Monday, 25th November 2024

ಎಲ್ಲಿದ್ದೆ ಇಲ್ಲಿ ತನಕ.. ಅಂಕುರ‍್ ವಾರಿಕೂ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಇಷ್ಟು ದಿನಗಳ ಕಾಲ ಈ ಪುಣ್ಯಾತ್ಮ ಎಲ್ಲಿದ್ದನೋ ಗೊತ್ತಿಲ್ಲ. ನಾನಂತೂ ಆತನ ಹೆಸರನ್ನು ಕೇಳಿರಲಿಲ್ಲ. ಆ ಹೆಸರಿನ ಒಂದು ಶರೀರ ಈ ಭೂಮಿ ಮೇಲೆ ಇದ್ದಿರಬಹುದು ಎಂಬ ಸಣ್ಣ ಸುಳಿವು ಅಥವಾ ಯೋಚನೆಯೂ ನನಗಿರಲಿಲ್ಲ. ಕೆಲದಿನಗಳ ಹಿಂದೆ ಈಜಿಪ್ಟಿಗೆ ಹೋಗು ವಾಗ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪುಸ್ತಕದಂಗಡಿಯಲ್ಲಿ ಒಂದು ಪುಸ್ತಕ ಕಣ್ಣಿಗೆ ಬಿತ್ತು.

ಆ ಪುಸ್ತಕದ ಶೀರ್ಷಿಕೆ (ಟೈಟಲ್) ನೋಡಿ ಆ ಪುಸ್ತಕವನ್ನು ಕೈಗೆತ್ತಿಕೊಳ್ಳದಿರಲು ಆಗಲಿಲ್ಲ. ಒಮ್ಮೆ ಕೈಗೆತ್ತಿಕೊಂಡು, ಪುಸ್ತಕದ ಮೈದಡವಿ, ಪುಟಗಳಿಂದ ಪುಟಗಳಿಗೆ ಜೀಕಿದಾಗ, ಅದನ್ನು ಖರೀದಿಸದೇ ಇರಲು ಸಾಧ್ಯವಾಗಲಿಲ್ಲ. ಯಾವುದಕ್ಕೂ ವಿಮಾನ ಪ್ರಯಾಣದ ಜತೆಗಿರಲಿ ಎಂದು ಅದನ್ನು ಖರೀದಿಸಿದೆ. ವಿಮಾನವೇರಿ ಆ ಪುಸ್ತಕ ದೊಳಗೆ ತೂರಿಕೊಂಡಾಗ, ದುಬೈ ಬಂದಿದ್ದೇ ಗೊತ್ತಾಗಲಿಲ್ಲ. ಅಷ್ಟು ಹೊತ್ತಿಗೆ
ಪುಸ್ತಕದ ಕೊನೆ ಪುಟದ ಮುಂದೆನಿಂತಿದ್ದೆ. ಅಂದ ಹಾಗೆ ಆ ಪುಣ್ಯಾತ್ಮನ ಹೆಸರು ಅಂಕುರ್ ವಾರಿಕೂ ಮತ್ತು ಆತ ಬರೆದ ಪುಸ್ತಕದ ಹೆಸರು Ankur Warikoo. ಈ ಶೀರ್ಷಿಕೆಯಲ್ಲಿನ ಮೂರೂ ಇಂಗ್ಲಿಷ್ ಪದಗಳ ಅರ್ಥ ಗೊತ್ತಿದ್ದರೂ ಅದನ್ನು ಕನ್ನಡದಲ್ಲಿ ಅನುವಾದಿಸುವುದು ಕಷ್ಟ.

ಹಾಗಂತ ಬಹುತೇಕರಿಗೆ ಅರ್ಥವಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, Ankur Warikoo ಅಂದ್ರೆ Do something extremely awesome. ವಾಕ್ಯದಲ್ಲಿ ಇದನ್ನು ಬಳಸುವುದಾದರೆ, You can’t do epic shit with ordinary plans and thinking. ಯಾವುದಾದರೂ ಅಸಾಧಾರಣ ಅಥವಾ ಅದ್ಭುತ ಕೆಲಸವನ್ನು ಮಾಡಿದಾಗ He did an epic shit ಎಂದು ಹೇಳುತ್ತಾರೆ.

