Sunday, 15th December 2024

ಪಾಕ್ ಭರವಸೆ ನ್ಯಾಯಾಲಯ ಮಾತ್ರ

ಸಂಗತ
ವಿಜಯ ದರಡಾ

ಪಾಕಿಸ್ತಾನಿ ನ್ಯಾಯಾಲಯಗಳು ಕಳೆದ ಹಲವು ವರುಷಗಳಿಂದ ಸಾಕಷ್ಟು ಸುಧಾರಿಸಿವೆ. ತಾವು ನಿಷ್ಪಕ್ಷಪಾತ ಆದೇಶ ಕೊಡದೇ ಇದ್ದರೆ ದೇಶದ ಪರಿಸ್ಥಿತಿ ಹದಗೆಡುತ್ತದೆ ಮತ್ತು ಪಾಕಿಸ್ತಾನ ಪ್ರಪಾತವನ್ನು ತಲುಪುತ್ತದೆ ಎಂಬ ಅಂಶ ಅವರಿಗೆ ಚೆನ್ನಾಗಿ ಗೊತ್ತಿದೆ.

ಭಾರತ ಪ್ರಜಾಪ್ರಭುತ್ವದ ಸಾರ್ವಭೌಮತೆಯುಳ್ಳ ರಾಷ್ಟ. ತನ್ನದೇ ಆದ ನಿಷ್ಪಕ್ಷಪಾತ ವಿದೇಶಿ ನೀತಿ ಇಲ್ಲಿದೆ. ಭಾರತ ಯಾರನ್ನೂ ಹೆದರಿಸುವುದಿಲ್ಲ ಮತ್ತು ಯಾರಿಗೂ ಹೆದರುವುದಿಲ್ಲ. ಇಮ್ರಾನ್ ಭಾಯ, ನೀವು ಹೀಗೆ ಹೇಳಿದ್ದು ಸರಿ. ಇದನ್ನು ನೇರವಾಗಿ ನಿಮ್ಮ ಮುಖದಿಂದ ಕೇಳುತ್ತಿರುವುದು ಖುಷಿಯ
ಸಂಗತಿ. ನಾವೆಲ್ಲ ರಾಮನವಮಿಯನ್ನು ಖುಷಿಯಿಂದ ಆಚರಿಸಿದ್ದೇವೆ.

ನಿಮ್ಮ ಪಾಕಿಸ್ತಾನಕ್ಕೂ ಕೂಡ ಶ್ರೀರಾಮಚಂದ್ರನ ಅನುಗ್ರಹವಿದೆ. ಹೇಗೆ ಅಂತೀರಾ? ನನ್ನ ಸ್ನೇಹಿತ ಜಾವೀದ್ ಜಬ್ಬಾರ್, ‘ರಾಮಚಂದ್ರ ಪಾಕಿಸ್ತಾನಿ’ ಎಂಬ ಪ್ರಶಸ್ತಿ ವಿಜೇತ ಚಲನಚಿತ್ರವನ್ನು ನಿರ್ಮಿಸಿದ್ದರು. ಆ ಸಿನಿಮಾ ಭಾರತದಲ್ಲಿ ಚಿತ್ರೀಕರಣವಾಗಿತ್ತು ಮತ್ತು ಪಾಕಿಸ್ತಾನದಲ್ಲಿ ದೊಡ್ಡ ಸುದ್ದಿಯಾಗಿತ್ತು. ನಿಮಗೆ ಇದೆಲ್ಲವೂ ಗೊತ್ತಿರಬೇಕು ಇಮ್ರಾನ್ ಭಾಯ, ಭಾರತದ ನ್ಯಾಯಾಂಗ ವ್ಯವಸ್ಥೆ ವಿಶ್ವದಲ್ಲಿಯೇ ಅತ್ಯಂತ ಗೌರವಾನ್ವಿತ ಸ್ಥಾನ ವನ್ನು ಪಡೆದಿದೆ, ಏಕೆಂದರೆ ಭಾರತದ ನ್ಯಾಯಾಂಗ ಸಂಪೂರ್ಣ ಸ್ವತಂತ್ರ ಮತ್ತು ಸ್ವಾಯುತ್ತ ಸಂಸ್ಥೆ, ಅಲ್ಲಿ ಯಾರದೇ ಒತ್ತಡ, ವಶೀಲಿಬಾಜಿ ಅಥವಾ ಹಸ್ತಕ್ಷೇಪವೂ ಇರುವುದಿಲ್ಲ.

