Sunday, 15th December 2024

ಅಂಬೇಡ್ಕರ್‌ ಜಯಂತಿ ಬರೀ ರಾಜಕೀಯಕ್ಕಲ್ಲ

Dr B R Ambedkar

ತನ್ನಿಮಿತ್ತ

ಡಾ.ಎಚ್.ಸಿ.ಮಹದೇವಪ್ಪ

ಭಾರತ ಭಾಗ್ಯ ವಿಧಾತ, ಶೋಷಿತ ವರ್ಗಗಳ ಭರವಸೆಯ ಬೆಳಕಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131 ನೇ ಜಯಂತಿಯ ಆಚರಣೆಯ ಸಂದರ್ಭ ಮತ್ತೆ ಬಂದಿದೆ. ಈ ಬಾರಿ ಅಂಬೇಡ್ಕರ್ ಅವರ ಸ್ಮರಣೆಯ ಜೊತೆಗೆ ಯಾವ ಕೆಳ ವರ್ಗಗಳ ರಾಜಕಾರಣದ ಬಗ್ಗೆ ಬಾಬಾ ಸಾಹೇಬರು ಕನಸನ್ನು ಇಟ್ಟುಕೊಂಡಿದ್ದರೋ ಅಂತಹ ಕನಸು ಈ ವೇಳೆ ಯಾವ ಹಂತಕ್ಕೆ ತಲುಪಿದೆ ಎಂಬುದರ ಬಗ್ಗೆ ಗ0ಭೀರ ವಾಗಿ ಚರ್ಚಿಸಬೇಕಿದೆ.

ರಾಜಕಾರಣವನ್ನು ಜನಪರ ಚಳುವಳಿಗಳು ನಿರ್ಧರಿಸಬೇಕಾದ ಹೊತ್ತಿನಲ್ಲಿ ಹಣ ಬಲ, ತೋಳ್ಬಲ ಮತ್ತು ಅಧಿಕಾರ ಬಲವು ನಿರ್ಧರಿಸುತ್ತಿದ್ದು ಅದರ ಸಾಲಿಗೆ ಇದೀಗ ಮಾಧ್ಯಮ ವೂ ಸೇರಿದೆ ಎಂದು ಹೇಳಲು ಬೇಸರ ಎನಿಸುತ್ತದೆ. ಭಾರತಕ್ಕೆ ಜನಪರ ಚಳುವಳಿಯ ಬಹು ದೊಡ್ಡ ಇತಿಹಾಸವಿದೆ. ಈ ಪೈಕಿ ’ಮಹಾಡ್’ ಭಾರತದ ಚರಿತ್ರೆಯಲ್ಲಿ ಪ್ರಮುಖ ಮೈಲಿಗದ ಎರಡು ಮಹತ್ವದ ಘಟನೆಗಳನ್ನು ನೆನಪಿಸುತ್ತದೆ. ಒಂದು ದಲಿತರು ಅಸ್ಪೃಶ್ಯ ತೆಯ ನಿರ್ಬಂಧಗಳನ್ನು ಮುರಿದು ಮಹಾಡ್ ಕೆರೆಯ ನೀರು ಕುಡಿದದ್ದು.

ಎರಡನೆಯದು ಮನುಸ್ಮೃತಿಯ ದಲಿತ- ವಿರೋಧಿ ಭಾಗಗಳನ್ನು ಸುಟ್ಟದ್ದು. ಈ ಎರಡೂ ಚಾರಿತ್ರಿಕ ಘಟನೆ ಗಳು ಡಾ.ಬಿ.ಆರ್ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ಮಹಾರಾಷ್ಟ್ರ ದೊಳಗೆ ಸಾವಿರಾರು ದಲಿತರು ಭಾಗವಹಿಸಿ ಮಹಾರಾಷ್ಟ್ರದ ಕೊಂಕಣ ಪ್ರದೇಶ ದಲ್ಲಿರುವ ಮಹಾಡ್ ಪಟ್ಟಣದಲ್ಲಿ ನಡೆಯಿತು. ಈ ಒಂದು ಹೋರಾಟವು ಕೇವಲ ಮಹಾರಾಷ್ಟ್ರ ಮಾತ್ರವಲ್ಲದೇ ಇಡೀ ದೇಶದ ಗಮನ ಸೆಳೆದಿತ್ತು. ಮುಂದೆ ಇದು ಭಾರತದ ಸ್ವಾತಂತ್ರ್ಯ ಮತ್ತು ಸಾಮಾಜಿಕ-ರಾಜಕೀಯ ಚಳುವಳಿಗಳ ಭವಿಷ್ಯದ ದಿಕ್ಕು ದೆಸೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿತ್ತು.

