ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲ ಆಸ್ಪತ್ರೆಗಳನ್ನು ಕರೋನಾ ಸೋಂಕಿತರು ಹಾಗೂ ಶಂಕಿತರಿಗಾಗಿಯೇ ಮೀಸಲಿಡಲು ಸಲುವಾಗಿ ಸರಕಾರ ಮಹತ್ವದ ಆದೇಶ ಹೊರಡಿಸಿದೆ.
ಅಲ್ಲದೆ, ಈ ಜಿಲ್ಲಾ ಆಸ್ಪತ್ರೆಗಳಲ್ಲಿ ಈಗಾಗಲೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ (ಕರೋನಾ ಸೋಂಕಿನೇತರ) ಎಲ್ಲಾ ರೋಗಿಗಳನ್ನು ‘ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ’ ಯೋಜನೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕಾರ್ಯಪಡೆಯ ಸಭೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಪ್ರಸ್ತುತ ಸೋಂಕು ಪ್ರಕರಣಗಳು ಉಲ್ಬಣಿಸುತ್ತಿದ್ದು, ತುರ್ತು ಪರಿಸ್ಥಿತಿ ಬಗೆಹರಿಯುವವರೆಗೆ ಶಂಕಿತರು ಹಾಗೂ ಸೋಂಕಿತರ ಚಿಕಿತ್ಸೆಗಾಗಿ ಸರಕಾರ ಜಿಲ್ಲಾ ಆಸ್ಪತ್ರೆಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಹೀಗಾಗಿ ಪ್ರಸ್ತುತ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆಸಲು ಅವಕಾಶ ನೀಡಬೇಕಾಗಿರುತ್ತದೆ.
ಅಲ್ಲದೆ, ದಿನನಿತ್ಯ ಚಿಕಿತ್ಸೆ ಬಯಸಿ ಜಿಲ್ಲಾ ಆಸ್ಪತ್ರೆಗಳಿಗೆ ದ್ವಿತೀಯ ಹಂತದ ಕಾಯಿಲೆಗಳ ಚಿಕಿತ್ಸೆಗೆ ಬರುವ ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದು, ಆಯ್ಕೆ ಮಾಡಿರುವ ಖಾಸಗಿ ಆಸ್ಪತ್ರೆಗಳು ಹಾಗೂ ಈಗಾಗಲೇ ನೊಂದಾಯಿತವಾಗಿರುವ ಆಸ್ಪತ್ರೆಗಳಲ್ಲಿ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕಾಗಿ ತುರ್ತು ಪರಿಸ್ಥಿತಿ ಕಳೆಯುವವರೆಗೆ ಹಾಗೂ ಮುಂದಿನ ಆದೇಶದವರೆಗೆ ಇವನ್ನು ವಿಶೇಷ ಪ್ರಕರಣಗಳಾಗಿ ಪರಿಗಣಿಸಿ ಎಬಿ-ಎಆರ್‌ಕೆ ಅಡಿ ಹಣ ಬಿಡುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪ್ರಮುಖ ನಿರ್ಣಯಗಳು:
ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆಗಳನ್ನು ನೊಂದಾಯಿತ ಖಾಸಗಿ ಆಸ್ಪತ್ರೆಗಳು ಹಾಗೂ ಪರ್ಯಾಯವಾಗಿ ಆಯ್ಕೆ ಮಾಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ರೆಫರಲ್ ವ್ಯವಸ್ಥೆ ಇಲ್ಲದೆ ನೇರವಾಗಿ ಹೋಗಿ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.
ಅಲ್ಲದೆ, ತುರ್ತು ಅಗತ್ಯವಿದ್ದಾಗ ಸುವರ್ಣ ಆರೋಗ್ಯ ಟ್ರಸ್ಟ್‌ನ ನಿಯಮಾವಳಿ ಸಡಿಸಿಲಿಸಿ ಆದರೂ ಇತರೆ ಖಾಸಗಿ ಆಸ್ಪತ್ರೆಗಳಿಗೂ ಆಯುಷ್ಮಾನ್ ಭಾರತ್ ಅಡಿ ನೋಂದಣಿಗೆ ಅವಕಾಶ ಮಾಡಿಕೊಡಲು ತೀರ್ಮಾನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ
ಕರೋನಾ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗಳು ಮೀಸಲು
ಬೆಂಗಳೂರು: