ್ಟು ಹತ್ಯೆ ಮಾಡುವುದರ ಮೂಲಕ ಇತರರಿಗೆ ಮಾದರಿಯಾದ ಬಿಟ್ಟಾ, ಆವತ್ತೊಂದೇ ದಿನ ರಾತ್ರಿ ಇಪ್ಪತ್ತಕ್ಕೂ ಹೆಚ್ಚು ಪಂಡಿತರನ್ನು ಆಯ್ದು ಕೊಂದು ಹಾಕಿದ್ದು ದಾಖಲೆ.

ಆರಂಭದಲ್ಲಿ ೨೨ ಜನರನ್ನು ಕೊಂದ ಮೇಲೆ ನಾನು ಲೆಕ್ಕ ಇಡುವುದನ್ನೇ ಬಿಟ್ಟೆ ಎನ್ನುವ ಬಿಟ್ಟಾ ಹೇಳಿಕೆ. ಈಗಲೂ ಅಲ್ಲಲ್ಲಿ ಲಭ್ಯವಿದೆ. ಗುಂಡು ವೇಸ್ಟ್ ಮಾಡೋದು ಯಾಕೆ ಎಂದು ಸಣ್ಣದೊಂದು ತಲವಾರಿನಿಂದ ಕತ್ತು ಕೊಯ್ದು ಬಿಟ್ಟು ಮುಂದಕ್ಕೆ ಹೋಗುತ್ತಿದ್ದ. ಆವೆರಡು ದಿನದ ದಾವಾನಲದಲ್ಲಿ ಬಿಟ್ಟಾ ಕೊಲೆ ಮಾಡಿದ್ದು ಕನಿಷ್ಟ ಲೆಕ್ಕ ಈಗಲೂ ಇಲ್ಲ ಎನ್ನುತ್ತದೆ ವರದಿಯೊಂದು. ಲೆಕ್ಕವಿಲ್ಲದಂತೆ ಪಿಸ್ತೂಲು ಮತ್ತು ಎ.ಕೆ.47 ಬಳಸಿ ಹಲವು ಹಲ್ಲೆ ಮತ್ತು ಬಿ.ಎಸ್.ಎಫ್. ಮೇಲೂ ಎರಗುವ ಪ್ರಯತ್ನದಲ್ಲಿ ಬಿಟ್ಟಾ ಕರಾಟೆ ಅತಿ ದೊಡ್ಡ ಹೆಸರು ಮಾಡಿದ. (ದುರಂತ ನೋಡಿ ಅವನನ್ನು ಜೈಲಿನ ಕಟಕಟೆಯೊಳಗೆ ನಿಲ್ಲಿಸಿ ವಿಚಾರಣೆ ನಡೆಯುವಾಗ ಪ್ರಾಸಿಕ್ಯೂಷನ್ ಎಂಥಾ ದರಿದ್ರತನ ತೋರಿಸಿತ್ತು ಎಂದರೆ ನ್ಯಾಯಮೂರ್ತಿ ವಾನಿ, ಈ ಫಾರೂಕ್‌ ದಾರ್ ಅತ್ಯಂತ ಹೀನಾತಿಹೀನ ಕೃತ್ಯಗಳನ್ನು ಎಸಗಿದ್ದು ಎದ್ದು ಕಾಣುತ್ತಿದ್ದು, ಮರಣ ಶಿಕ್ಷೆಗೆ ಅರ್ಹನಾಗಿದ್ದು ಗೊತ್ತಾಗುತ್ತಿದ್ದರೂ ಪ್ರಾಸಿಕ್ಯೂಶನ್ ಇದರ ಬಗ್ಗೆ ಆಸಕ್ತಿಯೇ ವಹಿಸಿಲ್ಲ ಎಂದರೆ ನಮಗೆ ಅರ್ಥ ಆಗಬೇಕು ಎಂಥಾ ಕಚಡಾ ರಾಜಕಾರಣ ಮಾಡಿದ್ದಾರು ಆಗಿನ ರಾಜಕಾರಣಿಗಳು) ಕರಾಟೆಯ ಮೆರವಣಿಗೆ ಮತ್ತು ನಿರಂತರವಾಗಿ ನಡೆಯತೊಡಗಿದ್ದ ಹಲ್ಲೆಗಳ ಅಂದಾಜು ಮಾಡಿ.

