Thursday, 12th December 2024

ವೈದ್ಯರೇ, ಆಟೋ ಚಾಲಕರನ್ನು ನೋಡಿ ಕಲಿಯಿರಿ !

ಪ್ರಸ್ತುತ

ದಯಾನಂದ ಲಿಂಗೇಗೌಡ

dayanandal@gmail.com

ರೋಗಿಗಳನ್ನು ಸಂಪಾದಿಸಲು ಶುಲ್ಕ ಕೊಡುವುದು ಕಾನೂನುಬಾಹಿರ. ವೈದ್ಯರಿಂದ ವೈದ್ಯರಿಗೆ ರೆಫರಲ್ ಶುಲ್ಕ ಅಥವಾ ಲ್ಯಾಬ್‌ ಗಳಿಂದ ಕಮಿಷನ್ ತೆಗೆದುಕೊಳ್ಳುವುದನ್ನು ಕಾನೂನು ನಿರ್ಬಂಧಿಸುತ್ತದೆ. ಅಂತಹ ಸಮಯದಲ್ಲಿ ರೋಗಿ ಗಳನ್ನು ಸಂಪರ್ಕಿಸಲು, ಶುಲ್ಕ ಪಡೆದುಕೊಳ್ಳುವಂತಹ ಆಪ್‌ಗಳು ಕಾನೂನು ಬಾಹಿರವಲ್ಲವೇ? ಈ ಬಗ್ಗೆ ಚರ್ಚೆ ನಡೆಯಬೇಕಿದೆ.

ಈ ಅನುಭವ ನಿಮಗೂ ಆಗಿರಬಹುದು. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವಾಗ, ಒಂದು ರೀತಿಯ ಮನಸ್ಸಿನ ದುಗುಡ ಇರುತ್ತಿತ್ತು. ‘ಆಟೋ ಚಾಲಕ ಎಂಥ ವನು ಸಿಗುತ್ತಾನೋ ಏನೋ? ಎಷ್ಟು ಹಣ ಕೇಳುತ್ತಾನೋ ಏನೋ? ಸರಿಯಾದ ಸಮಯಕ್ಕೆ ಆಟೋ ಅಥವಾ ಟ್ಯಾಕ್ಸಿ ಸಿಗುತ್ತದೋ ಇಲ್ಲವೋ? ಮೀಟರ್ ಮೇಲಿನ ಹಣಕ್ಕೋಸ್ಕರ ನೇರವಾಗಿ ಹೋಗದೇ ಬಳಸಿ ಕೊಂಡು ಹೋಗುತ್ತಾನೋ ಏನೋ? ಕೊನೆಗೆ ವಾಹನದಿಂದ ಇಳಿಯುವಾಗ ಒಪ್ಪಿದ ಹಣಕ್ಕಿಂತ ಹೆಚ್ಚಿನ ಬೇಡಿಕೆ ಇಡುತ್ತಾನೋ ಏನೋ? ಇತ್ಯಾದಿ ಆತಂಕ ಕಾಡುತ್ತಿತ್ತು.

ಅದರಲ್ಲೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಇಂತಹ ಕಿರಿಕಿರಿಗಳಾದರೆ ಮನಸ್ಸು ಕೆಟ್ಟು ಹೋಗಿ, ಹೋಗುವ ಕೆಲಸದ ಮೇಲೆ ಪರಿಣಾಮ ಬೀರುತ್ತಿತ್ತು. ಉದಾಹರಣೆಗೆ ಪರೀಕ್ಷೆಗೆ ಹೋಗುವಾಗ ಅಥವಾ ಯಾವುದಾದರೂ ಸಂದರ್ಶನಕ್ಕೆ ಹೋಗುವಾಗ ಆಟೋ ಚಾಲಕನ ಜತೆ ಜಗಳ ಮಾಡಿಕೊಂಡು ಹೋದರೆ, ನೀವು ನಿಮ್ಮ ಕೆಲಸದಲ್ಲಿ ಮನಸ್ಸನ್ನು ಕೇಂದ್ರಿಕರಿಸಲು ಸಾಧ್ಯವೇ? ಕೆಲವೊಮ್ಮೆ, ಈ ಚಾಲಕರ ಕಿರಿಕಿರಿ ಬೇಡವೇ ಬೇಡ ಎಂದು ಎಷ್ಟು ದೂರವಾದರೂ ನಡೆದುಕೊಂಡೇ ಅಥವಾ ಬಸ್ಸಿನಲ್ಲಿ ಪ್ರಯಾಣಿಸಿದ್ದೂ ಇದೆ. ಒಮ್ಮೆ ಆಟೋ ಚಾಲಕರ ಜತೆ ಕಿರಿಕಿರಿ ಯಾವ ಮಟ್ಟಕ್ಕೆ ಹೋಗಿತ್ತು ಎಂದರೆ, ಸುಮಾರು 10 ವರ್ಷ ಆಟೋ ಅಥವಾ ಟ್ಯಾಕ್ಸಿ ಯನ್ನು ಉಪಯೋಗಿಸಿಯೇ ಇರಲಿಲ್ಲ.