ಮನುಸ್ಮೃತಿಯ ದಹನದ ವಿಷಯದಲ್ಲಿ ಕೆಲವರು, ಸತ್ಯಾಗ್ರಹವನ್ನು ಮಾಡಬೇಕು, ಆದರೆ ಬಾಬಾಸಾಹೇಬರು ಅದರಲ್ಲಿ ಭಾಗವಹಿಸ ಬಾರದು ಎಂದು ಸಲಹೆ ನೀಡಿದರು. ಹೆಚ್ಚಿನವರು ಸತ್ಯಾಹದ ಪರವಾಗಿಯೇ ಇದ್ದರು. ಬಾಬಾಸಾಹೇಬ್ ಮೌನವಾಗಿ ಎಲ್ಲರ ಅಭಿಪ್ರಾಯ ಗಳನ್ನು ಜಾಗರೂಕತೆಯಿಂದ ಆಲಿಸುತ್ತಿದ್ದರು. ಕೊನೆಯಲ್ಲಿ, ಅವರೆಂದರು, ಸತ್ಯಾಗ್ರಹವನ್ನು ಮಾಡಿ ಜೈಲಿಗೆ ಹೋಗಲು 1000 ಜನ ಸಿದ್ಧ ವಾಗಿದ್ದರೆ ನಾವು ಸತ್ಯಾಗ್ರಹ ಮಾಡೋಣ. ಈ ನಿರ್ಧಾರವನ್ನು ತೆಗೆದುಕೊಳ್ಳುವ ಹೊತ್ತಿಗೆ ರಾತ್ರಿ 12 ಆಗಿತ್ತು. ಸತ್ಯಾಗ್ರಹಿಗಳು ತೆಗೆದುಕೊಳ್ಳಬೇಕಾಗಿದ್ದ ಶಪಥದ ಕರಡನ್ನು ತಯಾರಿಸಲಾಯಿತು.

ಕರಡಿನ ಮುಖ್ಯವಾದ ಭಾಗದ ಒಕ್ಕಣೆ ಹೀಗಿತ್ತು, ನಾನು ಜೈಲಿಗೆ ಹೋಗಲು, ಹೋರಾಡಲು, ಸತ್ಯಾಗ್ರಹವನ್ನು ಮಾಡುತ್ತಾ ಮಡಿಯಲೂ ಸಿದ್ಧನಿದ್ದೇನೆ. ಧರ್ಮಶಾಲಾದ ಕಚೇರಿಯಲ್ಲಿ ಇದರ ಹಲವಾರು ಪ್ರತಿಗಳನ್ನು ತಯಾರಿಸಲಾಯಿತು, ಶಿಕ್ಷಿತ ಪ್ರತಿನಿಧಿಗಳಲ್ಲಿ
ಅದನ್ನು ಹಂಚಿ, ಸತ್ಯಾಗ್ರಹಿಗಳಿಗೆ ಓದಿ ಹೇಳಿ ಅವರ ಸಮ್ಮತಿಗಾಗಿ ಹೆಬ್ಬೆಟ್ಟಿನ ಗುರುತನ್ನು ಪಡೆಯಲು ಹೇಳಲಾಯಿತು. ಬೆಳಗಿನ ಜಾವ 4 ಗಂಟೆಗೆ 3500 ಜನ ತಮ್ಮ ಸಮ್ಮತಿಯನ್ನು ದಾಖಲಿಸಿದ್ದರು.