ಹಾಗಾಗಿಯೇ ಅಂತಾರಾಷ್ಟ್ರೀಯ ಮಟ್ಟದ ನ್ಯಾಯಮಂಡಳಿಗಳಲ್ಲಿ ಭಾರತದ ನ್ಯಾಯಾಧೀಶರಿಗೆ ಆಗಾಗ ಸ್ಥಾನಗಳು ಪ್ರಾಪ್ತವಾಗುತ್ತವೆ. ಅತ್ಯಂತ ಪ್ರಭಾವ ಶಾಲಿ ಎಂದು ಪರಿಗಣಿಸಲ್ಪಟ್ಟಿದ್ದ ಇಂದಿರಾ ಗಾಂಧಿಯವರ ಪ್ರಧಾನಮಂತ್ರಿತ್ವವನ್ನೇ ನಮ್ಮ ನ್ಯಾಯಾಂಗ ಅನೂರ್ಜಿತಗೊಳಿಸಿತ್ತು. ಭಾರತದ ನ್ಯಾಯಾ ಲಯಗಳು ಹೇಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿವೆ ಎಂಬುದನ್ನು ತೋರಿಸಲು ಹತ್ತು ಹಲವು ನಿದರ್ಶನಗಳಿವೆ. ಇದು ನಮ್ಮ ಸಂಪ್ರದಾಯದ ಅವಿಚ್ಛಿನ್ನ ಭಾಗ. ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆ ಕೊಟ್ಟ ಆದೇಶ ಅಚ್ಚರಿಯದಾಗಿದೆ ಮತ್ತು ನ್ಯಾಯಿಕ ವ್ಯವಸ್ಥೆಯಲ್ಲಿ ಭರವಸೆ ತುಂಬುವಲ್ಲಿ ಸಕ್ಷಮವಾಗಿದೆ.

ವಿಪಕ್ಷದ ಗೂಗ್ಲಿ ಬಾಲಿಗೆ ಇಮ್ರಾನ್ ಖಾನ್ ಸಿಕ್ಸರ್ ಹೊಡೆಯಲು ಯತ್ನಿಸಿದಾಗ ಎಲ್ಲರ ದೃಷ್ಟಿ ಪಾಕಿಸ್ತಾನದ ಸುಪ್ರೀಂ ಕೋರ್ಟಿ ನತ್ತ ಇತ್ತು. ಯಾವಾಗ ವಿಪಕ್ಷ ಸುಪ್ರೀಮ್ ಕೋರ್ಟಿನ ಮೊರೆ ಹೋಯಿತೋ ಅದಾಗಲೇ ಕೋರ್ಟು ಎಲ್ಲ ವಿಚಾರಗಳ ಪರಾಮರ್ಶೆ ಮಾಡಿತ್ತು. ಅಂದು ಸುದೀರ್ಘ ಮತ್ತು ತೀವ್ರ ತರವಾದ ವಾಗ್ವಾದ ನಡೆದಿತ್ತು ಮತ್ತು ಕೊನೆಗೂ ಕಾನೂನಿಗನುಗುಣವಾಗಿ ಕೋರ್ಟು ತನ್ನ ತೀರ್ಪನ್ನು ಬಹಿರಂಗಪಡಿಸಿತು. ಸಂಸತ್ತು ಊರ್ಜಿತಕ್ಕೆ ಬಂತು ಮತ್ತು ಇಮ್ರಾನ್ ಖಾನ್ ತಮ್ಮ ವಿಕೆಟ್ ಕಳೆದುಕೊಂಡರು. ಅವಿಶ್ವಾಸ ನಿರ್ಣಯ ಗೊತ್ತುವಳಿ ಅಂಗೀಕಾರವಾಯಿತು. ಸಭಾಪತಿ ಮತ್ತು ಉಪ ಸಭಾಪತಿ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದ ಇಮ್ರಾನ್ ಖುದ್ದು ಸಂಸತ್ತಿಗೆ ಹಾಜರಾಗಿರಲಿಲ್ಲ. ಈ ಅಂಶವನ್ನು ನ್ಯಾಯಾಲಯ ಗಂಭೀರ ವಾಗಿ ಪರಿಗಣಿಸಿತ್ತು.

ಸುಪ್ರೀಮ್ ಕೋರ್ಟಿನ ತೀರ್ಪಿನ ವಿರುದ್ಧವಾಗಿ ಇಮ್ರಾನ್ ನಡೆದುಕೊಂಡರೇ ಎಂಬುದು ಇನ್ನೂ ತೀರ್ಮಾನವಾಗಬೇಕಾದ ವಿಚಾರ. ಈ ಬಗ್ಗೆ ನ್ಯಾಯಾ ಲಯದ ತೀರ್ಪು ಇನ್ನಷ್ಟೇ ಬರ ಬೇಕಿದೆ. ಪಾಕಿಸ್ತಾನದಂತಹ ರಾಷ್ಟದಲ್ಲಿ ನ್ಯಾಯಾಲಯ ಇಷ್ಟು ನಿಷ್ಪಕ್ಷವಾಗಿ ನಡೆದುಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಯಾಕೆಂದರೆ ಅಲ್ಲಿನ ಒಟ್ಟಾರೆ ಪರಿಸ್ಥಿತಿ ಅಷ್ಟು ಹದಗೆಟ್ಟಿದೆ. ಪಾಕಿಸ್ತಾನದ ಮಿಲಿಟರಿ ವ್ಯವಸ್ಥೆ ಮತ್ತು ಬೇಹುಗಾರಿಕೆ ಸಂಸ್ಥೆ ಐಎಸ್‌ಐಗಳು ನ್ಯಾಯಾಧೀಶರ ಮೇಲೆ ಪ್ರಭಾವ ಅಥವಾ ಒತ್ತಡ ಬೀರಲು ಯತ್ನಿಸಿರಬಹುದು ಎಂಬ ಶಂಕೆ ಕೆಲವರಲ್ಲಿದೆ.

ಆದರೆ ನ್ಯಾಯಾಲಯದ ಪ್ರತಿಯೊಂದು ನಡೆಯೂ ಅದನ್ನು ಅಲ್ಲಗಳೆದಿದೆ. ಮಿಲಿಟರಿ ವ್ಯವಸ್ಥೆಯ ಒತ್ತಡ ಮತ್ತು ಹಸ್ತಕ್ಷೇಪದ ಕಾರಣದಿಂದಾಗಿ ಪಾಕಿಸ್ತಾನದ ನ್ಯಾಯಿಕ ವ್ಯವಸ್ಥೆ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ ಎಂಬ ಅಂಶವನ್ನು ಪಾಕಿಸ್ತಾನಿ ಸುಪ್ರೀಮ್ ಕೋರ್ಟಿನ ಭೂತಪೂರ್ವ ಬಾರ್ ಅಸೋಸಿಯೇಶನ್ ಅಧ್ಯಕ್ಷ ಆಲಿ ಅಹಮದ್ ಕುರ್ದ್ ಅವರು ಕಳೆದ ಬಾರಿ ಬಹಿರಂಗವಾಗಿ ಹೇಳಿದ್ದರು. ಆಗಿನ ಚೀಫ್ ಜಸ್ಟಿಸ್ ಗುಲ್ಜರ್ ಅಹಮದ್ ಅವರು ಅದನ್ನು ತಕ್ಷಣ ನಿರಾಕರಿಸಿ ನಾನು ಯಾರ ಒತ್ತಡವನ್ನೂ ಸಹಿಸುವುದಿಲ್ಲ ಮತ್ತು ಯಾರ ಮಾತನ್ನೂ ಕೇಳುವುದಿಲ್ಲ, ನನ್ನ ತೀರ್ಪುಗಳ ಮೇಲೆ ಇದುವರೆಗೆ ಯಾರೂ ಪ್ರಭಾವ ಬೀರಿಲ್ಲ ಎಂದು ಹೇಳಿದ್ದರು.

ಅಂತೆಯೇ ಅವರು ಆಲಿ ಅಹಮದ್ ಕುರ್ದ್ ಅವರನ್ನು ನ್ಯಾಯಾಲಯಕ್ಕೆ ಬಂದು ಪರಾಮರ್ಶೆ ಮಾಡುವಂತೆ ಹೇಳಿದ್ದರಲ್ಲದೇ ಪಾಕಿಸ್ತಾನದ ನ್ಯಾಯಿಕ ವ್ಯವಸ್ಥೆಯ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸವನ್ನು ಮಾಡಬೇಡಿ ಎಂದು ಆಗ್ರಹಿಸಿದ್ದರು. ಪಾಕಿಸ್ತಾನದ ಕೋರ್ಟುಗಳು ಆಗಿಂದಾಗ್ಯೆ ಇಂತಹ ತೀರ್ಪುಗಳನ್ನು ಪ್ರಕಟಿಸುತ್ತಲೇ ಬಂದಿವೆ ಮತ್ತು ನಿಷ್ಪಕ್ಷಪಾತ ಮನಃಸ್ಥಿತಿಯನ್ನು ರುಜುವಾತು ಪಡಿಸಿವೆ. ಕಳೆದ ವರ್ಷದ ಆದಿಯಲ್ಲಿ, ದೇವಾ ಲಯದ ಮೇಲೆ ನಡೆದ ದೊಂಬಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯ ನ್ಯಾಯಾಧೀಶ ಗುಲ್ಜಾರ್ ಅಹಮದ್ ಅವರು ಕೊಟ್ಟ ಆದೇಶವನ್ನು ಇಡೀ
ವಿಶ್ವವೇ ಕೊಂಡಾಡಿದೆ.

ಖೈಬರ್ -ಕ್ತೂನ್ವಾಲಾ ಪ್ರಾಂತ್ಯದಲ್ಲಿ ಬರುವ ಕೊರಕ್ ಜಿಯಲ್ಲಿ ಸಂತ ಶ್ರೀ ಪರಮಹಂಸಜೀ ಮಹಾರಾಜರ ಐತಿಹಾಸಿಕ ಸ್ಮಾರಕವನ್ನು ಪಾಕಿಸ್ತಾನದ ಸರಕಾರ ಮರು ನಿರ್ಮಾಣ ಮಾಡಬೇಕೆಂಬ ತೀರ್ಪನ್ನು ಅವರು ಕೊಟ್ಟಿದ್ದರು. ಈ ತೀರ್ಪು ಗಂಭೀರ ಸ್ವರೂಪವನ್ನು ಪಡೆದಿತ್ತಲ್ಲದೇ ಆ ಪ್ರಕರಣದಲ್ಲಿ ನೂರಕ್ಕೂ ಹೆಚ್ಚು ಮಂದಿ ದಸ್ತಗಿರಿಯಾಗಿದ್ದರು ಮತ್ತು ಅಲ್ಲಿನ ಪೋಲೀಸ್ ಅಧೀಕ್ಷಕ ಪದಚ್ಯುತನಾಗಿದ್ದ. ದಾಳಿ ಮಾಡಿದ ವ್ಯಕ್ತಿ ಮೌಲ್ವಿ ಶರೀಫ್ ನಿಂದಲೇ ಆ ದೇವಳ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ವಸೂಲಿ ಮಾಡಬೇಕೆಂತಲೂ ಕೋರ್ಟು ಆದೇಶ ಕೊಟ್ಟಿತ್ತು. ಆ ದೇವಳ ನಿರ್ನಾಮ ವಾದ ನಂತರದಲ್ಲಿ ಇಡೀ ವಿಶ್ವದಲ್ಲಿ ಪಾಕಿಸ್ತಾನದ ಘನತೆ ಕುಸಿದು ಬಿದ್ದಿತ್ತು. ಆದರೆ ಕೋರ್ಟಿನ ಆದೇಶದ ನಂತರದಲ್ಲಿ ಸ್ವಲ್ಪವಾದರೂ ಗೌರವ ಉಳಿದಿತ್ತು.