ಮತ್ತೆ ಆಟೋ ಮತ್ತು ಟ್ಯಾಕ್ಸಿ ಬಳಸಿದ್ದು ಓಲಾ ಮತ್ತು ಉಬರ್‌ಗಳಂತಹ ಆಪ್ ಬಂದ ಮೇಲೆ. ಇವು ಆಟೋ ಚಾಲಕರ ಎಷ್ಟೋ
ಹುಚ್ಚಾಟಗಳನ್ನು ಹದ್ದುಬಸ್ತಿಗೆ ತಂದವು. ಕರೆದಲ್ಲಿಗೆ ಬರುವುದಿಲ್ಲ ಎಂಬುದು ನಿಂತಿತ್ತು. ನಿಗದಿತ ಹಣಕ್ಕಿಂತ ಹೆಚ್ಚು ಬೇಡವಂತೆ ಇಲ್ಲ. ಆಪ್‌ಗಳಲ್ಲೇ ಸಾಗಬೇಕಾಗಿರುವ ದಾರಿ ಕಾಣುವುದರಿಂದ, ಸುತ್ತಾಡಿಸಿ ಮೀಟರ್ ಹೆಚ್ಚಿಸುವುದಕ್ಕೆ, ಜಂಪ್ ಮಾಡಿಸುವು ದಕ್ಕೆ ಅವಕಾಶವಿಲ್ಲ. ನೀವಿದ್ದ ಕಡೆಯೇ ಆಟೋ-ಟ್ಯಾಕ್ಸಿ ಗಳನ್ನು ಕರಿಸಿಕೊಳ್ಳಬಹುದು.

ಎಲ್ಲಕ್ಕಿಂತ ಚಾಲಕ ಕಿರಿಕಿರಿ ಮಾಡಿದರೆ ದೂರು ನೀಡಬಹುದು. ಅವನ ಸೇವೆಯನ್ನು ರೇಟಿಂಗ್ ಮಾಡಬಹುದು. ಕೆಲವೊಮ್ಮೆ ’ಇಷ್ಟು ದೂರ ಪ್ರಯಾಣಿಸುವುದಕ್ಕೆ ಇಷ್ಟೇ ಹಣವಾ!’ ಎಂದು ಆಶ್ಚರ್ಯ ಪಟ್ಟಿದ್ದೂ ಇದೆ. ಏಕೆಂದರೆ ಅದೇ ದೂರ ಕ್ರಮಿಸುವು ದಕ್ಕೆ ಹಲವಾರು ಪಟ್ಟು ಹೆಚ್ಚು ಹಣಕೊಟ್ಟು ಪ್ರಯಾಣಿಸಿದ ಮೊದಲಿನ ಅನುಭವದ ಆಧಾರದ ಮೇಲೆ ಇಂತಹ ಉದ್ಗಾರ. ಹೀಗಾಗಿ ಆಟೋಗೆ ಕೊಡುತ್ತಿದ್ದ ಹಣದಲ್ಲಿ, ಕಾರಿನಲ್ಲಿ ಪ್ರಯಾಣಿಸುವುದೂ ಇದೆ.