ಇದಲ್ಲದೇ ಇನ್ನೂ ಹೆಚ್ಚಿನ ಜನ ಮುಂದೆ ಬರುತ್ತಲಿದ್ದರು. ಆದ್ದರಿಂದ ಸಹಿಯನ್ನು ಸಂಗ್ರಹಿಸುವ ಕೆಲಸವನ್ನು ನಿಲ್ಲಿಸಲಾಯಿತು. ಬೆ.೪.೩೦ರ
ಹೊತ್ತಿಗೆ ಸತ್ಯಾಗ್ರಹಿಗಳು ಸಹಿ ಹಾಕಿದ್ದ ಕಾಗದಗಳ ಕಟ್ಟುಗಳನ್ನು ಬಾಬಾಸಾಹೇಬರ ಸಮ್ಮುಖದಲ್ಲಿ ಇಡಲಾಯಿತು. ಅಷ್ಟು ಹೊತ್ತಿಗೆ ಕ್ಯಾಂಪಿನಲ್ಲಿದ್ದ ಇತರರ ಹಾಗೆಯೇ ಅವರು ಎದ್ದು ಬಹಳ ಹೊತ್ತಾ ಗಿತ್ತು. ಬೆ. 7 ಗಂಟೆಗೆ ಅವರು ಕಲೆಕ್ಟರ್‌ರಿಗೆ ಒಂದು ಪತ್ರವನ್ನು ತಲುಪಿಸಲು ಹೇಳಿದರು. ಆ ಪತ್ರವನ್ನು ತೆಗೆದುಕೊಂಡು ಹೋಗುತ್ತಿರುವಾಗ ಡಾಕ್ ಬಂಗಲೆಯ ಹಾದಿಯಲ್ಲಿ ಒಬ್ಬ ಮನುಷ್ಯ ಜೀವಿಯನ್ನೂ ಕಾಣಲಿಲ್ಲ. ಇಡಿ ಮಾರ್ಕೆಟ್ಟು ನಿರ್ಜನವಾಗಿತ್ತು.

ಪತ್ರವನ್ನು ಕಲೆಕ್ಟರ್ ಅವರ ಕೈಗೊಪ್ಪಿಸಲಾಯಿತು. ಅವರು ಅದರ ಮೇಲೆ ಕಣ್ಣಾಡಿಸಿದವರೇ ತಾವು ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಗೆ ಆಗಮಿ ಸುವುದಾಗಿ ಮೌಖಿಕ ಸೂಚನೆ ನೀಡಿದರು. ಅದನ್ನು ಬಾಬಾಸಾಹೇಬ್ರಿಗೆ ತಿಳಿಸಿದಾಗ ಬಾಬಾಸಾಹೇಬರ ಜತೆ ಸ್ನೇಹದಿಂದ ಇದ್ದ ಬಾಪು ಸಹಸ್ರಬುದ್ಧೆ ಅವರು ಅಲ್ಲಿಗೆ ಬಂದಿದ್ದ ಹೋರಾಟಗಾರನಿಗೆ ತಮಾಷೆಯಾಗಿ ಹೇಳಿದರು, ನಿನ್ನನ್ನು ಬಂಧಿಸದೇ ಹಿಂದಕ್ಕೆ ಹೇಗೆ ಕಳಿಸಿದರು? ಅದಕ್ಕೆ ಆತ ಏನೂ ಉತ್ತರ ಹೇಳಲಿಲ್ಲ. ಆ ಹೊತ್ತಿನಲ್ಲಿ ಬಾಬಾಸಾಹೇಬ್ ಸುತ್ತ ಕೆಲವರಿದ್ದರು. ಉಳಿದವರು ಸಭಾಂಗಣಕ್ಕೆ
ಹೊರಟು ಹೋಗಿದ್ದರು. ಆ ದಿನದ ಗೋಷ್ಠಿ ಬೆಳಗಿನ 9 ಗಂಟೆಗೆ, ಮನುಸ್ಮೃತಿ ಪ್ರತಿಯನ್ನು ಸುಡುವುದರೊಂದಿಗೆ ಆರಂಭವಾಯಿತು. ಪವಿತ್ರ ಚಿತೆಗಾಗಿ ಒಂದು ವಿಶೇಷ ಸ್ಥಳವನ್ನು ಪೆಂಡಾಲ್ ಹತ್ತಿರದಲ್ಲಿ ನಿರ್ಮಿಸಲಾಗಿತ್ತು.