ಶೀರ್ಷಿಕೆಯಲ್ಲಿರುವ Shit (ಮಲ, ಅಮೇಧ್ಯ) ಪದದಿಂದಾಗಿ ಓದುಗರ ಮನಸ್ಸಿನಲ್ಲಿ ಇನ್ನಿಲ್ಲದ ಯೋಚನೆ ಹುಟ್ಟುತ್ತದೆ. ಇಂಥ ಸಭ್ಯವಲ್ಲದ ಪದವನ್ನು ಶೀರ್ಷಿಕೆಯಲ್ಲಿ ಬಳಸಿದ್ದು ಎಷ್ಟು ಸಮಂಜಸ ಎಂದು ಯಾರಿಗಾದರೂ ಅನಿಸದೇ ಇರದು. ಆದರೆ ಅದರ ಅರ್ಥವನ್ನು ಒಟ್ಟಾಗಿ ಗ್ರಹಿಸಿದಾಗ, ಅಸಭ್ಯವೆನಿಸಿದ್ದು ಸಹ್ಯವಾಗುತ್ತದೆ. ಆದರೂ ಸಂಪ್ರದಾಯಸ್ಥರಿಗೆ shit ಪದವನ್ನು  ಜೀರ್ಣಿಸಿ ಕೊಳ್ಳುವುದು’ ಕಷ್ಟವೇ. ಅಷ್ಟರ ಮಟ್ಟಿಗೆ ಶೀರ್ಷಿಕೆಯಿಂದಲೇ ಈ ಕೃತಿ ಗಮನ ಸೆಳೆಯುತ್ತದೆ.

ಒಂದೇ ತೆಕ್ಕೆಯಲ್ಲಿ ಈ ಪುಸ್ತಕವನ್ನು ಓದಿ ಮುಗಿಸಿದಾಗ, ಮಲ ವಿಸರ್ಜನೆ (shit) ಮಾಡಿ ಮುಗಿಸಿದ ನಂತರ ಆವರಿಸುವ ನಿರುಮ್ಮಳ ಹಗುರ ಭಾವದ ಸಮಾಧಾನ ನನ್ನದಾಗಿತ್ತು. By reading this book I did an epic shit ಎಂದು ನನ್ನೊಳಗೆ ಅಂದುಕೊಂಡೆ. ಒಂದು ಸಂಗತಿಯಂತೂ ಖಾತ್ರಿ, ಅಂಕುರ್ ವಾರಿಕೂ ಭಲೇ ಮಜಾ ಲೇಖಕ. ಎಂಥ ವಿಷಯವನ್ನಾದರೂ ಭಿನ್ನವಾಗಿ ಹೇಳಲು ತವಕಿ ಸುವ, ಈಗಿನ ಕಾಲದವರ ಮನಸ್ಸನ್ನು ಅರಿತ, ಹೇಳಬೇಕಿರುವುದನ್ನು ಸರಳವಾಗಿ, ಆದರೆ ಪರಿಣಾಮಕಾರಿ ಯಾಗಿ ಹೇಳುವ ಕೌಶಲ ಕರಗತ ಮಾಡಿಕೊಂಡ, ಓದುಗನಿಗೆ ಏನು ಬೇಕು ಎಂಬುದನ್ನು ಗ್ರಹಿಸಬಲ್ಲ, ಫ್ರೆಶ್ ಆಗಿ ಬರೆಯುವ ಭರವಸೆಯ ಲೇಖಕ.