ಒಂದು ಕಾಲದವರೆಗೂ ಇವೆಲ್ಲವೂ ಚೆನ್ನಾಗಿಯೇ ನಡೆದುಕೊಂಡು ಬಂದವು. ಆದರೀಗ, ಒಂದೊಂದೇ ವರಾತಗಳು ಶುರುವಾಗಿವೆ. ಇದಕ್ಕೆ ಕಾರಣಗಳು ಹಲವು. ಒಂದೇ ಒಂದು ಕಾರಿಗೂ ಮಾಲೀಕರಲ್ಲದ ಈ ಕಂಪನಿಗಳು ದೇಶದ ಬಹುತೇಕ ಬಾಡಿಗೆ ವಾಹನ ಗಳನ್ನು ನಿಯಂತ್ರಿಸುತ್ತಿವೆ. ಹೀಗಾಗಿ ಓಲಾ, ಉಬರ್‌ಗಳಿಗೆ ಒಳಪಡದ ಬಾಡಿಗೆ ಚಾಲಕರಿಗೆ, ಗ್ರಾಹಕರೇ ಸಿಗದ ಪರಿಸ್ಥಿತಿ ಉಂಟಾ ಗುತ್ತಿದೆ.

ಂದು ಕಾಲದಲ್ಲಿ ಮೀಟರ್‌ನ ಮೇಲೆ ಮನಸ್ಸಿಗೆ ಬಂದಂತೆ ಹಣ ನಿಗದಿ ಮಾಡುತ್ತಿದ್ದ ಚಾಲಕರು, ಈಗ ನಿಗದಿತ ಹಣವನ್ನು ಪಡೆಯಬೇಕು. ಆದರೆ ಅದರಲ್ಲಿ ಈ ಕಂಪನಿಗಳಿಗೆ ಹತ್ತರಿಂದ ಮೂವತ್ತು ಪರ್ಸೆಂಟ್ ಹಣವನ್ನು ಕಮಿಷನ್ ರೂಪದಲ್ಲಿ ಕೊಡ ಬೇಕು. ಒಂದೆಡೆ ಕಡಿಮೆ ಹಣ, ಮತ್ತೊಂದು ಕಡೆ ಕಮಿಷನ್ ಕಡಿತ. ಹೀಗಾಗಿ ಬಾಡಿಗೆ ಚಾಲಕರು ಹಗಲೂ-ರಾತ್ರಿ ಕೆಲಸ ಮಾಡ ಬೇಕಾಗಿ ಬಂದಿದೆ.

ಮೊದಮೊದಲು ಅತ್ಯಂತ ಕಡಿಮೆ ದರ ನಿಗದಿ ಮಾಡುತ್ತಿದ್ದ ಕಂಪನಿಗಳು, ಈಗ ಬೇಡಿಕೆಗಳನ್ನು ನೋಡಿಕೊಂಡು ದರ ನಿಗದಿ ಮಾಡುತ್ತಿವೆ. ವಾಹನ ಕಡಿಮೆ ಇದ್ದು ಬೇಡಿಕೆ ಹೆಚ್ಚಾದಾಗ, ದರ ಹೆಚ್ಚಾಗಿರುತ್ತದೆ. ಇತ್ತೀಚೆಗೆ ತಲುಪುವ ಸ್ಥಳವನ್ನು ಚಾಲಕರು ಕೇಳಿ ಬರಲು ನಿರಾಕರಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಪಾವತಿಸುವ ಹಣ ಆನ್‌ಲೈನ್ ರೂಪದಲ್ಲಿದ್ದರೆ, ಚಾಲಕರು
ಬರಲು ನಿರಾಕರಿಸುತ್ತಾರೆ.

ಇನ್ನೊಂದು ಗಮನಿಸಿಬೇಕಾದ ವಿಷಯವೇನೆಂದರೆ, ನಿಮ್ಮ ಮೊಬೈಲ್‌ನಲ್ಲಿ ಆಪ್ ಅಳವಡಿಸಿಕೊಳ್ಳುವಾಗ, ಮೊಬೈಲ್‌ನ ಮಾಡೆಲ್, ಬ್ಯಾಟರಿ ಮತ್ತು ಜಾಗವನ್ನು ತಿಳಿಯಲು ಒಪ್ಪಿಗೆ ಬೇಡುತ್ತವೆ. ಈ ಮಾಹಿತಿಯನ್ನು ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ಮೂಲಕ ಉಪಯೋಗಿಸುವ ಕಂಪನಿಗಳು, ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತವೆ. ಉದಾಹರಣೆಗೆ ನೀವು ದುಬಾರಿ ಮೊಬೈಲ್‌ನಿಂದ ವಾಹನಕ್ಕೆ ಬೇಡಿಕೆ ಮಾಡಿದರೆ, ನಿಮಗೆ ಹೆಚ್ಚಿನ ದರ ವಿಧಿಸಬಹುದು.