ಎದುರಾಳಿ ಎಂತಹ ಪ್ರಭಾವಶಾಲಿಯೇ ಇರಲಿ, ತಾನು ಆತನಿಗೆ ಜಗ್ಗುವುದಿಲ್ಲ ಎಂಬ ಸಂದೇಶವನ್ನು ಪಾಕಿಸ್ತಾನದ ಸುಪ್ರೀಮ್ ಕೋರ್ಟು ಮತ್ತು ಅಲ್ಲಿನ ಇತರೆ ನ್ಯಾಯಾಲಯಗಳು ತಮ್ಮ ತೀರ್ಪುಗಳ ಮೂಲಕ ಆಗಾಗ ಕೊಟ್ಟಿವೆ. ಬೆನಜೀರ್ ಭುಟ್ಟೋ ಹತ್ಯಾಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನದ ನ್ಯಾಯಾಲಯ ಜನರಲ್ ಪರ್ವೇಜ್ ಮುಷರಫ್ ಅವರನ್ನು ಪಲಾಯನವಾದಿ ಎಂದು ಜರೆದಿತ್ತು. ನವಾಜ್ ಶರೀಫ್ ಕೂಡ ಕೋರ್ಟಿನ ಆದೇಶದ ಅನ್ವಯ
ಪದಚ್ಯುತರಾಗಿ ಜೈಲಿನಲ್ಲಿ ಕೆಲಕಾಲ ಕಂಬಿ ಎಣಿಸಬೇಕಾದ ಪರಿಸ್ಥಿತಿ ಎದುರಾಗಿದ್ದನ್ನೂ ಇಲ್ಲಿ ಸ್ಮರಿಸಬಹುದು. ನ್ಯಾಯಾಲಯಕ್ಕೆ ಹೆದರಿ ಆತ ಮತ್ತೆ ಪಾಕಿಸ್ತಾನದ ನೆಲಕ್ಕೆ ಕಾಲಿಡಲೇ ಇಲ್ಲ.

ರಾಜಕೀಯದ ಕಾರಣದಿಂದ ಆತ ಬಿಡುಗಡೆಗೊಂಡು ಲಂಡನ್ನಿಗೆ ಪಲಾಯನಗೈದ. ಝರ್ದಾರಿಯನ್ನು ಕೂಡ ಕೋರ್ಟು ಸುಮ್ಮನೆ ಬಿಟ್ಟಿಲ್ಲ. ನಿಮಗೆ ನೆನಪಿರಬಹುದು, ಹತ್ತುವರುಷಗಳ ಹಿಂದೆ ಆಗಿನ ಚೀಪ್ ಜಸ್ಟಿಸ್ ಇಫ್ತಿಕಾರ್ ಮಹಮದ್ ಚೌಧರಿಯವರು ಅನೇಕ ಸಂಸದರನ್ನು ಭ್ರಷ್ಟಾಚಾರದ
ಕಾರಣಕ್ಕಾಗಿ ಅನರ್ಹಗೊಳಿಸಿದ್ದರು. ಪಾಕಿಸ್ತಾನದಲ್ಲಿ ಉಗ್ರವಾದಿಗಳ ವಿರುದ್ಧ ಕ್ರಮ ಜರುಗಿಸುವುದು ಕಷ್ಟದ ಕೆಲಸ ಎಂಬುದು ಜಗಜ್ಜಾಹೀರಾದ
ಸಂಗತಿ. ಇದು ಅಲ್ಲಿನ ಸರಕಾರದ ಮಟ್ಟದಲ್ಲಿ ನಿಜವಿರಬಹುದು, ಆದರೆ ಅಲ್ಲಿನ ನ್ಯಾಯಾಲಯಗಳು ಅಪರಾಧಿಗಳನ್ನು ಶಿಕ್ಷಿಸುವುದರಲ್ಲಿ ಎಂದೂ ಹಿಂದೆಬಿದ್ದಿಲ್ಲ.

