Friday, 22nd November 2024

ಇಂದಿರಾ ಕ್ಯಾಂಟೀನ್‌ ಹೊಣೆ ಇಸ್ಕಾನ್‌ಗೆ ?

ಬಿಬಿಎಂಪಿ ಮಾತುಕತೆ: ಬೆಲೆ ನಿಗದಿಯಲ್ಲಿ ಮೂಡದ ಒಮ್ಮತ 
ಕೇಂದ್ರೀಕೃತ ಅಡುಗೆ ಮನೆಯ ಲೆಕ್ಕಾಚಾರದಲ್ಲಿರುವ ಇಸ್ಕಾನ್

ಬೆಂಗಳೂರು: ಬಿಬಿಎಂಪಿಗೆ ಬಹುದೊಡ್ಡ ಸವಾಲಾಗಿರುವ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಜವಾಬ್ದಾರಿಯನ್ನು ಇಸ್ಕಾನ್
ಹೆಗಲಿಗೆ ಹಾಕಲು ಬಿಬಿಎಂಪಿ ಯೋಚಿಸಿದ್ದು, ಈ ಬಹುದೊಡ್ಡ ಜವಾಬ್ದಾರಿ ಒಪ್ಪಿಕೊಳ್ಳಬೇಕೇ? ಬೇಡವೇ? ಎನ್ನುವ ಚಿಂತನೆ ಯಲ್ಲಿ ಇಸ್ಕಾನ್ ಆಡಳಿತ ಮಂಡಳಿಯಿದೆ ಎನ್ನಲಾಗಿದೆ.

ಇಂದಿರಾ ಕ್ಯಾಂಟೀನ್ ನಿರ್ವಹಿಸಲು ಪಾಲಿಕೆ ಬಜೆಟನಲ್ಲಿ ೬೦ ಕೋಟಿ ರು. ಮೀಸಲಿಟ್ಟಿದೆ. ಈ ನಡುವೆ ಕ್ಯಾಂಟೀನ್ ನಿರ್ವಹಣೆಯ ಸಂಬಂಧ ಪಾಲಿಕೆ ಅಽಕಾರಿಗಳು ಮತ್ತು ಇಸ್ಕಾನ್ ದೇವಸ್ಥಾನದ ಆಡಳಿತ ಮಂಡಳಿ ಮಧ್ಯೆ ಮಾತುಕತೆ ನಡೆಯುತ್ತಿದೆ ಎನ್ನುವ ಮಾಹಿತಿ ದೊರೆತಿದೆ. ಈ ಹಿಂದೆ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡುತ್ತಿದ್ದ ಅದಮ್ಯ ಚೇತನ ಹೊರತುಪಡಿಸಿ ಉಳಿದ ಸಂಸ್ಥೆಗಳ ಮೇಲೆ ಕಳಪೆ ಆಹಾರ ಪೂರೈಕೆ ಮಾಡಲಾ ಗುತ್ತಿದೆ ಎಂಬ ಆರೋಪವಿತ್ತು. ಆದ್ದರಿಂದ ಇದೀಗ ಹೊಣೆಯನ್ನು ಇಸ್ಕಾನ್‌ಗೆ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಸಂಬಂಧ ಪಾಲಿಕೆ ಮತ್ತು ಇಸ್ಕಾನ್ ಪದಾಽಕಾರಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ಪಾಲಿಕೆ ಅಽಕಾರಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ಶೆಫ್ ಟಾಕ್ ಸಂಸ್ಥೆ ೯೬ ಕ್ಯಾಂಟೀನ್‌ಗಳ ನಿರ್ವಹಣೆ ಮಾಡುತ್ತಿದ್ದು, ರಿವಾರ್ಡ್ಸ್ ೪೯, ಅದಮ್ಯ ಚೇತನ ಸ್ವಯಂ ಸೇವಾ ಸಂಸ್ಥೆ ೪೦ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿವೆ. ಆಗನಲ್ಲಿ ಎಲ್ಲ ಸಂಸ್ಥೆಗಳ ಗುತ್ತಿಗೆ ಅವಧಿ ಮುಗಿಯಲಿದೆ. ಆದ್ದರಿಂದ ಆಗಸ್ಟ್ ಬಳಿಕ ಇಂದಿರಾ ಕ್ಯಾಂಟೀನ್‌ಗಳ ಜವಾಬ್ದಾರಿ ಇಸ್ಕಾನ್ ನೀಡುವ ಸಂಬಂಧ ಬಿಬಿಎಂಪಿ ಆಸಕ್ತಿ ತೋರಿದೆ. ಆದರೆ ಬಿಬಿಎಂಪಿ ನೀಡಿರುವ ಬೆಲೆಗೆ ಆಹಾರ ನೀಡಲು ಕಷ್ಟ ಸಾಧ್ಯ ಎನ್ನುವ ಅಭಿಪ್ರಾಯವನ್ನು ಬಿಬಿಎಂಪಿ ಮುಂದೆ ಇಸ್ಕಾನ್ ಮಂಡಿಸಿದೆ. ಆದ್ದರಿಂದ ಇದೀಗ ಎರಡೂ ಕಡೆ ಚರ್ಚೆ ನಡೆಯುತ್ತಿದೆ.