ನಿಮ್ಮ ಮೊಬೈಲ್‌ನಲ್ಲಿ ಬ್ಯಾಟರಿ ಅತ್ಯಂತ ಕಡಿಮೆಯಾಗಿದ್ದರೆ, ನೀವು ತರಾತುರಿಯಲ್ಲಿ ಇದ್ದೀರಾ ಎಂದು ಭಾವಿಸುವ ಕಂಪನಿಗಳು ನಿಮಗೆ ಹೆಚ್ಚಿನ ದರವನ್ನು ತೋರಿಸುತ್ತವೆ. ನೀವಿರುವ ಸ್ಥಳದಲ್ಲಿ ಹೆಚ್ಚಿನ ಸಂಚಾರ ವಿಲ್ಲದಿದ್ದರೆ ಹೆಚ್ಚಿನ ದರವನ್ನು ತೋರಿಸು ತ್ತವೆ. ಮೊದಲು ಹತ್ತಾರು ಮಂದಿ ಮಾಡುತ್ತಿದ್ದ ಸುಲಿಗೆಯ್ನು ಈಗ ಒಂದೆರಡು ಕಂಪನಿಗಳೇ ಪರೋಕ್ಷವಾಗಿ ಮಾಡುತ್ತಿವೆ. ಮೊದಲೇ ನಿಗದಿತ ಮೀಟರ್ ಅನ್ವಯ ವಾಹನ ನಡೆಸಿದ್ದರೆ ಚಾಲಕರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆಗ ಗ್ರಾಹಗರಿಗೆ ಇಂತಹ ಆಪ್‌ಗಳ ಅವಶ್ಯಕತೆ ಕಡಿಮೆ ಇರುತ್ತಿತ್ತು.

ಇಂತಹ ಕಂಪನಿಗಳಿಗೆ ಸಡ್ಡು ಹೊಡೆಯುವ ಸರಳ ವಿಧಾನವೆಂದರೆ, ಗ್ರಾಹಕರಿಗೆ ತೊಂದರೆ ಕೊಡದೆ ಸೇವೆ ನೀಡುವುದು. ಇಂತಹ ಪ್ರಯೋಗಗಳು ಮುಂಬಯಿ ನಗರದಲ್ಲಿ ನಡೆಯುತ್ತಿವೆ. ಆದರೆ ಇನ್ನಿತರ ನಗರಗಳಲ್ಲಿ ಇಂತಹ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ
ಇಷ್ಟೆಲ್ಲ ಹೇಳುವುದಕ್ಕೆ ಕಾರಣವೇನೆಂದರೆ, ವೈದ್ಯಕೀಯ ಕ್ಷೇತ್ರಗಳಲ್ಲೂ ಇಂತಹ ಅಪ್‌ಗಳು ಕಾಲಿಟ್ಟಿವೆ. ವೈದ್ಯರು ಮತ್ತು ರೋಗಿ ಗಳನ್ನು ಪರಸ್ಪರ ಬೆಸೆಯುವ ಈ ಆಪ್‌ಗಳನ್ನು, ಹೊರರೋಗಿಗಳ ಸಂದರ್ಶನಕ್ಕೆ ಅಥವಾ ಸಣ್ಣ ಪುಟ್ಟ ಶಸಚಿಕಿತ್ಸೆಗೆ ಸುಲಭದಲ್ಲಿ ಬಳಸಬಹುದು.