ಹೋಮ ಹವನಕ್ಕೆ ಬೇಕಾದ ಎಲ್ಲಾ ಸಾಮಗ್ರಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಬಾಬಾಸಾಹೇಬ್ ಬೆಂಕಿಯ ಎದುರಿಗೆ ನಿಂತಿದ್ದರು ಮತ್ತು ಬಾಪು ಸಹಸ್ರ ಬುz ಮನುಸ್ಮೃತಿಯ ಆಕ್ಷೇಪಾರ್ಹ ಭಾಗಗಳ ಹಾಳೆಗಳನ್ನು ಬಾಬಾಸಾಹೇಬ್ರ ಕೈಗಳಿಂದ ತೆಗೆದುಕೊಂಡು, ಅದನ್ನೊಮ್ಮೆ ಓದಿ ಬೆಂಕಿಗೆ ಹಾಕುತ್ತಿದ್ದರು. ಈ ಕಾರ್ಯಕ್ರಮ ನಡೆಯುತ್ತಿರುವಾಗ ಜನರಲ್ಲಿ ಉತ್ಸಾಹ, ಹುಮ್ಮಸ್ಸು ತುಂಬಿ ತುಳುಕುತ್ತಿತ್ತು. ಇಂತಹ ಪ್ರಬಲ ಪ್ರತಿರೋಧದ ಮಾರ್ಗಗವನ್ನು ಹಾಕಿಕೊಟ್ಟ ಅಂಬೇಡ್ಕರ್ ಭಾರತದಲ್ಲಿ ಟಿವಿಗಳು ತೋರಿಸುವ ತಹರೇವಾರಿ ಸುಳ್ಳುಗಳನ್ನು ನೋಡುತ್ತಾ ನಿಜದ ಚಳುವಳಿಯನ್ನು ನಾವು ಮರೆಯುತ್ತಿದ್ದೇವೆ. ಅದರ ಪರಿಣಾಮವೇ ಈ ದಿನ ನಾವು ಧಾರ್ಮಿಕ ಸಂಘರ್ಷಗಳನ್ನು, ಜಾತಿ ಶ್ರೇಷ್ಠತೆಯ ಅಸಮಾನತೆಗಳನ್ನು ಮತ್ತು ಬೆಲೆ ಏರಿಕೆಯನ್ನು ಅಸಹಾಯಕತೆಯಿಂದ ನೋಡುತ್ತಿರುವುದು.

ಇದಿಷ್ಟು ಸಾಲದು ಎಂಬಂತೆ ಈ ದಿನ ಜನಪರ ರಾಜಕಾರಣದ ಕತ್ತು ಹಿಸುಕುವ ಇಲ್ಲವೇ ಅದನ್ನು ಮುನ್ನಲೆಗೆ ಬಾರದಂತೆ ತಡೆಯುವ ಕೆಲಸವು ಪಕ್ಷಾ ತೀತವಾಗಿ ನಡೆಯುತ್ತಿದೆ. ಇದು ಜಾತಿ ಕೂಪದಲ್ಲಿ ನರಳುತ್ತಿರುವ ಕೆಳ ಸಮುದಾಯಗಳು ಮತ್ತು ದೈನಂದಿನ ಬದುಕನ್ನು ನಡೆಸಲು ಕಷ್ಟ ಪಡುತ್ತಿರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರ ಪಾಲಿಗೆ ಅಪಾಯಕಾರಿಯಾದ ಸನ್ನಿವೇಶವಾಗಿದೆ. ಚುನಾವಣೆ ಹೊಸ್ತಿಲಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನನ್ನಲ್ಲಿ ತೀವ್ರ ಆತಂಕ ಮೂಡಿಸಿವೆ.

ಒಂದು ಜನಾದೇಶಕ್ಕಾಗಿ ಸಮಾಜವನ್ನೇ ಈ ಮಟ್ಟಿಗೆ ಒಡೆದು ಹಾಕಬಹುದೇ ಎಂದು ನೆನೆದಾಗ ಈ ದೇಶದ ಸ್ವಾತಂತ್ರ್ಯದ ಉದ್ದೇಶವಾದ ಸಮಾನತೆ, ಸೌಹಾರ್ದತೆ ಮತ್ತು ಭ್ರಾತೃತ್ವತೆಯ ಸಾಧನೆಗಾಗಿ ತ್ಯಾಗ ಬಲಿದಾನ ಮಾಡಿದವರ ಬದುಕು ಕಣ್ಣ ಮುಂದೆಯೇ ಹಾದು ಹೋಗುತ್ತದೆ. ಇನ್ನೊಂದು ವಿಷಯವನ್ನು ನಾನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ. ಅದು ಕಾಂಗ್ರೆಸ್ ಪಕ್ಷದ ಕುರಿತಾಗಿ ಇರುವಂತದ್ದು. ಹಳೆಯ ಮೌಲ್ಯಾ ಧಾರಿತ ರಾಜಕಾರಣ ಮತ್ತು ಽಮಂತ ನಾಯಕರ ಸಾರ್ವಜನಿಕ ಜೀವನವು ಬಹುತೇಕ ಮರೆಯಾದ
ಹಿನ್ನಲೆಯಲ್ಲಿ ಹಳೆಯ ರಾಜಕಾರಣದ ಮಾದರಿ ಯನ್ನು ಚರ್ಚಿಸುವುದು ಸೂಕ್ತವಾಗಲಾರದೇನೋ.

ಹೀಗಾಗಿ ಆಧುನಿಕ ರಾಜಕಾರಣದ ಮಾರ್ಗದಲ್ಲಿ ನೋಡುವುದಾದರೆ ಸಮಾಜ ಎಲ್ಲ ವರ್ಗಗಳಿಗೂ ಟಿಕೆಟ್ ಘೋಷಣೆಯಿಂದ ಹಿಡಿದು ಜನಪರ ಯೋಜನೆಗಳನ್ನು ಘೋಷಿಸುವವರೆಗೆ ಈ ಹಿಂದಿನ ಕಾಂಗ್ರೆಸ್ ಸರಕಾರ ಎಲ್ಲ ವರ್ಗದವರಿಗೂ ನ್ಯಾಯಬದ್ಧ ಅವಕಾಶಗಳನ್ನು ಕಲ್ಪಿಸಿದೆ. ಬಹಳಷ್ಟು ಜನಪರವಾಗಿದ್ದ ಒಬ್ಬ ಹಿಂದುಳಿದ ವರ್ಗಗಳ ನಾಯಕನ ನೇತೃತ್ವದಲ್ಲಿ ನಡೆದ ಸರಕಾರವೊಂದು ಕಾಯಿದೆಗಳ ಮೂಲಕ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಹಲವು ಅಡೆತಡೆಗಳ ನಡುವೆಯೂ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ.

ಮೂಲ ಸೌಕರ್ಯ ಹಾಗೂ ಇನ್ನಿತರೆ ಅಭಿವೃದ್ಧಿಯ ವಿಷಯದಲ್ಲಿ ಜಾಗತಿಕ ಮಟ್ಟದ ಮನ್ನಣೆ ದೊರೆಯುವಂತೆ ಕೆಲಸ ಮಾಡಿ ಎದುರಾಳಿ ಪಕ್ಷದಿಂದಲೇ ಸೈ ಎನಿಸಿಕೊಂಡಿದೆ. ಇಂತಹ ಜನಪರ ರಾಜಕಾರಣವು ಮತ್ತೊಮ್ಮೆ ಬರುವ ಮುನ್ಸೂಚನೆ ದೊರೆತ ಕೂಡಲೇ ಸಮಾಜದ ಜಾತಿಶ್ರೇಷ್ಠತೆಯ ವೈದಿಕ ಶಾಹಿಗಳು ಮತ್ತು -ಡಲ್ ವರ್ಗಗಳು ಪಕ್ಷಾತೀತವಾಗಿ ಸಕ್ರಿಯವಾಗಿರುವುದು ನೋವಿನ ವಿಷಯ. ಇಲ್ಲಿ ದಿನಕ್ಕೊಂದು ವಿಚಿತ್ರಗಳು ನಡೆಯುತ್ತಿವೆ.

ಉದಾಹರಣೆಗೆ: ವೈದಿಕಶಾಹಿಗಳು ತಮ್ಮ ಅಸಮಾನತೆಯ ತಂತ್ರಗಳಿಗೆ ಮೊರೆ ಹೋಗಿ ತಾವೇ ತೊಂದರೆ ಅನುಭವಿಸುತ್ತಿದ್ದಾಗಲೂ ಸಹ ಧಾರ್ಮಿಕ ಸಂಘರ್ಷ ಹುಟ್ಟು ಹಾಕಿ ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ. ಬಹುತೇಕ ಬಂಡವಾಳ ಶಾಹಿಗಳ ಕೈಗೊಂಬೆ
ಆಗಿರುವ ಮಾಧ್ಯಮಗಳು ರಾಜಕೀಯ ಪಕ್ಷಗಳ ವಕ್ತಾರಿಕೆ ಮಾಡುತ್ತಾ ಹೀನಾಯ ಬದುಕು ನಡೆಸುತ್ತಿದ್ದು ವಾಸ್ತವ ಸಮಸ್ಯೆಗಳು ಅನುಭವಕ್ಕೆ ಬರುತ್ತಿದ್ದರೂ ಆ ಬಗ್ಗೆ ಕುರುಡಾಗಿ ಜನಪರ ನಾಯಕರ ಅಪಪ್ರಚಾರದಲ್ಲಿ ಮುಳುಗಿವೆ.

