ಸಂದರ್ಶನ: ಅಕ್ಕಯ್ ಪದ್ಮಶಾಲಿ
ಸಂದರ್ಶಕ: ರಂಜಿತ್ ಎಚ್.ಅಶ್ವತ್ಥ
ಲಿಂಗತ್ವ ಅಲ್ಪಸಂಖ್ಯಾತರಿಗೆ ವೋಟರ್ ಐಡಿಗಾಗಿ ವಿಶೇಷ ಅಭಿಯಾನ
ಸಮಾಜದಲ್ಲಿ೨೦ ವರ್ಷದ ಹಿಂದೆ ಲಿಂಗತ್ವ ಅಲ್ಪಸಂಖ್ಯಾತರ ಬಗೆಗೆ ಇದ್ದ ವಾತಾವರಣ ಇಂದು ಇಲ್ಲ. ಸಮುದಾಯ ನಮ್ಮನ್ನು ಒಪ್ಪಿಕೊಂಡಿದೆ. ಇದೀಗ ಕಾಂಗ್ರೆಸ್ ಪಕ್ಷ ಆ ಸಮುದಾಯದಿಂದ ಬಂದಿರುವ ನನಗೆ ಪಕ್ಷದ ಆಯಕಟ್ಟಿನ ಸ್ಥಾನ ನೀಡುವ ಮೂಲಕ ರಾಜಕೀಯ ಸ್ಥಾನಮಾನ ನೀಡಿದೆ.
ಇದಕ್ಕೆ ನಾನು ಅಭಾರಿಯಾಗಿದ್ದೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಡಾ. ಅಕ್ಕಯ್ ಪದ್ಮಶಾಲಿ ಹೇಳಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮೊದಲ ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿಯಾಗಿರುವ ಅವರು ‘ವಿಶ್ವವಾಣಿ’ ಯೊಂದಿಗೆ ಮಾತನಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ರುವ ಬಗ್ಗೆ ತಮ್ಮ ಮನದಾಳದ ಮಾತನ್ನು ಆಡಿದ್ದಾರೆ. ಈ ವೇಳೆ ಸಮುದಾಯದ ಪರವಾಗಿ ಮುಂದಿನ ದಿನ ಗಳಲ್ಲಿ ಹೋರಾಟ, ಚುನಾವಣಾ ರಾಜಕೀಯಕ್ಕೆ ಬರುವ ಸಂಬಂಧ ಸೇರಿದಂತೆ ಹಲವು ವಿಷಯಗಳನ್ನು ಮಾತನಾಡಿದ್ದಾರೆ.
ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಕೆಪಿಸಿಸಿ ಪದಾಧಿಕಾರಿ ಹುದ್ದೆ ಘೋಷಣೆಯಾದಾಗ ಹೇಗನಿಸಿತು?
– ರಾಜಕೀಯಕ್ಕೆ ಬರಬೇಕೇ, ಬೇಡವೇ ಎನ್ನುವ ಗೊಂದಲದಲ್ಲಿಯೇ ೧೧ ವರ್ಷ ಕಳೆದಿದ್ದೆ. ನೊಂದವರ ಪರ ಹೋರಾಟ ಮಾಡಿಕೊಂಡು, ಲಿಂಗತ್ವ ಅಲ್ಪಸಂಖ್ಯಾತರು, ಶೋಷಿತರು, ಲಿಂಗತ್ವ ಕಾರ್ಮಿಕರ ಪರವಾಗಿ ಧ್ವನಿಯಾಗಿದ್ದ ನಾನು ಅಂತಿಮವಾಗಿ ಕಾಂಗ್ರೆಸ್ ಸೇರ್ಪಡೆಯಾದೆ. ಯಾವುದೇ ಸ್ಥಾನಮಾನದ ಆಕಾಂಕ್ಷೆ ಇರಲಿಲ್ಲ. ಆದರೆ, ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನನಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದಾರೆ. ನಿಜಕ್ಕೂ ಆ ಕ್ಷಣ ಅವಿಸ್ಮರಣೀಯ. ಪ್ರಧಾನ ಕಾರ್ಯದರ್ಶಿ ಎನ್ನುವ ಹುದ್ದೆ ಆಯಕಟ್ಟಿನ ಹುದ್ದೆಯಾಗಿರುವುದರಿಂದ, ಅದನ್ನು ನನಗೆ ನೀಡಿರುವುದು ನಿಜಕ್ಕೂ ಸಂತಸ ಹಾಗೂ ಹೆಮ್ಮೆಯ ವಿಷಯ.
ಹುದ್ದೆ ನಿರೀಕ್ಷಿತವಾಗಿತ್ತೇ?
ಭಾರತದ ಇತಿಹಾಸದಲ್ಲಿ ರಾಜಕೀಯವಾಗಿ, ಪಕ್ಷದ ಸಂಘಟನೆಯ ವಿಷಯದಲ್ಲಿ ನೋಡುವುದಾದರೆ ಇದೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತ ರೊಬ್ಬರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದು. ನಿಜಕ್ಕೂ ಇದು ನನಗೆ ಅನಿರೀಕ್ಷಿತ. ನನಗೆ ನೀಡಿರುವ ಈ ಹುದ್ದೆ ಕೇವಲ ನನಗೆ ನೀಡಿದ ಗೌರವವಲ್ಲ. ಬದಲಿಗೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸಿಕ್ಕ ಗೌರವ.
ಯಾವ ರೀತಿ ಸಂಘಟನೆಯಲ್ಲಿ ತೊಡಗುವಿರಿ?
ಕೆಪಿಸಿಸಿ ಅಧ್ಯಕ್ಷರು ಈಗಾಗಲೇ ‘ನಾ ನಾರಿ’ ಎನ್ನುವ ಅಭಿಯಾನದ ಸಂಯೋಜಕಿಯನ್ನಾಗಿ ನೇಮಿಸಿದ್ದಾರೆ. ಇದೀಗ ಪ್ರಧಾನ ಕಾರ್ಯದರ್ಶಿ ಹುದ್ದೆ ಯನ್ನೂ ನೀಡಿದ್ದಾರೆ. ಈ ಎರಡನ್ನೂ ಸಮರ್ಥವಾಗಿ ನಿಭಾಯಿಸಲು ಶ್ರಮಿಸುತ್ತೇನೆ. ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಮಹಿಳೆ ಯರು, ಶೋಷಿತ ವರ್ಗದವರ ಪರ ಪಕ್ಷ ಸಂಘಟನೆಗೆ ಅಗತ್ಯ ಹೋರಾಟ ಮಾಡುತ್ತೇನೆ.
ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟದ ಕಥೆ ಏನು?
ಲಿಂಗತ್ವ ಅಲ್ಪಸಂಖ್ಯಾತರು, ಕಾರ್ಮಿಕರಿಗೆ ರಾಜ್ಯ ಸರಕಾರ ಹಲವು ಯೋಜನೆ ರೂಪಿಸಿದ್ದರೂ, ಅವುಗಳು ತಲುಪಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಕಳೆದ ೨೦ ವರ್ಷಗಳಿಗೆ ಹೋಲಿಸಿದರೆ, ಇಂದು ಸಮಾಜ ನಮ್ಮನ್ನು ಒಪ್ಪಿಕೊಳ್ಳುತ್ತಿದೆ. ಪಕ್ಷ ನೀಡಿರುವ ಜವಾಬ್ದಾರಿಯ ಜತೆಗೆ
ನಮ್ಮ ಸಮುದಾಯದ ಶೋಷಿತರ ಪರವಾಗಿ ಧ್ವನಿಯಾಗುವುದು ನನ್ನ ಕರ್ತವ್ಯ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಇದರೊಂದಿಗೆ
ಅಲ್ಪಸಂಖ್ಯಾತ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ಅಗತ್ಯ ಕಾರ್ಯಕ್ರಮ ಹಾಕಿಕೊಳ್ಳುತ್ತೇವೆ.