ಸದ್ಯಕ್ಕೆ, ಇವರು ರೋಗಿಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುತ್ತಿಲ್ಲ. ಹೀಗಾಗಿ ರೋಗಿಗಳಿಗೆ ಇಂತಹ ಅಪ್‌ಗಳು ಆಕರ್ಷಕವಾಗಿ ಕಾಣುತ್ತಿವೆ. ಆದರೆ, ವೈದ್ಯರಿಂದ ಹತ್ತರಿಂದ ಮೂವತ್ತು ಪರ್ಸೆಂಟ್ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಮುಂದೆ ಇದೇ ರೀತಿಯ ಶುಲ್ಕವನ್ನು ರೋಗಿಗಳಿಗೂ ವಿಸ್ತರಿಸಬಹುದು. ಈಗ ತಾನೇ ವೃತಿ ಪ್ರಾರಂಭಿಸಿರುವ ವೈದ್ಯರು, ಹೊಸ ಆಸ್ಪತ್ರೆಗಳು ಮತ್ತು ಹೆಚ್ಚಿನ ರೋಗಿಗಳು ಇಲ್ಲದ ವೈದ್ಯರು ಇಂತಹ ಆಪ್ ಗಳಿಂದ ಆಕರ್ಷಿತರಾಗುತ್ತಿದ್ದಾರೆ.

ಒಂದೇ ಬಾರಿಗೆ ತಮ್ಮ ಬಿಸಿನೆಸ್ ಹೆಚ್ಚಿಸಿಕೊಳ್ಳಲು ಇದು ಸಹಕಾರಿ ಎಂದು ತಿಳಿದುಕೊಂಡಿzರೆ. ಈ ಹಂತದಲ್ಲಿ ದೊಡ್ಡ ನಗರ ಗಳಲ್ಲಿ, ಬರೀ ಹೊಸ ವೈದ್ಯರು ಮತ್ತು ಹೊಸ ಆಸ್ಪತ್ರೆಗಳು ಮಾತ್ರ ಈ ಸೇವೆ ಬಳಸುತ್ತಿದ್ದರೂ, ಮುಂದೆ ಸಂಖ್ಯೆ ಹೆಚ್ಚಿದ ನಂತರ, ಹಿರಿಯ ವೈದ್ಯರು, ದೊಡ್ಡ ದೊಡ್ಡ ಆಸ್ಪತ್ರೆಗಳು ಕೂಡ ಈ ರೀತಿಯ ಆಪ್‌ಗಳನ್ನು ಬಳಸಲೇಬೇಕಾದ ಅನಿವಾರ್ಯ ಸೃಷ್ಟಿ ಯಾಗುತ್ತದೆ. ಈ ಆಪ್‌ಗಳನ್ನು ಬಳಸದಿರುವವರಿಗೆ ಮುಂದೆ ರೋಗಿಗಳು ದೊರಕುವುದೇ ಕಷ್ಟವಾಗಬಹುದು.

ಇಂತಹ ಆಪ್‌ಗಳಿಂದ ವೈದ್ಯರ ಹಿರಿತನ, ಅನುಭವಕ್ಕೆ ಬೆಲೆ ಇಲ್ಲದಂತಾಗಿದೆ. ಎಲ್ಲ ವೈದ್ಯರುಗಳನ್ನು ಇದು ಸಮಾನವಾಗಿ ಕಾಣು ತ್ತದೆ. ಜಾಹಿರಾತುಗಳಿಲ್ಲದೇ ಅಥವಾ ಗಿಮಿಕ್‌ಗಳನ್ನು ಮಾಡದೇ ರೋಗಿಗಳು ಬರುವುದಿಲ್ಲ ಎಂಬ ಕಾಲ ಈಗಾಗಲೇ ಸೃಷ್ಟಿ ಯಾಗಿದೆ. ಅಂತಹ ಕಾಲದಲ್ಲಿ ಇಂತಹ ಆಪ್‌ಗಳು ಬಂದಿರುವುದು, ಹಿಂಬಾಗಿಲಿನ ಜಾಹೀರಾತು ಆಧಾರಿತ ವೈದ್ಯಕೀಯ ವೃತ್ತಿಗೆ ಅವಕಾಶ ಒದಗಿಸಿದೆ. ಹೀಗಾ ಇವು ಮುಂದೆ ದೊಡ್ಡ ತಲೆನೋವು ಆಗುವ ಎಲ್ಲ ಲಕ್ಷಣಗಳು ಇವೆ. ಈ ಮೊದಲಾದರೆ ವೈದ್ಯರು ಯಾರು? ಎತ್ತ? ಎಂದು ಇನ್ನೊಬ್ಬರಿಂದ (ಚಿಕಿತ್ಸೆ ಪಡೆದು ಗುಣ ಹೊಂದಿದವರಿಂದ) ತಿಳಿದುಕೊಂಡು ವೈದ್ಯರನ್ನು ಕಾಣುತ್ತಿದ್ದ ರೋಗಿಗಳು, ಈಗ ವೈದ್ಯರ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ, ಆಪ್ ಗಳನ್ನು ನಂಬಿ ಚಿಕಿತ್ಸೆ ಪಡೆಯುತ್ತಿzರೆ.