ಮೂಲತಃ ಯುವ ಉದ್ಯಮಿಯಾಗಿರುವ ವಾರಿಕೂ, ತನ್ನನ್ನು content creator ಎಂದು ಕರೆದುಕೊಂಡಿದ್ದಾನೆ. ತಾಜ್ ಹೋಟೆಲ್ ಜತೆ ಮಾಡಿಕೊಂಡ ಒಂದು ಒಪ್ಪಂದದಿಂದಾಗಿ ವಾರಿಕೂಗೆ ಚೆನ್ನಾಗಿ ಹಣ ಬಂದಿತು. ಅದು ಯಾವ ವ್ಯವಹಾರ ಎಂಬುದನ್ನು ಆತ ಬೇರೆಯ ವರಿಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಭಾರತದ ಏಕವ್ಯಕ್ತಿ ಬ್ರ್ಯಾಂಡ್ ಗಳಲ್ಲಿ ವಾರಿಕೂ ಅಂಗ್ರಪಂಕ್ತಿಯಲ್ಲಿ ನಿಲ್ಲುತ್ತಾನೆ. ಇಂದು ಆತನ ಆಸ್ತಿಯ ಮೌಲ್ಯ ಸುಮಾರು ೧೨೦ ಕೋಟಿ ರುಪಾಯಿ!

ಆತ ಬರೆದ ಪ್ರಸ್ತುತ ಪುಸ್ತಕದ ಒಂದು ಲಕ್ಷ ಅಧಿಕ ಪ್ರತಿಗಳು ಮಾರಾಟವಾಗಿ ಆತನ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪುಸ್ತಕಗಳಲ್ಲಿ ಬರೆದ ಅನೇಕ ಸಂಗತಿಗಳನ್ನು ವಾರಿಕೂ ಸೋಷಿಯಲ್ ಮೀಡಿಯಾದಲ್ಲಿ ಮೊದಲು ಹಂಚಿಕೊಂಡಿದ್ದರಂತೆ. ಅದೂ ಈ ಕೃತಿಯ ಯಶಸ್ಸಿಗೆ ಕಾರಣ. ಜೀವನದಲ್ಲಿ ವಾರಿಕೂ ಬಾಹ್ಯಾಕಾಶ ಎಂಜಿನಿಯರ್ ಆಗಬೇಕೆಂದು ಬಯಸಿದ್ದ. ಆದರೆ ಲಕ್ಷಾಂತರ ಜನ ಓದುವ ಬರಹಗಾರ ಆಗಬೇಕೆಂಬುದು ಆತನ ಹಣೆಬರಹದಲ್ಲಿ ಬರೆದಿತ್ತು. ಯಾವುದೇ ವಿಷಯವನ್ನು ಆತ ಲಂಬಿಸುವುದಿಲ್ಲ, ಕೊರೆಯುವುದಿಲ್ಲ. ಹೇಳಬೇಕಾದು ದನ್ನು ಒಂದೆರಡು ವಾಕ್ಯಗಳಿರುವ ನಾಲ್ಕೈದು ಪ್ಯಾರಾಗಳಲ್ಲಿ ಹೇಳಿ ಮುಗಿಸಿ ಬಿಡುತ್ತಾನೆ.

ಮೊನಚು, ವ್ಯಂಗ್ಯ, ವಿಡಂಬನೆ, ಕಾಲೆಳೆಯುವಿಕೆ, ಚಾಟೂಕ್ತಿ, ವಕ್ರತುಂಡೋಕ್ತಿಗಳ ಮೂಲಕ ಹೇಳುತ್ತಾನೆ. ಹಾಗಂತ ಆತ ಹೇಳುವು ದೆಲ್ಲವೂ ನಮಗೆ ಗೊತ್ತಿರುವ ವಿಷಯಗಳೇ. ಆದರೆ ಇವೆಲ್ಲವೂ ನಮಗೆ ಒಂಥರಾ ಜ್ಞಾಪನೆ (reminder)ಗಳು. ವಾರಿಕೂ ಹೇಳುವಂತೆ, ಈ ಪುಸ್ತಕವೇನೂ ಯಾರ ಜೀವನವನ್ನೂ ಬದಲಿಸುವುದಿಲ್ಲ. ಆದರೆ ನಿಮ್ಮಂದು ಸಣ್ಣ ಅರಿವನ್ನು ಮೂಡಿಸುತ್ತದೆ. ಜೀವನ, ಸೋಲು- ಗೆಲುವು, ಹಣ, ಬಂಡವಾಳ, ಸಂಬಂಧ, ವ್ಯಕ್ತಿತ್ವ, ಸಾಧನೆ, ಹವ್ಯಾಸ, ಸ್ವಯಂ ಅರಿವು.. ಹೀಗೆ ಅನೇಕ ವಿಷಯಗಳ ಬಗ್ಗೆ ಆತ ಹೇಳುತ್ತಾ
ಹೋಗುತ್ತಾನೆ. ಈ ಎ ವಿಷಯಗಳು ನನಗೂ ಗೊತ್ತಿದ್ದವು, ಆದರೆ ನನಗೆ ಹೀಗೆ ಹೇಳಬಹುದು ಎಂದು ಅನಿಸಲೇ ಇಲ್ಲವಲ್ಲ, ನನಗೆ ಸಾಧ್ಯ ವಾಗದ್ದು ವಾರಿಕೂಗೆ ಹೇಗೆ ಸಾಧ್ಯವಾಯಿತು ಎಂದು ಈ ಕೃತಿ ಓದಿದ ಬಹುತೇಕರಿಗೆ ಅನಿಸಬಹುದು.