ಇನ್ನು ಜಾತ್ಯತೀತ ಶಕ್ತಿಯನ್ನು ಈ ಹಿಂದಿನ ಚುನಾವಣೆಗಳಲ್ಲಿ ಒಡೆದಂತೆಯೇ ಇಲ್ಲೂ ಒಡೆದು ಹಾಕಿ ಕೋಮುವಾದಿಗಳಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿರುವ ಕುಮಾರಸ್ವಾಮಿ ಅವರಿಗೆ ಎಂದೂ ಇಲ್ಲದ ಸಿದ್ಧಾಂತ ಮತ್ತು ಜಾತ್ಯತೀತತೆಯೂ ನೆನಪಾಗಿದ್ದು ಇವೆಲ್ಲವೂ ಶೋಷಿತ ವರ್ಗಗಳ ರಾಜಕೀಯ ಐಕ್ಯತೆಯನ್ನು ಪುಡಿ ಪುಡಿ ಮಾಡುವ ಹುನ್ನಾರವನ್ನು ಹೊಂದಿದೆ,.

ಉತ್ತರ ಪ್ರದೇಶ ಹಾಗೂ ಇನ್ನಿತರೆ ರಾಜ್ಯಗಳಲ್ಲಿ ಕೆಲವು ಸೂಸೈಡ್ ಪಕ್ಷಗಳು ಕೋಮುವಾದಕ್ಕೆ ಅನುಕೂಲವಾಗುವಂತಹ ರಾಜಕಾರಣ ವನ್ನು ಮಾಡಿರುವ ಉದಾಹರಣೆ ಕಣ್ಣ ಮುಂದಿದೆ. ನಾವೆಲ್ಲರೂ ಸಂವಿಧಾನ ಉಳಿಯಬೇಕು, ಕಷ್ಟಪಟ್ಟು ಗಳಿಸಿದ ಪ್ರಜಾಪ್ರಭುತ್ವ ಆರೋಗ್ಯ ಕರವಾಗಿರಬೇಕು, ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳ ಆಧಾರದಲ್ಲಿ ಮೌಢ್ಯರಹಿತವಾದ ಸಮಾಜ ನಿರ್ಮಾಣ ವಾಗಬೇಕು ಎಂದರೆ ನೀವು ಹಳೆಯ ಕಾಲದಂತೆ, ಮಾತನಾಡಬೇಡಿ ಎಂದು ಸಲಹೆ ನೀಡಿದ್ದನ್ನು ನಾನು ಗಮನಿಸಿದ್ದೇನೆ. ಅರೆ! ಪ್ರಜಾಪ್ರಭುತ್ವವನ್ನು ಕಳೆದುಕೊಂಡರೆ ಮತ್ತೆ ಇವರು ಹೋಗುವುದು ಆ ಸಂಕಷ್ಟದ ಹಳೆಯ ಕಾಲಕ್ಕೆ ತಾನೇ ? ಇನ್ನು ಶರಣರು, ಸೂಫಿ ಸಂತರು ಮತ್ತು ಮಹನೀ ಯರ ತತ್ವಗಳಿಂದ ಪ್ರಭಾವಿತವಾದ ಕನ್ನಡ ನಾಡಿನ ವಾತಾವರಣವನ್ನು ಹಾಳು ಮಾಡಲು ಹೊರಟಿರುವ ಹಿಂದುತ್ವದ ಹೆಸರಿನ ಧಾರ್ಮಿಕ ಭಯೋತ್ಪಾದಕರ ವಿರುದ್ಧ ಸರಕಾರದವರೇ ದನಿ ಎತ್ತಿರುವುದು ಸರಕಾರ ಎಂತಹ ದರಿದ್ರ ಸ್ಥಿತಿಗೆ ತಲುಪಿದೆ ಎಂಬುದನ್ನು ಸೂಚಿಸುತ್ತಿದೆ.