ಇಲ್ಲಿ, ವೈದ್ಯ ಮತ್ತು ರೋಗಿಯ ನಡುವೆ ಯಾವುದೇ ಸಂಬಂಧ ಏರ್ಪಡದೇ, ಶುದ್ಧ ವ್ಯಾಪಾರ ಮಾತ್ರವೇ ಉಳಿದುಕೊಂಡು,
ಮುಂದೆ ಕಾನೂನು ಹೋರಾಟಗಳು ಹೆಚ್ಚಾಗಬಹುದು. ಅವೇಳೆಗಳಲ್ಲಿ, ತುರ್ತು ಪರಿಸ್ಥಿತಿ ಇಲ್ಲದಿದ್ದರೂ, ಸಂದರ್ಶನಕ್ಕೂ ಅಥವಾ ಸಣ್ಣಪುಟ್ಟ ಶಸಚಿಕಿತ್ಸೆಗಳಿಗೂ ಸಂಪರ್ಕಿಸುವ ಪ್ರವೃತ್ತಿ ರೋಗಿಗಳಿಂದ ಕಂಡುಬರುತ್ತಿದೆ. ಉದಾಹರಣೆಗೆ ಹೇಳುವು ದಾದರೆ ಹಲ್ಲು ಸ್ವಚ್ಛ ಮಾಡುವುದಕ್ಕೆ ತಡರಾತ್ರಿ ದಂತ ವೈದ್ಯರನ್ನು ಸಂಪರ್ಕಿಸುವುದು. ವೃತ್ತಿಯಲ್ಲಿ ಹೆಚ್ಚಿನ ಯಶಸ್ಸು ಇಲ್ಲದ ದಂತವೈದ್ಯರು ಇಂತಹ ರಿಕ್ವೆಸ್ಟ್‌ಗಳನ್ನು ಸ್ವಾಗತಿಸಬಹುದು.

ಇಂಥದೇ ಪರಿಪಾಠ ಹೆಚ್ಚಾದರೆ ವೃತ್ತಿ ಮತ್ತು ಜೀವನದ ಸಮತೋಲನ ತಪ್ಪುವುದರಲ್ಲಿ ಯಾವುದೇ ಸಂದೇಹವಿಲ್ಲ. ರೋಗಿ ಗಳನ್ನು ಸಂಪಾದಿಸಲು ಶುಲ್ಕ ಕೊಡುವುದು ಕಾನೂನುಬಾಹಿರ. ವೈದ್ಯರಿಂದ ವೈದ್ಯರಿಗೆ ರೆಫರಲ್ ಶುಲ್ಕ ಅಥವಾ ಲ್ಯಾಬ್‌ಗಳಿಂದ ಕಮಿಷನ್ ತೆಗೆದುಕೊಳ್ಳುವುದನ್ನು ಕಾನೂನು ನಿರ್ಬಂಧಿಸುತ್ತದೆ. ಅಂತಹ ಸಮಯದಲ್ಲಿ ರೋಗಿಗಳನ್ನು ಸಂಪರ್ಕಿಸಲು, ಶುಲ್ಕ ಪಡೆದುಕೊಳ್ಳುವಂತಹ ಆಪ್‌ಗಳು ಕಾನೂನು ಬಾಹಿರವಲ್ಲವೇ? ಈ ಬಗ್ಗೆ ಚರ್ಚೆ ನಡೆಯಬೇಕಿದೆ. ಇಂತಹವುಗಳನ್ನು ಬೆಳೆಯಲು ಬಿಟ್ಟರೆ ಮುಂದೆ ಇವರುಗಳೇ ಸಂಪೂರ್ಣ ವೈದ್ಯ ಸೇವೆಗಳನ್ನು ತಮ್ಮ ವಶಕ್ಕೆ ಪಡೆದು ಕೊಳ್ಳುವುದರಲ್ಲಿ ಅನುಮಾನವಿಲ್ಲ.