ಮತದಾನ ಹಕ್ಕಿನ ಕುರಿತುಅರಿವಿನ ಕೊರತೆಯಿದೆಯೇ?
೨೦೧೧-೧೨ರಲ್ಲಿ ಯುಪಿಎ ಸರಕಾರ ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾನದ ಹಕ್ಕು ನೀಡಿ, ಮತದಾರರ ಗುರುತಿನ ಚೀಟಿ ವಿತರಿಸಲು ಆರಂಭಿಸಿದೆ. ಆದರೂ ಅನೇಕರು ಈಗಲೂ ವೋಟರ್ ಐಡಿ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ, ನಮ್ಮ ಸಮುದಾಯದ ಅನೇಕರಿಗೆ ಸ್ವಂತ ಮನೆ ಇಲ್ಲ. ರಸ್ತೆ ಬದಿ, ಪಾರ್ಕ್ನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ವೋಟರ್ ಐಡಿಗೆ ವಿಳಾಸ ನೀಡಲು ಸಾಧ್ಯವಾಗದೆ, ಈ ಹಕ್ಕನ್ನು ಪಡೆಯಲು ಸಾಧ್ಯವಾಗಿಲ್ಲ. ಈ ಸಂಬಂಧ ಮುಂದಿನ ಜೂನ್- ಜುಲೈನಲ್ಲಿ ಚುನಾವಣಾ ಆಯೋಗಕ್ಕೆ ಲಿಂಗತ್ವ ಅಲ್ಪಸಂಖ್ಯಾತರ ವೋಟರ್ ಐಡಿಗಾಗಿ ವಿಶೇಷ
ಅಭಿಯಾನ ಆರಂಭಿಸಲು ಮನವಿ ಮಾಡುತ್ತೇವೆ.
ಚುನಾವಣೆಗೆ ಸ್ಪರ್ಧಿಸಲ್ಲ
ಚುನಾವಣೆಗೆ ಸ್ಪರ್ಧಿಸುವ ಯೋಚನೆ ಖಂಡಿತ ಇಲ್ಲ. ಈಗಿನ ಚುನಾವಣೆಗಳಲ್ಲಿ ನಡೆಯುವ ಆರ್ಥಿಕ ಚಟುವಟಿಕೆಯ ಬಗ್ಗೆ ಅರಿವಿದೆ. ಊಟ, ಬಟ್ಟೆ,
ಸೂರಿಗಾಗಿ ಹೋರಾಡಿದ್ದ ನಾನು ಅಂತಹ ಸಾಹಸಕ್ಕೆ ಕೈಹಾಕುವುದಿಲ್ಲ. ಬದಲಿಗೆ ಪಕ್ಷ ನೀಡುವ ಜವಾಬ್ದಾರಿ ಯನ್ನು ಸಮರ್ಥವಾಗಿ ನಿಭಾಯಿಸುವ,
ಸಮುದಾಯದ ಏಳಿಗೆ ಬೇಕಿರುವ ಅಗತ್ಯ ಜನಜಾಗೃತಿ, ಹೋರಾಟ ಮಾಡುತ್ತೇನೆ. ಯಾವುದೇ ಕಾರಣಕ್ಕೂ, ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ.
***
ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಇಂತಹ
ಮಹತ್ವದ ಹುದ್ದೆ ನೀಡಿರುವುದಕ್ಕೆ ಅಭಾರಿಯಾಗಿದ್ದೇನೆ. ಇಷ್ಟು ದಿನ ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ಮಾಡಿಕೊಂಡು ಬಂದಿರುವ ಹೋರಾಟ ದೊಂದಿಗೆ ಪಕ್ಷ ನೀಡುವ ಜವಾಬ್ದಾರಿಯನ್ನೂ ನಿಭಾಯಿಸುವೆ.
– ಡಾ. ಅಕ್ಕಯ್ ಪದ್ಮಶಾಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