ಉದಾಹರಣೆಗೆ ಹೇಳುವುದಾದರೆ ಕುಖ್ಯಾತ ಉಗ್ರವಾದಿ ಹಫೀಜ್ ಸಯೀಫ್ಗೆ 31 ವರ್ಷಗಳ ಕಾರಾಗೃಹ ಶಿಕ್ಷೆ ಜಾರಿಯಾಗಿದೆ. ಅಲ್ಲಿನ ಸರಕಾರ ಆತನನ್ನು ಎಷ್ಟು ದಿನ ಜೈಲಿನಲ್ಲಿಟ್ಟಿತ್ತು ಮತ್ತು ಎಂತಹ ವ್ಯವಸ್ಥೆ ಒದಗಿಸಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪಾಕಿಸ್ತಾನದಲ್ಲಿ ಯಾರಾದರೂ ದೇವ ನಿಂದನೆಯನ್ನು ಮಾಡಿದರೆ ತಕ್ಷಣ ಆತನನ್ನು ಗಲ್ಲಿಗೇರಿಸುವ ಕಾಯಿದೆ ಇದೆ. ಇಂತಹದೇ ಒಂದು ಪ್ರಕರಣದಲ್ಲಿ ಆರೋಪಿಯಾಗಿದ್ದ ಒಬ್ಬ ಮಹಿಳೆ ಸುಪ್ರೀಂ ಕೋರ್ಟಿನಿಂದ ಬಿಡುಗಡೆ ಆದೇಶ ಪಡೆದು ದೇಶಬಿಟ್ಟು ತೊಲಗುವಂತೆ ಹೇಳಿತ್ತು. ಇದು ಅಲ್ಲಿನ ಮೂಲಭೂತವಾದಿಗಳ ಕೆಂಗಣ್ಣಿಗೂ ಕಾರಣ ವಾಗಿತ್ತು. ನನಗೆ ಪಾಕಿಸ್ತಾನದಲ್ಲಿ ಅನೇಕ ಪತ್ರಕರ್ತ ಮಿತ್ರರಿದ್ದಾರೆ ಮತ್ತು ಅಲ್ಲಿನ ನ್ಯಾಯಾಲಯಗಳ ಕಾರ್ಯವೈಖರಿ ಬಗ್ಗೆ ನಾನು ಆಗಾಗ್ಯೆ ಅವರೊಂದಿಗೆ ಚರ್ಚಿಸುತ್ತಿರುತ್ತೇನೆ. ಅವರ ಪ್ರಕಾರ ಪಾಕಿಸ್ತಾನದಲ್ಲಿ ನ್ಯಾಯಾಧೀಶನಾಗಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಅನೇಕ ಬಗೆಯ ಒತ್ತಡಗಳನ್ನು ಅವರು ಎದುರಿಸಬೇಕಾಗುತ್ತದೆ. ಅವರು ಪ್ರಲೋಭನೆಗಳಿಗೆ ತುತ್ತಾಗುವ ಸಾಧ್ಯತೆಗಳು ಅನೇಕ ಸಲ ಎದುರಾದರೂ ಬಹುತೇಕ ನ್ಯಾಯಾ ಧೀಶರು ತಮ್ಮ ನಿಷ್ಠೆಯನ್ನು ತೋರಿದ್ದಾರೆ.

ಅಂದು ಇಂದು ಎಂಬಂತೆ ಅಪವಾದಗಳು ಇರಲೂಬಹುದು. ಈ ಪೈಕಿ ಅತ್ಯಂತ ಅಸಹಜವೆನಿಸುವ ಪ್ರಕರಣವೆಂದರೆ ಜುಲಿಕರ್ ಆಲಿ ಭುಟ್ಟೋ ಅವರಿಗೆ ವಿಧಿಸಲಾದ ಮರಣದಂಡನೆಯ ತೀರ್ಪು. ಈ ಕಳಂಕವನ್ನು ಇನ್ನೂ ತೊಡೆಯಲಾಗಿಲ್ಲ. ಆದರೆ, ಪಾಕಿಸ್ತಾನಿ ನ್ಯಾಯಾಲಯಗಳು ಕಳೆದ ಹಲವು ವರುಷ ಗಳಿಂದ ಸಾಕಷ್ಟು ಸುಧಾರಿಸಿವೆ. ತಾವು ನಿಷ್ಪಕ್ಷಪಾತ ಆದೇಶ ಕೊಡದೇ ಇದ್ದರೆ ದೇಶದ ಪರಿಸ್ಥಿತಿ ಹದಗೆಡುತ್ತದೆ ಮತ್ತು ಪಾಕಿಸ್ತಾನ ಪ್ರಪಾತವನ್ನು ತಲುಪುತ್ತದೆ ಎಂಬ ಅಂಶ ಅವರಿಗೆ ಚೆನ್ನಾಗಿ ಗೊತ್ತಿದೆ. ಜನರ ಕೊನೆಯ ಭರವಸೆ ಎಂದರೆ ನ್ಯಾಯಾಲಯಗಳು ಮಾತ್ರ ಎಂಬುದು ಮತ್ತೆ ಸಾಬೀತಾಗಿದೆ.