ಯಾವ ವೈದ್ಯರು ಎಷ್ಟು ರೋಗಿಗಳನ್ನು ನೋಡಬೇಕು? ಎಷ್ಟು ಶುಲ್ಕ ವಿಧಿಸಬೇಕು? ಯಾವ ಯಾವ ಸಮಯದಲ್ಲಿ ಕೆಲಸ ಮಾಡಬೇಕು? ಯಾವಾಗ ರಜೆ ತೆಗೆದುಕೊಳ್ಳಬೇಕು? ಎಷ್ಟು ರಜಾ ತೆಗೆದುಕೊಳ್ಳಬೇಕು… ಇತ್ಯಾದಿ ಎಲ್ಲವನ್ನೂ ತಮ್ಮ ನಿಯಂತ್ರ ಣಕ್ಕೆ ತೆಗೆದುಕೊಳ್ಳುವ ಸಂಭವ ಇದೆ. ಇಂತಹವುಗಳು ಮೊಳಕೆಯೊಡೆಯುವ ಮುಂಚೆಯೇ ಚಿವುಟಿ ಹಾಕುವ ಅವಶ್ಯಕತೆ ಇದೆ. ಇದನ್ನು ವೈದ್ಯರ ಮಟ್ಟದಲ್ಲಿ ಮಾಡುವುದಕ್ಕಿಂತ ಹೆಚ್ಚಾಗಿ, ವೈದ್ಯಕೀಯ ಸಂಘಗಳು ಅಥವಾ ಸರಕಾರಿ ಸಂಸ್ಥೆಗಳ ಮೂಲಕವೇ ನಿರ್ಬಂಽಸಬೇಕು.

ಭಾರತೀಯ ವೈದ್ಯ ಸಂಘ ಇದರ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳಬೇಕು. ವೈಯಕ್ತಿಕ ಮಟ್ಟದಲ್ಲಿ ವೈದ್ಯರುಗಳು, ಇಂತಹ
ಗಿಮಿಕ್‌ಗಳಿಗೆ ಒಳಗಾಗದೆ, ರೋಗಿಗಳಿಗೆ ಉತ್ತಮ ಸೇವೆ ನೀಡುವುದರ ಬಗೆಗೆ ಚಿಂತಿಸಬೇಕು. ನಿಮ್ಮ ಚಿಕಿತ್ಸೆಯೇ ನಿಮ್ಮ ಜಾಹೀರಾ ಗಲಿ. ನಿಮ್ಮ ಹಳೆ ರೋಗಿಯೇ ನಿಮ್ಮ ಜಾಹೀರಾತಿನ ಹೀರೊ. ನೀವು ರೋಗಿಗಳೊಂದಿಗೆ ನಡೆದುಕೊಳ್ಳುವ ರೀತಿಯೇ ಜಾಹೀರಾತಿನ ಕತೆಯಾಗಲಿ. ಆಗ ಇಂತಹ ಆಪ್‌ಗಳು ನಿಮ್ಮನ್ನು ಕಟ್ಟಿ ಹಾಕಲಾರವು.

ಕೊನೆಮಾತು: ಇತರರ ತಪ್ಪುಗಳಿಂದ ನಾವು ಕಲಿಯಬೇಕು. ನಮ್ಮ ತಪ್ಪುಗಳಿಂದಲೇ ಎಲ್ಲ ಪಾಠಗಳನ್ನು ಕಲಿಯುವಷ್ಟು ನಮ್ಮ ಜೀವನ ದೀರ್ಘವಾಗಿ ಇರುವುದಿಲ್ಲ.

(ಲೇಖಕರು ಪ್ರಸಿದ್ಧ ರೇಡಿಯೊಲೊಜಿಸ್ಟ್)