ಆದರೆ ನನಗಂತೂ ಹಾಗೆ ಅನಿಸಿದ್ದು ಖರೆ. ಯಾವ ಹೊಸ ಅಥವಾ ಮಹಾನ್ ವಿಷಯವನ್ನು ಹೇಳದೇ, ಸುಮಾರು ನಾಲ್ಕು ತಾಸು ಈ ಕೃತಿ ನಮ್ಮನ್ನು ಒಂದೆಡೆ ಹಿಡಿದು ಕುಳ್ಳಿರಿಸಿ ಓದುವಂತೆ ಮಾಡುತ್ತದೆ. ನನ್ನ ಜೀವನದಲ್ಲಿ ಎದುರಾದ ಸಂಕಟಗಳು, ಎದುರಿಸಿದ ಸೋಲು ಗಳೆಂಬ ಮಹಾಗುರುವಿಗೆ ಈ ಕೃತಿಯನ್ನು ಸಮರ್ಪಿಸುತ್ತೇನೆ. ಸಾಮಾನ್ಯವಾಗಿ ಯಾರೂ ನಮ್ಮ ಜೀವನದಲ್ಲಿ ಎದುರಿಸಿದ ಸೋಲಿಗೆ ಕೃತಜ್ಞತೆ ಹೇಳುವುದಿಲ್ಲ. ಆ ಸೋಲುಗಳಿಲ್ಲದಿದ್ದರೆ ನಾನು ಇಂದು ನಿಮ್ಮ ಮುಂದೆ ಹೀಗೆ ನಿಂತುಕೊಳ್ಳುತ್ತಿರಲಿಲ್ಲ. ಇಂದು ನಾನು
ಈ ಕೃತಿ ಮೂಲಕ ನಿಮ್ಮ ಮುಂದೆ ನಿಂತಿದ್ದರೆ, ಅದಕ್ಕೆ ಆ ಸೋಲು, ಅಪಮಾನಗಳೇ ಕಾರಣ. ನನ್ನನ್ನು ಬೆಳೆಸಿದ ಸೋಲುಗಳಿಗೆ ನಮೋ ನಮಃ’ ಎಂದು ವಾರಿಕೂ ಹೇಳುತ್ತಾನೆ.