ಇವರ ಕೋಮು ದ್ವೇಷದಿಂದ ಸಾಮಾಜಿಕ ವಾತಾವರಣದ ಜತೆಗೆ ಔದ್ಯೋಗಿಕ ವಾತಾವರ ಣವೂ ಹಾಳಾಗುತ್ತಿದ್ದು ಕರ್ನಾಟಕದಲ್ಲಿ ಔದ್ಯೋಗಿಕ ನೆಲೆಯನ್ನು ಸೃಷ್ಟಿಸುವ ಕಂಪನಿಗಳು ಆತಂಕ ದಿಂದ ನೆರೆಯ ತಮಿಳು ನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಕಡೆ ಮುಖ ಮಾಡಿವೆ. ಈ ಮೂಲಕ ನಿರುದ್ಯೋಗಿ ಯುವಕರನ್ನು ಗಲಭೆಗಳಿಗೆ ಬಳಸಿಕೊಳ್ಳುತ್ತಿರುವ ಕೆಲವು ಅತಿರೇಕದ ಧಾರ್ಮಿಕ ಸಂಘಟನೆ ಗಳು, ಧರ್ಮ ಎಂದರೆ ಏನು ಎಂದು ತಿಳಿದುಕೊಳ್ಳದೇ ವರ್ತಿಸುತ್ತಿವೆ.

ಸೌಹಾರ್ದತೆ ಮತ್ತು ಐಕ್ಯತೆಯ ಆಧಾರದಲ್ಲಿ ರೂಪುಗೊಂಡಿರುವ ಸ್ವಾತಂತ್ರ್ಯ ಭಾರತ ಮತ್ತು ಬಹಳ ಕಷ್ಟಪಟ್ಟು ಗಳಿಸಿರುವ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿರುವ ಕಿಡಿಗೇಡಿಗಳಿಗೆ ಪ್ರಜಾಪ್ರಭುತ್ವದ ಮಹತ್ವ ತಿಳಿದಿದೆಯೇ? ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿ ಧರ್ಮದ ಆಧಾರದಲ್ಲಿ ಹೊಡೆದಾಡುತ್ತಾ ಕುಳಿತರೆ ಮುಂದೆ ದೇಶವು ಇತಿಹಾಸದಲ್ಲಿ ಕಾಣುತ್ತಿದ್ದ ಕ್ರೂಸೆಡ್ (ಧರ್ಮಯುದ್ಧ) ಗಳಿಗೆ ಮತ್ತೆ ಸಾಕ್ಷಿಯಾಗಲಿದೆ. ಜರ್ಮನಿ ಹಾಗೂ ಇನ್ನಿತರೆ ರಾಷ್ಟ್ರಗಳಲ್ಲಿ ಇತಿಹಾಸದಲ್ಲಿ ಉಂಟಾದ ಕ್ರೂಸೇಡ್‌ಗಳು ಮತ್ತೆ ಮರಳಿ ಬರಬಾರದು ಎನ್ನುವ ಕಾರಣಕ್ಕೆ ಈಗಲೂ ಆ ದೇಶಗಳು ವಿಪರೀತ ಜಾಗೃತಿ ವಹಿಸಿವೆ. ಈ ಉದಾಹರಣೆಗಳು ಇವರ ಕಣ್ಣಿಗೆ ಕಾಣುತ್ತಿಲ್ಲವೇ ?

ವಿವಿಧ ಧಾರ್ಮಿಕ ಚೌಕಟ್ಟಿನಲ್ಲಿ ಮನುಷ್ಯನ ಬದುಕಿಗೆ ವಿಪರೀತ ಎನ್ನಿಸುವಂತಹ ಕೆಲವು ಧಾರ್ಮಿಕ ಆಚರಣೆಗಳು ಇರುವಂತೆಯೇ ಹಿಂದೂ ಧರ್ಮದಲ್ಲಿಯೂ ಜಾತಿ ಅಸಮಾನತೆ, ದೌರ್ಜನ್ಯ, ಅಸ್ಪೃಶ್ಯತೆ ಇನ್ನೂ ಜೀವಂತವಾಗಿವೆ. ಇವರಿಗೆ ಏನಾದರೂ ಕನಿಷ್ಠ ಪ್ರಜ್ಞೆ ಇದ್ದರೆ ತಮ್ಮ ಧರ್ಮದ ಒಳಗಿನ ದೋಷಗಳನ್ನು ಸರಿಪಡಿಸಲು ಪ್ರಯತ್ನಿಸಲಿ. ಆಗ ಸಮುದಾಯಗಳ ಒಳಗಿನ ಧಾರ್ಮಿಕತೆಯ ಮೇಲೆ ಜನರಿಗೆ ನಂಬಿಕೆ ಹುಟ್ಟುತ್ತದೆ.

ಈಗಾಗಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮದ ಸುಧಾರಣೆಗೆ ಯತ್ನಿಸಿದರೂ ಇಲ್ಲಪ್ಪಾ ನಾವು ಇರುವುದೇ ಹೀಗೆ, ನಮ್ಮ ಯೋಗ್ಯತೆಯೇ ಇಷ್ಟು ಎಂಬಂತೆ ಅಮಾನವೀಯವಾಗಿ ನಡೆದುಕೊಂಡಿರುವ ಹಿಂದುತ್ವವಾದಿ ಗಳಿಗೆ ಇಷ್ಟು ವರ್ಷಗಳಾದರೂ ಧರ್ಮ ಎಂದ ರೇನು? ಧರ್ಮ ಹೇಗಿರಬೇಕು? ಧರ್ಮದ ಜವಾ ಬ್ದಾರಿ ಏನು ಎನ್ನುವ ಕಲ್ಪನೆಯೇ ತಿಳಿಯದಿದ್ದ ಮೇಲೆ ಇವರು ಧರ್ಮ ರಕ್ಷಣೆಗಾಗಿ ಬೀದಿಗೆ ಇಳಿಯುವುದು ಈ ಹೊತ್ತಿನ ತಮಾಷೆ.

ಕೊನೆಯದಾಗಿ ಬಾಬಾ ಸಾಹೇಬರ ಆಶಯಗಳನ್ನು ನೆನೆಯುತ್ತಾ ಭಾಷಣಗಳನ್ನು ಮಾಡಿ ಹೋಗುವ ಈ ಸಂದರ್ಭದಲ್ಲಿ ನಮ್ಮ ವರ್ತಮಾನದ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು ಬಾಬಾ ಸಾಹೇಬರಿಗೆ ಮತ್ತವರ ಪ್ರಯತ್ನಗಳಿಗೆ ಗೌರವ ಬರುವಂತೆ ನಡೆದು ಕೊಳ್ಳಬೇಕು. ಈ ಪೈಕಿ ಎಲ್ಲಾ ಸಮುದಾ ಯದ ಯುವಕರು, ಯುವತಿ ಯರು ಪುಸ್ತಕ ಹಿಡಿದು ಜ್ಞಾನದ ಮೂಲಕ ಈಗ ಸಮಾಜವನ್ನು ಒಡೆಯುತ್ತಿರುವ ದೇಶದ್ರೋಹಿ ಗಳನ್ನು ಆರೋಗ್ಯಕರ ವಿಚಾರ ಧಾರೆಗಳಿಂದ ಎದುರಿಸಬೇಕು.

ಆಗಷ್ಟೇ ನಮಗೆ ಕನಿಷ್ಟ ಪಕ್ಷ ಬಾಬಾ ಸಾಹೇಬರು ಎಂದು ಹೇಳುವ ನೈತಿಕತೆಯು ಉಳಿಯುತ್ತದೆ. ಹಾಗಲ್ಲದೇ ಬರೀ ಬಾಬಾ ಸಾಹೇಬ ರಿಗೆ ಜೈಕಾರ ಹಾಕಿ, ಪ್ರತಿರೋಧ ಮತ್ತು ಹೋರಾಟವಿಲ್ಲದೇ ಸುಮ್ಮನಿದ್ದರೆ ಅದು ಮಹಾನ್ ಹೋರಾಟಗಾರರಾಗಿದ್ದ ಬಾಬಾ ಸಾಹೇಬರಿಗೆ ತೋರುವ ಅಗೌರವ ಮತ್ತು ಅವರಿಗೆ ಎಸಗುವ ಅವಮಾನವೇ ಆಗಿದೆ.!