ಗಲ್ಲಿ ಗಲ್ಲಿಯಲ್ಲಿ ಮೊದಲೇ ಲೆಕ್ಕಾಚಾರ ಇರಿಸಿಕೊಂಡಿದ್ದ ಸ್ಥಳೀಯ ಉಗ್ರರಿಗೆ ಹಬ್ಬವಾಗಿ ಬಿಟ್ಟಿತ್ತು. ಯಾವ ಮನೆಯ ಪಂಡಿತರ ಜಗುಲಿಯ ಮೇಲೆ ನಿಚ್ಚಳವಾಗಿ ಉಂಡೆದ್ದು ಕೂತು ಸಂಭ್ರಮಿಸಿದ್ದರೋ, ಆವತ್ತು ಅದೇ ಜಗುಲಿಯ ಮೂಲೆಯಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ನೆಲಕ್ಕೆ ಒತ್ತಿ ಹಿಡಿದು ಬೆತ್ತಲೆ ಮಾಡಿದ್ದರು. ಪೂರ್ತಿ ಊರಿಗೆ ಊರೇ ಆವತ್ತು ಆರ್ತನಾದ ಹೊರತಾಗಿ ಬೇರೇನೂ ಕೇಳಿಸಿಕೊಂಡಿರಲಿಲ್ಲ. ಒಂದೊಂದು ಗುಂಡು ಹಾರಿದಾಗಲೂ ಒಬ್ಬ ಕಶ್ಮೀರಿ ಪಂಡಿತ ಕಗ್ಗೊಲೆಯಾಗುತ್ತಿದ್ದರೆ, ಅದೇ ಹೊತ್ತಿಗೆ ಒಬ್ಬ ಹೆಂಗಸು ಬೆತ್ತಲೆಯಾಗುತ್ತಿದ್ದಾಳೆ ಎಂದೇ ಲೆಕ್ಕವಿಡಬಹುದಿತ್ತು.

ಒಪ್ಪದ ಒಲ್ಲದ ಹೆಂಗಸರನ್ನು ಅರೆ ಜೀವವಾಗುವಂತೆ ಹೊಡೆದು ಭೋಗಿಸುವ ಪೈಶಾಚಿಕತೆ ಭೂಮಿಯ ಮೇಲೆ ನಡೆದಿದ್ದೇ ಆಗಿದ್ದರೆ ಅದು ಜನೇವರಿ 1990. 19- 20 ರ ದಿನ. ಆವತ್ತಿನ ಇರುಳು ನೂರಾರು ಹಿಂದೂ ಕಶ್ಮೀರಿ ಪಂಡಿತರ ಪಾಲಿಗೆ ಕೊನೆಯ ಕರಾಳ ರಾತ್ರಿಯಾಗಿದ್ದರೆ, ಆವತ್ತೇ ಮೊಟ್ಟ ಮೊದಲ ಬಾರಿಗೆ ದೇವರಿಗೆ ಶಾಪ ಬಿದ್ದಿತ್ತು. ಹೆಣ್ಣಾಗಿ ಹುಟ್ಟಿ ಬಿಡು ಎಂದು.