ಈ ಪುಸ್ತಕವನ್ನು ಒಂದೇ ಗುಕ್ಕಿಗೆ ಪೂರ್ತಿ ಓದಬೇಡಿ, ದಿನಾ ಎರಡು-ಮೂರು ಪುಟಗಳನ್ನಷ್ಟೇ ಓದುತ್ತಾ ಹೋಗಿ, ಟಿಪ್ಪಣಿ ಮಾಡಿಕೊಳ್ಳಿ, ಸಾಧ್ಯವಾದರೆ ನಾನು ಹೇಳಿದ ಸಂಗತಿಗಳನ್ನು ನಿಮ್ಮದನ್ನಾಗಿ ಮಾಡಿಕೊಳ್ಳುತ್ತಾ ಹೋಗಿ. ಹೀಗೆ ಮಾಡುತ್ತಾ ಹೋದರೆ ಒಂದಲ್ಲ ಒಂದು ದಿನ ನೀವು epic shit ಮಾಡುತ್ತೀರಿ’ ಎಂದು ವಾರಿಕೂ ಹೇಳುತ್ತಾನೆ.ನಾನು ಹೇಳಿದೆನಲ್ಲ, ವಾರಿಕೂ ಈ ಪುಸ್ತಕದಲ್ಲಿ ನಮಗೆ
ಗೊತ್ತಿರುವ ಸಂಗತಿಯನ್ನೇ ಬರೆದಿದ್ದಾನೆ ಅಂತ. ಆದರೂ ಈ ಕೃತಿ ಭರ್ಜರಿ ಮಾರಾಟವಾಗಿದ್ದು ಹೇಗೆ? ಒಂದು ಉದಾಹರಣೆ ಕೊಡುತ್ತೇನೆ. ವಾರಿಕೂ ಹೇಳುತ್ತಾನೆ – ನಮಗಿರುವುದು ಒಂದೇ ಜೀವನ, ಎರಡಲ್ಲ. ಹೀಗಿರುವಾಗ ನಮಗೇಕೆ ಒಂದೇ ಐಡೆಂಟಿಟಿ ಇರಬೇಕು? ನೀವು ಬರಹಗಾರ ಆಗಿದ್ದರೆ, ಕಲಾವಿದರೂ ಆಗಬಹುದಲ್ಲ.

ದಿನವಿಡೀ ನಿಮ್ಮ ಆಫೀಸು ಕೆಲಸ ಮುಗಿಸಿ, ಸಾಯಂಕಾಲ ನೀವೇಕೆ ಇನ್ಸ್ಟಾ ಗ್ರಾಮ್‌ನಲ್ಲಿ ಪೇಂಟಿಂಗ್ ಮಾರಾಟ ಮಾಡಿ ಹಣ ಗಳಿಸ
ಬಾರದು? ಕ್ರಿಕೆಟ್ ಆಟಗಾರನಾಗಿ, ಬಿಜಿನೆಸ್ ಸ್ಕೂಲ್‌ನಲ್ಲಿ ಪಾಠಮಾಡಬಾರದು? ಕಾಲೇಜು ಪ್ರಾಧ್ಯಾಪಕರಾಗಿ, ಜಿಮ್ ಟ್ರೇನರ್ ಏಕೆ ಆಗಬಾರದು? ನಮಗೆ ಕಂಡಿದ್ದೆಲ್ಲ ಬೇಕು. ಆದರೆ ನಮಗ್ಯಾರಿಗೂ ಒಂದಕ್ಕಿಂತ ಹೆಚ್ಚಿನ ವೃತ್ತಿ, ಐಡೆಂಟಿಟಿ ಬೇಡ. ಹೀಗ್ಯಾಕೆ? ಎಲ್ಲರೂ ಒಂದು ಹುz, ಒಂದು ಪಾತ್ರ, ಒಂದು ಉದ್ಯೋಗ, ಒಂದು ಪದವಿಗೆ ಯಾಕೆ ಸಂತೃಪ್ತರಾಗುತ್ತಾರೆ? ನಮಗೆ ಒಂದು ಜೀವನವಿದೆ. ಹಾಗೆಂದ ಮಾತ್ರಕ್ಕೆ ನಾವು ಒಬ್ಬೇ ವ್ಯಕ್ತಿಯಾಗಬೇಕಿಲ್ಲ.