ಅಡುಗೆ ನಿರ್ವಹಣೆ ಕಷ್ಟ
ಕೆಲವರ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಇಂದಿರಾ ಕ್ಯಾಂಟಿನ್‌ಗಳಲ್ಲಿ ದಿನಕ್ಕೆ ಮೂರು ಬಾರಿಯಂತೆ, ಆಹಾರವನ್ನು
ಒಂದೇ ಸಂಸ್ಥೆಯಿಂದ ಒದಗಿಸುವುದು ಸವಾಲಿನ ಕೆಲಸ. ಇದರೊಂದಿಗೆ ಇಂದಿರಾ ಕ್ಯಾಂಟೀನ್ ನಿರ್ವಹಣೆಯೂ ಇಸ್ಕಾನ್ ಹೆಗಲಿಗೆ ಹಾಕಿದರೆ, ಅಲ್ಲಿ ಆಗುವ ಸಮಸ್ಯೆಗಳನ್ನು ನಿಭಾಯಿಸುವ ಸವಾಲಿರುತ್ತದೆ. ಆದ್ದರಿಂದ ಈ ಗುತ್ತಿಗೆಯನ್ನು ಒಪ್ಪಿಕೊಳ್ಳ ಬೇಕೇ? ಬೇಡವೇ ಎನ್ನುವ ಜಿಜ್ಞಾಸೆಯಲ್ಲಿ ಇಸ್ಕಾನ್ ಇದೆ ಎನ್ನುವ ಮಾತುಗಳು ಕೇಳಿಬಂದಿದೆ.

ಇಸ್ಕಾನ್ ಮುಂದಿರುವ ಸವಾಲು
ತಯಾರಿಸಿದ ಆಹಾರವನ್ನು 198 ವಾರ್ಡ್‌ಗಳಿಗೆ ರವಾನಿಸುವುದು
ಹಲವು ಭಾಗದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇರುವ ಆಹಾರಕ್ಕೆ ಬೇಡಿಕೆ ಬರುವ ಸಾಧ್ಯತೆ
ಬಿಬಿಎಂಪಿ ನೀಡುವ ದರದಲ್ಲಿ ಈ ಕಾರ್ಯ ಕಷ್ಟಸಾಧ್ಯ
ವಿಕೇಂದ್ರೀಕರಣ ಅಡುಗೆ ತಯಾರಿಕೆಗೆ ಬೇಡಿಕೆ ಬಂದರೆ ನಿರ್ವಹಣೆ ಕಷ್ಟ