ಎರಡು ದಿನಗಳ ಕಾಲ ಅದ್ಯಾವ ರೀತಿಯಲ್ಲಿ ಹತ್ಯಾಕಾಂಡ ನಡೆದು ಹೋಯಿತೆಂದರೆ ಅನಾಮತ್ತು ಒಂದೂವರೆ ಲಕ್ಷ ಕಾಶ್ಮೀರಿ ಹಿಂದೂ ಪಂಡಿತರು  ಇಪ್ಪತ್ನಾಲ್ಕೇ ಗಂಟೆಗಳಲ್ಲಿ ಜಮ್ಮುನ ಅಂಚಿಗೆ ಬಂದು ನಿಂತಿದ್ದರು. ಹೊದ್ದ ಶಾಲೊಂದರ ಹೊರತಾಗಿ ಬೇರೇನೂ ಇಲ್ಲದ ಪಂಡಿತರನ್ನು ಜಮ್ಮು ಕಣ್ಣಿರಿಟ್ಟೇ ಕರೆದುಕೊಂಡಿತ್ತು. ಪ್ರತಿ ಗಲ್ಲಿ ಮೊಹಲ್ಲಾದ ಮನೆಗಳಲ್ಲಿ ಲೆಕ್ಕ ಹಾಕಿ ಹೆಂಗಸರನ್ನು ಭೋಗಿಸಿ ಭೋಗಿಸಿ ಕೊನೆಗೆ ಒಮ್ಮೆ ಅಮಲಿಳಿದ ಮೇಲೆ ಬೇರೇನೂ ಮಾಡಲಾಗದ ನಿರ್ವೀರ್ಯತೆಗೆ ಆ ಹೆಣ್ಣುಮಕ್ಕಳನ್ನು ಪೀಡಿಸಿ ಪೀಡಿಸಿ ಕೊಂದು ಹಾಕಿದ್ದರು. ಆ ರಾತ್ರಿ ಅಮಾನವೀಯ ಹಲ್ಲೆ ಎದುರಿಸಿದ
ಹೆಣ್ಣು ಮಕ್ಕಳೇನಾದರೂ ಇವತ್ತು ಎದುರಿಗೆ ಬಂದು ಹೇಳಿಕೆ ಕೊಡಲು ಬದುಕಿದ್ದರೆ, ಬಹುಶಃ ಸಂಪೂರ್ಣ ಜಗತ್ತು ತಲೆ ತಗ್ಗಿಸುತ್ತಿತ್ತು ಉಗ್ರರ ಹೊರತಾಗಿ.

ಹೀನಾಯ ಎಂದರೆ ಇಂಥಾ ಕತೆ ಹೇಳಲು ಯಾವ ಹೆಂಗಸರನ್ನೂ ಇದನ್ನು ಸಾಕ್ಷೀಕರಿಸಿದ ಯಾವ ಗಂಡಸರನ್ನೂ ಜೀವಂತ ಉಳಿಸಲಿಲ್ಲ ಎನ್ನುವುದು. ದಿನಗಟ್ಟಲೇ, ವಾರಗಟ್ಟಲೇ ಪೀಡಿಸಿ, ಹಿಂಸಿಸಿ ಇನ್ನು ಹಿಂಡಲು ಮೈಯ್ಯಲ್ಲಿ ಹನಿ ರಕ್ತವೂ ಇಲ್ಲ ಎನಿಸಿದಾಗ ಗುಂಡು ಹೊಡೆದು ಎದ್ದು ಹೋಗುತ್ತಿದ್ದ ಮತಾಂಧರಿಗೆ ಢಾಳಾಗಿ ನಿಂತಿದ್ದು ಹೊರಗಿನ ಪಾಕಿಸ್ತಾನದ ಬೆಂಬಲ ಮತ್ತು ಸ್ಥಳೀಯತೆ. ಇಂಥಾ ಅಮಾನವೀಯತೆಯನ್ನು ಅದ್ಯಾವನು ಬೆಂಬಲಿಸಿ ದನೋ ಗೊತ್ತಿಲ್ಲ. ಅದರೆ ಬದುಕಿದ್ದ ಅಷ್ಟೂ ಹೊತ್ತೂ ಯಾವೊಬ್ಬ ಕಶ್ಮೀರಿ ಹಿಂದೂ ಕೂಡಾ, ಆವತ್ತು ಮನುಷ್ಯನಾಗಿದ್ದಕ್ಕೆ ಬಿಡಿ ಸ್ವತಃ ತಾವು ಹಿಂದು ವಾಗಿದ್ದಕ್ಕೆ ಪಶ್ಚಾತಾಪ ಪಡದೆ ಸತ್ತಿದ್ದಿರಲಿಕ್ಕಿಲ್ಲ.

(ಮುಂದುವರೆಯುವುದು)