ಆರಂಭದಿಂದ ಕೊನೆ ತನಕ ಒಂದೇ ವೃತ್ತಿಯಲ್ಲಿರುವವರನ್ನು ನೋಡಿದರೆ, ಅವರು ತಮ್ಮ ಜೀವನವನ್ನು ವ್ಯರ್ಥವಾಗಿ ಕಳೆದರಲ್ಲ ಅನಿಸುತ್ತದೆ. ಈ ಸಂಗತಿ ನಮಗೆಲ್ಲ ಗೊತ್ತಿಲ್ಲ ಎಂದಲ್ಲ. ಆದರೆ ಅದನ್ನೇ ವಾರಿಕೂ ಭಿನ್ನ ನೆಲೆಯಲ್ಲಿ, ಹೊರಳು ನೋಟ ಬೀರಿ
ಹೇಳುತ್ತಾರೆ. ಇದೇ ರೀತಿ ಇನ್ನು ಕೆಲವು ಸಂಗತಿಗಳು. ನೀವೇನು ಮಾಡುತ್ತೀರೋ ಅದು ನೀವಾಗಿರುತ್ತೀರಿ, ಹೊರತು ಹಾಗೆ ಮಾಡ್ತೀನಿ
ಅಂತ ನೀವು ಹೇಳೋದಲ್ಲ. ನಮಗೆ ನಮ್ಮ ಯೋಚನೆಗಳು ಮುಖ್ಯ. ಆದರೆ ನಾವು ಏನು ಯೋಚಿಸಿದ್ದೇವೆ ಎಂಬುದು ಇತರರಿಗೆ ಗೊತ್ತಾಗುವುದಿಲ್ಲ. ಯೋಚಿಸಿದ್ದನ್ನು ಜಾರಿಗೊಳಿಸಿದರೆ ಮಾತ್ರ ಬೇರೆಯವರಿಗೆ ಗೊತ್ತಾಗಲು ಸಾಧ್ಯ. ನಾವು ಹೇಳಿದ್ದನ್ನು ಮಾಡಿ ತೋರಿಸದಿದ್ದರೆ, ಹೇಳಿದ್ದಕ್ಕೆ ಬೆಲೆ ಇಲ್ಲ.

ಯೋಚಿಸಿದ್ದಕ್ಕೂ ಬೆಲೆ ಇಲ್ಲ. ಜಗತ್ತಿನ ಜನರೆ ಯೋಚಿಸಿದ ಉತ್ತಮ ವಿಚಾರಗಳನ್ನೆ ಅನುಷ್ಠಾನಗೊಳಿಸಿದ್ದರೆ, ನಾವು ಈಗಿರುವುದನ್ನು ಸಾವಿರ ವರ್ಷಗಳ ಹಿಂದೆಯೇ ಸಾಧಿಸಬಹುದಾಗಿತ್ತು. ವಾರಿಕೂ ಇನ್ನೂ ಒಂದು ಸರಳ ಸಂಗತಿ ಬಗ್ಗೆ ಹೀಗೆ ಹೇಳುತ್ತಾರೆ – ನೀವು ಜೀವನದಲ್ಲಿ ಏನಾಗಬೇಕೆಂದು ಬಯಸಿದ್ದೀರೋ ಅದಾಗಬಹುದು. ಅದಕ್ಕೆ ಅತಿ ಹೆಚ್ಚೆಂದರೆ ಒಂದು ವರ್ಷದ ಸಿದ್ಧತೆ ಸಾಕು. ಒಂದು ವರ್ಷದ ಸಿದ್ಧತೆಯೊಂದಿದ್ದರೆ ಎಂಥ ಮಹಾನ್ ಕೆಲಸವನ್ನಾದರೂ ಕೈಗೆತ್ತಿಕೊಳ್ಳಬಹುದು.

ಈ ಜನ್ಮದಲ್ಲಿ ಒಮ್ಮೆ ಹಿಮಾಲಯ ಪರ್ವತವನ್ನೇರಬೇಕು ಎಂದು ನಿರ್ಧರಿಸಿದರೆ, ಅದು ಕಷ್ಟವಲ್ಲ. ಒಂದು ವರ್ಷದ ಸಿದ್ಧತೆ ಸಾಕು. ನಿಮ್ಮ ದೇಹದ ತೂಕ ನೂರಾನಲವತ್ತು ಕೆಜಿಯಿದ್ದರೆ, ಒಂದು ವರ್ಷದಲ್ಲಿ ಎಪ್ಪತ್ತೆರಡು ಕೆಜಿಗೆ ಇಳಿಸುವುದು ಕಷ್ಟವಲ್ಲ. ನೀವು ಎಂಜಿನಿಯರ್ ಆಗಿದ್ದರೆ, ಇನ್ನು ಒಂದು ವರ್ಷ ದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿ ರೈತ ಆಗಬೇಕು ಎಂದು ತೀರ್ಮಾನಿಸಿದರೆ, ಕಷ್ಟವಲ್ಲ. ಅಂದರೆ ಒಂದು ವರ್ಷದ ತಯಾರಿಯಿದ್ದರೆ ಎಂಥ ಕಠಿಣತಮ ಕಾರ್ಯವನ್ನಾದರೂ ಸಾಽಸಬಹುದು.

ವಯಸ್ಸಿನ ಪರಿಗಣನೆ ಇಲ್ಲದೇ, ಯಾವ ಸಾಧನೆಗಾದರೂ ಒಂದು ವರ್ಷದ ಪೂರ್ವ ಸಿದ್ಧತೆ ಸಾಕು. ನೀವು ಇಟ್ಟ ಹೆಜ್ಜೆ ಎಷ್ಟೇ ಪುಟ್ಟದಿರಲಿ, ಹೆಜ್ಜೆಯನ್ನು ಇಡುತ್ತಿದ್ದರೆ, ಅದು ಎಷ್ಟೇ ನಿಧಾನವಾಗಿರಲಿ, ನೀವು ತಲುಪಬೇಕಾದ ಗುರಿಯನ್ನು ತಲುಪುತ್ತೀರಿ. ನೀವು ಅಂದುಕೊಂಡ ಕೆಲಸವನ್ನು ನಿಧಾನವಾಗಿ ಮಾಡಿದರೂ ಪರವಾಗಿಲ್ಲ, ಮಾಡುತ್ತಲೇ ಇದ್ದರೆ, ತಡವಾಗಿಯಾದರೂ ಗುರಿ ಸಾಧಿಸಬಹುದು.’ ಎಂದು ವಾರಿಕೂ ಹೇಳುತ್ತಾರೆ.

ಜನರು ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ನಿಮ್ಮ ಮೌಲ್ಯವನ್ನು ನಿರ್ಧರಿಸಬಾರದು, ಅಳೆಯಬಾರದು. ಜಗತ್ತು ನಿಮ್ಮನ್ನು ಹೇಗೆ ನಡೆಸಿಕೊಳ್ಳಬೇಕೆಂದು ಬಯಸುವುದೋ ಅದೇ ರೀತಿ ನಡೆಸಿಕೊಳ್ಳುತ್ತದೆ. ಅದನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ. ಜನರ ಅಭಿಪ್ರಾಯಕ್ಕೆ ತಕ್ಕಂತೆ ನೀವು ನಿಮ್ಮ ಮಹತ್ವವನ್ನು ಅಳೆಯಲಾರಂಭಿಸಿದರೆ, ನಿಮಗೆ ನಿಮ್ಮ ಮಹತ್ವವೇ ಗೊತ್ತಾ ಗುವುದಿಲ್ಲ.

ಜನ ನಿಮ್ಮನ್ನು ಹೊಗಳಿದರೆ ಅದನ್ನೇ ಪರಮವಾಕ್ಯ ಎಂದು ನಂಬಬೇಡಿ. ಅದು ಆ ಸಂದರ್ಭಕ್ಕೆ ಅವರ ಅನುಕೂಲಕ್ಕೆ ಹೇಳಿದ ಮಾತು ಗಳಾಗಿರಬಹುದು. ಅದು ನಿಮ್ಮ ಬಗೆಗಿನ ಮೌಲ್ಯಮಾಪನ ಅಲ್ಲ. ಅಂಥ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಟೀಕೆಗಳನ್ನೂ ಅದೇ ರೀತಿ ತೆಗೆದುಕೊಳ್ಳಬೇಕು. ಟೀಕೆಗಳನ್ನು ಕೇಳಿದ ಬಳಿಕ ನೀವು ತಲೆಕೆಡಿಸಿಕೊಂಡರೆ, ನಿಮ್ಮಷ್ಟು ದುರ್ಬಲರು ಯಾರೂ ಇಲ್ಲ ಎಂದರ್ಥ.

ಇನ್ನೂ ಕೂದಲು ಹಣ್ಣಾಗದ ವಾರಿಕೂ ಹೀಗೆ ಹೇಳುತ್ತಲೇ ಹೋಗುತ್ತಾನೆ, ಆತ್ಮಜ್ಞಾನಿಯಂತೆ, ತತ್ತ್ವಜ್ಞಾನಿಯಂತೆ, ದಾರ್ಶನಿಕರಂತೆ.